Saturday, November 16, 2013

Sarpasuttina Darpavanndagisi!


                                                ಸರ್ಪಸುತ್ತಿನ ದರ್ಪವನ್ನಡಗಿಸಿ! 

    ಬಹುತೇಕ ಗ್ರಾಮೀಣ ಜನರೊಂದಿಗೆ ಅನೇಕ ವಿದ್ಯಾವಂತ ನಗರವಾಸಿಗಳ ಮನದಲ್ಲಿ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು ಮನೆಮಾಡಲು ಕಾರಣವೆನಿಸಿರುವ ಕಾಯಿಲೆಗಳಲ್ಲಿ "ಸರ್ಪಸುತ್ತು" ಅಗ್ರಸ್ಥಾನಗಳಿಸಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇಂದಿಗೂ ನಂಬಿರುವಂತೆ, ಸರ್ಪಸುತ್ತಿನ ಚಿಕಿತ್ಸೆಗೆ ಆಧುನಿಕ ಪದ್ದತಿಯ ಔಷದಗಳೇ ಇಲ್ಲವೆನ್ನುವುದು ನಿಶ್ಚಿತವಾಗಿಯೂ ನಿಜವಲ್ಲ!. 
--------------              --------------------                               -------------------                               ----------------         -----------------

ವೆರಿಸೆಲ್ಲಾ ಜೋಸ್ಟರ್  ಎನ್ನುವ ವೈರಸ್ ಗಳಿಂದ ಉದ್ಭವಿಸುವ ಹರ್ಪಿಸ್ ಜೋಸ್ಟರ್ ಎಂದು ಕರೆಯಲ್ಪಡುವ ಕಾಯಿಲೆಯನ್ನು ದ. ಕ. ಜಿಲ್ಲೆಯ ಜನರು ಸರ್ಪಸುತ್ತು ಎಂದು ಕರೆಯುತ್ತಾರೆ. ಬಹುತೇಕ ರೋಗಕಾರಕ ರೋಗಾಣುಗಳು ಒಂದು ನಿರ್ದಿಷ್ಟ ಕಾಯಿಲೆಯನ್ನು ಹುಟ್ಟುಹಾಕುವುದಾದಲ್ಲಿ, ಈ ವಿಶಿಷ್ಟ ಕಾಯಿಲೆಗೆ ಕಾರಣವೆನಿಸುವ ವೈರಸ್ ಗಳು ಸೀತಾಳೆ ಸಿಡುಬು(ಚಿಕನ್ ಪೋಕ್ಸ್) ಮತ್ತು ಸರ್ಪಸುತ್ತು  ಎನ್ನುವ ಎರಡು ಕಾಯಿಲೆಗಳಿಗೆ ಕಾರಣವೆನಿಸುತ್ತವೆ. 

ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಾರಂಭವಾಗಿ, ತೀವ್ರ ಸಾಂಕ್ರಾಮಿಕ ರೂಪವನ್ನು ತಾಳಿ ಹರಡುವ ಸೀತಾಳೆ ಸಿಡುಬಿನ ಪೀಡುಗು ಪ್ರತ್ಯಕ್ಷವಾದಂತೆಯೇ, ಸರ್ಪಸುತ್ತಿನ ಹಾವಳಿಯೂ ಅಲ್ಲಲ್ಲಿ ಹೆಡೆ ಎತ್ತುವುದನ್ನು ನೀವೂ ಕಂಡಿರಲೇಬೇಕು. ಸರ್ಪಸುತ್ತು ಪೀಡಿತ ವ್ಯಕ್ತಿಯ ಸಂಪರ್ಕದಿಂದ ಇದು ಮತ್ತೊಬ್ಬರಿಗೆ ಹರಡುವುದಿಲ್ಲ. ಅಂತೆಯೇ ಸೀತಾಳೆ ಸಿಡುಬು ಪೀಡಿತ ಮಕ್ಕಳಿಂದ ಹಿರಿಯರಿಗೆ ಈ ಪಿಡುಗು ಅಥವಾ ಸರ್ಪಸುತ್ತು ಬಾಧಿಸುವ ಸಾಧ್ಯತೆಗಳಿಲ್ಲ. ಆದರೆ ಸರ್ಪಸುತ್ತು ಪೀಡಿತ ಹಿರಿಯರ ಸಂಪರ್ಕದಿಂದ ಚಿಕ್ಕ ಮಕ್ಕಳಿಗೆ ಸೀತಾಳೆ ಸಿಡುಬು ಉದ್ಭವಿಸುವ ಸಾಧ್ಯತೆಗಳಿವೆ. 

ಸೀತಾಳೆ ಸಿಡುಬು ಪೀಡಿತ ರೋಗಿಗಳು ನಿಗದಿತ ಅವಧಿಯ ಬಳಿಕ ವ್ಯಾಧಿಮುಕ್ತರಾದರೂ,ಇವರ ಶರೀರದಲ್ಲಿರುವ ವೆರಿಸೆಲ್ಲಾ ವೈರಸ್ ಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಇಂತಹ ವ್ಯಕ್ತಿಗಳ ಶರೀರದಲ್ಲಿನ ನರಗಳ ಗಾಂಗ್ಲಿಯಾನ್ ಗಳಲ್ಲಿ ತಟಸ್ಥ ಹಾಗೂ ನಿಷ್ಕ್ರಿಯವಾಗಿ ಅವಿತುಕೊಳ್ಳುವ ಈ ವೈರಸ್ ಗಳು, ಸೂಕ್ತ ಅವಕಾಶ ದೊರೆತಾಗ (ಉದಾ- ಸೀತಾಳೆ ಸಿಡುಬು ಪೀಡಿತ ರೋಗಿಯ ಸಂಪರ್ಕ) ಮತ್ತೆ ಸಕ್ರಿಯಗೊಂಡು ಸರ್ಪಸುತ್ತು ಉದ್ಭವಿಸಲು ಕಾರಣವೆನಿಸುತ್ತವೆ. 

ಮೂಢನಂಬಿಕೆ- ತಪ್ಪುಕಲ್ಪನೆಗಳು 

ಮಂತ್ರ-ತಂತ್ರಗಳು ಮತ್ತು ನಾಟಿ ಔಷದಗಳೇ ಈ ವ್ಯಾಧಿಗೆ ಏಕಮಾತ್ರ ಪರಿಹಾರವೆಂದು ಅನೇಕ ಜನರು ನಂಬಿದ್ದಾರೆ. ಇಂತಹ ಚಿಕಿತ್ಸೆಗಳು ಫಲಪ್ರದವೆನಿಸಲು ಸೂಕ್ತ ಕಾರಣಗಳೂ ಇವೆ.ವೈರಸ್ ಗಳಿಂದ ಉದ್ಭವಿಸುವ ಹಲವಾರು ಅನ್ಯ ವ್ಯಾಧಿಗಳಂತೆಯೇ ಆರೋಗ್ಯದ ಮಟ್ಟ ಉತ್ತಮವಾಗಿರುವ ಹಾಗೂ ವಿಶೇಷವಾಗಿ ತಾರುಣ್ಯದಲ್ಲಿ ಉದ್ಭವಿಸಿದ ಸರ್ಪಸುತ್ತು, ನಿರ್ದಿಷ್ಟ ಅವಧಿಯ ಬಳಿಕ ಸ್ವಯಂ ಶಮನಗೊಳ್ಳಬಹುದು. ಉದಾಹರಣೆಗೆ "ಔಷದ ಸೇವಿಸಿದಲ್ಲಿ ಒಂದು ವಾರದಲ್ಲಿ ಹಾಗೂ ಸೇವಿಸದಿದ್ದಲ್ಲಿ ಏಳು ದಿನಗಳಲ್ಲಿ ಶೀತವು ಗುಣವಾಗುವುದು" ಎನ್ನುವ ಮಾತು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು. ಇದೇ ರೀತಿಯಲ್ಲಿ ನಾಟಿ ಮದ್ದು, ಮಂತ್ರ- ತಂತ್ರಗಳನ್ನು ಪ್ರಯೋಗಿಸಿದ ರೋಗಿಗಳು, ಈ ಚಿಕಿತ್ಸೆಯಿಂದಲೇ ಸರ್ಪಸುತ್ತು ಗುಣವಾಯಿತೆಂದು ಭ್ರಮಿಸುತ್ತಾರೆ. 

ಇದರೊಂದಿಗೆ ರೋಗಿಯ ಶರೀರದ ಮೇಲೆ ಮೂಡಿರುವ "ಸರ್ಪ"ವು ದೇಹದ ಸುತ್ತಲೂ ಹರಡುತ್ತಾ, ಇದರ ಹೆಡೆ ಮತ್ತು ಬಾಲಗಳು ಸಂಧಿಸಿದಲ್ಲಿ ರೋಗಿ ಮೃತಪಡುವನು ಎನ್ನುವ ನಂಬಿಕೆ ಅಪ್ಪಟ ಸುಳ್ಳು. ರೋಗಿಯ ಶರೀರದಲ್ಲಿ ಇರುವ ನರಗಳಿಗೆ ತಗಲಿದ ಸೋಂಕಿಗೆ ಅನುಗುಣವಾಗಿ, ಶರೀರದ ಹೊರಭಾಗದ ಚರ್ಮದ ಮೇಲೆ ಮೂಡುವ ಸರ್ಪಸುತ್ತು ರೋಗಿಯ ಶರೀರವನ್ನು ಸುತ್ತುವರಿಯುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ನಮ್ಮ ಬೆನ್ನೆಲುಬಿನಿಂದ ಉದ್ಭವಿಸಿ ಶರೀರದ ಎರಡೂ ಭಾಗಗಳಿಗೆ ಹಬ್ಬಿರುವ ಯಾವುದೇ ನರಗಳು ನಮ್ಮ ಶರೀರವನ್ನು ಸುತ್ತುವರಿದಿರುವುದೇ ಇಲ್ಲ!. ಇದೇ ಕಾರಣದಿಂದ ಸರ್ಪದ ಹೆಡೆ ಮತ್ತು ಬಾಲಗಳು ಪರಸ್ಪರ ಸಂಧಿಸುವ ಸಾಧ್ಯತೆಗಳೂ ಇಲ್ಲ. 

ಆದರೆ ಅನಾದಿ ಕಾಲದಿಂದ ಇಂತಹ "ದಂತ ಕಥೆ"ಗಳನ್ನು ನಂಬಿ, ಜೀವಭಯದಿಂದ ಮಂತ್ರ- ತಂತ್ರ ಮತ್ತು ನಾಟಿ ಔಷದಗಳಿಗೆ ಶರಣಾಗುವ ರೋಗಿಗಳು, ಸಂಕೀರ್ಣ ಸಮಸ್ಯೆಗಳು ಅಥವಾ ಪ್ರಾನಾಪಾಯದ ಸಾಧ್ಯತೆಗಳು ಕಂಡುಬಂದಾಗ ತಜ್ಞವೈದ್ಯರ ಬಳಿಗೆ ಧಾವಿಸುವುದು ಅಪರೂಪವೇನಲ್ಲ. 

ರೋಗಲಕ್ಷಣಗಳು 

ಅಲ್ಪಪ್ರಮಾಣದ ಜ್ವರ,ತಲೆ- ಮೈಕೈ ನೋವುಗಳೊಂದಿಗೆ ಆರಂಭವಾಗುವ ಸರ್ಪಸುತ್ತಿನಲ್ಲಿ, ಸೋಂಕು ಪೀಡಿತ ನರಗಳಿರುವ ಶರೀರದ ಭಾಗಗಳಲ್ಲಿ ತೀವ್ರ ಹಾಗೂ ಅಸಹನೀಯ ನೋವು ಕಾಣಿಸಿಕೊಳ್ಳುವುದು. ಕೆಲ ರೋಗಿಗಳಲ್ಲಿ ಈ ನೋವಿನ ತೀವ್ರತೆಯು ಇದೇ ರೀತಿಯ ನೋವಿಗೆ ಕಾರಣವೆನಿಸಬಲ್ಲ ಎಂಜೈನಾ, ಹೃದಯಾಘಾತ ಹಾಗೂ ಮೂತ್ರನಾಳಗಲ್ಲಿನ ಕಲ್ಲುಗಳಂತಹ ಕಾಯಿಲೆಗಳನ್ನು ಅನುಕರಿಸುವುದು. ಇದೇ ಕಾರಣದಿಂದಾಗಿ ಈ ಹಂತದಲ್ಲಿ ಅನುಭವೀ ವೈದ್ಯರಿಗೂ ಈ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. 

ಮುಂದಿನ ಒಂದೆರಡು ದಿನಗಳಲ್ಲಿ ನೋವಿರುವ ಭಾಗವು ಕೆಂಪಾಗಿ ತುಸು ಊದಿಕೊಳ್ಳುವುದರೊಂದಿಗೆ, ಸಣ್ಣಪುಟ್ಟ ಗುಳ್ಳೆಗಳು ಮೂಡುತ್ತವೆ.ಹಾಗೂ ಈ ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ಗುಳ್ಳೆಗಳು ಮೂಡಿದ ಭಾಗದಲ್ಲಿ ಅಸಾಧ್ಯ ಉರಿ ಮತ್ತು ತುರಿಕೆಗಳು ಬಾಧಿಸಬಹುದು.  ಈ ಗುಳ್ಳೆಗಳು ನೀರುತುಂಬಿದ ಗುಳ್ಳೆಗಳಾಗಿ ಪರಿವರ್ತನೆಗೊಂಡು, ಐದರಿಂದ ಹತ್ತು ದಿನಗಳಲ್ಲಿ  ಬಾಡಿದಂತೆಯೇ ಇವುಗಳ ಮೇಲಿನ ಚರ್ಮವು ಒಣಗಿ ಉದುರಿಹೋಗುತ್ತದೆ. ಆದರೆ ಗುಳ್ಳೆಗಳಿದ್ದ ಜಾಗದಲ್ಲಿನ ಚರ್ಮದ ಮೇಲೆ ಇವುಗಳ ಕಲೆಗಳು ಸುದೀರ್ಘಕಾಲ ಉಳಿದುಕೊಳ್ಳುವ ಸಾಧ್ಯತೆಗಳೂ ಇವೆ. ಅಂತೆಯೇ ಈ ಗುಳ್ಳೆಗಳಿಗೆ ದ್ವಿತೀಯ ಹಂತದ ಸೋಂಕು ತಗಲಿದಲ್ಲಿ (ಈ ಗುಳ್ಳೆಗಳಿಗೆ ಹಾಕುವ ನಾಟಿ ಮದ್ದಿನ ಲೇಪ ಒಣಗಿದಂತೆಯೇ, ಗುಳ್ಳೆಗಳು ಒಡೆದಾಗ ಇಂತಹ ಸಮಸ್ಯೆ ಉದ್ಭವಿಸಬಹುದು) ಈ ಕಲೆಗಳು ಇನ್ನಷ್ಟು ಗಾಢವಾಗುತ್ತವೆ. ಹಾಗೂ ಕೆಲ ರೋಗಿಗಳಲ್ಲಿ ಈ ಭಾಗದಲ್ಲಿ ಸ್ಪರ್ಶಜ್ಞಾನ ನಶಿಸುವುದುಂಟು. ಇದಲ್ಲದೇ ವ್ಯಾಧಿ ತೀವ್ರಗೊಂಡಿದ್ದಲ್ಲಿ ಚರ್ಮದ ಮೇಲಿನ ಕಲೆಗಳು ಇರುವ ಭಾಗದಲ್ಲಿ ಹೊತ್ತುಗೊತ್ತಿನ ಪರಿವೆ ಇಲ್ಲದೇ ಆಕಸ್ಮಿಕವಾಗಿ ಉದ್ಭವಿಸುವ ಪೋಸ್ಟ್ ಹರ್ಪೆಟಿಕ್ "ನ್ಯೂರಾಲ್ಜಿಯಾ" ಎಂದು ಕರೆಯಲ್ಪಡುವ ಅಸಹನೀಯ ನೋವು, ವಿಶೇಷವಾಗಿ ವಯೋವೃದ್ಧರನ್ನು ಕೆಲ ತಿಂಗಳುಗಳಿಂದ ಹಿಡಿದು ವರ್ಷಗಳ ಕಾಲ ಎಡೆಬಿಡದೆ ಬಾಧಿಸುವುದು. 

ಮುಖ, ಕೈ-ಕಾಲು, ತೊಡೆಗಳಲ್ಲದೆ ಶರೀರದ ವಿವಿಧ ಭಾಗಗಳಲ್ಲಿ ಮೂಡಬಲ್ಲ ಸರ್ಪಸುತ್ತಿನ ಗುಳ್ಳೆಗಳು ಕಣ್ಣಿನ ಮೇಲೆ ಉದ್ಭವಿಸಿ ಉಲ್ಬಣಿಸಿದಲ್ಲಿ, ದೃಷ್ಟಿನಾಶದ ಸಾಧ್ಯತೆಗಳಿವೆ. ಸಾಮಾನ್ಯವಾಗಿ ೧೦ ರಿಂದ ೧೪ ದಿನಗಳಲ್ಲಿ ಗುಣವಾಗುವ ಈ ಕಾಯಿಲೆಯು ರೋಗಿಯ ವಯಸ್ಸು, ಆತನಲ್ಲಿ ಇರಬಹುದಾದ ಅನ್ಯ ಕಾಯಿಲೆಗಳು, ಆತನ ಆರೋಗ್ಯ ಮತ್ತು ಶಾರೀರಿಕ ಕ್ಷಮತೆಯ ಮಟ್ಟಗಳಿಗೆ ಅನುಗುಣವಾಗಿ ಅಲ್ಪ ಅಥವಾ ಸುದೀರ್ಘ ಕಾಲ ಬಾಧಿಸಬಹುದು. 

ಸಂಕೀರ್ಣ ಸಮಸ್ಯೆಗಳು 

ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಸರ್ಪಸುತ್ತು, ರೋಗಿಯ ವಯಸ್ಸು ಹೆಚ್ಚಾದಂತೆಯೇ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಮೂಲವೆನಿಸುತ್ತದೆ. ರೋಗಿಯ ಕಣ್ಣಿನ ಮೇಲೆ ಮೂಡಿದ ಗುಳ್ಳೆಗಳು ಒಡೆದು ಹುಣ್ಣಾಗಿ ಉಲ್ಬಣಿಸಿದಲ್ಲಿ ದೃಷ್ಟಿದೋಷ ಅಥವಾ ದೃಷ್ಟಿನಾಶವೂ ಸಂಭವಿಸಬಹುದು. ಗುಳ್ಳೆಗಳು ಮೂಡಿದ ಭಾಗದಲ್ಲಿ ಸ್ಪರ್ಶಜ್ಞಾನದ ಅಭಾವ ಅಥವಾ ಅಸಹನೀಯ ನೋವು ಹಾಗೂ ಕುತ್ತಿಗೆಯ ಮೇಲ್ಭಾಗದ ನಿರ್ದಿಷ್ಟ ನರಗಳಿಗೆ ತಗಲಿದ ಸೋಂಕಿನಿಂದಾಗಿ ತೀವ್ರ ಸ್ವರೂಪದ ತಲೆತಿರುಗುವಿಕೆ (ವರ್ಟಿಗೊ), ಮತ್ತು ಮುಖದ ಒಂದು ಪಾರ್ಶ್ವಕ್ಕೆ ಪಕ್ಷವಾತ ಬಂದೆರಗುವ ಸಾಧ್ಯತೆಗಳಿವೆ. ಅತ್ಯಂತ ಅಪರೂಪ ಎನಿಸಿರುವ "ಸರ್ವಾಂಗೀಣ ಸರ್ಪಸುತ್ತು" ಹೆಚ್ಚಾಗಿ ವಯೋವೃದ್ಧರು ಹಾಗೂ ರೋಗಪ್ರತಿರೋಧಕ ಶಕ್ತಿಯ ಕೊರತೆಗೆ ಕಾರಣವೆನಿಸುವ ವ್ಯಾಧಿಪೀಡಿತರಲ್ಲಿ ಕಂಡುಬರುವುದುಂಟು. 

೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಈ ಕಾಯಿಲೆ ಗುಣವಾದ ಬಳಿಕವೂ, ಹೊತ್ತುಗೊತ್ತಿನ ಪರಿವೆಯಿಲ್ಲದೆ, ಗುಳ್ಳೆಗಳು ಮೂಡಿದ್ದ ಜಾಗದಲ್ಲಿ ಕಂಡುಬರುವ ತೀವ್ರ ನೋವು ಹಲವಾರು ವರ್ಷಗಳ ಕಾಲ ಪೀಡಿಸುತ್ತದೆ. ರೋಗಿಯ ವಯಸ್ಸು ಹೆಚ್ಚಾದಷ್ಟು, ನೋವಿನ ತೀವ್ರತೆಯೂ ಹೆಚ್ಚುತ್ತದೆ. ಇಂತಹ ಅಸಾಮಾನ್ಯ ತೊಂದರೆಗಳಿಗೆ ಕಾರಣವೆನಿಸುವುದರಿಂದ, ೫೦ ವರ್ಷ ಮೀರಿದ ವ್ಯಕ್ತಿಗಳು ಈ ವ್ಯಾಧಿ ಪ್ರತ್ಯಕ್ಷವಾದೊಡನೆ ತಜ್ನವೈದ್ಯರಿಂದ ಚಿಕಿತ್ಸೆ ಪಡೆಯುವುದು ಹಿತಕರ. 

ರೋಗನಿದಾನ- ಚಿಕಿತ್ಸೆ 

ಸರ್ಪಸುತ್ತಿನ ವಿಶಿಷ್ಟ ಗುಣ ಲಕ್ಷಣಗಳಿಂದಾಗಿ ನಿಮ್ಮ ಕುಟುಂಬ ವೈದ್ಯರೂ ಇದನ್ನು ನಿಖರವಾಗಿ ಗುರುತಿಸಬಲ್ಲರು. ಆದರೂ ಸಂದೇಹಾಸ್ಪದ ಸನ್ನಿವೇಶಗಳಲ್ಲಿ ಈ ಗುಳ್ಳೆಗಳ ಮೇಲಿನ ಚರ್ಮಕೋಶಗಳನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ, ರೋಗವನ್ನು ಖಚಿತಪಡಿಸಿಕೊಳ್ಳಬಹುದು. 

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಿರತ ಸಂಶೋಧನೆಗಳ ಫಲವಾಗಿ ಸರ್ಪಸುತ್ತಿಗೆ ಕಾರಣವೆನಿಸುವ ವೈರಸ್ ಗಳ ದರ್ಪವನ್ನು ಅಡಗಿಸಬಲ್ಲ ಔಷದಗಳನ್ನು ಹಲವಾರು ವರ್ಷಗಳ ಹಿಂದೆಯೇ ಸಂಶೋಧಿಸಲಾಗಿದೆ. ಈ ಔಷದಗಳನ್ನು ವ್ಯಾಧಿ ಪ್ರತ್ಯಕ್ಷವಾದೊಡನೆ ಸೇವಿಸಲು ಆರಂಭಿಸಿದಲ್ಲಿ, ನಿಶ್ಚಿತವಾಗಿಯೂ ರೋಗವನ್ನು ನಿಯಂತ್ರಿಸಬಲ್ಲದು. ಇದರೊಂದಿಗೆ ವ್ಯಾಧಿಯ ತೀವ್ರತೆ, ಅವಧಿ, ಇದರಿಂದಾಗಿ ತಲೆದೋರುವ ಉರಿ ಮತ್ತು ತುರಿಕೆಗಳೊಂದಿಗೆ ಅಸಹನೀಯ ನೋವು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಈ ಔಷದಗಳು ಅನಾಯಾಸವಾಗಿ ನಿಯಂತ್ರಿಸುತ್ತವೆ. 

ಆದರೆ ಇಷ್ಟೊಂದು ಪರಿಣಾಮಕಾರಿ ಔಷದಗಳು ಜನಸಾಮಾನ್ಯರು ಸರ್ಪಸುತ್ತಿಗೆ ಚಿಕಿತ್ಸೆ ಇಲ್ಲವೆಂದು ನಂಬಿದ್ದ ಆಧುನಿಕ ಚಿಕಿತ್ಸಾ ಪದ್ದತಿಯ ಕೊಡುಗೆ ಎನ್ನುವುದನ್ನು ಮರೆಯದಿರಿ!. 

ಸರ್ಪಸುತ್ತನ್ನು ತಡೆಗಟ್ಟುವುದೆಂತು?

"ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮಾತನ್ನು ನೀವೂ ಕೇಳಿರಬೇಕು. ಅದರಲ್ಲೂ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ, ಸೀತಾಳೆ ಸಿಡುಬು ಮತ್ತು ಸರ್ಪಸುತ್ತುಗಳೆರಡನ್ನೂ ಯಶಸ್ವಿಯಾಗಿ ತಡೆಗಟ್ಟಬಲ್ಲ ಒಂದು ಚುಚ್ಚುಮದ್ದು ಪಡೆದುಕೊಳ್ಳುವುದು ಇಂತಹ ಒಂದು ಪರಿಣಾಮಕಾರಿ ವಿಧಾನವಾಗಿದೆ. 

೧೨ ತಿಂಗಳ ಹಸುಗೂಸಿನಿಂದ ಹಿಡಿದು ೧೨ ವರ್ಷ ವಯಸ್ಸಿನ ಮಕ್ಕಳಿಗೆ ವೆರಿಸೆಲ್ಲಾ ವ್ಯಾಕ್ಸೀನ್ ನ ಒಂದು ಮತ್ತು ೧೨ ವರ್ಷ ಮೀರಿದವರಿಗೆ ಎರಡು ಚುಚ್ಚುಮದ್ದುಗಳನ್ನು ನೀಡಿದಲ್ಲಿ, ಇವೆರಡೂ ವ್ಯಾಧಿಗಳನ್ನು ಖಚಿತವಾಗಿ ತಡೆಗಟ್ಟಬಹುದು. ಈ ವ್ಯಾಕ್ಸೀನ್ ಪಡೆದುಕೊಂಡವರಲ್ಲಿ ಆಕಸ್ಮಿಕವಾಗಿ ಈ ವ್ಯಾಧಿಗಳು ಉದ್ಭವಿಸಿದರೂ, ಇವುಗಳ ತೀವ್ರತೆ ಮತ್ತು ಅವಧಿಗಳು ಸಾಕಷ್ಟು ಸೌಮ್ಯ ಹಾಗೂ ಕಡಿಮೆ ಇರುತ್ತವೆ. ಆದರೆ ವ್ಯಾಧಿಯಿಂದ ಉದ್ಭವಿಸಬಲ್ಲ ಸಂಕೀರ್ಣ ಸಮಸ್ಯೆಗಳು ಈ ಚುಚ್ಚುಮದ್ದನ್ನು ಪಡೆದವರನ್ನು ಬಾಧಿಸುವ ಸಾಧ್ಯತೆಗಳೇ ಇಲ್ಲ. ಆದುದರಿಂದ ತುಸು ದುಬಾರಿಯೆನಿಸಿದರೂ, ವೆರಿಸೆಲ್ಲಾ ವ್ಯಾಕ್ಸೀನ್ ಚುಚ್ಚುಮದ್ದನ್ನು ನಿಮ್ಮ ಮಕ್ಕಳಿಗೆ ಕೊಡಿಸಿದಲ್ಲಿ ಸೀತಾಳೆ ಸಿಡುಬು ಮತ್ತು ಸರ್ಪಸುತ್ತಿನ ಪೀಡೆಯನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಇವೆರಡು ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ರೋಗಿ ಅನುಭವಿಸುವ ಯಾತನೆ ಮತ್ತು ಚಿಕಿತ್ಸಾ ವೆಚ್ಚಗಳೊಂದಿಗೆ ತುಲನೆ ಮಾಡಿದಲ್ಲಿ, ವ್ಯಾಕ್ಸೀನ್ ನ ವೆಚ್ಚವು ತೀರಾ ನಗಣ್ಯ ಎನಿಸುವುದು. 

ಡಾ. ಸಿ ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೨-೦೫- ೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment