Wednesday, November 20, 2013

Dangerous Steroids



               ಸ್ಟೆರಾಯ್ಡ್ ಗಳು ಸರ್ವರೋಗಹರ ಸಂಜೀವಿನಿಯಲ್ಲ!

   ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು ಎನ್ನುವ ನಾಣ್ಣುಡಿಯು ಸ್ಟೆರಾಯ್ಡ್ ಎನ್ನುವ ಔಷದಗಳ ಬಗ್ಗೆ ನಿಶ್ಚಿತವಾಗಿಯೂ ಅನ್ವರ್ಥವೆನಿಸುತ್ತದೆ. ನಿಮ್ಮ ಕುಟುಂಬ ವೈದ್ಯರಿಂದ ಪ್ರಾರಂಭಿಸಿ, ವಿವಿಧ ತಜ್ಞವೈದ್ಯರ ಬತ್ತಳಿಕೆಗಳಲ್ಲೂ ಸ್ಥಾನಗಳಿಸಿರುವ ಈ ದಿವ್ಯ ಔಷದದ ಬಗ್ಗೆ ಅನೇಕ ವಿದ್ಯಾವಂತರಲ್ಲೂ ಸಾಕಷ್ಟು ತಪ್ಪುಕಲ್ಪನೆಗಳಿವೆ. ಕ್ಷುಲ್ಲಕ ಕಾಯಿಲೆಗಳಿಂದ ಹಿಡಿದು ಮನುಷ್ಯನ ಪ್ರಾಣಕ್ಕೆ ಎರವಾಗಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳಲ್ಲೂ ಬಳಸಲ್ಪಡುವ ಸ್ಟೆರಾಯ್ಡ್ ಗಳು ರೋಗಿಗಳ ಹಾಗೂ ವೈದ್ಯರ ಪಾಲಿಗೆ "ಸಂಜೀವಿನಿ" ಎನಿಸುವ ಬಗ್ಗೆ ಎರಡು ಮಾತಿಲ್ಲ. ಆದರೆ ಬಹುತೇಕ ಜನರು ನಂಬಿರುವಂತೆ, ಸ್ಟೆರಾಯ್ಡ್ ಗಳು ಸರ್ವರೋಗಹರ ಸಂಜೀವಿನಿಯಲ್ಲ!. 
-----------             ---------------            --------------                       -----------                 -------------------                 ----------------

  ಸ್ಟೆರಾಯ್ಡ್ ಗಳೆಂದರೇನು?

ಮಾನವ ಶರೀರದಲ್ಲಿರುವ "ಅಡ್ರಿನಲ್(ಗ್ರಂಥಿಗಳ) ಕಾರ್ಟೆಕ್ಸ್ ಸ್ವಾಭಾವಿಕವಾಗಿ ಸ್ರವಿಸುವ ವಿಭಿನ್ನ ಚೋದನಿ (ಹಾರ್ಮೋನ್) ಗಳಲ್ಲಿ ಸ್ಟೆರಾಯ್ಡ್ ಗಳೂ ಸೇರಿವೆ. ಸಾಂಪ್ರದಾಯಿಕವಾಗಿ ಕಾರ್ಟಿಕೋಸ್ಟೆರಾಯ್ಡ್ ಗಳೆಂದು ಗುರುತಿಸಲ್ಪಟ್ಟಿರುವ ಈ ಹಾರ್ಮೋನ್ ಗಳನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿದೆ. 

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿನ ಅಡ್ರಿನಲ್ ಗ್ರಂಥಿಗಳು ಪ್ರತಿನಿತ್ಯ ಸುಮಾರು ೨೦ ಮಿಲಿಗ್ರಾಂ ಹೈಡ್ರೋ ಕಾರ್ಟಿಸೋನ್ ಮತ್ತು ೦. ೨೫ ಮಿಲಿಗ್ರಾಂ ನಷ್ಟು ಪ್ರಮಾಣದ ಅಲ್ಡೋಸ್ಟೆರಾನ್ ಹಾರ್ಮೋನ್ ಗಳನ್ನು  ಸ್ರವಿಸುತ್ತವೆ. 

