Tuesday, November 5, 2013

Enidu gas trabal?


                                                ಏನಿದು ಗ್ಯಾಸ್ ಟ್ರಬಲ್?

ಮಾಧ್ಯಮಗಳಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುವ ಉತ್ಪ್ರೇಕ್ಷಿತ ಜಾಹೀರಾತುಗಳಲ್ಲಿ ಬಣ್ಣಿಸಿದ ವಿವಿಧ ರೋಗಲಕ್ಷಣಗಳನ್ನು ಓದಿ, ನಿಮಗೂ ಇಂತಹ ಕಾಯಿಲೆ ಇರಬಹುದೆಂದು ಭಾವಿಸಿರುವಿರಾ?. ಇಂತಹ ಜಾಹೀರಾತುಗಳಲ್ಲಿ ಒಂದಾಗಿರುವ ಹಾಗೂ ಕಪೋಲಕಲ್ಪಿತ ಕಾಯಿಲೆಗಳಲ್ಲಿ ಪ್ರಮುಖವಾಗಿರುವ,  "ಗ್ಯಾಸ್ ಟ್ರಬಲ್" ಎನ್ನುವ ಶಬ್ದವೇ ವೈದ್ಯಕೀಯ ಪರಿಭಾಷೆಯಲ್ಲಿ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ. ಈ ಬಗ್ಗೆ ನೀವು ಅರಿತಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
-------------            ------------               ---------------                ---------------                      -------------            -----------------------

ಸಾಮಾನ್ಯವಾಗಿ ಎಲ್ಲರಲ್ಲೂ ಕಂದುಬರಬಹುದಾದ ಅಜೀರ್ಣ,ಹೊಟ್ಟೆನೋವು, ಹೊಟ್ಟೆಯುಬ್ಬರ, ಎದೆ- ಹೊಟ್ಟೆ ಉರಿ, ಎದೆನೋವು, ಹಸಿವಿಲ್ಲದಿರುವುದು, ಅತಿಹಸಿವೆ, ಹೊಟ್ಟೆ ತೊಳಸಿದಂತೆ ಆಗುವುದು ಮತ್ತು ವಾಕರಿಕೆ ಅಥವಾ ವಾಂತಿ ಇತ್ಯಾದಿ ಲಕ್ಷಣಗಳನ್ನು ಒಂದಾಗಿಸಿ, ಜನಸಾಮಾನ್ಯರೇ ಸೃಷ್ಟಿಸಿರುವ  ಹಾಗೂ ಅಬಾಲವೃದ್ಧರೆಲ್ಲರನ್ನೂ ಬಾಧಿಸಬಲ್ಲದೆಂದು ನೀವು ನಂಬಿರುವ "ಗ್ಯಾಸ್ ಟ್ರಬಲ್ " ಒಂದು ನಿಗೂಢ ಕಾಯಿಲೆಯಲ್ಲ. 

ಏನಿದು ಗ್ಯಾಸ್ ಟ್ರಬಲ್?

