Saturday, October 19, 2013

Hand, foot and mouth disease in children



                ಮಕ್ಕಳನ್ನು ಪೀಡಿಸುತ್ತಿರುವ ಕಾಲು ಬಾಯಿ ಕಾಯಿಲೆ 

ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಜಾನುವಾರುಗಳ ಸಾವಿಗೆ ಕಾರಣವೆನಿಸಿರುವ ಕಾಲು, ಕೈ ಮತ್ತು ಬಾಯಿ ಬೇನೆ ಕಾಯಿಲೆಯು ಮನುಷ್ಯರನ್ನೂ ಕಾಡಬಲ್ಲದು ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಅದೃಷ್ಟವಶಾತ್ ಚಿಕ್ಕ ಮಕ್ಕಳನ್ನೇ ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು, ಮನುಷ್ಯರಲ್ಲಿ ತನ್ನ ಮಾರಕತೆಯನ್ನು ತೋರುವುದಿಲ್ಲ. ದೇಶದ ಹಲವಾರು ರಾಜ್ಯಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕಂಡುಬರುತ್ತಿರುವ ಈ ವ್ಯಾಧಿಯು, ಕಳೆದ ನಾಲ್ಕಾರು ತಿಂಗಳುಗಳಿಂದ ನಮ್ಮ ರಾಜ್ಯದ ಅನೇಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ  ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಅಸಂಖ್ಯ ಜನರನ್ನು ಪೀಡಿಸಿರುವ  ಕಾಲು, ಕೈ ಮತ್ತು ಬಾಯಿಬೇನೆ ಎನ್ನುವ ವಿಶಿಷ್ಟ ವ್ಯಾಧಿಗೆ ಕಾರಣವೆನಿಸುವ, ಎಂಟೆರೋ ವೈರಸ್ ಗಳ ಗುಂಪಿಗೆ ಸೇರಿದ ರೋಗಾಣುವನ್ನು ಮೊತ್ತ ಮೊದಲಿಗೆ ಕಾಕ್ಸ್ ಸಾಕ್ಕಿ ಎನ್ನುವ ಊರಿನಲ್ಲಿ ಪತ್ತೆಹಚ್ಚಲಾಗಿತ್ತು. ಈ ಊರಿನ ಇಬ್ಬರು ರೋಗಪೀಡಿತ ವ್ಯಕ್ತಿಗಳಲ್ಲಿ ಡಾಲ್ ಡೋರ್ಫ್ ಎನ್ನುವ ವಿಜ್ಞಾನಿಯು ಈ ವೈರಸ್ ಗಳನ್ನು ಪತ್ತೆಹಚ್ಚಿದ್ದರಿಂದ, ಈ ವೈರಸ್ ಗಳಿಗೆ ಕಾಕ್ಸ್ ಸಾಕ್ಕಿ ಎಂದು ಹೆಸರಿಸಲಾಗಿತ್ತು. 

ಕೇಶವನ "ಕೆಂಪು" ಗುಣವಾಗದೇಕೆ?

ಪುಟ್ಟ ಕೇಶವನಿಗೆ ಅದೊಂದು ದಿನ ಅಲ್ಪ ಪ್ರಮಾಣದ ಜ್ವರ ಕಾಣಿಸಿಕೊಂಡ ಬಳಿಕ ಆತನ ಸ್ವರವೂ ಕರ್ಕಶವಾಗಿತ್ತು. ಪರಿಚಿತ ವೈದ್ಯರು ಮೂರುದಿನಗಳ ಚಿಕಿತ್ಸೆಯನ್ನು ನೀಡಿದರೂ, ಆತನ ಕಾಯಿಲೆ ಗುಣವಾಗಲಿಲ್ಲ. ಆದರೆ ಅಷ್ಟರಲ್ಲೇ ಆತನ ಮುಂಗೈ, ಅಂಗೈ, ಕಾಲು, ಅಂಗಾಲು,ಬಾಯಿಯಲ್ಲಿ ಮತ್ತು ಪೃಷ್ಟಗಳ ಮೇಲೆ ಕೆಂಪುಬಣ್ಣದ ನೂರಾರು ಪುಟ್ಟ ಗುಳ್ಳೆಗಳು ಮೂಡಿದ್ದವು. ಮೊಮ್ಮಗನ ಕಾಯಿಲೆಯನ್ನು 'ಕೆಂಪು" ಎಂದು ಗುರುತಿಸಿದ್ದ ಆತನ ಅಜ್ಜಿಯು, ಕೇಶವನನ್ನು ಹಳ್ಳಿಮದ್ದು ನೀಡುವ ಅಕ್ಕಮ್ಮನಲ್ಲಿಗೆ ಕರೆದೊಯ್ದಳು. ಮಗುವನ್ನು ಪರೀಕ್ಷಿಸಿದ ಅಕ್ಕಮ್ಮನು ಮಂತ್ರಿಸಿದ ಸೀಯಾಳದಿಂದ ಮಗುವಿಗೆ "ಅಭಿಷೇಕ" ಮಾಡಿದ ಬಳಿಕ ಮಂತ್ರಿಸಿದ ನೂಲನ್ನು ಮಣಿಗಂಟಿಗೆ ಕಟ್ಟಿದಳು. ಇದರೊಂದಿಗೆ ಕೆಂಪಿನ ಗುಳ್ಳೆಗಳಿಗೆ ಹಚ್ಚಲು ಲೇಪ ಮತ್ತು ಕುಡಿಸಲು ಕಷಾಯವನ್ನು ನೀಡಿದ್ದಳು. ಆದರೆ ಸೀಯಾ ಮತ್ತು ಕಷಾಯಗಳ ಚಿಕಿತ್ಸೆಗೆ ಮಣಿಯದ ಕೆಂಪು ಇನ್ನಷ್ಟು ಉಲ್ಬಣಿಸಿತ್ತು. 

ಬಾಯಲ್ಲಿ ಮೂಡಿದ್ದ ಹುಣ್ಣುಗಳ ನೋವಿನಿಂದ ಆಹಾರವನ್ನು ಸೇವಿಸಲಾಗದ ಹಾಗೂ ಅಂಗಾಲು ಮತ್ತು ಪೃಷ್ಟದ ಮೇಲಿನ ಗುಳ್ಳೆಗಳ ನೋವಿನಿಂದಾಗಿ ನಡೆಯಲು ಮತ್ತು ಮಲಗಲೂ ಆಗದೇ ನರಳುತ್ತಿದ್ದ ಮಗನ ಸ್ಥಿತಿಯನ್ನು ಕಂಡು ಮರುಗಿದ ಆತನ ತಂದೆಯು, ಕೇಶವನನ್ನು ಚರ್ಮರೋಗ ತಜ್ಞರ ಬಳಿ ಕರೆದೊಯ್ದರು. 

ಸಾವಕಾಶವಾಗಿ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ, ಇದು ಕಾಕ್ಸ್ ಸಾಕ್ಕಿ ವೈರಸ್ ಗಳಿಂದ ಉದ್ಭವಿಸಿರುವ ಕೈ, ಕಾಲು ಮತ್ತು ಬಾಯಿಬೇನೆ ಎಂದು ಖಚಿತವಾಗಿತ್ತು. ಅವಶ್ಯಕ ಔಷದಗಳನ್ನು ನೀಡಿದ ವೈದ್ಯರು, ವಾರ ಕಳೆಯುವಷ್ಟರಲ್ಲಿ ಕೆಶವನು ಗುಣಮುಖನಾಗುವ ಭರವಸೆ ನೀಡಿದ್ದರು. ನಾಲ್ಕಾರು ದಿನಗಳಲ್ಲೇ ಬಾಡಲಾರಂಭಿಸಿದ ಗುಳ್ಳೆಗಳು, ಕೆಲವೇ ದಿನಗಳಲ್ಲಿ ಮಾಯವಾಗಿದ್ದವು!. 

ಕಾಕ್ಸ್ ಸಾಕ್ಕಿ ವೈರಸ್ 

೧೯೫೭ ರಲ್ಲಿ ಕೆನಡಾ ದೇಶದಲ್ಲಿ ಉದ್ಭವಿಸಿದ ಬಳಿಕ ಏಷಿಯಾ ಖಂಡದ ಇತರ ದೇಶಗಳಿಗೆ ಹರಡಿದ ಕಾಕ್ಸ್ ಸಾಕ್ಕಿ ವೈರಸ್ ಗಳು, ಸಾಮಾನ್ಯವಾಗಿ ೯ ತಿಂಗಳ ಹಸುಗೂಸಿನಿಂದ ಹಿಡಿದು ೫ ವರ್ಷದ ಮಕ್ಕಳಲ್ಲಿ  ಕೈ, ಕಾಲು ಮತ್ತು ಬಾಯಿಬೇನೆಗೆ ಕಾರಣವೆನಿಸುತ್ತಿದ್ದವು. ಎಂಟೆರೋ ವೈರಸ್ ಗಳ ಗುಂಪಿಗೆ ಸೇರಿದ ಈ ವೈರಸ್ ನ "ಎ " ಪ್ರಭೇದ ೫, ೧೦ ಮತ್ತು ೧೬ ಸಂಖ್ಯೆಯ ತಳಿಗಳು ಕೆಲ ವರ್ಷಗಳ ಹಿಂದೆ ಈ ವ್ಯಾಧಿಗೆ ಕಾರಣವೆನಿಸಿದ್ದವು. ೨೦೦೩ ರಲ್ಲಿ ಕೇರಳದ ಕೊಝಿಕೋಡ್ ನಲ್ಲಿ ಪ್ರತ್ಯಕ್ಶವಾಗಿದ್ದ ಎ- ೧೭ ತಳಿಯು, ಅದಕ್ಕೂ ಮುನ್ನ ಚೀನಾ ಮತ್ತು ಸಿಂಗಾಪುರಗಳಲ್ಲಿ ಅನೇಕ ಹಸುಳೆಗಳ ಮರಣಕ್ಕೂ ಕಾರಣವೆನಿಸಿತ್ತು. ಆದರೆ ಕೊಝಿಕೋಡ್ ನಲ್ಲಿ ಯಾವುದೇ ಸಾವುನೋವುಗಳಿಗೆ ಕಾರಣವೆನಿಸದ ಇದೇ ತಳಿಗಳು ಮತ್ತೆ ೨೦೦೬ ರಲ್ಲಿ ಥಾಣೆ ಮತ್ತು ಪುಣೆಗಳಲ್ಲಿ ಪ್ರತ್ಯಕ್ಷವಾಗಿದ್ದವು. 

ತದನಂತರ ೨೦೦೯ ರಲ್ಲಿ ಮತ್ತೆ ಕೊಝಿಕೋಡ್, ಥಾಣೆ, ಪುಣೆ ನಗರಗಳೊಂದಿಗೆ ವಡೋದರ ಮತ್ತು ಮುಂಬೈ ಗಳಲ್ಲೂ ಉದ್ಭವಿಸಿ ವ್ಯಾಪಕವಾಗಿ ಹರಡುತ್ತಾ, ಮುಂಬೈ ನೊಂದಿಗೆ ನಿಕಟ ಸಂಪರ್ಕವಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಹರಡಿತ್ತು. ೬ ತಿಂಗಳ ಹಸುಗೂಸಿನಿಂದ ಹಿಡಿದು ಹದಿಹರೆಯದವರನ್ನೂ ಕಾಡಿದ್ದ ಕಾಲು ಬಾಯಿಬೇನೆಗೆ, ಈ ವೈರಸ್ ನ ನೂತನ ತಳಿಯನ್ನು ಸಿ ವಿ ಎ- ೬ ಎಂದು ಗುರುತಿಸಲಾಗಿತ್ತು. ಈ ತಳಿಯಿಂದ ಪೀಡಿತ ರೋಗಿಗಳಲ್ಲಿ ವ್ಯಾಧಿಯು ಸೌಮ್ಯ ರೂಪದಲ್ಲಿ ಪ್ರಕಟವಾಗುತ್ತಿದ್ದುದರಿಂದ ಸುಮಾರು ೭ ರಿಂದ ೧೦ ದಿನಗಳಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದರು. 

ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಭವಿಸಿ ಅಸಂಖ್ಯ ಜಾನುವಾರುಗಳನ್ನು ಬಲಿಪಡೆಯುತ್ತಿರುವ ಕಾಲು ಬಾಯಿಬೇನೆ ಪ್ರಕರಣಗಳೊಂದಿಗೆ, ಕೆಲವೆಡೆ ಮಕ್ಕಳಲ್ಲಿ ಈ ವೈರಸ್ ನ ಹಾವಳಿಯ ಪ್ರಮಾಣವು ಹೆಚ್ಚುತ್ತಿದೆ. ಶಿಶುವೈದ್ಯರೇ ಹೇಳುವಂತೆ ಕಳೆದ ಹಲವಾರು ವಾರಗಳಿಂದ ಕಾಕ್ಸ್ ಸಾಕ್ಕಿ ವೈರಸ್ ಪೀಡಿತ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಬಹುತೇಕ ರೋಗಿಗಳಲ್ಲಿ ಸ್ವಯಂ ಶಮನಗೊಳ್ಳುವ ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರು ಗಾಬರಿ ಪಡಬೇಕಾಗಿಲ್ಲವೆಂದು ಶಿಶುತಜ್ಞರು ಭರವಸೆ ನೀಡಿದ್ದಾರೆ. ವ್ಯಾಧಿ ಪೀಡಿತರಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ಸೇವಿಸುವ ಮೂಲಕ ಇದನ್ನು ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. 

ವ್ಯಾಧಿಯ ಲಕ್ಷಣಗಳು 

ಆಕಸ್ಮಿಕವಾಗಿ ಜ್ವರದೊಂದಿಗೆ ಆರಂಭವಾಗುವ ಈ ಕಾಯಿಲೆಯಲ್ಲಿ ಹಸಿವಿಲ್ಲದಿರುವುದು, ಗಂಟಲು ನೋವು, ಧ್ವನಿ ಪೆಟ್ಟಿಗೆಯ ನೋವಿನಿಂದಾಗಿ ಸ್ವರ ಬದಲಾಗುವುದೇ ಮುಂತಾದ ಸಾಮಾನ್ಯ ಶೀತ ಅಥವಾ ಫ್ಲೂ ಜ್ವರದ ಲಕ್ಷಣಗಳು ಕಂಡುಬರುತ್ತವೆ. ಮುಂದಿನ ಒಂದೆರಡು ದಿನಗಳಲ್ಲಿ ಬಾಯಿ, ಕೈ, ಅಂಗೈ, ಕಾಲು, ಅಂಗಾಲು ಹಾಗೂ ಪೃಷ್ಠ ಭಾಗದಲ್ಲಿ ಮತ್ತು ಕೆಲವರಲ್ಲಿ ಬೆನ್ನಿನ ಮೇಲೆ ಬೆವರುಸಾಲೆಯಂತಹ ಗುಳ್ಳೆಗಳು ಮೂಡುತ್ತವೆ. ಈ ಗುಳ್ಳೆಗಳು ಒಂದೆರಡು ದಿನಗಳಲ್ಲೇ ಕೀವು ತುಂಬಿದ ಗುಳ್ಳೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೆಚ್ಚಿನ ರೋಗಿಗಳಲ್ಲಿ ಇಂತಹ ಗುಳ್ಳೆಗಳು ವಿರಳವಾಗಿ ಮೂಡಿದರೂ, ಕೆಲ ಮಕ್ಕಳಲ್ಲಿ ದಟ್ಟವಾಗಿ ಮೂಡುವುದರೊಂದಿಗೆ ಅಸಾಧ್ಯ ತುರಿಕೆ ಮತ್ತು ತೀವ್ರ ನೋವು ಬಾಧಿಸುತ್ತದೆ. ತೀವ್ರ ಯಾತನೆಗೆ ಕಾರಣವೆನಿಸುವ ಈ ಹಂತದಲ್ಲಿ ಪುಟ್ಟ ಮಕ್ಕಳು ರಚ್ಚೆಹಿಡಿದಂತೆ ಅಳುವುದು, ಬಾಯಿ ನೋವಿನಿಂದ ಆಹಾರವನ್ನೇ ಸೇವಿಸದಿರುವುದು, ಅಂಗೈ- ಅಂಗಾಲು ನೋವಿನಿಂದ ಅಂಬೆಗಾಲಿಕ್ಕದೇ ಅಥವಾ ನಡೆಯಲಾರದೇ ಇರುವುದು ಸ್ವಾಭಾವಿಕ. ಆದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ನಾಲ್ಕಾರು ದಿನಗಳಲ್ಲೇ ಗುಳ್ಳೆಗಳು ಬಾಡಲು ಆರಂಭಿಸಿ, ಸುಮಾರು ೧೦ ದಿನಗಳಲ್ಲಿ ಮಗು ಸಂಪೂರ್ಣವಾಗಿ ಗುಣಮುಖವಾಗುವುದು.ಬಹುತೇಕ ರೋಗಿಗಳಲ್ಲಿ ಗುಳ್ಳೆಗಳು ಮೂಡಿದ್ದ  ಜಾಗದಲ್ಲಿ ಕಪ್ಪುಕಲೆಗಳು  ಹಲವಾರು ದಿನಗಳ ಕಾಲ ಉಳಿದು, ಬಳಿಕ ಅಲ್ಲಿನ ಚರ್ಮವು ಎದ್ದುಹೋಗುತ್ತದೆ. 

ಅಪರೂಪದಲ್ಲಿ ಈ ವ್ಯಾಧಿಪೀಡಿತ ಕೆಲವು ಮಕ್ಕಳಲ್ಲಿ ಹೃದಯ ಸಂಬಂಧಿ ತೊಂದರೆಗಳು ಮತ್ತು ಮೆದುಳಿನ ಉರಿಯೂತದಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಕೊಝಿಕೋಡ್ ನ ಖ್ಯಾತ ಶಿಶುರೋಗ ತಜ್ಞರು ಹೇಳಿದ್ದಾರೆ. ಆದುದರಿಂದ ಇದನ್ನು ನಿರ್ಲಕ್ಷಿಸದೇ ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ. 

ಮುನ್ನೆಚ್ಚರಿಕೆ 

ಈ ವ್ಯಾಧಿಪೀಡಿತ ಮಕ್ಕಳ ಸಂಪರ್ಕವಿರುವ ಇತರ ಮಕ್ಕಳಿಗೂ ಇದು ಹರಡುವ ಸಾಧ್ಯತೆಗಳು ಇರುವುದರಿಂದ, ಇತರ ಆರೋಗ್ಯವಂತ ಮಕ್ಕಳನ್ನು ದೂರವಿರಿಸಬೇಕು. ರೋಗಪೀಡಿತ ಮಕ್ಕಳ ಬಾಯಿ, ನಾಸಿಕ ಸ್ರಾವ ಮತ್ತು ಮಲಗಳಲ್ಲಿ ಕಾಕ್ಸ್ ಸಾಕ್ಕಿ ವೈರಸ್ ಗಳು ಇರುವುದರಿಂದ, ಈ ಬಗ್ಗೆ ಮನೆಮಂದಿ ಕಟ್ಟೆಚ್ಚರವಹಿಸಬೇಕು. ರೋಗಿಯ ಆರೈಕೆ ಮಾಡುವ ಹಿರಿಯರೂ ತಮ್ಮ ವೈಯುಕ್ತಿಕ ಸ್ವಚ್ಚತೆಯತ್ತ ಗಮನ ನೀಡುವುದರೊಂದಿಗೆ, ರೋಗಿ ಬಳಸಿದ ಪಾತ್ರೆ, ಬಟ್ಟೆಬರೆಗಳನ್ನು ಸೂಕ್ತ ಕ್ರಿಮಿನಾಶಕಗಳನ್ನು ಬಳಸಿ ತೊಳೆಯಬೇಕು. ವ್ಯಾಧಿಪೀಡಿತ ಮಕ್ಕಳು ಶೌಚಾಲಯದಲ್ಲೇ ಮಲವಿಸರ್ಜನೆ ಮಾಡುವ ಮೂಲಕ ಮತ್ತು ಬಯಲನ್ನು ಶೌಚಾಕ್ಕಾಗಿ ಬಳಸಿದಲ್ಲಿ ಪುಟ್ಟ ಗುಂಡಿಯನ್ನು ತೋಡಿ, ಮಲವಿಸರ್ಜನೆಯ ಬಳಿಕ ಮಣ್ಣಿನಿಂದ ಮುಚ್ಚುವ ಮೂಲಕ ಮಲದಲ್ಲಿರುವ ವೈರಸ್ ಗಳು ಹರಡುವುದನ್ನು ತಡೆಗಟ್ಟಬೇಕು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೧೨- ೨೦೦೯ ರ ಸಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ (ಇದೀಗ ಪರಿಷ್ಕರಿಸಿರುವ)



No comments:

Post a Comment