Wednesday, November 6, 2013

Nakali vaidyariddaare, echarike!



                                     ನಕಲಿ ವೈದ್ಯರಿದ್ದಾರೆ, ಎಚ್ಚರಿಕೆ!

ವಿವಾಹದ ಮೊದಲು ಅಥವಾ ಅನಂತರ ಉಂಟಾಗುವ ಎಲ್ಲ ತರಹದ ನಿಶ್ಶಕ್ತಿ, ನರಗಳ ದೌರ್ಬಲ್ಯ, ತಾರುಣ್ಯ ನಾಶ,ಸ್ವಪ್ನ ಸ್ಖಲನ, ಶೀಘ್ರ ಸ್ಖಲನ ಮತ್ತು ಎಲ್ಲಾ ತರಹದ ಲೈಂಗಿಕ ಸಮಸ್ಯೆಗಳಿಗೆ ನೀವೇನು ಮಾಡುತ್ತೀರಿ?. ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿಸಲು ಪರಿಪೂರ್ಣ ಚಿಕಿತ್ಸೆಗೆ ದಕ್ಷಿಣ ಭಾರತದ ಹೆಸರಾಂತ ಅಪೂರ್ವ ಅನುಭವಿಗಳಾದ ವೈದ್ಯರು, ನಿಮ್ಮ ಊರಿನ ಲಾಡ್ಜ್ ಗಳಲ್ಲೇ ಸಿಗುತ್ತಾರೆ!. 
-------------                 -----------------                         --------------------                      --------------------               -------------

ಅಂಗಡಿಯಲ್ಲಿ ತನ್ನ ತಂದೆಯ ಜತೆ ವ್ಯಾಪಾರ ಮಾಡಲು ಆರಂಭಿಸಿರುವ ಪ್ರವೀಣನಿಗೆ ಈಗ ಮದುವೆಯ ಪ್ರಾಯ. ಬೆಳೆದು ನಿಂತ ಪ್ರವೀಣನಿಗೆ ಹುಡುಗಿ ನೋಡಿ ನಿಶ್ಚಿತಾರ್ಥವೂ ಆಯಿತು. ಮದುವೆಗೆ ಇನ್ನೇನು ತಿಂಗಳಿದೆ ಎನ್ನುವಾಗ ಪ್ರವೀಣನಿಗೆ ತನ್ನ "ಆರೋಗ್ಯ"ದ ಮೇಲೆ ತುಸು ಸಂಶಯ ಮೂಡತೊಡಗಿತು. "ಲೈಂಗಿಕ ರೋಗಗಳಿಗೆ ಸೂಕ್ತ ಪರಿಹಾರ, ಮದುವೆಯ ಅನಂತರ ನಿಶ್ಶಕ್ತಿಯಿಂದ ಬಳಲದಿರಿ, ಸ್ವಪ್ನ ಸ್ಖಲನ- ಶೀಘ್ರ ಸ್ಖಲನಕ್ಕೆ ಚಿಕಿತ್ಸೆ..... "  ಎನ್ನುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವುದನ್ನು ನೋಡಿದ ಅನಂತರ ಪ್ರವೀಣನಿಗೆ ತನ್ನ ಸಮಸ್ಯೆಗೆ ಪರಿಹಾರ ದೊರೆಯಿತೆನ್ನುವ ಸಮಾಧಾನವಾಯಿತು. ಜಾಹೀರಾತು ನೀಡಿರುವ "ತಜ್ಞ ವೈದ್ಯ" ರನ್ನು ಭೇಟಿಯಾಗಿ ತನಗಿರುವ ಸ್ವಪ್ನ ಸ್ಖಲನದ ತೊಂದರೆಯನ್ನು ಹೇಳಿಕೊಂಡ. 'ಔಷಧಿ" ನೀಡಿದ ವೈದ್ಯರು ಪರವೀನನಿಗೆ ಯಶಸ್ವೀ ದಾಂಪತ್ಯದ ಪಾಠವನ್ನು ಹೇಳಿಕೊಟ್ಟು ವಾರ ಬಿಟ್ಟು ಬರುವಂತೆ ತಿಳಿಸಿದರು. 'ಚಿಕಿತ್ಸೆ" ಸಂಪೂರ್ಣ ಮುಗಿಯುವ ವೇಳೆಗೆ ಪ್ರವೀಣ ವೈದ್ಯರಿಗೆ ಸಹಸ್ರಾರು ರೂಪಾಯಿಗಳ ಫೀಸನ್ನು ಪಾವತಿಸಿದ್ದ!. 

ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳು ರೋಗವೇ ಅಲ್ಲ. ಆರೋಗ್ಯವಂತ ಮನುಷ್ಯನ ಪ್ರಕೃತಿ ಸಹಜ ಬೆಳವಣಿಗೆಯ ಲಕ್ಷಣಗಳಿವು ಎನ್ನುವ ಅರಿವು ಪ್ರವೀಣನಿಗೆ ಇರುತ್ತಿದ್ದರೆ ಆತ "ಐವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯ"ರಿಂದ ತಲೆಬೋಳಿಸಿಕೊಳ್ಳುತ್ತಿರಲಿಲ್ಲ

ಲೈಂಗಿಕತೆ ರಹಸ್ಯವಲ್ಲ!

ಲೈಂಗಿಕತೆಯ ಕುರಿತು ಜನಸಾಮಾನ್ಯರಿಗಿರುವ ಅಜ್ಞಾನದ ಲಾಭವನ್ನು ಪಡೆಯುತ್ತಿರುವ ನಕಲಿ ವೈದ್ಯರ ಕಾರ್ಯಾಚರಣೆ ನಾಯಿಕೊಡೆಯಂತೆ ಎಲ್ಲ ಊರು-ಕೇರಿಗಳಲ್ಲಿ ತಲೆಯೆತ್ತುತ್ತಿದೆ. ಲಾಡ್ಜ್ ನ ಕೋಣೆಗಳಲ್ಲಿ "ಚಿಕಿತ್ಸೆ ನೀಡುವ" ಈ ವೈದ್ಯರು ಪತ್ರಿಕೆಗಳಲ್ಲಿ ಭರ್ಜರಿ ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ತಮ್ಮ ವೈದ್ಯಕೀಯ ಅರ್ಹತೆ- ಪದವಿಗಳನ್ನು ತಿಳಿಸಲು ಪ್ರತಿಸಲವೂ ಮರೆತೇ ಬಿಡುತ್ತಾರೆ!. ಪ್ರಚಾರಕ್ಕಾಗಿ ಗೋಡೆಯನ್ನೂ ಆಶ್ರಯಿಸುವ ಈ ತಜ್ಞರು,ಏಡ್ಸ್ ಗುಣಪಡಿಸುತ್ತೇವೆಂದು  ಘೋಷಿಸಲು ಸಹ ಹಿಂಜರಿಯುವುದಿಲ್ಲ!. 

ಸಾಲದೆಂಬಂತೆ ಪ್ರಪಂಚದ ಯಾವ ವೈದ್ಯರೂ ಶಾಶ್ವತವಾಗಿ ಗುಣಪಡಿಸಲಾಗದ ಮಾರಣಾಂತಿಕ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ರೋಗಿಗಳನ್ನು ನಂಬಿಸಿ, ರೋಗಿಗಳ ಜೇಬನ್ನು ಬರಿದಾಗಿಸುತ್ತಾರೆ. 

ಮೆಡಿಕಲ್ ಕಾಲೇಜುಗಳೂ ನಕಲಿ 

ಮಧ್ಯ ವಯಸ್ಕರನ್ನು ಸಾಮಾನ್ಯವಾಗಿ ಕಾಡುವ ಎದೆಯುರಿ, ಹುಳಿತೇಗು, ಮಲಬದ್ಧತೆ, ನಿದ್ರಾಹೀನತೆ, ಅಜೀರ್ಣ, ಗ್ಯಾಸ್ ಟ್ರಬಲ್, ಮೂಲವ್ಯಾಧಿಗಳಿಗೂ ಚಿಕಿತ್ಸೆ ನೀಡುತ್ತೇವೆ ಎನ್ನುವ ಇಂತಹ ವೈದ್ಯರನ್ನು, ಆರೇ ತಿಂಗಳುಗಳಲ್ಲಿ "ಪದವಿ" ಯನ್ನು ನೀಡಿ ಸೃಷ್ಟಿಸುವ ಖಾಸಗಿ ಕಾಲೇಜುಗಳೂ ನಮ್ಮ ದೇಶದಲ್ಲಿರುವುದು ಈ ಧಂಧೆಯನ್ನು ಸುಲಭಗೊಳಿಸಿದೆ. ಆರೋಗ್ಯದ ಕುರಿತು ಸಾಮಾನ್ಯವಾಗಿ ಭಾರತೀಯರಲ್ಲಿರುವ ಅಜ್ಞಾನ,ಮೂಢನಂಬಿಕೆಗಳು, ಕಿತ್ತು ತಿನ್ನುವ ಬಡತನ, ಲೈಂಗಿಕತೆಯ ಬಗ್ಗೆ ಮುಕ್ತ ಮಾತುಕತೆಗೆ ಅವಕಾಶವಿಲ್ಲದಿರುವುದು ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ದುಬಾರಿಯಾಗುತ್ತಿರುವ ಆಧುನಿಕ ವೈದ್ಯಕೀಯ ಚಿಕಿತ್ಸೆಗಳು ಹೆಚ್ಚು ಹೆಚ್ಚು ರೋಗಿಗಳು ನಕಲಿವೈದ್ಯರನ್ನು ಆಶ್ರಯಿಸುವಂತೆ ಮಾಡಿವೆ. ದುರಂತವೆಂದರೆ ನಕಲಿವೈದ್ಯರಿಂದ ತೊಂದರೆಗೆ ಈಡಾದವರು, ಸುಲಿಗೆಗೆ ಒಳಗಾದವರು ತಮಗಾಗಿರುವ ಅನ್ಯಾಯ- ವಂಚನೆಗಳನ್ನು ಹೇಳಿಕೊಳ್ಳಲು ನಾಚುತ್ತಾರೆ. ಹೀಗೆ ಹೇಳಿಕೊಳ್ಳುವುದು, ದೂರು ಸಲ್ಲಿಸುವುದರಿಂದ ತಮಗೆ ಅವಮಾನವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ಈ ಧಂಧೆ ನಮ್ಮ ನೆಲದಲ್ಲಿ ಹುಲುಸಾಗಿ ಬೆಳೆದಿದೆ. ಹೀಗಾಗಿಯೇ ಮಕ್ಕಳಿಲ್ಲದವರಿಗೆ ಮಕ್ಕಳಾಗಲು ಯಾವುದೇ ಪರೀಕ್ಷೆಗಳಿಲ್ಲದೆ, ಕಷಾಯವನ್ನು ಕೊಟ್ಟು ಚಿಕಿತ್ಸೆ ನೀಡುವ ಭೂಪರು ಯಾವ ಆತಂಕವೂ ಇಲ್ಲದೆ ಭದ್ರವಾಗಿ ನೆಲೆಯೂರಿದ್ದಾರೆ. ಸಹಸ್ರಾರು ರೂಪಾಯಿಗಳ ಕಷಾಯ ಕುಡಿದ ಬಳಿಕವೂ ಮಕ್ಕಳಾಗದಿದ್ದರೆ, ಅಂತಹ ದಂಪತಿಗಳಿಗೆ "ಸಂತಾನ ಭಾಗ್ಯ"ವಿಲ್ಲಾ ಎನ್ನುವ ಅರ್ಥವೇ ಹೊರತು ಅದು ಈ ವೈದ್ಯರ ತಪ್ಪಲ್ಲ!. 

ಚಿಕಿತ್ಸಾ ವಿಧಾನ 

ಹೃದಯದ ರಕ್ತನಾಳಗಳಲ್ಲಿ ಅಡಚಣೆಯಿರುವ ರೋಗಿಯೊಬ್ಬರು ಇಂತಹ ನಕಲಿವೈದ್ಯನನ್ನು ಸಂದರ್ಶಿಸಿದ್ದರು. ಕೇವಲ ಮೂರರಿಂದ ಆರು ವಾರಗಳಲ್ಲಿ ರಕ್ತನಾಳಗಳಲ್ಲಿನ ಅಡಚಣೆಯನ್ನು ನಿವಾರಿಸುವುದಾಗಿ ಹೇಳಿದ ವೈದ್ಯರು,  ಎರಡು ವಾರಗಳ  ನೀಡಿದರು. ಎರಡು ವಾರಗಳ ಬಳಿಕ ಬಂದ ರೋಗಿಯನ್ನು ವಿಶಿಷ್ಟ ರೀತಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. 

ತೆಳ್ಳಗಿನ ರಟ್ಟನ್ನು ಸುರುಳಿಮಾಡಿ ಒಂದು ತುದಿಯನ್ನು ರೋಗಿಯ ಹೃದಯದ ಭಾಗಕ್ಕೆ ಒತ್ತಿ ಹಿಡಿದು, ಮತ್ತೊಂದು ತುದಿಗೆ ವೈದ್ಯ ಮಹಾಶಯ ಕಿವಿಗೊಟ್ಟು ಹೃದಯದ ಬಡಿತವನ್ನು ಸುಮಾರು ಮೂರು ನಿಮಿಷಗಳ ಕಾಲ ಪರೀಕ್ಷಿಸಿ,  ೭೦ ಶೇಕಡಾ ರಕ್ತನಾಳಗಳ ಅಡಚಣೆ ನಿವಾರಬನಿವಾರಣೆಯಾಗಿದೆ ಎಂದು ಧೃಢಪಡಿಸಿದ್ದನು!. ಮುಂದಿನ ಎರಡು ವಾರಗಳ ಔಷದ ಸೇವನೆಯ ಬಳಿಕ ರೋಗಿ ಸೇವಿಸುತ್ತಿದ್ದ ಆಧುನಿಕ ಔಷದಗಳ ಸೇವನೆಯನ್ನು ಶಾಶ್ವತವಾಗಿ ನಿಲ್ಲಿಸಲೂ ಹೇಳಿದ್ದನು. ತತ್ಪರಿಣಾಮವಾಗಿ ಕೆಲವೇ ದಿನಗಳಲ್ಲಿ ರೋಗಿಯ ಹೃದಯ ಬಡಿತವನ್ನೇ ಶಾಶ್ವತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದನು!. 

ವೃತ್ತಿಯಲ್ಲಿ ದರ್ಜಿಯಾಗಿದ್ದ ವ್ಯಕ್ತಿಯೊಬ್ಬ ಸ್ವಯಂ ಔಷದಗಳನ್ನು ನೀಡಲಾರಂಭಿಸಿ ಖ್ಯಾತ ಆಸ್ತಮಾ ತಜ್ಞನಾಗಿ ರೂಪುಗೊಂಡ ಪರಿಯನ್ನುನೆನಪಿಸಿಕೊಂಡು, ನಮ್ಮ ಊರಿನ ಜವುಳಿ ಉದ್ಯಮಿಯೊಬ್ಬರು ಆಶ್ಚರ್ಯ ಪಡುತ್ತಾರೆ. ಲಂಗಗಳನ್ನು ಹೊಲಿಯುತ್ತಿದ್ದ ಈ ದರ್ಜಿಯು ಆಸ್ತಮಾ ರೋಗಕ್ಕೆ ಮದ್ದು ನೀಡುತ್ತಿರುವುದಷ್ಟೇ ಆಲ್ಲದೇ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೂರಾರು ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಚಮತ್ಕಾರವೂ ನಡೆದಿದೆ. 

ಆಗಬೇಕಾಗಿರುವುದು ಏನು?

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಅವಶ್ಯವಾಗಿ ಹೊಂದಿರಬೇಕಾದ ಅರ್ಹತೆಗಳನ್ನು ನಕಲಿ ವೈದ್ಯರು ಹೊಂದಿಲ್ಲವಾದುದರಿಂದ ತಮ್ಮ ಆರೋಗ್ಯ ರಕ್ಷಣೆಯ ಹೊಣೆ ಹೊರುವ ಜವಾಬ್ದಾರಿ ಇವರಿಗಿಲ್ಲ ಎನ್ನುವ ಸತ್ಯವನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು. ವೈದ್ಯರೆಂದು ಹೇಳಿಕೊಂಡು ಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ವೈದ್ಯರ ಕಾರ್ಯಾಚರಣೆಯನ್ನು ಕಾನೂನಿನ ಕಡಿವಾಣಕ್ಕೆ ಒಳಪಡಿಸುವ ನಿಟ್ಟಿನಲ್ಲಿ, ಸರಕಾರೀ ಇಲಾಖೆಗಳು ಕ್ರಿಯಾಶೀಲವಾಗಬೇಕು. ಬೆಳೆದುನಿಂತ ಮಕ್ಕಳು ತಮ್ಮ ಹೆತ್ತವರಲ್ಲಿ ಮುಚ್ಚುಮರೆಯಿಲ್ಲದೆ ತಮ್ಮ ದೈಹಿಕ ಬದಲಾವಣೆಗಳ ಕುರಿತು ಮಾತುಕತೆಯನ್ನು ನಡೆಸುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಬೇಕು. ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳಂತಹ ಶಾರೀರಿಕ ಪ್ರಕ್ರಿಯೆಗಳು ರೋಗವಲ್ಲ ಎನ್ನುವ ಅರಿವು ಮೀಸೆಯ ಜತೆಯಲ್ಲೇ ಮೂಡಬೇಕು. ಬಡವರಿಗೆ ದುಬಾರಿಯೆನಿಸದ ಚಿಕಿತ್ಸೆ ನೀಡಲು ಆರೋಗ್ಯ ತಪಾಸಣೆ- ಚಿಕಿತ್ಸಾ ಶಿಬಿರಗಳನ್ನು ಸರಕಾರ ಮತ್ತು ಸ್ವಯಂ ಸೇವಾ ಸಂಘಟನೆಗಳು ನಡೆಸಬೇಕು. 

ಇದಲ್ಲವಾದಲ್ಲಿ  ರೋಗಿ ಎನ್ನುವ ಬಳಕೆದಾರನ ಶೋಷಣೆ ತಡೆಯಿಲ್ಲದೇ ಸಾಗುವುದರಲ್ಲಿ ಸಂಶಯವಿಲ್ಲ. ತಜ್ಞವೈದ್ಯರ ನಿರ್ಲಕ್ಷ್ಯಗಳಿಂದ ಉಂಟಾಗಿರುವ ನಷ್ಟದ ವಿರುದ್ಧ ಬಳಕೆದಾರರು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಪರಿಹಾರಗಳಿಸಿರುವ ಪ್ರಕರಣಗಳು ಈಗಾಗಲೇ ದಾಖಲೆಗೊಂಡಿವೆ. ಹೀಗಾಗಿ ಎಲ್ಲ ವೈದ್ಯರೂ ತಮ್ಮ ರೋಗಿಗಳಿಗೆ ಅತೀವ ಎಚ್ಚರಿಕೆಯಿಂದ ಚಿಕಿತ್ಸೆ ನೀಡುವಂತಾಗಿದೆ. ಶುಲ್ಕ ಪಾವತಿಸಿ ಸೇವೆ ಪಡೆಯುವ ಬಳಕೆದಾರನ ಹಕ್ಕುಗಳು ಅಬಾಧಿತವಾಗಿ ಉಳಿಯಬೇಕಾಗಿರುವುದು ಇಂದಿನ ಅವಶ್ಯಕತೆ. 

ನಕಲಿವೈದ್ಯರ ವಿರುದ್ಧ ಕಾನೂನು ಕ್ರಮ ಸಾಧ್ಯವೇ?

ನಕಲಿ ಔಷಧಿ, ಉಪಯೋಗವಿಲ್ಲದ ಅವೈಜ್ಞಾನಿಕ ಚಿಕಿತ್ಸೆ ಇತ್ಯಾದಿಗಳಿಂದ ಬಳಕೆದಾರರಿಗೆ ಅನ್ಯಾಯವಾದಾಗ ಪರಿಹಾರ ಪಡೆಯುವುದು ಇತ್ತೀಚಿನವರೆಗೆ ಸಾಧ್ಯವಾಗುತ್ತಿರಲಿಲ್ಲ. ಡ್ರಗ್ಸ್ ಎಂಡ್ ಮೇಜಿಕ್ ರೆಮಿಡೀಸ್ (ಮಿಸ್ ಲೀಡಿಂಗ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್, ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಮುಂತಾದ ಕಾಯಿದೆಗಳಲ್ಲಿ ನಕಲಿ ಔಷಧಿಗಳ ವಿರುದ್ಧ, ನಕಲಿ ಚಿಕಿತ್ಸಾ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ, ಈ ಕಾಯಿದೆಗಳಲ್ಲಿರುವ ಲೋಪ ದೋಷಗಳಿಂದಾಗಿ ನಕಲಿ ವೈದ್ಯರು ಸುಲಭದಲ್ಲೇ ತಪ್ಪಿಸಿಕೊಳ್ಳುತ್ತಾರೆ. 

ಇದರಿಂದಾಗಿ ಆಸ್ತಮಾ ಚಿಕಿತ್ಸೆ ಎಂದು ಸ್ಟೀರಾಯ್ಡ್ ಮಾತ್ರೆಗಳ ಪುಡಿಯನ್ನು ಕೊಡುವ ನಕಲಿವೈದ್ಯರ ವ್ಯಾಪಾರ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಇದೀಗ ಬಳಕೆದಾರರ ರಕ್ಷಣಾ ಕಾಯಿದೆಯ ಮೂಲಕ ನಕಲಿವೈದ್ಯರನ್ನು ಹತೋಟಿಯಲ್ಲಿಡಲು ಸಾಧ್ಯವೆಂದು ಭಾರತದಾದ್ಯಂತ ಇರುವ ಬಳಕೆದಾರರ ನ್ಯಾಯಾಲಯಗಳ ತೀರ್ಪುಗಳು ಸಾರಿ ಸಾರಿ ಹೇಳುತ್ತಿವೆ. 

ಯಾವುದೇ ಚಿಕಿತ್ಸೆಯಿಂದ ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾದಲ್ಲಿ ಅಥವಾ ರೋಗಿಯ ಪ್ರಾಣಕ್ಕೆ ಅಪಾಯ ಉಂಟಾದಲ್ಲಿ, ವೈದ್ಯರ ಮೇಲೆ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವೇ?. ಚಿಕಿತ್ಸೆ ನೀಡಿದ ವೈದ್ಯರಿಗೆ ಸೂಕ್ತ ಅರ್ಹತೆ ಇಲ್ಲದಿದ್ದಲ್ಲಿ ಖಂಡಿತವಾಗಿಯೂ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವಿದೆ. 

ಉದಾಹರಣೆಗಾಗಿ ಶಸ್ತ್ರಚಿಕಿತ್ಸೆಗಾಗಿ ರೋಗಿಯ ಪ್ರಜ್ಞೆ ತಪ್ಪಿಸುವುದನ್ನು ಅರಿವಳಿಕೆ ತಜ್ಞರೇ ಮಾಡಬೇಕಿದೆ. ಒಂದು ವೇಳೆ ಸೂಕ್ತ ಅರ್ಹತೆ(ಪದವಿ) ಇಲ್ಲದ ವೈದ್ಯರು ಅರಿವಳಿಕೆ ಔಷಧಿ ಕೊಟ್ಟು ರೋಗಿಯ ಮರಣಕ್ಕೆ ಕಾರಣರಾದಲ್ಲಿ, ಅದು 'ವೈದ್ಯಕೀಯ ನಿರ್ಲಕ್ಷ್ಯ" ಎಂದೆನಿಸುತ್ತದೆ. ವೈದ್ಯರಿಗೆ ಅಲೋಪತಿ ಶಾಸ್ತ್ರದ ಎಂ. ಬಿ. ಬಿ. ಎಸ್ ಪದವಿ ಇದ್ದರೂ,ಅರಿವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಇಲ್ಲದಿದ್ದಲ್ಲಿ, ಪ್ರಜ್ಞೆ ತಪ್ಪಿಸುವ ಪ್ರಕ್ರಿಯೆಯನ್ನು ಅವರು ನಡೆಸುವಂತಿಲ್ಲ. ಇದೇ ಆಧಾರದಲ್ಲಿ ನಕಲಿ ಔಷಧಿ ನೀಡುವ ನಕಲಿವೈದ್ಯರನ್ನು ಕಾನೂನಿನ ಹಿಡಿತದಲ್ಲಿ ಸಿಲುಕಿಸುವುದು ಕಷ್ಟವಾಗಲಾರದು. 

ಅಂತೆಯೇ ಅಲೋಪತಿ ಶಾಸ್ತ್ರದಲ್ಲಿ ಪದವಿ ಪಡೆದ ವೈದ್ಯರು ಅಲೋಪತಿ ಔಷದಗಳನ್ನೇ ನೀಡಬಹುದೇ ಹೊರತು ಆಯುರ್ವೇದ ಔಷದಗಳನ್ನಲ್ಲ. ಅದೇ ರೀತಿಯಲ್ಲಿ ಆಯುರ್ವೇದ ವೈದ್ಯರು ತಾವು ಕಲಿತಿರದ ಇತರ ಪದ್ದತಿಗಳ ಔಷದಗಳನ್ನು ನೀಡುವಂತಿಲ್ಲ ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ಕಾನೂನಿನ ಆಧಾರದಲ್ಲಿ ನಕಲಿವೈದ್ಯರನ್ನು ನಿಯಂತ್ರಿಸುವುದು ಸಾಧ್ಯವಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೧-೧೦-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಡಾ. ರವೀಂದ್ರನಾಥ ಶಾನುಭಾಗರು ಪ್ರಕಟಿಸಿದ್ದ ನನ್ನ  ಮೊತ್ತ ಮೊದಲನೆಯ ಲೇಖನ. 


No comments:

Post a Comment