ನಿಮ್ಮ ದೈನಂದಿನ ಆಹಾರಸೇವನೆಯ ಸಮಯದಲ್ಲಿ ವ್ಯತ್ಯಯ, ಮಸಾಲೆ ಹೆಚ್ಚಿರುವ,ಎಣ್ಣೆ- ತುಪ್ಪದಲ್ಲಿ ಕರಿದ, ಖಾರ ಹೆಚ್ಚಿರುವ ಉಪ್ಪಿನಕಾಯಿ, ಮೀನು ಮಾಂಸಗಳಂತಹ ಆಹಾರಗಳ ಸೇವನೆ, ತಂಬಾಕು ಹಾಗೂ ಮದ್ಯಪಾನ ಇತ್ಯಾದಿಗಳಿಂದ ನಿಮ್ಮಲ್ಲಿ ಮೇಲೆ ನಮೂದಿಸಿದ ಕೆಲವು ಲಕ್ಷಣಗಳು ಕಂಡುಬರಬಹುದು. ಇದಲ್ಲದೇ ನಿದ್ರಾಹೀನತೆ, ತೀವ್ರ ಮಾನಸಿಕ ಒತ್ತಡ ಮತ್ತು ಕೆಲ ವಿಧದ ಔಷದಗಳ ಸೇವನೆಯಿಂದಲೂ, ವೈದ್ಯಕೀಯ ಪರಿಭಾಷೆಯಲ್ಲಿ ' ಗ್ಯಾಸ್ತ್ರೈಟಿಸ್" ಎಂದು ಕರೆಯಲ್ಪಡುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದೇ ರೀತಿಯ ಲಕ್ಷಣಗಳನ್ನು ತೋರುವ ಹಲವಾರು ವ್ಯಾಧಿಗಳು ಇರುವುದರಿಂದ, ಇಂತಹ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ಬಹುತೇಕ ಜನರು ನಂಬಿರುವಂತೆ ದ್ವಿದಳ ಧಾನ್ಯಗಳು,ಬಟಾಟೆ,ಗೆಣಸು ಮತ್ತು ನಿಮ್ಮ ಅಚ್ಚುಮೆಚ್ಚಿನ ದೇವಿ ಹಲಸು ಇತ್ಯಾದಿಗಳು ನಿಶ್ಚಿತವಾಗಿಯೂ "ವಾಯುಕಾರಕ" ಗಳಲ್ಲ ಎಂದಲ್ಲಿ ನೀವು ನಂಬಲಾರಿರಿ. ಉದಾಹರಣೆಗೆ ಬಟಾಟೆ ಉರುಫ್ ಆಲೂಗಡ್ಡೆಯನ್ನು ತಿಂದಲ್ಲಿ ಗ್ಯಾಸ್ ಟ್ರಬಲ್ ಬಾಧಿಸುವುದು ನಿಜವಾದಲ್ಲಿ, ಫ್ರಾನ್ಸ್ ದೇಶದ ಸಮಸ್ತ ಜನರಿಗೂ ಈ ಸಮಸ್ಯೆ ಬಾಧಿಸುತ್ತಿದ್ದುದರಲ್ಲಿ ಸಂದೇಹವಿಲ್ಲ. ಏಕೆಂದರೆ ಭಾರತೀಯರು ಅನ್ನವನ್ನು ಸೇವಿಸುವಂತೆಯೇ, ಫ್ರಾನ್ಸ್ ದೇಶದ ಜನರು ಬಟಾಟೆಯ ವಿವಿಧ ಖಾದ್ಯಗಳನ್ನು ದಿನವಿಡೀ ಸವಿಯುತ್ತಾರೆ!. 

ನಾವು ಘನ ಆಹಾರವನ್ನು ಸೇವಿಸುವಾಗ, ನೀರು ಕುಡಿಯುವಾಗ ಮತ್ತು ಮಾತನಾಡುವಾಗ ಅಲ್ಪ ಪ್ರಮಾಣದಲ್ಲಿ ಗಾಳಿಯನ್ನು ನುಂಗುವುದು ಸ್ವಾಭಾವಿಕ. ಇದೇ ರೀತಿಯಲ್ಲಿ ನಾವು ಸೇವಿಸಿದ ಆಹಾರ ಜೀರ್ಣವಾಗುವಾಗ ಜರಗುವ ರಾಸಾಯನಿಕ ಕ್ರಿಯೆಗಳಿಂದ ಅಲ್ಪ ಪ್ರಮಾಣದ 'ಅನಿಲ" ಉತ್ಪನ್ನವಾಗುವುದು. ಸಾಮಾನ್ಯವಾಗಿ ಈ "ವಾಯು" ನಮ್ಮ ಬಾಯಿ ಅಥವಾ ಗುದದ್ವಾರದಿಂದ ಹೊರಹೋಗುವುದು. ಈ ರೀತಿಯಲ್ಲಿ ಹೊರಬೀಳುವ ತೇಗು ಹಾಗೂ ಅಪಾನವಾಯುಗಳು ಗ್ಯಾಸ್ ಟ್ರಬಲ್ ನ ಲಕ್ಷಣಗಳಲ್ಲ. ತಾಯಿಯ ಮೊಲೆಹಾಲು ಕುಡಿದು ಹೊಟ್ಟೆ ತುಂಬಿದ ಪುಟ್ಟ ಕಂದ ಗ್ಯಾಸ್ ಟ್ರಬಲ್ ನಿಂದಲ್ಲ!. 

ಅದೇನೇ ಇರಲಿ, ನಿಮ್ಮಲ್ಲಿ ಇಂತಹ ತೊಂದರೆಗಳು ಕಂಡುಬಂದಾಗ ಅಜೀರ್ಣ,ಎಸಿಡಿಟಿ ಅಥವಾ ಗ್ಯಾಸ್ ಟ್ರಬಲ್ ಎಂದು ನೀವಾಗಿ ನಿರ್ಧರಿಸಿ, ಸ್ವಯಂ ಚಿಕಿತ್ಸೆ ಪ್ರಯೋಗಿಸದೇ ಅಥವಾ ನಿರ್ಲಕ್ಷಿಸದೇ ನಿಮ್ಮ ಕುಟುಂಬ ವೈದ್ಯರನ್ನು ಸಂದರ್ಶಿಸಿ. 

