Wednesday, October 30, 2013

Know your medicines!


                        ಔಷದ ಸೇವನೆಯ ಔಚಿತ್ಯವನ್ನು ಅರಿತುಕೊಳ್ಳಿ!

    ಬಹುತೇಕ ರೋಗಿಗಳು ತಮ್ಮನ್ನು ಕಾಡುತ್ತಿರುವ ಆರೋಗ್ಯದ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಗುಣವಾಗಬೇಕೆಂದು ಅಪೇಕ್ಷಿಸುವುದು ಸ್ವಾಭಾವಿಕ. ಆದರೆ ಇಂತಹ ಪವಾಡ ಸದೃಶ ಪರಿಣಾಮಗಳನ್ನು ಅಪೇಕ್ಷಿಸುವ ರೋಗಿಗಳು ತಮ್ಮ ಸಮಸ್ಯೆ ಕಿಂಚಿತ್ ಪರಿಹಾರವಾದೊಡನೆ, ವೈದ್ಯರ ಸಲಹೆ- ಸೂಚನೆಗಳನ್ನು ಉಪೇಕ್ಷಿಸುವುದು ಕೂಡಾ ಅಷ್ಟೇ ಸ್ವಾಭಾವಿಕ!. 
---------------                          ------------------                                 --------------                             ---------------------

      ಒಂದೆರಡು ವರ್ಷಗಳಿಂದ ಮಧುಮೇಹಪೀಡಿತರಾಗಿದ್ದ ಸುಂದರರಾಯರು, ವೈದ್ಯರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದರೊಂದಿಗೆ ಪ್ರತಿನಿತ್ಯ ಕ್ರಮಬದ್ಧವಾಗಿ ಔಷದವನ್ನು ಸೇವಿಸುವ ಮೂಲಕ ತಮ್ಮ ಕಾಯಿಲೆಯನ್ನು ಹತೋಟಿಯಲ್ಲಿ ಇರಿಸಿಕೊಂಡಿದ್ದರು. 

ಅದೊಂದು ಮುಂಜಾನೆ ಎಂದಿನಂತೆ ಸಪ್ಪೆ ಚಹಾ ಕುಡಿದು ಕ್ಷೌರ ಮಾಡಿಸಿಕೊಳ್ಳಲು ಸೆಲೂನ್ ಗೆ ಹೋಗಿದ್ದ ರಾಯರು, ತಮ್ಮ ಸರದಿಗಾಗಿ ಸುಮಾರು ಒಂದೂವರೆ ತಾಸು ಕಾಯಬೇಕಾಗಿ ಬಂದಿತ್ತು. ಅಂತಿಮವಾಗಿ ಕ್ಷೌರಕ್ಕೆ ಕುಳಿತ ರಾಯರಿಗೆ ಆಕಸ್ಮಿಕವಾಗಿ ವಿಪರೀತ ಆಯಾಸದೊಂದಿಗೆ ಕಣ್ಣು ಕತ್ತಲಾವರಿಸಿದಂತಾಗಿ, ಶರೀರವಿಡೀ ಬೆವರಲಾರಂಭಿಸಿತ್ತು. ಮರುಕ್ಷಣದಲ್ಲಿ ಪ್ರಜ್ಞಾಹೀನರಾಗಿದ್ದ ರಾಯರು, ಕ್ಷೌರಿಕನ ಪ್ರಥಮ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಸಾವರಿಸಿಕೊಂಡು ಮನೆಗೆ ಮರಳಿ, ನಿತ್ಯವಿಧಿಗಳನ್ನು ಮುಗಿಸಿ ಉಪಾಹಾರವನ್ನು ಸೇವಿಸಿದ ನಂತರ ಸಮೀಪದ ವೈದ್ಯರಲ್ಲಿ ಹೋಗಿದ್ದರು.  

ರಾಯರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ವೈದ್ಯರ ಮುಖದಲ್ಲಿ ಮಂದಹಾಸ ಮೂಡಿತ್ತು. ಏಕೆಂದರೆ ಚಿಕಿತ್ಸೆ ನೀಡಿದ್ದ ತಜ್ಞವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಲಿಸುತ್ತಿದ್ದ ರಾಯರು, ಪ್ರಮುಖ ವಿಚಾರವೊಂದನ್ನು ಮರೆತುಬಿಟ್ಟಿದ್ದರು. 

ಮಧುಮೇಹ ರೋಗಿಗಳು ಬೆಳಗಿನ ಉಪಾಹಾರ ಸೇವನೆಗೆ ೩೦ ನಿಮಿಷ ಮೊದಲು ಮಾತ್ರೆಯನ್ನು ಸೇವಿಸುವ ಅಥವಾ ೧೫ ನಿಮಿಷ ಮೊದಲು ಇನ್ಸುಲಿನ್ ಇಂಜೆಕ್ಷನ್ ಪಡೆಯಬೇಕಾಗುವುದು. ಅರ್ಥಾತ್, ಮಾತ್ರೆ ಸೇವಿಸಿದ ಅರ್ಧ ಗಂಟೆಯ ಬಳಿಕ ಅಥವಾ ಇಜೆಕ್ಷನ್ ಪಡೆದ ೧೫ ನಿಮಿಷಗಳ ಬಳಿಕ, ಇವರು ಕಡ್ಡಾಯವಾಗಿ ಆಹಾರವನ್ನು ಸೇವಿಸಲೇಬೇಕು. ಕಾರಣಾಂತರಗಳಿಂದ ಆಹಾರ ಸೇವನೆಗೆ ವಿಳಂಬವಾದಲ್ಲಿ, ಇವರ ರಕ್ತದಲ್ಲಿನ ಸಕ್ಕರೆಯ ಅಂಶ (ಔಷದ  ಸೇವನೆಯ ಪರಿಣಾಮದಿಂದಾಗಿ) ಕಡಿಮೆಯಾಗುವುದರಿಂದ ಸುಂದರ ರಾಯರಿಗೆ ಕಾಣಿಸಿಕೊಂಡ ತೊಂದರೆಗಳು ಹಠಾತ್ತನೆ ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲ, ಕೆಲ ಸಂದರ್ಭಗಳಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸುತ್ತವೆ. 

ಈ ಪ್ರಮುಖ ವಿಚಾರವನ್ನು ಗಮನಿಸಿರದ ರಾಯರು, ಬರಿಹೊಟ್ಟೆಯಲ್ಲಿ ಬೆಳಗಿನ ಚಹಾ ಸೇವಿಸುವಾಗ ಮಧುಮೇಹ ನಿಯಂತ್ರಕ ಮಾತ್ರೆಯನ್ನು ಸೇವಿಸಿದ್ದರೂ, ಅರ್ಧ ಗಂಟೆಯ ಬಳಿಕ ಉಪಾಹಾರ ಸೇವಿಸದಿದ್ದುದೇ ಅವರ ಸಮಸ್ಯೆಗೆ ಕಾರಣವೆನಿಸಿತ್ತು!. 

ಅಜ್ಞಾನ- ತಪ್ಪುಕಲ್ಪನೆಗಳು 

ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ವೈದ್ಯರು ಬಳಸುವ ವೈವಿಧ್ಯಮಯ ಔಷದಗಳ ಬಗ್ಗೆ ಬಹುತೇಕ ರೋಗಿಗಳಿಗೆ ಸೂಕ್ತ ಮಾಹಿತಿಯೇ ತಿಳಿದಿರುವುದಿಲ್ಲ. ಇದರೊಂದಿಗೆ ಅನೇಕ ಭಾರತೀಯರ ಮನದಲ್ಲಿ ಮನೆಮಾಡಿಕೊಂಡಿರುವ ಮೂಢನಂಬಿಕೆ ಮತ್ತು ಅಜ್ಞಾನಗಳಿಂದಾಗಿ, ಬಹುತೇಕ ರೋಗಿಗಳು ಔಷದ ಸೇವನೆಯ ವಿಚಾರದಲ್ಲಿ ಸಾಕಷ್ಟು ನಿರ್ಲಕ್ಷ್ಯವನ್ನು ತೋರುತ್ತಾರೆ. 

ಅದೇ ರೀತಿಯಲ್ಲಿ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ,ನಿಗದಿತ ಪ್ರಮಾಣದಲ್ಲಿ, ನಿಗದಿತ ಅವಧಿಗೆ ಸೇವಿಸಲೇಬೇಕು ಎನ್ನುವ ಸಲಹೆಯನ್ನು ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಕಾಯಿಲೆ ಉಲ್ಬಣಿಸಿದಲ್ಲಿ ಅತೀವ ಸಂಕಷ್ಟಗಳಿಗೂ ಈಡಾಗುತ್ತಾರೆ!. 

ಈ ರೀತಿಯಲ್ಲಿ ತಮಗೆ ಇಷ್ಟಬಂದಂತೆ ಔಷದಗಳನ್ನು ಸೇವಿಸುವ ಹಾಗೂ ಚಿಕಿತ್ಸೆಯನ್ನು ನಿಲ್ಲಿಸುವುದರಿಂದ, ಮುಂದೊಂದು ದಿನ ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಲು ವೈದ್ಯರು ನೀಡಿದ ಔಷದಗಳಿಂದ ಅಪೇಕ್ಷಿತ ಪರಿಹಾರ ದೊರೆಯದೆ ಇರುವುದರೊಂದಿಗೆ, ಈ ಔಷದಗಳು ನಿಷ್ಪ್ರಯೋಜಕವೆನಿಸುತ್ತವೆ. ಇದರಿಂದಾಗಿ ರೋಗಿಗಳಿಗೆ ವೈದ್ಯರ ಹಾಗೂ ಔಷದಗಳ ಮೇಲಿರುವ ನಂಬಿಕೆಗಳೂ ಮಾಯವಾಗುವುದರಿಂದ ಅನೇಕ ಸಂದೇಹಗಳಿಗೆ ಆಸ್ಪದವನ್ನು ನೀಡುತ್ತದೆ. 

ರೋಗಿಗಳು ವೈದ್ಯರ ಸಲಹೆ ಸೂಚನೆಗಳನ್ನು ಪರಿಪಾಲಿಸದೇ ಇರಲು ಇನ್ನೂ ಅನೇಕ ಕಾರಣಗಳಿವೆ. ಇವುಗಳಲ್ಲಿ ದಿನದಲ್ಲಿ ಇಂತಿಷ್ಟೇ ಬಾರಿ ಸೇವಿಸಬೇಕಾಗಿರುವ ಹಲವಾರು ವಿಧದ ಔಷದಗಳ ಸಂಖ್ಯೆ ಅತಿಯಾಗಿರುವುದರಿಂದ, ಇವುಗಳ ಸೇವನೆಯ ಬಗ್ಗೆ ರೋಗಿಗಳ ಮನದಲ್ಲಿ ಉಂಟಾಗುವ ಗೊಂದಲ, ದುಬಾರಿ ಬೆಲೆಯ ಔಷದಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು,ಹಿಂದೆ ಔಷದ ಸೇವಿಸಿದಾಗ ಉದ್ಭವಿಸಿರಬಹುದಾದ ಅಲರ್ಜಿ ಪ್ರತಿಕ್ರಿಯೆಗಳು ಅಥವಾ ಅಡ್ಡ ಪರಿಣಾಮಗಳ ಭಯ, ವೈದ್ಯರ ಅಥವಾ ಔಷದಗಳ ಮೇಲೆ ಅವಿಶ್ವಾಸ, ಔಷದ ಸೇವಿಸಲೂ ಬಿಡುವಿಲ್ಲದಂತಹ ಜೀವನಶೈಲಿ ಮತ್ತು ರೋಗಿಯ ವ್ಯಾಧಿ ಮತ್ತು ಚಿಕಿತ್ಸೆಗಳ ಬಗ್ಗೆ ಇವರ ಬಂಧು ಮಿತ್ರರು ನೀಡುವ ಉಚಿತ- ಉದಾರ ಸಲಹೆ ಹಾಗೂ ತಪ್ಪು ಮಾಹಿತಿಗಳು ಪ್ರಮುಖವಾಗಿವೆ. 

ಇದಲ್ಲದೇ ವೈದ್ಯರ ಚಿಕಿತ್ಸೆಯಿಂದ ತಮ್ಮ ಕಾಯಿಲೆ ಕ್ಷಣ ಮಾತ್ರದಲ್ಲಿ ಗುಣವಾಗಬೇಕೆಂದು ಅಪೇಕ್ಷಿಸುವ ರೋಗಿಗಳು ಕಿಂಚಿತ್ ಪರಿಹಾರ ದೊರೆತೊಡನೆ ಚಿಕಿತ್ಸೆಯನ್ನು ನಿಲ್ಲಿಸಿವುದು, ಔಷದ ಸೇವನೆಯೇ ಅಸಹನೀಯವೆನಿಸುವುದು, ಅತಿಯಾದ ಮತ್ತು ಪ್ರಬಲ ಔಷದಗಳ ಸೇವನೆಯಿಂದ ಶರೀರಕ್ಕೆ "ಉಷ್ಣ" ವಾಗುವುದೆಂದು ಭ್ರಮಿಸುವುದು ಮತ್ತು ಔಷದ ಸೇವಿಸಲು ಆಗದಂತಹ ತೊಂದರೆಗಳು (ಉದಾ- ವಾಂತಿ) ಆಕಸ್ಮಿಕವಾಗಿ ಉದ್ಭವಿಸುವುದೇ ಮುಂತಾದ ಕಾರಣಗಳಿಂದಾಗಿ ಅನೇಕ ರೋಗಿಗಳು ಔಷದಗಳನ್ನು ಕ್ರಮಬದ್ಧವಾಗಿ ಸೇವಿಸದೇ ಇರಲು ಕಾರಣವೆನಿಸುತ್ತವೆ. 

ಇವೆಲ್ಲಕ್ಕೂ ಮಿಗಿಲಾಗಿ ವೈದ್ಯರು ಸೂಚಿಸಿದ ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ತಾವಾಗಿ ಬದಲಾಯಿಸುವ ರೋಗಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ ಇದರಿಂದಾಗಿ ಮತ್ತೆ ಉಲ್ಬಣಿಸುವ ವ್ಯಾಧಿಯನ್ನು ಮಗುದೊಮ್ಮೆ ಹತೋಟಿಗೆ ತರಲು ಸಾಕಷ್ಟು ಸಮಯಾವಕಾಶದೊಂದಿಗೆ ಧಾರಾಳ ಹಣವೂ ಖರ್ಚಾಗುವುದು. ಜೊತೆಗೆ ರೋಗಿಯು ಮತ್ತಷ್ಟು ದಿನ ವ್ಯಾಧಿಯ ಬಾಧೆಗಳನ್ನು ಅನುಭವಿಸಬೇಕಾಗುವುದು. 

ಸಾಮಾನ್ಯವಾಗಿ ಅಲ್ಪಾವಧಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳು ಕ್ರಮಬದ್ಧವಾಗಿ ಔಷದಗಳನ್ನು ಸೇವಿಸುತ್ತಾರೆ. ಆದರೆ ದೀರ್ಘಾವಧಿ ಅಥವಾ ಜೀವನ ಪರ್ಯಂತ ಔಷದ ಸೇವಿಸಬೇಕಾದ ಪರಿಸ್ಥಿತಿಯಲ್ಲಿ ಅನೇಕ ರೋಗಿಗಳು ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ಶಮನಗೊಳಿಸಲು ಬಳಸುವ ಔಷದಗಳ ಸೇವನೆಯಲ್ಲಿ ಒಂದಿಷ್ಟು ವ್ಯತ್ಯಯವಾದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ತಲೆದೋರಬಹುದು. ಆದರೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಸೇವಿಸಲೇ ಬೇಕಾದ ಔಷದಗಳ ಸೇವನೆಯಲ್ಲಿ ಕಿಂಚಿತ್ ವ್ಯತ್ಯಯವಾದರೂ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೆಲವೊಂದು ಸಂದರ್ಭಗಳಲ್ಲಿ "ಸೋಂಕಿನಿಂದ" ಉದ್ಭವಿಸುವ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ನಿಗದಿತ ಅವಧಿಗೆ "ಜೀವ ನಿರೋಧಕ" ಔಷದಗಳನ್ನು ಸೇವಿಸದೆ ಇರುವುದರಿಂದಾಗಿ ಇವರ ಕಾಯಿಲೆಯೂ ವಾಸಿಯಾಗುವುದಿಲ್ಲ. ತತ್ಪರಿಣಾಮವಾಗಿ ಇಂತಹ ರೋಗಿಗಳು ತಮ್ಮ ಸಂಪರ್ಕವಿರುವ ಮನೆಮಂದಿ ಹಾಗೂ ಸಹೋದ್ಯೋಗಿಗಳಿಗೆ ತಮ್ಮ ಸೋಂಕನ್ನು ಸುಲಭದಲ್ಲೇ ಹರಡುತ್ತಾರೆ. ಈ ಸರಪಣಿಯು ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಮುಂದೆ ಸಂಭವಿಸಬಹುದಾದ ಅನಾಹುತವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ನಿಜ ಹೇಳಬೇಕಿದ್ದಲ್ಲಿ ಭಾರತದಲ್ಲಿ ಕ್ಷಯ ಮತ್ತು ಕುಷ್ಠರೋಗಗಳು ನಿರಂತರವಾಗಿ ಹರಡುತ್ತಲೇ ಇರಲು ಇದುವೇ ಪ್ರಮುಖ ಕಾರಣ ಎಂದಲ್ಲಿ ನೀವೂ ನಂಬಲಾರಿರಿ. 

ನಿಮ್ಮ ಶರೀರವನ್ನು ಪ್ರವೇಶಿಸಿ ತನ್ನ ಸಂಖ್ಯೆಯನ್ನು ಇಮ್ಮಡಿಗೊಳಿಸುತ್ತಾ ಕಾಯಿಲೆಗಳನ್ನು ಉಂಟುಮಾಡಬಲ್ಲ ರೋಗಾಣುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಅತ್ಯವಷ್ಯಕೂ ಹೌದು. ಇದಕ್ಕಾಗಿ ಬಳಸುವ ಔಷದಗಳನ್ನು ನಿಗದಿತ ಅವಧಿಗೆ ಸೇವಿಸ್ದಿದ್ದಲ್ಲಿ, ಅಳಿದುಳಿದ ರೋಗಾಣುಗಳು ಮತ್ತೆ ವೃದ್ಧಿಸಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಜೊತೆಗೆ ಈ ರೋಗಾಣುಗಳು ನೀವು ಅರ್ಧಂಬರ್ಧ ಸೇವಿಸಿ ನಿಲ್ಲಿಸಿದ್ದ ಜೀವ ನಿರೋಧಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನೂ ಗಳಿಸಿಕೊಳ್ಳುತ್ತವೆ. ಇದೇ ಕಾರಣದಿಂದಾಗಿ ಮುಂದೆ ಎಂದಾದರೂ ನಿಮಗೆ ಇದೇ ಕಾಯಿಲೆ ಬಾಧಿಸಿದಲ್ಲಿ, ನೀವು ಇದೇ ಔಷದಗಳನ್ನು ನಿಗದಿತ ಅವಧಿಗೆ ಸೇವಿಸಿದರೂ, ವ್ಯಾಧಿಯ ಬಾಧೆ ಕಿಂಚಿತ್ ಕೂಡಾ ಕಡಿಮೆಯಾಗುವ ಸಾಧ್ಯತೆಗಳೇ ಇರುವುದಿಲ್ಲ. 

ಅದೇ ರೀತಿಯಲ್ಲಿ ಔಷದ ಸೇವನೆಯಿಂದ ಶರೀರಕ್ಕೆ "ಉಷ್ಣ" ವಾಗುವುದೆಂದು ನಂಬುವ ಕೆಲ ರೋಗಿಗಳು, ತಮ್ಮ ವೈದ್ಯರು ಸೂಚಿಸಿದ ಔಷದಗಳ ಪ್ರಮಾಣವನ್ನು ತಾವಾಗಿ ಕಡಿಮೆ ಮಾಡಿಕೊಳ್ಳುವುದರಿಂದಲೂ ಮೇಲೆ ವಿವರಿಸಿದ ಸಮಸ್ಯೆಗಳು ತಲೆದೋರುವುದುಂಟು. 

ಜೀವನ ಪರ್ಯಂತ ಸೇವಿಸಬೇಕಾದ ಔಷದಗಳ ಪ್ರಮಾಣವನ್ನು ವೈದ್ಯರ ಸಲಹೆ ಪಡೆಯದೇ ಕಡಿಮೆ ಮಾಡುವುದು ಪ್ರಾಣಾಪಾಯಕ್ಕೆ ಕಾರಣವೆನಿಸಬಹುದು. ಈ ರೀತಿಯ ಪ್ರಯೋಗಗಳನ್ನು ಕೈಗೊಂಡು ಅದೃಷ್ಟವಶಾತ್ ತುರ್ತು ಚಿಕಿತ್ಸೆಯಿಂದ ಜೀವವನ್ನು ಉಳಿಸಿಕೊಂಡರೂ, ಕೆಲ ಗಂಭೀರ ಸಮಸ್ಯೆಗಳು ಶಾಶ್ವತವಾಗಿ ಉಳಿಯಬಹುದು. 

ವೈದ್ಯರಿಗೆ ನೀಡುವ ಶುಲ್ಕವನ್ನು ಉಳಿಸುವ ಸಲುವಾಗಿ ಕೆಲ ರೋಗಿಗಳು ಹಿಂದೊಮ್ಮೆ ವೈದ್ಯರು ಸೂಚಿಸಿದ್ದ ಔಷದಗಳ ಚೀಟಿಯನ್ನು ಮತ್ತೊಮ್ಮೆ ಬಳಸುವುದು ಅಪರೂಪವೇನಲ್ಲ. ಆದರೆ ಇದೀಗ ತನ್ನನ್ನು ಬಾಧಿಸುತ್ತಿರುವ ವ್ಯಾಧಿಯು ಹಿಂದೆ ಬಾಧಿಸಿದ ವ್ಯಾಧಿಯೇ ಎಂದು ಖಚಿತಪಡಿಸಿಕೊಳ್ಳುವುದು ರೋಗಿಯ ಪಾಲಿಗೆ ಅಸಾಧ್ಯವೆನಿಸುವುದು. ಕೇವಲ ವ್ಯಾಧಿ ಲಕ್ಷಣಗಳ ಆಧಾರದ ಮೇಲೆ ಅಂದು ಬಾಧಿಸಿದ್ದ ವ್ಯಾಧಿ ಇಂದು ಪುನರಪಿ ಬಂದೆರಗಿದೆ ಎಂದು ನಂಬಿ, ಅದೇ ಔಷದಗಳನ್ನು ಪ್ರಯೋಗಿಸುವ ರೋಗಿಗಳು, ಬಹುತೇಕ ಸಂದರ್ಭಗಳಲ್ಲಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. 

ಸಾಮಾನ್ಯವಾಗಿ ವರ್ಷದಲ್ಲಿ ನಾಲ್ಕಾರು ಬಾರಿ ತಲೆದೋರುವ ಶೀತ, ನೆಗಡಿ, ಫ್ಲೂ ಜ್ವರ, ವಾಂತಿ, ಭೇದಿಗಳೇ ಮುಂತಾದ ಸಾಂಕ್ರಾಮಿಕ ರೋಗಗಳು ಉದ್ಭವಿಸಿದಾಗ ಬಹುಸದಸ್ಯರಿರುವ ಕುಟುಂಬಗಳಲ್ಲಿ ಹಲವಾರು ಮಂದಿ ಈ ಪೀದಿಗಳಿಗೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಆರ್ಥಿಕ ಅಥವಾ ಇತರ ಸಮಸ್ಯೆಗಳಿಂದಾಗಿ ಇವರಲ್ಲಿ ಒಂದಿಬ್ಬರು ಸದಸ್ಯರಿಗಾಗಿ ತಂದಿರುವ ಔಷದಗಳನ್ನೇ ಮನೆಮಂದಿಯೆಲ್ಲರೂ ದೇವರ ಪ್ರಸಾದದಂತೆ ಹಂಚಿ ಸೇವಿಸುತ್ತಾರೆ!. ಇಂತಹ ಚಿಕಿತ್ಸೆಯಿಂದಾಗಿ ಈ ಕುಟುಂಬದ ಯಾವುದೇ ಸದಸ್ಯನಿಗೂ ಸಮರ್ಪಕ ಚಿಕಿತ್ಸೆ ದೊರೆಯದೇ, ಇವರೆಲ್ಲರ ಕಾಯಿಲೆಗಳು ಉಲ್ಬಣಿಸುವುದರೊಂದಿಗೆ ಇನ್ನಷ್ಟು ಜನರಿಗೆ ಹರಡಲು ಕಾರಣವೆನಿಸುತ್ತದೆ. 

ಕೊನೆಯ ಮಾತು 

ಹೊಸ ವೈದ್ಯರಿಗಿಂತ ಹಳೆಯ ರೋಗಿಯೇ ಮಿಗಿಲು ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಆದರೆ ಇದನ್ನು ಯಥಾವತ್ತಾಗಿ ಆಚರಣೆಗೆ ತರುವ ಅನೇಕ ರೋಗಿಗಳು, ತಮ್ಮ ಬಂಧು ಮಿತ್ರರಿಗೆ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಯಾವುದೆಂದು ಅರಿತೊಡನೆ, ತಾವು ಇದೀಗ ಸೇವಿಸುತ್ತಿರುವ ಔಷದಗಳನ್ನು ಒಂದುಬಾರಿ ಪ್ರಯತ್ನಿಸುವಂತೆ ಒತ್ತಾಯಿಸುತ್ತಾರೆ. ತಮ್ಮ ಕಾಯಿಲೆ, ವಯಸ್ಸು, ಶರೀರದ ತೂಕ ಹಾಗೂ ಇದರೊಂದಿಗೆ ಇರಬಹುದಾದ ಅನ್ಯ ಕಾಯಿಲೆಗಳನ್ನು ಗಮನದಲ್ಲಿರಿಸಿ ವೈದ್ಯರು ತಮಗೆ ನೀಡಿದ ಔಷದವು ಮತ್ತೊಬ್ಬರಿಗೆ ಅಪೇಕ್ಷಿತ ಪರಿಣಾಮಕ್ಕೆ ಬದಲಾಗಿ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಪ್ರಯೋಗಗಳನ್ನು ಪ್ರಯತ್ನಿಸುವ ರೋಗಿಗಳಿಗೆ ಅಯಾಚಿತ ಸಮಸ್ಯೆಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೪-೦೮-೨೦೦೬ ರ ಸಂಚಿಕೆಯ "ಬಳಕೆದಾರ ಸಮಸ್ಯೆ- ಸಮಾಧಾನ' ಅಂಕಣದಲ್ಲಿ ಪ್ರಕಟಿತ ಲೇಖನ  



No comments:

Post a Comment