Saturday, October 5, 2013

sexual problems are not secret!



                                                ಲೈಂಗಿಕ ಸಮಸ್ಯೆ ರಹಸ್ಯವಲ್ಲ!

ದಿನಪತ್ರಿಕೆಗಳಲ್ಲಿ ಯಥೇಚ್ಛವಾಗಿ ಪ್ರಕಟವಾಗುವ ವೈವಿಧ್ಯಮಯ ವೈದ್ಯಕೀಯ ಜಾಹೀರಾತುಗಳನ್ನು ಗಮನಿಸಿರುವಿರಾ?. ಮಾನವ ಸಹಜ ದೌರ್ಬಲ್ಯಗಳನ್ನು ಬಂಡವಾಳವನ್ನಾಗಿಸಿ ದಂಧೆ ನಡೆಸುವ ನಕಲಿವೈದ್ಯರು ಇಂತಹ ಜಾಹೀರಾತುಗಳ ಮೂಲಕ ವೈದ್ಯವೃತ್ತಿಗೆ ಅಪಚಾರವೆಸಗುತ್ತಿದ್ದಾರೆ. ಅಮಾಯಕರಿಗೆ "ಟೋಪಿ" ಹಾಕಿ ತಮ್ಮ ಜೇಬನ್ನು ತುಂಬುವುದೇ ಇವರ ಏಕಮಾತ್ರ ಗುರಿ. 
-----------          ----------------                -------------            ---------------                -----------------                    -----------------

ನಿಮ್ಮ ಆತ್ಮಸಾಕ್ಷಿಯಾಗಿ ನಿಜ ಹೇಳಿ, ಈ ಲೇಖನದ ತಲೆಬರಹವನ್ನು ಕಂಡೊಡನೆ ನೀವು ಕುತೂಹಲದಿಂದ ಇದನ್ನು ಓದಲು ಆರಂಭಿಸಿದ್ದು ನಿಜವಲ್ಲವೇ?. ಸ್ವಾಮೀ, ನಿಮ್ಮಲ್ಲೂ ಮಾನವ ಸಹಜ ದೌರ್ಬಲ್ಯಗಳು ಇರುವುದಕ್ಕೆ ಬೇರೆ ಸಾಕ್ಷಿ ಬೇಕೇ?. 

ಇದೊಂದು ಲೇಖನದ ತಲೆಬರಹ ಮಾತ್ರವಲ್ಲ, ದಿನಪತ್ರಿಕೆಗಳಲ್ಲಿ ನೀವು ಕಂಡಿರುವ ಅನೇಕ ಜಾಹೀರಾತುಗಳಲ್ಲೊಂದರ ತಲೆಬರಹವೂ ಹೌದು. ಇದೇ ರೀತಿಯ ದಾಂಪತ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ,ಸಂಪೂರ್ಣ ಪುರುಷತ್ವವನ್ನು ಪಡೆಯಿರಿ,ನವತಾರುಣ್ಯವನ್ನು ಮರಳಿ ಪಡೆಯಿರಿ, ವಿವಾಹಕ್ಕೆ ಮೊದಲು ಅಥವಾ ಅನಂತರ ಮತ್ತು ಲೈಂಗಿಕತೆಯೇ ನಮ್ಮ ಧರ್ಮ ಎನ್ನುವ ಆಕರ್ಷಕ ಶೀರ್ಷಿಕೆಯ ಜಾಹೀರಾತುಗಳು ದಿನಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಲೇ ಇರುತ್ತವೆ. 

ಈ ಲೇಖನದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವ,ಲೈಂಗಿಕ ತಜ್ಞರೆಂದು ಸ್ವಯಂ ಘೋಷಿಸಿಕೊಳ್ಳುವವವರ ಕಾರ್ಯವೈಖರಿ ಮತ್ತು ಇವರು ನೀಡುವ ಚಿಕಿತ್ಸೆಯ ಸಾಧಕ- ಬಾಧಕಗಳ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮದು. 

ಪದವಿಹೀನನಾದರೂ "ತಜ್ಞ"!

ಲೈಂಗಿಕ ಸಮಸ್ಯೆಗಳ ಜಾಹೀರಾತುಗಳಲ್ಲಿ ವೈದ್ಯರ ನಾಮದ ಹಿಂದೆ "ಡಾ " ಎನ್ನುವ ವೃತ್ತಿ ಸೂಚಕ ಬಿರುದು ಇದ್ದರೂ, ಇವರ ಹೆಸರುಗಳ ಮುಂದೆ ನಮೂದಿಸಬೇಕಾದ ಶೈಕ್ಷಣಿಕ ಅರ್ಹತೆಗಳನ್ನು ಎಂದಾದರೂ ಕಡಿದ್ದೀರಾ?. ಅಂತೆಯೇ ಇವರ ನೋಂದಣಿ ಸಂಖ್ಯೆಯನ್ನು ನಮೂದಿಸಿರುವುದನ್ನು ಕಂಡಿದ್ದೀರಾ?. ನೀವು ಇದನ್ನು ಕಾಣಲು ಸಾಧ್ಯವೂ ಇಲ್ಲ. ಏಕೆಂದರೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ನೀಡಿದ ಪದವಿಯೇ ಇವರಲ್ಲಿಲ್ಲ. ವೈದ್ಯಕೀಯ ಶಿಕ್ಷಣವನ್ನೇ ಪಡೆಯದವರಿಗೆ ವೈದ್ಯಕೀಯ ಪದವಿ ದೊರೆಯುವುದೆಂತು?. 

ವಿವಿಧ ಪದ್ದತಿಗಳ ವೈದ್ಯಕೀಯ ಪದವೀಧರರು ತಮ್ಮ ವೃತ್ತಿಯನ್ನು ಆರಂಭಿಸುವ ಮುನ್ನ, ಸರಕಾರದಿಂದ ಅಂಗೀಕೃತ ವೈದ್ಯಕೀಯ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ತದನಂತರ ದೊರೆಯುವ ನೋಂದಣಿ ಸಂಖ್ಯೆಯನ್ನು ಅವಶ್ಯಕತೆ ಇರುವಲ್ಲಿ ನಮೂದಿಸಲೇಬೇಕು. ಅಸಲಿ ಪದವಿಯೇ ಇಲ್ಲದ ನಕಲಿ ವೈದ್ಯರು ನೋಂದಣಿ ಮಾಡುವುದಾದರೂ ಎಂತು?. ನಿಜಸ್ಥಿತಿ ಹೀಗಿದ್ದರೂ ಕೆಲವೊಮ್ಮೆ ಆರ್. ಎಂ. ಪಿ- ೧೨೩೪ ಎಂದು ನಮೂದಿಸುವ ಬುದ್ಧಿವಂತರೂ ಇಲ್ಲದಿಲ್ಲ. ಆರ್. ಎಂ. ಪಿ ಎಂದರೆ ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಎಂದರ್ಥ. ವಿಶೇಷವೆಂದರೆ ಇದನ್ನೇ ಪದವಿಯಂತೆ ನಮೂದಿಸುವ ಹವ್ಯಾಸವೂ ಅನೇಕರಲ್ಲಿದೆ. 

ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು, ಆಯಾ ವಿಷಯಗಳಲ್ಲಿ ತಜ್ಞರೆನಿಸಿಕೊಳ್ಳುತ್ತಾರೆ. ಆದರೆ ವೈದ್ಯಕೀಯ ಶಿಕ್ಷಣವೇ ಇಲ್ಲದ ನಕಲಿ ವೈದ್ಯರು, ತಮ್ಮನ್ನು ತಾವೇ "ಲೈಂಗಿಕ ತಜ್ಞ" ರೆಂದು ಘೋಷಿಸಿಕೊಳ್ಳುವುದು ಪವಾಡವೇ ಹೊರತು ಬೇರೇನೂ ಅಲ್ಲ!. 

ನಿಮ್ಮ ಕಣ್ಮನಗಳನ್ನು ಸೆಳೆಯುವ ಆಕರ್ಷಕ ತಲೆಬರಹಗಳ ಜಾಹೀರಾತುಗಳಲ್ಲಿ ಇವರು ಬಳಸುವ ಪದಪುಂಜಗಳನ್ನೊಮ್ಮೆ ಓದಿನೋಡಿ. ಹಸ್ತಮೈಥುನ, ನಿದ್ದೆಯಲ್ಲಿ- ಮೂತ್ರದಲ್ಲಿ(?) ವೀರ್ಯ ಹೋಗುವುದು, ಶಿಶ್ನ ಮುದುಡಿಕೊಂಡು ಚಿಕ್ಕದಾಗಿರುವುದು, ನಿಶ್ಶಕ್ತಿ,ಆಯಾಸ, ನರದೌರ್ಬಲ್ಯ, ಮಕ್ಕಳಾಗದಿರುವುದು, ಗುಪ್ತರೋಗಗಳು, ವಿವಾಹಕ್ಕೆ ಮೊದಲು ಅಥವಾ ನಂತರ ನಿಮಗೆ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪಿನಿಂದ ಬಂದಿರಬಹುದಾದ  ಸಮಸ್ಯೆಗಳ,ಇತ್ಯಾದಿ ಇತ್ಯಾದಿ. ದಯಮಾಡಿ ನಗಬೇಡಿ ಸ್ವಾಮೀ, ಇವು ನನ್ನ ಸ್ವಂತದ ಶಬ್ದಗಳಂತೂ ಅಲ್ಲ!. 

ಇಂತಹ ಎಲ್ಲ ಸಮಸ್ಯೆಗಳಿಗೂ ಇವರಲ್ಲಿ ಅದ್ಭುತವಾದ ಅಥವಾ ವಂಶ ಪಾರಂಪರ್ಯವಾಗಿ ಬಂದ, ಕೆಲವೊಮ್ಮೆ ಇವರೇ ಸಂಶೋಧಿಸಿದ ಅಥವಾ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷದಗಳಿವೆ. ಕೆಲ ಜಾಹೀರಾತುಗಳಲ್ಲಿ ಒಂದು ತಿಂಗಳಿನ ಔಷದಗಳಿಗೆ ಇಂತಿಷ್ಟು ಹಣವೆನ್ನುವ ಸ್ಪಷ್ಟ ಮಾಹಿತಿಯೂ ಇದೆ. 

ಪ್ರತಿಯೊಬ್ಬ ವೈದ್ಯರು ಪರಿಪಾಲಿಸಲೆಬೇಕಾದ "ನೀತಿ ಸಂಹಿತೆ" ಯಂತೆ, ಯಾವುದೇ ವೈದ್ಯರು ಇಂತಹ ಜಾಹೀರಾತುಗಳನ್ನು ನೀಡುವಂತಿಲ್ಲ. ಆದರೆ ವೈದ್ಯರೇ ಅಲ್ಲದ ನೀತಿಭ್ರಷ್ಟರಿಗೆ, "ನೀತಿ" ಎನ್ನುವ ವಿಚಾರದ ಅರಿವೇ ಇಲ್ಲ!. ಇದರೊಂದಿಗೆ ನಮ್ಮ ನಿಷ್ಕ್ರಿಯ ಸರಕಾರವೂ ಸುಮ್ಮನಿರುವುದನ್ನು ಕಂಡು "ಮೌನಂ ಸಮ್ಮತಿ ಲಕ್ಷಣಂ" ಎಂದು ನಂಬಿರುವ ನಕಲಿ ವೈದ್ಯರು, ರಾಜಾರೋಷವಾಗಿ ತಮ್ಮ ದಂಧೆಯನ್ನು ನಡೆಸುತ್ತಾರೆ. 

ಅಜ್ಞಾನವೇ ಮೂಲ 

ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕ ವಾತ್ಸಾಯನನ ತವರಾದ ಭಾರತದಲ್ಲಿ ಇಂದಿಗೂ ಅನೇಕ ಜನರಿಗೆ ಲೈಂಗಿಕ ವಿಷಯಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಈ ವಿಷಯವನ್ನು ಮುಕ್ತವಾಗಿ ಚರ್ಚಿಸುವ ದಿಟ್ಟತನ ಮತ್ತು ಮನೋಭಾವಗಳೂ ಇಲ್ಲ. ಯಾವುದು ತಪ್ಪು- ಯಾವುದು ಸರಿ, ಯಾವ ಶಾರೀರಿಕ ಲಕ್ಷಣಗಳು ಸಹಜ- ಯಾವುದು ಅನಾರೋಗ್ಯದ ಅಥವಾ ಅಸಹಜ ಲಕ್ಷಣವೆಂದು ಅರಿಯದವರೂ ನಮ್ಮಲ್ಲಿದ್ದಾರೆ. 

ಪ್ರಕೃತಿ ನಿಯಮದಂತೆ ಪುಟ್ಟ ಕಂದ ಹುಟ್ಟಬೇಕಿದ್ದಲ್ಲಿ ಸ್ತ್ರೀ ಪುರುಷ ಸಮಾಗಮ ಅವಶ್ಯವೆಂದು ಅರಿಯದ ಅಮಾಯಕ ಯುವಜನರು, ಈ ಆಧುನಿಕ ಯುಗದಲ್ಲೂ ಇದ್ದಾರೆ ಎಂದಲ್ಲಿ ನೀವೂ ನಂಬಲಾರಿರಿ. ಇದೇ ಕಾರಣದಿಂದಾಗಿ ವಿಚ್ಛೇದನದಲ್ಲಿ ಅಂತ್ಯಗೊಂಡಿರುವ ವಿವಾಹಗಳು ಅಸಂಖ್ಯ. 

ಸುರೇಶನ ನರದೌರ್ಬಲ್ಯ 

ಸ್ಪುರದ್ರೂಪಿ ಸುರೇಶನಿಗೆ ವಿವಾಹವಾಗುವಾಗ ಮೂವತ್ತೆರಡು ವರ್ಷ ವಯಸ್ಸಾಗಿತ್ತು. ವರ್ಷ ಕಳೆಯುವಷ್ಟರಲ್ಲೇ ಸುಂದರ ಗಂಡು ಮಗುವಿನ ತಂದೆಯಾಗಿದ್ದ. ಮೂರು ಮಂದಿಯ ಈ ಪುಟ್ಟ ಕುಟುಂಬವು ಸುಖೀ ಸಂಸಾರಕ್ಕೆ ಮಾದರಿಯಾಗಿತ್ತು. 

ವಿವಾಹವಾಗಿ ಸುಮಾರು ಎಂಟು ವರ್ಷಗಳು ಕಳೆದ ಬಳಿಕ ಸುರೇಶನಿಗೆ ನಿಮಿರು ದೌರ್ಬಲ್ಯ ಆರಂಭವಾಗಿತ್ತು. ಪರಿಚಿತ ವೈದ್ಯರಲ್ಲಿ ತೆರಳಿದ ದಂಪತಿಗಳನ್ನು ಸಮಸ್ಯೆಯ ಬಗ್ಗೆ ಪ್ರಶ್ನಿಸಿದ್ದ ವೈದ್ಯರಿಗೆ, ಇವರಿಬ್ಬರೂ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಇದಕ್ಕೆ ಸೂಕ್ತ ಕಾರಣವೂ ಇತ್ತು. ತನ್ನ ಕುಟುಂಬ ವೈದ್ಯರ ಬಳಿ ಈ ಸಮಸ್ಯೆಯ ಬಗ್ಗೆ ಹೇಳಲು ನಾಚಿದ ಸುರೇಶನು, ಸ್ವಯಂ ಘೋಷಿತ "ಲೈಂಗಿಕ ತಜ್ಞ" ನ ಜಾಹೀರಾತಿಗೆ ಮರುಳಾಗಿ ಆತನಲ್ಲಿಗೆ ತೆರಳಿದ್ದನು. ಈ ನಕಲಿ ತಜ್ಞನ ಹೇಳಿಕೆಯಂತೆ ಸುರೇಶನ ಪುರುಷತ್ವವೇ ವಿನಾಶದ ಅಂಚಿಗೆ ತಲುಪಿತ್ತು!. ಇದನ್ನು ಕೇಳಿದ ಸುರೇಶನು ಹತಾಶೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು. 

ಸುರೇಶನನ್ನು ಸಂತೈಸಿದ ವೈದ್ಯರಿಗೆ ಕೊನೆಗೂ ಆತನ ಸಮಸ್ಯೆಯ ಮೂಲವೇನೆಂದು ಪತ್ತೆಯಾಗಿತ್ತು. ಈ ದಂಪತಿಗಳು ಏಳು ವರ್ಷದ ಮಗನನ್ನು ತಮ್ಮೊಂದಿಗೆ ಮಲಗಿಸಿಕೊಳ್ಳುವುದು ವಾಡಿಕೆಯಾಗಿತ್ತು. ಮಗನು ನಿದ್ರಿಸಿದ ಬಳಿಕವೇ "ಸಮಾಗಮ" ನಡೆಯುತ್ತಿತ್ತು. ಆದರೆ ಸುಮಾರು ಮೂರು ತಿಂಗಳ ಹಿಂದೆ ಅಕಸ್ಮಾತ್ ನಿದ್ದೆಯಿಂದ ಎಚ್ಚೆತ್ತ ಮಗನಿಂದಾಗಿ ದಂಪತಿಗಳ ಮಿಲನ ಅರ್ಧದಲ್ಲೇ ಅಂತ್ಯಗೊಂಡಿತ್ತು. ಈ ಘಟನೆಯ ಬಳಿಕ ಪ್ರತೀಬಾರಿ ಸಮಾಗಮದ ಸಂದರ್ಭದಲ್ಲಿ ಮಗ ಎದ್ದೆಳುವನೋ ಎನ್ನುವ ಭಯವೇ ಸುರೇಶನ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಿತ್ತು!. ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಷ್ಟೂ, ಅದು ಇನ್ನಷ್ಟು ಉಲ್ಬಣಿಸುತ್ತಿತ್ತು. ಇದರಿಂದಾಗಿ ಆತನ ಆತ್ಮವಿಶ್ವಾಸ ನಶಿಸುವುದರೊಂದಿಗೆ ತನ್ನ ಪುರುಷತ್ವದ ಬಗ್ಗೆ ಸಂದೇಹ ಮೂಡಿತ್ತು. ಜೊತೆಗೆ ಲೈಂಗಿಕ ತಜ್ಞನು ಉರಿಯುವ ಬೆಂಕಿಗೆ ತುಪ್ಪ ಹಾಕಿ ಸುರೇಶನ ತಲೆ ಕೆಡಿಸುವಲ್ಲಿ ಯಶಸ್ವಿಯಾಗಿದ್ದನು. 

ಇದೀಗ ವೈದ್ಯರ "ಚಿಕಿತ್ಸೆ" ಯಶಸ್ವಿಯಾಗಲು ಈ ದಂಪತಿಗಳ ಸಹಕಾರದ ಅವಶ್ಯಕತೆಯಿತ್ತು. ದಂಪತಿಗಳು ಪರಿಪಾಲಿಸಬೇಕಾದ ನಿಯಮಗಳ ಬಗ್ಗೆ ಸಲಹೆ ನೀಡಿದ ವೈದ್ಯರ ಸೂಚನೆಯಂತೆ ಮಗನಿಗೆ ಪ್ರತ್ಯೇಕ ಕೊನೆಯ ವ್ಯವಸ್ಥೆಯಾಯಿತು. ಇದರೊಂದಿಗೆ ವೈದ್ಯರು ನೀಡಿದ ಔಷದವನ್ನು ನಿಯಮಿತವಾಗಿ ಸೇವಿಸುತ್ತಿದ್ದ ಸುರೇಶನು, ಎರಡು ವಾರಗಳ ಬಳಿಕ ನಡೆಸಿದ್ದ ಸಮಾಗಮ ಯಶಸ್ವಿಯಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಸುರೇಶನ ಮುಖದಲ್ಲಿ ಮತ್ತೆ ಮಂದಹಾಸ ಮೂಡಿತ್ತು. 

ತನ್ನ ಸಮಸ್ಯೆಯನ್ನು ಪರಿಹರಿಸಿದ ವೈದ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಪತ್ನಿಯೊಂದಿಗೆ ತೆರಳಿದ್ದ ಸುರೇಶನು, ಔಷದ ಸೇವನೆಯನ್ನು ಮುಂದುವರಿಸುವುದರ ಬಗ್ಗೆ ಕೇಳಿದ್ದನು. ಮುಗುಳುನಕ್ಕ ವೈದ್ಯರು ಉಳಿದ ಮಾತ್ರೆಗಳನ್ನು ಎಸೆದುಬಿಡಲು ಹೇಳಿದಾಗ ಸುರೇಶನಿಗೆ ಅಚ್ಚರಿಯಾಗಿತ್ತು. ತಾವು ನೀಡಿದ್ದ ಔಷದ ರಹಿತ ಗುಳಿಗೆಗಳ ಬಗ್ಗೆ ನಿಜವನ್ನೇ ನುಡಿದ ವೈದ್ಯರು, ಸುರೇಶನಿಗೆ ಶಾರೀರಿಕ ರೋಗ ಅಥವಾ ಕೊರತೆಯಿಂದ ನಿಮಿರು ದೌರ್ಬಲ್ಯ ಬಂದಿರಲಿಲ್ಲವೆಂದರು. ಕೇವಲ ಮಾನಸಿಕ ಭಯ ಹಾಗೂ ಆತ್ಮವಿಶ್ವಾಸದ ಕೊರತೆಯಿಂದಾಗಿ ಉದ್ಭವಿಸಿದ ಸಮಸ್ಯೆಯು ನಕಲಿ ವೈದ್ಯನಿಂದಾಗಿ ಉಲ್ಬಣಿಸಿದ್ದರೂ, ಇದೀಗ ಸೂಕ್ತ "ಚಿಕಿತ್ಸೆ" ಯಿಂದ ಬಗೆಹರಿದಿತ್ತು. 

ಸುರೇಶನಲ್ಲಿ ಕಂದುಬಂದಂತಹ ಹಾಗೂ ಇದೇ ರೀತಿಯ ಅನೇಕ ಸಮಸ್ಯೆಗಳಲ್ಲಿ, ಔಷದ ಸೇವನೆಯ ಅವಶ್ಯಕತೆಯೇ ಇರುವುದಿಲ್ಲ. ಆದರೂ ರೋಗಿಯ ಮಾನಸಿಕ ಸಂತೃಪ್ತಿಗಾಗಿ ಔಷದ ರಹಿತ ಗುಳಿಗೆಗಳನ್ನು ನೀಡುವುದು ಅನಿವಾರ್ಯ. ಅಪರೂಪದಲ್ಲಿ ಪುರುಷರಲ್ಲಿ ಕಂಡುಬರಬಹುದಾದ ನಿಮಿರು ದೌರ್ಬಲ್ಯವು ನಿಜಕ್ಕೂ ಶಾಶ್ವತ ನಪುಂಸಕತ್ವದ ಸೂಚನೆಯಲ್ಲ ಎಂದು ನಿಮಗೆ ತಿಳಿದಿರಲಿ. ಯಾವುದೇ ವ್ಯಕ್ತಿಯಲ್ಲಿ ಕಂಡುಬರುವ ತಾತ್ಕಾಲಿಕ ನಿಮಿರು ದೌರ್ಬಲ್ಯವು ಶಾರೀರಿಕ ಅಥವಾ ಮಾನಸಿಕ ಕಾರಣಗಳಿಂದ ಉದ್ಭವಿಸಬಹುದು. ಯುವಕರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಮಾನಸಿಕ ಕಾರಣಗಳಿಂದ ಬರುವ ಸಾಧ್ಯತೆಗಳೇ ಅಧಿಕ. ಶಾರೀರಿಕ ಕಾರಣಗಳಲ್ಲಿ ಮಧುಮೇಹ,ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಪಸ್ಮಾರ ಮತ್ತು ಮಾನಸಿಕ ವ್ಯಾಧಿಗಳು ಪ್ರಮುಖವಾಗಿವೆ. ಜೀವನ ಪರ್ಯಂತ ಅಥವಾ ದೀರ್ಘಕಾಲೀನ ಚಿಕಿತ್ಸೆಯ ಅವಶ್ಯಕತೆಯಿರುವ ಇಂತಹ ಕೆಲ ವ್ಯಾಧಿಗಳಲ್ಲಿ ಈ ರೀತಿಯ ತೊಂದರೆಗಳು ಕಂಡುಬಂದಲ್ಲಿ, ಚಿಕಿತ್ಸೆ ಕಷ್ಟಸಾಧ್ಯ ಹಾಗೂ ಕೆಲವೊಮ್ಮೆ ಅಸಾಧ್ಯವೆನಿಸುವುದು. ಅಂತೆಯೇ ಜನ್ಮದತ್ತ ನಪುಂಸಕತ್ವದಲ್ಲಿ ಯಾವುದೇ ಚಿಕಿತ್ಸೆ ಫಲಕಾರಿಯಾಗದು. 

ಪತ್ನಿಯಿಂದ ಗುಪ್ತರೋಗ? 

ಹಳ್ಳಿಯ ಹುಡುಗಿಯಾದರೂ ಹರಿಣಾಕ್ಷಿ ಅಪ್ರತಿಮ ಸುಂದರಿ ಪೇಟೆಯ ಹುಡುಗ ಸುಧಾಕರನು ಈಕೆಯ ಚೆಲುವಿಗೆ ಮನಸೋತು, ಮದುವೆಯಾಗಿದ್ದನು. ಮದುವೆಯಾದಂತೆಯೇ ನೂತನ ದಂಪತಿಗಳು ಮಧುಚಂದ್ರಕ್ಕಾಗಿ ದಕ್ಷಿಣ ಭಾರತ ಪ್ರವಾಸಕ್ಕೆ ತೆರಳಿದ್ದರು.

ವಾರ ಕಳೆಯುವಷ್ಟರಲ್ಲಿ ಸುಧಾಕರನ ಮೂತ್ರ ವಿಸರ್ಜನಾಂಗದಲ್ಲಿ ಒಂದಿಷ್ಟು ತುರಿಕೆ ಮತ್ತು ನೋವು ಕಾಣಿಸಿಕೊಂಡು, ಮುಂದೊಗಲಿನಲ್ಲಿ ಸಣ್ಣ ಗಾಯಗಳು ಉದ್ಭವಿಸಿದ್ದವು. ಊರಿಗೆ ಮರಳಿದ ಬಳಿಕ ಪರಿಚಿತ ವೈದ್ಯರ ಸಲಹೆ ಪಡೆಯಲು ನಾಚಿದ ಸುಧಾಕರನು, ಲೈಂಗಿಕ ತಜ್ಞನೊಬ್ಬನಲ್ಲಿಗೆ ಹೋಗಿದ್ದನು. ಗಂಭೀರ ಮುಖಭಾವದೊಂದಿಗೆ ಆತನನ್ನು ಪರೀಕ್ಷಿಸಿದ ಈ ನಕಲಿ ವೈದ್ಯನ ಅಭಿಪ್ರಾಯದಂತೆ, ಸುಧಾಕರನಿಗೆ ವೇಶ್ಯಾಸಂಗದಿಂದ ಬರುವಂತಹ ಗುಪ್ತರೋಗ ಬಂದಿತ್ತು. ಇದನ್ನು ಕೇಳಿದ ಸುಧಾಕರನಿಗೆ ಆಕಾಶವೇ ತಲೆಯಮೇಲೆ ಬಿದ್ದಂತಾಯಿತು. ಏಕೆಂದರೆ ಆತನಿಗೆ ಪತ್ನಿ ಹರಿಣಾಕ್ಷಿಯನ್ನು ಹೊರತುಪಡಿಸಿ ಅನ್ಯ ಸ್ತ್ರೀಯರ ಸಂಪರ್ಕವೇ ಇರಲಿಲ್ಲ. ವೈದ್ಯನ ಮಾತನ್ನು ನಂಬಿದ ಸುಧಾಕರನಿಗೆ ಪತ್ನಿಯ ಶೀಲದ ಬಗ್ಗೆ ಸಂದೇಹ ಮೂಡಿತ್ತು!. 

ಒಂದೂವರೆ ಸಾವಿರ ರೂಪಾಯಿ ತೆತ್ತು ಔಷದಗಳನ್ನು ಪಡೆದುಕೊಂಡ ಸುಧಾಕರನು ಎಂದಿನಂತೆಯೇ ಪತ್ನಿಯೊಂದಿಗೆ ಸರಸವಾಡದೇ, ಕೋಣೆಗೆ ತೆರಳಿ ಮುಸುಕುಹಾಕಿ ಮಲಗಿದನು. ಪತಿಯ ವರ್ತನೆಯಿಂದ ಅಚ್ಚರಿಗೊಂಡ ಹರಿಣಾಕ್ಷಿ ಪರಿಪರಿಯಾಗಿ ಕೇಳಿದರೂ ಉತ್ತರವನ್ನೇ ನೀಡದಿದ್ದಾಗ ಕಣ್ಣೀರು ಸುರಿಸಿದ್ದಳು. ಮದುವೆಯ ಬಳಿಕ ಮೊದಲಬಾರಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ರಾತ್ರಿಯೂಟ ಇಟ್ಟಲ್ಲೇ ಹಳಸಿತ್ತು. 

ಮರುದಿನ ನಸುಕಿನಲ್ಲಿ ಕರೆಗಂಟೆಯ ಸದ್ದಿಗೆ ಎಚ್ಚೆತ್ತು ಬಾಗಿಲು ತೆಗೆದ ಸುಧಾಕರನಿಗೆ ಚಡ್ಡಿ ದೋಸ್ತಿ ಡಾ. ಪ್ರಸಾದನನ್ನು ಕಂಡಾಗ ಆಶ್ಚರ್ಯವಾಗಿತ್ತು. ವೈದ್ಯಕೀಯ ಸಮ್ಮೇಳನಕ್ಕಾಗಿ ಬಂದಿರುವುದಾಗಿ ಹೇಳಿದ ಸ್ನೇಹಿತನನ್ನು ಒಳಗೆ ಕರೆದೊಯ್ದು ಪತ್ನಿಯ ಪರಿಚಯ ಮಾಡಿ,ಉಪಾಹಾರದ ವ್ಯವಸ್ಥೆ ಮಾಡಲು ಹೇಳಿದ. 

ಉಪಾಹಾರ ಸೇವಿಸುತ್ತಿದ್ದಂತೆಯೇ ವೈದ್ಯನ ಚುರುಕು ಬುದ್ದಿ ಜಾಗೃತವಾಗಿತ್ತು. ದಂಪತಿಗಳ ನಡುವೆ ವಿರಸವಿರುವುದು ಪ್ರಸಾದನ ಗಮನಕ್ಕೆ ಬಂದಿತ್ತು. ರಾತ್ರಿಯೂಟದ ಸಮಯದಲ್ಲಿ ಮತ್ತೊಮ್ಮೆ ದಂಪತಿಗಳ ಮಾತು ಹಾಗೂ ಚರ್ಯೆಗಳನ್ನು ಗಮನಿಸಿದ ವೈದ್ಯನ ಸಂದೇಹ ಧೃಢವಾಯಿತು. ಊಟ ಮುಗಿಸಿದ ಬಳಿಕ ಚಾವಡಿಯಲ್ಲಿ ಕುಳಿತಾಗ ನೇರವಾಗಿ ಮಿತ್ರನ ಬಳಿ ನಿಮ್ಮಿಬ್ಬರ ವಿರಸಕ್ಕೆ ಕಾರಣವೇನೆಂದು ಕೇಳಿದ. ಬಾಡಿದ ಮುಖದೊಂದಿಗೆ ತನ್ನ ಸಮಸ್ಯೆಯ ಸಂಪೂರ್ಣ ವಿವರಗಳನ್ನು ಸ್ನೇಹಿತನಲ್ಲಿ ಹೇಳಿದ ಸುಧಾಕರ ನಿಟ್ಟುಸಿರು ಬಿಟ್ಟಿದ್ದನು. 

ಮಿತ್ರನನ್ನು ಪರೀಕ್ಷಿಸಿದ ವೈದ್ಯಮಿತ್ರನು ಗಹಗಹಿಸಿ ನಕ್ಕಿದ್ದನು. ಬಳಿಕ ಸುಧಾಕರನಿಗೆ ಯಾವುದೇ ಗುಪ್ತರೋಗ ಬಂದಿಲ್ಲವೆಂದು ಹೇಳಿ, ಒಂದುವಾರದಲ್ಲಿ ಪರಿಹಾರವಾಗುವ ಈ ಸಮಸ್ಯೆಗೆ ಸೂಕ್ತ ಔಷದಗಳನ್ನು ಸೂಚಿಸಿದ್ದನು. ತನಗೆ ಗುಪ್ತರೋಗವಿಲ್ಲವೆಂದು ತಿಳಿದಾಗ ಆನಂದವಾದರೂ, ನಿರ್ದೋಷಿ ಪತ್ನಿಯ ಶೀಲವನ್ನು ಶಂಕಿಸಿದ್ದಕ್ಕಾಗಿ ಸುಧಾಕರನಿಗೆ ಪಶ್ಚಾತ್ತಾಪವಾಗಿತ್ತು. ತಕ್ಷಣ ಪತ್ನಿಯನ್ನು ಕರೆದವನೇ ಸ್ನೇಹಿತನ ಇರುವಿಕೆಯನ್ನು ಮರೆತು, ಪತ್ನಿಯನ್ನು ತಬ್ಬಿ ಕಣ್ಣೀರುಗರೆದು ಕ್ಷಮೆ ಕೋರಿದನು. ನಕಲಿ ಲೈಂಗಿಕ ತಜ್ಞನ ತಪ್ಪಿನಿಂದ ಸಂಭವಿಸಲಿದ್ದ ಸಾಂಸಾರಿಕ ದುರಂತವೊಂದು ಡಾ. ಪ್ರಸಾದನ ಆಕಸ್ಮಿಕ ಆಗಮನದಿಂದ ತಪ್ಪಿತ್ತು. 

ಮಾಧವಿಗೆ ಮಗು ಹುಟ್ಟಿತೇ?

ಪದವೀಧರೆ ಮಾಧವಿಯು ತನ್ನ ತಂದೆಯ ಅಪೇಕ್ಷೆಯಂತೆ ಹಳ್ಳಿಯ ಕೃಷಿಕ ಭಾಸ್ಕರನನ್ನು ಮದುವೆಯಾಗಿದ್ದಳು. ಮದುವೆಯಾಗಿ ಮೂರು ವರ್ಷಗಳು ಕಳೆದರೂ ವಂಶೋದ್ಧಾರಕ ಹುಟ್ಟಿಲ್ಲವೆಂದು ಇವರಿಬ್ಬರ ಮಾತಾಪಿತರೂ ಕೊರಗುತ್ತಿದ್ದರು. 

ಸಮೀಪದ ಪೇಟೆಯಲ್ಲಿ ತಿಂಗಳಿಗೊಮ್ಮೆ ಭೇಟಿನೀಡುತ್ತಿದ್ದ ವೈದ್ಯರೊಬ್ಬರ ಚಿಕಿತ್ಸೆಯಿಂದ ಅನೇಕರಿಗೆ ಮಕ್ಕಳಾಗಿರುವುದೆಂದು ಭಾಸ್ಕರನ ತಂದೆ ಹೇಳಿದ್ದರು. ಹಾಗೂ ಅವರಲ್ಲಿ ಸಲಹೆ ಪಡೆಯಲು ಮಗ ಮತ್ತು ಸೊಸೆಯನ್ನು ಒತ್ತಾಯದಿಂದ ಕಳಿಸಿದ್ದರು. 

ದಂಪತಿಗಳನ್ನು ಪರೀಕ್ಷಿಸಿದ ಪಂಡಿತರ ಅಭಿಪ್ರಾಯದಂತೆ ಮಾಧವಿ ಗರ್ಭವತಿಯಾಗಲು ಆರು ತಿಂಗಳ ಔಷದಗಳೊಂದಿಗೆ ಒಂದಿಷ್ಟು ಪಥ್ಯಗಳನ್ನು ಪರಿಪಾಲಿಸಬೇಕಿತ್ತು. ಔಷದಗಳನ್ನು ಪಡೆದು ಊರಿಗೆ ಮರಳಿದ ಬಳಿಕ ದಿನನಿತ್ಯ ದೇವರಿಗೆ ಕೈಮುಗಿಯಲು ಮರೆತರೂ, ಮಾಧವಿಯು ಔಷದವನ್ನು ಸೇವಿಸಲು ಮರೆಯುತ್ತಲೇ ಇರಲಿಲ್ಲ. ಆದರೆ ಆರು ತಿಂಗಳುಗಳು ಕಳೆದರೂ ಆಕೆ ಗರ್ಭಧರಿಸಿರಲಿಲ್ಲ. ಇದೇ ಚಿಂತೆಯಿಂದ ಅನ್ನಾಹಾರಗಳನ್ನೇ ಸೇವಿಸುತ್ತಿರಲಿಲ್ಲ. 

ತನ್ಮಧ್ಯೆ ಆಕಸ್ಮಿಕವಾಗಿ ಹೊಟ್ಟೆನೋವಿನಿಂದ ಪೀಡಿತಳಾದ ಮಾಧವಿಗೆ ಸ್ಥಳೀಯ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ, ಪೇಟೆಯ ಆಸ್ಪತ್ರೆಗೆ ದಾಖಲಿಸಿ ಅಪೆಂಡಿಸೈಟಿಸ್ ಗಾಗಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಮಾಧವಿಯನ್ನು ಪರೀಕ್ಷಿಸುತ್ತಿದ್ದ ವೈದ್ಯರು ಆಕೆಗೆ ಮಕ್ಕಳೆಷ್ಟು ಎಂದು ಕೇಳಿದ್ದರು. ತಲೆತಗ್ಗಿಸಿದ್ದ ಮಾಧವಿಯ ಚರ್ಯೆಯಿಂದಲೇ ವಿಷಯವನ್ನರಿತ ವೈದ್ಯರು, ಸಂತತಿ ತಜ್ಞರಿಂದ ದಂಪತಿಗಳ ತಪಾಸಣೆಯನ್ನು ಮಾಡಿಸಿದರು. ಫಲಿತಾಂಶಗಳು ಬಂದಾಗ ಭಾಸ್ಕರನ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಬಹಳಷ್ಟು ಕಡಿಮೆಯಿದ್ದು, ಮಾಧವಿಯಲ್ಲಿ ಯಾವ ದೋಷವೂ ಇರಲಿಲ್ಲ. 

ಭಾಸ್ಕರನಿಗೆ ವೀರ್ಯಾಣುವರ್ಧಕ ಚಿಕಿತ್ಸೆ ನೀಡುವುದರೊಂದಿಗೆ ಮಾಧವಿಗೆ ಒಂದಿಷ್ಟು ಆರೋಗ್ಯವರ್ಧಕ ಟಾನಿಕ್ ನೀಡಲಾಯಿತು. ವರ್ಷ ಕಳೆಯುತ್ತಲೇ ಗರ್ಭಧರಿಸಿದ್ದ ಮಾಧವಿಯು ನವಮಾಸ ಕಳೆದು ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದ್ದಳು. 

ಲೈಂಗಿಕ ಸಮಸ್ಯಾ ಪೀಡಿತರಿಗೆ ಕಿವಿಮಾತು 

ನಕಲಿ ವೈದ್ಯರ ಅಥವಾ ಔಷದ ತಯಾರಿಕರ ಪೊಳ್ಳು ಘೋಷಣೆಗಳನ್ನು ನಂಬದಿರಿ. ವೈದ್ಯಕೀಯ ಪದವಿಗಳಿಲ್ಲದ ಸ್ವಯಂ ಘೋಷಿತ "ಲೈಂಗಿಕ ತಜ್ಞ" ರ ಚಿಕಿತ್ಸೆಯಿಂದ ಪುರುಷರ ಶಿಶ್ನದ ಗಾತ್ರ- ಆಕಾರಗಳನ್ನು ವೃದ್ಧಿಸುವುದು ಅಸಾಧ್ಯ. ಅಂತೆಯೇ ಲೈಂಗಿಕ ಸಾಮರ್ಥ್ಯವನ್ನು ಕೇವಲ ಔಷದಗಳ ಸೇವನೆಯಿಂದ ಹೆಚ್ಚಿಸುವುದು ಕೂಡ ಅಸಾಧ್ಯ. 

ವಯಾಗ್ರ ದಂತಹ ಮಾತ್ರೆಗಳ ಸೇವನೆಯಿಂದ ನಿಮಿರು ದೌರ್ಬಲ್ಯದ ಸಮಸ್ಯೆ ಪರಿಹಾರವಾಗುವುದಾದರೂ, ಲೈಂಗಿಕ ಸಾಮರ್ಥ್ಯದ ಹೆಚ್ಚಳ ಸಂಶಯಾಸ್ಪದ. ವಯಾಗ್ರ ದಂತಹ ಆಧುನಿಕ ಮತ್ತು ಸ್ವರ್ಣ- ರೌಪ್ಯ- ವಂಗ ಇತ್ಯಾದಿ ಭಸ್ಮಯುಕ್ತ ಆಯುರ್ವೇದ ಔಷದಗಳನ್ನು ತಜ್ಞ ವೈದ್ಯರ ಸಲಹೆ ಪಡೆಯದೇ ಸೇವಿಸುವುದು ಅಪಾಯಕಾರಿ. 

ನಿಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮಟ್ಟ, ಸಂಗಾತಿಯ ಸಹಕಾರ ಮತ್ತು ವಾತಾವರಣಗಳಿಗೆ ಅನುಗುಣವಾಗಿ ಲೈಂಗಿಕ ಸಾಮರ್ಥ್ಯದಲ್ಲಿ ವ್ಯತ್ಯಯವಾಗುವುದು. ಮದ್ಯಪಾನ,ಅತಿ ಧೂಮಪಾನ, ಮಾದಕ ದ್ರವ್ಯಗಳ ಸೇವನೆಯ ಚಟ,ದೀರ್ಘಕಾಲೀನ ಕಾಯಿಲೆಗಳು ನಿಮಿರು ದೌರ್ಬಲ್ಯ ಹಾಗೂ ನಪುಂಸಕತೆಗಳಿಗೆ ಕಾರಣವೆನಿಸಬಹುದು. 

ಸಂತಾನಹೀನತೆಯ ಸಮಸ್ಯೆಯನ್ನು ಪರಿಹರಿಸಲು ದಂಪತಿಗಳನ್ನು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸದೇ, ಯಾರಲ್ಲಿ ದೋಷವಿದೆಯೆಂದು ತಿಳಿದುಕೊಳ್ಳದೆ ನೀಡುವ ಚಿಕಿತ್ಸೆ ಫಲಕಾರಿಯಾಗದು. 

ನಿಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ನಿಮ್ಮ ಪರಿಚಿತ ಕುಟುಂಬ ವೈದ್ಯರಲ್ಲಿ ಮುಕ್ತವಾಗಿ ಚರ್ಚಿಸಿ. ಅವಶ್ಯಕತೆ ಇದ್ದಲ್ಲಿ ಅವರ ಸೂಚನೆಯಂತೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು, ನಿಮ್ಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ದೃಷ್ಟಿಯಿಂದ ಹಿತಕರವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೩-೦೩-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

ಗಮನಿಸಿ- ಈ ಲೇಖನವನ್ನು ಬರೆದಿದ್ದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಜಾಹೀರಾತುಗಳನ್ನು ಆಧರಿಸಿ ಲೇಖನವನ್ನು ಬರೆಯಲಾಗಿತ್ತು. 


1 comment: