Saturday, October 12, 2013

Cosmetics can cause diseases

s
To: drcnpai@yahoo.co.in


                 ಸೌಂದರ್ಯವರ್ಧಕಗಳ ಬಳಕೆ:ಅನಾರೋಗ್ಯಕರವೆನಿಸೀತು ಜೋಕೆ!

ತಮ್ಮ ಶಾರೀರಿಕ ಸೌಂದರ್ಯದ ಬಗ್ಗೆ ಕಾಳಜಿ ವಹಿಸದ ಸ್ತ್ರೀ-ಪುರುಷರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಪ್ರಾಯಶಃ ಇದೇ ಕಾರಣದಿಂದಾಗಿ ತಾವು ಇನ್ನಷ್ಟು ಆಕರ್ಷಕವಾಗಿ ಕಾಣಬೇಕೆನ್ನುವ ಉದ್ದೇಶದಿಂದ, ಅನೇಕರು ಕೃತಕ ಸೌಂದರ್ಯವರ್ಧಕಗಳನ್ನು ಧಾರಾಳವಾಗಿ ಬಳಸುತ್ತಾರೆ. ಆದರೆ ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳನ್ನು ಅರಿತುಕೊಳ್ಳಲು ಮರೆತುಬಿಡುತ್ತಾರೆ!. 
------                              -----------                  ---------------------                               ---------------                              ---------------

ಭಾರತೀಯರು ತಮ್ಮ ಶಾರೀರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ವಿಧಾನಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಸವಿಸ್ತಾರವಾಗಿ ವರ್ಣಿಸಿರುವ ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ತಯಾರಿಸಬಹುದಾದ ಬಹುತೇಕ ಸೌಂದರ್ಯವರ್ಧಕಗಳ ಸ್ಥಾನವನ್ನು ಇದೀಗ ಕೃತಕ ರಾಸಾಯನಿಕಗಳಿಂದ ತಯಾರಿಸಿದ ವಾಣಿಜ್ಯ ಉತ್ಪನ್ನಗಳು ಆಕ್ರಮಿಸಿಕೊಂಡಿವೆ. ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ ಇಂತಹ ಉತ್ಪನ್ನಗಳ ಬಳಕೆಯು ಇತ್ತೀಚಿನ ಕೆಲವರ್ಷಗಳಿಂದ ಮಿತಿಮೀರಿದೆ. ಅದೇ ರೀತಿಯಲ್ಲಿ ಇವುಗಳಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುತ್ತಿದೆ. 

ತಲೆಮರೆಸಿಕೊಂಡ ರಾಯರು 

ಮಧ್ಯವಯಸ್ಸಿನ ಮಾಧವರಾಯರಿಗೆ ತನ್ನ ತಲೆಗೂದಲುಗಳು ಬಿಳಿಯಾಗುತ್ತಿರುವುದು ಕೀಳರಿಮೆಗೆ ಕಾರಣವೆನಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಕೂದಲುಗಳಿಗೆ ಬಣ್ಣ ಬಳಿಯುವುದೇ ಏಕಮಾತ್ರ ಪರಿಹಾರವಾಗಿತ್ತು. ಆದರೆ ಕೆಲವರ್ಷಗಳ ಹಿಂದೆ ತಲೆಗೂದಲಿಗೆ ಬಣ್ಣವನ್ನು ಬಳಿದೊಡನೆ ತಲೆದೋರಿದ್ದ ಅಲರ್ಜಿಯಿಂದಾಗಿ ನಾಲ್ಕಾರು ದಿನಗಳ ಕಾಲ ತಲೆಮರೆಸಿಕೊಂಡಿದ್ದ ರಾಯರಿಗೆ, ಇದರ ಚಿಕಿತ್ಸೆಗಾಗಿ ಸಾಕಷ್ಟು ಹಣವೂ ಕೈಬಿಟ್ಟಿತ್ತು. ಇದೇ ಕಾರಣದಿಂದಾಗಿ ಇಂತಹ ಪ್ರಯೋಗಗಳನ್ನು ಪ್ರಯತ್ನಿಸದ ರಾಯರಿಗೆ, ಇದೀಗ ಸಂಪೂರ್ಣವಾಗಿ ಬಿಲಿಯಾಗಿದ್ದ ತಲೆಯೇ ಚಿಂತೆಗೆ ಕಾರಣವೆನಿಸಿತ್ತು. 

ಈ ವಿಚಾರವನ್ನು ಅರಿತಿದ್ದ ರಾಯರ ಆಪ್ತಸ್ನೇಹಿತ ಸಂತೋಷನು ವಿದೇಶದಿಂದ ಆಮದುಮಾಡಿದ್ದ ದುಬಾರಿ ಹೇರ್ ಡೈ ಒಂದನ್ನು ಬಳಸುವಂತೆ ರಾಯರನ್ನು ಒತ್ತಯಿಸಿದ್ದನು. ಜೊತೆಗೆ ಭಾರತೀಯ ಉತ್ಪನ್ನಗಲೈಗಿಂತ ವಿದೇಶೀ ಉತ್ಪನ್ನಗಳು ನಿಶ್ಚಿತವಾಗಿಯೂ ಅತ್ಯುತ್ತಮ ಹಾಗೂ ಸುರಕ್ಷಿತವೆಂದು ಆಶ್ವಾಸನೆಯನ್ನೂ ನೀಡಿದ್ದನು. 

ಸಂತೋಷನ ಒತ್ತಾಯಕ್ಕೆ ಮಣಿದ ರಾಯರು ಈ ವಿದೇಶೀ ಹೇರ್ ಡೈ ಖರೀದಿಸಿ ತಲೆಗೂದಲಿಗೆ ಬಳಿದಿದ್ದರು. ಬಣ್ಣ ಬಳಿದ ಒಂದೆರಡು ತಾಸುಗಳಲ್ಲಿ ಆರಂಭವಾಗಿದ್ದ ಅಸಾಧ್ಯ ತುರಿಕೆಯ ಪರಿಣಾಮವಾಗಿ ಸ್ವಲ್ಪ ಹೊತ್ತಿನ ಬಳಿಕ ರಾಯರ ಮುಖವು ಊದಿಕೊಂಡು ವಿಕಾರವಾಗಿತ್ತು. ಕನ್ನಡಿಯಲ್ಲಿ ತಮ್ಮ ಮುಖವನ್ನು ಕಂಡು ಗಾಬರಿಯಾದ ರಾಯರು, ತತ್ ಕ್ಷಣ ಪರಿಚಿತ ವೈದ್ಯರನ್ನು ಭೇಟಿಯಾಗಿ ತುರ್ತು ಚಿಕಿತ್ಸೆಯನ್ನು ಪಡೆದರೂ ಮತ್ತೆ ನಾಲ್ಕಾರು ದಿನಗಳ ಕಾಲ ತಲೆಮರೆಸಿಕೊಳ್ಳಬೇಕಾಗಿ ಬಂದಿತ್ತು!. 