೧೯೩೦ ನೆ ಇಸವಿಯಲ್ಲಿ ಕೆಂಡಾಲ್ ಎನ್ನುವ ವೈದ್ಯಕೀಯ ವಿಜ್ಞಾನಿಯೊಬ್ಬರು ಸ್ಟೆರಾಯ್ಡ್ ಗಳನ್ನು ಗುರುತಿಸಿ,ಪ್ರತ್ಯೇಕಿಸಿದ ಬಳಿಕ ಇವುಗಳ ಗುಣಧರ್ಮಗಳನ್ನು ಅಧ್ಯಯನ ಮಾಡಿದ್ದರು. ಬಳಿಕ ೧೯೪೯ ರಲ್ಲಿ ಹೆಂಚ್ ಎನ್ನುವ ವಿಜ್ಞಾನಿಯೂ "ರುಮಟಾಯ್ಡ್ ಆರ್ಥ್ರೈಟಿಸ್ "ಪೀಡಿತ ರೋಗಿಗಳಿಗೆ ಸ್ಟೆರಾಯ್ಡ್ ಗಳನ್ನು ನೀಡಿದಾಗ ಅತ್ಯುತ್ತಮ ಪರಿಣಾಮ ದೊರೆಯುವುದನ್ನು ಅರಿತುಕೊಂಡರು. ವೈದ್ಯಕೀಯ ಕ್ಷೇತ್ರದಲ್ಲೇ ಮಹತ್ವಪೂರ್ಣವೆನಿಸಿದ ಈ ಸಂಶೋಧನೆಗಾಗಿ ಕೆಂಡಾಲ್, ರಿಚ್ ಸ್ಟೀನ್ ಮತ್ತು ಹೆಂಚ್ ಈ ಮೂವರು ವಿಜ್ಞಾನಿಗಳಿಗೆ ೧೯೫೦ ರಲ್ಲಿ ನೊಬೆಲ್ ಪುರಸ್ಕಾರವನ್ನು ನೀಡಲಾಗಿತ್ತು. 

ಮಾನವನನ್ನು ಪೀಡಿಸುವ ಹಲವಾರು ಕಾಯಿಲೆಗಳಲ್ಲಿ ಅನಿವಾರ್ಯವಾಗಿ ಬಳಸಲ್ಪಡುವ ಸ್ತೆರಾಯ್ದ್ ಗಳು ಮಾತ್ರೆ,ಇಜೆಕ್ಷನ್,ಮುಲಾಮು, ಇನ್ ಹೇಲರ್, ಕರ್ಣ- ನೇತ್ರ ಬಿಂದು ಇತ್ಯಾದಿ ರೂಪಗಳಲ್ಲಿ ಬಳಸಲ್ಪಡುತ್ತವೆ. 

ಪರಿಣಾಮಗಳು 

ಆಧುನಿಕ ವೈದ್ಯಪದ್ದತಿಯಲ್ಲಿ ಸ್ಟೆರಾಯ್ಡ್ ಗಳು ಅತ್ಯಂತ ಪ್ರಭಾವಶಾಲಿ ಹಾಗೂ ಶಕ್ತಿಯುತ ಔಷದಗಳೆಂದು ಮಾನ್ಯತೆ ಪಡೆದಿವೆ. ಆದರೆ ಯಾವುದೇ ವ್ಯಾಧಿಯ ಚಿಕಿತ್ಸೆಯಲ್ಲಿ ಇವುಗಳನ್ನು ಬಳಸುವಾಗ ಕೆಲವೊಂದು ಪ್ರಾಥಮಿಕ ನಿಯಮಗಳನ್ನು ಪರಿಪಾಲಿಸುವುದು ಅತ್ಯವಶ್ಯಕವೂ ಹೌದು. 

ಪ್ರಾಣಾಪಾಯದ ಸಂದರ್ಭಗಳಲ್ಲಿ ವೈದ್ಯರು ನೀಡುವ ಸ್ಟೆರಾಯ್ಡ್ ಗಳ ಪ್ರಮಾಣವು ತುಸು ಅಧಿಕವಾಗಿರುವುದಾದರೂ, ಇದರಿಂದಾಗಿ ಯಾವುದೇ ದುಷ್ಪರಿಣಾಮಗಳು ಉದ್ಭವಿಸುವ ಸಾಧ್ಯತೆಗಳು ಇರುವುದಿಲ್ಲ. ಸ್ಟೆರಾಯ್ಡ್ ಗಳನ್ನು ನೀಡಲೇಬಾರದೆಂದು ನಿರ್ಭಂಧಿಸಿರುವ ಕೆಲ ನಿರ್ದಿಷ್ಟ ಕಾಯಿಲೆಗಳನ್ನು ಹೊರತುಪಡಿಸಿ, ಇತರ ಕಾಯಿಲೆಗಳ ಅಲ್ಪಾವಧಿಯ ಚಿಕಿತ್ಸೆಯೂ ಹಾನಿಕರವೆನಿಸದು. ಆದರೆ ಇವುಗಳ ದೀರ್ಘಕಾಲೀನ ಸೇವನೆಯು ಅನೆಕವಿಧದ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸ್ಟೆರಾಯ್ಡ್ ಗಳನ್ನು ಅವಶ್ಯಕ ಪ್ರಮಾಣದಲ್ಲಿ ನೀಡಲಾರಂಭಿಸಿ, ಕ್ರಮೇಣ ಇವುಗಳ ಪ್ರಮಾಣವನ್ನು ಕಡಿಮೆಮಾಡುತ್ತಾ ಬಂದು, ಅಂತಿಮವಾಗಿ ಇವುಗಳ ಸೇವನೆಯನ್ನು ನಿಲ್ಲಿಸಬೇಕಾಗುವುದು. 

ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ರುಮಟಾಯ್ಡ್ ಆರ್ಥ್ರೈಟಿಸ್,ರುಮಾಟಿಕ್ ಜ್ವರ,ಗೌಟ್,ತೀವ್ರ ಉಲ್ಬಣಿಸಿರುವ ಆಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಸ್ವಯಂ ಪ್ರತಿರೋಧಕ ವ್ಯಾಧಿಗಳು,ಕಣ್ಣು,ಕರುಳು, ಮೆದುಳು ಹಾಗೂ ಚರ್ಮ ಸಂಬಂಧಿತ ನಿರ್ದಿಷ್ಟ ವ್ಯಾಧಿಗಳು,ಕೆಲವಿಧದ ಕ್ಯಾನ್ಸರ್ ಗಳು, ಬದಲಿ ಮೂತ್ರಪಿಂಡ- ಹೃದಯಗಳನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯ ಬಳಿಕ, ಕೆಲವಿಧದ ಮೂತ್ರಾಂಗ ಸಂಬಂಧಿತ ಕಾಯಿಲೆಗಳಲ್ಲಿ ಹಾಗೂ ಅಡ್ರಿನಲ್ ಮತ್ತು ಪಿಟ್ಯೂಟರಿ ಗ್ರಂಥಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಲ್ಲಿ ಸ್ಟೆರಾಯ್ಡ್ ಗಳ ಬಳಕೆಯು ಉಪಯುಕ್ತವೆನಿಸುವುದು. ಸಾಮಾನ್ಯವಾಗಿ ನೀವೂ ಕಂಡಿರಬಹುದಾದ ಔಷದಜನ್ಯ ಅಥವಾ ಇತರ ಕಾರಣಗಳಿಂದ ಉದ್ಭವಿಸಬಲ್ಲ "ತೀವ್ರ ಸ್ವರೂಪದ ಅಲರ್ಜಿ" ಯಲ್ಲಿ ಸ್ಟೆರಾಯ್ಡ್ ಗಳು ನಿಸ್ಸಂದೇಹವಾಗಿಯೂ ಪ್ರಾಣ ರಕ್ಷಕವೆನಿಸುತ್ತವೆ. 

ಪ್ರತಿಕೂಲ- ಅಡ್ಡ ಪರಿಣಾಮಗಳು 

ಸ್ಟೆರಾಯ್ಡ್ ಗಳ ದೀರ್ಘಕಾಲೀನ ಸೇವನೆಯ ಪರಿಣಾಮಗಳು ಖಚಿತವಾಗಿಯೂ ರೋಗಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ಅನಿವಾರ್ಯ ಸಂದರ್ಭಗಳಲ್ಲಿ ಅಪರೂಪವಾಗಿ ಸೂಚಿಸುವ ಸ್ಟೆರಾಯ್ಡ್ ಗಳನ್ನು ನಿಗದಿತ ಅವಧಿಗಿಂತ ಅಧಿಕ ಕಾಲ ಅಥವಾ ಸ್ವೇಚ್ಛೆಯಿಂದ ಪದೇಪದೇ ಬಳಸುವುದು ಅಪಾಯಕಾರಿ ಎನ್ನುವುದು ನೆನಪಿರಲಿ. 

ಆದರೆ ಅನೇಕ ವಿದ್ಯಾವಂತರೂ ವೈದ್ಯರ ಸಲಹೆಯನ್ನೇ ಪಡೆಯದೇ ಸ್ಟೆರಾಯ್ಡ್ ಗಳನ್ನೂ ಸೇವಿಸುವುದು ವೈದ್ಯರಿಗೂ ತಿಳಿದಿರುವ ರಹಸ್ಯ. ಇಂತಹ ಸ್ವಯಂ ಚಿಕಿತ್ಸೆಗೆ ಸ್ಟೆರಾಯ್ಡ್ ಗಳ ಸೇವನೆಯಿಂದ ತಮ್ಮ ಆರೋಗ್ಯದ ಸಮಸ್ಯೆ ಕ್ಷಿಪ್ರಗತಿಯಲ್ಲಿ ಪರಿಹಾರಗೊಳ್ಳುವುದರೊಂದಿಗೆ, ತಮ್ಮ ಆರೋಗ್ಯ ಉತ್ತಮವಾಗಿದೆ ಎನ್ನುವ "ಹಿತಾನುಭವ" ಅಥವಾ ಭ್ರಮೆಯೂ ಪ್ರಮುಖ ಕಾರಣವೆನಿಸಿದೆ. ಇದಲ್ಲದೇ ದುಬಾರಿ ಬೆಲೆಯ ಔಷದಗಳೊಂದಿಗೆ ಹೋಲಿಸಿದಾಗ ಇವುಗಳ ಬೆಲೆ ಅತ್ಯಲ್ಪವಾಗಿರುವುದು, ಕನಿಷ್ಠ ವೆಚ್ಚದಲ್ಲಿ ಗರಿಷ್ಠ  ನೀಡಬಲ್ಲ ಸ್ಟೆರಾಯ್ಡ್ ಗಳನ್ನು ಆಯ್ಕೆ ಮಾಡುವುದು ಮತ್ತೊಂದು ಕಾರಣವಾಗಿದೆ. 

ಸ್ಟೆರಾಯ್ಡ್ ಗಳ ದೀರ್ಘಕಾಲೀನ ಸೇವನೆಯಿಂದ ಶರೀರದ ತೂಕ,ಗಾತ್ರ ಮತ್ತು  ಕ್ರಮೇಣ ಬದಲಾಗುತ್ತವೆ. ರೋಗಿಯ ಮುಖವು ಹುಣ್ಣಿಮೆಯ ಚಂದ್ರನಂತೆ ದುಂಡಗಾಗಿ ಕುತ್ತಿಗೆ,ಹೆಗಲು ಮತ್ತು ಸೊಂಟಗಳು ಉಬ್ಬಿಕೊಂಡು ಕೊಬ್ಬಿದ ಗೂಳಿಯಂತಾಗುವುದು. ಶರೀರದಲ್ಲಿ ಅವಶ್ಯಕತೆಗಿಂತ ಹೆಚ್ಚು ಲವಣಗಳು ಮತ್ತು ನೀರಿನ ಸಂಗ್ರಹದಿಂದಾಗಿ ಬಾವು ಕಂಡುಬರುವುದು. ರೋಗಿಯ ಹೊಟ್ಟೆ, ತೊಡೆ, ಬೆನ್ನು ಮತ್ತು ಪೃಷ್ಟಗಳ ಮೇಲೆ ಬಾಣಂತಿಯರಲ್ಲಿ ಕಾಣಬಹುದಾದ ಬಿಳಿಯ ಬಣ್ಣದ "ಗೀರು"ಗಳು ಪ್ರತ್ಯಕ್ಷವಾಗುತ್ತವೆ. ಚಿಕ್ಕ ಮಕ್ಕಳಲ್ಲಿ  ಶಾರೀರಿಕ ಬೆಳವಣಿಗೆ ಕುಂಠಿತಗೋಳ್ಳುವುದರೊಂದಿಗೆ ಗಡ್ಡ- ಮೀಸೆಗಳು ಮೂಡುತ್ತವೆ. ಅನೇಕ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಗಂಭೀರ- ಮಾರಕ ವ್ಯಾಧಿಗಳು ಆರಂಭವಾಗುವ ಅಥವಾ ಈಗಾಗಲೇ ಈ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಇವು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇದಲ್ಲದೆ ಗಾಯ ಮತ್ತು ವೃಣಗಳು ಮಾಗದಿರುವುದು,ಶರೀರದ ಮಾಂಸಪೇಶಿಗಳಲ್ಲಿ ತೀವ್ರ ನೋವು ಮತ್ತು ಸುಲಭದಲ್ಲೇ ವಿವಿಧ ರೀತಿಯ ಸೋಂಕುಗಳಿಗೆ ಈಡಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. 

ಇನ್ನು ಕೆಲವರಲ್ಲಿ ಜಠರದ ಹುಣ್ಣುಗಳು, ಮೂಳೆಗಳ ದೌರ್ಬಲ್ಯ, ನಿದ್ರಾಹೀನತೆ,ನರ ದೌರ್ಬಲ್ಯ, ಜ್ವರ ಹಾಗೂ ವಿವಿಧರೀತಿಯ ಮಾನಸಿಕ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ರೋಗಿ  ಸೇವಿಸುತ್ತಿರುವ ಸ್ಟೆರಾಯ್ಡ್ ಗಳ ಪ್ರಮಾಣ ಮತ್ತು ಅವಧಿಗಳನ್ನು ಹೊಂದಿಕೊಂಡು ಅಪರೂಪದಲ್ಲಿ ಹೈಪೊಥಾಲಮಸ್, ಪಿಟ್ಯೂಟರಿ ಮತ್ತು ಅಡ್ರಿನಲ್ ಗ್ರಂಥಿಗಳ ಸಂಯುಕ್ತ ಕಾರ್ಯಕ್ಷಮತೆಗಳೂ ಕುಂಠಿತವಾಗುವ ಸಾಧ್ಯತೆಗಳಿವೆ. 

ಬಳಸಬಾರದ ಸ್ಥಿತಿಗಳು 

ಸ್ಟೆರಾಯ್ಡ್ ಔಷದಗಳನ್ನು ಜಠರದ ಹುಣ್ಣು, ಮಧುಮೇಹ, ಅಧಿಕ ರಕ್ತದೊತ್ತಡ, ಟಿ. ಬಿ, ಕೆಲವಿಧದ ಸೋಂಕುಗಳು,ಮೂಳೆಗಳ ದೌರ್ಬಲ್ಯ, ಅಪಸ್ಮಾರ, ಕೆಲವೊಂದು ಮಾನಸಿಕ ವ್ಯಾಧಿಗಳು, ಮೂತ್ರಾಂಗಗಳ ವೈಫಲ್ಯ, ಕಂಜೆಸ್ಟಿವ್ ಹಾರ್ಟ್ ಫೈಲ್ಯೂರ್ ಗಳಂತಹ ವ್ಯಾಧಿಪೀಡಿತರು ಮತ್ತು ಗರ್ಭಿಣಿಯರು ಸೇವಿಸಲೇಬಾರದು. 

ಸ್ಟೆರಾಯ್ಡ್ ಗಳ ಅನಿಯಮಿತ ಹಾಗೂ ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳನ್ನು ಅರಿತ ಬಳಿಕವೂ ನೀವು ಇವುಗಳ ಸೇವನೆಯನ್ನು ಮುಂದುವರೆಸಿದಲ್ಲಿ, ಪ್ರಾನಾಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ!. 

ಆಸ್ತಮಾ ಗುಣವಾಯಿತು!

ಬಾಲ್ಯದಿಂದಲೇ ಆಸ್ತಮಾ ದಿಂದ ಬಳಲುತ್ತಿದ್ದ ನವೀನನಿಗೆ ತನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ ಈ ವ್ಯಾಧಿಯಿಂದ ಪಾರಾಗುವ ದಾರಿ  ಯಾವುದೆಂದು ತಿಳಿದಿರಲಿಲ್ಲ. ಬಂಧು ಮಿತ್ರರು ಸೂಚಿಸಿದ ಹಾಗೂ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ ನೂರಾರು ವೈದ್ಯರ ಚಿಕಿತ್ಸೆಗಾಗಿ ಸಹಸ್ರಾರು ರುಪಾಯಿಗಳನ್ನು ವ್ಯಯಿಸಿದ್ದರೂ, ಆತನ ಆಸ್ತಮಾ ವ್ಯಾಧಿಗೆ ಶಾಶ್ವತ ಪರಿಹಾರ ದೊರೆತಿರಲಿಲ್ಲ. 

ಹಗಲು ರಾತ್ರಿಯೆನ್ನದೇ ಯಾವುದೇ ಪೂರ್ವಸೂಚನೆಯನ್ನು ನೀಡದೇ, ಕ್ಷಣ ಮಾತ್ರದಲ್ಲಿ ಆರಂಭಗೊಂಡು ತೀವ್ರವಾಗಿ ಉಲ್ಬಣಿಸುತ್ತಿದ್ದ ಈ ಕಾಯಿಲೆಯಿಂದಾಗಿ ಆತನ ಶರೀರವು ನರಪೇತಲ ನಾರಾಯಣನಂತಾಗಿತ್ತು. ಆತನ ಕಾಯಿಲೆಗೆ ಶಾಶ್ವತ ಪರಿಹಾರವೇ ಇಲ್ಲವೆಂದು ಕುಟುಂಬ ವೈದ್ಯರು ಹೇಳಿದ್ದ ಸತ್ಯವನ್ನು ಹಾಗೂ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇರಿಸಲು ಸೂಚಿಸಿದ ಚಿಕಿತ್ಸೆ ಮತ್ತು ಮುಂಜಾಗ್ರತೆಗಳನ್ನು ಪರಿಪಾಲಿಸಲು ಆಟ ಸಿದ್ಧನಿರಲಿಲ್ಲ. 

ಆಪ್ತ ಸ್ನೇಹಿತನೊಬ್ಬನ ಸಲಹೆಯಂತೆ ಆಸ್ತಮಾ ಕಾಯಿಲೆಯನ್ನು ಗುಣಪಡಿಸಬಲ್ಲ ವೈದ್ಯನೋಬ್ಬನ ಬಗ್ಗೆ ಅರಿತ ನವೀನನು ಮರುದಿನವೇ ಆತನಲ್ಲಿ ಧಾವಿಸಿದ್ದನು. ಈ ವೈದ್ಯನ ಮನೆಯ ಅಂಗಳದಲ್ಲಿ ನಾಲ್ಕಾರು ನೌಕರರು ಹತ್ತಾರು ವಿಧದ ಗಿಡಮೂಲಿಕೆಗಳ ಔಷದ ತಯಾರಿಕೆಯಲ್ಲಿ ತೊಡಗಿರುವುದನ್ನು ಕಂಡ ನವೀನನಿಗೆ ತನ್ನ ವ್ಯಾಧಿ ಗುಣವಾಗುವುದೆಂಬ ಭರವಸೆ ಮೂಡಿತ್ತು. 

ಸಾಕಷ್ಟು ಸಮಯ ಸರತಿಯಲ್ಲಿ ಕಾದ   ನವೀನನನ್ನು ಪರೀಕ್ಷಿಸಿದ ಬಳಿಕ ಮೂರು ವಿಧದ ಔಷದಗಳನ್ನು  ವೈದ್ಯನು,ಇವುಗಳ ಸೇವನಾ ಕ್ರಮ ಹಾಗೂ ಪರಿಪಾಲಿಸಬೇಕಾದ ಪಥ್ಯಗಳನ್ನು ತಿಳಿಸಿ, ತನ್ನ ಚಿಕಿತ್ಸೆಪಡೆದ ಸಹಸ್ರಾರು ರೋಗಿಗಳು ಸಂಪೂರ್ಣವಾಗಿ ರೋಗಮುಕ್ತರಾಗಿರುವುದನ್ನು ತಿಳಿಸಲು ಮರೆಯಲಿಲ್ಲ!. 

ಮರುದಿನ ಔಷದ ಸೇವನೆ ಆರಂಭಿಸಿದಂತೆಯೇ ಮಾಯವಾದ ನವೀನನ ಆಸ್ತಮಾ, ತಿಂಗಳು ಕಳೆದರೂ ಮತ್ತೆ ಮರುಕಳಿಸಲೇ ಇಲ್ಲ!. ಸಂತೃಪ್ತನಾದ ಆತನು ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಮುಂದುವರೆಸಿದನು. ಆತನ ಕಾಯಿಲೆ ಮಾಯವಾಗುವುದರೊಂದಿಗೆ ಆತನ ಆರೋಗ್ಯದ ಮಟ್ಟ ಮತ್ತು ಶರೀರದ ತೂಕವೂ ಕ್ರಮೇಣ ಹೆಚ್ಚುತ್ತಾ, ವರ್ಷ ಕಳೆಯುವಷ್ಟರಲ್ಲಿ ಧಡೂತಿ ದೇಹದ ನವೀನನು ಪರಿಚಿತರೂ ಗುರುತಿಸದಷ್ಟು ಬದಲಾಗಿದ್ದನು. 

ಈ ಸಂದರ್ಭದಲ್ಲಿ ವಿದೇಶದಲ್ಲಿ ನೆಲೆಸಿದ್ದ ಆತನ ಸೋದರ ಸಂಬಂಧಿ ವೈದ್ಯರೊಬ್ಬರು ನವೀನನ ಮನೆಗೆ ಭೇಟಿ ನೀಡಿದ್ದರು. ಎರಡು ವರ್ಷಗಳ ಹಿಂದೆ ಆತನನ್ನು ಕಂಡಿದ್ದ ವೈದ್ಯರಿಗೆ, ಇದೀಗ ನವೀನನನ್ನು ಕಂಡು ಆಶ್ಚರ್ಯವಾಗಿತ್ತು. ಆತನ ಧಡೂತಿ ದೇಹದ ಬಗ್ಗೆ ವಿಚಾರಿಸಿದ ವೈದ್ಯರಿಗೆ ನವೀನನ ಆಸ್ತಮಾ ವ್ಯಾಧಿಯ ಚಿಕಿತ್ಸೆಯ ವಿವರಗಳನ್ನು ಕೇಳಿ, "ಗಿಡ ಮೂಲಿಕೆ"ಗಳ ಔಷದದ ಬಗ್ಗೆ ಸಂದೇಹ ಮೂಡಿತ್ತು. ಈ ಔಷದಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇವುಗಳಲ್ಲಿ ಧಾರಾಳವಾಗಿ ಸ್ಟೆರಾಯ್ಡ್ ಗಳನ್ನು ಬೇರೆಸಿರುವುದು ಪತ್ತೆಯಾಗಿತ್ತು!. 

ಸತ್ಯ ಸಂಗತಿಯನ್ನು ಅರಿತ ನವೀನನಿಗೆ ದಿಗ್ಭ್ರಮೆಯಾಗಿದ್ದರೂ, ಆತನ ಸಂಬಂಧಿ ವೈದ್ಯರಿಗೆ ಮಾತ್ರ ಕಿಂಚಿತ್ ಅಚ್ಚರಿಯೂ ಆಗಿರಲಿಲ್ಲ. ಏಕೆಂದರೆ ಗಿಡಮೂಲಿಕೆಗಳ ಔಷದಗಳಲ್ಲಿ ಸ್ಟೆರಾಯ್ಡ್ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸುವ ಮೂಲಕ ಆಸ್ತಮಾ, ಸಂಧಿವಾತ ಹಾಗೂ ಇತರ ಕೆಲ ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ನಕಲಿ ವೈದ್ಯರ ಬಗ್ಗೆ ಇವರಿಗೆ ಮಾಹಿತಿಯಿತ್ತು. 

ಅದಾಗಲೇ ಸ್ಟೆರಾಯ್ಡ್ ಔಷದಗಳ ದಾಸನಾಗಿದ್ದ ನವೀನನ ಚಿಕಿತ್ಸೆಯನ್ನು ಏಕಾಏಕಿ ನಿಲ್ಲಿಸಲಾರದ ಅನಿವಾರ್ಯತೆ ವೈದ್ಯರಿಗಿತ್ತು. ಅಂತೆಯೇ ಚಿಕಿತ್ಸೆಯನ್ನು ನಿಲ್ಲಿಸಿದರೆ  ಪ್ರಾನಾಪಾಯದ ಸಾಧ್ಯತೆಯೂ ಇತ್ತು. ಇದೇ ಕಾರಣದಿಂದಾಗಿ ನವೀನನನ್ನು ಕೆಲದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಿ, ಆತನು ಸೇವಿಸುತ್ತಿದ್ದ ಔಷದಗಳ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸಲಾಯಿತು. ಚೇತರಿಸಿಕೊಂಡ ನವೀನನು ಇದೀಗ ತಜ್ಞವೈದ್ಯರ ಸಲಹೆಯಂತೆ ಇನ್ ಹೇಲರ್ ಬಳಸುವ ಹಾಗೂ ತನ್ನ ಶರೀರಕ್ಕೆ ಒಗ್ಗದ ಆಹಾರ- ವಿಹಾರಗಳನ್ನು ವರ್ಜಿಸುವ ಮೂಲಕ ಆಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಲು ಸಫಲನಾಗಿದ್ದಾನೆ. ಇದಕ್ಕೂ ಮಿಗಿಲಾಗಿ ತನ್ನ ಬಂಧು ಮಿತ್ರರರಲ್ಲಿ ಆಸ್ತಮಾ ಪೀಡಿತರಿದ್ದಲ್ಲಿ, ತಾನು ಪ್ರಯೋಗಿಸಿದ್ದ ಚಿಕಿತ್ಸೆ ಹಾಗೂ ಇದರ ದುಷ್ಪರಿಣಾಮಗಳಿಂದಾಗಿ ಅನುಭವಿಸಿದ ನರಕಯಾತನೆಯ ಬಗ್ಗೆ ಹೇಳಿ, ಇಂತಹ ಪ್ರಯೋಗಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡುತ್ತಾನೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೦೨-೨೦೦೫ ರ ಸಂಚಿಕೆಯ ಬಳಕೆದಾರ:ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




No comments:

Post a Comment