Friday, November 1, 2013

Abdominal pain


                                    ಉದರಶೂಲೆಯನ್ನು ಉಪೇಕ್ಷಿಸದಿರಿ!

  ಜನಸಾಮಾನ್ಯರನ್ನು ಅಪರೂಪದಲ್ಲಿ ಕಾಡಬಹುದಾದ ಉದರ ಸಂಬಂಧಿ ತೊಂದರೆಗಳಿಗೆ ಅಧಿಕತಮ ಜನರು "ಸ್ವಯಂ ಚಿಕಿತ್ಸೆ" ಪ್ರಯೋಗಿಸುವುದು ಸ್ವಾಭಾವಿಕ. ಆದರೆ ಇಂತಹ ತೊಂದರೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದಲ್ಲಿ ಅಥವಾ ಉಲ್ಬಣಿಸುತ್ತಿದ್ದಲ್ಲಿ, ಇದನ್ನು ಉಪೇಕ್ಷಿಸದೆ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ. 
----------------                            -----------------------------                             -----------------------                          ---------------------------                      --------------------

    ಉದರಶೂಲೆಯ ಬಾಧೆಯನ್ನು ತಮ್ಮ ಜೀವಿತಾವಧಿಯಲ್ಲಿ ಒಂದುಬಾರಿಯಾದರೂ ಅನುಭವಿಸದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅಜೀರ್ಣದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಅನೇಕ ವ್ಯಾಧಿಗಳಲ್ಲಿ ಪ್ರಧಾನವಾಗಿ ಕಂಡುಬರಬಹುದಾದ ಉದರಶೂಲೆಯನ್ನು ಉಪೇಕ್ಷಿಸುವುದು, ಗಂಭೀರ ಸಮಸ್ಯೆಗಳಿಗೂ ಕಾರಣವೆನಿಸಬಹುದು. ಇದೇ ಕಾರಣದಿಂದಾಗಿ "ಹೊಟ್ಟೆ ನೋವಿನ ಗುಟ್ಟೇನು" ಎನ್ನುವುದನ್ನೇ ಅರಿಯದ ಅಮಾಯಕರು, ಅನೇಕ ಸಂದರ್ಭಗಳಲ್ಲಿ ಸ್ವಯಂ ಚಿಕಿತ್ಸೆಯ ಪ್ರಯೋಗಕ್ಕೆ ಬಲಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಪ್ರಾರಂಭಿಕ ಹಂತದಲ್ಲೇ ಅರ್ಹ ವೈದ್ಯರ ಸಲಹೆ- ಚಿಕಿತ್ಸೆಗಳಿಂದ ಈ ಸಮಸ್ಯೆಯನ್ನು ಪರಿಹಾರಿಸಿಕೊಳ್ಳುವುದು ಅಸಾಧ್ಯವೇನಲ್ಲ. 

ತಿಂಡಿಪೋತ ತಿರುಮಲ 

ಬಂಧು ಮಿತ್ರರಿಂದ ತಿಂಡಿಪೋತ ಎಂದೇ ಕರೆಯಲ್ಪಡುತ್ತಿದ್ದ ತಿರುಮಲನು ೩೫ ರ ಹರೆಯದಲ್ಲಿ ೧೨೦ ಕಿಲೋ ತೂಗುತ್ತಿದ್ದನು!. ಸದಾಶಿವನಿಗೆ ಅದೇ ಧ್ಯಾನ ಎನ್ನುವಂತೆ, ತಿರುಮಲನಿಗೆ ತಿಂಡಿ ತೀರ್ಥಗಳದ್ದೇ ಧ್ಯಾನ ಎಂದು ಸ್ನೇಹಿತರು ತಮಾಷೆ ಮಾಡುವಷ್ಟು ಮಟ್ಟಿಗೆ ಆತನ ಹೊತ್ತೆಬಾಕತನ ಖ್ಯಾತಿವೆತ್ತಿತ್ತು. ನಿಜ ಹೇಳಬೇಕಿದ್ದಲ್ಲಿ ನಿದ್ರಿಸಿದಾಗ ಮಾತ್ರ ಆತನ ಜಠರಾಗ್ನಿಗೆ ವಿಶ್ರಾಂತಿ ದೊರೆಯುತ್ತಿತ್ತು!. 

ದಿನದಲ್ಲಿ ಹಲವಾರು ಬಾರಿ ಹೊಟ್ಟೆತುಂಬಾ ತಿಂದುಣ್ಣುತ್ತಿದ್ದ ತಿರುಮಲನಿಗೆ  ಇತ್ತೀಚಿನ ಕೆಲದಿನಗಳಿಂದ ಅಪರೂಪದಲ್ಲೊಮ್ಮೆ ಹೊಟ್ಟೆನೋವು ಬಾಧಿಸುತ್ತಿತ್ತು. ಅತಿಆಹಾರ ಸೇವನೆಯಿಂದ ಉದ್ಭವಿಸಿರಬಹುದಾದ ಅಜೀರ್ಣವೇ ಈ ತೊಂದರೆಗೆ ಕಾರಣವೆಂದು ನಂಬಿದ್ದ ತಿರುಮಲನು, ನೋವು ಕಾಣಿಸಿಕೊಂಡಾಗಲೆಲ್ಲಾ ಒಂದು ಸೋಡಾ ಕುಡಿದು ಡರ್ರನೇ ತೇಗಿ ಸಮಾಧಾನಪಟ್ಟುಕೊಳ್ಳುತ್ತಿದ್ದನು. 

ಊರಿನ ಜಾತ್ರೆಯಂದು ಹೆಂಡತಿ ಮಾಡಿದ್ದ ಹಬ್ಬದಡುಗೆಯನ್ನು ಪೊಗದಸ್ತಾಗಿ ಉಂಡು, ಸಂಜೆ ಜಾತ್ರೆಯ ಗದ್ದೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡುತ್ತಾ ಕಂಡದ್ದೆಲ್ಲವನ್ನೂ ಕೊಂಡು ಕಬಳಿಸಿದ ತಿರುಮಲನು ಮಧ್ಯರಾತ್ರಿಯಲ್ಲಿ ಮನೆಗೆ ಮರಳಿದ್ದನು. ಬೆಳಗಿನ ಜಾವ ನಾಲ್ಕು ಗಂಟೆಗೆ ಎಚ್ಚರಗೊಂಡಿದ್ದ ಆತನಿಗೆ ಹೊಟ್ಟೆಯುಬ್ಬರ ಮತ್ತು ವಾಕರಿಕೆಯೊಂದಿಗೆ ತೀವ್ರ ಉದರಶೂಲೆಯೂ ಆರಂಭವಾಗಿತ್ತು. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಹೊಟ್ಟೆನೋವನ್ನು ತಾಳದೇ ನರಳುತ್ತಿದ್ದ ಪತಿಯನ್ನು ಕಂಡು ಲಕ್ಷ್ಮಿಗೆ ದಿಗಿಲಾಗಿತ್ತು. ತಕ್ಷಣ ನೆರೆಮನೆಯವರ ವಾಹನದಲ್ಲಿ ಪತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆಯನ್ನು ಕೊಡಿಸಿದ ಬಳಿಕ ತಿರುಮಲನ ಉದರಶೂಲೆ ಕೊಂಚ ಶಮನಗೊಂಡಿತ್ತು. 

ಮರುದಿನ ತಜ್ಞವೈದ್ಯರು  ಆತನನ್ನು ಪರೀಕ್ಷಿಸಿದ ಬಳಿಕ ಉದರದ ಸೋನೋಗ್ರಾಮ್ ಮಾಡಿಸಿದಾಗ, ತಿರುಮಲನ ಪಿತ್ತಕೋಶದಲ್ಲಿ ಅನೇಕ ಕಲ್ಲುಗಳು ಪತ್ತೆಯಾಗಿದ್ದವು. ಸಮಸ್ಯೆಯ ತೀವ್ರತೆಯನ್ನು ಅರಿತ ಶಸ್ತ್ರಚಿಕಿತ್ಸಾ ತಜ್ಞರ ಸಲಹೆಯಂತೆ, ಶಸ್ತ್ರಚಿಕಿತ್ಸೆಯನ್ನು ನಡೆಸಿ ಆತನ ಪಿತ್ತಕೋಶವನ್ನು ತೆಗೆಯಲಾಯಿತು. 

ಒಂದು ವಾರದ ಬಳಿಕ ಗುಣಮುಖನಾಗಿ ಮನೆಗೆ ಮರಳಿದ ತಿರುಮಲನು ವೈದ್ಯರ ಸಲಹೆಯಂತೆ ಮಿತಾಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮಗಳನ್ನು ಪರಿಪಾಲಿಸಿದ ಪರಿಣಾಮವಾಗಿ, ಎರಡೇ ವರ್ಷಗಳಲ್ಲಿ ಆತನ ತೂಕವು ೮೫ ಕಿಲೋಗಳಿಗೆ ಇಳಿದಿತ್ತು. ಇದರೊಂದಿಗೆ ಆತನನ್ನು ಆಗಾಗ ಬಾಧಿಸುತ್ತಿದ್ದ ಅಜೀರ್ಣದ ತೊಂದರೆಯೂ ಮಾಯವಾಗಿತ್ತು!. 

ಉಪವಾಸದ ಉಪದ್ರವ?

ಕಳೆದ ನಾಲ್ಕಾರು ತಿಂಗಳುಗಳಿಂದ ತನ್ನನ್ನು ಬಾಧಿಸುತ್ತಿದ್ದ ಹೊಟ್ಟೆನೋವಿಗೆ "ವಾಯು ಬಾಧೆ"ಯೇ ಕಾರಣವೆಂದು ಧೃಢವಾಗಿ ನಂಬಿದ್ದ ಖತೀಜಮ್ಮನು, ಇದರ ಪರಿಹಾರಕ್ಕಾಗಿ ಜೀರಿಗೆಯ ಕಷಾಯವನ್ನು ತಯಾರಿಸಿ ಕುಡಿಯುತ್ತಿದ್ದಳು. ಪ್ರಾರಂಭಿಕ ಹಂತದಲ್ಲಿ ಕಷಾಯ ಸೇವನೆಯಿಂದ ಕೊಂಚ ಶಮನಗೊಳ್ಳುತ್ತಿದ್ದ ಹೊಟ್ಟೆನೋವು, ಇದೀಗ ಪ್ರತಿನಿತ್ಯ ಆಕೆಯನ್ನು ಪೀಡಿಸಲು ಆರಂಭಿಸಿತ್ತು. ಜೊತೆಗೆ ನೋವಿನ ಅವಧಿಯೂ ದಿನೇ ದಿನೇ ಹೆಚ್ಚಲಾರಂಭಿಸಿತ್ತು. 

ತನ್ಮಧ್ಯೆ ರಂಜಾನ್ ಮಾಸ ಆರಂಭವಾದಂತೆಯೇ ತನ್ನ ಸಮಸ್ಯೆಯನ್ನು ನಿರ್ಲಕ್ಷಿಸಿದ ಖತೀಜಮ್ಮನು ಉಪವಾಸವನ್ನು ಆಚರಿಸಲು ಆರಂಭಿಸಿದ್ದಳು. ಏಕೆಂದರೆ ಕಳೆದ ೩೫ ವರ್ಷಗಳಿಂದ ಪ್ರತಿವರ್ಷವೂ ತಪ್ಪದೆ ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದ ಈ ಧಾರ್ಮಿಕ ಆಚರಣೆಯನ್ನು ಬಿಡಲು ಆಕೆ ಸಿದ್ಧಳಿರಲಿಲ್ಲ. 

ಆದರೆ ಉಪವಾಸ ಆರಂಭಿಸಿ ವಾರ ಕಳೆಯುವಷ್ಟರಲ್ಲೇ ಆಕೆಯ ಸಮಸ್ಯೆ ಉಲ್ಬಣಿಸುವುದರೊಂದಿಗೆ ಹೊಟ್ಟೆಯುಬ್ಬರ, ವಾಕರಿಕೆ ಹಾಗೂ ವಾಂತಿಯೊಂದಿಗೆ, ಹೊಟ್ಟೆ ಹಿಂಡಿದಂತಹ ತೀವ್ರ ನೋವಿನಿಂದಾಗಿ ಆಕೆ ಹೈರಾಣಾಗಿದ್ದಳು. ಆಹಾರ ಸೇವಿಸಿದ ಕೆಲ ಹೊತ್ತಿನಲ್ಲೇ ತೀವ್ರಗೊಳ್ಳುತ್ತಿದ್ದ ಆಕೆಯ ಉದರಶೋಲೆಯು, ತಿಂದ ಆಹಾರ ವಾಂತಿಯಾದ ಬಳಿಕ ತುಸು ಕಡಿಮೆಯಾದಂತೆ ಭಾಸವಾಗುತ್ತಿತ್ತು. ಇದೇ ಕಾರಣದಿಂದಾಗಿ ಘನ ಆಹಾರವನ್ನು ಸೇವಿಸಲು ಹೆದರಿ, ಕೇವಲ ನೀರು ಮತ್ತು ಹಣ್ಣಿನ ರಸಗಳನ್ನು ಮಾತ್ರ ಕುಡಿಯುತ್ತಿದ್ದುದರಿಂದ ಉದ್ಭವಿಸಿದ ನಿಶ್ಶಕ್ತಿಯು ಆಕೆ ಹಾಸಿಗೆ ಹಿಡಿಯುವಂತೆ ಮಾಡಿತ್ತು. 

ಸದಾ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಮಗ್ನರಾಗಿರುತ್ತಿದ್ದ ಅಬ್ಬಾಸ್ ಸಾಹೇಬರಿಗೆ, ಪತ್ನಿ ಹಾಸಿಗೆ ಹಿಡಿಯುವ ತನಕ ಆಕೆಯ ಅನಾರೋಗ್ಯದ ಅರಿವಿರಲಿಲ್ಲ. ಆದರೆ ಇದೀಗ ಪತ್ನಿಯ ಸ್ಥಿತಿಯನ್ನು ಕಂಡು ಗಾಬರಿಯಾದ ಸಾಹೇಬರು, ಕುಟುಂಬ ವೈದ್ಯರನ್ನು ಮನೆಗೆ ಕರೆಯಿಸಿದ್ದರು. ಖತೀಜಮ್ಮನನ್ನು ಸಾವಕಾಶವಾಗಿ ಪರೀಕ್ಷಿಸಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ವೈದ್ಯರು, ಅವಶ್ಯಕ ಇಂಜೆಕ್ಷನ್ ಮತ್ತು ಔಷದಗಳನ್ನು ನೀಡಿ ತಕ್ಷಣದಿಂದಲೇ ಉಪವಾಸವನ್ನು ನಿಲ್ಲಿಸುವಂತೆ ಆದೇಶಿಸಿದ್ದರು. ಜೊತೆಗೆ ಹಣ್ಣು ಹಂಪಲುಗಳು ಹಾಗೂ ಮೊಸರು ಮತ್ತು ಮಸಾಲೆಗಳಿಲ್ಲದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಆಗಾಗ ಸೇವಿಸುವಂತೆ ಹೇಳಿದರು. ಅಂತೆಯೇ ಒಂದೆರಡು ದಿನಗಳ ಬಳಿಕ ಬರಿ ಹೊಟ್ಟೆಯಲ್ಲಿ ಜಠರ ದರ್ಶಕ ಪರೀಕ್ಷೆಯನ್ನು ಮಾಡಿಸುವಂತೆ ಸೂಚಿಸಿದ್ದರು. 

ಈ ಪರೀಕ್ಷೆಯಿಂದ ಖತೀಜಮ್ಮನ ಜಠರದಲ್ಲಿ ಪುಟ್ಟ ಹುಣ್ಣು ಪತ್ತೆಯಾಗಿತ್ತು. ಅಂತೆಯೇ ಈ ಹುಣ್ಣು ಉದ್ಭವಿಸಲು ನಿರ್ದಿಷ್ಟ ಕಾರಣವೂ ಇದ್ದಿತು. ಅನೇಕ ವರ್ಷಗಳಿಂದ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಆಕೆಗೆ, ಸುಮಾರು ಮೂರು ವರ್ಷಗಳ ಹಿಂದೆ ಕಾಯಿಲೆ ತೀವ್ರವಾಗಿ ಉಲ್ಬಣಿಸಿತ್ತು. ಈ ಸಂದರ್ಭದಲ್ಲಿ ಕಾಯಿಲೆಯ ತೀವ್ರತೆಯನ್ನು ನಿಯಂತ್ರಿಸಲು ತಜ್ಞವೈದ್ಯರು ಇತರ ಔಷದಗಳೊಂದಿಗೆ ಸ್ಟೆರಾಯ್ಡ್ ಮಾತ್ರೆಗಳನ್ನು ನೀಡಿದ್ದರು. ಈ ಮಾತ್ರೆಗಳ ಅದ್ಭುತ ಪರಿಣಾಮದಿಂದ ಪ್ರಭಾವಿತಳಾದ ಖತೀಜಮ್ಮನು, ಇದೇ ಮಾತ್ರೆಗಳನ್ನು ಔಷದ ಅಂಗಡಿಯಿಂದ ತರಿಸಿ ತನಗೆ ಬೇಕೆನಿಸಿದಾಗ ನುಂಗುತ್ತಿದ್ದಳು!. 

ಕಳೆದ ಮೂರು ವರ್ಷಗಳಿಂದ ಸ್ಟೆರಾಯ್ಡ್ ಮಾತ್ರೆಗಳನ್ನು ಮಿತಿಮೀರಿ ಸೇವಿಸಿದ್ದುದರಿಂದ ಹಾಗೂ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದೆ ಇದ್ದುದರಿಂದ ಮತ್ತು ಹೆಚ್ಚಾಗಿ ಮಸಾಲೆಗಳಿಂದ ಸಮೃದ್ಧವಾಗಿರುವ ಮಾಂಸಾಹಾರಗಳನ್ನೇ ಸೇವಿಸುತ್ತಿದ್ದ ಆಕೆಯ ಜಠರದಲ್ಲಿ ಹುಣ್ಣು ಉದ್ಭವಿಸಿ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸಿತ್ತು. 

ತಜ್ಞವೈದ್ಯರ ಆದೇಶದಂತೆ ಉಪವಾಸವನ್ನು ಕೈಬಿಟ್ಟು ಕ್ರಮಬದ್ಧವಾಗಿ ಆಹಾರವನ್ನು ಸೇವಿಸಲು ಆರಂಭಿಸಿದ ಖತೀಜಮ್ಮ ತುಸು ಚೇತರಿಸಿಕೊಂಡಿದ್ದಳು. ಇದುವರೆಗೆ ಆಕೆ ಬೇಕಾಬಿಟ್ಟಿಯಾಗಿ ಸೇವಿಸುತ್ತಿದ್ದ ಸ್ಟೆರಾಯ್ಡ್ ಮಾತ್ರೆಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಕೆಲವೇ ದಿನಗಳಲ್ಲಿ ಇದರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಇದರೊಂದಿಗೆ ಆಕೆಯನ್ನು ಪೀಡಿಸುತ್ತಿರುವ ಆಸ್ತಮಾ ಮತ್ತು ಜಠರದ ಹುಣ್ಣು ಮಾಗಲು ವೈದ್ಯರು ನೀಡಿದ್ದ ಔಷದಗಳನ್ನು ಸೇವಿಸಲು ಆರಂಭಿಸಿದ್ದ ಖತೀಜಮ್ಮನು, ಎರಡೇ ತಿಂಗಳುಗಳಲ್ಲಿ ಗುಣಮುಖಳಾಗಿದ್ದಳು. 

ಹರೀಶನಿಗೆ ಹಸಿವಿಲ್ಲವೇಕೆ?

ದ್ವಿತೀಯ ಪಿ. ಯು. ಸಿ ಯಲ್ಲಿ ಕಲಿಯುತ್ತಿದ್ದ ಹರೀಶನಿಗೆ ಹಲವಾರು ವಾರಗಳಿಂದ ಹಸಿವಿಲ್ಲದಿರುವುದು, ವಾಕರಿಕೆ ಹಾಗೂ ಹೊಟ್ಟೆಯಲ್ಲಿ ಸಂಕಟ ಮತ್ತು ನೋವು ಬಾಧಿಸಲಾರಂಭಿಸಿತ್ತು. ತಾಯಿಯ ಒತ್ತಾಯಕ್ಕೆ ಮಣಿದು ಪರಿಚಿತ ವೈದ್ಯರಲ್ಲಿ ತೆರಳಿ ಚಿಕಿತ್ಸೆ ಪಡೆದರೂ, ಆತನ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತೇ ಹೊರತು ಕಿಂಚಿತ್ ಕೂಡಾ ಕಡಿಮೆಯಾಗಿರಲಿಲ್ಲ. 

ಇದೇ ಸಂದರ್ಭದಲ್ಲಿ ನಗರದಲ್ಲಿ ನಡೆಯಲಿದ್ದ ಮನೋವೈದ್ಯರ ಸಮ್ಮೇಳನಕ್ಕಾಗಿ ಆಗಮಿಸಿದ್ದ ಸೋದರ, ಶೇಖರನ ಬಳಿ ತನ್ನ ಮಗನ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವಂತೆ ರುಕ್ಮಿಣಿಯು ಒತ್ತಾಯಿಸಿದ್ದಳು. 

ಮುಂದಿನ ಮೂರು ದಿನಗಳ ಕಾಲ ಬೆಳಗ್ಗೆ ಮತ್ತು ರಾತ್ರಿ ಹರೀಶನ ಚರ್ಯೆಗಳನ್ನು ಗಮನಿಸಲು ಆರಂಭಿಸಿದ ಶೇಖರನಿಗೆ, ಆತನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಸಂದೇಹ ಮೂಡಿತ್ತು. ಇದನ್ನು ಅರಿತುಕೊಳ್ಳುವ ಸಲುವಾಗಿ ಹರೀಶನನ್ನು ಸಮೀಪದ ಉದ್ಯಾನವನಕ್ಕೆ ಕರೆದೊಯ್ದು ಆಪ್ತ ಸಂವಾದ ನಡೆಸಿದ್ದ ಶೇಖರನಿಗೆ ಸಮಸ್ಯೆಯ ಮೂಲ ಪತ್ತೆಯಾಗಿತ್ತು. 

ಆಗರ್ಭ ಶ್ರೀಮಂತರಾಗಿದ್ದ ಸುರೇಶರಿಗೆ ತನ್ನ ಏಕಮಾತ್ರ ಪುತ್ರನು ಪ್ರಖ್ಯಾತ ವೈದ್ಯನಾಗಬೇಕೆಂಬ ಹಂಬಲವಿತ್ತು. ಇದುವರೆಗೆ ಶೇ. ೭೦ ಕ್ಕೂ ಅಧಿಕ ಅಂಕಗಳನ್ನು ಗಳಿಸದಿದ್ದ ಹರೀಶನಿಗೆ, ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆಯುವಷ್ಟು ಅಂಕಗಳನ್ನು ಗಳಿಸುವ ವಿಶ್ವಾಸವೇ ಇರಲಿಲ್ಲ. ತತ್ಪರಿಣಾಮವಾಗಿ ತಂದೆಯ ಬಯಕೆಯನ್ನು ಈಡೇರಿಸಲಾಗದ ನೋವಿನೊಂದಿಗೆ ಮಾನಸಿಕ ಒತ್ತಡವೂ ಸೇರಿಕೊಂಡು, ಆತನಲ್ಲಿ ಇಂತಹ ಆರೋಗ್ಯದ ತೊಂದರೆಗಳು ಉದ್ಭವಿಸಿದ್ದವು. "ನರ್ವಸ್ ಡಿಸ್ಪೆಪ್ಸಿಯಾ" ಎಂದು ಕರೆಯಲ್ಪಡುವ ಈ ಸಮಸ್ಯೆಯನ್ನು ಅರಿತುಕೊಳ್ಳದೆ ಪರಿಚಿತ ವೈದ್ಯರು ನೀಡಿದ್ದ ಚಿಕಿತ್ಸೆಯು ಫಲಕಾರಿಯಾಗಿರಲಿಲ್ಲ. 

ಅದೇ ಸಂಜೆ ತನ್ನ ತಂಗಿ ಮತ್ತು ಭಾವನನ ಬಳಿ ಹರೀಶನ ಸಮಸ್ಯೆಯನ್ನು ಅಮೂಲಾಗ್ರವಾಗಿ ವಿವರಿಸಿದ ಶೇಖರನು, ಆತನ ಅಪೇಕ್ಷೆಯಂತೆ ಎಂಜಿನಿಯರಿಂಗ್ ಕಲಿಯಲು ಅವಕಾಶ ಮತ್ತು ಪ್ರೋತ್ಸಾಹ ನೀಡುವಂತೆ ಸೂಚಿಸಿದ್ದನು. ಇದಕ್ಕೆ ತಪ್ಪಿದಲ್ಲಿ ಹರೀಶನ ಆರೋಗ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸಿ, ಮಾನಸಿಕ ಕಾಯಿಲೆಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದನು. ಅಂತೆಯೇ ನೀವು ಇದಕ್ಕೆ ಸಮ್ಮತಿಸಿದಲ್ಲಿ, ಚಿಟಿಕೆ ಹೊಡೆಯುವಷ್ಟರಲ್ಲಿ ಹರೀಶನ ಸಮಸ್ಯೆಯನ್ನು ಪರಿಹರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದನು. ಮನೋವೈದ್ಯ ಶೇಖರನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ದಂಪತಿಗಳು ಇದಕ್ಕೆ ಸಮ್ಮತಿಸಿದ್ದರು. ರಾತ್ರಿ ಊಟದ ಹೊತ್ತಿನಲ್ಲಿ ತನ್ನ ತಂದೆಯಿಂದ ವಿಷಯವನ್ನರಿತ ಹರೀಶನ ಮುಖದಲ್ಲಿ ಮಂದಹಾಸ ಮೂಡಿತ್ತು. ಅನುಭವೀ ಮನೋವೈದ್ಯ ಶೇಖರನ ಪ್ರಯತ್ನದಿಂದಾಗಿ ಔಷದ ಸೇವನೆಯ ಅವಶ್ಯಕತೆ ಇಲ್ಲದೆ ಹರೀಶನ ಸಮಸ್ಯೆ ಬಗೆಹರಿಯಲು "ಆಪ್ತ ಸಂವಾದ" ವೇ ಕಾರಣವೆನಿಸಿತ್ತು. 

ನಿಮಗಿದು ತಿಳಿದಿರಲಿ 

ಬಹುತೇಕ ಉದರ ಸಂಬಂಧಿ ವ್ಯಾಧಿಗಳಲ್ಲಿ ಹೊಟ್ಟೆ ನೋವು, ವಾಕರಿಕೆ, ವಾಂತಿ,ಎದೆ ಉರಿ, ಹೊಟ್ಟೆಯುಬ್ಬರ ಹಾಗೂ ತೇಗುವಿಕೆಯಂತಹ ಲಕ್ಷಣಗಳು ಕಂಡುಬರುತ್ತವೆ. ಜೊತೆಗೆ ಅಧಿಕತಮ ಜನರಲ್ಲಿ ಇಂತಹ ಲಕ್ಷಣಗಳಿಗೆ ಅಜೀರ್ಣ, ಅತಿ ಆಹಾರ ಸೇವನೆ, ಶರೀರಕ್ಕೆ ಒಗ್ಗದ ಆಹಾರ ಸೇವನೆ, ಆತಂಕ, ಭಯ, ದುಃಖ ಹಾಗೂ ಮಾನಸಿಕ ಒತ್ತಡಗಳೇ ಕಾರಣವಾಗಿರುತ್ತವೆ. ಮತ್ತೆ ಕೆಲವರಲ್ಲಿ ಈ ತೊಂದರೆಗಳಿಗೆ ಮೂತ್ರಾಂಗ- ಪಿತ್ತಕೋಶದಲ್ಲಿನ ಕಲ್ಲುಗಳು ಹಾಗೂ ಜಠರದ ಹುನ್ನುಗಳು ಮತ್ತು ಅಲ್ಪ ಪ್ರಮಾಣದ ರೋಗಿಗಳಲ್ಲಿ ಗಂಭೀರ- ಮಾರಕ ಕ್ಯಾನ್ಸರ್ ವ್ಯಾಧಿಗಳು ಕಾರಣವಾಗಿರುತ್ತವೆ. 

ಆದರೆ ಯಾವ ಕಾರಣದಿಂದ, ಯಾವ ರೀತಿಯಲ್ಲಿ ಹೊಟ್ಟೆನೋವು ಬರುತ್ತಿದೆ ಹಾಗೂ ಇದರ ಅವಧಿ ಮತ್ತು ತೀವ್ರತೆ ಎಷ್ಟಿದೆ, ನೋವು ಆರಂಭವಾಗಲು ಹಾಗೂ ಉಲ್ಬಣಿಸಲು ಕಾರಣವೆನಿಸಬಲ್ಲ ಅಂಶಗಳು, ಉದರದ ಯಾವ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಹಾಗೂ ಯಾವ ರೀತಿಯಲ್ಲಿ ಶಮನಗೊಳ್ಳುತ್ತದೆ ಎನ್ನುವುದನ್ನು ರೋಗಿಯೇ ವೈದ್ಯರಿಗೆ ತಿಳಿಸಬೇಕಾಗುವುದು. ಇದರೊಂದಿಗೆ ರೋಗಿಯಲ್ಲಿ ಕಂಡುಬರಬಹುದಾದ ಇತರ ಲಕ್ಷಣಗಳು ಹಾಗೂ ಆತನ ಮಾನಸಿಕ ಸ್ಥಿತಿಗಳನ್ನು ಪರಿಗಣಿಸಿದ ಬಳಿಕ ಶಾರೀರಿಕ ಅಥವಾ ಇತರ ಪರೀಕ್ಷೆಗಳನ್ನು ನಡೆಸುವುದರ ಮೂಲಕ , ವೈದ್ಯರು ಈ ತೊಂದರೆಗಳಿಗೆ ಕಾರಣವೆನಿಸಿರುವ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚುತ್ತಾರೆ. ತದನಂತರ ಆಹಾರ ಸೇವನೆಯಲ್ಲಿ ಅವಶ್ಯಕ ಬದಲಾವಣೆಗಳು, ಔಷದ ಸೇವನೆ ಅಥವಾ ಶಸ್ತ್ರಚಿಕಿತ್ಸೆ ಮತ್ತು ಮಾನಸಿಕ ಕಾರಣಗಳು ಇದ್ದಲ್ಲಿ ಆಪ್ತ ಸಂವಾದ ಮತ್ತು ಔಷದ ಸೇವನೆಯಂತಹ ಉಪಕ್ರಮಗಳನ್ನು ಕೈಗೊಳ್ಳುತ್ತಾರೆ. 

ಇವೆಲ್ಲವನ್ನೂ ಕ್ರಮಬದ್ಧವಾಗಿ ಪರಿಪಾಲಿಸಿದಲ್ಲಿ ನಿಮ್ಮನ್ನು ಕಾಡುವ ಉದರಶೂಲೆಯು ಕ್ಷಿಪ್ರಗತಿಯಲ್ಲಿ ಪರಿಹಾರಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೫-೦೪-೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 



No comments:

Post a Comment