Tuesday, November 12, 2013

Rogi bayasiddu haalu, Vaidyaru neediddu.........?



              ರೋಗಿ ಬಯಸಿದ್ದು ಹಾಲು, ವೈದ್ಯರು ನೀಡಿದ್ದು ........?

ತಮ್ಮ ವೃತ್ತಿಜೀವನದಲ್ಲಿ ವೈದ್ಯರು ಗಳಿಸುವ ವಿಶಿಷ್ಟ ಅನುಭವಗಳಲ್ಲಿ ಕೆಲವೊಂದು ಘಟನೆಗಳು ಅವಿಸ್ಮರಣೀಯ ಎನಿಸುತ್ತವೆ. ಬಹುತೇಕ ಸಂದರ್ಭಗಳಲ್ಲಿ ರೋಗಿಗಳ ಅಜ್ಞಾನ, ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಇದಕ್ಕೆ ಕಾರಣವಾಗಿರುತ್ತವೆ. 
--------------                ------------                  ------------------                -----------------                    ------------       ---------------

   ಬಹುತೇಕ ವಯೋವೃದ್ಧರಿಗೆ "ಮರಣದ ಭೀತಿ" ಕಾಡುವಂತೆಯೇ, ಅನೇಕ ಆರೋಗ್ಯವಂತರು ಹಾಗೂ ಮಧ್ಯವಯಸ್ಸಿನ ವ್ಯಕ್ತಿಗಳಿಗೆ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಗಳ ಬಗ್ಗೆ ಅವ್ಯಕ್ತ ಭಯ ಇರುತ್ತದೆ. ಜೀವನ ಪರ್ಯಂತ ಔಷದ ಸೇವನೆಯ ಅನಿವಾರ್ಯತೆ ಇರುವ ಇಂತಹ ಕಾಯಿಲೆಗಳನ್ನು ವೈದ್ಯರು ನಿಖರವಾಗಿ ಪತ್ತೆಹಚ್ಚಿ ರೋಗಿಗೆ ತಿಳಿಸಿದಾಗ, ಈ ಕಾಯಿಲೆ ತನ್ನನ್ನು ಬಾಧಿಸುತ್ತಿದೆ ಎಂದು ಒಪ್ಪಿಕೊಳ್ಳಲು ಅನೇಕರು ಸಿದ್ಧರಿರುವುದಿಲ್ಲ. ಅಂತೆಯೇ ಈ ವ್ಯಾಧಿಯನ್ನು ನಿಯಂತ್ರಿಸಲು ಅವಶ್ಯಕವೆನಿಸುವ ಔಷದಗಳನ್ನು ಸೇವಿಸಲೂ ಒಪ್ಪುವುದೇ ಇಲ್ಲ!. 

ಇನ್ನು ಕೆಲವರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನೇ ಪಡೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷದಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವ ಇಂತಹ ವ್ಯಕ್ತಿಗಳು, ಅನೇಕಬಾರಿ ತಮ್ಮ ನಿರ್ಲಕ್ಷ್ಯದಿಂದಾಗಿ ಅಯಾಚಿತ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಅಪರೂಪವೇನಲ್ಲ. 

ವೀರಪ್ಪನ ಬಿ. ಪಿ 

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ವೀರಪ್ಪನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದಾಗಿ ಯಶಸ್ವೀ ಉದ್ಯಮಿ ಎನಿಸಿದ್ದನು. ಬಾಲ್ಯದಲ್ಲಿ ಕಿತ್ತು ತಿನ್ನುತ್ತಿದ್ದ ಬಡತನದಿಂದಾಗಿ ದಿನವಿಡೀ ಮೈಮುರಿಯುವಂತೆ ದುಡಿಯುತ್ತಿದ್ದ ವೀರಪ್ಪನಿಗೆ ಅನಾರೋಗ್ಯವೆಂದರೆ ಏನೆಂದೇ ತಿಳಿದಿರಲಿಲ್ಲ. ಜತೆಗೆ ಸಣ್ಣಪುಟ್ಟ ಕಾಯಿಲೆಗಳು ಬಾಧಿಸಿದ ಸಂದರ್ಭಗಳಲ್ಲೂ, ಔಷದ ಪಡಯಲು ಬೇಕಾದಷ್ಟು ಹಣ ಆತನಲ್ಲಿ ಇರುತ್ತಿರಲಿಲ್ಲ. ಏಕೆಂದರೆ ಆತನ ದುಡಿಮೆಯಿಂದಲೇ ಆತನ ತಾಯಿ ಮತ್ತು ತಂಗಿಯರ ಹೊಟ್ಟೆ ತುಂಬಬೇಕಿತ್ತು. 

