Wednesday, November 13, 2013

Nov.14- World Diabetes Day



                                            

                    ಸಕ್ಕರೆಯ ಮೇಲೆ ಏಕಿಷ್ಟು ಅಕ್ಕರೆ?

   ಸಕ್ಕರೆಯಂತಹ ಸವಿಮಾತುಗಳಿಗೆ ಮನಸೋಲುವ ಹುಲುಮಾನವರು, ಸಕ್ಕರೆಯಿಂದ ತಯಾರಿಸಿದ ಸ್ವಾದಿಷ್ಟ ಖಾದ್ಯ-ಪೇಯಗಳಿಗೆ ಮನಸೋಲದಿರುವುದು ಅಸಾಧ್ಯ. ಜಿಲೇಬಿ, ಗುಲಾಬ್ ಜಾಮೂನ್, ಚಂಪಾಕಲಿ, ಲಾಡು, ಹೋಳಿಗೆ, ಪಾಯಸಗಳ ಹೆಸರುಗಳನ್ನು ಕೇಳಿದೊಡನೆ ಬಾಯಲ್ಲಿ ನೀರೂರಿಸದ ಭಾರತೀಯರೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರ ಅಡುಗೆಮನೆಯಲ್ಲಿ ಸಕ್ಕರೆಗೆ ಅಗ್ರಸ್ಥಾನ ಸಲ್ಲುತ್ತದೆ!. 

ಶುಭ ಸಮಾಚಾರಗಳು ಅಥವಾ ಯಾವುದೇ ಸಂತೋಷದ ಸುದ್ದಿಯೊಂದನ್ನು ಬಂಧುಮಿತ್ರರಿಗೆ ತಿಳಿಸುವಾಗ, ಬಾಯಿ ಸಿಹಿಮಾಡುವ ಸಂಪ್ರದಾಯ ಭಾರತೀಯರ ವೈಶಿಷ್ಟ್ಯವಾಗಿದೆ. ಜನನ-ಮರಣಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳ ಸಂದರ್ಭಗಳಲ್ಲೂ, ಸಿಹಿತಿಂಡಿಗಳನ್ನು ಬಡಿಸುವುದು ನಮ್ಮ ಸಂಪ್ರದಾಯವಾಗಿದೆ. ವಿವಿಧ ಧರ್ಮೀಯರ ಹಬ್ಬ ಹರಿದಿನಗಳಲ್ಲಂತೂ, ಸಿಹಿತಿಂಡಿಗಳ ವಿನಿಮಯ ಅನಿವಾರ್ಯವೆನಿಸಿದೆ. ಈ ರೀತಿಯಲ್ಲಿ ಭಾರತೀಯರು ಸೇವಿಸುತ್ತಿರುವ ವೈವಿಧ್ಯಮಯ ಸಿಹಿತಿಂಡಿಗಳ ಪ್ರಮಾಣವು, ಪ್ರಾಯಶಃ ಜಗತ್ತಿನ ಅನ್ಯ ರಾಷ್ಟ್ರಗಳ ಜನರಿಗಿಂತ ಸಾಕಷ್ಟು ಹೆಚ್ಚಿದೆ. 

ಭಾರತದಲ್ಲಿ ಜರಗುವ ಪ್ರತಿಯೊಂದು ಸಮಾರಂಭ ಹಾಗೂ ಔತಣಕೂಟಗಳಲ್ಲಿ ಸಿಹಿತಿಂಡಿಗಳು ಮತ್ತು ಪಾಯಸಗಳಿಗೆ ವಿಶೇಷವಾದ ಸ್ಥಾನಮಾನಗಳಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈವಿಧ್ಯಮಯ ಸಿಹಿತಿನಿಸುಗಳನ್ನು ಮನಸಾರೆ ಸವಿಯುವ ಅತಿಥಿಗಳು, ಅಪ್ಪಿತಪ್ಪಿಯೂ ತಾವು ಸೇವಿಸಿದ ಖಾದ್ಯಪೇಯಗಳಲ್ಲಿನ ಸಕ್ಕರೆಯ ಪ್ರಮಾಣ ಹಾಗೂ ಇವುಗಳ ಅತಿಸೇವನೆಯು, ತಮ್ಮ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. ಅಂತೆಯೇ ಅನೇಕ ಮಧುಮೇಹ ಪೀಡಿತರೂ ಮನೆಮಂದಿಯ ಕಣ್ಣುತಪ್ಪಿಸಿ, ಸ್ವಾದಿಷ್ಟವಾದ ಸಿಹಿತಿಂಡಿಗಳನ್ನು ಮನಸಾರೆ ಸವಿಯುವ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದಿಲ್ಲ!. 

ಅನುಭವೀ ವೈದ್ಯರೇ ಹೇಳುವಂತೆ, ಅವರಲ್ಲಿ ತಪಾಸಣೆಗಾಗಿ ಬಂದವರಿಗೆ ಆಕಸ್ಮಿಕವಾಗಿ ಮಧುಮೇಹ ವ್ಯಾಧಿಯ ಇರುವಿಕೆ ಪತ್ತೆಯಾದಲ್ಲಿ, ಈ ವ್ಯಾಧಿಗಿಂತಲೂ ಹೆಚ್ಚಾಗಿ ತಾವಿನ್ನು ಸಿಹಿತಿಂಡಿಗಳನ್ನು ಸವಿಯುವಂತಿಲ್ಲ ಎನ್ನುವ ವಿಚಾರವೇ ಅಸಹನೀಯವೆನಿಸುತ್ತದೆ. ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ!. 

ಅತಿಯಾದರೆ ಅಮೃತವೂ........ 

೨೦೦೮-೦೯ ರ  ಅಂಕಿ ಅಂಶಗಳಂತೆ ಭಾರತೀಯರು ವರ್ಷಂಪ್ರತಿ ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವು ಸುಮಾರು ೩೦ ಕಿಲೋಗ್ರಾಂ ಎಂದಲ್ಲಿ ನೀವೂ ನಂಬಲಾರಿರಿ. ಅರ್ಥಾತ್, ಪ್ರತಿಯೊಬ್ಬ ಭಾರತೀಯನು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು ೮೦ ಗ್ರಾಂ ಗಳಷ್ಟಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರಮಾಣವು ಶೇ. ೨೦ ರಷ್ಟು ಹೆಚ್ಚುತ್ತಿದೆ. ಈ ಪ್ರಮಾಣವು ಇನ್ನಷ್ಟು ಹೆಚ್ಚುತ್ತ ಹೋದಲ್ಲಿ, ೨೦೨೦ ಕ್ಕೂ ಮುನ್ನ ಪ್ರತಿವರ್ಷ ನಾವು ಸೇವಿಸುವ ಸಕ್ಕರೆಯ ಪ್ರಮಾಣವು ದುಪ್ಪಟ್ಟಾಗಲಿದೆ!. 

ಪ್ರಸ್ತುತ ಭಾರತವು ವಿಶ್ವದ ಮಧುಮೇಹಿಗಳ ರಾಜಧಾನಿ ಎನಿಸಿರಲು ಇತರ ಕೆಲವು ಕಾರಣಗಳೊಂದಿಗೆ, ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಯೂ ಪ್ರಮುಖ ಕಾರಣವೆನಿಸಿದೆ. ಶಾಶ್ವತ ಪರಿಹಾರವಿಲ್ಲದ ಈ ಗಂಭೀರ ಕಾಯಿಲೆಗೆ ಸುಲಭವಾಗಿ ಈಡಾಗಲು, ಅತಿಯಾದ ಸಿಹಿತಿಂಡಿಗಳ ಸೇವನೆಯೂ ಕಾರಣವೆಂದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ. 

ನಾವು ದಿನನಿತ್ಯ ಬಳಸುವ ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ ೪೮ ಕ್ಯಾಲರಿಗಳಿವೆ. ಸಕ್ಕರೆಯ ಅತಿಸೇವನೆಯಿಂದ ದಂತಕುಳಿಗಳು, ಮಧುಮೇಹ, ಅತಿಬೊಜ್ಜು, ಗೌಟ್, ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಗಂಭೀರ- ಮಾರಕ ವ್ಯಾಧಿಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. 

ಸಕ್ಕರೆಯಿಂದ ಕೊಬ್ಬು?

ನಾವು ಸೇವಿಸಿದ ಸಕ್ಕರೆಯು ಜೀರ್ಣವಾದ ಬಳಿಕ ಗ್ಲೂಕೋಸ್ ಮತ್ತು ಫ್ರುಕ್ಟೋಸ್ ಗಳಾಗಿ ವಿಭಜಿಸಲ್ಪಟ್ಟು ಸಣ್ಣಕರುಳಿನ ಮೂಲಕ ಕ್ಷಿಪ್ರಗತಿಯಲ್ಲಿ ಹೀರಲ್ಪಟ್ಟ ಬಳಿಕ ರಕ್ತದಲ್ಲಿ ಬಿಡುಗಡೆಯಾಗುತ್ತವೆ. ತತ್ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ನ ಪ್ರಮಾಣವು ಹೆಚ್ಚಿ, ನಮ್ಮ ಶಾರೀರಿಕ ಕ್ರಿಯೆಗಳು ಹಾಗೂ ಅನ್ಯ ಚಟುವಟಿಕೆಗಳಿಗೆ ಅವಶ್ಯವೆನಿಸುವ "ಶಕ್ತಿ"ಯನ್ನು ಒದಗಿಸುತ್ತದೆ. ಆದರೆ ನಮ್ಮ ಶರೀರಕ್ಕೆ ತತ್ ಕ್ಷಣ ಅವಶ್ಯವಿರುವುದಕ್ಕಿಂತಲೂ ಅಧಿಕ ಪ್ರಮಾಣದ ಗ್ಲೂಕೋಸ್ ಲಭ್ಯವಾದರೆ, ಅದು ಗ್ಲೈಕೋಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಪರಿವರ್ತನೆಗೊಂಡು ಶರೀರದಲ್ಲಿ ಸಂಗ್ರಹವಾಗುತ್ತದೆ. ಇದೇ ಕಾರಣದಿಂದಾಗಿ ನಮ್ಮ ಶರೀರಕ್ಕೆ ಅಗತ್ಯವಿರುವುದಕ್ಕಿಂತ ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯೊಂದಿಗೆ ಶಾರೀರಿಕ ಚಟುವಟಿಕೆಗಳೂ ಕಡಿಮೆಯಾದಲ್ಲಿ, ಸ್ವಾಭಾವಿಕವಾಗಿ ಶರೀರದಲ್ಲಿ ಸಂಗ್ರಹವಾಗುವ ಕೊಬ್ಬಿನ ಪ್ರಮಾಣವು ಹೆಚ್ಚಿ, ಅತಿಬೊಜ್ಜಿನ ಸಮಸ್ಯೆಗೆ ಕಾರಣವೆನಿಸುತ್ತದೆ. 

ಸಕ್ಕರೆಯಿಂದ ತಯಾರಿಸಿದ ಖಾದ್ಯಪೇಯಗಳ ಅತಿಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ನ ಸ್ರಾವವು ಅಧಿಕವಾಗುವುದರಿಂದ, ರಕ್ತದಲ್ಲಿನ ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ಹೆಚ್ಚುವುದು. ಪರಿಣಾಮವಾಗಿ ಎಚ್. ಡಿ . ಎಲ್ ಕೊಲೆಸ್ಟರಾಲ್ ನ ಪ್ರಮಾಣವು ಕಡಿಮೆಯಾಗುವುದರಿಂದ ಹೃದ್ರೋಗಗಳು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ. 

ಸಕ್ಕರೆಯ ಬಳಕೆಗೆ ಕತ್ತರಿ!

ನಿಜ ಹೇಳಬೇಕಿದ್ದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಅನಿವಾರ್ಯವಲ್ಲ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯ ಸೇವನೆಯನ್ನು ಕಡಿಮೆಮಾಡುವಂತೆ ಜನರ ಮನವನ್ನು ಒಲಿಸಲು ಅಂತರ ರಾಷ್ಟ್ರೀಯ ಅಭಿಯಾನವೊಂದನ್ನು ನಡೆಸಿತ್ತು. ಜಾಗತಿಕ ಮಟ್ಟದಲ್ಲಿ ಸಕ್ಕರೆಯ ಅತಿಸೇವನೆಯಿಂದ ಉದ್ಭವಿಸುವ ಅತಿಬೊಜ್ಜು, ಮಧುಮೇಹ ಹಾಗೂ ಹ್ರುದ್ರೋಗಗಳಂತಹ ಗಂಭೀರ ಆರೋಗ್ಯದ ಸಮಸ್ಯೆಗಳ ಪ್ರಮಾಣ ಹೆಚ್ಚಲಾರಂಭಿಸಿದ್ದೇ , ಈ ಅಭಿಯಾನವನ್ನು ಹಮ್ಮಿಕೊಳ್ಳಲು ಮೂಲಕಾರಣ ಎನಿಸಿತ್ತು. 

ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಅನೇಕ ಪಾಶ್ಚಾತ್ಯರು ತಾವು ದಿನನಿತ್ಯ ಸೇವಿಸುವ ಚಹಾ- ಕಾಫಿಗಳಲ್ಲಿ ಸಕ್ಕರೆಯನ್ನು ಬೆರೆಸುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಅನೇಕ ಮಧುಮೇಹಿಗಳೂ ಸಕ್ಕರೆಯನ್ನು ವರ್ಜಿಸುವುದಿಲ್ಲ!. 

ಪ್ರಸ್ತುತ ನೀವು ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಲು ಬಯಸಿದಲ್ಲಿ, ಈ ಕೆಳಗಿನ ಸೂಚನೆಗಳನ್ನು ಪಾಲಿಸಿ. 
*ಚಾಕಲೇಟ್,ಸಿಹಿತಿಂಡಿಗಳು, ಲಗ್ಹುಪಾನೀಯಗಳು ಮತ್ತು ಐಸ್ ಕ್ರೀಮ್ ಗಳನ್ನೂ ಆಗಾಗ ಸೇವಿಸದಿರಿ. 
*ಸಮಾರಂಭ ಹಾಗೂ ಔತಣಕೂಟಗಳಲ್ಲಿ ಭಾಗವಹಿಸಿದಾಗ ಕೇವಲ ಒಂದು ಸಿಹಿತಿಂಡಿ ಅಥವಾ ಒಂದಿಷ್ಟು ಪಾಯಸವನ್ನುಮಾತ್ರ ಸೇವಿಸಿ. 
*ಪ್ರತಿನಿತ್ಯ ಸಿಹಿತಿಂಡಿಗಳನ್ನು ಮೆಲ್ಲುವ ಹವ್ಯಾಸವನ್ನು ನಿಲ್ಲಿಸಿ. 
*ಹಾಲು- ಮೊಸರುಗಳಿಗೂ ಸಕ್ಕರೆಯನ್ನು ಬೆರೆಸಿ ಸೇವಿಸದಿರಿ. ಚಹಾ- ಕಾಫಿಗಳಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ. 
* ನಿಮ್ಮ ಮಕ್ಕಳಿಗೆ ಇಡ್ಲಿ,ದೋಸೆ, ಉಪ್ಪಿಟ್ಟು ಮತ್ತಿತರ ತಿಂಡಿಗಳೊಂದಿಗೆ ಸಕ್ಕರೆ ಅಥವಾ ಹಣ್ಣಿನ ಜಾಮ್ ಗಳನ್ನೂ ಬೆರೆಸಿ ತಿನ್ನಿಸುವ ಹವ್ಯಾಸವನ್ನು ನಿಲ್ಲಿಸಿ. ಇದಕ್ಕೆ ಬದಲಾಗಿ ಸ್ವಾಭಾವಿಕವಾಗಿ ಸಿಹಿಯಾಗಿರುವ ಹಣ್ಣುಹಂಪಲುಗಳನ್ನು ಹಿತಮಿತವಾಗಿ ತಿನ್ನಿ. 

ಅಂತಿಮವಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರೊಂದಿಗೆ, ದಿನನಿತ್ಯ ೩೦ ರಿಂದ ೬೦ ನಿಮಿಷಗಳ ಕಾಲ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ಇದರಿಂದಾಗಿ ಅತಿಬೊಜ್ಜು, ಅಧಿಕ ತೂಕ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹ್ರುದ್ರೋಗಗಳಲ್ಲದೇ ಇತರ ಅನೇಕ ವ್ಯಾಧಿಗಳ ಸಂಭಾವ್ಯತೆಯನ್ನು ತಡೆಗಟ್ಟುವುದು ಸುಲಭಸಾಧ್ಯ ಎನಿಸುವುದು. 


 ವಿಶ್ವ ಮಧುಮೇಹ ದಿನದ ಮಹತ್ವ  

ಜಗತ್ತಿನಾದ್ಯಂತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ "ಮಧುಮೇಹ" ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನೇತ್ರತ್ವದಲ್ಲಿ ವಿವಿಧ ರಾಷ್ಟ್ರಗಳ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಈ ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. 

ಅಸಂಖ್ಯ ಮಧುಮೇಹಿಗಳ ಪಾಲಿಗೆ "ಸಂಜೀವಿನಿ" ಎನಿಸಿರುವ "ಇನ್ಸುಲಿನ್" ಔಷದವನ್ನು ಚಾರ್ಲ್ಸ್ ಬೆಸ್ಟ್ ಅವರೊಂದಿಗೆ ಸಂಶೋಧಿಸಿದ ವೈದ್ಯಕೀಯ ವಿಜ್ಞಾನಿ ಫ್ರೆಡರಿಕ್ ಬಾಂಟಿಂಗ್ ರ ಜನ್ಮ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಮೇಹ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವ ಮಾರ್ಗೋಪಾಯಗಳು, ಇದರ ದುಷ್ಪರಿಣಾಮಗಳು,ಮಾರಕತೆ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ವಿಶ್ವ ಮಧುಮೇಹ ಒಕ್ಕೂಟವು "ಮಧುಮೇಹದಿಂದ ರಕ್ಷಿಸಿಕೊಳ್ಳಿ" ಎನ್ನುವ ಘೋಷಣೆಯೊಂದಿಗೆ ಈ ವರ್ಷದ ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಿದೆ. ಈ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ 
ಬೊಳುವಾರು,ಪುತ್ತೂರು,ದ. ಕ

ಉದಯವಾಣಿ ಪತ್ರಿಕೆಯ ದಿ. ೧೪-೧೧-೨೦೦೮ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 




No comments:

Post a Comment