Tuesday, October 1, 2013

Aspatregala sandarshana.......




           ಆಸ್ಪತ್ರೆಗಳ ಸಂದರ್ಶನ: ರೋಗಗಳಿಗೆ ಆಹ್ವಾನವೇ?

   ವಿಭಿನ್ನ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ  ರೋಗಿಗಳು ಕೆಲ ಸಂದರ್ಭ- ಸನ್ನಿವೇಶಗಳಲ್ಲಿ  ಚಿಕಿತ್ಸೆ ಪಡೆಯಲು ಅಗತ್ಯವಾಗಿ ನೆಲೆಸಲೇ ಬೇಕಾದ ತಾಣವೇ ಆಸ್ಪತ್ರೆ. ಆದರೆ ನಿಮ್ಮ ವ್ಯಾಧಿಯನ್ನು ಗುಣಪಡಿಸಲು ಅತ್ಯವಶ್ಯಕವೆನಿಸುವ ಆಸ್ಪತ್ರೆಗಳೇ ರೋಗಗಳನ್ನು ಹರಡುವ ತಾಣಗಳಾಗಿ ಪರಿಣಮಿಸಬಹುದೆಂದು ಪ್ರಾಯಶಃ ನಿಮಗೂ ತಿಳಿದಿರಲಾರದು. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
---------------                    -----------------                       -------------------                            --------------            ----------------------

ಕಾಯಿಲೆಗೆ ಕಾರಣವೇನು?

ಮೂರು ವರ್ಷದ ಪುಟಾಣಿ ಪೂರ್ಣಿಮಾಗೆ ಆಕಸ್ಮಿಕವಾಗಿ ಜ್ವರ ಪ್ರಾರಂಭವಾದಾಗ ಆಕೆಯ ಮಾತಾಪಿತರು ತಮ್ಮ ಕುಟುಂಬವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಮೂರು ದಿನಗಳ ಔಷದಸೇವನೆಯ ಹೊರತಾಗಿಯೂ ಮಗುವಿನ ಜ್ವರ ಉಲ್ಬಣಿಸಿದಾಗ, ತಜ್ಞ ವೈದ್ಯರ ಸಲಹೆಯಂತೆ ಅದೇ ಔಷದಗಳನ್ನು ಮತ್ತೆ ಮುಂದುವರೆಸಿದ್ದರು. ವಾರ ಕಳೆದರೂ ಪೂರ್ಣಿಮಾಳ ಜ್ವರ ಕಡಿಮೆಯಾಗದೇ ಇದ್ದ ಕಾರಣದಿಂದಾಗಿ, ತಜ್ಞವೈದ್ಯರ ಸೂಚನೆಯಂತೆ ಆಕೆಯ ರಕ್ತ,ಕಫ ಹಾಗೂ ಮೂತ್ರಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿತ್ತು. ಇವುಗಳ ಪರಿಣಾಮ ತಿಳಿದುಬಂದಾಗ ಮಗುವಿನ ಜ್ವರಕ್ಕೆ ಹಲವಾರು ವಿಧದ ಔಷದಗಳಿಗೆ ಪ್ರತಿರೋಧ ಶಕ್ತಿಯನ್ನು ಗಳಿಸಿದ್ದ ವಿಶಿಷ್ಟ ರೋಗಾಣುಗಳು ಪತ್ತೆಯಾಗಿದ್ದವು. 

ಪುಟ್ಟಕಂದನ ಶರೀರದಲ್ಲಿ ಇಂತಹ ರೋಗಾಣುಗಳು ಪ್ರವೇಶಗಳಿಸಿದ್ದು ಹೇಗೆಂದು ಆಕೆಯ ಮಾತಾಪಿತರನ್ನು ಕೂಲಂಕುಶವಾಗಿ ಪ್ರಶ್ನಿಸಿದ ವೈದ್ಯರಿಗೆ, ಇದರ ನಿರ್ದಿಷ್ಟ ಕಾರಣವೂ ತಿಳಿಯಿತು. ಸುಮಾರು ಮೂರುವಾರಗಳ ಹಿಂದೆ ರಕ್ತದೊತ್ತಡ ಉಲ್ಬಣಿಸಿ ಆಸ್ಪತ್ರೆಗೆ ದಾಖಲಾಗಿದ್ದ ಆಕೆಯ ಅಜ್ಜನ ಅಪೇಕ್ಷೆಯಂತೆ, ಪೂರ್ಣಿಮಾಳನ್ನು ದಿನನಿತ್ಯ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಅರೆಕ್ಷಣವೂ ಸುಮ್ಮನೆ ಕುಳಿತಿರಲಾರದ ಈ ಪುಟಾಣಿಯು, ಆಸ್ಪತ್ರೆಯಲ್ಲಿದ್ದ ಎಲ್ಲ ಕೊಠಡಿಗಳಿಗೆ ಭೇಟಿನೀಡುತ್ತಿದ್ದಳು. ಇದೇ ಕಾರಣದಿಂದಾಗಿ "ಆಸ್ಪತ್ರೆಜನ್ಯ ಸೋಂಕು" ಎಂದು ಕರೆಯಲ್ಪಡುವ ಈ ವಿಲಕ್ಷಣ ಕಾಯಿಲೆಯು, ಸುಲಭದಲ್ಲೇ ಪೂರ್ಣಿಮಾಗೆ ಹರಡಿತ್ತು!. 

ಆಸ್ಪತ್ರೆಜನ್ಯ ಸೋಂಕು 

ಒಂದು ಸೂರಿನಡಿಯಲ್ಲಿ ವಾಸ್ತವ್ಯ ಹೂಡಿರುವ ವಿವಿಧ ರೋಗಪೀಡಿತ ವ್ಯಕ್ತಿಗಳಲ್ಲಿರುವ ವಿಭಿನ್ನ ರೋಗಾಣುಗಳು,ಆಸ್ಪತ್ರೆಗಳನ್ನು ಹೊರತುಪಡಿಸಿದಲ್ಲಿ ಪ್ರಾಯಶಃ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಮಾತ್ರ ಪತ್ತೆಯಾಗಬಹುದು. ಆದರೆ ಇಂತಹ ತಾಣಗಳಲ್ಲಿ ಇವುಗಳ ನಿಯಂತ್ರಣಕ್ಕೆ ಅವಶ್ಯವೆನಿಸುವ ಅನೇಕ ವೈಜ್ಞಾನಿಕ ವಿಧಾನಗಳೂ ಇವೆ. ಈ ಕ್ರಮಗಳನ್ನು ಸಮರ್ಪಕವಾಗಿ ಪರಿಪಾಲಿಸಿದಲ್ಲಿ, ಆಸ್ಪತ್ರೆಜನ್ಯ ಸೋಂಕು ಹೆಡೆ ಎತ್ತುವ ಸಾಧ್ಯತೆಗಳೇ ಇಲ್ಲವೆನ್ನಬಹುದು. 

ಆಸ್ಪತ್ರೆಜನ್ಯ ಸೋಂಕುಗಳು ಸಾಮಾನ್ಯವಾಗಿ ಸಮರ್ಪಕ ಹಾಗೂ ವೈಜ್ಞಾನಿಕ ಸೋಂಕು ನಿಯಂತ್ರಣ ವಿಧಾನಗಳನ್ನು ಅನುಸರಿಸದ ಆಸ್ಪತ್ರೆ- ಚಿಕಿತ್ಸಾಲಯಗಳಲ್ಲಿ ತನ್ನ ಇರುವನ್ನು ತೋರುತ್ತದೆ. ಆಸ್ಪತ್ರೆಯ ವೈದ್ಯಕೀಯ,ಅರೆ ವೈದ್ಯಕೀಯ ಮತ್ತು ಇತರ ಸಿಬಂದಿಗಳು ಇಂತಹ ಪ್ರಾಥಮಿಕ ನಿಯಮಗಳನ್ನು ನಿರ್ಲಕ್ಷಿಸಿದಾಗ ಇಂತಹ ಪ್ರಮಾದಗಳು ಸಂಭವಿಸುತ್ತವೆ. 

ಆಸ್ಪತ್ರೆಯ ಸಿಬಂದಿಗಳು ತಮ್ಮ ಹಸ್ತಗಳನ್ನು ಶುಚಿಗೊಳಿಸದೇ ಇರುವುದು,ತೀವ್ರ ಸೋಂಕು ಪೀಡಿತ ರೋಗಿಗಳನ್ನು ಪ್ರತ್ಯೇಕವಾಗಿ ಇರಿಸದಿರುವುದು, ರೋಗಿಗಳ ಬಟ್ಟೆಬರೆ ಹಾಗೂ ರೋಗಿಗಳು ಬಳಸುತ್ತಿರುವ ಪರಿಕರಗಳನ್ನು ಸ್ವಚ್ಚಗೊಳಿಸದೇ ಇರುವುದು, ವಿವಿಧ ವೈದ್ಯಕೀಯ ಉಪಕರಣಗಳನ್ನು ರೋಗಾಣುರಹಿತವಾಗಿ ಇರಿಸದ ಚಿಕಿತ್ಸಾಲಯಗಳಲ್ಲಿ ಆಸ್ಪತ್ರೆಜನ್ಯ ಸೋಂಕು ಉದ್ಭವಿಸುತ್ತದೆ. ಅಂತೆಯೇ ತೀವ್ರನಿಗಾ ಘಟಕದಲ್ಲಿ ಸಂದರ್ಶಕರನ್ನು ನಿರ್ಬಂಧಿಸುವುದು, ರೋಗಿಯ ಹಾಸಿಗೆಯ ಮೇಲೆ ಸಂದರ್ಶಕರು ಕುಳಿತುಕೊಳ್ಳಲು ಅವಕಾಶ ನೀಡುವುದು, ಆಸ್ಪತ್ರೆಯಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ವೈದ್ಯಕೀಯ ತ್ಯಾಜ್ಯಗಳನ್ನು ಸಮರ್ಪಕ- ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡದಿರುವುದೇ ಮುಂತಾದ ಹತ್ತು ಹಲವು ಕಾರಣಗಳಿಂದ ಇಂತಹ ಸೋಂಕುಗಳು ಹುಟ್ಟಿ ಕ್ಷಿಪ್ರಗತಿಯಲ್ಲಿ ಹರಡುತ್ತವೆ. 

ಇದಲ್ಲದೆ ಅನೇಕ ಸಂದರ್ಭಗಳಲ್ಲಿ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಂದ ಬಳಲುವ ರೋಗಿಗಳು ತಾವಾಗಿ ವೈದ್ಯರ ಮೇಲೆ ಒತ್ತಡಹೇರಿ ಅಥವಾ ಅಲ್ಪಾವಧಿಯಲ್ಲೇ ಖ್ಯಾತಿಗಳಿಸಲು ಬಯಸುವ ವೈದ್ಯರು ತಾವಾಗಿ ಒತ್ತಾಯಪೂರ್ವಕವಾಗಿ ನೀಡುವ "ರಾಮಬಾಣ"ದಂತಹ ಪ್ರಬಲ ಔಷದಗಳ ಸೇವನೆಯಿಂದ,ವೈದ್ಯರು ಸೂಚಿಸಿದ ಅವಧಿಗೆ ಔಷದ ಸೇವಿಸದೆ ಇರುವುದರಿಂದ, ಹಿಂದೊಮ್ಮೆ ವೈದ್ಯರು ಸೂಚಿಸಿದ್ದ ಔಷದಗಳನ್ನೇ ಮತ್ತೊಮ್ಮೆ ವೈದ್ಯರ ಸಲಹೆ ಪಡೆಯದೇ ಸ್ವೇಚ್ಚೆಯಿಂದ ಸೇವಿಸುವುದರಿಂದ ಮತ್ತು ತಮ್ಮ ರೋಗಲಕ್ಷಣಗಳು ಮಾಯವಾದೊಡನೆ ಚಿಕಿತ್ಸೆಯನ್ನೇ ನಿಲ್ಲಿಸುವಂತಹ ಹಲವಾರು ಕಾರಣಗಳಿಂದಾಗಿ, ವಿವಿಧ ರೀತಿಯ ರೋಗಕಾರಕ ರೋಗಾಣುಗಳು ಅನೇಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತವೆ. ಒಂದು ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಗಾಗಿ ಒಂದಕ್ಕೂ ಹೆಚ್ಚು ವಿಧದ 'ಜೀವ ನಿರೋಧಕ" ಔಷದಗಳ ಸಂಯುಕ್ತ ಚಿಕಿತ್ಸೆಯೂ ಇಂತಹ ಸಮಸ್ಯೆಗೆ ಕಾರಣವೆನಿಸಬಹುದು. ಈ ರೀತಿಯ ಪ್ರತಿರೋಧಕ ಶಕ್ತಿಯನ್ನು ಗಳಿಸಿರುವ ರೋಗಾಣುಗಳು, ಸಾಮಾನ್ಯ ಔಷದಗಳಿಗೆ ಶರಣಾಗುವ ಸಾಧ್ಯತೆಗಳೇ ಇಲ್ಲ. 

ವಿಶಿಷ್ಟ ಸಂದರ್ಭಗಳಲ್ಲಿ ರೋಗಿಯ ರಕ್ತನಾಳಗಳ ಮೂಲಕ ಔಷದ, ರಕ್ತ ಮತ್ತಿತರ ದ್ರವಗಳನ್ನು ನೀಡಲು ಬಳಸುವ ಪರಿಕರಗಳು,ಮೂತ್ರಾಶಯದಿಂದ ಮೂತ್ರವನ್ನು ಹೊರಹಾಕಲು ಬಳಸುವ ಸಾಧನಗಳು, ರೋಗಿಯ ಶರೀರವನ್ನು ಛೇದಿಸಿ ಅಥವಾ ಛೇದಿಸದೇ ಬಳಸಲ್ಪಡುವ ವಿವಿಧರೀತಿಯ ವೈದ್ಯಕೀಯ ಉಪಕರಣಗಳು- ಸಾಧನಗಳಿಂದ ಆಸ್ಪತ್ರೆಜನ್ಯ ಸೋಂಕು ಸುಲಭದಲ್ಲೇ ಹರಡಬಲ್ಲದು. 

ಅಪಘಾತಗಳಿಂದಾಗಿ ಸಂಭವಿಸುವ ಗಂಭೀರ ಗಾಯಗಳು, ಮೂಳೆಮುರಿತ ಮತ್ತು ಶಸ್ತ್ರಚಿಕಿತ್ಸೆಗಳ ಬಳಿಕ, ರೋಗಿಯ ಶರೀರದ ಮೇಲಿರುವ ಗಾಯಗಳನ್ನು ಇಂತಹ ಸೋಂಕುಗಳು ಪೀಡಿಸಿದಲ್ಲಿ, ರೋಗಿಯ ಸ್ಥಿತಿ ವಿಷಮಿಸುವುದುಂಟು. 

ಸಂಕ್ಷಿಪ್ತವಾಗಿ ಮೇಲೆ ನಮೂದಿಸಿದ ಹಾಗೂ ಅನ್ಯ ಕೆಲವೊಂದು ಕಾರಣಗಳೂ ಆಸ್ಪತ್ರೆಜನ್ಯ ಸೋಂಕಿಗೆ ಮೂಲವೆನಿಸುವುದಾದರೂ, ಇವೆಲ್ಲವನ್ನೂ ಪುಟ್ಟ ಲೇಖನದಲ್ಲಿ ವಿವರಿಸುವುದು ಅಸಾಧ್ಯವೆನಿಸುವುದು. 

ನಿವಾರಣೆ ಸಾಧ್ಯವೇ?

"ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವಂತೆ, ಪ್ರತಿಯೊಂದು ಆಸ್ಪತ್ರೆಗಳ ಪ್ರತಿಯೊಂದು ಸಿಬಂದಿಗಳು, ಸಂದರ್ಭಾನುಸಾರ ಸೋಪು ಹಾಗೂ ಕ್ರಿಮಿನಾಶಕಗಳನ್ನು ಬಳಸಿ ತಮ್ಮ ಹಸ್ತಗಳನ್ನು ಶುಚಿಗೊಳಿಸುವುದು, ರೋಗಿಗಳನ್ನು ಪರೀಕ್ಷಿಸುವಾಗ- ಚಿಕಿತ್ಸಿಸುವಾಗ ಗ್ಲೌಸ್ ಮತ್ತು ಮಾಸ್ಕ್ ಗಳನ್ನೂ ಧರಿಸುವುದು,ವಿವಿಧ ವೈದ್ಯಕೀಯ ಉಪಕರಣಗಳನ್ನು "ರೋಗಾಣುರಹಿತ" ವನ್ನಾಗಿಸುವುದು, ರೋಗಿಗಳ ಕೊಠಡಿ, ಶೌಚಾಲಯ,ಬಟ್ಟೆಬರೆಗಳು ಮತ್ತಿತರ ಪರಿಕರಗಳನ್ನು ಸ್ವಚ್ಚವಾಗಿ ಇರಿಸುವುದು, ಸಂದರ್ಶಕರಿಗೆ ಸಮಯದ ಮಿತಿ ವಿಧಿಸುವುದು ಮತ್ತು ತೀವ್ರನಿಗಾ ಘಟಕ,ತುರ್ತು ಚಿಕಿತ್ಸಾ ವಿಭಾಗ, ಅಪಘಾತ ಚಿಕಿತ್ಸಾ ವಿಭಾಗಗಳಲ್ಲಿ ರೋಗಿಗಳ ಬಂಧುಮಿತ್ರರಿಗೆ ಪ್ರವೇಶವನ್ನು ನಿರ್ಬಂಧಿಸುವುದೇ ಮುಂತಾದ ಕಠಿಣ ಆದರೆ ಅತ್ಯವಶ್ಯಕ ಕ್ರಮಗಳನ್ನು ಅನುಷ್ಠಾನಗೊಳಿಸಿದಲ್ಲಿ, ಆಸ್ಪತ್ರೆಜನ್ಯ ಸೋಂಕನ್ನು ದೂರವಿರಿಸಬಹುದು. ಇದಲ್ಲದೆ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ವೈದ್ಯಕೀಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವುದು ಈ ಸೋಂಕನ್ನು ಉಚ್ಚಾಟಿಸುವಲ್ಲಿ ಅತ್ಯಂತ ಉಪಯುಕ್ತವೆನಿಸುವುದು. 

ನೀವೇನು ಮಾಡಬಹುದು?

ನೂರಾರು ವರ್ಷಗಳ ಹಿಂದೆ ವೈದ್ಯರ ಹಾಗೂ ಸಮರ್ಪಕ ಚಿಕಿತ್ಸೆಯ ಅಭಾವಗಳಿಂದಾಗಿ ಅನೇಕ ರೋಗಿಗಳು ಮೃತಪಡುತ್ತಿದ್ದರು. ಇದೇ ಕಾರಣದಿಂದಾಗಿ ತಮ್ಮ ಬಂಧುಮಿತ್ರರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ, ಅವರನ್ನೊಮ್ಮೆ ಕಂಡು ಮಾತನಾಡಿಸಿ ಬರುವ ಪದ್ಧತಿ ಆರಂಭವಾಗಿತ್ತು. ಆದರೆ ಬಹುತೇಕ ಭಾರತೀಯರು ಇಂದಿಗೂ ಈ ಸಂಪ್ರದಾಯವನ್ನು ಪರಿಪಾಲಿಸುತ್ತಿರುವುದರಿಂದ, ಆಸ್ಪತ್ರೆಜನ್ಯ ಸೋಂಕು ಅನಾಯಾಸವಾಗಿ ಹರಡಲು ಕಾರಣವೆನಿಸುತ್ತಿದೆ. ಆದುದರಿಂದ ಇಂದಿನಿಂದಲೇ ನಿಮ್ಮ ಬಂಧುಮಿತ್ರರು ಆಸ್ಪತ್ರೆಗೆ ದಾಖಲಾದಲ್ಲಿ ಅವರನ್ನು ಕಾಣಲು ಆಸ್ಪತ್ರೆಗೆ ಧಾವಿಸದಿರಿ. ಸಾಂಕ್ರಾಮಿಕ ರೋಗಪೀಡಿತರ ಭೇಟಿಯಿಂದ ಈ ರೋಗವು ನಿಮಗೂ "ಪ್ರಸಾದ" ರೂಪದಲ್ಲಿ ಲಭಿಸುವ ಸಾಧ್ಯತೆಗಳಿವೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಯಾವುದೇ ಕಾರಣಕ್ಕೆ ಸಂದರ್ಶಿಸದಿರಿ. ಅನಿವಾರ್ಯವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾದಲ್ಲಿ, ಪುಟ್ಟ ಮಕ್ಕಳು ಮತ್ತು ವಯೋವೃದ್ಧರನ್ನು ಜೊತೆಗೆ ಕರೆದೊಯ್ಯದಿರಿ. 

ಬಂಧುಮಿತ್ರರು ಆಸ್ಪತ್ರೆಯಲ್ಲಿ ಪ್ರಸವಿಸಿದಾಗ ಅಥವಾ ಮೃತಪಟ್ಟಾಗ ಖಂಡಿತವಾಗಿಯೂ ನೀವು ಆಸ್ಪತ್ರೆಗೆ ಭೇಟಿ ನೀಡುವ ಅವಶ್ಯಕತೆಯೇ ಇರದು. ಏಕೆಂದರೆ ಬಾಣಂತಿ- ಮಗುವನ್ನು ಹಾಗೂ ನಿಧನರಾದವರ ಮೃತ ಶರೀರವನ್ನು ಮನೆಗೆ ತರಬೇಕಾಗುವುದು ಅನಿವಾರ್ಯ. 

ಅಗತ್ಯವೆನಿಸಿದಾಗ ಆಸ್ಪತ್ರೆಯ ಭೇಟಿ ಸಂಕ್ಷಿಪ್ತವಾಗಿರಲಿ. ಇದರೊಂದಿಗೆ ರೋಗಿಯ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದು, ರೋಗಿ ಬಳಸುವ ಪರಿಕರಗಳನ್ನು ಮುಟ್ಟುವುದು, ರೋಗಿಯ ಬಟ್ಟೆಬರೆಗಳನ್ನು ಬಳಸುವುದರಿಂದ, ಅವುಗಳಲ್ಲಿರಬಹುದಾದ ರೋಗಾಣುಗಳು ನಿಮ್ಮ ಶರೀರವನ್ನು ಪ್ರವೇಶಿಸುವ ಅಥವಾ ನಿಮ್ಮ ಶರೀರದಲ್ಲಿರಬಹುದಾದ ರೋಗಾಣುಗಳು ರೋಗಿಯ ಶರೀರವನ್ನು ಪ್ರವೇಶಿಸುವ ಸಾಧ್ಯತೆಗಳಿವೆ. 

ಕ್ಷಿಪ್ರಗತಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಲ್ಲ ಶೀತ, ಫ್ಲೂ ಜ್ವರ, ತೀವ್ರ ಕೆಮ್ಮು, ಕೆಂಗಣ್ಣಿ ನಂತಹ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ನಿಮ್ಮನ್ನು ಬಾಧಿಸುತ್ತಿದ್ದಲ್ಲಿ, ಯಾವುದೇ ಕಾರಣಕ್ಕೂ ನೀವು ಯಾವುದೇ ರೋಗಿಯನ್ನು ಸಂದರ್ಶಿಸುವುದು ರೋಗಿಯ ಹಿತದೃಷ್ಟಿಯಿಂದ ಕ್ಷೇಮಕರವಲ್ಲ. ಅಂತಿಮವಾಗಿ ಇವೆಲ್ಲಾ ಕ್ರಮಗಳನ್ನು ನೀವು ಮನಸ್ಪೂರ್ವಕವಾಗಿ ಪರಿಪಾಲಿಸಿದಲ್ಲಿ, ಆಸ್ಪತ್ರೆಜನ್ಯ ಸೋಂಕನ್ನು ನಿಯಂತ್ರಿಸುವಲ್ಲಿ ನಿಮ್ಮ ಪಾತ್ರವೂ ಮಹತ್ವಪೂರ್ಣವೆನಿಸುವುದರಲ್ಲಿ ಸಂದೇಹವಿಲ್ಲ. 

ನಿಮಗಿದು ತಿಳಿದಿರಲಿ 

ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ್ದ ಅಧ್ಯಯನಗಳಿಂದ ತಿಳಿದುಬಂದಂತೆ, ಭಾರತದಲ್ಲಿ ಒಳರೋಗಿಗಳಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರಲ್ಲಿ ಕನಿಷ್ಠ ಶೇ. ೧೦ ರಷ್ಟು ರೋಗಿಗಳು ಆಸ್ಪತ್ರೆಜನ್ಯ ಸೋಂಕಿನಿಂದ ಪೀಡಿತರಾಗಿ ಮತ್ತೆ ಆಸ್ಪತ್ರೆಗೆ ಮರಳುತ್ತಾರೆ. ಗಂಭೀರ ಕಾಯಿಲೆಗಳು ಮತ್ತು ಸುತ್ತ ಗಾಯಗಳಿಂದ ಪೀಡಿತರಾದ ವ್ಯಕ್ತಿಗಳು, "ರೋಗ ಪ್ರತಿರೋಧಕ ಶಕ್ತಿ" ಯ ಕೊರತೆಯಿರುವ ಪುಟ್ಟ ಮಕ್ಕಳು ಹಾಗೂ ವಯೋವೃದ್ಧರು, ಇಂತಹ ಸೊಂಕುಗಳಿಂದ ಮರಣಿಸುವುದು ಅಪರೂಪವೇನಲ್ಲ. ಅಂತೆಯೇ ಅಪಘಾತಗಳಲ್ಲಿ ತೀವ್ರ ಗಾಯಗೊಂಡವರು, ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಕ್ಯಾನ್ಸರ್, ಮಧುಮೇಹ ಹಾಗೂ ತೀವ್ರ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳು, ಆಸ್ಪತ್ರೆಜನ್ಯ ಸೋಂಕಿಗೆ ಸುಲಭದಲ್ಲೇ ಈಡಾಗುತ್ತಾರೆ. 

ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳಿಗೆ ಕೃತಕ ಉಸಿರಾಟಕ್ಕಾಗಿ ಬಳಸುವ "ವೆಂಟಿಲೆಟರ್" ಮತ್ತು ಮೂತ್ರಾಶಯದಿಂದ ಮೂತ್ರವನ್ನು ಹೊರಹಾಕಲು ಬಳಸುವ" ಕೆಥೆಟರ್' ಗಳು ಶೇ. ೫೦ ರಷ್ಟು ಹಾಗೂ ರೋಗಿಗಳಿಗೆ ರಕ್ತನಾಳಗಳ ಮೂಲಕ ರಕ್ತ, ಔಷದ ಇತ್ಯಾದಿಗಳನ್ನು ನೀಡಲು ಬಳಸುವ ಉಪಕರಣಗಳಿಂದ ಶೇ. ೩೦ ರಷ್ಟು ಮತ್ತು ಶಸ್ತ್ರ ಚಿಕಿತ್ಸಾ ಸಂಬಂಧಿತ ಗಾಯಗಳಲ್ಲಿ ಉದ್ಭವಿಸುವ ಸೋಂಕುಗಳು ಇನ್ನುಳಿದ ಶೇ. ೨೦ ರಷ್ಟು ರೋಗಿಗಳಲ್ಲಿ ಆಸ್ಪತ್ರೆಜನ್ಯ ಸೊಂಕುಗಳಿಗೆ ಕಾರಣವೆನಿಸುತ್ತವೆ. 

ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಈ ಸೋಂಕಿನ ಸಮಸ್ಯೆ ಇರುವುದೆಂದಲ್ಲಿ ನಿಮಗೂ ಆಶ್ಚರ್ಯವೆನಿಸಬಹುದು. ಸ್ವಚ್ಚತೆಯ ಬಗ್ಗೆ ಕಟ್ಟೆಚ್ಚರ ವಹಿಸುವ ಅಲ್ಲಿನ ಆಸ್ಪತ್ರೆಗಳಲ್ಲೂ, ಶೇ. ೫ ರಷ್ಟು ರೋಗಿಗಳು ಈ ಸೋಂಕಿನಿಂದ ಪೀಡಿತರಾಗುವುದು ಅಕ್ಷರಶಃ ಸತ್ಯ. 

ದಿನಪತ್ರಿಕೆಯೊಂದರಲ್ಲಿ ನೀವು ಓದಿರಬಹುದಾದ ದೆಹಲಿಯ ಪ್ರಖ್ಯಾತ ಆಸ್ಪತ್ರೆಯೊಂದರಲ್ಲಿ ತಿಂಗಳೊಪ್ಪತ್ತಿನಲ್ಲೇ ನೂರಾರು ಪುಟಾಣಿಗಳ ಸಾವು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಬಳಿಕ ಅನೇಕ ರೋಗಿಗಳು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಂತಹ ಘಟನೆಗಳಿಗೆ, ಆಸ್ಪತ್ರೆಜನ್ಯ ಸೋಂಕು ಕಾರಣವೇ ಹೊರತು ಬೇರೇನೂ ಅಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೮-೧೧-೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ತಕಟಿತ ಲೇಖನ 


No comments:

Post a Comment