ಆದರೆ ಇದೀಗ ಹತ್ತಾರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದ ವೀರಪ್ಪನು ೫೦ ವರ್ಷ ವಯಸ್ಸಾದ ಬಳಿಕ ಹೆಚ್ಚಿನ ಜವಾಬ್ದಾರಿಗಳನ್ನು ಮಗನಿಗೆ ವಹಿಸಿ, ಹೆಸರಿಗೆ ತಕ್ಕಂತೆ ಇವೆಲ್ಲವುಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. 

ಇತ್ತೀಚಿನ ಕೆಲವು ತಿಂಗಳುಗಳಿಂದ ವೀರಪ್ಪನನ್ನು ಕಾಡುತ್ತಿದ್ದ ಅತಿಆಯಾಸ ಮತ್ತು ತಲೆನೋವಿನ ಸಮಸ್ಯೆಯು  ಹೆಚ್ಚಾದ ಕಾರಣದಿಂದಾಗಿ ನಗರದ ಖ್ಯಾತ ವೈದ್ಯರ ಸಲಹೆ ಪಡೆಯಲು ತೆರಳಿದ್ದನು. ವೀರಪ್ಪನ ಸಮಸ್ಯೆಗಳನ್ನು ಆಲಿಸಿದ ಬಳಿಕ ಶಾರೀರಿಕ ತಪಾಸಣೆಯನ್ನು ನಡೆಸಿದ ವೈದ್ಯರಿಗೆ ಆತನನ್ನು ಪೀಡಿಸುತ್ತಿರುವ ತೊಂದರೆಗಳಿಗೆ ಅಧಿಕ ರಕ್ತದೊತ್ತಡವೇ ಕಾರಣವೆಂದು ತಿಳಿಯಿತು. ಅಪಾಯಕಾರಿ ಮಟ್ಟವನ್ನು ತಲುಪಿದ್ದ ರಕ್ತದೊತ್ತಡವನ್ನು ಕ್ಷಿಪ್ರಗತಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವೆನಿಸುವ ಸಾಧ್ಯತೆಗಳನ್ನು ಅರಿತ ವೈದ್ಯರು, ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸುವಂತೆ ಸೂಚಿಸಿದ್ದರು. ಜತೆಗೆ ಮರುದಿನ ಬೆಳಗ್ಗೆ ಆಹಾರ ಸೇವನೆಗೆ ಮುನ್ನ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಲು ಆದೇಶಿಸಿದ್ದರು. ತನಗೆ ಅಧಿಕರಕ್ತದೊತ್ತಡ ಇದೆ ಎಂದು ಒಪ್ಪಲು ಸಿದ್ಧನಿಲ್ಲದ ವೀರಪ್ಪನು, ರಕ್ತಪರೀಕ್ಷೆಯ ಪರಿಣಾಮ ದೊರೆತ ಬಳಿಕವೇ ಚಿಕಿತ್ಸೆ ಆರಂಭಿಸುವುದಾಗಿ ಪಟ್ಟು ಹಿಡಿದಾಗ ಅನ್ಯಮಾರ್ಗವಿಲ್ಲದೆ ವೈದ್ಯರು ಸುಮ್ಮನಾಗಿದ್ದರು. 
 
ಮರುದಿನ ಸಂಜೆ ವೈದ್ಯರಲ್ಲಿಗೆ ಬಂದ ವೀರಪ್ಪನ ಗಂಟಿಕ್ಕಿದ ಮುಖವನ್ನು ಕಂಡ ವೈದ್ಯರಿಗೆ ಏನೋ ಎಡವಟ್ಟಾಗಿದೆ ಎನ್ನುವ ಸಂದೇಹ ಮೂಡಿತ್ತು. ಆದರೂ ಮುಗುಳುನಗೆಯೊಂದಿಗೆ ಆತನನ್ನು ಸ್ವಾಗತಿಸಿದ ವೈದ್ಯರು, ರಕ್ತ ಪರೀಕ್ಷೆ ಮಾಡಿಸಿಕೊಂಡಿರಾ ಎಂದು ಕೇಳಿದರು. ತಾನು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಈ ಪರೀಕ್ಷೆಯನ್ನು ಮಾಡಿದ "ಡಾಕ್ಟರರು" ರಕ್ತದಲ್ಲೇನೂ ತೊಂದರೆಗಳಿಲ್ಲ ಎಂದು ಹೇಳಿದ್ದು, ನಿಮ್ಮ ಮಾತನ್ನು ನಂಬಿ ಬಿ. ಪಿ.  ಯ ಮಾತ್ರೆಗಳನ್ನು ನುಂಗಿದ್ದಲ್ಲಿ ಪಕ್ಷವಾತದಿಂದ ಹಾಸಿಗೆ ಹಿಡಿಯಬೇಕಿತ್ತು ಎಂದು ದೂರಿದ್ದನು. ಆತನ ಕಟು ಮಾತುಗಳನ್ನು ಕೇಳಿ ದಿಗ್ಭ್ರಾಂತರಾದ ವೈದ್ಯರು ಸಾವರಿಸಿಕೊಳ್ಳುವಷ್ಟರಲ್ಲಿ, ವೀರಪ್ಪನು ದುರ್ದಾನ ಪಡೆದವನಂತೆ ಹೊರನಡೆದಿದ್ದನು!. 

ನಿಜ ಹೇಳಬೇಕಿದ್ದಲ್ಲಿ ವೀರಪ್ಪನ ಸೋದರ ಸಂಬಂಧಿಯೊಬ್ಬರು ಅಧಿಕ ರಕ್ತದೊತ್ತಡ ಪೀಡಿತರಾಗಿದ್ದು, ಔಷದಗಳನ್ನು ಕ್ರಮಬದ್ಧವಾಗಿ ಸೇವಿಸದ ಕಾರಣದಿಂದಾಗಿ ಪಕ್ಷವಾತಕ್ಕೆ ಈಡಾಗಿದ್ದರು.ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಈ ರೋಗಿಗೆ ಬಿ. ಪಿ. ಯ ಮಾತ್ರೆಗಳನ್ನು ದಿನನಿತ್ಯ ತಪ್ಪದೆ ಜೀವನಪರ್ಯಂತ ಸೇವಿಸಬೇಕೆಂದು ತಜ್ನವೈದ್ಯರು ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ವೀರಪ್ಪನ ಅಭಿಪ್ರಾಯವು ಇದಕ್ಕೆ ತದ್ವಿರುದ್ಧವಾಗಿತ್ತು. ಇದೇ ಕಾರಣದಿಂದಾಗಿ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಹಿಂಜರಿದಿದ್ದ ವೀರಪ್ಪನ ರಕ್ತವನ್ನು ಪರೀಕ್ಷಿಸಿದ್ದ ಮೈಕ್ರೋ ಬಯಾಲಜಿಸ್ಟ್ "ನಿಮಗೇನೂ ತೊಂದರೆಯಿಲ್ಲ"(ಅರ್ಥಾತ್ ಆತನ ರಕ್ತದಲ್ಲಿನ ಕೊಲಸ್ಟ ರಾಲ್ ಮತ್ತು ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ನಾರ್ಮಲ್ ಆಗಿವೆ) ಎಂದು ಹೇಳಿದಾಗ, ತನಗೆ ಅಧಿಕ ರಕ್ತದೊತ್ತಡ ಇಲ್ಲವೆಂದು ವೀರಪ್ಪನು ಅಪಾರ್ಥ ಮಾಡಿಕೊಂಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೆನಿಸಿತ್ತು!. 

ಭಾಗ-೨

ಸುಮಾರು ಮೂರು ತಿಂಗಳುಗಳ ಬಳಿಕ ತನ್ನ ಅತಿಆಯಾಸ ಮತ್ತು ತಲೆನೋವುಗಳನ್ನು ಸಹಿಸಲಾಗದ ವೀರಪ್ಪನು, ಮಂಗಳೂರಿನ ದೊಡ್ದಾಸ್ಪತ್ರೆಯ ಸುಪ್ರಸಿದ್ಧ ತಜ್ಞರನ್ನು ಭೇಟಿಯಾದನು. ಈ ಸಂದರ್ಭದಲ್ಲಿ ಆತನಿಂದ ಹಿಂದೆ ನಡೆದಿದ್ದ ಘಟನೆಯನ್ನು ಕೇಳಿ ತಿಳಿದ ವೈದ್ಯರು ಮೀಸೆಯಡಿಯಲ್ಲೇ ನಕ್ಕರು. ವೀರಪ್ಪನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರಿಗೆ ಆತನ ರಕ್ತದೊತ್ತಡವು ಅತಿಯಾಗಿರುವುದು ತಿಳಿದುಬಂದಿತ್ತು. ಆದರೆ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಸಿದ್ಧನಿಲ್ಲದ ಆತನಿಗೆ ಒಳ್ಳೆಯ ಉದ್ದೇಶದಿಂದ ಸುಳ್ಳು ಹೇಳುವ ಧರ್ಮಸಂಕಟ ವೈದ್ಯರಿಗೆ ಬಂದಿತ್ತು. 

ವೀರಪ್ಪನಿಗೆ ಗಂಭೀರ ತೊಂದರೆಗಳಿಲ್ಲವೆಂದು ಸಮಾಧಾನ ಹೇಳಿದ ವೈದ್ಯರು, ಆತನ ಬಳಲಿಕೆ ಮತ್ತು ತಲೆನೋವುಗಳನ್ನು ನಿವಾರಿಸಲು ಔಷದಗಳನ್ನು ಸೂಚಿಸಿದರು. ಜತೆಗೆ ಮಧ್ಯವಯಸ್ಸನ್ನು ಮೀರಿದವರನ್ನು ಬಾಧಿಸುವ ಅತಿಆಯಾಸವನ್ನು ಶಾಶ್ವತವಾಗಿ ಪರಿಹರಿಸುವುದು ಅಸಾಧ್ಯವೆನಿಸುವುದರಿಂದ, ತಾನು ಸೂಚಿಸಿದ "ಶಕ್ತಿ ವರ್ಧಕ" ಔಷದಗಳನ್ನು ದಿನನಿತ್ಯ ತಪ್ಪದೆ ಸೇವಿಸುವಂತೆ ಹೇಳಿದರು. 

ವೈದ್ಯರ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ವೀರಪ್ಪನ ತೊಂದರೆಗಳು ವಾರ ಕಳೆಯುವಷ್ಟರಲ್ಲೇ ಮಾಯವಾಗಿದ್ದವು. ವೈದ್ಯರು ನೀಡಿದ್ದ ಶಕ್ತಿ ವರ್ಧಕ ಮಾತ್ರೆಗಳು ನಿಜಕ್ಕೂ ಅದ್ಭುತ ಪರಿಣಾಮವನ್ನು ತೋರಿದ್ದವು!. 

ಸುಮಾರು ಆರು ತಿಂಗಳುಗಳ ಬಳಿಕ ವೀರಪ್ಪನ ಮನೆಗೆ ಭೇಟಿ ನೀಡಿದ್ದ ಸೋದರಮಾವನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ, ಅವರಿಗೂ ಅತಿಆಯಾಸ ಮತ್ತು ತಲೆನೋವಿನ ಬಾಧೆಯಿರುವುದನ್ನು ಅರಿತ ವೀರಪ್ಪನು ತಾನು ಸೇವಿಸುತ್ತಿರುವ ಮಾತ್ರೆಯೊಂದನ್ನು ಅವರಿಗೆ ನೀಡಿದ್ದನು. ಈ ಮಾತ್ರೆಯನ್ನು ಗುರುತಿಸಿದ ಸೋದರಮಾವನು, ಇವು ತಾನು ಹಿಂದೆ ಸೇವಿಸುತ್ತಿದ್ದ ಬಿ. ಪಿ. ಯ ಮಾತ್ರೆಯೆಂದು ಹೇಳಿದಾಗ ವೀರಪ್ಪನಿಗೆ ಗಾಬರಿಯಾಗಿತ್ತು.

ಮರುದಿನ ಔಷದ ಅಂಗಡಿಗೆ ತೆರಳಿ ಇದು ಬಿ. ಪಿ. ಯ ಮಾತ್ರೆ ಎನ್ನುವುದನ್ನು ಖಚಿತಪಡಿಸಿಕೊಂಡ ವೀರಪ್ಪನು, ಪಕ್ಕದಲ್ಲೇ ಇದ್ದ ವೈದ್ಯರಲ್ಲಿ ತನ್ನ ರಕ್ತದ ಒತ್ತಡವನ್ನು ಪರೀಕ್ಷಿಸುವಂತೆ ಹೇಳಿದ್ದನು. ಆತನ ವ್ಯಾಧಿಯ ಬಗ್ಗೆ ಅರಿವಿಲ್ಲದ ವೈದ್ಯರು ಆತನನ್ನು ಪರೀಕ್ಷಿಸಿದ ಬಳಿಕ ಬಿ. ಪಿ. ತೃಪ್ತಿಕರವಾಗಿದೆ ಎಂದಿದ್ದರು. ಆದರೆ ತಜ್ನವೈದ್ಯರು ನೀಡಿದ್ದ ಮಾತ್ರೆಗಳ ಸೇವನೆಯಿಂದಲೇ ತನ್ನ ರಕ್ತದೊತ್ತಡ ಕಡಿಮೆಯಾಗಿರುವುದನ್ನು ನಂಬಲು ಸಿದ್ಧನಿಲ್ಲದ ವೀರಪ್ಪನಿಗೆ, ಶಕ್ತಿವರ್ಧಕ ಮಾತ್ರೆಗಳೆಂದು ಬಿ. ಪಿ. ಯ ಮಾತ್ರೆ ನೀಡಿದ ವೈದ್ಯರ ಮೇಲೆ ಭಾರೀ ಸಿಟ್ಟುಬಂದಿತ್ತು. ಇದರೊಂದಿಗೆ ಈ ಮಾತ್ರೆಗಳ ಸೇವನೆಯೂ ನಿಂತುಹೋಗಿತ್ತು!. 

ಭಾಗ- ೩ 

ತಜ್ಞವೈದ್ಯರ ಚಿಕಿತ್ಸೆಯಿಂದ ತನ್ನ ಸಮಸ್ಯೆಗಳು ಪರಿಹಾರಗೊಂಡಿದ್ದರೂ, ಬಿ. ಪಿ. ಯಾ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದ ವೀರಪ್ಪನಿಗೆ ಮುಂದೆ ಸಂಭವಿಸಬಹುದಾದ ಅನಾಹುತಗಳ ಅರಿವಿರಲಿಲ್ಲ. ಔಷದ ಸೇವನೆಯನ್ನು ನಿಲ್ಲಿಸಿ ವಾರ ಕಳೆಯುವಷ್ಟರಲ್ಲೇ ಮತ್ತೆ ಮರುಕಳಿಸಿದ ತಲೆನೋವಿನೊಂದಿಗೆ, ತಲೆತಿರುಗಿದಂತಾಗುವ ತೊಂದರೆಯೂ ಹೊಸದಾಗಿ ಆರಂಭವಾಗಿತ್ತು. ಇದರಿಂದಾಗಿ ಆತನಿಗೆ ಸಾಕಷ್ಟು ಹಿಂಸೆಯಾಗುತ್ತಿದ್ದರೂ, ಮತ್ತೆ ಮಾತ್ರೆಗಳನ್ನು ಸೇವಿಸದಿರಲು, ಪಕ್ಷವಾತದ ಹೆದರಿಕೆಯೇ ಕಾರಣವಾಗಿತ್ತು. 

ಚಿಕಿತ್ಸೆಯನ್ನು ನಿಲ್ಲಿಸಿ ಒಂದೆರಡು ತಿಂಗಳುಗಳ ಬಳಿಕ ತನ್ನ ತಂಗಿಯ ಮನೆಯಲ್ಲಿನ ಶುಭಕಾರ್ಯಕ್ಕೆ ಹೋಗಿದ್ದ ವೀರಪ್ಪನು ಒಂದೆರಡು ರಾತ್ರಿ ನಿದ್ದೆಗೆಟ್ಟಿದ್ದನು. ಊರಿಗೆ ಮರಳಿದಂದು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡ ವೀರಪ್ಪನಿಗೆ ಮೂತ್ರಶಂಕೆಗೆ ಹೋಗಬೇಕೆನಿಸಿತ್ತು. ಹಾಸಿಗೆಯಿಂದ ಎದ್ದೇಳಲು ಪ್ರಯತ್ನಿಸಿದಾಗ ಆತನ ಶರೀರದ ಬಳಭಾಗವು ಜೋಮುಹಿಡಿದಂತಾಗಿದ್ದು, ಸಂಪೂರ್ಣವಾಗಿ ನಿಶ್ಚೇಷ್ಟಿತವಾಗಿತ್ತು. ಪತ್ನಿಯನ್ನು ಕರೆಯಲು ಪ್ರಯತ್ನಿಸಿದಾಗ ನಾಲಿಗೆಯೂ ಸ್ವಾಧೀನದಲ್ಲಿ ಇಲ್ಲದಿರುವುದು ಅರಿವಿಗೆ ಬಂದಂತೆಯೇ, ಹತಾಶನಾಗಿ ಕಣ್ಣೀರು ಸುರಿಸಿದ್ದನು. 

ಅದೃಷ್ಟವಶಾತ್ ನಾಯಿ ಬೊಗಳಿದ ಸದ್ದಿಗೆ ಎಚ್ಚೆತ್ತ ಆತನ ಪತ್ನಿಯು ಹಜಾರಕ್ಕೆ ಬಂದು ದೀಪ ಉರಿಸಿದಾಗ, ಆಕೆಯನ್ನು ಕಂಡು ಮಾತನಾಡಲು ಪ್ರಯತ್ನಿಸಿ ತೊದಲುತ್ತಿದ್ದ ಪತಿಯ ಮುಖವೂ ವಕ್ರವಾಗಿದ್ದನ್ನು ಕಂಡು ಗಾಬರಿಯಿಂದ ಮಗನನ್ನು ಕರೆದಿದ್ದಳು. ಅರ್ಧ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವೀರಪ್ಪನಿಗೆ ಸೂಕ್ತ ಸಮಯದಲ್ಲಿ ತುರ್ತುಚಿಕಿತ್ಸೆ ಲಭಿಸಿತ್ತು. ಮರುದಿನ ಸಂಜೆಯ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ವೀರಪ್ಪನನ್ನು ಕಂಡು, ಮನೆಮಂದಿ ನಿಟ್ಟುಸಿರು ಬಿಟ್ಟಿದ್ದರು. ಚಿಕಿತ್ಸೆ ನೀಡಿದ ತಜ್ಞವೈದ್ಯರ ಅಭಿಪ್ರಾಯದಂತೆ ರೋಗಿಯ ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತದ ತುಣುಕಿನಿಂದ ಉದ್ಭವಿಸಿದ ಅಡಚಣೆಯಿಂದಾಗಿ ಕ್ಷಣಕಾಲ ಬಾಧಿಸುವ "ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್" ವೀರಪ್ಪನನ್ನು ಕಾಡಿತ್ತು. ಅದೃಷ್ಟವಶಾತ್ ತುರ್ತು ಚಿಕಿತ್ಸೆ ಲಭಿಸಿದ್ದರಿಂದ ಶಾಶ್ವತವಾದ ಹಾಗೂ ಸುದೀರ್ಘಕಾಲ ಬಾಧಿಸಬಲ್ಲ ಶಾರೀರಿಕ ನ್ಯೂನತೆಗಳು ಉದ್ಭವಿಸಿರಲಿಲ್ಲ. 

ಕೆಲವೇ ದಿನಗಳಲ್ಲಿ ಮನೆಗೆ ಮರಳಿದ ವೀರಪ್ಪನು ಸಂಪೂರ್ಣವಾಗಿ ಗುನಮುಖನಾಗಿದ್ದನು. ಜತೆಗೆ ತನ್ನ ನಿರ್ಲಕ್ಷ್ಯ ಮತ್ತು ತಪ್ಪು ಕಲ್ಪನೆಗಳಿಂದಾಗಿ ಸಂಭವಿಸಿದ್ದ ಅನಾಹುತದಿಂದ ಕೂದಲೆಳೆಯಷ್ಟು ಅಂತರದಿಂದ ಪಾರಗಿದ್ದುದನ್ನು ಅರ್ಥೈಸಿಕೊಂಡಿದ್ದ ಆತನು, ಜೀವನ ಪರ್ಯಂತ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ನಿರ್ಧರಿಸಿದ್ದನು. 

ಕೊನೆಯ ಮಾತು 

ಶಾಶ್ವತ ಪರಿಹಾರವಿಲ್ಲದ ಅಥವಾ ಇತರ ಗಂಭೀರ ಕಾಯಿಲೆಗಳು ಬಾಧಿಸಿದ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸುವ ಅಸಂಖ್ಯ ರೋಗಿಗಳು ಅನಾವಶ್ಯಕವಾಗಿ ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಅಂತೆಯೇ ಹೃದ್ರೋಗ,ಮಧುಮೇಹ ಹಾಗೂ  ಅಧಿಕ ರಕ್ತದೊತ್ತಡಗಳಂತಹ ವ್ಯಾಧಿಗಳು ತಲೆದೋರಿದಾಗ ಜೀವನಪರ್ಯಂತ ಔಷದ ಸೇವನೆ ಒಳ್ಳೆಯದಲ್ಲ ಅಥವಾ ಅಪಾಯಕಾರಿ ಎಂದು ಭಾವಿಸಿ, ವೈದ್ಯರು ಸೂಚಿಸಿದ ಔಷದಗಳ ಪ್ರಮಾಣ( ಒಂದು ಮಾತ್ರೆಗೆ ಬದಲಾಗಿ ಅರ್ಧ ಮಾತ್ರೆ) ಹಾಗೂ ಅವಧಿ (ದಿನನಿತ್ಯ ಸೇವಿಸುವ ಬದಲಾಗಿ ಎರಡು ದಿನಗಳಿಗೊಮ್ಮೆ) ಗಳನ್ನು ತಾವಾಗಿ ಬದಲಾಯಿಸಿಕೊಳ್ಳುತ್ತಾರೆ. ಬಳಿಕ ಯಾವುದೇ ತೊಂದರೆಗಳು ಕಂಡುಬರದೇ ಇದ್ದಲ್ಲಿ, ತಮ್ಮ ಬಂಧುಮಿತ್ರರಿಗೂ ಇಂತಹ ಉಪಕ್ರಮಗಳನ್ನು ಅನುಸರಿಸುವಂತೆ ಸಲಹೆಯನ್ನೂ ನೀಡುತ್ತಾರೆ!. ತತ್ಪರಿಣಾಮವಾಗಿ ಅನಿರೀಕ್ಷಿತವಾಗಿ ಉದ್ಭವಿಸುವ ಅಪಾಯಕಾರಿ ಸನ್ನಿವೇಶಗಳಿಂದ ಪಾರಾಗಿ ಬಂದಲ್ಲಿ "ಕೆಟ್ಟ ಮೇಲೆ ಬುದ್ಧಿ ಬಂತು" ಎನ್ನುವಂತೆ ಜೀವನಪರ್ಯಂತ ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾರೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೧-೧೦-೨೦೦೭ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment