Sunday, November 24, 2013

Vamshoddhaarakarannu baadhisaballa vamshavaahinigalu!



             ವಂಶೋದ್ಧಾರಕರನ್ನು ಬಾಧಿಸಬಲ್ಲ ವಂಶವಾಹಿನಿಗಳು!

ಸಹಸ್ರಾರು ವರ್ಷಗಳಿಂದ ಭಾರತದ ಹಿಂದೂ ಧರ್ಮೀಯರಲ್ಲಿ ಸೋದರಸಂಬಂಧಿಗಳಲ್ಲಿ ವಿವಾಹ ನಡೆಯುವುದು ಆಚರಣೆಯಲ್ಲಿತ್ತು. ಮೂಲತಃ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯಗಳ ಪ್ರತೀಕವಾಗಿದ್ದ ಇಂತಹ ವಿವಾಹಗಳಿಗೆ, ಪರಸ್ಪರ ಜಾತಕಗಳ ಹೊಂದಾಣಿಕೆಯಂತಹ ಕನಿಷ್ಠ ಅವಶ್ಯಕತೆಯೂ ಇರಲಿಲ್ಲ. 

ಅನೇಕ ಕುಟುಂಬಗಳಲ್ಲಿ "ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ" ಎನ್ನುವಂತಾಗದಿರಲು, ಇನ್ನು ಕೆಲವರಲ್ಲಿ ಪುತ್ರ ಸಂತಾನ ಇಲ್ಲದ ಕಾರಣದಿಂದ ಹಾಗೂ ತಾವು ಕಷ್ಟಪಟ್ಟು  ಸಂಪಾದಿಸಿದ ಆಸ್ತಿ ಪಾಸ್ತಿಗಳು ಅನ್ಯರ ಪಾಲಾಗದಿರಲಿ ಎನ್ನುವ ಸ್ವಾರ್ಥದಿಂದಲೂ ಸೋದರ ಸಂಬಂಧಿಗಳಲ್ಲಿ ಅನೇಕ ವಿವಾಹಗಳು ನೆರವೇರುತ್ತಿದ್ದವು. 

ತಮ್ಮ ಮಕ್ಕಳು- ಮೊಮ್ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುತ್ತಿದ್ದ ನಮ್ಮ ಪೂರ್ವಜರಿಗೆ, ಇಂತಹ ವಿವಾಹಗಳ ಪರಿಣಾಮದಿಂದಾಗಿ ತಮ್ಮ ಮುಂದಿನ ಸಂತತಿಯನ್ನು ಪೀಡಿಸಬಲ್ಲ ಅನುವಂಶಿಕ ಕಾಯಿಲೆಗಳ ಬಗ್ಗೆ ತಿಳಿದಿರಲಿಲ್ಲ. ಏಕೆಂದರೆ ಅಂದಿನ ದಿನಗಳಲ್ಲಿ ನುರಿತ ವೈದ್ಯರು ಹಾಗೂ ಸಮರ್ಪಕವಾದ ವೈದ್ಯಕೀಯ ಮಾಹಿತಿಗಳು ಜನಸಾಮಾನ್ಯರಿಗೆ ಲಭ್ಯವಿರಲಿಲ್ಲ. 

ಅನುವಂಶಿಕ ಕಾಯಿಲೆಗಳು ಎಂದರೇನು?

ಕುಟುಂಬದ ಹಿರಿಯರಿಂದ ಅವರ ಮಕ್ಕಳು- ಮೊಮ್ಮಕ್ಕಳಿಗೆ ವಂಶವಾಹಿನಿಗಳ ಮೂಲಕ ಅಯಾಚಿತವಾಗಿ ಬಳುವಳಿಯಂತೆ ಬರುವ ಕಾಯಿಲೆಗಳಿಗೆ ಅನುವಂಶಿಕ ಕಾಯಿಲೆಗಳೆನ್ನುತ್ತಾರೆ. ರಕ್ತಸಂಬಂಧಿಗಳಲ್ಲಿ ನಡೆಯುವ ವಿವಾಹದ ಪರಿಣಾಮವಾಗಿ ಇಂತಹ ಕಾಯಿಲೆಗಳು ಮುಂದಿನ ಸಾಧ್ಯತೆಗಳು ನಿಸ್ಸಂದೇಹವಾಗಿ ದ್ವಿಗುಣಗೊಳ್ಳುತ್ತವೆ!. 

ಉದಾಹರಣೆಗೆ ನಿಮ್ಮ ಮನೆಯಲ್ಲೊಂದು ಪುಟ್ಟ ಕಂದ ಹುಟ್ಟಿದಾಗ ನೋಡಲು ಬಂದ ಬಂಧುಮಿತ್ರರು, "ಮಗು ಥೇಟ್ ಅಪ್ಪನಂತೆ ಅಥವಾ ತಾಯಿಯ ಪಡಿಯಚ್ಚು" ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ಈ ಕಂದನ ಕಣ್ಣು, ಕಿವಿ, ಬಾಯಿ, ಮೂಗು, ತಲೆಗೂದಲು, ಶರೀರದ ಆಕಾರ- ಗಾತ್ರ ಮತ್ತಿತರ ಗುಣಲಕ್ಷಣಗಳು, ತಂದೆ ತಾಯಂದಿರ ವಂಶವಾಹಿನಿಗಳ ಮೂಲಕ ಪೂರ್ವನಿರ್ಧರಿತವಾಗಿ ಬರುತ್ತವೆ. ಇದೇ ರೀತಿಯಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಬೆಳವಣಿಗೆಗಳು ವಂಶವಾಹಿನಿಗಳ ಗುಣ- ದೋಷಗಳನ್ನು ಹೊಂದಿಕೊಂಡು ವ್ಯತ್ಯಯವಾಗುವುದುಂಟು. ಇದರಂತೆ ಸ್ಥೂಲಕಾಯರ ಮಕ್ಕಳು ಬೃಹತ್ ಗಾತ್ರದ ಶರೀರವನ್ನು ಹೊಂದಿರುವುದು, ಕುಬ್ಜ ದಂಪತಿಗಳ ಮಕ್ಕಳು ಕುಳ್ಳಗಿರುವುದು, ಬಕ್ಕತಲೆಯುಳ್ಳವರ ಮಕ್ಕಳು ಯೌವ್ವನದಲ್ಲೇ ಬೋಳುತಲೆಯನ್ನು ಹೊಂದಿರುವುದೇ  ಮುಂತಾದ ಗುಣಲಕ್ಷಣಗಳನ್ನು ನಾವು ದೈನಂದಿನ ಜೀವನದಲ್ಲಿ ಕಾಣಬಹುದು. ಇದಲ್ಲದೇ ನಮ್ಮ ತಂದೆ- ತಾಯಿ, ಅಜ್ಜ- ಅಜ್ಜಿಯರಲ್ಲಿ ಇದ್ದಿರಬಹುದಾದ ಅನೇಕ ಗಂಭೀರ- ಮಾರಕ ಕಾಯಿಲೆಗಳು ಅವರ ವಂಶವಾಹಿನಿಗಳ ಮೂಲಕ ನಿಮಗೂ ಜನ್ಮದತ್ತವಾಗಿ ಬರುವ ಸಾಧ್ಯತೆಗಳಿವೆ. ಇದನ್ನು ಅನುವಂಶಿಕತೆ ಅಥವಾ ಅನುವಂಶೀಯತೆ ಎನ್ನುತ್ತಾರೆ. 

ಅನುವಂಶಿಕತೆಯ ಮೂಲ 

ಅನುವಂಶಿಕತೆ ಹಾಗೂ ಇದರಿಂದ ಉದ್ಭವಿಸಬಲ್ಲ ಕಾಯಿಲೆಗಳ ಬಗ್ಗೆ ಅರಿತುಕೊಲ್ಲಬೇಕಾದಲ್ಲಿ ಒಂದಿಷ್ಟು ವೈದ್ಯಕೀಯ ಮಾಹಿತಿಗಳನ್ನು ಅರಿತುಕೊಳ್ಳುವುದು ಅವಶ್ಯವೆನಿಸುವುದು. 

ನಮ್ಮ ಶರೀರದಲ್ಲಿರುವ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಹಾಗೂ ತಾಯಿಯಿಂದ ಪಡೆದ ೨೩ ಸೇರಿದಂತೆ ಒಟ್ಟು ೪೬ ವರ್ಣತಂತುಗಳು(ಕ್ರೋಮೊಸೋಮ್ಸ್) ಇರುತ್ತವೆ. ಇವುಗಳು ೨೩ ಜೋಡಿಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೋಡಿ "ಲಿಂಗ ನಿರ್ಧಾರಕ" (ಸೆಕ್ಸ್ ಕ್ರೋಮೊಸೋಮ್ಸ್)ಗಳಾಗಿರುತ್ತವೆ. ಇವುಗಳು ಪುರುಷರಲ್ಲಿ ಎಕ್ಸ್ ವೈ ಮತ್ತು ಸ್ತ್ರೀಯರಲ್ಲಿ ಎಕ್ಸ್ ಎಕ್ಸ್ ಎಂದು ಗುರುತಿಸಲ್ಪಟ್ಟಿವೆ. ಪುರುಷರ ವೀರ್ಯಾಣುವಿನಲ್ಲಿರುವ ಎಕ್ಸ್ ವರ್ಣತಂತುವು ಸ್ತ್ರೀಯರ ಅಂಡಾಣುವಿನಲ್ಲಿರುವ ಎಕ್ಸ್ ವರ್ಣತಂತುವಿನೊಂದಿಗೆ ವಿಲೀನವಾದಾಗ ಹುಟ್ಟುವ ಮಗುವು ಹೆಣ್ಣಾಗಿರುತ್ತದೆ. ಅಂತೆಯೇ ಪುರುಷರ ವೈ ವರ್ಣತಂತುವು ಸ್ತ್ರೀಯರ  ಎಕ್ಸ್ ವರ್ಣತಂತುವಿನೊಂದಿಗೆ ವಿಲೀನವಾದಾಗ ಹುಟ್ಟುವ ಮಗು ಗಂಡೇ ಆಗಿರುತ್ತದೆ. ಬಹುತೇಕ ವಿದ್ಯಾವಂತ ಪುರುಷರಿಗೂ ತನಗೆ ಹುಟ್ಟುವ ಮಗು ಗಂಡು ಅಥವಾ ಹೆಣ್ಣಾಗಲು ತಾನೇ ಕಾರಣಕರ್ತನೆಂದು ತಿಳಿದಿಲ್ಲ!. ಈ ಎರಡು ವರ್ಣತಂತುಗಳನ್ನು ಹೊರತುಪಡಿಸಿ ಉಳಿದ ೨೨ ಜೊತೆ ವರ್ಣತಂತುಗಳನ್ನು ಅಟೋಸೊಮ್ಸ್ ಎನ್ನುವರು. 

ಪ್ರತಿಯೊಂದು ವರ್ಣತಂತುವಿನಲ್ಲೂ ಸಾವಿರಕ್ಕೂ ಹೆಚ್ಚು ವಂಶವಾಹಿನಿಗಳು (ಜೀನ್ಸ್) ಇರುತ್ತವೆ. ಇವುಗಳಲ್ಲಿ ವ್ಯಕ್ತಿಯ ಶಾರೀರಿಕ - ಮಾನಸಿಕ ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತಿತರ ಕೆಲವು ಸಂಕೇತಗಳು ಅಡಕವಾಗಿರುತ್ತವೆ. ಪ್ರತಿಯೊಂದು ವರ್ಣತಂತು ಅಥವಾ ವಂಶವಾಹಿನಿಗಳಲ್ಲಿ ಇರಬಹುದಾದ ನ್ಯೂನ್ಯತೆ, ವೈಪರೀತ್ಯ, ವಿಕೃತಿಗಳು ಅಥವಾ ಇವುಗಳ ಪರಿವರ್ತನೆಯ ಪರಿಣಾಮವಾಗಿ ಕೆಲವೊಂದು ನಿರ್ದಿಷ್ಟ ಕಾಯಿಲೆಗಳು, ನ್ಯೂನ್ಯತೆಗಳು ಹಾಗೂ ವೈಕಲ್ಯಗಳು ನಮ್ಮಲ್ಲಿ ಕಂಡುಬರಬಹುದು. ಇಂತಹ ಸಮಸ್ಯೆಗಳಿಗೆ ಕಾರಣವಾಗಿರುವ ವರ್ಣತಂತುಗಳು - ವಂಶವಾಹಿನಿಗಳನ್ನು ಗುರುತಿಸಿ, ಇವುಗಳಲ್ಲಿ ಸಂಭವಿಸಿರುವ ಪರಿವರ್ತನೆಗಳನ್ನು ಪತ್ತೆಹಚ್ಚುವಲ್ಲಿ ವೈದ್ಯಕೀಯ ವಿಜ್ಞಾನಿಗಳು ಅವಿರತ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚೆಗೆ "ಮಾನವನ ವಂಶವಾಹಿನಿಗಳ ನಕ್ಷೆ" ಯನ್ನು ಯಶಸ್ವಿಯಾಗಿ ಸಿದ್ಧಪಡಿಸಿರುವುದು ಅದ್ಭುತ ಸಾಧನೆಯೆನ್ನಬಹುದು. ಇದರ ಫಲವಾಗಿ ಇಂತಹ ಕಾಯಿಲೆಗಳನ್ನು ಪತ್ತೆಹಚ್ಚಲು- ತಡೆಗಟ್ಟಲು ಅವಶ್ಯಕ ಪರೀಕ್ಷೆಗಳು ಹಾಗೂ ಚಿಕಿತ್ಸೆಯನ್ನು ಸಂಶೋಧಿಸುವುದು ಸಾಧ್ಯವಾಗಬಹುದು. 

ಜನಸಾಮಾನ್ಯರು ಆಡುಭಾಷೆಯಲ್ಲಿ ಬಳಸುವ "ಬ್ರಹ್ಮಲಿಖಿತ" ಅಥವಾ "ಹಣೆಬರಹ" ಎನ್ನುವ ಮಾತು, ವಂಶವಾಹಿನಿಗಳ ಬಗ್ಗೆ ನಿಜವೆನಿಸುವುದು. ಏಕೆಂದರೆ ಇವುಗಳಲ್ಲಿ ಅಡಕವಾಗಿರುವ "ಮಾಹಿತಿ"ಯನ್ನು ಬದಲಿಸಲು ಇದುವರೆಗೆ ಯಾವುದೇ ವೈದ್ಯಕೀಯ ವಿಜ್ಞಾನಿಯೂ ಯಶಸ್ವಿಯಾಗಿಲ್ಲ!. 

ಕಾರಣಗಳ ವೈವಿಧ್ಯ 

ಮನುಕುಲವನ್ನು ಬಾಧಿಸಬಲ್ಲ ಕೆಲವೊಂದು ಕಾಯಿಲೆಗಳು ಕೇವಲ ವಂಶವಾಹಿನಿಗಳ ವೈಪರೀತ್ಯದಿಂದಾಗಿ ಉದ್ಭವಿಸುತ್ತವೆ. ಇವುಗಳಲ್ಲಿ ಪರಿಸರ ಅಥವಾ ಅನ್ಯ ಕಾರಣಗಳು ಪ್ರಭಾವ ಬೀರುವುದಿಲ್ಲ. ಇಂತಹ ಕಾಯಿಲೆಗಳಲ್ಲಿ ವರ್ನತಂತುಗಳ ಅಸಮಾನತೆಯೂ ಸೇರಿದ್ದು ಇವುಗಳನ್ನು ಏಕ ಕಾರಣದಿಂದ ಉದ್ಭವಿಸುವ ಕಾಯಿಲೆಗಳೆಂದು ಕರೆಯುವರು. ಕೇವಲ ಒಂದು ವಂಶವಾಹಿನಿಯ ನ್ಯೂನ್ಯತೆಯಿಂದ ಅಪರೂಪದಲ್ಲಿ ಕಾಣಸಿಗುವ ಸಾವಿರಕ್ಕೂ ಹೆಚ್ಚು ವಿಧದ ಸಮಸ್ಯೆಗಳಿದ್ದು, ಇವುಗಳು ಜನ್ಮದತ್ತವಾಗಿ ಅಥವಾ ಬಾಲ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇವುಗಳಿಗೆ ಅಪವಾದಗಳೂ ಇವೆ. ಇಂತಹ ಗಂಭೀರ ಕಾಯಿಲೆಗಳು ಮಾತಪಿತರಿಂದ ನೇರವಾಗಿ ಮಕ್ಕಳಿಗೆ ಬರುವ ಸಾಧ್ಯತೆಗಳಿದ್ದು, ರಕ್ತಸಂಬಂಧಿಗಳಲ್ಲಿ ಇವುಗಳ ಸಂಭಾವ್ಯತೆ ಇನ್ನಷ್ಟು ಹೆಚ್ಚಾಗಬಹುದು. ಸಾಮಾನ್ಯವಾಗಿ ಈ ರೀತಿಯ ನ್ಯೂನ್ಯತೆ- ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿರುವುದಿಲ್ಲ. 

ಇನ್ನು ಕೆಲವು ಕಾಯಿಲೆಗಳು ನಮ್ಮ ಪರಿಸರ ಅರ್ಥಾತ್ ಸೋಂಕು, ಆಹಾರ ಮತ್ತು ಪೋಷಕಾಮ್ಶಗಲ್ ಕಾರಣದಿಂದಾಗಿ ಬರುತ್ತವೆ. ಮತ್ತೆ ಕೆಲವು ಕಾಯಿಲೆಗಳು ಅನುವಂಶಿಕತೆ ಮತ್ತು ಪರಿಸರ ಇವೆರಡೂ ಕಾರಣಗಳಿಂದ ಉದ್ಭವಿಸುತ್ತವೆ. ಇವುಗಳನ್ನು ಬಹುಕಾರಣಗಳಿಂದ ಬರುವ ಕಾಯಿಲೆಗಳೆನ್ನುವರು. ಇವುಗಳಲ್ಲಿ ಜನ್ಮದತ್ತ ವೈಕಲ್ಯಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಜನ್ಮದತ್ತ ಹೃದ್ರೋಗಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಸಿಜೋಫ್ರೆನಿಯಾ ದಂತಹ ಗಂಭೀರ ಮಾನಸಿಕ ವ್ಯಾಧಿಗಳು ಸೇರಿವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳಲ್ಲಿ ಒಂದಕ್ಕೂ ಹೆಚ್ಚು ವಂಶವಾಹಿನಿಗಳ ವೈಪರೀತ್ಯ ಕಾರಣವಾಗಿರುತ್ತದೆ. 

ವರ್ಣತಂತುಗಳ ಅಸಾಮಾನ್ಯತೆಯಿಂದಾಗಿ ಡೌನ್ಸ್ ಸಿಂಡ್ರೋಮ್, ಸೀಳು ತುಟಿ- ಒಸಡುಗಳಂತಹ ಜನ್ಮದತ್ತ ವೈಕಲ್ಯಗಳು, ಸ್ವಯಂ ಸಂಭವಿಸುವ ಗರ್ಭಪಾತ, ವ್ಯಕ್ತಿತ್ವದ ಸಮಸ್ಯೆಗಳು ಹಾಗೂ ಇನ್ನಿತರ ಕಾಯಿಲೆಗಳು ಬರುವುದುಂಟು. 

ಅನುವಂಶಿಕ ಕಾಯಿಲೆಗಳು ಅನೇಕಬಾರಿ ಒಂದು ತಲೆಮಾರಿನಲ್ಲಿ ಮಾಯವಾಗಿ ಮತ್ತೆ ಮುಂದಿನ ಸಂತತಿಯಲ್ಲಿ ಪ್ರತ್ಯಕ್ಷವಾಗಬಹುದು. ತೀವ್ರ ಮತ್ತು ಗಂಭೀರ ಅನುವಂಶಿಕ ಕಾಯಿಲೆಗಳಿರುವ ರೋಗಿಗಳಲ್ಲಿ  ವೈದ್ಯಕೀಯ ಕಾರಣಗಳಿಂದಾಗಿ ತಲೆದೋರಿದ ಸಂತಾನಹೀನತೆಯಿಂದ ಅಥವಾ ಇಂತಹ ವ್ಯಕ್ತಿಗಳು ಯೌವ್ವನದಲ್ಲಿ ವಿವಾಹಕ್ಕೆ ಮೊದಲೇ ಮೃತರಾಗುವುದರಿಂದ, ಈ ಕುಟುಂಬದಲ್ಲಿನ ಅನುವಂಶಿಕ ಕಾಯಿಲೆಯೂ ಸ್ವಾಭಾವಿಕವಾಗಿ ಅಂತ್ಯಗೊಳ್ಳುವುದು. ಗಿಡ್ಡ ಕಾಲಿನ ಕುಬ್ಜರು ಇದಕ್ಕೆ ಉತ್ತಮ ಉದಾಹರಣೆ ಎನಿಸುತ್ತಾರೆ. ಅಂತೆಯೇ ತಮ್ಮ ಕಾಯಿಲೆಯ ಅರಿವಿಲ್ಲದೇ ವಿವಾಹವಾದ ವ್ಯಕ್ತಿಗಳ ಮುಂದಿನ ಸಂತತಿಯನ್ನು ಈ ಸಮಸ್ಯೆ ಬಾಧಿಸುವುದರಲ್ಲಿ ಸಂದೇಹವಿಲ್ಲ. 

ಅಪರೂಪದಲ್ಲಿ ಒಂದೇ ರೀತಿಯ ವಂಶವಾಹಿನಿಗಳ ನ್ಯೂನ್ಯತೆಗಳಿರುವ ದಂಪತಿಗಳಲ್ಲಿ ಹುಟ್ಟುವ ಎಲ್ಲ ಮಕ್ಕಳಲ್ಲಿ ಈ ನ್ಯೂನ್ಯತೆ ಕಂಡುಬರುವುದು. ಇಂತಹ ಸಾಧ್ಯತೆಗಳು ರಕ್ತ ಸಂಬಂಧಿಗಳ ವಿವಾಹದಿಂದಾಗಿ ಉದ್ಭವಿಸಿವುದೇ ಹೆಚ್ಚು. ಏಕೆಂದರೆ ಒಂದೇ ರೀತಿಯ ನ್ಯೂನ್ಯತೆಗಳು ರಕ್ತ ಸಂಬಂಧಿಗಳಲ್ಲದವರಲ್ಲಿ ಕಂಡುಬರುವ ಸಾಧ್ಯತೆಗಳು ಅತ್ಯಂತ ವಿರಳ. ದೀರ್ಘಾಯುಷ್ಯದ ಪರಂಪರೆ ಇರುವ ಕುಟುಂಬಗಳಲ್ಲಿ ಅನುವಂಶಿಕ ಕಾಯಿಲೆಗಳು ಇರುವುದನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭ. ಸೋದರ ಸಂಬಂಧಿಗಳು ವಿವಾಹವಾದಾಗ ಈ ದಂಪತಿಗಳಲ್ಲಿ ಹುಟ್ಟುವ ಮಕ್ಕಳು ಹೆರಿಗೆಯ ಕೆಲವು ವಾರಗಳ ಮೊದಲು ಅಥವಾ ಹೆರಿಗೆಯ ಬಳಿಕ ಕೆಲವೇ ವಾರಗಳಲ್ಲಿ ಮರಣಹೊಂದುವುದು, ಅಪರೂಪದಲ್ಲಿ ಕೆಲವು ಜನ್ಮದತ್ತ ವೈಕಲ್ಯಗಳು ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುವುದೇ ಮುಂತಾದ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿವೆ. ಅಂತೆಯೇ ಕೆಲವರಲ್ಲಿ ವಿಶಿಷ್ಟ ರೀತಿಯ ಕಿವುಡು- ಮೂಕತನ ಹಾಗೂ ಜನ್ಮದತ್ತ ಕುರುಡುತನಗಳೂ ಕಂಡುಬರುವುದುಂಟು. ವಿಶೇಷವಾಗಿ ಕುಟುಂಬದ ಹಿರಿಯರಲ್ಲಿ ಇಂತಹ ಸಮಸ್ಯೆಗಳಿದ್ದಲ್ಲಿ, ಇವು ಮುಂದಿನ ಸಂತತಿಯಲ್ಲಿ ಪುನರಾವರ್ತನೆಯಾಗುವುದು ಸಾಮಾನ್ಯ. 

ಒಂದು ಕುಟುಂಬದ ಹಲವಾರು ತಲೆಮಾರುಗಳಲ್ಲಿ ಒಂದು ಅಥವಾ ಹೆಚ್ಚು ವಿಧದ ನಿರ್ದಿಷ್ಟ ಕಾಯಿಲೆಗಳು ಕಂಡುಬಂದಲ್ಲಿ, ಈ ಕಾಯಿಲೆಗಳು ಅನುವಂಶಿಕವಾಗಿ ಈ ಕುಟುಂಬದ ಸದಸ್ಯರನ್ನು ಕಾಡುತ್ತಿದೆ ಎಂದು ಖಚಿತವಾಗಿ ಹೇಳಬಹುದು. 

ಅನುವಂಶಿಕ ಕಾಯಿಲೆಗಳಲ್ಲಿ ಹಲವಾರು ವೈವಿಧ್ಯಗಳಿದ್ದು, ಈ ಲೇಖನದಲ್ಲಿ ಇವೆಲ್ಲವನ್ನೂ ವಿವರಿಸಿಲ್ಲ. ಆದರೆ ಅನುವಂಶಿಕ ಕಾಯಿಲೆಯ  ಉದಾಹರಣೆಗಾಗಿ "ಹೆಮೊಫಿಲಿಯಾ" ವ್ಯಾಧಿಯನ್ನು ಆಯ್ದುಕೊಳ್ಳಲಾಗಿದೆ. 

ಶತಪ್ರತಿಶತ ಅನುವಂಶಿಕವಾಗಿ ಉದ್ಭವಿಸುವ ಹೆಮೊಫಿಲಿಯಾ ವ್ಯಾಧಿಯು, ರಕ್ತ ಹೆಪ್ಪುಗಟ್ಟಲು ಅವಶ್ಯವಾದ ಎಂಟಿ ಹೆಮೊಫಿಲಿಕ್ ಅಂಶಗಳ (೮, ಎಎಚ್ ಎಫ್ ಅಥವಾ ಎ ಎಚ್ ಜಿ) ಕೊರತೆಯಿಂದ ಸಂಭವಿಸುತ್ತದೆ. ಜೀವನಪರ್ಯಂತ ಕಾಡಬಲ್ಲ ಈ ವ್ಯಾಧಿಗೆ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ. ಇಂತಹ ವ್ಯಕ್ತಿಗಳಲ್ಲಿ ಕಾರಣಾಂತರಗಳಿಂದ ರಕ್ತಸ್ರಾವವಾದಾಗ, ಅದು ತೀವ್ರಗೊಳ್ಳುವುದಲ್ಲದೇ ರಕ್ತ ಹೆಪ್ಪುಗಟ್ಟುವುದು ವಿಳಂಬಿತವಾಗುವುದು. 

ಹೆಮೊಫಿಲಿಯಾ ಇರುವ ಗಂಡಸಿನಿಂದ ಆತನ ಗಂಡುಮಕ್ಕಳಿಗೆ ಹಾಗೂ ಗಂಡುಮಕ್ಕಳ ಮುಂದಿನ ಸಂತತಿಗೆ  ಈ ಸಮಸ್ಯೆಯು ಅನುವಂಶಿಕವಾಗಿ ಬರುವುದಿಲ್ಲ. ಆದರೆ ಹೆಣ್ಣುಮಕ್ಕಳು ಈ ವಂಶವಾಹಿನಿಗಳ ವಾಹಕರಾಗಿ ತಮ್ಮಲ್ಲಿ ಹುಟ್ಟುವ ಕೆಲವು ಗಂಡುಮಕ್ಕಳಿಗೆ ಈ ಕಾಯಿಲೆಯನ್ನು ಬಳುವಳಿಯಾಗಿ ನೀಡುತ್ತಾರೆ. ಅಂತೆಯೇ ಇವರಲ್ಲಿ ಹುಟ್ಟುವ ಕೆಲವು ಹೆಣ್ಣುಮಕ್ಕಳು ತಮ್ಮ ತಾಯಂದಿರಂತೆಯೇ "ವಾಹಕ"ರಾಗುವ ಸಾಧ್ಯತೆಗಳಿವೆ. 

ಹೆಮೊಫಿಲಿಯಾ ಇರುವ ಗಂಡಸರು, ಅವರ ಸೋದರಿಯರು ಮತ್ತು ಅವರ ಹೆಣ್ಣುಮಕ್ಕಳು ವಿವಾಹವಾದರೂ, ಮಕ್ಕಳಾಗದಂತೆ ಎಚ್ಚರ ವಹಿಸುವುದು ಹಿತಕರ. ಜೊತೆಗೆ ಈ ಕುಟುಂಬದಲ್ಲಿ ಅನುವಂಶಿಕವಾಗಿ ಹರಡುತ್ತಿರುವ ಕಾಯಿಲೆಯೊಂದನ್ನು ಸಮಾಪ್ತಿಗೊಳಿಸಲು ಇದುವೇ ಅತ್ಯಂತ ಸುಲಭೊಪಾಯವೂ ಹೌದು. 

ಸಮಸ್ಯೆಯನ್ನು ತಡೆಗಟ್ಟುವುದೆಂತು?

ಪ್ರಸ್ತುತ ಅನುವಂಶಿಕವಾಗಿ ಬರಬಲ್ಲ ಬಹುತೇಕ ಗಂಭೀರ- ಮಾರಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣದಿಂದಾಗಿ, ಇಂತಹ ಕುಟುಂಬಗಳ ಸದಸ್ಯರು ವಿವಾಹಕ್ಕೆ ಮುನ್ನ ವೈದ್ಯಕೀಯ ತಜ್ಞರೊಂದಿಗೆ ಅನುವಂಶಿಕತೆಯ ಬಗ್ಗೆ "ಆಪ್ತ ಸಂವಾದ"( ಜೆನೆಟಿಕ್ ಕೌನ್ಸೆಲಿಂಗ್) ನಡೆಸುವುದು ಉತ್ತಮ. ಏಕೆಂದರೆ ವಿವಾಹಯೋಗ್ಯ ವಯಸ್ಸಿನಲ್ಲಿ ಆರೋಗ್ಯವಂತರಾಗಿದ್ದರೂ, ಮುಂದೆ ಅನುವಂಶಿಕ ಕಾರಣಗಳಿಂದ ವ್ಯಾಧಿಪೀಡಿತರಾಗುವುದು ಹಾಗೂ ತಮ್ಮ ಸಂತತಿಗೂ ಈ ಸಮಸ್ಯೆಯನ್ನು ಬಳುವಳಿಯಾಗಿ ನೀಡುವುದು ಸುಲಭ ಸಾಧ್ಯ. 

ಆಪ್ತ ಸಂವಾದದ ಉದ್ದೇಶ ಇಂತಹ ವ್ಯಕ್ತಿಗಳಲ್ಲಿ ಇರಬಹುದಾದ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚುವುದು ಹಾಗೂ ಇದು ಅನುವಂಶಿಕವಾಗಿ ಬಂದಿರುವುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ಅಂತೆಯೇ ಈ ವ್ಯಕ್ತಿಯ ಕುಟುಂಬದ ಇತರ ಸದಸ್ಯರಲ್ಲಿ ಇದೇ ವ್ಯಾಧಿಯ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಧೃಢಪಡಿಸಬೇಕಾಗುತ್ತದೆ. ತದನಂತರ ಆಯಾ ವ್ಯಕ್ತಿಗಳಲ್ಲಿರುವ ಅಥವಾ ಮುಂದೆ ಬರಬಹುದಾದ ಕಾಯಿಲೆಗಳಿಗೆ ಅನುಗುಣವಾಗಿ ವೈದ್ಯರು ನಿರ್ದಿಷ್ಟ ಮಾಹಿತಿ, ಸಲಹೆ ಮತ್ತು ಸೂಚನೆಗಳನ್ನು ನೀಡುವರು. ತಜ್ಞವೈದ್ಯರು ನೀಡುವ ಸಲಹೆ ಸೂಚನೆಗಳು, ಈ ಸಮಸ್ಯೆಯನ್ನು ತಡೆಗಟ್ಟಲು ಮಹತ್ವಪೂರ್ಣವೆನಿಸುವುದು. 

ಸಂದೇಶನ ಬೆನ್ನು ನೋವಿಗೆ ಕಾರಣವೇನು?

ಸೌಮ್ಯ ಸ್ವಭಾವದ ಬುದ್ಧಿವಂತ ತರುಣ ಸಂದೇಶನಿಗೆ ಸ್ನಾತಕೋತ್ತರ ವ್ಯಾಸಂಗ ಮುಗಿಸಿದಂತೆಯೇ ಅಮೆರಿಕದಲ್ಲಿ ಉದ್ಯೋಗ ದೊರೆತಿತ್ತು. ಕೈತುಂಬಾ ಸಂಬಳ ದೊರೆಯುವ ಉದ್ಯೋಗ ದೊರೆತಾಗ ಆತನ ಮನೆಮಂದಿಗೆಲ್ಲ "ಸ್ವರ್ಗಕ್ಕೆ ಮೂರೇ ಗೇಣು" ಎನಿಸಿತ್ತು. ಅಮೆರಿಕಕ್ಕೆ ತೆರಳಿದ ಸಂದೇಶ ಎರಡು ವರ್ಷಗಳ ಬಳಿಕ ಭಾರತಕ್ಕೆ ಮರಳಿದಾಗ, ಆತನ ಮಾತಾಪಿತರಿಗೆ ಮಗನ ಗುರುತು ಸಿಗದಷ್ಟು ಬದಲಾಗಿದ್ದನು. ಸಾಕಷ್ಟು ತೂಕವನ್ನು ಕಳೆದುಕೊಂಡು ತುಸು ವಯಸ್ಸಾದವನಂತೆ ಕಾಣುತ್ತಿದ್ದ ಮಗನನ್ನು ಕಂಡ ತಾಯಿಗೆ ಕಣ್ಣೀರು ಉಕ್ಕಿಹರಿದಿತ್ತು. ಮರುದಿನ ಅಮೆರಿಕಕ್ಕೆ ತೆರಳಿದ ಬಳಿಕ ಆರಂಭವಾಗಿದ್ದ ಬೆನ್ನುನೋವಿನ ಬಗ್ಗೆ ತಂದೆತಾಯಿಯರ ಬಳಿ ಹೇಳಿದ ಸಂದೇಶನು, ದಿನದಲ್ಲಿ ೧೨ ಗಂಟೆಗಳ ಕಾಲ ಕಂಪ್ಯೂಟರ್ ನ ಮುಂದೆ ಕುಳಿತುಕೊಳ್ಳುವುದೇ ತನ್ನ ಸಮಸ್ಯೆಗೆ ಕಾರಣವೆಂದು ಭಾವಿಸಿದ್ದನು. 

ಮಗನ ಸ್ಥಿತಿಯನ್ನು ಕಂಡು ಗಾಬರಿಯಾಗಿದ್ದ ಆತನ ತಂದೆಯು, ಸ್ಥಳೀಯ ತಜ್ಞರನ್ನು ಭೇಟಿಯಾಗಿ ಪರೀಕ್ಷಿಸಲ್ಪಟ್ಟ ಬಳಿಕ ಅವರ ಸಲಹೆಯಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ತಜ್ನವೈದ್ಯರು ನಡೆಸಿದ್ದ ಇತರ ಪರೀಕ್ಷೆಗಳಿಂದ ಸಂದೇಶನ ಬೆನ್ನುಹುರಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ವಿಷಯವನ್ನರಿತ ಮಾತಾಪಿತರು ದಿಗ್ಭ್ರಾಂತರಾಗಿದ್ದರು. 

ವಾಸ್ತವದಲ್ಲಿ ಸಂದೇಶನ ತಂದೆ ಮತ್ತು ತಾಯಿಯರಿಬ್ಬರ ಕುಟುಂಬಗಳ ಹಲವಾರು ಹಿರಿಯರ ಮರಣಗಳಿಗೆ ಕಾರಣವೆನಿಸಿದ್ದ ಮಾರಕ ಕ್ಯಾನ್ಸರ್, ಇದೀಗ ಅನುವಂಶಿಕವಾಗಿ ಹರಿಯುತ್ತಾ ಬಂದು ಸಂದೇಶನನ್ನು ಕಾಡಲಾರಂಭಿಸಿತ್ತು. ಇದೀಗ ಜೀವನ್ಮರಣದ ಮಧ್ಯೆ ಉಯ್ಯಾಲೆಯಾಡುತ್ತಿರುವ ಸಂದೇಶನು, ತನ್ನದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿರುವುದು ವಿಷಾದನೀಯ. 

ನಿಮಗೊಂದು ಕಿವಿಮಾತು 

ವಿವಾಹಯೋಗ್ಯರಾಗಿರುವ ನೀವು ಹಿಂದೂ ಧರ್ಮೀಯರಾಗಿದ್ದು ಜಾತಕದ ಬಗ್ಗೆ ನಂಬಿಕೆಯಿದ್ದಲ್ಲಿ, ಪರಸ್ಪರ ಜಾತಕಗಳ ಹೊಂದಾಣಿಕೆಯೊಂದಿಗೆ ಇವೆರಡೂ ಕುಟುಂಬಗಳ ಹಿರಿಯರಲ್ಲಿ ಅನುವಂಶಿಕ ಕಾಯಿಲೆಗಳಿವೆಯೇ ಎಂದು ತಿಳಿದುಕೊಳ್ಳಿ. ವಿಶೇಷವಾಗಿ ಕ್ಯಾನ್ಸರ್, ಬಾಲ ಮಧುಮೇಹ, ಜನ್ಮದತ್ತ ಹೃದ್ರೋಗ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ, ಹೆಮೊಫಿಲಿಯಾ, ಆಸ್ತಮಾ,ತೀವ್ರ ಅಪಸ್ಮಾರ, ಉನ್ಮಾದ,ಮಾನಸಿಕ ಖಿನ್ನತೆ, ಸಿಜೋಫ್ರೆನಿಯಾ, ಡೌನ್ಸ್ ಸಿಂಡ್ರೋಮ್ ಮತ್ತಿತರ ಗಂಭೀರ ಕಾಯಿಲೆಗಳು ಎರಡೂ ಕುಟುಂಬಗಳಲ್ಲಿ ಇದ್ದಲ್ಲಿ, ಇವು ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ಜಾತಕಗಳ ಹೊಂದಾಣಿಕೆ ಇದ್ದರೂ ವಿವಾಹವಾಗದಿರುವುದೇ ಲೇಸು. 

ಯಾವುದೇ ಕಾರಣಕ್ಕೂ ಸೋದರ ಸಂಬಂಧದಲ್ಲಿ ವಿವಾಹವಾಗದಿರಿ. ಏಕೆಂದರೆ ನಿಮ್ಮ ಮತ್ತು ನಿಮ್ಮ ಸೋದರ ಸಂಬಂಧಿಯಲ್ಲಿರುವ ೪೬ ವರ್ಣತಂತುಗಳಲ್ಲಿ, ಕನಿಷ್ಠ ೨೩ ವರ್ಣತಂತುಗಳು ಸಮಾನವಾಗಿರುತ್ತವೆ. ಇದೇ ಕಾರಣದಿಂದಾಗಿ ನಿಮ್ಮ ಕುಟುಂಬದ ಹಿರಿಯರಲ್ಲಿ ಇದ್ದಿರಬಹುದಾದ ಅನುವಂಶಿಕ ಕಾಯಿಲೆಗಳು ನಿಮ್ಮ ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ದ್ವಿಗುಣಗೊಳ್ಳುತ್ತವೆ!. 

ಕೆಲ ವ್ಯಕ್ತಿಗಳು ವೈದ್ಯರ ಸಲಹೆಯಂತೆ ವಿವಾಹವಾದರೂ, ಮಕ್ಕಳಾಗದಂತೆ ಎಚ್ಚರಿಕೆ ವಹಿಸುವುದರಿಂದ, ನಿಮ್ಮ ಕಣ್ಣ ಮುಂದೆಯೇ ನಿಮ್ಮ ಮಕ್ಕಳು ಗಂಭೀರ- ಮಾರಕ ಕಾಯಿಲೆಗಳಿಂದ ಪೀಡಿತರಾದಲ್ಲಿ ಉಂಟಾಗುವ ಮನೋವ್ಯಾಕುಲ, ಅಪರಾಧೀ ಮನೋಭಾವ ಹಾಗೂ ಅನಾವಶ್ಯಕ  ಮತ್ತು ನಿಷ್ಪ್ರಯೋಜಕ ಎನಿಸುವ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು. ಜೊತೆಗೆ ಆರೋಗ್ಯವಂತ ಅನಾಥ ಮಗುವೊಂದನ್ನು ದತ್ತು ಪಡೆದು ಸಾಕಿ ಸಲಹಿದಲ್ಲಿ ಧನ್ಯತಾ ಭಾವನೆಯೊಂದಿಗೆ ಒಂದಿಷ್ಟು ಪುಣ್ಯವೂ ಲಭಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೧-೦೧-೨೦೦೪ ರ ಸಂಚಿಕೆಯ ಬಳಕೆದಾರ:ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  


No comments:

Post a Comment