ದೀಪ್ತಿಯ ಎಸಿಡಿಟಿ 

ಅರಳು ಹುರಿದಂತೆ ಮಾತನಾಡುವ ಪುಟ್ಟ ದೀಪ್ತಿ, ಮೋಹನರ ಮುದ್ದಿನ ಮಗಳು. ಈ ಮಾತಿನ ಮಲ್ಲಿ ಅಂದೇಕೋ ತೀವ್ರ ಹೊಟ್ಟೆನೋವಿನಿಂದ ಮಂಕಾಗಿದ್ದಳು. ವಿಷಯವನ್ನರಿತ ಮೋಹನರು ತತ್ಕ್ಷಣ ಪರಿಚಿತ ವೈದ್ಯರಲ್ಲಿಗೆ ಮಗಳನ್ನು ಕರೆದೊಯ್ದರು.ವೈದ್ಯರು  ದೀಪ್ತಿಯನ್ನು ಪರೀಕ್ಷಿಸುತ್ತಾ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋಹನರೇ ಉತ್ತರಿಸುತ್ತಿದ್ದರು. ನಿನ್ನೆ ಸರಿಯಾಗಿ ಕೋಳಿಯ ಪದಾರ್ಥ ತಿಂದಿದ್ದ ಕಾರಣದಿಂದ ಇಂದು ಹೊಟ್ಟೆನೋವು ಬಂದಿರಬೇಕು, ಹಾಗೂ ಇದು ಬಹುಶಃ "ಎಸಿಡಿಟಿ " ಇರಬಹುದೆಂದು ವೈದ್ಯರಿಗೆ ಸಲಹೆಯನ್ನೂ ನೀಡಿದರು. 

ಆದರೆ ವೈದ್ಯರ ಮನದಲ್ಲಿ ಮೂಡಿದ್ದ ಸಂದೇಹ ನಿವಾರಣೆಗಾಗಿ ಅಲ್ಟ್ರಾ ಸೌಂಡ್ ಸೋನೋಗ್ರಾಂ ಮಾಡಿಸುವ ಅವಶ್ಯಕತೆ ಇದೆಯೆಂದು ವೈದ್ಯರು ಸೂಚಿಸಿದರೂ, ತುರ್ತಾಗಿ ಮೂದಬಿದರೆಗೆ ಹೋಗಲಿದೆಯೆಂದು ಹೇಳಿದ ಮೋಹನರು, ನಾಳೆ ಸ್ಕ್ಯಾನ್ ಮಾಡಿಸುವುದಾಗಿ ಹೇಳಿ ತಾತ್ಕಾಲಿಕ ಚಿಕಿತ್ಸೆಯನ್ನು ಪಡೆದು ಮಗಳನ್ನು ಮನೆಗೆ ಕರೆದೊಯ್ದರು. ಮತ್ತೆ ದೀಪ್ತಿಯನ್ನು ವೈದ್ಯರು ಕಂಡದ್ದು ಮೂರು ವಾರಗಳ ನಂತರ. ಈ ಬಾರಿ ಸಮಾ ಮೀನಿನ ಪದಾರ್ಥ ತಿಂದು ಹೊಟ್ಟೆನೋವು ಬಂದಿದೆ ಎನ್ನುವ ಹೇಳಿಕೆ ಹಾಗೂ ಸ್ಕ್ಯಾನ್ ಮಾಡಿಸಲು ಪುರುಸೊತ್ತಿಲ್ಲವೆಂದು ತಾತ್ಕಾಲಿಕ ಚಿಕಿತ್ಸೆಯ ಪುನರಾವರ್ತನೆಯಾಯಿತು. ಆದರೆ ಮುಂದಿನ ಕೆಲವೇ ದಿನಗಳಲ್ಲಿ ದೀಪ್ತಿಯ ಹೊಟ್ಟೆನೋವು ಮತ್ತೆ ಮರುಕಳಿಸಿದಾಗ ಮೋಹನರು ಎಚ್ಚೆತ್ತರು. ಸ್ಕ್ಯಾನ್ ಮಾಡಿಸಿದ ವರದಿಯೊಂದಿಗೆ ವೈದ್ಯರನ್ನು ಭೇಟಿ ಮಾಡಿದ ಬಳಿಕ, ಅವರ ಸಲಹೆಯಂತೆ ಶಸ್ತ್ರಚಿಕಿತ್ಸಾ ತಜ್ಞರಲ್ಲಿಗೆ ಕರೆದೊಯ್ದರು. 

ಮರುದಿನ ದೀಪ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ಪೀಡಿತ ಅಪೆಂಡಿಕ್ಸ್ ನ್ನು ತೆಗೆಯಲಾಯಿತು. ವಿಶೇಷವೆಂದರೆ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ದೀಪ್ತಿಗೆ, ತದನಂತರ ಮೀನು- ಮಾಂಸಗಳನ್ನು ಸೇವಿಸಿದರೂ ಹೊಟ್ಟೆನೋವು ಮಾತ್ರ ಪೀಡಿಸುವುದೇ ಇಲ್ಲ!. 

ಗೋಪಣ್ಣನ ಗ್ಯಾಸ್ ಟ್ರಬಲ್ 

ಮಧ್ಯವಯಸ್ಸಿನ ಗೋಪಣ್ಣ ಸಮಾಜಸೆವಕರಾಗಿ ಜನಪ್ರಿಯರು. ಹಗಲಿರುಳು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವ ಗೋಪಣ್ಣನಿಗೆ ಆಕಸ್ಮಿಕವಾಗಿ ನಡುರಾತ್ರಿಯಲ್ಲಿ ಪ್ರಾರಂಭವಾಗಿದ್ದ ಹೊಟ್ಟೆನೋವು,ಬೆನ್ನಿನ ಒಂದು ಪಾರ್ಶ್ವಕ್ಕೂ ಹರಡಿತ್ತು.ಅನಿರೀಕ್ಷಿತವಾಗಿ ಬಂದೆರಗಿದ ಸಮಸ್ಯೆಯಿಂದ  ಗಾಬರಿಗೊಂಡ ಗೋಪಣ್ಣ, ತಕ್ಷಣ ತಮ್ಮ ಪರಿಚಿತ ವೈದ್ಯರನ್ನು ಮನೆಗೆ ಕರೆಸಿದರು. ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಾನು ಸಂಜೆ ತಿಂದ ಮಸಾಲೆ ದೋಸೆ ಮತ್ತು ರಾತ್ರಿ ಸೇವಿಸಿದ್ದ ಮಾಂಸಾಹಾರಗಳಿಂದಾಗಿ ತನಗಿದ್ದ 'ಗ್ಯಾಸ್ ಟ್ರಬಲ್" ಉಲ್ಬಣಿಸಿದೆ ಎನ್ನುತ್ತಾ,ಪ್ರಯತ್ನಪೂರ್ವಕವಾಗಿ ತೇಗುತ್ತಿದ್ದರು. ಮಂದಹಾಸ ಬೀರಿದ ವೈದ್ಯರು ನೋವು ನಿವಾರಕ ಇಂಜೆಕ್ಷನ್ ನೀಡಿ, ಮರುದಿನ ಬೆಳಿಗ್ಗೆ ಆಹಾರ ಸೇವನೆಗೆ ಮುನ್ನ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದರು. ಮರುದಿನ ವೈದ್ಯರು ಕಾದಿದ್ದರೂ, ಗೋಪಣ್ಣ ಮಾತ್ರ ನಾಪತ್ತೆಯಾಗಿದ್ದರು. 

ವಾರ ಕಳೆಯುವಷ್ಟರಲ್ಲಿ ಅಪರಾತ್ರಿಯಲ್ಲಿ ಮರುಕಳಿಸಿದ್ದ ನೋವಿನ ತೀವ್ರತೆಗೆ ಹೆದರಿದ್ದ ಗೋಪಣ್ಣ, ಮತ್ತೆ ವೈದ್ಯರನ್ನು ಮನೆಗೆ ಕರೆಸಿದ್ದರು. ಆದರೆ ವೈದ್ಯರ ನೋವು ನಿವಾರಕ ಇಂಜೆಕ್ಷನ್ ಅಪೇಕ್ಷಿತ ಪರಿಣಾಮವನ್ನು ತೋರದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮರುದಿನ ತಜ್ಞ ವೈದ್ಯರ ಸೂಚನೆಯಂತೆ ಸ್ಕ್ಯಾನ್ ಮಾಡಿದಾಗ, ಗೋಪಣ್ಣನ ಮೂತ್ರಪಿಂಡ ಮತ್ತು ಮೂತ್ರನಾಳದಲ್ಲಿ ಹಲವಾರು ಕಲ್ಲುಗಳು ಪತ್ತೆಯಾಗಿದ್ದವು. ಸೂಕ್ತ ಚಿಕಿತ್ಸೆಯ ಬಳಿಕ ಗೋಪಣ್ಣನ ಆರೋಗ್ಯ ಸುಧಾರಿಸಿದ್ದು, ಅವರ ಗ್ಯಾಸ್ ಟ್ರಬಲ್ ಕೂಡಾ ಕಾಣದಂತೆ ಮಾಯವಾಗಿದೆ!. 

ಶಿವಪ್ಪನ ಅಜೀರ್ಣ 

ಅವಿವಾಹಿತ ತರುಣ ಶಿವಪ್ಪನು ಕೇಂದ್ರ ಅಬಕಾರಿ ಇಲಾಖೆಯ ಉದ್ಯೋಗಿ. ಒಂಟಿಜೀವವಾಗಿದ್ದರಿಂದ ಊಟತಿಂಡಿಗಳಿಗೆ ಹೋಟೆಲನ್ನು ಆಶ್ರಯಿಸಿದ್ದನು. ಇಲಾಖೆಯ ನಿರೀಕ್ಷಕ ಜಯರಾಮರು ಮತ್ತವರ ಪತ್ನಿಗೆ ಶಿವಪ್ಪನ ಬಗ್ಗೆ ಅತೀವ ಮಮತೆ. ಅವರ ಮನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಂದು ಆತನಿಗೆ ಮೀನು- ಮಾಂಸಗಳ ಪುಷ್ಕಳ ಭೋಜನ ಮತ್ತು ಮರುದಿನ ಅಜೀರ್ಣ ಮತ್ತು ಹೊಟ್ಟೆನೋವಿನಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ವಾಡಿಕೆಯಾಗಿತ್ತು. ವಿವಿಧ ವೈದ್ಯರಿಂದ ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪಡೆದುಕೊಂಡರೂ, ಶಿವಪ್ಪನ ಹೊಟ್ಟೆನೋವು ಛಲ ಬಿಡದ ತ್ರಿವಿಕ್ರಮನ ಕಥೆಯ ಭೇತಾಳನಂತೆ ಆತನನ್ನು ಬಿಡುತ್ತಿರಲಿಲ್ಲ. 

ಅಂತಿಮವಾಗಿ ತನ್ನ ಕಚೇರಿಯ ಪಕ್ಕದಲ್ಲಿದ್ದ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸಾ ತಜ್ಞರನ್ನು ಭೇಟಿಯಾಗಿ, ಅವರ ಸೂಚನೆಯಂತೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದಾಗ ಆತನ ಪಿತ್ತಕೋಶದಲ್ಲಿ ಅನೇಕ ಕಲ್ಲುಗಳು ತುಂಬಿ ಊದಿಕೊಂಡಿರುವುದು ಪತ್ತೆಯಾಗಿತ್ತು. ಯಶಸ್ವೀ ಶಸ್ತ್ರ ಚಿಕಿತ್ಸೆಯ ಬಳಿಕ ಶಿವಪ್ಪನ ಅಜೀರ್ಣ ಎನ್ನುವ ಭೇತಾಳ ಕಣ್ಮರೆಯಾಗಿತ್ತು!. 

ದೀಪ್ತಿ, ಗೋಪಣ್ಣ ಮತ್ತು ಶಿವಪ್ಪ ಈ ಮೂವರಲ್ಲೂ ಕಂಡು ಬರುತ್ತಿದ್ದ ರೋಗಲಕ್ಷಣಗಳಲ್ಲಿ ಸಾಮ್ಯತೆ ಇದ್ದರೂ, ಇವರ ಕಾಯಿಲೆಗಳು ವಿಭಿನ್ನವಾಗಿದ್ದವು. ಇದೇ ರೀತಿಯ ಲಕ್ಷಣಗಳನ್ನು ಜಠರದ ಹುಣ್ಣುಗಳು, ಯಕೃತ್ತಿನ ಹುಣ್ಣು, ಮೇದೋಜೀರಕ ಗ್ರಂಥಿಯ ಉರಿಯೂತ, ಪಿತ್ತಕೋಶದಲ್ಲಿ ಕಲ್ಲುಗಳು ಮತ್ತು ಇದರ ನಾಳದಲ್ಲಿ ಅಡಚಣೆ, ಮೂತ್ರಪಿಂಡ- ನಾಳಗಳಲ್ಲಿನ ಕಲ್ಲುಗಳು, ಸ್ತ್ರೀಯರ ಆಂತರಿಕ ಪ್ರಜನನಾಂಗಗಳ ಕಾಯಿಲೆಗಳು ಹಾಗೂ ಉದರದೊಳಗಿನ  ಇನ್ನಿತರ ಅಂಗಗಳಲ್ಲಿನ ಕಾಯಿಲೆಗಳು  ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ ಕಾಣಬಹುದು. ಕೆಲವೊಮ್ಮೆ ಸಣ್ಣ ಎದೆ ನೋವು, ಹೊಟ್ಟೆಯುಬ್ಬರ, ವಾಂತಿಯಂತಹ ಲಕ್ಷಣಗಳು ಹೃದಯಾಘಾತವಾದಾಗಲೂ ಕಂಡುಬರುತ್ತವೆ. 

ಕಾಲೇಜು ಕನ್ಯೆಯರಿಗೊಂದು ಕಿವಿಮಾತು!

ಹದಿಹರೆಯದ ಶಿಲ್ಪಾ ಕಾಲೇಜು ವಿದ್ಯಾರ್ಥಿನಿ. ತುಸು ಧಡೂತಿ ದೇಹದ ಆಕೆಗೆ ಒಂದಿಷ್ಟು ಕೀಳರಿಮೆಯೂ ಇದ್ದುದರಿಂದ ಆಹಾರವನ್ನು ಸೇವಿಸಲು ಹಿಂಜರಿಯುತ್ತಿದ್ದಳು. ಪ್ರಾಯಶಃ ಇದೇ ಕಾರಣದಿಂದಾಗಿ ಪ್ರಯೋಗಶಾಲೆಯಲ್ಲಿ ಅನೇಕಬಾರಿ ಕಣ್ಣುಕತ್ತಲೆ ಬಂದು ಬಿದ್ದಿದ್ದಳು. ಆಕೆಯ ಗೆಳತಿಯಿಂದ ವಿಷಯವರಿತ ಅವಳ ತಾಯಿಯು, ಮಗಳನ್ನು ಪರಿಚಯದ ವೈದ್ಯರಲ್ಲಿ ಕರೆದೊಯ್ದರು.

ಸುಂದರಿಯಾಗಿದ್ದರೂ ಶರೀರದ ತೂಕ ಸ್ವಲ್ಪ ಹೆಚ್ಚೇ ಇದ್ದ ಕಾರಣದಿಂದ ಮತ್ತು ಐಶ್ವರ್ಯಾ ರೈ ಯಂತಹ ಅಂಗಸೌಷ್ಟವ ಹೊಂದುವ ಬಯಕೆಯಿಂದ,ಆಕೆ ಅಲ್ಪಾಹಾರ ಮತ್ತು ಕೆಲವೊಮ್ಮೆ ನಿರಾಹಾರ ವೃತವನ್ನು ಪರಿಪಾಲಿಸುತ್ತಿದ್ದುದು ವೈದ್ಯರಿಗೆ ತಿಳಿದುಬಂದಿತ್ತು. ಶಿಲ್ಪಾಳನ್ನು ತಪಾಸಣೆ ಮಾಡಿದ ವೈದ್ಯರಿಗೆ ಆಕೆಯು ಎಟ್ರೋಪಿಕ್ ಗ್ಯಾಸ್ಟ್ರೈಟಿಸ್ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. 

ಮಾನವ ಶರೀರ ಒಂದು ಜೀವಂತ ಯಂತ್ರ. ಮನುಷ್ಯನ ವಿವಿಧ ಶಾರೀರಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯಲು ಅವಶ್ಯವಾದ "ಇಂಧನ", ಅರ್ಥಾತ್ ಆಹಾರ ಸಮಯಾನುಸಾರ ದೊರೆಯದೆ ಇದ್ದಲ್ಲಿ, ಶರೀರದ ಕಾರ್ಯಕ್ಷಮತೆ ಕುಂಠಿತಗೊಳ್ಳುವುದು. ಪರಿಣಾಮವಾಗಿ ಶರೀರದ ತೂಕ ಮತ್ತು ಬೆಳವಣಿಗೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಮುಖ, ಕೈ ಕಾಲುಗಳು ಮತ್ತು ಹೊಟ್ಟೆಯ ಭಾಗದಲ್ಲಿ ಚರ್ಮ ತೆಳ್ಳಗಾಗಿ ಹೊಳಪನ್ನು ಕಳೆದುಕೊಳ್ಳುವುದು. ಕಣ್ಣುಗಳು ಗುಳಿಸೇರಿ ಕಾಂತಿಹೀನವಾಗುವುವು. ತಲೆಗೂದಲಿನ ಸ್ವಾಭಾವಿಕ ಅಂದ ಮತ್ತು ಹೊಳಪು ಮಾಯವಾಗುವುದು. ಹೃದಯದ ಗಾತ್ರ ಕುಗ್ಗಿ ಅದರ ಮತ್ತು ನಾಡಿಯ ಬಡಿತ ಕ್ಷೀಣಿಸುವುದು. ಜಠರ ಮತ್ತು ಸಣ್ಣ ಕರುಳುಗಳು ಕುಗ್ಗಿ ಆಹಾರದ ಪಚನಕ್ರಿಯೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆ ಕುಂದುವುದು. ಇದೇ ಸಂದರ್ಭದಲ್ಲಿ ಭೇದಿ ಪ್ರಾರಂಭವಾದಲ್ಲಿ ಶರೀರದಲ್ಲಿ ನೀರು ಮತ್ತು ಲವಣಗಳ ಕೊರತೆ ಉದ್ಭವಿಸುತ್ತದೆ. ಇದರೊಂದಿಗೆ ಅತಿ ಆಯಾಸ, ಶರೀರದ ವಿವಿಧ ಅಂಗಗಳಲ್ಲಿ ಬಾವು ಮತ್ತು ರಕ್ತಹೀನತೆ ಕಂಡುಬರುತ್ತದೆ. ಕೆಲ ವ್ಯಕ್ತಿಗಳು ಶಿಲ್ಪಾ ಳಿಗೆ ಆಗುತ್ತಿದ್ದಂತೆ ಕಣ್ಣು ಕತ್ತಲೆ ಬಂದು ಪ್ರಜ್ಞೆ ತಪ್ಪುವುದು ಅಪರೂಪವೇನಲ್ಲ. 

ಶಿಲ್ಪಾಳ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಲು ಸಮತೋಲಿತ ಆಹಾರಸೇವನೆಯೊಂದಿಗೆ ಶರೀರಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಖನಿಜಗಳು, ಲವಣಗಳು ಮತ್ತು ವಿಭಿನ್ನ ಜೀವಸತ್ವಗಳ ಬಗ್ಗೆ ಪುಟ್ಟ ಭಾಷಣವನ್ನೇ ಬಿಗಿದರು. ವೈದ್ಯರ ಸಲಹೆ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ಶಿಲ್ಪಾಳ ಆರೋಗ್ಯವು ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಸುಧಾರಿಸಿತ್ತು. 

ನೀವೇನು ಮಾಡಬಾರದು

ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಾಧಿಸಿದಾಗ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ನಮೂದಿಸಿರುವ ರೋಗಲಕ್ಷಣಗಳನ್ನು ಕಂಡು ಅಥವಾ ರೋಗಿಗಳ ಸಮಸ್ಯೆಗಳಿಗೆ ವೈದ್ಯರು ನೀಡಿದ ಸಮಾಧಾನ ಮತ್ತು ಚಿಕಿತ್ಸೆಗಳನ್ನು ಗಮನಿಸಿ ಇದೇ ರೀತಿಯ ಸಮಸ್ಯೆಗಳು ನಿಮ್ಮಲ್ಲೂ ಇವೆ ಎಂದು ಭ್ರಮಿಸದಿರಿ. ಇಂತಹ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಹೈಪೋಕಾಂಡ್ರಿಯಾಸಿಸ್" ಅರ್ಥಾತ್, ತನ್ನ ಆರೋಗ್ಯದ ಬಗ್ಗೆ ಮಾರಕ ಚಿಂತೆ ಇರುವ- ತನಗೆ (ಕಪೋಲ ಕಲ್ಪಿತ) ಯಾವುದೋ ರೋಗ ಇರುವುದೆಂದು ದೂರುವ ಪ್ರವೃತ್ತಿ ಎನ್ನುತ್ತಾರೆ. ಇಂತಹ ಸಮಸ್ಯೆ ಆರೋಗ್ಯವಂತರಲ್ಲೂ ಕಂಡುಬರುವುದುಂಟು. ವೈದ್ಯರು ಇಂತಹ ರೋಗಿಗಳಲ್ಲಿ "ವಾದ" ಮಾಡದೆ "ಸಂವಾದ" ನಡೆಸುವ ಮೂಲಕ ಸಮಾಧಾನ ನೀಡುವುದು ಅನಿವಾರ್ಯ. 

ಇದಲ್ಲದೆ ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತಾಡುತ್ತಾ ಸೇವೆ ಸಲ್ಲಿಸುವ "ಪದವಿ ಹೀನ" ಹಾಗೂ ಮಾನ್ಯತೆ ಇಲ್ಲದ ನಕಲಿ ವೈದ್ಯರಿಂದ ದೂರವಿರಿ. ಅವಶ್ಯಕ ತಪಾಸಣೆ- ಪರೀಕ್ಷೆಗಳನ್ನು ನಡೆಸದೆ ಚಿಕಿತ್ಸೆ ಪಡೆಯದಿರಿ. ನಿಮ್ಮಂತಹದ್ದೇ ಸಮಸ್ಯೆಗಳಿರುವ ಬಂಧುಮಿತ್ರರ ಪುಕ್ಕಟೆ ಸಲಹೆಯಂತೆ, ಅವರು ಸೇವಿಸುತ್ತಿರುವ ಔಷದಗಳನ್ನು ಸೇವಿಸಬೇಡಿ. 

ನೀವೇನು ಮಾಡಬಹುದು?

 ನಿಮ್ಮನ್ನು ಬಾಧಿಸಬಹುದಾದ ಗ್ಯಾಸ್ಟ್ರೈಟಿಸ್ ತಡೆಗಟ್ಟಲು ನಿಗದಿತ ಸಮಯದಲ್ಲಿ ನಿಯಮಿತ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ. ಅನ್ನ,ಚಪಾತಿ, ರೊಟ್ಟಿಗಳೊಂದಿಗೆ ಹಸಿ ತರಕಾರಿಗಳ ಸಲಾಡ್, ಸಿಹಿ ಮೊಸರು,ಹಣ್ಣುಹಂಪಲುಗಳು ಮತ್ತು ದಿನದಲ್ಲಿ ಕನಿಷ್ಠ ೨ ರಿಂದ ೩ ಲೀಟರ್ ಶುದ್ಧ ನೀರನ್ನು ಸೇವಿಸಿರಿ. ಎಣ್ಣೆ- ತುಪ್ಪದಲ್ಲಿ ಕರಿದ, ಅಧಿಕ ಖಾರವಿರುವ ಮಾಂಸಾಹಾರಗಳ ಸೇವನೆ, ತಂಬಾಕು ಮತ್ತು ಮದ್ಯಪಾನಗಳ ವರ್ಜನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟುವುದು ಸುಲಭಸಾಧ್ಯ. ಅಂತೆಯೇ ನಿದ್ರೆಗೆಡುವುದು ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸುವುದು ಅಷ್ಟೇ ಅವಶ್ಯ. ಇವುಗಳೊಂದಿಗೆ ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು ಉಪಯುಕ್ತವೆನಿಸೀತು. ನಿಮ್ಮ ವೈದ್ಯರು ಯಾವುದೇ ಸಂದರ್ಭದಲ್ಲಿ ಔಷದವನ್ನು ನೀಡುವಾಗ, ಇವುಗಳ ಸೇವನೆಯಿಂದ ಗ್ಯಾಸ್ಟ್ರೈಟಿಸ್ ಉಂಟಾಗುವ ಸಾಧ್ಯತೆಗಳಿದ್ದಲ್ಲಿ ಅದನ್ನು ತಡೆಗಟ್ಟುವ ಔಷದವನ್ನು ಇದರ ಜತೆಯಲ್ಲಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಿ. 

ಆಕಸ್ಮಿಕವಾಗಿ ತೀವ್ರ ಹೊಟ್ಟೆನೋವು ಅಥವಾ ಎದೆನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ. ಅಗತ್ಯವಿದ್ದಲ್ಲಿ ತಜ್ಞವೈದ್ಯರ ಸಲಹೆ ಹಾಗೂ ಅವರ ಸೂಚನೆಯಂತೆ ರಕ್ತ ಇತ್ಯಾದಿಗಳ ಪರೀಕ್ಷೆ, ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನ್, ಗ್ಯಾಸ್ತ್ರೋಸ್ಕೋಪಿ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿ ವೈದ್ಯರೊಂದಿಗೆ ಸಹಕರಿಸಿ. 

ನಿಮ್ಮ ವೈದ್ಯರಲ್ಲಿ ನಿಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಯಾವುದೆಂದು ಕೇಳಿ ತಿಳಿದುಕೊಳ್ಳಿ. ಅವರು ಸೂಚಿಸುವ ಚಿಕಿತ್ಸಾ ವಿಧಾನಗಳ ಬಗ್ಗೆ (ಔಷದ, ಮಾತ್ರೆ, ಸಿರಪ್, ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಇತ್ಯಾದಿ)  ಸಂಪೂರ್ಣ ಮಾಹಿತಿಯನ್ನು ಪಡೆದು, ನಿಮ್ಮ ನಿರ್ಧಾರವನ್ನು ಅವರಿಗೆ ತಿಳಿಸುವ ಹಕ್ಕು ನಿಮಗಿದೆ. ಅಂತೆಯೇ ಚಿಕಿತ್ಸೆಯನ್ನು ನಿರಾಕರಿಸುವ ಅಥವಾ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆಯುವ ಹಕ್ಕು ನಿಮಗಿದೆ. ಅಂತಿಮವಾಗಿ ನಿಮ್ಮ ಕಾಯಿಲೆ ಮತ್ತು ಅದರ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆಯುವ ಅಧಿಕಾರ ನಿಮಗಿದೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

ಉದಯವಾಣಿ ಪತ್ರಿಕೆಯ ದಿ. ೨೮-೧೧-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment