Monday, November 18, 2013

Aspirin-the wonder drug

                                ಆಪದ್ಬಾಂಧವ " ಆಸ್ಪಿರಿನ್ "!

    ನಿಮ್ಮನ್ನು ಪೀಡಿಸುವ ತಲೆ ಸಿಡಿತದಿಂದ ಪಾರಾಗಲು ನೀವು ಸೇವಿಸುವ ಔಷದವೊಂದು, ಹೃದಯಾಘಾತಕ್ಕೆ ಒಳಗಾದ ರೋಗಿಗಳನ್ನು ಸಾವಿನ ದವಡೆಗಳಿಂದ ಕಾಪಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದಲ್ಲಿ ನಿಮಗೂ ನಂಬಲಸಾಧ್ಯ ಎನಿಸಬಹುದು. ಇಂತಹ ಅದ್ಭುತ ಸಾಮರ್ಥ್ಯವನ್ನು ಹೊಂದಿರುವ ಅಮೃತ ಸಂಜೀವಿನಿಯಂತೆ ಪರಿಣಾಮವನ್ನು ಬೀರುವ "ಆಸ್ಪಿರಿನ್" ಎನ್ನುವ ಔಷದದ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 
---------------                    ----------------                  ---------------                  ------------------                         -------------------

   ಬೀಡಾಬೀಡಿ ಅಂಗಡಿಗಳಲ್ಲೂ ಮಾರಾಟವಾಗುವ, ಚಿಟಿಕೆ ಹೊದೆಯುವಷ್ಟರಲ್ಲೇ ಶೀತ- ತಲೆನೋವುಗಳನ್ನು ಗುಣಪಡಿಸುವುದೆನ್ನುವ ಜಾಹೀರಾತುಗಳನ್ನು ನಂಬಿ ನೀವೂ ಸೇವಿಸಿರಬಹುದಾದ ವೈವಿಧ್ಯಮಯ ಶೀತನಿವಾರಕ ಮಾತ್ರೆಗಳಲ್ಲಿ ಬಳಸಲ್ಪಡುವ ಪ್ರಮುಖ ಔಷದವೇ ಆಸ್ಪಿರಿನ್. ನಿಜ ಹೇಳಬೇಕಿದ್ದಲ್ಲಿ ಇಂತಹ ಮಾತ್ರೆಗಳು ನಿಮ್ಮನ್ನು ಕಾಡುವ ಶೀತವನ್ನು ಗುಣಪಡಿಸುವ ಸಾಧ್ಯತೆಗಳೇ ಇಲ್ಲ. ಆದರೆ ಸಾಮಾನ್ಯವಾಗಿ ಶೀತದೊಂದಿಗೆ ಪ್ರತ್ಯಕ್ಷವಾಗುವ ತಲೆನೋವು, ಮೈಕೈ ನೋವು ಹಾಗೂ ಜ್ವರಗಳನ್ನು ಆಸ್ಪಿರಿನ್ ಕ್ಷಿಪ್ರಗತಿಯಲ್ಲಿ ಪರಿಹರಿಸುವುದರಿಂದ, ಶೀತ ಗುಣವಾದಂತೆ ನಿಮಗೆ ಭಾಸವಾಗುವುದು ಮಾತ್ರ ಸುಳ್ಳೇನಲ್ಲ!. 

ಅದ್ಭುತ ಔಷದ ಆಸ್ಪಿರಿನ್ 

ಔಷದ ಶಾಸ್ತ್ರದಲ್ಲಿ "ಅಸಿಟೈಲ್ ಸಾಲಿಸಿಲಿಕ್ ಎಸಿಡ್ " ಎಂದು ಕರೆಯಲ್ಪಡುವ ಈ ಔಷದವನ್ನು ಸಂಶೋಧಿಸಿದ್ದ ಸಂದರ್ಭದಲ್ಲಿ, ತನ್ನ ನೋವು ಮತ್ತು ಉರಿಯೂತ ನಿವಾರಕ ಗುಣಗಳಿಂದಾಗಿ ಇದು ರುಮಟಾಯ್ಡ್ ಆರ್ಥ್ರೈಟಿಸ್  ಹಾಗೂ ರುಮಾಟಿಕ್ ಜ್ವರ ಪೀಡಿತರಿಗೆ ವರದಾನವಾಗಿ ಪರಿಣಮಿಸಿತ್ತು. 

ಆಧುನಿಕ ವೈದ್ಯಪದ್ಧತಿಯ ಪಿತಾಮಹನೆನಿಸಿರುವ "ಹಿಪೋಕ್ರೆಟ್ಸ್", ಕೆಲ ಶತಮಾನಗಳ ಹಿಂದೆ ಮರದ ತೊಗಟೆಯೊಂದರಿಂದ ಸಿದ್ಧಪಡಿಸಿದ್ದ "ಕಷಾಯ" ವು ನೋವು ಮತ್ತು ಜ್ವರಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಶಾಯದಲ್ಲಿನ ಮೂಲ ದ್ರವ್ಯವನ್ನು ಪತ್ತೆ ಹಚ್ಚುವ ಪ್ರಯತ್ನದ ಫಲವಾಗಿ, ೧೮೨೦ ರಲ್ಲಿ "ಸಾಲಿಸಿಲಿನ್" ಎನ್ನುವ ಔಷದ ಲಭ್ಯವಾಗಿತ್ತು. ಪ್ರಸ್ತುತ "ಸಾಲಿಸಿಲೇಟ್ಸ್" ಅ ಎಂದು ಕರೆಯಲ್ಪಡುವ ಔಷದಗಳ ಕುಟುಂಬದ ಮುತ್ತಜ್ಜನೇ ಸಾಲಿಸಿಲಿನ್!. 

೧೮೫೩ ರಲ್ಲಿ ಚಾರ್ಲ್ಸ್ ಜೆರ್ಹಾರ್ಟ್  ಎನ್ನುವ ಫ್ರೆಂಚ್ ಫ್ರೆಂಚ್ ವಿಜ್ಞಾನಿಯು ಹಿಪೋಕ್ರೆಟ್ಸ್ ನ ಕಷಾಯದಿಂದ "ಅಸಿಟೈಲ್ ಸಾಲಿಸಿಲಿಕ್ ಎಸಿಡ್" ಎನ್ನುವ ಔಷದವನ್ನು ಸಿದ್ಧಪದಿಸಿದ್ದನು. ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಹತ್ವಪೂರ್ಣ ಸಂಶೋಧನೆಯು, ಸುಮಾರು ಅರ್ಧ ಶತಮಾನದ ಬಳಿಕ ಫೆಲಿಕ್ಸ್ ಹೊಫ್ ಮಾನ್ ಎನ್ನುವ ವಿಜ್ಞಾನಿಯಿಂದಾಗಿ ಬೆಳಕಿಗೆ ಬಂದಿತ್ತು. ತನ್ನ ವಯೋವೃದ್ಧ ತಂದೆಯ "ಸಂಧಿವಾತ"ದ ಸಮಸ್ಯೆಯನ್ನು ಗುಣಪಡಿಸುವಲ್ಲಿ ಈ ಔಷದವು "ರಾಮಬಾಣ"ದಂತೆ ಪರಿಣಮಿಸಿದ್ದುದನ್ನು ಅರಿತುಕೊಂಡ ಹೊಫ್ ಮಾನ್, ಇದಕ್ಕೆ "ಆಸ್ಪಿರಿನ್"ಎಂದು ನಾಮಕರಣ ಮಾದಿದ್ದನ್. 

ಅಂತಿಮವಾಗಿ ೧೯೧೫ ರಲ್ಲಿ ವಾಣಿಜ್ಯ ಉತ್ಪನ್ನದ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆಸ್ಪಿರಿನ್, ಅಲ್ಪಾವಧಿಯಲ್ಲೇ ವಿಶ್ವವಿಖ್ಯಾತವಾಗಿತ್ತು!. 

ಆಸ್ಪಿರಿನ್ ನ ಉಪಯೋಗಗಳು 

ಆಸ್ಪಿರಿನ್ ನ ಜ್ವರನಿವಾರಕ,ವೇದನಾಹಾರಕ ಮತ್ತು ಉರಿಯೂತ ಶಾಮಕ ಗುಣಗಳಿಂದಾಗಿ ತಲೆ, ಮೈಕೈ, ಬೆನ್ನು,ಸೊಂಟ,ಎಲುಬು ಸಂಧಿಗಳ ನೋವುಗಳೊಂದಿಗೆ ಹಲ್ಲು ನೋವಿನಂತಹ ಕ್ಷುಲ್ಲಕ ಸಮಸ್ಯೆಗಳನ್ನೂ ಕ್ಷಿಪ್ರಗತಿಯಲ್ಲಿ ಪರಿಹರಿಸಬಲ್ಲದು. ಇದಲ್ಲದೆ ಯಾವುದೇ ಕಾರಣದಿಂದ ಬಂದಿರಬಹುದಾದ ಜ್ವರವನ್ನು ತಾತ್ಕಾಲಿಕವಾಗಿ ಶಮನಗೊಳಿಸಬಲ್ಲದು. 

ಅತ್ತಿತ್ತ ಚಲಿಸಲಾರದಷ್ಟು ತೀವ್ರ ನೋವಿರುವ ರುಮಾಟಿಕ್ ಜ್ವರ ಪೀಡಿತರೂ, ಆಸ್ಪಿರಿನ್ ಸೇವಿಸಲು ಆರಂಭಿಸಿದ ಒಂದೆರಡು ದಿನಗಳಲ್ಲೇ ನಡೆದಾಡುವಂತೆ ಆಗುವುದೇ ಇದರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿ ರುಮಟಾಯ್ದ್ ಆರ್ಥ್ರೈಟಿಸ್ ರೋಗಿಗಳನ್ನು ಪೀಡಿಸುವ ಕೀಳು ನೋವು,ಉರಿಯೂತ ಮತ್ತು ಬೆಳಗಿನ ಜಾವದಲ್ಲಿ ಸೆಟೆದುಕೊಂಡಿರುವ ಸಂಧಿಗಳ ಸಮಸ್ಯೆ ಹಾಗೂ ಆಸ್ಟಿಯೋ ಆರ್ಥ್ರೈಟಿಸ್ ನ ತೀವ್ರ ನೋವುಗಳನ್ನು ಆಸ್ಪಿರಿನ್ ಗಣನೀಯವಾಗಿ ಕಡಿಮೆಮಾಡಬಲ್ಲದು. 

ಹೃದಯಾಘಾತ- ಪಕ್ಷಾಘಾತ (ಮೆದುಳಿನ ರಕ್ತನಾಳಗಳಲ್ಲಿನ ಅಡಚಣೆಗಳಿಂದ ಸಂಭವಿಸಿದ) ಪೀಡಿತ ರೋಗಿಗಳಲ್ಲಿ, ಇಂತಹ ಗಂಭೀರ- ಮಾರಕ  ಮತ್ತೆ ಮರುಕಳಿಸದಂತೆ ತಡೆಗಟ್ಟಲು ಆಸ್ಪಿರಿನ್ ನ ದೈನಂದಿನ ಸೇವನೆ ಅನಿವಾರ್ಯವೆನಿಸುವುದು. ನೂತನವಾಗಿ ಆರಂಭಗೊಂಡಿರುವ  ತೀವ್ರವಾಗಿ ಉಲ್ಬಣಿಸಿರುವ "ಎಂಜೈನಾ" ಪೀಡಿತ ರೋಗಿಗಳಿಗೆ ಹೃದಯಾಘಾತ ಸಂಭವಿಸದಂತೆ, ದಿನಕ್ಕೊಂದು ಆಸ್ಪಿರಿನ್ ಸೇವನೆ ನಿಶ್ಚಿತವಾಗಿಯೂ ಉಪಯುಕ್ತವೆನಿಸುವುದು. ಇದೇ ರೀತಿಯಲ್ಲಿ "ತಾತ್ಕಾಲಿಕ ಪಕ್ಷವಾತ" (ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್) ಎಂದು ಕರೆಯಲ್ಪಡುವ,  ಅಲ್ಪಾವಧಿ ಬಾಧಿಸುವ ಪಕ್ಷಾಘಾತ ಪೀಡಿತ ರೋಗಿಗಳಲ್ಲಿ ಮುಂದೆ ಸಂಭವಿಸಬಹುದಾದ ಪೂರ್ಣ ಪ್ರಮಾಣದ ಪಕ್ಷಾಘಾತದ ಸಾಧ್ಯತೆಗಳನ್ನು ದೈನಂದಿನ ಆಸ್ಪಿರಿನ್ ಸೇವನೆಯ ಮೂಲಕ ದೂರವಿರಿಸಬಹುದು. 

ಮಧುಮೇಹ ರೋಗಿಗಳ ಶರೀರದಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಉತ್ಪನ್ನವಾಗುವ "ಥ್ರೊಂಬೋಕ್ಸೇನ್", ರಕ್ತ ಹೆಪ್ಪುಗಟ್ಟುವ ಪ್ರಕ್ರಿಯಯನ್ನು ಉತ್ತೇಜಿಸಬಲ್ಲದು. ತತ್ಪರಿಣಾಮವಾಗಿ ಸಂಭವಿಸಬಲ್ಲ ಹೃದಯಾಘಾತದ ಸಾಧ್ಯತೆಗಳನ್ನು ಆಸ್ಪಿರಿನ್ ಸೇವನೆಯಿಂದ ದೂರವಿರಿಸಬಹುದು. ಜತೆಗೆ ಥ್ರೊಂಬೋಕ್ಸೇನ್" ನ ಉತ್ಪಾದನೆಯನ್ನು ಆಸ್ಪಿರಿನ್ ಕುಂಠಿತಗೊಳಿಸುವುದರಿಂದ ತಜ್ಞ ವೈದ್ಯರು ಮಧುಮೇಹ ರೋಗಿಗಳಿಗೆ ದಿನನಿತ್ಯ ಅಲ್ಪ ಪ್ರಮಾಣದ ಆಸ್ಪಿರಿನ್ ಸೇವಿಸಲು ಸೂಚಿಸುವರು. 

ಕಳೆದ ದಶಕದಲ್ಲಿ ನಡೆದಿದ್ದ ಸಂಶೋಧನೆಗಳಂತೆ ದೈನಂದಿನ ಆಸ್ಪಿರಿನ್ ಸೇವನೆಯಿಂದ ಅನ್ನನಾಳ, ಜಠರ,ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ಗಳು ಸೇರಿದಂತೆ ಅನೇಕ ವಿಧದ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದೆಂದು ತಿಳಿದುಬಂದಿದೆ. 

ಇದಲ್ಲದೆ ಮನುಷ್ಯನ ಮೆದುಳಿನಲ್ಲಿ ಸಂಭವಿಸಬಲ್ಲ ಉರಿಯೂತವು ಕಾಲಕ್ರಮೇಣ "ಅಲ್ಜೀಮರ್ಸ್" ಕಾಯಿಲೆಗೆ ಮೂಲವೆನಿಸುವುದು. ಆದರೆ ಕಾರಣಾಂತರಗಳಿಂದ ಆಸ್ಪಿರಿನ್ ಅಥವಾ ಇತರ ಉರಿಯೂತ ನಿವಾರಕ ಔಷದಗಳನ್ನು ಸುದೀರ್ಘಕಾಲ ಸೇವಿಸುತ್ತಿರುವ ವ್ಯಕ್ತಿಗಳಲ್ಲಿ, ಅಲ್ಜೀಮರ್ಸ್ ಕಾಯಿಲೆಯು ಉದ್ಭವಿಸುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. ಇದಲ್ಲದೆ ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುವ "ಮರೆಗುಳಿತನ"ವೂ ಆಸ್ಪಿರಿನ್ ಸೇವಿಸುವವರಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರುವುದು!. 

ಇವೆಲ್ಲಕಿಂತಲೂ ಮಿಗಿಲಾಗಿ ಯಾರಿಗಾದರೂ ಹೃದಯಾಘಾತ ಸಂಭವಿಸುತ್ತಿರುವುದೆಂಬ ಸಂದೇಹ ಮೂಡಿದಾಗ, ತತ್ ಕ್ಷಣ ಒಂದೆರಡು ಆಸ್ಪಿರಿನ್ ಮಾತ್ರೆಗಳನ್ನು ಬಾಯಿಯಲ್ಲಿರಿಸಿ ಚಪ್ಪರಿಸುವುದರಿಂದ ಇಂತಹ ವ್ಯಕ್ತಿಗಳನ್ನು ಸಾವಿನ ದವಡೆಗಳಿಂದ  ಕಾಪಾಡಬಲ್ಲ ಈ ಅದ್ಭುತ ಔಷದವು, ನಿಜಕ್ಕೂ ಅಮೃತ ಸಂಜೀವಿನಿ ಎನಿಸುವುದು. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಹಿನ್ನಡೆಯುಂಟುಮಾಡಬಲ್ಲ ಹಾಗೂ ಹೆಪ್ಪುಗಟ್ಟಿದ ರಕ್ತದ ತುಣುಕುಗಳನ್ನು ಕರಗಿಸಬಲ್ಲ ಆಸ್ಪಿರಿನ್ ನ ವಿಶಿಷ್ಟ ಸಾಮರ್ಥ್ಯವೇ ಇದಕ್ಕೆ ಕಾರಣವೆನಿಸುತ್ತದೆ. ಇದೇ ಉದ್ದೇಶದಿಂದ ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ವೈದ್ಯರು ನೀಡುವ ಸಹಸ್ರಾರು ರೂಪಾಯಿ ಬೆಲೆಬಾಳುವ ಸ್ಟ್ರೆಪ್ಟೋಕೈನೇಸ್ - ಯುರೋಕೈನೇಸ್ ಇಂಜೆಕ್ಷನ್ ಗಳಿಗಿಂತ ಕೊಂಚ ಕಡಿಮೆ ಪರಿಣಾಮ ಬೀರಬಲ್ಲ ಒಂದು ಆಸ್ಪಿರಿನ್ ಮಾತ್ರೆಯ ಬೆಲೆಯೂ ಕೇವಲ ಹತ್ತಾರು ಪೈಸೆಗಳು ಮಾತ್ರ!. ಪ್ರಪಂಚದ ಅತಿ ಹೆಚ್ಚು ಜನರಿಗೆ ಚಿರಪರಿಚಿತವಾಗಿರುವ, ಕನಿಷ್ಠ ವೆಚ್ಚದಲ್ಲಿ ಗರಿಷ್ಟ ಪರಿಣಾಮ ನೀಡಬಲ್ಲ ಹಾಗೂ ಜೀವರಕ್ಷಕ ಎನಿಸುವ  ಆಸ್ಪಿರಿನ್ ನಂತಹ ಔಷದ ಮತ್ತೊಂದಿಲ್ಲ ಎಂದಲ್ಲಿ ಅತಿಶಯೋಕ್ತಿ  ಎನಿಸಲಾರದು. 

ಪ್ರತಿಕೂಲ ಪರಿಣಾಮಗಳು 

ಆಸ್ಪಿರಿನ್ ನ ದೀರ್ಘಕಾಲೀನ ಸೇವನೆಯಿಂದಾಗಿ ವಾಕರಿಕೆ, ವಾಂತಿ, ಎದೆ ಉರಿ, ಹೊಟ್ಟೆನೋವು, ಜಠರದ ಹುನ್ನುಗಳು ಮತ್ತು ಆಂತರಿಕ ರಕ್ತಸ್ರಾವದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಆಸ್ಪಿರಿನ್  ಅಲರ್ಜಿಯಿಂದ ಶರೀರದಾದ್ಯಂತ  ತುರಿಕೆ,ದಡಿಕೆ ಮತ್ತು  ಬಾವು, ಮೂಗಿನಿಂದ ನೀರಿಳಿಯುವುದು,ಆಸ್ತಮಾ, ಉಸಿರಾಟದ ಅಡಚಣೆ ಹಾಗೂ ಪ್ರಾನಾಪಾಯಕ್ಕೆ ಕಾರನವೆನಿಸಬಲ್ಲ "ಅನಾಫೈಲಾಕ್ಟಿಕ್ ರಿಯಾಕ್ಷನ್" ಗಳು ಸಂಭವಿಸುವ ಸಾಧ್ಯತೆಗಳಿವೆ. 

ಸುದೀರ್ಘಕಾಲ ಆಸ್ಪಿರಿನ್ ಸೇವಿಸುವುದರಿಂದ ಕಣ್ಣು ಕತ್ತಲಾವರಿಸುವುದು,ಕಿವಿಗಳಲ್ಲಿ ಶಬ್ದ ಕೇಳಿಸಿದಂತಾಗುವುದು,ತಲೆತಿರುಗುವಿಕೆ, ಕಣ್ಣು- ಕಿವಿಗಳು ಮಂದವಾಗುವುದು ಹಾಗೂ ಶರೀರದಲ್ಲಿನ ದ್ರವ- ಲವಣಾಂಶಗಳಲ್ಲಿ ವ್ಯತ್ಯಯವಾಗಬಹುದು. ಇದಲ್ಲದೆ ಜಠರದಲ್ಲಿ ರಕ್ತಸ್ರಾವ ಹಾಗೂ ರಕ್ತವಾಂತಿಯಂತಹ ತೊಂದರೆಗಳೂ ತಲೆದೋರಬಹುದು. 

ಅತಿಯಾದ ಪ್ರಮಾಣದಲ್ಲಿ ಇದನ್ನು ಸೇವಿಸಿದಲ್ಲಿ ತೀವ್ರ ವಿಷಕಾರಕವೆನಿಸುವ ಗಂಭೀರ- ಮಾರಕ ತೊಂದರೆಗಳು ಕಂಡುಬರುವುದುಂಟು. ತೀವ್ರ ವಾಂತಿ, ನಿರ್ಜಲೀಕೃತ ಸ್ಥಿತಿ,ತೀವ್ರ ಅಸ್ವಸ್ಥತೆ, ಬಡಬಡಿಸುವಿಕೆ, ಭಯಾನಕ ಹಗಲುಗನಸುಗಳು, ತೀವ್ರ ಜ್ವರ, ಫಿಟ್ಸ್, ಕೊಮಾ, ಶ್ವಾಸಾಂಗಗಳ ವೈಫಲ್ಯ ಮತ್ತು ಹೃದಯ- ರಕ್ತನಾಳಗಳ ಕುಸಿತದಿಂದಾಗಿ ಮರಣಕ್ಕೂ ಕಾರಣವೆನಿಸಬಲ್ಲ ಈ ಸ್ಥಿತಿಯನ್ನು "ಅಕ್ಯೂಟ್ ಸಾಲಿಸಿಲೇಟ್ ಪೊಯ್ಸನಿಂಗ್" ಎನ್ನುವರು. ಇಂತಹ ಅಪಾಯಕಾರಿ ದುಷ್ಪರಿಣಾಮಗಳಿಗೆ ಕಾರಣವೆನಿಸಬಲ್ಲ ಆಸ್ಪಿರಿನ್ ಔಷದವನ್ನು ವೈದ್ಯರ ಸೂಚನೆಯಿಲ್ಲದೆ ಸುದೀರ್ಘಕಾಲ ಸೇವಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದು ನೆನಪಿರಲಿ. 

ಅಂತಿಮವಾಗಿ ಸೂಕ್ತ ಕಾರಣಗಳಿಲ್ಲದೇ ಹಾಗೂ ವೈದ್ಯರ ಸಲಹೆ ಪಡೆಯದೇ ಸ್ವೇಚ್ಛೆಯಿಂದ ಆಸ್ಪಿರಿನ್ ಸೇವಿಸದಿರಿ. ಅಂತೆಯೇ "ಜೀವರಕ್ಷಕ" ಔಷದದ ದುರುಪಯೋಗದಿಂದ ಇದು "ಜೀವ ಭಕ್ಷಕ"ವಾಗಿ ಪರಿಣಮಿಸಬಲ್ಲದು ಎನ್ನುವುದನ್ನು ಮರೆಯದಿರಿ. 

ಬಳಸಬಾರದ ಸ್ಥಿತಿಗಳು 

ಆಸ್ಪಿರಿನ್ ಅಲರ್ಜಿ, ಜಠರದ ಹುಣ್ಣುಗಳು, ವಿವಿಧರೀತಿಯ ರಕ್ತಸ್ರಾವದ ಸಮಸ್ಯೆಗಳಿರುವ ವ್ಯಕ್ತಿಗಳು ಮತ್ತು ಇನ್ ಫ್ಲೂ ಯೆಂಜಾ ಮತ್ತು ಸೀತಾಳೆ ಸಿಡುಬು ಪೀಡಿತ ಮಕ್ಕಳು ಆಸ್ಪಿರಿನ್ ಸೇವಿಸಬಾರದು. "ರೆಯೇಸ್ ಸಿಂಡ್ರೋಮ್" ಎನ್ನುವ ಮಕ್ಕಳನ್ನು ಕಾಡುವ ಗಂಭೀರ ಸಮಸ್ಯೆಗೆ ಕಾರಣವೆನಿಸುವುದರಿಂದಾಗಿ, ಮಕ್ಕಳಿಗೆಂದೇ ತಯಾರಿಸುತ್ತಿದ್ದ ಆಸ್ಪಿರಿನ್ ಉತ್ಪನ್ನಗಳನ್ನು ಬಹುತೇಕ ದೇಶಗಳು ಹಲವಾರು ವರ್ಷಗಳ ಹಿಂದೆಯೇ ನಿಷೇಧಿಸಿವೆ. 

ಸುದೀರ್ಘಕಾಲ ಆಸ್ಪಿರಿನ್ ಸೇವಿಸಿದ ಗರ್ಭಿಣಿಯರಲ್ಲಿ ವಿಳಂಬಿತ ಹೆರಿಗೆ,ಪ್ರಸವೋತ್ತರ ಅಧಿಕ ರಕ್ತಸ್ರಾವ ಮತ್ತು ಹುಟ್ಟುವ ಮಗುವಿನ ತೂಕ ಕಡಿಮೆಯಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಗರ್ಭಿಣಿಯರು ಆಸ್ಪಿರಿನ್ ಸೇವಿಸಬಾರದು. ಅದೇ ರೀತಿಯಲ್ಲಿ ಮಗುವಿಗೆ ಮೊಲೆಹಾಲು ಉಣಿಸುವ ಮಾತೆಯರು ಆಸ್ಪಿರಿನ್ ಸೇವಸದಿರುವುದು ಹಿತಕರ. ಆಸ್ಪಿರಿನ್ ಸೇವಿಸುವ ವ್ಯಕ್ತಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗುವ ಒಂದು ವಾರದ ಮೊದಲೇ ಇದರ ಸೇವನೆಯನ್ನು ನಿಲ್ಲಿಸಬೇಕಾಗುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೦೪-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




No comments:

Post a Comment