Wednesday, November 27, 2013

Beware of Medical advertisements


                         ಔಷದಗಳ ಜಾಹೀರಾತುಗಳಿಗೆ ಮರುಳಾಗದಿರಿ

  ಪತಿನಿತ್ಯ  ಪತ್ರಿಕೆಗಳನ್ನು ಓದುವ ಹಾಗೂ ಟೆಲಿವಿಷನ್ ವಾಹಿನಿಗಳನ್ನು ವೀಕ್ಷಿಸುವ ಹವ್ಯಾಸ ನಿಮಗಿದ್ದಲ್ಲಿ, ಇವುಗಳಲ್ಲಿ ಪ್ರಕಟ- ಪ್ರಸಾರವಾಗುವ ಅನೇಕ ಔಷದಗಳ ಜಾಹೀರಾತುಗಳನ್ನು ನೀವು ಕಂಡಿರಲೇಬೇಕು. ಆದರೆ ಇಂತಹ ಜಾಹೀರಾತುಗಳಿಗೆ ಮರುಳಾಗಿ ನೀವು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ, ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ!. 
-----------              ----------------                  --------------------                    ---------------                -----------------           ------------
       
       ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ  ಔಷದಗಳ ಜಾಹೀರಾತುಗಳಿಂದ ಪ್ರಭಾವಿತರಾಗಿ, ಇಂತಹ ಉತ್ಪನ್ನಗಳನ್ನು ಖರೀದಿಸಿ ಬಳಸುವ ಜನರು ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಔಷದಗಳನ್ನು ಬಳಸಿ ಸಂಕಷ್ಟಗಳಿಗೆ ಈಡಾದ ಜನರೂ ಬಹಳಷ್ಟು ಇದ್ದಾರೆ!. 

ಮಧುಮೇಹ ಇನ್ನು ಬಾಧಿಸದು!

ಆಕಸ್ಮಿಕವಾಗಿ ಹೃದಯಾಘಾತಕ್ಕೆ ಒಳಗಾಗಿದ್ದ ರಾಮಕೃಷ್ಣ ರಾಯರನ್ನು ತತ್ ಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಡೆಸಿದ್ದ ಪರೀಕ್ಷೆಗಳಿಂದ ರಾಯರ ರಕ್ತದಲ್ಲಿನ ಸಕ್ಕರೆಯ ಅಂಶವು ಅನಿಯಂತ್ರಿತವಾಗಿ ಹೆಚ್ಚಿರುವುದು ಪತ್ತೆಯಾಗಿತ್ತು. 

ಒಂದೆರಡು ದಿನಗಳ ಬಳಿಕ ತುಸು ಚೇತರಿಸಿಕೊಂಡಿದ್ದ ರಾಯರನ್ನು ಈ ಬಗ್ಗೆ ಪ್ರಶ್ನಿಸಿದ ವೈದ್ಯರಿಗೆ, ಅವರು ನೀಡಿದ್ದ ಉತ್ತರವನ್ನು ಕೇಳಿ ಆಶ್ಚರ್ಯವಾಗಿತ್ತು. ನಿವೃತ್ತಿಯ ಬಳಿಕ ಸಮಯ ಕಳೆಯಲು ದಿನನಿತ್ಯ ಟೆಲಿವಿಷನ್ ವೀಕ್ಷಿಸುತ್ತಿದ್ದ ರಾಯರು, ಇದರಲ್ಲಿ ಪ್ರಸಾರವಾಗುತ್ತಿದ್ದ ವಿಸ್ಮಯಕಾರಿ ಔಷದವನ್ನು ಸೇವಿಸಿದಲ್ಲಿ "ಮಧುಮೇಹ ಇನ್ನು ಬಾಧಿಸದು" ಎನ್ನುವ ಜಾಹೀರಾತನ್ನು ನಂಬಿ ಮೋಸ ಹೋಗಿದ್ದರು. ವೈದ್ಯರು ಸೂಚಿಸಿದ್ದ ಮಾತ್ರೆಗಳ ಸೇವನೆಯನ್ನು ತ್ಯಜಿಸಿ, ಈ ಜಾಹೀರಾತಿನ ಔಷದವನ್ನು ಸೇವಿಸಲು ಆರಂಭಿಸಿದ್ದುದೇ ರಾಯರ ಹೃದಯಾಘಾತಕ್ಕೆ ಹೆತುವಾಗಿತ್ತು!. 

ಮೋಡಿ ಮಾಡುವ ಜಾಹೀರಾತುಗಳು 

ಟಿ. ವಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಾಮಾನ್ಯ ಶೀತ ಹಾಗೂ ತಲೆನೋವಿನಿಂದ ಪ್ರಾರಂಭಿಸಿ, ಮಧುಮೇಹದಂತಹ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಗಳಿಗೆ "ವಿಸ್ಮಯಕಾರಿ ಔಷದ'ಗಳ ಚಿತ್ತಾಕರ್ಷಕ ಜಾಹೀರಾತುಗಳು ನಿಶ್ಚಿತವಾಗಿಯೂ ವೀಕ್ಷಕರನ್ನು ಮೋಡಿ ಮಾಡುತ್ತವೆ. ಅದರಲ್ಲೂ ಸಿನಿಮಾ ಹಾಗೂ ಕಿರುತೆರೆಯ ತಾರೆಯರು ಮತ್ತು ಪ್ರಖ್ಯಾತ ಕ್ರೀಡಾಪಟುಗಳು ಪಾತ್ರವಹಿಸಿರುವ ಜಾಹೀರಾತುಗಳಲ್ಲಿ ವೈಭವೀಕರಿಸಿದ ಔಷದಗಳಿಗೆ ಸ್ವಾಭಾವಿಕವಾಗಿಯೇ ಅತ್ಯಧಿಕ ಬೇಡಿಕೆ ಇರುತ್ತದೆ. ಜತೆಗೆ ವೈದ್ಯರ ಸಲಹೆ ಸೂಚನೆಗಳ ಅವಶ್ಯಕತೆಯಿಲ್ಲದೆ, ನೇರವಾಗಿ ಔಷದ ಅಂಗಡಿಗಳಿಂದ ಖರೀದಿಸಬಹುದಾಗಿರುವುದರಿಂದ ವೈದ್ಯರಿಗೆ ನೀಡುವ ಶುಲ್ಕವೂ ಉಳಿತಾಯವಾಗುತ್ತದೆ. ಆದರೆ ಇವುಗಳನ್ನು ಸೇವಿಸಿದ ಬಳಿಕ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಇವುಗಳ ತಯಾರಕರು ಅಥವಾ ಮಾರಾಟಗಾರರು ಹೊಣೆಗಾರರಾಗುವುದೇ ಇಲ್ಲ!. 

ಒಂದೆರಡು ದಶಕಗಳ ಹಿಂದೆ ಕರಪತ್ರಗಳು ಮತ್ತು ಅಪರೂಪದಲ್ಲಿ ಪತ್ರಿಕೆಗಳಲ್ಲಿ ಕಾಣಸಿಗುತ್ತಿದ್ದ ಬೆರಳೆಣಿಕೆಯಷ್ಟು ಔಷದಗಳ ಜಾಹೀರಾತುಗಳು, ಇದೀಗ ದೃಶ್ಯಮಾಧ್ಯಮಗಳಲ್ಲಿ ಧಾರಾಳವಾಗಿ ಪ್ರಸಾರಗೊಳ್ಳುತ್ತಿವೆ. ಈ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳು ದುಬಾರಿ ಎನಿಸಿದರೂ, ಕೋಟ್ಯಂತರ ವೀಕ್ಷಕರಲ್ಲಿ ದುರ್ಬಲ ಮನಸ್ಸಿನವರನ್ನು ಮರುಳು ಮಾಡಲು ಯಶಸ್ವಿಯಾಗುತ್ತದೆ. ಪರಿಣಾಮವಾಗಿ ಇಂತಹ ಉತ್ಪನ್ನಗಳು ಬಿಸಿಬಿಸಿ ದೋಸೆಯಂತೆ ಮಾರಾಟವಾಗುತ್ತವೆ. 

ಶಾಶ್ವತ ಪರಿಹಾರವೇ ಇಲ್ಲದ ಮಧುಮೇಹ, ಆಸ್ತಮಾ ಗಳಂತಹ ಕಾಯಿಲೆಗಳನ್ನು ಗುಣಪಡಿಸಬಲ್ಲ, ಧಡೂತಿ ದೇಹವನ್ನು ಬಳುಕುವ ಬಳ್ಳಿಯಂತೆ ತೆಳ್ಳಗಾಗಿಸಬಲ್ಲ, ಅಸ್ಥಿಸಂಧಿಗಳ ನೋವನ್ನು ಚಿಟಿಕೆ ಹೊಡೆಯುವಷ್ಟರಲ್ಲೇ ನಿವಾರಿಸಬಲ್ಲ, ಕೊಬ್ಬಿನಿಂದ ಉಬ್ಬಿದ ಹೊಟ್ಟೆಯನ್ನು ಕ್ಷಿಪ್ರಗತಿಯಲ್ಲಿ ಕರಗಿಸಬಲ್ಲ, ಕುಳ್ಳರನ್ನು ನೀಳಕಾಯರನ್ನಾಗಿಸಬಲ್ಲ, ಯುವತಿಯರ ಸ್ತನಗಳ ಗಾತ್ರವನ್ನು ನಿಶ್ಚಿತವಾಗಿ ಹಿಗ್ಗಿಸಬಲ್ಲ, ಮರೆಗುಳಿಗಳ ಸ್ಮರಣಶಕ್ತಿಯನ್ನು ವೃದ್ಧಿಸಬಲ್ಲ, ಮಧ್ಯ ಹಾಗೂ ಇಳಿವಯಸ್ಸಿನವರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ಮತ್ತು ನೂರಾರು ಅನ್ಯವಿಧದ ಆರೋಗ್ಯದ ಸಮಸ್ಯೆಗಳನ್ನು ನಿಸ್ಸಂದೇಹವಾಗಿ ಪರಿಹರಿಸಬಲ್ಲ "ವಿಸ್ಮಯಕಾರಿ ಅದ್ಭುತ ಔಷದಗಳು" ಕೇವಲ ಜಾಹೀರಾತುಗಳ ಬಲದಿಂದಲೇ ಮಾರಾಟವಾಗುತ್ತವೆ. 

ಇಂತಹ ಔಷದಗಳ ತಯಾರಕರು ತಮ್ಮ ಉತ್ಪನ್ನಗಳ ಅದ್ಭುತ ಪರಿಣಾಮಗಳನ್ನು ಜಾಹೀರಾತುಗಳಲ್ಲಿ ಸವಿಸ್ತಾರವಾಗಿ ವರ್ಣಿಸಿದರೂ, ಇವುಗಳ ಅಡ್ಡ ಅಥವಾ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ ಮಾಹಿತಿಯನ್ನೂ ನೀಡುವುದಿಲ್ಲ. ಅದೇ ರೀತಿಯಲ್ಲಿ ವೈದ್ಯರ ಸಲಹೆಯನ್ನು ಪಡೆಯದೇ ಯಾವುದೇ ಔಷದಗಳನ್ನು ಸೇವಿಸುವುದು ಸುರಕ್ಷಿತವಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡುವುದಿಲ್ಲ. 

ಉದಾಹರಣೆಗೆ ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ತಲೆನೋವು ನಿವಾರಕ ಗುಳಿಗೆಯೊಂದರ ಜಾಹೀರಾತಿನಲ್ಲಿ,ಆ ಗುಳಿಗೆಯಲ್ಲಿನ ಔಷದದ ಹೆಸರನ್ನೇ ನಮೂದಿಸುವುದಿಲ್ಲ. ನಿಜ ಹೇಳಬೇಕಿದ್ದಲ್ಲಿ ಅಸಿಟೈಲ್ ಸಾಲಿಸಿಕ್ ಎಸಿಡ್ ಅರ್ಥಾತ್ ಆಸ್ಪಿರಿನ್ ಎಂದು ಕರೆಯಲ್ಪಡುವ ಈ ಔಷದವು ತಲೆನೋವು,ಮೈಕೈ ನೋವು, ಮತ್ತು ಜ್ವರಗಳನ್ನು ಕ್ಷಿಪ್ರಗತಿಯಲ್ಲಿ ಪರಿಹರಿಸುವುದಾದರೂ, ಇದನ್ನು ಆಸ್ತಮಾ, ಅತಿ ಆಮ್ಲ ಬಾಧೆ (ಹೈಪರ್ ಎಸಿಡಿಟಿ ), ಜಠರದ ಹುಣ್ಣುಗಳಿಂದ ಬಳಲುವವರು ಮತ್ತು ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳು ಸೇವಿಸುವಂತಿಲ್ಲ. ಆದರೆ ಈ ಉತ್ಪನ್ನದ ಜಾಹೀರಾತಿನಲ್ಲಿ ಈ ಪ್ರಮುಖ ವಿಚಾರವನ್ನೇ ಬಹಿರಂಗಪಡಿಸುವುದಿಲ್ಲ!. 

ದುಬಾರಿ ಬೆಲೆಯನ್ನು ತೆತ್ತು ನೀವು ಖರೀದಿಸಿ ಬಳಸುವ ಇಂತಹ ಔಷದಗಳು" ಪವಾಡ ಸದೃಶ ಪರಿಣಾಮ"ಗಳನ್ನು ನೀಡಲು ವಿಫಲವಾಗುವ ಮತ್ತು ಕೆಲ ಸಂದರ್ಭಗಳಲ್ಲಿ ರಾಮಕೃಷ್ಣ ರಾಯರ ಅನುಭವದಂತೆ ಪ್ರಾಣಾಪಾಯಕ್ಕೂ ಕಾರನವೆನಿಸುವ ಸಾಧ್ಯತೆಗಳಿವೆ. ಆದರೆ ತಜ್ಞವೈದ್ಯರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ದಾವೆಯನ್ನು ಹೂಡುವ ಜನಸಾಮಾನ್ಯರು, ಜಾಹೀರಾತಿನ ಔಷದಗಳನ್ನು ಸೇವಿಸಿ ಗಂಭೀರ ಸಮಸ್ಯೆಗಳು ಉದ್ಭವಿಸಿದರೂ, ಅವುಗಳ ತಯಾರಕರ ವಿರುದ್ಧ ದಾವೆಯನ್ನು ಹೂಡಿದ ನಿದರ್ಶನಗಳಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಇಂತಹ ಔಷದಗಳ ಬೇಡಿಕೆ ಮತ್ತು ಮಾರಾಟಗಳು ಕಡಿಮೆಯಾಗುವುದೇ ಇಲ್ಲ!. 

ನಿಯಂತ್ರಿಸುವುದೆಂತು?

ಜನಸಾಮಾನ್ಯರನ್ನು ದಿಕ್ಕುತಪ್ಪಿಸುವ ಹಾಗೂ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ಔಷದಗಳ ಜಾಹೀರಾತುಗಳನ್ನು ನಿಯಂತ್ರಿಸಲು, ಡ್ರಗ್ಸ್ ಎಂಡ್ ಮ್ಯಾಜಿಕ್ ರೆಮೆಡೀಸ್ (ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್) ಏಕ್ಟ್ ೧೯೫೪ ಮತ್ತು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಎನ್ನುವ ಕಾನೂನುಗಳಿವೆ. ಈ ಕಾಯಿದೆಗಳಂತೆ ಶಾಶ್ವತ ಪರಿಹಾರವಿಲ್ಲದ, ಚಿಕಿತ್ಸೆ ಲಭ್ಯವಿಲ್ಲದ ಕಾಯಿಲೆಗಳು ಮತ್ತು ಕೆಲವಿಧದ ಆರೋಗ್ಯದ ಸಮಸ್ಯೆಗಳನ್ನು ಹೆಸರಿಸಲಾಗಿದ್ದು, ಇವುಗಳ ಬಗ್ಗೆ ಜಾಹೀರಾತುಗಳನ್ನೇ ನೀಡುವಂತಿಲ್ಲ. ಆದರೆ ಈ ಅಧಿಸೂಚನೆ, ನಿಯಮಗಳು ಕೇವಲ ಮುದ್ರಣ ಮಾಧ್ಯಮಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಟಿ . ವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಈ ಕಾಯಿದೆಗಳನ್ನು ರೂಪಿಸುವಾಗ ಭಾರತದಲ್ಲಿ ಟೆಲಿವಿಶನ್ ಮಾಧ್ಯಮವೇ ಅಸ್ತಿತ್ವದಲ್ಲಿ ಇರಲಿಲ್ಲ!. 

ಆದರೆ ಸರಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಮಾತ್ರ ಇಂತಹ ಜಾಹೀರಾತುಗಳಿಗೆ ಅವಕಾಶವಿಲ್ಲ. ದೂರದರ್ಶನ ಅಳವಡಿಸಿಕೊಂಡಿರುವ ನೀತಿಸಂಹಿತೆಯಂತೆ ಯಾವುದೇ ಜಾಹೀರಾತುಗಳು ನಿರ್ದಿಷ್ಟ ಕಾಯಿಲೆಯೊಂದನ್ನು ಗುಣಪಡಿಸುವ ಅಥವಾ ಯಾವುದೇ ವ್ಯಾಧಿ ಲಕ್ಷಣಗಳನ್ನು (ಉದಾ- ತಲೆನೋವು, ಸೊಂಟನೋವು ಇತ್ಯಾದಿ) ಗುಣಪಡಿಸುವ ಅಥವಾ ಪರೋಕ್ಷ ಆಶ್ವಾಸನೆಗಳನ್ನೇ ನೀಡುವಂತಿಲ್ಲ. ಆದರೆ ಖಾಸಗಿ ಚಾನೆಲ್ ಗಳು ಇಂತಹ ನೀತಿಸಂಹಿತೆಯನ್ನು ಅನುಸರಿಸುವುದಿಲ್ಲ. ಮಾತ್ರವಲ್ಲ, ಅನೇಕ ಕುಟುಕು ಕಾರ್ಯಾಚರಣೆಗಳ ಮೂಲಕ ಅಸಂಖ್ಯ ಹಗರಣಗಳನ್ನು ಬಯಲಿಗೆಳೆದ ಖಾಸಗಿ ಟಿ. ವಿ ವಾಹಿನಿಗಳು, ತಮ್ಮ ಚಾನೆಲ್ ನಲ್ಲಿ ಜನರನ್ನು ಮರುಳು ಮಾಡಿ ಹಣಗಳಿಸುವ ಇಂತಹ ಧಂದೆಯ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ!. 

ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಜನಸಾಮಾನ್ಯರನ್ನು ಮರುಳುಗೊಳಿಸುವ ಔಷದಗಳ ಜಾಹೀರಾತುಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೆಲವು ಸಮಿತಿಗಳನ್ನು ರಚಿಸಿತ್ತು. ೨೦೦೪ ರಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ ಕಾನೂನುಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಮಂಡಳಿಯೊಂದನ್ನು ನೇಮಿಸಿ, ಜಾಹೀರಾತುಗಳಲ್ಲಿ ನಿಷೇಧಿತ ಕಾಯಿಲೆಗಳ ಪಟ್ಟಿಯನ್ನು ಪುನರ್ ವಿಮರ್ಶಿಸಿ, ಈ ಪಟ್ಟಿಯಲ್ಲಿ ಎಚ್. ಐ. ವಿ - ಏಡ್ಸ್ ಮತ್ತು ಪೋಲಿಯೋ ದಂತಹ ಇತರ ಕೆಲವು ಕಾಯಿಲೆಗಳನ್ನು ಸೇರಿಸಲು ನಿರ್ಧರಿಸಿತ್ತು. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರಕಾರವು ತದನಂತರ ಈ ಬಗ್ಗೆ ಸೂಕ್ತ  ಹಾಗೂ ಅವಶ್ಯಕ ಕ್ರಮಗಳನ್ನು ಕೈಗೊಂಡಿಲ್ಲ. ಇದೆ ಕಾರಣದಿಂದಾಗಿ ಅಮಾಯಕ ಜನರನ್ನು ಮರುಳು ಮಾಡಿ ಕೋಟ್ಯಂತರ ರೂಪಾಯಿಗಳ ಲಾಭಗಳಿಸುತ್ತಿರುವ ಇಂತಹ ಔಷದ ತಯಾರಕರು ಪ್ರಕಟಿಸುತ್ತಿರುವ ಜಾಹೀರಾತುಗಳಿಗೆ ಕಡಿವಾಣವನ್ನು ತೊಡಿಸುವವರೇ ಇಲ್ಲದಂತಾಗಿರುವುದು ಮಾತ್ರ ಸುಳ್ಳೇನಲ್ಲ!. ಅಂತೆಯೇ ಇಂತಹ ಜಾಹೀರಾತುಗಳನ್ನು ನಂಬಿ, ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಬಳಸಿದ ಬಳಿಕ ತಮ್ಮ ಆರೋಗ್ಯದೊಂದಿಗೆ ಸಾಕಷ್ಟು ಹಣವನ್ನೂ ಕಳೆದುಕೊಳ್ಳುತ್ತಿರುವ ಗ್ರಾಹಕರ ಸಮಸ್ಯೆಗಳಿಗೆ ಅಂತ್ಯವೂ ಇಲ್ಲದಂತಾಗಿರುವುದು ಸತ್ಯ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೨-೧೦-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  
     

No comments:

Post a Comment