Thursday, October 31, 2013

Poison In our Food



                       ಕೀಟನಾಶಕಗಳ ಕಾಟ- ಜನರಿಗೆ ಪ್ರಾಣಸಂಕಟ!

ಸಹಸ್ರಾರು ವರ್ಷಗಳ ಹಿಂದೆ "ವಿಷಕನ್ಯೆ" ಯರನ್ನು ಸೃಷ್ಟಿಸಿ, ಶತ್ರು ರಾಜರನ್ನು ಸುಲಭದಲ್ಲೇ ಸಂಹರಿಸುತ್ತಿದ್ದ ರಾಜ- ಮಹಾರಾಜರುಗಳ ಕಥೆಯನ್ನು ನೀವೂ ಓದಿರಬಹುದು. ಆದರೆ ಇಂದು ನಾವು ಉಸಿರಾಡುವ ಗಾಳಿ, ಕುಡಿಯುವ ನೀರು,  ಸೇವಿಸುವ ಆಹಾರ ಇತ್ಯಾದಿಗಳಲ್ಲಿ ಸಮೃದ್ಧವಾಗಿರುವ ವೈವಿಧ್ಯಮಯ ವಿಷಕಾರಕ ರಾಸಾಯನಿಕಗಳಿಂದಾಗಿ, ನಾವಿಂದು "ವಿಷ ಮಾನವ" ರಾಗುತ್ತಿರುವುದು ನಿಮಗೂ ತಿಳಿದಿರಲಾರದು. 
--------------------               ------------------------                 -------------------                  -------------------               --------------

  ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ಮಾರಾಟ ಮಾಡುತ್ತಿರುವ ಲಘು ಪಾನೀಯ (ಕೋಲಾ) ಗಳಲ್ಲಿ ಕೀಟನಾಶಕಗಳ ಅಂಶಗಳು ಪತ್ತೆಯಾಗಿದ್ದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದೊಡನೆ ಉದ್ಭವಿಸಿದ್ದ "ಕೋಲಾಹಲ" ವನ್ನು ನೀವೂ ಮರೆತಿರಲಾರಿರಿ. ಆದರೆ ಜನಸಾಮಾನ್ಯರು ಅಪರೂಪದಲ್ಲಿ ಕುಡಿಯುವ ಲಘು ಪಾನೀಯಗಳಿಗಿಂತ, ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬೆರೆತಿರುವ ಕೀಟನಾಶಕಗಳು ಅತ್ಯಂತ ಅಪಾಯಕಾರಿ ಎಂದು ತಿಳಿದಿರಲಿ. 

ರೋಗಕಾರಕ ರಾಸಾಯನಿಕಗಳು 

ನಾವು ದಿನನಿತ್ಯ ಕುಡಿಯುವ ನೀರು ಹಾಗೂ ಸೇವಿಸುವ ಆಹಾರಗಳಲ್ಲಿ ಯಥೇಚ್ಛವಾಗಿರುವ ಕೀಟನಾಶಕಗಳ ಅಂಶಗಳು, ನಿಸ್ಸಂದೇಹವಾಗಿ ನಮ್ಮ ಆರೋಗ್ಯದ ಹಾಗೂ ಜೀವನದ ಗುಣಮಟ್ಟಗಳನ್ನು ನಿಧಾನವಾಗಿ ನಾಶಮಾಡುತ್ತಿರುವುದು ಸುಳ್ಳೇನಲ್ಲ. ಜನ್ಮದತ್ತ ಕಾಯಿಲೆಗಳಿಂದ ಆರಂಭಿಸಿ, ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಅನೇಕ ಗಂಭೀರ- ಮಾರಕ ವ್ಯಾಧಿಗಳು ಇಂದು ಯೌವ್ವನದಲ್ಲೇ ವ್ಯಾಪಕವಾಗಿ ಕಂಡುಬರುತ್ತಿರಲು, ಆಧುನಿಕ ಜೀವನಶೈಲಿ, ತೀವ್ರ ಮಾನಸಿಕ ಒತ್ತಡ, ಅನುವಂಶಿಕತೆ ಹಾಗೂ ದುಶ್ಚಟಗಳೊಂದಿಗೆ ನಾವಿಂದು ಸೇವಿಸುತ್ತಿರುವ ಅಪಾಯಕಾರಿ ಕೀಟನಾಶಕಗಳೂ ಕಾರಣವಾಗಿವೆ. 

ಭಾರತೀಯರು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬೆರೆತಿರಬಹುದಾದ ಕೀಟನಾಶಕಗಳನ್ನು ಪತ್ತೆಹಚ್ಚುವ ಪ್ರಯತ್ನವೊಂದು ೧೯೯೩ ರಲ್ಲೇ ನಡೆದಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ಭಾರತದಾದ್ಯಂತ ನಡೆಸಿದ್ದ ಈ ಅಧ್ಯಯನದಲ್ಲಿ ಶೇ. ೩೭ ರಷ್ಟು ಆಹಾರಪದಾರ್ಥಗಳಲ್ಲಿ ಡಿ ಡಿ ಟಿ ಹಾಗೂ ಎಚ್ ಸಿ ಎಚ್ ಎನ್ನುವ ಕೀಟನಾಶಕಗಳು ನಿಗದಿತ ಮಟ್ಟಕ್ಕಿಂತ ಸಾಕಷ್ಟು ಅಧಿಕವಾಗಿದ್ದವು!. 

ಮೂರು ವರ್ಷಗಳ ಬಳಿಕ ಕೇಂದ್ರ ಸರಕಾರವು ಹೊಸದೊಂದು ಅಧ್ಯಯನವನ್ನು ನಡೆಸಲು ಆದೇಶಿಸಿತ್ತು. ನೂತನ ಅಧ್ಯಯನದಲ್ಲಿ ಪರೀಕ್ಷಿಸಲಾಗಿದ್ದ ಶೇ. ೫೧ ರಷ್ಟು ಆಹಾರಪದಾರ್ಥಗಳಲ್ಲಿ (ದವಸ ಧಾನ್ಯಗಳು, ತರಕಾರಿಗಳು, ಹಣ್ಣುಹಂಪಲುಗಳು ,ಹಾಲು ಇತ್ಯಾದಿ)ವಿವಿಧ ರೀತಿಯ ಕೀಟನಾಶಕಗಳ ಅಂಶಗಳು ಪತ್ತೆಯಾಗಿದ್ದವು. ಜೊತೆಗೆ ಇವುಗಳಲ್ಲಿನ ಶೇ. ರಷ್ಟು ವಸ್ತುಗಳಲ್ಲಿ ಕೀಟನಾಶಕಗಳ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿದ್ದವು!. 

ವಿಶೇಷವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಇಂತಹ ಮತ್ತೊಂದು ಅಧ್ಯಯನವನ್ನು ಕೇಂದ್ರ ಸರಕಾರವು ನಡೆಸಿಲ್ಲ. ಇಷ್ಟು ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಯು ಬಹುತೇಕ ರಾಷ್ಟ್ರಗಳಲ್ಲಿ ನಡೆಸುತ್ತಿರುವ ಇದೇ ರೀತಿಯ ಅಧ್ಯಯನವನ್ನು ಭಾರತದಲ್ಲೂ ನಡೆಸುವಂತೆ ಅಧಿಕೃತ ಆಹ್ವಾನವನ್ನೂ ನೀಡಿಲ್ಲ. ಇದೇ ಕಾರಣದಿಂದಾಗಿ ನಮ್ಮ ದೇಶದಲ್ಲಿ ಬಳಸಲ್ಪಡುತ್ತಿರುವ ಕೀಟನಾಶಕ ರಾಸಾಯನಿಕಗಳ ಪ್ರಮಾಣ- ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಮಾಹಿತಿಯು ಜನಸಾಮಾನ್ಯರಿಗೆ ಲಭಿಸುತ್ತಿಲ್ಲ. 

ನಮ್ಮ ದೇಶದಲ್ಲಿ ಸುಮಾರು ೧೯೭ ವಿಧದ ಕೀಟನಾಶಕಗಳು ಲಭ್ಯವಿದ್ದು, ಇವುಗಳಲ್ಲಿ ಕನಿಷ್ಠ ೩೦ ವಿಧದ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸುತ್ತಿರುವ ಕೃಷಿಕರಿಗೆ, ಇವುಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಸೂಕ್ತ ಮಾಹಿತಿ ತಿಳಿದಿಲ್ಲ. ಅಂತೆಯೇ ಇವರಿಗೆ ಈ ಬಗ್ಗೆ ಯಾವುದೇ ತರಬೇತಿಯನ್ನು ನೀಡುವ ವ್ಯವಸ್ಥೆಯೂ ಇಲ್ಲ. ಇದಲ್ಲದೆ ಇವುಗಳ ತಯಾರಕರು ತಮ್ಮ ಉತ್ಪನ್ನಗಳೊಂದಿಗೆ ಒದಗಿಸುವ ಸೂಚನೆಗಳನ್ನು ಕೃಷಿಕರು ಗಮನಿಸುವುದಿಲ್ಲ. ಇದೇ ಕಾರಣದಿಂದಾಗಿ ಅಧಿಕತಮ ಕೃಷಿಕರು ತಮಗೆ ತೋಚಿದಷ್ಟು ಪ್ರಮಾಣದ ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ, ತಮ್ಮ ಬೆಳೆಗಳಿಗೆ ಸಿಂಪಡಿಸುವುದು ವಾಡಿಕೆಯಾಗಿದೆ. 

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಆಹಾರಪದಾರ್ಥಗಳಲ್ಲಿ ಎಚ್. ಸಿ. ಎಚ್, ಡಿ. ಡಿ, ಟಿ, ಎಂಡೋಸಲ್ಫಾನ್, ಮೆಲಾಥಿಯಾನ್, ಲಿಂಡೆನ್, ಕಾರ್ಬಾಮೆಟ್ಸ್ ಹಾಗೂ ಆರ್ಗನೋ ಫೊಸ್ಫೊರಸ್ ಗಳಲ್ಲದೆ, ಆರ್ಸೆನಿಕ್,ಕಾಪರ್, ಲೆಡ್, ಝಿಂಕ್,ಕ್ಯಾಡ್ಮಿಯಂ ಮುಂತಾದ ವಿಷಕಾರಕ ಲೋಹಗಳ ಅಂಶಗಳೂ ಪತ್ತೆಯಾಗಿವೆ. 

ಬಾಧಕಗಳು 

ಈ ರೀತಿಯ ಅಪಾಯಕಾರಿ ರಾಸಾಯನಿಕಗಳು ಬೆರೆತಿರುವ ಆಹಾರಪದಾರ್ಥಗಳನ್ನು ದಿನನಿತ್ಯ ಸೇವಿಸುವುದರಿಂದ ಮನುಷ್ಯನ ಸ್ವಾಭಾವಿಕ ರೋಗನಿರೋಧಕ ಮತ್ತು ಸಂತಾನೋತ್ಪತ್ತಿ ಶಕ್ತಿಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.ಇದಲ್ಲದೇ ಚರ್ಮ,ರಕ್ತ, ರಕ್ತನಾಳಗಳ ಕಾಯಿಲೆಗಳು, ಅಪಸ್ಮಾರ,ಮೆದುಳು- ಸ್ತನಗಳ ಕ್ಯಾನ್ಸರ್,ಮೂತ್ರಪಿಂಡಗಳ ಕಾಯಿಲೆಗಳು, ಜಠರದ ಹುಣ್ಣುಗಳು, ಶಾರೀರಿಕ ಚಲನ ವಲನಗಳ ತೊಂದರೆಗಳು ಮತ್ತು ತಾಯಿಯ ಗರ್ಭದಲ್ಲಿನ ಭ್ರೂಣದ ಮೇಲೂ ತೀವ್ರವಾದ ದುಷ್ಪರಿಣಾಮಗಳನ್ನು ಬೀರುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಇವುಗಳು ನಮ್ಮ ವಂಶವಾಹಿನಿಗಳನ್ನು ಬಾಧಿಸಿದಲ್ಲಿ ಉದ್ಭವಿಸಬಹುದಾದ ಗಂಭೀರ ಸಮಸ್ಯೆಗಳು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತವೆ. 

ಇಂತಹ ಅಪಾಯಕಾರಿ ಕೀಟನಾಶಕಗಳನ್ನು ಯಾವುದೇ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಪರಿಪಾಲಿಸದೇ ಸಿಂಪಡಿಸುವ ರೈತರಿಗೂ, ಇದರ ದುಷ್ಪರಿಣಾಮಗಳಿಂದ ರಕ್ಷಣೆ ದೊರೆಯುವುದಿಲ್ಲ. ಇಂತಹ ಕಾರ್ಯದಲ್ಲಿ ತೊಡಗಿರುವ ರೈತರಲ್ಲಿ ಸಾಮಾನ್ಯವಾಗಿ ತಲೆನೋವು, ತಲೆ ತಿರುಗುವಿಕೆ ಹಾಗೂ ಕಣ್ಣಿನ ದೃಷ್ಟಿ ಮಸುಕಾಗುವುದೇ ಮುಂತಾದ ಸಣ್ಣಪುಟ್ಟ ಸಮಸ್ಯೆಗಳು ಪ್ರಾರಂಭಿಕ ಹಂತದಲ್ಲಿ ಕಂಡುಬರುತ್ತವೆ. ಆದರೆ ಸುದೀರ್ಘಕಾಲ ಇಂತಹ ರಾಸಾಯನಿಕಗಳ ಸಂಪರ್ಕದಿಂದ ಮೇಲೆ ವಿವರಿಸಿದ ಗಂಭೀರ ಸಮಸ್ಯೆಗಳು ಇವರನ್ನು ತಪ್ಪದೆ ಬಾಧಿಸುತ್ತವೆ. ಹೆಂಗಸರು ಮತ್ತು ಮಕ್ಕಳ ಶರೀರಗಳು ಕೀಟನಾಶಕಗಳನ್ನು ನಿಭಾಯಿಸಲು ಅಸಮರ್ಥವಾಗಿರುವುದರಿಂದ, ಇವರಲ್ಲಿ ಇಂತಹ ದುಷ್ಪರಿಣಾಮಗಳು ಇನ್ನಷ್ಟು ತೀವ್ರವಾಗಿರುತ್ತವೆ. 

ಇವೆಲ್ಲವುಗಳ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೂ, ಇಂತಹ ಅಪಾಯಕಾರಿ ರಾಸಾಯನಿಕಗಳ ಬಳಕೆಯು ಇಂದಿಗೂ ಅನಿಯಂತ್ರಿತವಾಗಿ ಸಾಗುತ್ತಿದೆ. ಏಕೆಂದರೆ ಇವುಗಳನ್ನು ನಿಷೇಧಿಸುವ ಅಧಿಕಾರವಿರುವ ಸರಕಾರವೇ ಈ ವಿಚಾರದಲ್ಲಿ ಸುಮ್ಮನಿದೆ. ಜೊತೆಗೆ ಇವುಗಳ ದುಷ್ಪರಿಣಾಮಗಳು ಕ್ಷಿಪ್ರಗತಿಯಲ್ಲಿ ಉದ್ಭವಿಸದೇ, ಸುಮಾರು ೫ ರಿಂದ ೧೫ ವರ್ಷಗಳ ಬಳಿಕವೇ ಕಂಡುಬರುವುದರಿಂದಾಗಿ, ಆಹಾರಪದಾರ್ಥಗಳನ್ನು ಬೆಳೆಯುವ ಕೃಷಿಕರು ಮತ್ತು ಇವುಗಳನ್ನು ಬಳಸುವ ಜನಸಾಮಾನ್ಯರು ಕೀಟನಾಶಕಗಳ ಕಾಟಗಳ ಬಗ್ಗೆ ಕಿಂಚಿತ್ ಕೂಡಾ ಚಿಂತಿತರಾಗಿಲ್ಲ!. 

ಪರಿಹಾರವೇನು?

ನೀವು ದಿನನಿತ್ಯ ಸೇವಿಸುವ ದವಸ ಧಾನ್ಯಗಳು,ತರಕಾರಿ- ಸೊಪ್ಪುಗಳು,ಹಣ್ಣು ಹಂಪಲುಗಳನ್ನು ಬಳಸುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತನ್ಮಧ್ಯೆ ಎರಡರಿಂದ ಮೂರುಬಾರಿ ಇವುಗಳನ್ನು ತೊಳೆದು ನೀರನ್ನು ಬದಲಾಯಿಸಿ. ಈ ರೀತಿಯಲ್ಲಿ ಸ್ವಚ್ಚಗೊಳಿಸಿದ ದವಸ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ. ಅದೇ ರೀತಿಯಲ್ಲಿ ಬೇಯಿಸಬೇಕಾದ ದವಸ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಪ್ರೆಷರ್ ಕುಕರ್ ನಲ್ಲಿ ೧೫೦ ರಿಂದ ೧೯೦ ಡಿಗ್ರಿ ಉಷ್ಣತೆಯಲ್ಲಿ ಬೇಯಿಸಿ ಬಳಸಿರಿ. ಇದರಿಂದಾಗಿ ಇವುಗಳಲ್ಲಿನ ಪೌಷ್ಠಿಕ ಅಂಶಗಳು ಆಂಶಿಕವಾಗಿ ನಶಿಸಿದರೂ, ಇದರಿಂದಾಗಿ ಅಪಾಯಕಾರಿ ರಾಸಾಯನಿಕಗಳು ನಾಶವಾಗುತ್ತವೆ. 

ಅತ್ಯಧಿಕ ಪ್ರಮಾಣದ ಕೀಟನಾಶಕಗಳನ್ನು ಬಳಸಿ ಬೆಳೆಯುವ ದ್ರಾಕ್ಷಿ, ಸೇಬು, ಮಾವುಗಳೇ ಮುಂತಾದ ಹಣ್ಣುಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಮೇಲಿನಂತೆಯೇ ನೀರಿನಲ್ಲಿ ಮುಳುಗಿಸಿಟ್ಟು ಶುಚಿಗೊಲಿಸಿದ ಬಳಿಕ, ಇವುಗಳನ್ನು ಕತ್ತರಿಸಿದ ಹೋಳುಗಳನ್ನು ಮತ್ತೆ ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ಮುಳುಗಿಸಿಡಿ. ಸೊಪ್ಪುಗಳ ಎಲೆಗಳನ್ನು ತೆಗೆದು ಮತ್ತೊಮ್ಮೆ ಸ್ವಚ್ಚಗೊಲಿಸಿದ ಬಳಿಕ ಕೊಂಚ ಉಪ್ಪು ಬೆರೆಸಿದ ನೀರಿನಲ್ಲಿ ಒಂದಿಷ್ಟು ಹೊತ್ತು ನೆನೆಸಿಟ್ಟ ಬಳಿಕವೇ ಉಪಯೋಗಿಸಿ. 

ಅಂತಿಮವಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವ ಅಥವಾ ಬಗೆಹರಿಸುವಲ್ಲಿ ಸಾವಯವ ಗೊಬ್ಬರ, ಕಹಿಬೇವಿನ ಹಿಂಡಿ- ಎಣ್ಣೆ, ಹೊಗೆಸೊಪ್ಪಿನ ನೀರು ಹಾಗೂ ಗೋಮೂತ್ರಗಳಂತಹ ನೈಸರ್ಗಿಕ ಹಾಗೂ ನಿರಪಾಯಕಾರಿ ಉತ್ಪನ್ನಗಳನ್ನು ಬಳಸಿ ಬೆಳೆಸಿದ ಆಹಾರಪದಾರ್ಥಗಳನ್ನು ಸೇವಿಸುವುದು ನಮ್ಮ ಆರೋಗ್ಯದ ಮತ್ತು ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಉತ್ತಮವೆನಿಸೀತು. 

ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಸಾವಯವ ವಿಧಾನದಿಂದ ಬೆಳೆಸಿದ ಕೃಷಿ ಉತ್ಪನ್ನಗಳು ಸಾಕಷ್ಟು ದುಬಾರಿ ಎಂದು ದೂರುವ ಗ್ರಾಹಕರು, ಕೀಟನಾಶಕಗಳ ದುಷ್ಪರಿಣಾಮಗಳೊಂದಿಗೆ ಇದನ್ನು ತುಲನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಇವುಗಳು ಅಗ್ಗ ಮತ್ತು ಆರೋಗ್ಯಕರ ಎನಿಸುವುದರಲ್ಲಿ ಸಂದೇಹವಿಲ್ಲ!. 

ಇಲ್ಲಿದೆ ಜೀವಂತ ಸಾಕ್ಷಿ 

ನಮ್ಮ ನೆರೆಯ ಕೇರಳ ಮತ್ತು ನಮ್ಮ ದಕ್ಷಿಣ ಕನ್ನಡ ಮತ್ತು ಇತರ ಕೆಲ ಜಿಲ್ಲೆಗಳಲ್ಲಿನ ಸಹಸ್ರಾರು ಎಕರೆ ಗೇರು ತೋಟಗಳಿಗೆ ಕೀಟಗಳ ಬಾಧೆ ತಟ್ಟದಂತೆ, ಸುಮಾರು ಮೂರು ದಶಕಗಳ ಕಾಲ "ಎಂಡೋ ಸಲ್ಫಾನ್" ಕೀಟನಾಶಕವನ್ನು ವೈಮಾನಿಕವಾಗಿ ಸಿಂಪಡಿಸಲಾಗಿತ್ತು. ಹತ್ತಾರು ವರ್ಷಗಳ ಹಿಂದೆ ಈ ಪರಿಸರದ ನಿವಾಸಿಗಳಿಗೆ ಕೆಲ ವಿಧದ ಕ್ಯಾನ್ಸರ್, ಚರ್ಮರೋಗಗಳು,  ಕಾಲುಗಳ ಮಾಂಸ ಪೇಶಿ- ನರಗಳು ಸೆಟೆದುಕೊಂಡು ನಡೆದಾಡಲು ಆಗದಂತಹ ತೊಂದರೆಗಳು ಬಾಧಿಸಲಾರಂಭಿಸಿದ್ದವು. ನವಜಾತ ಶಿಶುಗಳಲ್ಲಿ ಜನ್ಮದತ್ತ ಅಂಗವೈಕಲ್ಯ, ಕುಬ್ಜತೆ, ಶಾರೀರಿಕ- ಮಾನಸಿಕ ಬೆಳವಣಿಗೆಗಳು ಕುಂಠಿತವಾಗುವಂತಹ ಗಂಭೀರ ಆರೋಗ್ಯದ ಸಮಸ್ಯೆಗಳು ಉದ್ಭವಿಸಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ಅಸಂಖ್ಯ ಅಮಾಯಕರು ಇಂತಹ ವಿಚಿತ್ರ ಕಾಯಿಲೆಗಳಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಹಸ್ರಾರು ಜನರು ವೈವಿಧ್ಯಮಯ ವ್ಯಾಧಿಗಳಿಂದ ಬಳಲುತ್ತಾ ಜೀವಂತ ಶವಗಳಂತೆ ಇಂದಿಗೂ ಬದುಕಿದ್ದಾರೆ. 

ತಮ್ಮ ಸಮಸ್ಯೆಗಳಿಗೆ ಎಂಡೋ ಸಲ್ಫಾನ್ ಕಾರನವೆನ್ದರಿತ ಸ್ಥಳೀಯರ ತೀವ್ರ ಪ್ರತಿಭಟನೆಯಿಂದಾಗಿ, ಸರಕಾರವು ಇದನ್ನು ಅಧ್ಯಯನ ಮಾಡಲು ಹಲವಾರು ತಜ್ಞರ ಸಮಿತಿಗಳನ್ನು ನೇಮಿಸಿತ್ತು. ತಜ್ಞರ ತಂಡವು ಈ ಪರಿಸರದ ಮಣ್ಣು,ನೀರು, ತರಕಾರಿಗಳು ಹಾಗೂ ದನಗಳ ಹಾಲು ಮತ್ತು ಜನರ ರಕ್ತದಲ್ಲೂ ಎಂಡೋ ಸಲ್ಫಾನ್ ಕೀಟನಾಶಕದ ಅಂಶವಿರುವುದನ್ನು ಪತ್ತೆಹಚ್ಚಿತ್ತು!. ಅಂತೆಯೇ ಈ ಮಾರಕ ಕೀಟನಾಶಕದ ಸಿಮ್ಪದಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಆಗ್ರಹಿಸಿತ್ತು. ತತ್ಪರಿಣಾಮವಾಗಿ ಕೇರಳ ರಾಜ್ಯ ಸರಕಾರವು ಈ ಕೀಟನಾಶಕದ ಸಿಂಪಡಿಕೆಯನ್ನು ನಿಷೇಧಿಸಿತ್ತು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೩-೧೧-೨೦೦೬ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ   


No comments:

Post a Comment