Wednesday, November 13, 2013

Sakkare kaayileya bagge akkareyirali!



                           ಸಕ್ಕರೆ "ಕಾಯಿಲೆ"ಯ ಬಗ್ಗೆ ಅಕ್ಕರೆಯಿರಲಿ!

    ನಿಮ್ಮ ತಂದೆತಾಯಿಯರಿಗೆ ಮಧುಮೇಹವಿದ್ದಲ್ಲಿ ನಿಮ್ಮ ವೈದ್ಯರಲ್ಲಿ ಮರೆಯದೇ ತಿಳಿಸಿ. ಯಾವುದೇ ಕಾರಣದಿಂದ ವೈದ್ಯರು ನಿಮ್ಮ ರಕ್ತ,ಮೂತ್ರ ಇತ್ಯಾದಿಗಳನ್ನು ಪರೀಕ್ಷಿಸಲು ಸಲಹೆ ನೀಡಿದಾಗ ನಿರಾಕರಿಸದಿರಿ. ಆಕಸ್ಮಿಕವಾಗಿ ಮಧುಮೇಹ ಪತ್ತೆಯಾದಲ್ಲಿ, ಆಕಾಶವೇ ತಲೆಗೆ ಬಿದ್ದಂತೆ ಗಾಬರಿಯಾಗದಿರಿ. ಏಕೆಂದರೆ ಶೇ. ೫೦ ರಷ್ಟು ರೋಗಿಗಳಲ್ಲಿ ಆಹಾರದಲ್ಲಿ ಪಥ್ಯ ಹಾಗೂ ಶಾರೀರಿಕ ವ್ಯಾಯಾಮಗಳಿಂದ ಇದನ್ನು ನಿಯಂತ್ರಿಸಲು ಸಾಧ್ಯವೆನ್ನುವುದನ್ನು ಮರೆಯದಿರಿ. 
---------           ------------------                                   ---------------------                               --------------------               -----------

  ಅಲೋಪತಿಯಲ್ಲಿ "ಡಯಾಬೆಟೆಸ್  ಮೆಲೈಟಸ್" ಹಾಗೂ ಆಯುರ್ವೇದದಲ್ಲಿ "ಮಧುಮೇಹ" ಎಂದು ಕರೆಯಲ್ಪಡುವ, ಸುಂದರ ಹೆಸರಿನ ಗಂಭೀರ ಕಾಯಿಲೆಯು ವಿಶ್ವದ ಪ್ರತಿಯೊಂದು ರಾಷ್ಟ್ರಗಳಲ್ಲಿ ವ್ಯಾಪಕವಾಗಿದ್ದು ಶೇ. ೧೦ ರಿಂದ ೨೦ ರಷ್ಟು ಜನರನ್ನು ಪೀಡಿಸುತ್ತದೆ. ಐವತ್ತು ಪ್ರತಿಶತ ಮಧುಮೇಹ ಪೀಡಿತರಲ್ಲಿ ಈ ವ್ಯಾಧಿ ಪತ್ತೆಯಾಗಿರುವುದೇ ಇಲ್ಲ!. 

ಡಯಾಬೆಟೆಸ್  ಉದ್ಭವಿಸುವುದೆಂತು?

ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸಿದಾಗ ಡಯಾಬೆಟೆಸ್ ಕಾಯಿಲೆ ಉದ್ಭವಿಸುವುದು. ಈ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಜಗತ್ತಿನ ಯಾವುದೇ ವೈದ್ಯಕೀಯ ವಿಜ್ಞಾನಿಗಳು ಇಂದಿನ ತನಕ ಪತ್ತೆಹಚ್ಚಿಲ್ಲ. ಆದರೂ ಜನಸಾಮಾನ್ಯರ ಮಾನವ ಸಹಜ ದೌರ್ಬಲ್ಯ ಮತ್ತು ಅತಿಯಾಸೆಗಳನ್ನು ದುರುಪಯೋಗಿಸಿಕೊಳ್ಳುವ ಅಸಂಖ್ಯ ನಕಲಿ ವೈದ್ಯರು ಮತ್ತು ಕೆಲ ನಕಲಿ ಔಷದ ಕಂಪೆನಿಗಳು, ರೋಗಿಗಳನ್ನು ವಂಚಿಸಿ ಸಹಸ್ರಾರು ರೂಪಾಯಿಗಳನ್ನು ದೋಚುತ್ತಿರುವುದು ನಿತ್ಯಸತ್ಯ. 

ನಿಜಹೇಳಬೇಕಿದ್ದಲ್ಲಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಕಂಡುಹಿಡಿಯುವ ಸಂಶೋಧಕರಿಗೆ "ನೊಬೆಲ್" ಪ್ರಶಸ್ತಿ ಕಟ್ಟಿಟ್ಟ ಬುತ್ತಿ. ಕೋಟಿಗಟ್ಟಲೆ ಬಹುಮಾನದ ಹಣದೊಂದಿಗೆ "ವಿಶ್ವ ವಿಖ್ಯಾತ'ರಾಗುವ ಸುವರ್ಣಾವಕಾಶವನ್ನು ಬಿಟ್ಟು, ಕರಪತ್ರ- ವೃತ್ತಪತ್ರಿಕೆಗಳ ಮೂಲಕ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ಜಾಹೀರಾತುಗಳನ್ನು ನೀಡಿ,  ಊರಿಂದೂರಿಗೆ ಸುತ್ತಾಡುತ್ತಾ ಜುಜುಬಿ ಕಾಸಿಗಾಗಿ ಕಷ್ಟಪಡುವ ನಕಲಿವೈದ್ಯರಿಗೂ ಇದು ತಿಳಿಯದ ವಿಚಾರವೇನಲ್ಲ. ಇದರೊಂದಿಗೆ "ನಾಯಿಕೊಡೆ" ಗಳಂತೆ ತಲೆಯೆತ್ತಿರುವ ಅನೇಕ ಔಷದ ಕಂಪೆನಿಗಳು ಜಾಹೀರಾತುಗಳ ಮೂಲಕ ನೇರವಾಗಿ ರೋಗಿಗಳಿಗೆ ತಲುಪಿಸುವ ತಮ್ಮ ಅವಿರತ ಸಂಶೋಧನೆಗಳ ಫಲವಾದ "ಸಂಜೀವಿನಿ"ಯಂತಹ ಔಷದಗಳ ಬಗ್ಗೆ ಯಾವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ ಎಂದು ನಿಮಗೆ ಗೊತ್ತೇ?. ಇವರು ನೀಡುವ ಜಾಹೀರಾತುಗಳಲ್ಲಿ "ನೀವು ನಮ್ಮ ಔಷದಗಳನ್ನು ಸೇವಿಸಲು ಆರಂಭಿಸಿದ ಬಳಿಕ, ಇದುವರೆಗೆ ಸೇವಿಸುತ್ತಿದ್ದ ಮಾತ್ರೆ, ಇನ್ಸುಲಿನ್ ಇಂಜೆಕ್ಷನ್ ಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಒಂದು ಹಂತದಲ್ಲಿ ಇವುಗಳನ್ನು ಶಾಶ್ವತವಾಗಿ ನಿಲ್ಲಿಸಬಹುದು" ಎನ್ನುವ ಭರವಸೆಯನ್ನು ನೀಡುತ್ತಾರೆ. ಆದರೆ ತತ್ಪರಿಣಾಮವಾಗಿ ನೀವು ಉಸಿರಾಡುವುದನ್ನೇ ಶಾಶ್ವತವಾಗಿ ನಿಲ್ಲಿಸುವ ಸಾಧ್ಯತೆಗಳಿವೆ ಎನ್ನುವುದನ್ನು ತಿಳಿಸಲು ಮರೆತುಬಿಡುತ್ತಾರೆ!. 

ಮಧುಮೇಹಕ್ಕೆ ಕಾರಣವೇನು?

ನಿಮ್ಮ ಶರೀರದಲ್ಲಿ ಉತ್ಪಾದನೆಯಾಗುವ ಇನ್ಸುಲಿನ್ ನ ಪ್ರಮಾಣದಲ್ಲಿ  ಕೊರತೆ ಅಥವಾ ಅಭಾವದಿಂದ ಮಧುಮೇಹ ವ್ಯಾಧಿ ಆರಂಭವಾಗುತ್ತದೆ. ಈ ಸಮಸ್ಯೆಗೆ ಶರೀರದಲ್ಲಿನ ಮೇದೋಜೀರಕ ಗ್ರಂಥಿಯ ತೊಂದರೆ- ಕಾಯಿಲೆಗಳು, ಇನ್ಸುಲಿನ್ ನ ಕಾರ್ಯಕ್ಷಮತೆಯನ್ನು ಕುಂಠಿತಗೊಲಿಸಬಲ್ಲ ಹಾರ್ಮೋನ್ ಗಳು, ಕೆಲ ವಿಧದ ಔಷದಗಳು( ಉದಾ- ಸ್ಟೆರಾಯ್ಡ್ ಗಳು), ಜನ್ಮದತ್ತ ಕಾಯಿಲೆಗಳು ಹಾಗೂ ಅನುವಂಶಿಕತೆಯೂ ಕಾರಣವೆನಿಸಬಹುದು. ಇದಲ್ಲದೆ ಕೆಲ ವೈರಸ್ ಗಳ ಸೋಂಕು, ನೀವು ಸೇವಿಸುವ ಆಹಾರ, ತಾಯಿಯ ಹಾಲು ನಶಿಸಿದಾಗ ಹಸುಗೂಸಿಗೆ ನೀಡುವ ಹಸುವಿನ ಹಾಲು, ಸ್ಥೂಲಕಾಯ, ಅಧಿಕತೂಕ, ಮದ್ಯಪಾನ, ಅಧಿಕ ರಕ್ತದೊತ್ತಡ ಹಾಗೂ ಸ್ತ್ರೀಯರಲ್ಲಿ ಗರ್ಭಧಾರನೆಯೂ ಕಾರಣವೆನಿಸಬಹುದು. ಜತೆಗೆ ಶಾರೀರಿಕ ಚಟುವಟಿಕೆಗಲ ಅಭಾವವೂ ( ನಿಷ್ಕ್ರಿಯತೆ) ಇಂದಿನ ಹೈಟೆಕ್ ಯುಗದಲ್ಲಿ ಡಯಾಬೆಟೆಸ್ ಉದ್ಭವಿಸಲು ಪ್ರಮುಖ ಪಾತ್ರವಹಿಸುತ್ತದೆ . 

ಪ್ರಭೇದಗಳು 

ಮಧುಮೇಹವನ್ನು ಸ್ಥೂಲವಾಗಿ ಎರಡು ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದ್ದು, ಇವುಗಳನ್ನು  ಇನ್ಸುಲಿನ್ ಅವಲಂಬಿತ, ಅರ್ಥಾತ್ ಪ್ರಭೇದ- ೧ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ, ಅರ್ಥಾತ್ ಪ್ರಭೇದ-೨ ಎಂದು ಹೆಸರಿಸಲಾಗಿದೆ. 

ಸಾಮಾನ್ಯವಾಗಿ ಪ್ರಭೇದ-೧ ಅದೇ ತಾನೇ ಹುಟ್ಟಿದ ಹಸುಗೂಸಿನಿಂದ ಆರಂಭಿಸಿ ಹದಿಹರೆಯದ ಮಕ್ಕಳಲ್ಲೂ ಹೆಚ್ಚಾಗಿ ಕಂಡುಬರುವುದಾದರೂ, ಯಾವುದೇ ವ್ಯಕ್ತಿಯಲ್ಲಿ ಯಾವುದೇ ವಯಸ್ಸಿನಲ್ಲೂ ಉದ್ಭವಿಸುವ ಸಾಧ್ಯತೆಗಳಿವೆ. 

ಪ್ರಭೇದ-೨ ಹೆಚ್ಚಾಗಿ ೫೦ ರಿಂದ ೬೦ ವರ್ಷ ವಯಸ್ಸಿನವರಲ್ಲಿ ಪ್ರಾರಂಭವಾಗುವುದಾದರೂ, ಪ್ರಸ್ತುತ ಆಧುನಿಕ ಜೀವನ ಶೈಲಿ, ತೀವ್ರ ಮಾನಸಿಕ ಒತ್ತಡ ಮತ್ತು ನಿಷ್ಕ್ರಿಯತೆಗಳಿಂದಾಗಿ ೩೦ ರಿಂದ ೪೦ ವರ್ಷ ವಯಸ್ಸಿನವರಲ್ಲೇ ಪತ್ತೆಯಾಗುತ್ತಿರುವುದು ಗಮನಾರ್ಹ. 

ಪ್ರಭೇದ-೧ ವಿಧದ ಮಧುಮೇಹವು ಶ್ರೀಮಂತರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಡತನದ ರೇಖೆಗಿಂತ ಕೆಳಗಿರುವ ಜನರು ಕಡಿಮೆ ಆಹಾರವನ್ನು ಸೇವಿಸಿ, ಹೆಚ್ಚು ದುಡಿಯುವುದರಿಂದ ಈ ಸಮಸ್ಯೆಯ ಪ್ರಮಾಣವು ಅವರಲ್ಲಿ ಅತ್ಯಲ್ಪ. ಇವೆರಡೂ ವರ್ಗಗಳಿಗೆ ಸೇರದ ಮಧ್ಯಮ ಆದಾಯದ ಜನರಲ್ಲಿ ಇದರ ಪ್ರಮಾಣವು ಬಡವರಿಗಿಂತ ಎರಡು ಪಟ್ಟು ಹಾಗೂ ಸುಖಲೋಲುಪ ಶ್ರೀಮಂತರಲ್ಲಿ ನಾಲ್ಕು ಪಟ್ಟು ಇರುವುದೆಂದು ತಿಳಿದುಬಂದಿದೆ. 

ಮಧುಮೇಹದ ಲಕ್ಷಣಗಳು 

ಅತಿಮೂತ್ರ,ಅತಿ ಬಾಯಾರಿಕೆ, ಅತಿಯಾಗಿ ಬೆವರುವುದು, ತಲೆ ತಿರುಗಿದಂತಾಗುವುದು, ಕೈಕಾಲುಗಳಲ್ಲಿ ನಡುಕ, ಶರೀರದ ತೂಕ ಕಡಿಮೆಯಾಗುತ್ತಲೇ ಹೋಗುವುದು, ಕಣ್ಣಿನ ದೃಷ್ಟಿ ಮಂಜಾಗುವುದು, ಗಾಯಗಳು ಮತ್ತು ಕಾಯಿಲೆಗಳು ಅನೇಕ ದಿನಗಳು ಕಳೆದರೂ ಗುಣವಾಗದಿರುವುದು ಅಥವಾ ಉಲ್ಬಣಿಸುವುದು, ಹೊಟ್ಟೆನೋವು ಹಾಗೂ ವಾಂತಿ, ಮೂತ್ರ ವಿಸರ್ಜನಾಂಗಗಳಲ್ಲಿ ತುರಿಕೆ, ಕೈಕಾಲುಗಳಲ್ಲಿ ಸ್ಪರ್ಶಜ್ಞಾನದ ಕೊರತೆ ಅಥವಾ ನೋವಿನ ಸಂವೇದನೆಯ ಅಭಾವ ಮತ್ತು ಕೆಲವರಲ್ಲಿ ನಿಮಿರುದೌರ್ಬಲ್ಯ ಗಳಂತಹ ಲಕ್ಷಣಗಳು ಕಂಡುಬರುತ್ತವೆ. 

ಚಿಕಿತ್ಸೆ 

ಮಧುಮೇಹ ವ್ಯಾಧಿಯನ್ನು ನಿಯಂತ್ರಿಸಲು ಮೂರು ವಿಧದ ಚಿಕಿತ್ಸಾ ಕ್ರಮಗಳನ್ನು ವೈದ್ಯರು ಅನುಸರಿಸುತ್ತಾರೆ. 

ಮೊದಲನೆಯದಾಗಿ ಆಹಾರ ಸೇವನೆಯಲ್ಲಿ ಪಥ್ಯ ಹಾಗೂ ಶಾರೀರಿಕ ವ್ಯಾಯಾಮ. ಇದರಿಂದ ಶೇ ೫೦ ರಷ್ಟು ರೋಗಿಗಳು ತಮ್ಮ ವ್ಯಾಧಿಯನ್ನು ಹತೋಟಿಯಲ್ಲಿಡಲು ಸಾಧ್ಯ. ಎರಡನೆಯದಾಗಿ ಆಹಾರದಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಮತ್ತು ಮಾತ್ರೆಗಳ ಸೇವನೆ. ಇದರಿಂದ ಶೇ. ೨೦ ರಿಂದ ೩೦ ರೋಗಿಗಳು ತಮ್ಮ ವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಮೂರನೆಯ ವಿಧಾನದಲ್ಲಿ ಆಹಾರದಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಮತ್ತು ಇನ್ಸುಲಿನ್ ಇಂಜೆಕ್ಷನ್. ಈ ಚಿಕಿತ್ಸೆಯಿಂದ ಶೇ ೨೦ ರಿಂದ ೩೦ ರಷ್ಟು ರೋಗಿಗಳು ಮಧುಮೇಹವನ್ನು ಸಂಪೂರ್ಣವಾಗಿ ಹತೋಟಿಯಲ್ಲಿರಿಸುವುದು ಸುಲಭ ಸಾಧ್ಯ. 

ಸಮಸ್ಯೆಗಳು 

ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹಠಾತ್ ಹಾಗೂ ತೀವ್ರವಾಗಿ ಕುಸಿಯುವುದು ಪ್ರಮುಖ ಸಮಸ್ಯೆಯೂ ಹೌದು. ಈ ಸ್ಥಿತಿಯಲ್ಲಿ ರೋಗಿ ವಿಪರೀತವಾಗಿ ಬೆವರುವುದು, ಅಂಗಾಂಗಗಳಲ್ಲಿ ನಡುಕ, ತೀವ್ರ ಎದೆಬಡಿತ, ಅತಿ ಹಸಿವೆ ಹಾಗೂ ಬಾಯಾರಿಕೆ, ವಾಕರಿಕೆ, ತಲೆನೋವು, ಅತಿ ಆಯಾಸ ಮತ್ತು ಮಾತನಾಡಲು ಆಗದಿರುವುದೇ ಮುಂತಾದ ಸಮಸ್ಯೆಗಳು ಬಾಧಿಸುತ್ತವೆ. ಇದಲ್ಲದೆ ಕೆಲ ರೋಗಿಗಳಲ್ಲಿ ಅಪಸ್ಮಾರದಂತಹ ಸೆಳೆತಗಳು, ಲಘು ಪಕ್ಷವಾತ, ಮೆದುಳಿಗೆ ಆಂಶಿಕವಾಗಿ ಹಾನಿಯಾಗುವುದು ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವುದುಂಟು. 

ಇಂತಹ ಸಮಸ್ಯೆಗಳು ಹೆಚ್ಚಾಗಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದ ಔಷದ ಸೇವನೆ, ಔಷದ ಸೇವನೆಯ ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ಪ್ರಮಾಣದ ಆಹಾರವನ್ನು ಸೇವಿಸದಿರುವುದು, ತೀವ್ರ ಶಾರೀರಿಕ ವ್ಯಾಯಾಮ-ಚಟುವಟಿಕೆ ಮತ್ತು ಮದ್ಯಪಾನದಿಂದಲೂ ಸಂಭವಿಸಬಲ್ಲದು. ಇಂತಹ ಪರಿಸ್ಥಿತಿಯಲ್ಲಿ ಪ್ರಜ್ಞಾಹೀನ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ತುರ್ತುಚಿಕಿತ್ಸೆ ನೀಡಬೇಕಾಗುವುದು. ಪ್ರಜ್ಞೆ ಇರುವ ರೋಗಿಗಳಿಗೆ ಒಂದಿಷ್ಟು ಸಕ್ಕರೆಯನ್ನು ನೀರು ಅಥವಾ ಹಾಲಿನಲ್ಲಿ ಬೆರೆಸಿ ಕುಡಿಸಿದಲ್ಲಿ, ಕೆಲವೇ ನಿಮಿಷಗಳಲ್ಲಿ ರೋಗಿಯು ಸ್ವಸ್ಥನಾಗುವನು. 

ರೋಗಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತೀವ್ರವಾಗಿ ಹೆಚ್ಚಿದಲ್ಲಿ ಡಯಾಬೆಟಿಕ್ ಕೀಟೋಅಸಿಡೋಸಿಸ್  ಹಾಗೂ ಕೋಮಾದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ. 

ದೀರ್ಘಕಾಲೀನ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳು, ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು, ಮೂತ್ರಪಿಂಡ-ನಾಳಗಳಿಗೆ ಸಂಬಂಧಿಸಿದ ರೊಗಗಲು. ಮೆದುಳು ಹಾಗೂ ನರಮಂಡಲಗಳ ಕಾಯಿಲೆಗಳು ಮತ್ತು ಪಾದಗಳಲ್ಲಿ ಉಲ್ಬಣಿಸಬಲ್ಲ ಗಾಯ- ಹುಣ್ಣುಗಳಂತಹ ಗಂಭೀರ ತೊಂದರೆಗಳು ಕಂಡುಬರುವುದುಂಟು. ಇವುಗಳನ್ನು ಸೂಕ್ತ ಔಷದ, ಆಹಾರ ಮತ್ತು ವ್ಯಾಯಾಮಗಳಿಂದ ತಡೆಗಟ್ಟುವುದು ಸುಲಭ ಸಾಧ್ಯ. ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತಲೂ ಉತ್ತಮ ಎನ್ನುವಂತೆ, ಮಧುಮೇಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸುವುದು ಹಿತಕರ ಎನ್ನುವುದನ್ನು ಮರೆಯದಿರಿ. 

ಇನ್ಸುಲಿನ್ - ತಪ್ಪುಕಲ್ಪನೆಗಳು 

ಮಧುಮೇಹ ಪೀಡಿತರು ಒಂದು ಬಾರಿ ಇನ್ಸುಲಿನ್ ಇಂಜೆಕ್ಷನ್ ಪಡೆಯಲು ಪ್ರಾರಂಭಿಸಿದಲ್ಲಿ, ಜೀವನ ಪರ್ಯಂತ ಇದನ್ನು ಪಡೆದುಕೊಳ್ಳುವುದು ಅನಿವಾರ್ಯವೆಂದು ಅನೇಕ ವಿದ್ಯಾವಂತರೂ ನಂಬಿರುವುದು "ಅಪ್ಪಟ ಸುಳ್ಳು". ಪ್ರಾಯಶಃ ಇಂತಹ ಗಾಳಿ ಸುದ್ದಿಗಳಿಗೆ ಇಂಬುಕೊಡುವ ನಕಲಿವೈದ್ಯರು ಇದಕ್ಕೆ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು. 

ಅನೇಕ ಮಧುಮೇಹ ರೋಗಿಗಳಲ್ಲಿ ಗಂಭೀರ ಕಾಯಿಲೆಗಳು ಉದ್ಭವಿಸಿದಾಗ ಅಥವಾ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದಾಗ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿ ಈ ವ್ಯಾಧಿಯ ನಿಯಂತ್ರಣದ ಅನಿವಾರ್ಯತೆಯಿಂದಾಗಿ ಇನ್ಸುಲಿನ್ ಇಂಜೆಕ್ಷನ್ ಗಳನ್ನು ನೀಡಬೇಕಾಗುವುದು. ಆದರೆ ಕಾಯಿಲೆ ಗುಣವಾದ ಬಳಿಕ ಅಥವಾ ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಚೇತರಿಸಿಕೊಂಡಂತೆಯೇ ಹಿಂದಿನಂತೆ ಮಾತ್ರೆಗಳನ್ನು ಸೇವಿಸಬಹುದಾಗಿದೆ. 

ದೀರ್ಘಕಾಲೀನ ಮಧುಮೇಹಿಗಳು, ವಯೋವೃದ್ಧರು, ಮಾತ್ರೆಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲಾಗದ ಪರಿಸ್ಥಿತಿಯಲ್ಲಿ ಮತ್ತು ಬಾಲ್ಯದಲ್ಲಿ ಕಂಡುಬರುವ ಮಧುಮೇಹದಲ್ಲಿ ಜೀವನ ಪರ್ಯಂತ ಇನ್ಸುಲಿನ್ ಪಡೆದುಕೊಳ್ಳಬೇಕಾಗುತ್ತದೆ. 

ನಿಮಗಿದು ತಿಳಿದಿರಲಿ 

ಮಧುಮೇಹ ಪತ್ತೆಯಾದಂತೆಯೇ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣಕ್ಕೆ ಅನುಗುಣವಾಗಿ, ನಿಮ್ಮ ಕಾಯಿಲೆಯನ್ನು ಹತೋಟಿಗೆ ತರಲು ವೈದ್ಯರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಿ. ಔಷದ ಸೇವನೆ ಆರಂಭಿಸಿದ ಬಳಿಕ ಕಂಡುಬರಬಹುದಾದ ಯಾವುದೇ ಸಮಸ್ಯೆಗಳನ್ನು ವೈದ್ಯರ ಗಮನಕ್ಕೆ ತನ್ನಿ. ಪದೇ ಪದೇ ವೈದ್ಯರನ್ನು ಬದಲಾಯಿಸದಿರಿ. 

ಹೆಚ್ಚು ನಾರಿನಂಶ ಹಾಗೂ ಕಡಿಮೆ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸಿ. ಹಸಿ ತರಕಾರಿಗಳು,ಧಾನ್ಯಗಳು, ಗೋಧಿ, ರಾಗಿ ಹಾಗೂ ಹಸಿರು ಸೊಪ್ಪುಗಳನ್ನು ಸೇವಿಸಿ. ನೆಲದ ಕೆಳಗೆ ಬೆಳೆಯುವ ಗೆಡ್ಡೆ ಗೆಣಸುಗಳು ಮತ್ತು ಬೀಟ್ರೂಟ್, ಕ್ಯಾರೆಟ್ ನಂತಹ ತರಕಾರಿಗಳನ್ನು ವರ್ಜಿಸಿ. ಚೆನ್ನಾಗಿ ಕಳಿತ ಬಾಳೆ ,ಮಾವು, ಚಿಕ್ಕು ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇವಿಸದಿರಿ. 

ಪ್ರತಿದಿನ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಔಷದವನ್ನು ಸೇವಿಸಿ. ವೈದ್ಯರು ಸೂಚಿಸಿದ ಔಷದಗಳ ಪ್ರಮಾಣವನ್ನು ನೀವಾಗಿ ಹೆಚ್ಚು- ಕಡಿಮೆ ಮಾಡದಿರಿ. ಅಂತೆಯೇ "ನಿಮ್ಮ ನಾಲಗೆಯ ರುಚಿಯ ಮೇಲೆ ನಿಯಂತ್ರಣವಿರಲಿ". 

ಮಧುಮೇಹ ರೋಗಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ತಾವು ಮಧುಮೇಹ ರೋಗಿ, ಸೇವಿಸುತ್ತಿರುವ ಔಷದ- ಇಂಜೆಕ್ಷನ್ ಗಳ ವಿವರಗಳು ಮತ್ತು ತಮ್ಮ ವೈದ್ಯರ ಹೆಸರು-ವಿಳಾಸಗಳೊಂದಿಗೆ ದೂರವಾಣಿ ಸಂಖ್ಯೆಗಳನ್ನು ನಮ್ಮೊದಿಸಿದ ಕಾರ್ಡ್ ಒಂದನ್ನು ತಮ್ಮ ಜೇಬಿನಲ್ಲಿ- ಪರ್ಸ್ ನಲ್ಲಿ ಇರಿಸಿಕೊಳ್ಳುವುದು ಉತ್ತಮ. ಅಕಸ್ಮಾತ್ ಸಂಭವಿಸಬಹುದಾದ ಅಪಘಾತ, ಆರೋಗ್ಯದ ಸಮಸ್ಯೆಗಳು ಮತ್ತು ತುರ್ತು ಪರಿಸ್ಥಿತಿಯಲ್ಲಿ, ಈ ಮಾಹಿತಿಯು ನಿಮ್ಮ ಪ್ರಾಣವನ್ನು ಉಳಿಸುವಲ್ಲಿ ಮಹತ್ವಪೂರ್ಣ ಎನಿಸಬಲ್ಲದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೬-೦೩- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




No comments:

Post a Comment