ಹೇರ್ ಡೈ ಗಳ ತಯಾರಿಕೆಯಲ್ಲಿ ಬಳಸುವ ಪಾರಾಫಿನೈಲೀನ್ ಡೈ ಅಮೈನ್ , ಅಮೋನಿಯಂ ಪರ್ ಸಲ್ಫೇಟ್, ಕೆಥಾನ್ ಸಿ. ಜಿ, ಗ್ಲಿಸರಿಲ್ ಮೊನೋಥಯೋಗ್ಲೈಕೊಲೆಟ್, ಸಂರಕ್ಷಕಗಳು ಮತ್ತು ಪರಿಮಳಕಾರಕ ದ್ರವ್ಯಗಳು ಅನೇಕರಲ್ಲಿ ತೀವ್ರಸ್ವರೂಪದ ಅಲರ್ಜಿ ಪ್ರಕ್ರಿಯೆಗಳಿಗೆ ಕಾರಣವೆನಿಸುತ್ತವೆ. ಸಸ್ಯಗಳಿಂದ ತಯಾರಿಸಿದ (ಹರ್ಬಲ್) ಎಂದು ಇವುಗಳ ತಯಾರಕರು ಘೋಷಿಸುವ ಹೇರ್ ಡೈ ಗಳಲ್ಲೂ ಪಾರಾಫಿನೈಲೀನ್ ಡೈ ಅಮೈನ್ ಬಳಸಲಾಗುತ್ತಿದೆ. ಈ ರಾಸಾಯನಿಕವು ಕೂದಲುಗಳಿಗೆ ಕಪ್ಪು ಬಣ್ಣವನ್ನು ನೀಡಲು ಅನಿವಾರ್ಯವೆನಿಸುತ್ತದೆ. ಆದರೆ ಹೇರ್ ಡೈ ಗಳಲ್ಲಿ ಬಳಸುವ ಹಲವು ರಾಸಾಯನಿಕ ದ್ರವ್ಯಗಳು ಇಂತಹ ಅಲರ್ಜಿಗೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದ, ಇವುಗಳ ತಯಾರಕರು ಹೇರ್ ಡೈ ಯನ್ನು ತಲೆಯ ಒಂದು ಪುಟ್ಟ ಭಾಗಕ್ಕೆ ಮಾತ್ರ ಬಳಿದು ಪರೀಕ್ಷಿಸಲು ಸೂಚಿಸುತ್ತಾರೆ. ಇದರಿಂದಾಗಿ ಅಲರ್ಜಿಯಂತಹ ತೊಂದರೆಗಳು ಕಂಡುಬಂದಲ್ಲಿ, ಈ ಉತ್ಪನ್ನವನ್ನು ಬಳಸದಂತೆ ಎಚ್ಚರಿಕೆಯನ್ನು ನೀಡುತ್ತಾರೆ. 

ಸೌಂದರ್ಯವರ್ಧಕಗಳು ಎಂದರೇನು?

ಮನುಷ್ಯನ ಶರೀರವನ್ನು ಸ್ವಚ್ಛಗೊಳಿಸಬಲ್ಲ, ಸುಂದರವಾಗಿಸಬಲ್ಲ ಹಾಗೂ ಶರೀರದ ಆಕಾರ ಮತ್ತು ಗಾತ್ರಗಳನ್ನು ಪರಿವರ್ತಿಸದೇ ನಿಮ್ಮ ರೂಪವನ್ನು ಆಕರ್ಷಕವನ್ನಾಗಿಸಬಲ್ಲ ದ್ರವ್ಯಗಳನ್ನು ಸೌಂದರ್ಯವರ್ಧಕ ಅಥವಾ ಕಾಂತಿವರ್ಧಕಗಳೆಂದು ಕರೆಯುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಬಳಸುವ ಮೇಕಪ್ ಪ್ರಸಾದನಗಳು, ಲೋಶನ್, ಪೌಡರ್, ಸುಗಂಧದ್ರವ್ಯಗಳು, ಚರ್ಮದ ಮೇಲೆ ಲೇಪಿಸುವ ಕ್ರೀಮ್ ಗಳು, ಸ್ಪ್ರೇ ಗಳು, ಉಗುರು ಹಾಗೂ ತಲೆಗೂದಲಿಗೆ ಹಚ್ಚುವ ಬಣ್ಣಗಳು ಹಾಗೂ ಜೆಲ್ ಮತ್ತು ಎಣ್ಣೆಗಳು, ದುರ್ಗಂಧ ನಿವಾರಕಗಳೇ ಮುಂತಾದ ಹತ್ತುಹಲವು ಉತ್ಪನ್ನಗಳು ಸೌಂದರ್ಯವರ್ಧಕಗಳ ಪಟ್ಟಿಯಲ್ಲಿ ಸೇರುತ್ತವೆ. ಒಂದೆರಡು ದಶಕಗಳ ಹಿಂದಿನ ತನಕ ಮಹಿಳೆಯರ ಬಳಕೆಗೆ ಸೀಮಿತವಾಗಿದ್ದ ಸೌಂದರ್ಯವರ್ಧಕಗಳನ್ನು, ಇಂದು ಪುರುಷರೂ ಬಳಸುತ್ತಿದ್ದಾರೆ. ವಿಶೇಷವೆಂದರೆ ಇಂತಹ ಉತ್ಪನ್ನಗಳ ತಯಾರಕರು ಇದೀಗ ಸ್ತ್ರೀಯರ ಹಾಗೂ ಪುರುಷರ ಸಲುವಾಗಿ ಪ್ರತ್ಯೇಕ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿದ್ದಾರೆ. 

ಒಂದಾನೊಂದು ಕಾಲದಲ್ಲಿ ಕೇವಲ ಕಾಡಿಗೆ, ಸ್ನೋ ಮತ್ತು ಟಾಲ್ಕಂ ಪೌಡರ್ ಗಳನ್ನು ಬಳಸುವ ಮೂಲಕ ತಮ್ಮ ವದನವನ್ನು ಅಂದಗೊಳಿಸುತ್ತಿದ್ದ ಭಾರತೀಯ ನಾರಿಯರು, ಇಂದು "ನಖಶಿಖಾಂತ" ಬಳಸುತ್ತಿರುವ ಸೌಂದರ್ಯವರ್ಧಕಗಳ ವೈವಿಧ್ಯಗಳು ಅಸಂಖ್ಯ. ತಮ್ಮ ಅವಶ್ಯಕತೆಗೆ ಅನುಗುಣವಾಗಿ ಲೇಪಿಸಿದ ಕೃತಕ ಸೌಂದರ್ಯವರ್ಧಕಗಳನ್ನು ತೆಗೆಯಲು ಮತ್ತೊಂದು ವಿಧದ ಕೃತಕ ರಾಸಾಯನಿಕವನ್ನು ಬಳಸುವ ನೀರೆಯರಿಗೆ, ಇವುಗಳ ಒಳಿತು- ಕೆಡುಕುಗಳ ಬಗ್ಗೆ ಚಿಂತಿಸುವ ವ್ಯವಧಾನವೂ ಇರುವುದಿಲ್ಲ. ಬಹುತೇಕ ಸೌಂದರ್ಯವರ್ಧಕಗಳು ಕೃತಕ ರಾಸಾಯನಿಕಗಳಿಂದಲೇ ತಯಾರಿಸಲ್ಪದುವುದರಿಂದ, ಇವುಗಳ ದೀರ್ಘಕಾಲೀನ ಅಥವಾ ಅತಿಬಳಕೆಗಳು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುವುದೆಂದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ. 

ಜಗತ್ತಿನಾದ್ಯಂತ ಸುಮಾರು ೩೦೦೦ ವಿಧದ ರಾಸಾಯನಿಕಗಳನ್ನು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು, ಇವುಗಳಲ್ಲಿ ನೂರಕ್ಕೂ ಅಧಿಕ ರಾಸಾಯನಿಕಗಳು ಕೆಲವರಲ್ಲಿ ತೀವ್ರ ಅಲರ್ಜಿಗೆ ಕಾರಣವೆನಿಸುತ್ತವೆ. ಆದರೆ ಅಮೇರಿಕನ್ ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೆಶನ್ ಸಂಸ್ಥೆ ಹೇಳುವಂತೆ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುವ ಯಾವುದೇ ರಾಸಾಯನಿಕವು ಅಲರ್ಜಿಗೆ ಕಾರಣವೆನಿಸಲಾರದು ಎಂದು ಭರವಸೆ ನೀಡುವಂತಿಲ್ಲ. 

ಕಾಂತಿವರ್ಧಕಗಳಿಂದ ಕಾಯಿಲೆ?

ಕಾಂತಿವರ್ಧಕಗಳ ಬಳಕೆಯಿಂದ ನಿಮ್ಮ ಚರ್ಮ, ಉಗುರುಗಳು ಮತ್ತು ಕೂದಲುಗಳಿಗೆ ಸಂಬಂಧಿಸಿದ ಅಸಾಮಾನ್ಯತೆಗಳೊಂದಿಗೆ ಅನೇಕ ವಿಧದ ಕ್ಷುಲ್ಲಕ ಅಥವಾ ಗಂಭೀರ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೋರಾಡುತ್ತಿರುವ ಅಂತರರಾಷ್ಟ್ರೀಯ ಸಂಘಟನೆಯೊಂದರ ಅಭಿಪ್ರಾಯದಂತೆ, ನೀವು ಸಾಮಾನ್ಯವಾಗಿ ಬಳಸುವ ಸುಗಂಧದ್ರವ್ಯಗಳಿಂದ ಆರಂಭಿಸಿ, ತಲೆಗೂದಲಿಗೆ ಹಚ್ಚುವ ಜೆಲ್ ಗಳಲ್ಲೂ ಇರುವ ರಾಸಾಯನಿಕಗಳು ನಿಮ್ಮ ಮುಂದಿನ ಸಂತತಿಯಲ್ಲಿ ಜನ್ಮದತ್ತ ವೈಕಲ್ಯಗಳಿಗೂ ಕಾರಣವೆನಿಸಬಲ್ಲವು. ಅದೇ ರೀತಿಯಲ್ಲಿ ಸ್ತ್ರೀ ಪುರುಷರು ಬಳಸುವ ಟಾಲ್ಕಂ ಪೌಡರ್ ಗಳ ದೀರ್ಘಕಾಲೀನ ಬಳಕೆಯಿಂದ, ಮಹಿಳೆಯರಲ್ಲಿ ಪ್ರಜನನಾಂಗಗಳ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳು ಇರುವುದನ್ನು ವೈದ್ಯಕೀಯ ಸಂಶೋಧಕರು ಅನೇಕ ವರ್ಷಗಳ ಹಿಂದೆಯೇ ಪತ್ತೆಹಚ್ಚಿದ್ದಾರೆ. ಈ ರೀತಿಯ ಸಮಸ್ಯೆಗಳಿಗೆ ಸ್ತ್ರೀಯರಿಗಿಂತಲೂ ಪುರುಷರು ಗುರಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಚರ್ಮ, ಮೂಗು ಮತ್ತು ಕಲುಷಿತ ಆಹಾರಗಳ ಮೂಲಕ ಶರೀರವನ್ನು ಪ್ರವೇಶಿಸಿದ ಅಪಾಯಕಾರಿ ರಾಸಾಯನಿಕಗಳು, ವೃಷಣಗಳ ಕುಗ್ಗುವಿಕೆ ಹಾಗೂ ಶುಕ್ಲಗ್ರಂಥಿ,ವೀರ್ಯನಾಳಗಳು ಮತ್ತು ಶಿಶ್ನಗಳಿಗೆ ಹಾನಿ ಉಂಟುಮಾಡುವುದನ್ನು ಪ್ರಾಣಿಗಳ ಮೇಲೆ ನಡೆಸಿದ್ದ ಪ್ರಯೋಗಗಳು ಸಾಬೀತುಪಡಿಸಿವೆ. 

ಇತ್ತೀಚಿಗೆ ಲಂಡನ್ ನಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ ಪ್ರತಿನಿತ್ಯ ಲಿಪ್ ಸ್ಟಿಕ್, ಫೌಂಡೆಶನ್ , ಬಾಡಿಲೋಶನ್, ಮಾಸ್ಕಾರಾ ಗಳಂತಹ ಹಲವಾರು ಸೌಂದರ್ಯವರ್ಧಕಗಳನ್ನು ಬಳಸುವ ಮಹಿಳೆಯರು, ಸುಮಾರು ೫೧೫ ವಿಧದ ರಾಸಾಯನಿಕಗಳಿಗೆ ತಮ್ಮ ಶರೀರವನ್ನು ಒಡ್ಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ದುರ್ಗಂಧ ನಿವಾರಕಗಳನ್ನು ತಯಾರಿಸುವ ವಿಶ್ವವಿಖ್ಯಾತ ಸಂಸ್ಥೆಯೊಂದು ನಡೆಸಿದ್ದ ಈ ಅಧ್ಯಯನದಂತೆ, ಬಹುತೇಕ ಯುವತಿಯರು ಪ್ರತಿನಿತ್ಯ ಕನಿಷ್ಠ ೧೩ ವಿಧದ ಕಾಂತಿವರ್ಧಕಗಳನ್ನು ಬಳಸುತ್ತಿದ್ದು, ಇವುಗಳಲ್ಲಿ ಕನಿಷ್ಠ ೨೦ ವಿಧದ ರಾಸಾಯನಿಕಗಳು ಇರುತ್ತವೆ. 

ಕೆಲವು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ನೂರಾರು ವಿಧದ ರಾಸಾಯನಿಕಗಳ ಸಮ್ಮಿಶ್ರಣವಿದ್ದು, ಇವುಗಳಲ್ಲಿ ಪರಿಮಳಕಾರಕ ದ್ರವ್ಯಗಳು ಅಗ್ರಸ್ಥಾನದಲ್ಲಿವೆ. ಜಗತ್ಪ್ರಸಿದ್ಧ ಸುಗಂಧ ದ್ರವ್ಯವೊಂದರಲ್ಲಿ ಸುಮಾರು ೪೦೦ ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಅದೇ ರೀತಿಯಲ್ಲಿ ಲಿಪ್ ಸ್ಟಿಕ್ ಗಳ ತಯಾರಿಕೆಯಲ್ಲಿ ೩೩, ಬಾಡಿ ಲೋಶನ್ ಗಳಲ್ಲಿ ೩೨, ಕಣ್ಣಿನ ರೆಪ್ಪೆಗಳ ಮೇಲೆ ಬಳಿಯುವ ಮಾಸ್ಕಾರಾ ಗಳಲ್ಲಿ ೨೯, ಮುಖಕ್ಕೆ ಲೇಪಿಸುವ ಫೌಂಡೆಶನ್ ಗಳಲ್ಲಿ ೨೪, ಮಾಯ್ಶ್ಚರೈಸರ್ ಗಳಲ್ಲಿ ೧೧, ಮತ್ತು ನೈಲ್ ಪಾಲಿಶ್ ಗಳಲ್ಲಿ ೩೧ ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ!. ಹಾಗೂ ಇವುಗಳಲ್ಲಿ ಯಾವುದನ್ನೂ ಸುರಕ್ಷಿತ ಎನ್ನುವಂತಿಲ್ಲ. 

ಅನುಭವಿ ಚರ್ಮರೋಗ ತಜ್ಞರ ಅಭಿಪ್ರಾಯದಂತೆ ಕಾಂತಿವರ್ಧಕಗಳನ್ನು ಬಳಸುವ ಶೇ. ೪ ರಿಂದ ೫ ರಷ್ಟು ಜನರಲ್ಲಿ ಅಲರ್ಜಿ ಮತ್ತಿತರ ಪ್ರತಿಕೂಲ ಪರಿಣಾಮಗಳು ಕಂಡುಬರುತ್ತವೆ. ಇವುಗಳಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳಿಗೆ, ಕೂದಲಿಗೆ ಬಳಿಯುವ ಬಣ್ಣಗಳು ಮತ್ತು ಹೇರ್ ಡೈ  ಗಳೇ ಕಾರಣವಾಗಿರುತ್ತವೆ. 

ಅನೇಕ ಜನರು ಸುರಕ್ಷಿತ ಹಾಗೂ ನಿರಪಾಯಕಾರಿ ಎಂದು ನಂಬಿರುವ ಕಾಂತಿವರ್ಧಕಗಳಲ್ಲಿರುವ ಕೆಲವು ರಾಸಾಯನಿಕಗಳು ನಿಮ್ಮ ಶರೀರಕ್ಕೆ ಒಗ್ಗದೇ ಇದ್ದಲ್ಲಿ, "ಅನಾಫೈಲಾಕ್ಸಿಸ್ " ಎನ್ನುವ ತೀವ್ರ ಸ್ವರೂಪದ ಪ್ರತಿಕ್ರಿಯೆ ಉದ್ಭವಿಸುವ ಸಾಧ್ಯತೆಗಳಿವೆ. ಅತ್ಯಂತ ಅಪರೂಪದಲ್ಲಿ ಕಂಡುಬರುವ ಇಂತಹ ಪ್ರಕರಣದಲ್ಲಿ ತಲೆಗೂದಲನ್ನು ಬ್ಲೀಚ್ ಮಾಡಲು ಬಳಸುವ ಅಮೋನಿಯಂ ಪರ್ ಸಲ್ಫೇಟ್ ಮತ್ತು ಶರೀರದ ಮೇಲೆ ತಾತ್ಕಾಲಿಕವಾಗಿ ಹಾಕುವ "ಹಚ್ಚೆ" ಗಳಲ್ಲಿ ಬಳಸುವ ಬಣ್ಣಗಳು ಮತ್ತು ಸಂರಕ್ಷಕ ದ್ರವ್ಯಗಳು ಕಾರಣವೆನಿಸುತ್ತವೆ. ಆದರೆ ಇಂತಹ ಅನಪೇಕ್ಷಿತ ಪ್ರತಿಕೂಲ ಪರಿಣಾಮಗಳನ್ನು ಪತ್ತೆ ಹಚ್ಚಲು "ಪ್ಯಾಚ್ ಟೆಸ್ಟ್' ಎನ್ನುವ ಪರೀಕ್ಷಾ ವಿಧಾನವು ಲಭ್ಯವಿದೆ. ಈ ಪರೀಕ್ಷೆಯ ಕಿಟ್ ಗಳು ಮತ್ತು ಇದೆ ರೀತಿಯ ಬೇರೊಂದು ಪರೀಕ್ಷೆಯಲ್ಲಿ ಬಳಸುವ ಕಾಸ್ಮೆಟಿಕ್ ಟ್ರೇ ಗಳು ಭಾರತದಲ್ಲೂ ಲಭ್ಯವಿದೆ. ಆದರೆ ಕೆಲವು ಉತ್ಪನ್ನಗಳಲ್ಲಿ ಒಂದಕ್ಕೂ ಹೆಚ್ಚುವಿಧದ ರಾಸಾಯನಿಕಗಳನ್ನು ಬಳಸುವುದರಿಂದ, ಇಂತಹ ಪರೀಕ್ಷೆಗಳನ್ನು ಪ್ರಯೋಗಿಸುವುದಕ್ಕೂ ಮುನ್ನ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಹಿತಕರ. ಇದಲ್ಲದೆ ಭಾರತದಲ್ಲಿ ಮಾರಾಟವಾಗುತ್ತಿರುವ ಅನೇಕ ಉತ್ಪನ್ನಗಳ ಹೊರಕವಚಗಳ ಮೇಲೆ ಇವುಗಳಲ್ಲಿರುವ ರಾಸಾಯನಿಕಗಳ ಸಂಪೂರ್ಣ ವಿವರಗಳನ್ನು ಮುದ್ರಿಸದೇ ಇರುವುದರಿಂದ ಹಾಗೂ ನಮ್ಮ ದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ನಕಲಿ ಉತ್ಪನ್ನಗಳಿಂದಾಗಿ, ಕೆಲ ಸಂದರ್ಭಗಳಲ್ಲಿ ಪ್ಯಾಚ್ ಟೆಸ್ಟ್ ನಿಷ್ಪ್ರಯೋಜಕ ಎನಿಸಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ನಿಮ್ಮ ತಲೆಗೂದಲಿನಿಂದ ಆರಂಭಿಸಿ ಕಾಲಿನ ಉಗುರಿನ ತನಕ, ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವ ಅಸಂಖ್ಯ ಉತ್ಪನ್ನಗಳನ್ನು ಖರೀದಿಸಿ ಬಳಸುವ ಮುನ್ನ, ಇವುಗಳಲ್ಲಿರುವ ರಾಸಾಯನಿಕಗಳ ಬಗ್ಗೆ ಮತ್ತು ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುವುದು ಹಿತಕರವೆನಿಸೀತು. ಇದಕ್ಕೂ ಮಿಗಿಲಾಗಿ ಸೌಂದರ್ಯವರ್ಧಕಗಳ ಬಳಕೆಯನ್ನೇ ತ್ಯಜಿಸುವುದು ನಿಸ್ಸಂದೇಹವಾಗಿಯೂ ಆರೋಗ್ಯಕರವೆನಿಸೀತು!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


ಉದಯವಾಣಿ ಪತ್ರಿಕೆಯ ೦೭-೦೧-೨೦೦೯ ರ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment