Sunday, October 27, 2013

Madhumehada Praabalya: Mootrapindagala vaiphalya


                 ಮಧುಮೇಹದ ಪ್ರಾಬಲ್ಯ: ಮೂತ್ರಪಿಂಡಗಳ ವೈಫಲ್ಯ

     ಸುದೀರ್ಘಕಾಲದಿಂದ  ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೂ, ಈ ವ್ಯಾಧಿಯಿಂದ ಉದ್ಭವಿಸಬಲ್ಲ ಗಂಭೀರ- ಮಾರಕ ಸಮಸ್ಯೆಗಳ ಬಗ್ಗೆ ಅವಶ್ಯಕ ಮಾಹಿತಿ ತಿಳಿದಿರುವುದಿಲ್ಲ. ಸದ್ದು ಮಾಡದ ಹಂತಕನೆಂದು ಕರೆಯಲ್ಪಡುವ ಮೂತ್ರಪಿಂಡಗಳ ವೈಫಲ್ಯವು ಇಂತಹ ಸಮಸ್ಯೆಗಳಲ್ಲಿ ಒಂದಾಗಿದ್ದು, ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
------------------                  ---------------------------                                     ---------------------------                                           ------------------------              -------------------------

           ಪಾಶ್ಚಾತ್ಯರ ಆಧುನಿಕ ಜೀವನ ಶೈಲಿಗೆ ಮಾರುಹೋಗುತ್ತಿರುವ ಭಾರತೀಯರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿರುವುದು ನಿಮಗೂ ತಿಳಿದಿರಲೇಬೇಕು. ಇದಕ್ಕೆ ಅನುಗುಣವಾಗಿ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಮಧುಮೇಹ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿದಲ್ಲಿ, ಸದ್ಯೋಭವಿಷ್ಯದಲ್ಲಿ ಭಾರತವು "ವಿಶ್ವದ ಮಧುಮೇಹಿಗಳ ರಾಜಧಾನಿ" ಎನಿಸಲಿದೆ!. 

ಭಾರತೀಯರಲ್ಲಿ ಮಧುಮೇಹ ಪೀಡಿತರ ಸಂಖ್ಯೆ ಅತಿಯಾಗಲು ನಿರ್ದಿಷ್ಟ ಕಾರಣಗಳೂ ಇವೆ. ಆಧುನಿಕ- ಪಾಶ್ಚಾತ್ಯ ಜೀವನಶೈಲಿ, ಸಮೃದ್ಧ ಕ್ಯಾಲರಿಗಳಿರುವ ಆಹಾರ ಸೇವನೆ, ನಿಷ್ಕ್ರಿಯ ಜೀವನಶೈಲಿ, ಹೆಚ್ಚುತ್ತಿರುವ ಸುಖ ವೈಭೋಗಗಳು, ಅಧಿಕ ತೂಕ, ಅತಿಬೊಜ್ಜು, ಅತಿಯಾದ ಮಾನಸಿಕ ಒತ್ತಡ, ವೈವಿಧ್ಯಮಯ ದುಶ್ಚಟಗಳು ಮತ್ತು ಅನುವಂಶಿಕತೆಯೂ ಭಾರತೀಯರಲ್ಲಿ ಮಧುಮೇಹ ಆರಂಭವಾಗುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. 

ಮಧುಮೇಹದ ಪ್ರಭೇದಗಳು 

ಆಧುನಿಕ ವೈದ್ಯಪದ್ದತಿಯಲ್ಲಿ ಮಧುಮೇಹ ವ್ಯಾಧಿಯನ್ನು ಡಯಾಬೆಟೆಸ್ ಮೆಲೈಟಸ್ ಪ್ರಭೇದ-೧ ಮತ್ತು ಪ್ರಭೇದ- ೨ ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ. ಪ್ರಭೇದ-೧ ಸಾಮಾನ್ಯವಾಗಿ ಹಸುಗೂಸಿನಿಂದ ಹಿಡಿದು ಹದಿಹರೆಯದ ವ್ಯಕ್ತಿಗಳಲ್ಲಿ ಉದ್ಭವಿಸುತ್ತದೆ. ಈ ರೋಗಿಗಳ ಶರೀರದಲ್ಲಿನ ಮೇದೋಜೀರಕ ಗ್ರಂಥಿಗಳು ಅವಶ್ಯಕ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದೇ ಇರುವುದರಿಂದ, ಇವರು ಪ್ರತಿನಿತ್ಯ ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಳ್ಳಬೇಕಾಗುವುದು. ಇದೇ ಕಾರಣದಿಂದ ಪ್ರಭೇದ-೧ ನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕರೆಯುತ್ತಾರೆ. 

ವಯಸ್ಕರಲ್ಲಿ ಉದ್ಭವಿಸುವ ಮಧುಮೇಹ ಎಂದು ಕರೆಯಲ್ಪಡುವ ಪ್ರಭೇದ-೨ , ಹೆಚ್ಚಾಗಿ ೪೦ ವರ್ಷ ವಯಸ್ಸನ್ನು ಮೀರಿದ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ಪ್ರಭೇದವು, ೩೦ ಅಥವಾ ಇದಕ್ಕೂ ಕಡಿಮೆ ವಯಸ್ಸಿನವರಲ್ಲಿ ಪತ್ತೆಯಾಗುತ್ತಿದೆ. ಈ ರೋಗಿಗಳ ಶರೀರದಲ್ಲಿನ ಮೇದೋಜೀರಕ ಗ್ರಂಥಿಗಳು ಅವಶ್ಯಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಿದರೂ, ಇವರ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗುವುದು. ಆಹಾರ ಸೇವನೆಯಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಹಾಗೂ ಅಗತ್ಯವಿದ್ದಲ್ಲಿ  ಔಷದ ಸೇವನೆಗಳಿಂದ ಸಮರ್ಪಕವಾಗಿ ನಿಯಂತ್ರಿಸಬಹುದು. ಆದರೆ ಅಪರೂಪದಲ್ಲಿ ಕೆಲರೋಗಿಗಳು ಕೆಲವೊಂದು ಸಂದರ್ಭಗಳಲ್ಲಿ ಇನ್ಸುಲಿನ್ ಇಜೆಕ್ಷನ್ ಪಡೆದುಕೊಳ್ಳಬೇಕಾಗುವುದು. 

ಮೂತ್ರಪಿಂಡಗಳ ವೈಫಲ್ಯ 

ಸಾಮಾನ್ಯವಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ಒಳಗಾಗುವ ಮಧುಮೇಹಿಗಳು, ಸುದೀರ್ಘ ಕಾಲ ಈ ವ್ಯಾಧಿಯಿಂದ ಬಳಲುತ್ತಿರುತ್ತಾರೆ. ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ಪ್ರಭೇದ-೧ ವರ್ಗಕ್ಕೆ ಸೇರಿದ ಶೇ. ೩೦ ಮತ್ತು ಪ್ರಭೇದ-೨ ವರ್ಗಕ್ಕೆ ಸೇರಿದ ಶೇ. ೧೦ ರಿಂದ ೪೦ ರಷ್ಟು ರೋಗಿಗಳು ಅಂತಿಮವಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ತುತ್ತಾಗುತ್ತಾರೆ. ಭಾರತದ ಮಧುಮೇಹ ರೋಗಿಗಳಲ್ಲಿ ಶೇ. ೫ ಕ್ಕೂ ಹೆಚ್ಚು ಮಕ್ಕಳಿದ್ದಾರೆ ಎಂದಲ್ಲಿ ನಿಮಗೂ ಆಶ್ಚರ್ಯವೆನಿಸಬಹುದು. 

ಆದರೆ ಮಧುಮೇಹಿಗಳಿಗೆ ಮಾರಕ ಎನಿಸಬಹುದಾದ ಈ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ, ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ಇದನ್ನು ತಕ್ಕಮಟ್ಟಿಗೆ ತಡೆಗಟ್ಟಬಹುದಾಗಿದೆ. 

ಸಮಸ್ಯೆಯ ಮೂಲ 

ಭವ್ಯ ಭಾರತದ ಶೇ. ೧೦ ರಷ್ಟು ನಗರವಾಸಿಗಳಲ್ಲಿ ಕಂಡುಬರುತ್ತಿರುವ ಮಧುಮೇಹ ವ್ಯಾಧಿಯ ಬಗ್ಗೆ ಹಾಗೂ ಇದರ ದೀರ್ಘಕಾಲೀನ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ವಿದ್ಯಾವಂತರಿಗೆ ಅರಿವಿಲ್ಲದಿರುವುದು ಇದಕ್ಕೊಂದು ಪ್ರಮುಖ ಕಾರಣವೂ ಹೌದು. ಮಧುಮೇಹ ಪೀಡಿತರನ್ನು ಹೆಚ್ಚಾಗಿ ಕಾಡುವ ಹೃದಯ ಮತ್ತು ರಕ್ತನಾಳಗಳ ಕಾಯಿಲೆಯನ್ನು ತಡೆಗಟ್ಟುವತ್ತ ಹೆಚ್ಚಿನ ಗಮನ ಹರಿಸುವುದರಿಂದಾಗಿ, ಈ ರೋಗಿಗಳಿಗೆ ತಮ್ಮ ಮೂತ್ರಪಿಂಡಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗುತ್ತಿರುವುದೇ ತಿಳಿಯುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಪ್ರಾರಂಭಿಕ ಹಂತದಲ್ಲಿ ಸುಲಭವಾಗಿ ತಡೆಗಟ್ಟಬಹುದಾದ ಮೂತ್ರಪಿಂಡಗಳ ವೈಫಲ್ಯವು, ಸದ್ದು ಮಾಡದೆ ಅಂತಿಮ ಹಂತವನ್ನು ತಲುಪುತ್ತದೆ!. 

ವೈಫಲ್ಯದ ಲಕ್ಷಣಗಳು 

ಮೂತ್ರಪಿಂಡಗಳ ವೈಫಲ್ಯವು ಐದು ಹಂತಗಳನ್ನು ಒಳಗೊಂಡಿದ್ದು, "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯ"ದ ಸ್ಥಿತಿಯನ್ನು ತಲುಪಲು ಸುದೀರ್ಘಕಾಲ ತೆಗೆದುಕೊಳ್ಳುವುದು.ಪ್ರಾಥಮಿಕ ಹಂತದಲ್ಲಿ "ಮೈಕ್ರೋ ಅಲ್ಬುಮಿನ್ಯುರಿಯಾ" ಎಂದು ಕರೆಯಲ್ಪಡುವ, ಅತಿಸೂಕ್ಷ್ಮ ಪ್ರಮಾಣದಲ್ಲಿ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ಈ ವ್ಯಾಧಿಯ ಪ್ರಾರಂಭಿಕ ಲಕ್ಷಣವಾಗಿದೆ. ಈ ಹಂತದಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆಯಲ್ಲಿ ವಿಶೇಷ ನ್ಯೂನತೆಗಳು ಉದ್ಭವಿಸದ ಕಾರಣದಿಂದಾಗಿ, ಸೂಕ್ತ ಚಿಕಿತ್ಸೆಯನ್ನು ಪಡೆದಲ್ಲಿ ಶೇ. ೬೦ ರಿಂದ ೭೦ ರೋಗಿಗಳು ಗುಣಮುಖರಾಗುತ್ತಾರೆ. ಆದರೆ ಪ್ರಾರಂಭಿಕ ಹಂತದಲ್ಲಿರುವ ಈ ಸಮಸ್ಯೆಯನ್ನು ನಿಯಮಿತವಾಗಿ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳುವ ರೋಗಿಗಳಲ್ಲಿ ಮಾತ್ರ ಪತ್ತೆಹಚ್ಚಬಹುದಾಗಿದೆ. 

ಪ್ರಾರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚಲು ವಿಫಲರಾದಲ್ಲಿ ಅಥವಾ ಪತ್ತೆಹಚ್ಚಿದ ಬಳಿಕವೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದಲ್ಲಿ, ಕಾಲಕ್ರಮೇಣ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತಿರುವ ಆಲ್ಬ್ಯುಮಿನ್ ನ ಪ್ರಮಾಣವು ಹೆಚ್ಚುವುದರೊಂದಿಗೆ, ರೋಗಿಯ ಪಾದಗಳಲ್ಲಿ ಬಾವು ಕಾಣಿಸಿಕೊಳ್ಳುವುದು. ಶೇ. ೨೦ ರಿಂದ ೪೦ ರಷ್ಟು ರೋಗಿಗಳಲ್ಲಿ ಮಧುಮೇಹ ಆರಂಭವಾಗಿ ಸುಮಾರು ೧೫ ರಿಂದ ೨೦ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ವೃದ್ಧಿಸುತ್ತಾ ಹೋಗುವ ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಾಪಾಯ ತಪ್ಪಿದ್ದಲ್ಲ. ಈ ಹಂತದ ಬಳಿಕ ರೋಗಿಯ ಮೂತ್ರಪಿಂಡಗಳ ಕಾರ್ಯಕ್ಷಮತೆಯು ನಿಧಾನವಾಗಿ ನಶಿಸುತ್ತಾ ಹೋಗುವುದು. "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯ" ದ ಸ್ಥಿತಿಯನ್ನು ತಲುಪಲು ಹಲವಾರು ತಿಂಗಳುಗಳೇ ತಗಲುವುದಾದರೂ, ಈ ಅವಧಿಯು ರೋಗಿಯಿಂದ ರೋಗಿಗೆ ಬದಲಾಗಬಹುದು. 

ಸಾಮಾನ್ಯವಾಗಿ ಶೇ. ೩೩ ರಷ್ಟು ಮಧುಮೇಹ ರೋಗಿಗಳು ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಾರೆ. ಈ ರೋಗಿಗಳಲ್ಲಿ 'ಡಯಾಬೆಟಿಕ್ ನೆಫ್ರೋಪತಿ" ಅರ್ಥಾತ್, ಮಧುಮೇಹ ವ್ಯಾಧಿಯಿಂದ ಮೂತ್ರಪಿಂಡಗಳಿಗೆ ಹಾನಿಯಾಗಿರುವ ಸ್ಥಿತಿ ಉದ್ಭವಿಸಿದಲ್ಲಿ, ಇಂತಹ ಶೇ. ೭೦ ರಷ್ಟು ರೋಗಿಗಳಿಗೆ ಅಧಿಕ ರಕ್ತದೊತ್ತಡವೂ ಆರಂಭವಾಗುದು. 

ಮೂತ್ರಪಿಂಡಗಳ ವೈಫಲ್ಯ ತಲೆದೋರಿದಂತೆಯೇ ರೋಗಿಯ ರಕ್ತದಲ್ಲಿನ ಯೂರಿಯ ಮತ್ತು ಕ್ರಿಯಾಟಿನಿನ್ ಗಳ ಪ್ರಮಾಣಗಳಲ್ಲಿ ಹೆಚ್ಚಳ ಕಂಡುಬರುವುದು. ಜೊತೆಗೆ ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಅತಿ ಆಯಾಸ,ನಿಶ್ಶಕ್ತಿ,ಕಾಲಿನ ಮಾಂಸಪೇಶಿಗಳಲ್ಲಿ ಸೆಳೆತ, ತುರಿಕೆ ಮತ್ತು ರಕ್ತಹೀನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇದೇ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ಕುಸಿಯಲು ಆರಂಭವಾಗುವುದರಿಂದ, ರೋಗಿಯು ದಿನನಿತ್ಯ ಪಡೆದುಕೊಳ್ಳುವ ಇನ್ಸುಲಿನ್ ನ ಪ್ರಮಾಣವನ್ನು ಕಡಿಮೆ ಮಾಡಬೇಕಾಗುವುದು. ಮಧುಮೇಹ ರೋಗಿಗಳಲ್ಲಿ ಮೂತ್ರಪಿಂಡಗಳ ವೈಫಲ್ಯದ ಪರಿಣಾಮವಾಗಿ ಇಂತಹ ಸ್ಥಿತಿ ಉಂಟಾಗುವುದು. 

ಚಿಕಿತ್ಸೆ 

ಮೂತ್ರಪಿಂಡಗಳ ವೈಫಲ್ಯವನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಲು ರೋಗಿಯು ಸೇವಿಸುತ್ತಿರುವ ಇತರ ಔಷದಗಳನ್ನು ನಿಲ್ಲಿಸಿ, ಇನ್ಸುಲಿನ್ ಇಂಜೆಕ್ಷನ್ ಗಳನ್ನು ಪಡೆದುಕೊಳ್ಳಬೇಕಾಗುವುದು ಅನಿವಾರ್ಯವೂ ಹೌದು. ಏಕೆಂದರೆ ಮಾತ್ರೆಗಳ ಸೇವನೆಯಿಂದ ಮೂತ್ರಪಿಂಡಗಳ ವೈಫಲ್ಯವು ತೀವ್ರಗತಿಯಲ್ಲಿ ಉಲ್ಬಣಿಸುವುದರಿಂದ ಕೆಲವೊಮ್ಮೆ ರೋಗಿಗಳ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. ಆದರೂ ಕೆಲರೋಗಿಗಳಲ್ಲಿ ಕೇವಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಾದ ಪಥ್ಯವನ್ನು ಪರಿಪಾಲಿಸುವುದು ಕೂಡಾ ಅತ್ಯಂತ ಪರಿಣಾಮಕಾರಿ ಎನಿಸುವುದು. 

ಇನ್ಸುಲಿನ್ ಪಡೆದುಕೊಳ್ಳಲು ಆರಂಭಿಸಿದ ರೋಗಿಗಳು ತಮ್ಮ ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸಿ, ದೈನಂದಿನ ಇನ್ಸುಲಿನ್ ನ ಪ್ರಮಾಣವನ್ನು ನಿಗದಿಸುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಾಗುವುದು. ಏಕೆಂದರೆ ಮೂತ್ರಪಿಂಡಗಳ ವೈಫಲ್ಯದ ಸ್ಥಿತಿಯಲ್ಲಿ ಈ ಪರೀಕ್ಷೆಯು ಸಮರ್ಪಕವೆನಿಸಲಾರದು.

ಅಂತೆಯೇ ಮೂತ್ರಪಿಂಡಗಳ ಕಾರ್ಯಕ್ಷಮತೆಯು ಒಂದುಬಾರಿ ನಶಿಸಲು ಪ್ರಾರಂಭವಾದ ಬಳಿಕ "ಅಂತಿಮ ಹಂತದ ಮೂತ್ರಾಂಗಗಳ ವೈಫಲ್ಯವು ಅನಿವಾರಣೀಯ ಎನಿಸುವುದು. ಈ ಸ್ಥಿತಿಯಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆಯು "ಅಧೋಗತಿ" ಯನ್ನು ತಲುಪುವುದರಿಂದಾಗಿ, ಮೂತ್ರಪಿಂಡಗಳ ಕಾರ್ಯಗಳನ್ನು ಕೃತಕ ವಿಧಾನಗಳಿಂದ ನಡೆಸಬೇಕಾಗುವುದು. ಆದರೆ ಈ ವಿಧಾನಗಳು ಅಪೇಕ್ಷಿತ ಪರಿಣಾಮವನ್ನು ನೀಡಬೇಕಿದ್ದಲ್ಲಿ, ಮೂತ್ರಪಿಂಡಗಳ ಸ್ವಾಭಾವಿಕ ಕಾರ್ಯಕ್ಷಮತೆಯ ಮಟ್ಟವು ಶೇ. ೧೦ ರಿಂದ ೧೫ ರಷ್ಟು ಇರಬೇಕಾಗುವುದು. 

ಈ ಅಂತಿಮ ಹಂತದಲ್ಲಿ "ಡಯಾಲೈಸಿಸ್" ಅಥವಾ" ಬದಲಿ ಮೂತ್ರಪಿಂಡ ಜೋಡಣೆ "ಎನ್ನುವ ಎರಡೇ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಾಗುವುದು. ಮಧುಮೇಹ ರೋಗಿಗಳಿಗೆ ವರದಾನವೆನಿಸುವ ಎರಡನೆಯ ವಿಧಾನವು ನಿಶ್ಚಿತವಾಗಿಯೂ ಪ್ರಾಣರಕ್ಷಕವೆನಿಸುವುದು. 

ನಿವಾರಣೆ ಎಂತು

ಡಯಾಬೆಟಿಕ್ ನೆಫ್ರೋಪತಿ ಎನ್ನುವ ಗಂಭೀರ ಸಮಸ್ಯೆಯನ್ನು ತಡೆಗಟ್ಟಲು ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕ್ರಮಬದ್ಧ ಆಹಾರ ಸೇವನೆ, ವ್ಯಾಯಾಮ ಮತ್ತು ಔಷದ ಸೇವನೆಗಳಿಂದ ಅಪೇಕ್ಷಿತ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ಇದರೊಂದಿಗೆ ನಿಯಮಿತವಾಗಿ ತಮ್ಮ ಮೂತ್ರದ ತಪಾಸಣೆಯನ್ನು ಮಾಡಿಸುತ್ತಿದ್ದಲ್ಲಿ, ಮೈಕ್ರೋ ಅಲ್ಬ್ಯುಮಿನ್ಯೂರಿಯಾ ಪತ್ತೆಯಾದಲ್ಲಿ ವಿಳಂಬಿಸದೇ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. 

ಆರೋಗ್ಯವಂತರ ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ನ ಪ್ರಮಾಣವು ದಿನದಲ್ಲಿ ೨೦ ಮಿ. ಗ್ರಾಂ ಗಿಂತಲೂ ಕಡಿಮೆ ಇರುವುದು. ಆದರೆ ನಾಲ್ಕಾರು ಬಾರಿ ಪರೀಕ್ಷಿಸಿದಾಗಲೂ ದಿನದಲ್ಲಿ ೩೦ ರಿಂದ ೩೦೦ ಮಿ. ಗ್ರಾಂ. ಗಳಿಗಿಂತ ಅಧಿಕವಿದ್ದಲ್ಲಿ, ಈ ರೋಗಿಯಲ್ಲಿ ಮೈಕ್ರೋ ಅಲ್ಬ್ಯುಮಿನ್ಯೂರಿಯಾ ಇರುವುದರೊಂದಿಗೆ, ಆತನಲ್ಲಿ ಡಯಾಬೆಟೆಕ್ ನೆಫ್ರೋಪತಿಯ ಇರುವಿಕೆಯನ್ನು ಧೃಡೀಕರಿಸುತ್ತದೆ. 

ಮೂತ್ರದಲ್ಲಿ ವಿಸರ್ಜಿಸಲ್ಪಡುವ ಅಲ್ಬ್ಯುಮಿನ್ ನ ಪ್ರಮಾಣವು ಗಣನೀಯವಾಗಿ ಹೆಚ್ಚಿದಂತೆಯೇ, ಈ ರೋಗಿಗಳ ಅಧಿಕ ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಿಸಬೇಕಾಗುತ್ತದೆ. ಇಂತಹ ರೋಗಿಗಳಲ್ಲಿ ರಕ್ತದೊತ್ತಡದ ಅಪೇಕ್ಷಿತ ಮಟ್ಟವು, ಮಧುಮೇಹ ಅಥವಾ ಮೂತ್ರಪಿಂಡಗಳ ವೈಫಲ್ಯದಿಂದ ಬಳಲದಿರುವ ಇತರ ರೋಗಿಗಳಿಗಿಂತ ತುಸು ಕಡಿಮೆ ಇರಬೇಕಾಗುತ್ತದೆ. ಜೊತೆಗೆ ರಕ್ತದಲ್ಲಿ ಅತಿಯಾಗಿರಬಹುದಾದ ಕೊಲೆಸ್ಟೆರಾಲ್ ನ್ನು ಇಳಿಸುವ ಚಿಕಿತ್ಸೆ, ಅಧಿಕ ತೂಕ ಇದ್ದವರಿಗೆ ತೂಕವನ್ನು ಇಳಿಸುವ ಪ್ರಯತ್ನ, ಧೂಮಪಾನದ ಚಟವಿದ್ದಲ್ಲಿ ಇದನ್ನು ನಿಲ್ಲಿಸುವ ಹಾಗೂ ನೋವು ಮತ್ತು ಉರಿಯೂತ ನಿವಾರಕ ಔಷದಗಳನ್ನು ಸೇವಿಸದಿರುವುದು ಕೂಡಾ ಈ ಸಮಸ್ಯೆಯ ಪರಿಹಾರದಲ್ಲಿ ಮಹತ್ವಪೂರ್ಣವೆನಿಸುವುದು. 

ಇವೆಲ್ಲಕ್ಕೂ ಮಿಗಿಲಾಗಿ ಮಧುಮೇಹ ವ್ಯಾಧಿ ಪೀಡಿತರು ಪ್ರಾರಂಭಿಕ ಹಂತದಿಂದಲೇ ಕ್ರಮಬದ್ಧ ಹಾಗೂ ಕಟ್ಟುನಿಟ್ಟಾದ ಆಹಾರ, ವಿಹಾರ, ವ್ಯಾಯಾಮ ಮತ್ತು ಔಷದ ಸೇವನೆಗಳಿಂದ ತಮ್ಮ ಆರೋಗ್ಯದ ಮಟ್ಟವನ್ನು ಕಾಪಾಡಿಕೊಂಡಲ್ಲಿ, ಮೂತ್ರಾಂಗಗಳ ವೈಫಲ್ಯದಂತಹ ತೊಂದರೆಗಳಿಗೆ ಈಡಾಗುವ ಸಾಧ್ಯತೆಗಳಿರುವುದಿಲ್ಲ ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೦೭-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment