Tuesday, November 26, 2013

Self medication can be dangerous



                                              ಸ್ವಯಂ ವೈದ್ಯರಾಗದಿರಿ ಜೋಕೆ!

ವೈದ್ಯರನ್ನು ಸಂದರ್ಶಿಸಿ ಸಲಹೆಯನ್ನು ಪಡೆಯುವುದು ಔಷದ ಸೇವಿಸಲೇಬೇಕಾದ ಅನಿವಾರ್ಯತೆಗಾಗಿ ಅಲ್ಲ ಎನ್ನುವುದನ್ನು ಅರಿತಿರಿ. ಹೊಸ ವೈದ್ಯರಿಗಿಂತ ಹಳೆ ರೋಗಿ ಮೇಲು ಎನ್ನುವ ಗಾದೆಮಾತನ್ನು ಕೇಳಿ, ಸ್ವಯಂ ವೈದ್ಯರಾದಲ್ಲಿ ಪರಿಣಾಮ ಏನಾಗುವುದೆಂಬ ಕೆಲವು ನಿದರ್ಶನಗಳು ಇಲ್ಲಿವೆ. 
----------            ----------------                      ---------------------                  -----------------------           --------------           ------------

    ಬಿರ್ಮಣ್ಣನ ಬಿ. ಪಿ 

೪೮ ವರ್ಷದ ಕಟ್ಟುಮಸ್ತಾದ  ಶರೀರ ಹೊಂದಿದ್ದ ಬಿರ್ಮಣ್ಣನು ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದನು. ಅವಿದ್ಯಾವಂತನಾದರೂ ಆತನ ಲೋಕಜ್ಞಾನ ಅಪಾರವಾಗಿತ್ತು. ತುಸು ಅಧಿಕಪ್ರಸಂಗಿತನ ಆತನ ಸ್ವಭಾವಗಳಲ್ಲಿ ಒಂದಾಗಿತ್ತು. 

ಸುಮಾರು ಮೂರು ವರ್ಷಗಳ ಹಿಂದೆ ಉರಿಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಬಿರ್ಮಣ್ಣನು ಆಕಸ್ಮಿಕವಾಗಿ ತಲೆತಿರುಗಿದಂತಾಗಿ ಬಿದ್ದಿದ್ದನು. ತನ್ನ ಸಮಸ್ಯೆಗೆ ಪಿತ್ತಬಾಧೆಯೇ ಕಾರಣವೆಂದು ಭಾವಿಸಿ, ಸಾಕಷ್ಟು ಮನೆಮದ್ದು ಮಾಡಿದರೂ ಆತನ ತಲೆತಿರುಗುವಿಕೆ ಕಡಿಮೆಯಾಗಿರಲಿಲ್ಲ. ಅಂತಿಮವಾಗಿ ಸಮೀಪದ ವೈದ್ಯರನ್ನು ಭೇಟಿಯಾಗಿ, ತನ್ನ ಸಮಸ್ಯೆ ಹಾಗೂ ತಲೆಗೆ ಲಿಂಬೆ ಹುಳಿಯ ರಸ ಹಾಕುವುದರಿಂದ ಆರಂಭಿಸಿ, "ಪುನಾರ್ಪುಳಿ"( ಬಿರಿಂಡ) ಯ ಶರಬತ್ತನ್ನು ಕುಡಿಯುವ ತನಕ ಪಿತ್ತೋದ್ರೇಕದ ವಿವಿಧ ಚಿಕಿತ್ಸೆಗಳ ವಿವರಗಳನ್ನು ವೈದ್ಯರಲ್ಲಿ ಹೇಳಿದ್ದನು. ಆದರೆ ಇಷ್ಟೆಲ್ಲಾ ಚಿಕಿತ್ಸೆಗಳನ್ನು ಮಾಡಿದ್ದರೂ, ಆತನ ಸಮಸ್ಯೆ ಪರಿಹಾರವಾಗಿರದ ಬಗ್ಗೆ ಬಿರ್ಮಣ್ಣನ ಬಳಿ ಉತ್ತರವಿರಲಿಲ್ಲ!. 

ಅವಶ್ಯಕ ಪರೀಕ್ಷೆಗಳ ಬಳಿಕ ಬಿರ್ಮಣ್ಣನನ್ನು ಕಾಡುತ್ತಿದ್ದ ಅಧಿಕ ರಕ್ತದೊತ್ತಡವನ್ನು ಪತ್ತೆಹಚ್ಚಿದ ವೈದ್ಯರು, ನಿಯಮಿತವಾಗಿ ಔಷದವನ್ನು ಸೇವಿಸಿ ವಾರದಲ್ಲೊಮ್ಮೆ ಬಂದು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವಂತೆ ಹೇಳಿದ್ದರು. ಕೆಲವೇ ದಿನಗಳಲ್ಲಿ ಬಿರ್ಮಣ್ಣನ ಬಿ. ಪಿ ನಿಯಂತ್ರಣಕ್ಕೆ ಬರುವುದರೊಂದಿಗೆ, ತಲೆತಿರುಗುವಿಕೆಯೂ ಮಾಯವಾಗಿತ್ತು. ಮುಂದೆ ತಿಂಗಳಿಗೊಮ್ಮೆ ವೈದ್ಯರಲ್ಲಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಂಡು, ಔಷದವನ್ನು ಪಡೆಯುವುದು ವಾಡಿಕೆಯಾಯಿತು. ಆದರೆ ಸುಮಾರು ಮೂರು ವರ್ಷಗಳ ಬಳಿಕ ಬಿರ್ಮಣ್ಣನ ಭೇಟಿ ಹಠಾತ್ ನಿಂತು ಹೋಗಿತ್ತು. 

ಇದಾಗಿ  ಸುಮಾರು ಮೂರು ತಿಂಗಳುಗಳ ಬಳಿಕ ಬಿರ್ಮಣ್ಣನ ಪತ್ನಿಯಿಂದ ವೈದ್ಯರಿಗೆ ತುರ್ತು ಕರೆ ಬಂದೊಡನೆ ಆತನ ಮನೆಗೆ ಧಾವಿಸಿದ್ದ ವೈದ್ಯರಿಗೆ, ಶರೀರದ ಬಲಭಾಗ ಪಕ್ಷವಾತ ಪೀಡಿತವಾಗಿ ಮಲಗಿದ್ದ ಬಿರ್ಮಣ್ಣನನ್ನು ಕಂಡು ವಿಷಾದವಾಗಿತ್ತು. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ತುರ್ತು ಚಿಕಿತ್ಸೆಯನ್ನು ನೀಡಲಾಯಿತು. 

ಈ ಪರಿಸ್ಥಿತಿಗೆ ಕಾರಣವೇನೆಂದು ಬಿರ್ಮಣ್ಣನ ಮಗನ ಬಳಿ ಪ್ರಶ್ನಿಸಿದಾಗ ದೊರೆತ ಉತ್ತರದಿಂದ ವೈದ್ಯರಿಗೆ ಅಚ್ಚರಿಯಾಗಿತ್ತು. ಸುಮಾರು ಮೂರು ವರ್ಷಗಳಿಂದ ಕ್ರಮಬದ್ಧವಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದ ಬಿರ್ಮಣ್ಣನಿಗೆ, ಪ್ರತಿಬಾರಿ ವೈದ್ಯರು ನಿನ್ನ ಬಿ. ಪಿ ನಾರ್ಮಲ್ ಇದೆ, ಆದರೆ ಮಾತ್ರೆಗಳ ಸೇವನೆಯನ್ನು ನಿಲ್ಲಿಸಬೇಡ ಎಂದು ಹೇಳುವುದು ಏಕೆಂದು ಆತನಿಗೆ ಅರ್ಥವಾಗಿರಲಿಲ್ಲ. ಈ ಚಿದಂಬರ ರಹಸ್ಯವನ್ನು ಭೇದಿಸಲು ಬಿರ್ಮಣ್ಣನು ಔಷದ ಸೇವನೆಯನ್ನು ನಿಲ್ಲಿಸಿ ನಡೆಸಿದ ಪ್ರಯೋಗ ಈ ರೀತಿಯಲ್ಲಿ ಅಂತ್ಯಗೊಂಡಿತ್ತು!. 

ಶಾಶ್ವತವಾಗಿ ಗುಣವಾಗದಂತಹ ಕಾಯಿಲೆಗಳಲ್ಲಿ ಜೀವನಪರ್ಯಂತ ಚಿಕಿತ್ಸೆ ಅನಿವಾರ್ಯ. ವೈದ್ಯರ ಆದೇಶವಿಲ್ಲದೇ ಅಥವಾ ನಕಲಿ ವೈದ್ಯರ ಪೊಳ್ಳು ಭರವಸೆಗಳನ್ನು ನಂಬಿ, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನೇಕ ರೋಗಿಗಳು ಬಿರ್ಮಣ್ಣನಂತೆಯೇ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ನಿಜಕ್ಕೂ ವಿಷಾದನೀಯ. 

ಉರಿಮೂತ್ರಕ್ಕೆ ಕಾರಣ -"ಉಷ್ಣ"!

ಗ್ಯಾರೇಜ್ ಒಂದರಲ್ಲಿ ಮೆಕಾನಿಕ್ ಆಗಿದ್ದ ಮಧ್ಯವಯಸ್ಸಿನ ಅಣ್ಣು ಮಿತಭಾಷಿ. ದಿನವಿಡೀ ದುಡಿಯುತ್ತಿದ್ದ ಆತನಿಗೆ ಯಾವುದೇ ದುಶ್ಚಟಗಳೇ ಇರಲಿಲ್ಲ. ಆದರೆ ಇತ್ತೀಚಿನ ಕೆಲದಿನಗಳಿಂದ ಅಣ್ಣುವಿಗೆ ಉರಿಮೂತ್ರದ ಸಮಸ್ಯೆ ಪ್ರಾರಂಭವಾಗಿತ್ತು. "ಉಷ್ಣದಿಂದ ಈ ಸಮಸ್ಯೆ ಉಂಟಾಗಿದೆಯೆಂದು ನಂಬಿದ ಆತನು ದಿನಕ್ಕೆರಡು ಎಳನೀರನ್ನು ಕುಡಿಯುತ್ತಿದ್ದನು. ಎಳನೀರು ಕುಡಿದಾಗ ಕೊಂಚ ಸಮಾಧಾನವಾದರೂ, ಸಮಸ್ಯೆ ಮಾತ್ರ ಪರಿಹಾರವಾಗಲೇ ಇಲ್ಲ. ಪದೇಪದೇ ಮೂತ್ರ ವಿಸರ್ಜಿಸಬೇಕಾದ ತೊಂದರೆಯೊಂದಿಗೆ ಅಸಹನೀಯ ಉರಿ ಮತ್ತು ನೋವುಗಳೊಂದಿಗೆ ಇದೀಗ ಮೂತ್ರದಲ್ಲಿ ಒಂದಿಷ್ಟು ರಕ್ತವೂ ಕಂಡುಬಂದಿತ್ತು. ಇದರಿಂದ ಗಾಬರಿಗೊಂಡ ಅಣ್ಣು, ಪರಿಚಿತ ವೈದ್ಯರಲ್ಲಿ ಧಾವಿಸಿದ್ದನು. ಪ್ರಯೋಗಾಲಯದಲ್ಲಿ ಆತನ ಮೂತ್ರವನ್ನು ಪರೀಕ್ಷಿಸಿದ ವೈದ್ಯರಿಗೆ ಮೂತ್ರನಾಳದ ಸೋಂಕು ಪತ್ತೆಯಾಗಿತ್ತು. ಒಂದು ವಾರದ ಚಿಕಿತ್ಸೆಯಿಂದ ಚೇತರಿಸಿಕೊಂಡ ಅಣ್ಣುವಿಗೆ ದಿನದಲ್ಲಿ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಲು ಸೂಚಿಸಿದ್ದ ವೈದ್ಯರ ಸಲಹೆಯನ್ನು ಪರಿಪಾಲಿಸುವುದು ವಾಡಿಕೆಯಾಯಿತು. ಆದರೆ ದಿನದಲ್ಲಿ ಕನಿಷ್ಠ ಒಂದು ಎಳನೀರನ್ನು ಕುಡಿಯುವುದನ್ನು ಆತನು ಇಂದಿಗೂ ನಿಲ್ಲಿಸಿಲ್ಲ. ಏಕೆಂದು ಯಾರಾದರೂ ಕೇಳಿದರೆ ಅಣ್ಣು ನೀಡುವ ಉತ್ತರ "ನಾನು ಮಾಡುತ್ತಿರುವ ಕಬ್ಬಿಣದ ಕೆಲಸವೇ ಉಷ್ಣ"!. 

ಇಂಜೆಕ್ಷನ್ ಗೆ ಬದಲಾಗಿ ಮಾತ್ರೆ!

ಕೃಷಿ ಕಾರ್ಮಿಕ ಕೊರಗಪ್ಪನು ಧಣಿಗಳ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಆತನ ಪಾದಕ್ಕೆ ತುಕ್ಕುಹಿಡಿದ ಮೊಳೆಯೊಂದು ಚುಚ್ಚಿತ್ತು. ವಿಷಯವರಿತ ಧಣಿಗಳು ತಕ್ಷಣ ವೈದ್ಯರಲ್ಲಿ ಹೋಗಿ ಧನುರ್ವಾತ ನಿರೋಧಕ ಇಂಜೆಕ್ಷನ್ ಪಡೆಯುವಂತೆ ಹೇಳಿ ಹಣವನ್ನೂ ನೀಡಿದರು. 

ತನ್ನ ಜನ್ಮದಲ್ಲೇ ಇಂಜೆಕ್ಷನ್ ತೆಗೆದುಕೊಳ್ಳದ ಕೊರಗಪ್ಪನಿಗೆ ಇದೀಗ ಪ್ರಾಣಸಂಕಟ ಶುರುವಾಯಿತು. ಇಂಜೆಕ್ಷನ್ ಪಡೆಯಲಿಲ್ಲವೆಂದು ತಿಳಿದರೆ ಧಣಿಗಳ ಕೋಪಕ್ಕೆ ಗುರಿಯಾಗಬೇಕಾದ ಕಾರಣದಿಂದ,  ಹೆದರುತ್ತಲೇ ವೈದ್ಯರಲ್ಲಿ ತೆರಳಿ ಆಣಿ ತಾಗಿದ್ದಕ್ಕೆ  ನೀಡುವ ಇಂಜೆಕ್ಷನ್ ಗೆ ಬದಲಾಗಿ ಮಾತ್ರೆಯನ್ನು ನೀಡುವಂತೆ ವಿನಂತಿಸಿದ್ದನು. ವೈದ್ಯರು ಈ ಇಂಜೆಕ್ಷನ್ ಗೆ ಬದಲಾಗಿ ಯಾವುದೇ ಮಾತ್ರೆ ಲಭ್ಯವಿಲ್ಲವೆಂದು ಎಷ್ಟು ತಿಳಿಹೇಳಿದರೂ ಕೊರಗಪ್ಪನಿಗೆ ಮಾತ್ರ ಅರ್ಥವಾಗಲಿಲ್ಲ. ಸಾಕಷ್ಟು ಚರ್ಚೆ ನಡೆಸಿದ ಆತನು ಅಂತಿಮವಾಗಿ ಇಂಜೆಕ್ಷನ್ ಪಡೆಯದೇ ಹೊರನಡೆದಿದ್ದನು. 

ಸುಮಾರು ಅರ್ಧಗಂಟೆಯ ಬಳಿಕ ಮರಳಿದ ಕೊರಗಪ್ಪನು ಕೋಪೋದ್ರಿಕ್ತನಾಗಿದ್ದನು. ವೈದ್ಯರ ಬಳಿ ತಾನು ತಂದಿದ್ದ ಮೂರು ಕ್ಯಾಪ್ಸೂಲ್ ಗಳನ್ನು ತೋರಿಸುತ್ತಾ, ನೀವು ಲಭ್ಯವಿಲ್ಲವೆಂದು ಹೇಳಿದ ಮಾತ್ರೆ ಇದೋ ನೋಡಿ......... , ಮೆಡಿಕಲ್ ನಲ್ಲಿ ನಾನೇ ಕೇಳಿ ಪಡೆದಿದ್ದು ಎಂದು ಹೇಳಿದ್ದನು. ಆತನಿಂದ ಮಾತ್ರೆಗಳನ್ನು ಪಡೆದು ಪರೀಕ್ಷಿಸಿದ ವೈದ್ಯರಿಗೆ "ಟೆಟ್ರಾ ಸೈಕ್ಲಿನ್" ಕ್ಯಾಪ್ಸೂಲ್ ಗಳನ್ನು ಕಂಡು ಅಚ್ಚರಿಯಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಈ ಮಾತ್ರೆಗಳಿಗೂ ಧನುರ್ವಾತದ ಇಂಜೆಕ್ಷನ್ ಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಕೊರಗಪ್ಪನೊಂದಿಗೆ ವಾಗ್ವಾದ ಮಾಡಲು ಅಸಫಲನಾದ ಔಷದ ಅಂಗಡಿಯ ಮಾಲಕನು, ಈ ಮೂರು ಕ್ಯಾಪ್ಸೂಲ್ ಗಳನ್ನು ನೀಡಿ ಆತನನ್ನು ಸಾಗಹಾಕಿದ್ದನು. 

ಆದರೆ ಕೊರಗಪ್ಪನ ದೃಷ್ಟಿಯಲ್ಲಿ ಸತ್ಯವನ್ನು ಹೇಳಿದ್ದ ವೈದ್ಯರು ಫಟಿಂಗನಂತೆ ಹಾಗೂ ಮಾತ್ರೆಯನ್ನು ನೀಡಿದ್ದ ಅಂಗಡಿಯಾತ ಸತ್ಯ ಹರಿಶ್ಚಂದ್ರನಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ!. 

ಸ್ವಯಂ ವೈದ್ಯೆ ರತ್ನಮ್ಮ 

ಅದೊಂದು ರಾತ್ರಿ ಸುಮಾರು ಹತ್ತು ಗಂಟೆಯ ಸಮಯದಲ್ಲಿ ರತ್ನಮ್ಮನ ಮನೆಯಿಂದ ದೂರವಾಣಿ ಕರೆ ಬಂದಾಗ ಹೋಗಿದ್ದ ವೈದ್ಯರಿಗೆ, ಪುಟ್ಟ ರಾಜೇಶನು ತೀವ್ರಗೊಂಡ ಜ್ವರ ತಲೆಗೇರಿ "ಫಿಟ್ಸ್" (ಅಪಸ್ಮಾರದಂತಹ ಸೆಳೆತಗಳು) ನಿಂದ ನರಳುತ್ತಿದ್ದುದನ್ನು ಕಂಡು ತುರ್ತು ಚಿಕಿತ್ಸೆಯನ್ನು ನೀಡಿದ್ದರು. ಬಳಿಕ ರಾಜೇಶನ ಜ್ವರದ ವಿವರಗಳನ್ನು ಕೇಳಿದಾಗ, ಸುಮಾರು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದುದು ತಿಳಿದುಬಂದಿತ್ತು. ವಿಶೇಷವೆಂದರೆ ಆರು ತಿಂಗಳ ಹಿಂದೆ ಇದೇ ವೈದ್ಯರು ರಾಜೇಶನ ಶೀತ ಜ್ವರಗಳಿಗೆ ನೀಡಿದ್ದ ಔಷದದಲ್ಲಿ ಅರ್ಧದಷ್ಟನ್ನು ಉಳಿಸಿದ್ದ ರತ್ನಮ್ಮನು, ಅದೇ ಔಷದವನ್ನು ಇದೀಗ ಮೊಮ್ಮಗನಿಗೆ ನೀಡಿದ್ದರು. ರಾಜೇಶನನ್ನು ಬಾಧಿಸುತ್ತಿರುವ ಟಾನ್ಸಿಲೈಟಿಸ್ ಕಾಯಿಲೆಯು ಶೀತ ಜ್ವರಗಳಿಗೆ ನೀಡಿದ್ದ ಹಳೆಯ ಔಷದಗಳಿಗೆ ಮಣಿದಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಉಲ್ಬನಿಸಿದ್ದ ಜ್ವರವು ತಲೆಗೇರಿದ ಪರಿಣಾಮವಾಗಿ ರಾಜೇಶನಿಗೆ ಫಿಟ್ಸ್ ಬಾಧಿಸಿತ್ತು. 

ಇನ್ನು ಮುಂದೆ ಇಂತಹ ತಪ್ಪನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ನೀಡಿದ ವೈದ್ಯರು ರಾಜೇಶನಿಗೆ ಅವಶ್ಯಕ ಔಷದಗಳನ್ನು ನೀಡಿ ಮರಳಿದ್ದರು. 

ಪುಂಡಜ್ಜನ ಮಲಬದ್ಧತೆ 

ಅರುವತ್ತು ವರ್ಷ ವಯಸ್ಸಿನ ಪುಂಡಜ್ಜನಿಗೆ ಹಲವಾರು ವರ್ಷಗಳಿಂದ ಮಲಬದ್ಧತೆಯ ಸಮಸ್ಯೆ ಇದ್ದಿತು. ಇದನ್ನು ಪರಿಹರಿಸಲು ಅವರು ಸೇವಿಸಿದ್ದ ಔಷದಗಳೂ ಅಸಂಖ್ಯ. ಯಾವುದೇ ಔಷದಕ್ಕೆ ಮಣಿಯದ ತನ್ನ ಸಮಸ್ಯೆಯು ಅಂತಿಮವಾಗಿ ಅವರ ಸೋದರಳಿಯ ಹಾಗೂ ವೈದ್ಯ ಸೂಚಿಸಿದ್ದ "ಇಚ್ಛಾ ಭೇದಿ" ಮಾತ್ರೆಯ ಸೇವನೆಯಿಂದ ತಕ್ಕಮಟ್ಟಿಗೆ ಶಮನಗೊಂಡಿತ್ತು. ಆಡುಮಾತಿನಂತೆ "ಜಾಪಾಳ ಮಾತ್ರೆ, ಕೈಲಾಸ ಯಾತ್ರೆ" ಎಂದು ಪ್ರಖ್ಯಾತವಾಗಿದ್ದ ಈ ಔಷದವು, ಪುಂಡಜ್ಜನ ಪಾಲಿಗೆ ಸಾಕ್ಷಾತ್ ಸಂಜೀವಿನಿಯಾಗಿ ಪರಿಣಮಿಸಿತ್ತು. 

ಹಲವಾರು ದಿನಗಳ ಬಳಿಕ ಸಮಾರಂಭವೊಂದಕ್ಕೆ ಬಂದಿದ್ದ ಬಂಧುವೊಬ್ಬರು ಒಂದೆರಡು ದಿನ ಪುಂಡಜ್ಜನ ಮನೆಯಲ್ಲಿ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಮಲಬದ್ಧತೆಯಿಂದ ತೊಂದರೆಗೀಡಾದ ಈ ಬಂಧುವಿಗೆ ಪುಂಡಜ್ಜನು ತಾನು ಸೇವಿಸುವ ಅದ್ಭುತ ಮಾತ್ರೆಯೊಂದನ್ನು ನೀಡಿದ್ದರು. ಮಾತ್ರೆಯನ್ನು ನುಂಗಿದ ಬಂಧುವಿಗೆ ಮುಂದೆ ಬಂದೆರಗಲಿರುವ ಆಪತ್ತಿನ ಸುಳಿವೇ ಇರಲಿಲ್ಲ. 

ಮಾತ್ರೆಯನ್ನು ಸೇವಿಸಿದ ಒಂದೆರಡು ಗಂಟೆಯ ಬಳಿಕ ಆರಂಭವಾಗಿದ್ದ ಭೇದಿ ಮಾತ್ರ ನಿಲ್ಲಲೇ ಇಲ್ಲ. ಹೊಟ್ಟೆನೋವು ಮತ್ತು ಭೇದಿಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಈ ಬಂಧುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಚಿಕಿತ್ಸೆಯನ್ನು ನೀಡಬೇಕಾಯಿತು. ಇದರಿಂದಾಗಿ ಸಾಕಷ್ಟು ಸಂಕಟವನ್ನು ಅನುಭವಿಸಿದ ಬಂಧುವು, ಇನ್ನು ಮುಂದೆ ವೈದ್ಯರ ಸಲಹೆ ಪಡೆಯದೇ ಯಾವುದೇ ಔಷದವನ್ನು ಸೇವಿಸುವುದಿಲ್ಲವೆಂದು ಶಪಥವನ್ನು ಮಾಡಿದ್ದು ಪುಂಡಜ್ಜನಿಗೆ ತಿಳಿಯಲಿಲ್ಲ!. 

ಮಂತ್ರವೋ- ಮಾತ್ರೆಯೋ?

ತಮ್ಮ ಕುಟುಂಬ ಮಿತ್ರ ಸುಬ್ಬಣ್ಣನವರ ಅನಾರೋಗ್ಯದ ವಿಷಯ ತಿಳಿದೊಡನೆ ಅವರಲ್ಲಿ ತೆರಳಿದ್ದ ವೈದ್ಯರಿಗೆ ಸಾಕಷ್ಟು ದಣಿದಂತೆ ಕಾಣುತ್ತಿದ್ದ ಸುಬ್ಬಣ್ಣರ ಮುಖದಲ್ಲಿ ನೋವಿನ ಛಾಯೆಯೂ ಕಂಡಿತ್ತು. ಸುಬ್ಬಣ್ಣರೇ ಹೇಳಿದಂತೆ ಒಂದೆರಡು ದಿನಗಳಿಂದ ಬೆನ್ನು, ಹೆಗಲು ಮತ್ತು ಕುತ್ತಿಗೆಯ ಒಂದು ಪಾರ್ಶ್ವದಲ್ಲಿ ತೀವ್ರ ನೋವುಗಳೊಂದಿಗೆ ಜ್ವರವೂ ಬಾಧಿಸಲಾರಂಭಿಸಿತ್ತು. ಇದೀಗ ನೋವಿದ್ದ ಭಾಗದಲ್ಲಿ ನೀರು ತುಂಬಿದ ಗುಳ್ಳೆಗಳು ಮೂಡಿದ್ದು, ಮೇಲ್ನೋಟಕ್ಕೆ "ಸರ್ಪಸುತ್ತು" ಎಂದು ಕರೆಯಲ್ಪಡುವ "ಹರ್ಪಿಸ್" ಕಾಯಿಲೆ ಬಾಧಿಸಿರುವುದು ವೈದ್ಯರಿಗೆ ಖಚಿತವಾಗಿತ್ತು. ಈ ಕಾಯಿಲೆಗೆ ಆಧುನಿಕ ಹಾಗೂ ನಿಶ್ಚಿತವಾಗಿ ಇದನ್ನು ಗುಣಪಡಿಸಬಲ್ಲ ಔಷದಗಳು ಇವೆಯೆಂದ ವೈದ್ಯರು, ಒಂದೆರಡು ವಾರಗಳಲ್ಲಿ ಇದು ಗುಣವಾಗುವುದೆನ್ನುವ ಭರವಸೆಯನ್ನು ನೀಡಿದರು. 

ಚಿಂತಾಕ್ರಾಂತ ಸುಬ್ಬಣ್ಣರ ಮುಖವನ್ನು ನೋಡುತ್ತಲೇ ವೈದ್ಯರಿಗೆ ರೋಗಿಯ "ಧರ್ಮಸಂಕಟ"ದ ಅರಿವಾಯಿತು. ಏಕೆಂದರೆ ಬಹುತೇಕ ಜನರು ನಂಬಿರುವಂತೆ ಈ ಸರ್ಪದ ಹೆಡೆ ಮತ್ತು ಬಾಲಗಳು ಸೇರಿದಲ್ಲಿ ರೋಗಿಯ ಮರಣ ಖಚಿತ ಎನ್ನುವುದು ಶತ ಪ್ರತಿಶತ ಸುಳ್ಳು ಎಂದು ವೈದ್ಯರು ಸಾರಿ ಹೇಳಿದರೂ, ಸುಬ್ಬಣ್ಣರಿಗೆ ಸಮಾಧಾನವಾಗಿರಲಿಲ್ಲ. ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದ ಸುಬ್ಬಣ್ಣರು, ಅಂತಿಮವಾಗಿ ಹಳ್ಳಿಮದ್ದು ಮತ್ತು ಮಂತ್ರವಾದ ಚಿಕಿತ್ಸೆ ಮಾಡುವುದಾಗಿ ನಿರ್ಧರಿಸಿದ್ದರು.

ಸುಮಾರು ಹತ್ತು ದಿನಗಳ ಬಳಿಕ ಸುಬ್ಬಣ್ಣರಲ್ಲಿಂದ ತುರ್ತು ಕರೆ ಬಂದಾಗ ವಿಳಂಬಿಸದೇ ತೆರಳಿದ್ದ ವೈದ್ಯರಿಗೆ ಸುಬ್ಬಣ್ಣರನ್ನು ಕಂಡು ಆಶ್ಚರ್ಯವಾಗಿತ್ತು. ಅವರ ಬೆನ್ನು,ಹೆಗಲು, ಕುತ್ತಿಗೆ ಮತ್ತು ಹಣೆಗಳ ಭಾಗದಲ್ಲಿ ಹಳ್ಳಿಮದ್ದಿನ ಲೇಪ ಹಾಕಲಾಗಿತ್ತು. ಕಾಯಿಲೆಯ ತೀವ್ರತೆ ಹಾಗೂ ಆಹಾರ ಸೇವನೆಯಲ್ಲಿ ಅನುಸರಿಸುತ್ತಿದ್ದ ಪಥ್ಯಗಳಿಂದಾಗಿ ಸರಿಯಾಗಿ ಆಹಾರವನ್ನು ಸೇವಿಸದ ಸುಬ್ಬಣ್ಣರ ಮುಖದಲ್ಲಿ ಪ್ರೇತಕಳೆ ಕಾಣಿಸುತ್ತಿತ್ತು. ಅವರ ಎಡ ಕಣ್ಣಿನಲ್ಲಿ ನೋವು ಮತ್ತು ದೃಷ್ಟಿಮಾಂದ್ಯಗಳೊಂದಿಗೆ ಬೆನ್ನು ಹಾಗೂ ಹೆಗಲಿನ ಭಾಗದಲ್ಲಿ ಛಳಕು ಹೊಡೆದಂತೆ ತೀವ್ರ ನೋವು ಬಾಧಿಸುತ್ತಿತ್ತು. 

ಸುಬ್ಬಣ್ಣರನ್ನು ಪರೀಕ್ಷಿಸಿದ ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ, ತಜ್ಞವೈದ್ಯರ ಚಿಕಿತ್ಸೆಯನ್ನು ಕೊಡಿಸಿದ್ದರು. ಒಂದು ವಾರದ ಚಿಕಿತ್ಸೆಯಿಂದ ಅವರ ದೃಷ್ಟಿಮಾಂದ್ಯ  ಹಾಗೂ ಲೇಪದಿಂದ ಉಲ್ಬನಿಸಿದ್ದ ಗುಳ್ಳೆಗಳು ಗುಣವಾಗಿದ್ದರೂ, ಹೊತ್ತುಗೊತ್ತಿಲ್ಲದೆ ಬಾಧಿಸುತ್ತಿದ್ದ ನೋವಿಗಾಗಿ ಸುದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು. ಆದರೆ ಸುಬ್ಬಣ್ಣರು ನಂಬಿದ್ದಂತೆ ಅವರ ಶರೀರದ ಮೇಲೆ ಮೂಡಿದ್ದ ಸರ್ಪಸುತ್ತಿನ ಹೆಡೆ ಮತ್ತು ಬಾಲಗಳು ಸೇರಿರಲೇ ಇಲ್ಲ!. ಅಂತೆಯೇ ಹಳ್ಳಿಮದ್ದಿನ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದಾಗಿ ಸೇವಿಸಿದ ಆಧುನಿಕ ಔಷದಗಳ ಪ್ರಭಾವದಿಂದ ಅವರ ದೃಷ್ಟಿಯೂ ನಾಶವಾಗಿರಲಿಲ್ಲ. ಯಾವ ಔಷದ ಈ ಕಾಯಿಲೆಗೆ ಸೂಕ್ತವಲ್ಲವೆಂದು ಸುಬ್ಬಣ್ಣರು ನಂಬಿದ್ದರೋ,ಅದೇ ಔಷದಗಳು ಅವರ ಸಮಸ್ಯೆಯನ್ನು ಬಗೆಹರಿಸಲು ಉಪಯುಕ್ತವೆನಿಸಿದ್ದವು. 

ವೆರಿಸೆಲ್ಲಾ ಎನ್ನುವ ವೈರಸ್ಗಳಿಂದ ಉದ್ಭವಿಸುವ ಸೀತಾಳೆ ಸಿಡುಬು ಗುಣವಾದರೂ, ಈ ವೈರಸ್ ಗಳು ಮನುಷ್ಯನ ಶರೀರದ ನರಗಳಲ್ಲಿ ನಿಷ್ಕ್ರಿಯವಾಗಿ ಉಳಿದುಕೊಳ್ಳುತ್ತವೆ. ಅವಕಾಶ ದೊರೆತಾಗ ಸಕ್ರಿಯಗೊಂಡು ಸರ್ಪಸುತ್ತಿಗೆ ಕಾರಣವೆನಿಸುತ್ತವೆ. ಈ ಕಾಯಿಲೆಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ವ್ಯಾಧಿ ಪ್ರತ್ಯಕ್ಷವಾದೊಡನೆ ಚಿಕಿತ್ಸೆ ಪ್ರಾರಂಭಿಸಿದಲ್ಲಿ ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಂತೆಯೇ ಸೀತಾಳೆ ಸಿಡುಬು ಮತ್ತು ಸರ್ಪಸುತ್ತು, ಇವೆರಡೂ ವಾಧಿಗಳನ್ನು ತಡೆಗಟ್ಟಬಲ್ಲ ವ್ಯಾಕ್ಸೀನ್ ಕೂಡಾ ಲಭ್ಯವಿದೆ. ಇದನ್ನು ಪಡೆದುಕೊಂಡಲ್ಲಿ ಇವೆರಡೂ ವ್ಯಾಧಿಗಳಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯಬಹುದಾಗಿದೆ. 

ಹುಚ್ಚುನಾಯಿ ಕಡಿತಕ್ಕೆ ಹಳ್ಳಿಮದ್ದು 

ಸಾಂತಪ್ಪ ಮತ್ತು ಈಚು ಚಿಕ್ಕ ಹಳ್ಳಿಯೊಂದರಿಂದ ನಗರದ ಹೈಸ್ಕೂಲಿಗೆ ಹೋಗುತ್ತಿದ್ದ ಗೆಳೆಯರು. ಅದೊಂದು ದಿನ ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ಎಲ್ಲಿಂದಲೋ ಓಡಿಬಂದ ಹುಚ್ಚು ನಾಯಿಯೊಂದು ಸಾಂತಪ್ಪನಿಗೆ ಕಚ್ಚಿತ್ತು. ಸಿಟ್ಟಿನಿಂದ ಕಲ್ಲುಬೀಸಿದ ಈಚುವನ್ನು ಅಟ್ಟಿಸಿಕೊಂಡು ಕಚ್ಚಿದ ನಾಯಿಯು ಓಡಿಹೋಗಿತ್ತು. ಗಾಯಗೊಂಡಿದ್ದ ಹುಡುಗರನ್ನು ಗ್ರಾಮಸ್ತರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಗಾಯವನ್ನು ತೊಳೆದು ಪಟ್ಟಿಹಾಕಿದ ದಾದಿಯು ಇಂಜೆಕ್ಷನ್ ನೀಡಲು ಬಂದಾಗ, ಸಾಂತಪ್ಪ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದನು. ಇಂಜೆಕ್ಷನ್ ಪಡೆದ ಈಚು ಆಸ್ಪತ್ರೆಯೆಲ್ಲ ಹುಡುಕಾಡಿದರೂ ಸಾಂತಪ್ಪ ಮಾತ್ರ ಕಾಣಸಿಗಲಿಲ್ಲ.

ಈಚುವಿನಿಂದ ವಿಷಯವರಿತ ಸಾಂತಪ್ಪನ ತಂದೆಯು ಮಗನನ್ನು "ಹಳ್ಳಿಮದ್ದು" ನೀದುವವರಲ್ಲಿ ಕರೆದೊಯ್ದನು. ಅಂದಿನಿಂದಲೇ ಸಾಂತಪ್ಪನಿಗೆ ಅಭೂತಪೂರ್ವ ಪಥ್ಯದೊಂದಿಗೆ ಕಷಾಯ- ಮಾತ್ರೆಗಳ ಸೇವನೆ ಆರಂಭವಾಗಿತ್ತು.  ಇದೇ ಸಂದರ್ಭದಲ್ಲಿ ಈಚು ಮಾತ್ರ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಪಡೆದುಕೊಳ್ಳುತ್ತಿದ್ದನು. 

ಸುಮಾರು ಮೂರು ತಿಂಗಳುಗಳ ಬಳಿಕ ಸಾಂತಪ್ಪನ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕಂಡು ಹೆದರಿದ ಆತನ ತಂದೆಯು, ಮಗನನ್ನು ಆಸ್ಪತ್ರೆಗೆ ಕರೆದೊಯ್ದರು. ಆತನನ್ನು ಪರೀಕ್ಷಿಸಿದ ವೈದ್ಯರು 'ನೀರಿನ ಭಯ" ಆರಂಭವಾಗಿರುವುದರಿಂದ ಚಿಕಿತ್ಸೆ ಅಸಾಧ್ಯವೆಂದು ಕೈಚೆಲ್ಲಿದ್ದರು. 

ಮುಂದೆ ಒಂದು ವಾರದ ದಿಗ್ಬಂಧನದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದ ಸಾಂತಪ್ಪನು,ಒಂದೆರಡು ದಿನಗಳಲ್ಲೇ ಕೊನೆಯುಸಿರೆಳೆದಿದ್ದನು.ರೇಬೀಸ್ ನಿರೋಧಕ ಇಂಜೆಕ್ಷನ್ ಪಡೆದುಕೊಳ್ಳದ ಸಾಂತಪ್ಪನು ಅನಾವಶ್ಯಕವಾಗಿ ತನ್ನ ಜೀವವನ್ನೇ ತೆತ್ತಿದ್ದನು. ಇಂತಹ ತಪ್ಪನ್ನು ಮಾಡದ ಈಚು ಇಂದಿಗೂ ಆರೋಗ್ಯದಿಂದಿದ್ದು, ಅಗಲಿದ ಮಿತ್ರನನ್ನು ನೆನಪಿಸಿ ಕಣ್ಣೀರಿಡುತ್ತಾನೆ. 

ನೀವೇನು ಮಾಡಬಹುದು?

ಯಾವುದೇ ಕಾಯಿಲೆ ಬಾಧಿಸಿದಾಗ ಪ್ರಾಥಮಿಕ ಹಂತದಲ್ಲೇ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದಲ್ಲಿ, ಅಲ್ಪಾವಧಿಯಲ್ಲೇ ಕನಿಷ್ಠ ಪ್ರಮಾಣದ ಔಷದ ಸೇವನೆಯಿಂದ ಗರಿಷ್ಟ ಪ್ರಮಾಣದ ಪರಿಹಾರ ಲಭಿಸುವುದು. 

ವೈದ್ಯರ ಸಲಹೆ ಪಡೆಯದೇ ಯಾವುದೇ ಔಷದಗಳನ್ನು ಸೇವಿಸದಿರಿ. ವೈದ್ಯರು ಸೂಚಿಸಿದ ಔಷದಗಳ ಬಗ್ಗೆ ಮತ್ತು ಇವುಗಳ ಸೇವನೆಯಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳಿ. ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ನಿಗದಿತ ಪ್ರಮಾಣದಲ್ಲಿ, ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಅವಧಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಔಷದದ ಪ್ರಮಾಣದಲ್ಲಿ ಸ್ವಯಂ ಬದಲಾವಣೆ ಮಾಡುವುದು ಅಥವಾ ನಿಲ್ಲಿಸುವುದು ಅಪಾಯಕರವೆಂದು ತಿಳಿದಿರಿ. ನೀವು ಸೇವಿಸುತ್ತಿರುವ ಔಷದಗಳನ್ನು ಅಂತಹದೇ ಸಮಸ್ಯೆಗಳಿರುವ ಇತರರಿಗೆ ನೀಡದಿರಿ. ವೈದ್ಯರು ನಿಮಗೆ ನೀಡಿದ ಔಷದದ ಚೀಟಿಯ ಆಧಾರದ ಮೇಲೆ ಅನಿರ್ದಿಷ್ಟಕಾಲ ಅಥವಾ ನಿಮಗೆ ಬೇಕೆನಿಸಿದಾಗ ಔಷದವನ್ನು ಸೇವಿಸುವುದು ಮಾರಕವೆನಿಸೀತು. ಗಂಭೀರ- ಮಾರಕ ಮತ್ತು ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳಲ್ಲಿ ಜೀವನಪರ್ಯಂತ ಔಷದ ಸೇವನೆ ಅನಿವಾರ್ಯವೆಂದು ಅರಿತಿರಿ. 

ಸ್ವಯಂ ಚಿಕಿತ್ಸೆಯ ಅಂಗವಾಗಿ ಗಳಿಗೆಗೊಂದು ಗುಳಿಗೆಯನ್ನು ನುಂಗುವ ಹವ್ಯಾಸ ಹಿತಕರವಲ್ಲ. ಅಂತಿಮವಾಗಿ "ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೩-೦೧-೨೦೦೩ ರ ಸಂಚಿಕೆಯ ಬಳಕೆದಾರ;ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



No comments:

Post a Comment