Monday, November 11, 2013

Influenza


                           ಇನ್ ಫ್ಲುಯೆಂಜಾ ಜ್ವರ: ಏನಿದರ ಅವತಾರ?

ವರ್ಷಂಪ್ರತಿ ನಮ್ಮೆಲ್ಲರನ್ನೂ ತಪ್ಪದೆ ಪೀಡಿಸುವ,ಜನಸಾಮಾನ್ಯರು ಕ್ಷುಲ್ಲಕವೆಂದು ಭಾವಿಸಿ ನಿರ್ಲಕ್ಷಿಸುವ ಕಾಯಿಲೆಗಳಲ್ಲಿ ಇನ್ ಫ್ಲುಯೆಂಜಾ ಜ್ವರ ಕೂಡಾ ಒಂದಾಗಿದೆ. ಆದರೆ ಈ ವ್ಯಾಧಿಯ ವಿವಿಧ ಅವತಾರಗಳು, ಇದರ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳ ಬಗ್ಗೆ ಅವಶ್ಯಕ ಮಾಹಿತಿಗಳ ಅರಿವಿಲ್ಲದಿರುವುದೇ ಜನರು ಇದನ್ನು ನಿರ್ಲಕ್ಷಿಸಲು ಪ್ರಮುಖ ಕಾರಣವೆನಿಸಿದೆ!. 
------------------                          -----------------------------                         -------------------------------------                        -------------------------------                 ---------------------

ಮಳೆಗಾಲದಲ್ಲಿ ಮಳೆಗೆ ಒದ್ದೆಯಾಗುವುದರಿಂದ ಅಥವಾ ಋತುಗಳು ಬದಲಾದಾಗ ಆರಂಭವಾಗುವುದೆಂದು ಇಂದಿಗೂ ಅನೇಕರು ನಂಬಿರುವ, ಆಡುಭಾಷೆಯಲ್ಲಿ "ಫ್ಲೂ ಜ್ವರ" ಎಂದು ಕರೆಯಲ್ಪಡುವ ಕಾಯಿಲೆಯನ್ನು, ವೈದ್ಯಕೀಯ ಪರಿಭಾಷೆಯಲ್ಲಿ "ಇನ್ ಫ್ಲುಯೆಂಜಾ" ಎನ್ನುತ್ತಾರೆ. ನಾಲ್ಕಾರು  ದಿನಗಳಲ್ಲಿ ಗುಣವಾಗುವ "ಶೀತ- ಜ್ವರ" ಗಳ ಸಂಮಿಶ್ರಣವೆಂದು ಜನರು ಉಪೇಕ್ಷಿಸುವ ಈ ಕಾಯಿಲೆಯ ಕೆಲವೊಂದು ಅವತಾರಗಳು ನಿಜಕ್ಕೂ "ಅತಿ ಭಯಂಕರ" ವೂ ಹೌದು. 

ಇತಿಹಾಸ 

ನೂರಾರು ವರ್ಷಗಳಿಂದ ತನ್ನ ವಿವಿಧ ಅವತಾರಗಳ ಮೂಲಕ ಮನುಕುಲಕ್ಕೆ ಮಾರಕವೆನಿಸಿರುವ ಇನ್ ಫ್ಲುಯೆಂಜಾ ವ್ಯಾಧಿಗೆ ತನ್ನದೇ ಆದ ಇತಿಹಾಸವಿದೆ. ಗತ ಶತಮಾನದಲ್ಲಿ ನಾಲ್ಕು ಬಾರಿ ಜಾಗತಿಕವಾಗಿ ತನ್ನ ಸಾಂಕ್ರಾಮಿಕತೆಯನ್ನು ಮೆರೆದು, ಲಕ್ಷಾಂತರ ಜನರನ್ನು ಬಲಿಪಡೆದಿದ್ದ ಈ ಫ್ಲೂ ಜ್ವರದ ವಿವಿಧ ಅವತಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

೧೯೧೮-೧೯ ರಲ್ಲಿ ಮೊತ್ತ ಮೊದಲ ಬಾರಿಗೆ ತನ್ನ ತೀವ್ರ ಸಾಂಕ್ರಾಮಿಕತೆ  ಹಾಗೂ ಮಾರಕತೆಗಳಿಂದಾಗಿ ಪ್ರಥಮ ಜಾಗತಿಕ ಯುದ್ಧದಲ್ಲಿ ಮಾಡಿದವರ ನಾಲ್ಕು ಪಟ್ಟು, ಅಂದರೆ ೪೦ ದಶಲಕ್ಷಕ್ಕೂ ಅಧಿಕ ಜನರ ಮರಣಕ್ಕೆ ಕಾರಣವೆನಿಸಿದ್ದ ಇನ್ ಫ್ಲುಯೆಂಜಾ ವ್ಯಾಧಿಯು ಇದೇ ಕಾರಣದಿಂದಾಗಿ ಭಯಾನಕವೆನಿಸಿತ್ತು. ಅಂತೆಯೇ ವೈದ್ಯಕೀಯ ವಿಜ್ಞಾನಿಗಳ ಗಮನವನ್ನು ಸೆಳೆಯಲು ಯಶಸ್ವಿಯಾಗಿತ್ತು.

ಬಳಿಕ ೧೯೫೭ ರಲ್ಲಿ "ಏಶಿಯನ್ ಫ್ಲೂ" ಮತ್ತು ೧೯೬೮ ರಲ್ಲಿ" ಹಾಂಗ್ ಕಾಂಗ್ ಫ್ಲೂ" ಗಳ ರೂಪದಲ್ಲಿ ಮರುಕಳಿಸಿದ್ದ ಈ ವ್ಯಾಧಿಯು, ಮೂರರಿಂದ ನಾಲ್ಕು ದಶಲಕ್ಷ ರೋಗಿಗಳ ಪ್ರಾಣಕ್ಕೆ ಎರವಾಗಿತ್ತು. ತದನಂತರ ೧೯೮೬ ರಿಂದ ೧೯೯೭ ರ ನಡುವೆ ವಿವಿಧ ಅವತಾರಗಳಲ್ಲಿ ಪ್ರತ್ಯಕ್ಷವಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಾಂಡವವಾಡಿತ್ತು. 

೧೯೯೭ ರ ಎಪ್ರಿಲ್- ಮೇ ತಿಂಗಳುಗಳಲ್ಲಿ ಮತ್ತೊಮ್ಮೆ ವಿನೂತನ ರೂಪದಲ್ಲಿ ಪ್ರತ್ಯಕ್ಷವಾಗಿ, ಮಿಂಚಿನಂತೆ ಸಂಚರಿಸಿ, ಹಲವಾರು ದೇಶಗಳಲ್ಲಿ ಕೋಟ್ಯಂತರ ಕೋಳಿಗಳ ಮಾರಣ ಹೋಮಕ್ಕೆ ಕಾರಣವೆನಿಸಿದ್ದ "ಪಕ್ಷಿ ಜ್ವರ" ವೂ ಇನ್ ಫ್ಲುಯೆಂಜಾ ವ್ಯಾಧಿಯ ಮತ್ತೊಂದು ರೂಪವಾಗಿತ್ತು. ಏವಿಯನ್ ಫ್ಲೂ ಅರ್ಥಾತ್ ಪಕ್ಷಿ ಜ್ವರವೆಂದೇ ಕುಖ್ಯಾತವಾಗಿದ್ದ ಮಾರಕ ಕಾಯಿಲೆಗೆ ಇನ್ ಫ್ಲುಯೆಂಜಾ ವೈರಸ್ ಗಳ ಪರಿವರ್ತಿತ ತಳಿಯೊಂದು ಕಾರಣವೆನಿಸಿತ್ತು. 

ಸಾಮಾನ್ಯವಾಗಿ ಪಕ್ಷಿ ಜ್ವರಕ್ಕೆ ಕಾರಣವೆನಿಸುವ ಈ ವೈರಸ್, ಮನುಷ್ಯರನ್ನು ಬಾಧಿಸುವುದಿಲ್ಲ. ಆದರೆ ೧೯೯೭ ರಿಂದ ೨೦೦೫ ರ ಅವಧಿಯಲ್ಲಿ ವಿಶೇಷವಾಗಿ ಏಶಿಯಾ ಖಂಡದ ಅನೇಕ ದೇಶಗಳ ಪ್ರಜೆಗಳಲ್ಲಿ ಇದರ ಸೋಂಕು ಬಾಧಿಸಿರುವುದು ಪತ್ತೆಯಾಗಿತ್ತು. ಮಾತ್ರವಲ್ಲ, ಈ ಸೋಂಕು ತಗಲಿದ ಸಹಸ್ರಾರು ಜನರಲ್ಲಿ ೮೦ ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 

ಕುಕ್ಕುಟ ಜ್ವರ ಪ್ರತ್ಯಕ್ಷವಾಗಿ ತಿಂಗಳು ಕಳೆಯುವಷ್ಟರಲ್ಲೇ ಆಕಸ್ಮಿಕವಾಗಿ ಉದ್ಭವಿಸಿ ಕಾಡ್ಗಿಚ್ಚಿನಂತೆ ಹರಡಿದ್ದ "ಸಾರ್ಸ್", ಸುಮಾರು ೨೦ ದೇಶಗಳ ೮೦೦೦ ಸಾವಿರ ಜನರನ್ನು ಬಾಧಿಸಿದ ಪರಿಣಾಮವಾಗಿ ೮೦೦ ಕ್ಕೂ ಅಧಿಕ ರೋಗಿಗಳು ಮೃತಪಟ್ಟಿದ್ದರು. ಈ ಭಯಾನಕ ಘಟನೆಯು ಇದೇ ರೀತಿಯಲ್ಲಿ ಪದೇ ಪದೇ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿ, ಕ್ಷಿಪ್ರಗತಿಯಲ್ಲಿ ಹರಡಬಲ್ಲ ಈ ಕಾಯಿಲೆಯು, ಜಾಗತಿಕರೂಪದಲ್ಲಿ ತನ್ನ ಸಾಂಕ್ರಾಮಿಕತೆ ಹಾಗೂ ಮಾರಕತೆಗಳನ್ನು ತೋರುವ ಸಂಭಾವ್ಯತೆಗಳ ಸ್ಪಷ್ಟ ಉದಾಹರಣೆಯೂ ಆಗಿದೆ. ಕೊರೊನಾ ವೈರಸ್ ಗಳಿಂದ ಉದ್ಭವಿಸುವ ಸಾರ್ಸ್ ಅಥವಾ ಮಿಕ್ಸೋ ವೈರಸ್ ಗಳಿಂದ ಆರಂಭವಾಗುವ ಫ್ಲೂ, ಇವೆರಡೂ ವ್ಯಾಧಿಗಳಿಗೆ ಕಾರಣವೆನಿಸುವ ವೈರಸ್ ಗಳು ತ್ವರಿತ ಗತಿಯಲ್ಲಿ ಹರಡುವ ಸಾಧ್ಯತೆಗಳಿಂದಾಗಿ ಇವುಗಳ ಮಾರಕತೆಯ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. 

ಕಳೆದ ಒಂದು ದಶಕದಲ್ಲಿ ಇವೆರಡೂ ವ್ಯಾಧಿಗಳು ತೋರಿದ್ದ ಹಾವಳಿಯು ವೈದ್ಯಕೀಯ ವಿಜ್ಞಾನಿಗಳನ್ನು ತಲ್ಲಣಗೊಳಿಸಿತ್ತು. ಏಕೆಂದರೆ ಈ ಆಧುನಿಕ ಯುಗದಲ್ಲಿ ದೇಶ- ವಿದೇಶಗಳ ನಡುವೆ ಕ್ಷಿಪ್ರವಾಗಿ ಸಂಚರಿಸಬಲ್ಲ ವಿಮಾನಯಾನದಿಂದಾಗಿ, ಯಾವುದೇ ಸಾಂಕ್ರಾಮಿಕ ವ್ಯಾಧಿಯು ಅಷ್ಟೇ ಕ್ಷಿಪ್ರಗತಿಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳಿಗೆ ಸುಲಭದಲ್ಲೇ ಹರಡುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಇಂತಹ ವ್ಯಾಧಿಗಳು ಜಗತ್ತಿನಾದ್ಯಂತ ಹರಡಿದಲ್ಲಿ ಸಂಭವಿಸಬಲ್ಲ ಕಷ್ಟ ನಷ್ಟಗಳು ಮತ್ತು ಪ್ರಾಣಹಾನಿಗಳನ್ನು ಊಹಿಸುವುದು ಕೂಡಾ ಅಸಾಧ್ಯವೆನಿಸುತ್ತದೆ. 

ಏನಿದು ಇನ್ ಫ್ಲುಯೆಂಜಾ?

'ಮಿಕ್ಸೋ ವೈರಸ್' ಎನ್ನುವ ಗುಂಪೊಂದು ಇನ್ ಫ್ಲುಯೆಂಜಾ ಉದ್ಭವಿಸಲು ಕಾರಣವೆನಿಸುತ್ತದೆ. ಸಾಮಾನ್ಯವಾಗಿ ಸಾಂಕ್ರಾಮಿಕ ರೂಪದಲ್ಲಿ ಕಂಡುಬರುವ ಈ ವ್ಯಾಧಿಯು ಕೆಲ ಸಂದರ್ಭಗಳಲ್ಲಿ ಕಾರಣಾಂತರಗಳಿಂದ ತೀವ್ರ ಸಾಂಕ್ರಾಮಿಕ ರೂಪವನ್ನು ತಳೆದು ವ್ಯಾಪಕವಾಗಿ ಹರಡಿ, ತನ್ನ ಮಾರಕತೆಯನ್ನು ಮೆರೆಯುತ್ತದೆ. 

ಈ ವೈರಸ್ ಗಳಲ್ಲಿ ಮೂರು ಪ್ರಭೇದಗಳಿದ್ದು ಇವುಗಳನ್ನು ಎ, ಬಿ ಮತ್ತು ಸಿ ಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಬಿ ಮತ್ತು ಸಿ ವೈರಸ್ ಗಳು ಕೇವಲ ಮನುಷ್ಯರಲ್ಲಿ ಮಾತ್ರ ಕಂಡುಬರುತ್ತವೆ. ಅದರಲ್ಲೂ ಸಿ ವೈರಸ್ ಗಳು ಅತ್ಯಂತ ಅಪರೂಪವೆನಿಸಿವೆ. ಅದೇ ರೀತಿಯಲ್ಲಿ ಬಿ ವಿಧದ ವೈರಸ್ ಗಳ ತೀವ್ರತೆ ಹಾಗೂ ಸಾಂಕ್ರಾಮಿಕತೆಗಳು ಅಲ್ಪ ಪ್ರಮಾಣದಲ್ಲಿ ಇರುವುದರಿಂದ ಇವುಗಳ ಉಪಟಳಗಳೂ ನಗಣ್ಯವೆನಿಸಿವೆ. 

ಆದರೆ ಇನ್ ಫ್ಲುಯೆಂಜಾ ಎ ಪ್ರಭೇದಕ್ಕೆ ಸೇರಿದ ವೈರಸ್ ಗಳು ಕೆಲವೊಂದು ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವಲಸೆ ಹೋಗುವ ಸ್ವಭಾವದ ಜಲಪಕ್ಷಿಗಳಲ್ಲಿ ಕಂಡುಬರುವುದರಿಂದ ಅತ್ಯಂತ ಅಪಾಯಕಾರಿ ಎನಿಸುತ್ತವೆ. ಎ ವೈರಸ್ ಗಳ ಹೊರಮೈಯ್ಯಲ್ಲಿ ಇರುವ ಎರಡು ವಿಧದ ಪ್ರೋಟೀನ್ ಗಳಾದ ಹೇಮಾಗ್ಲುಟಿನ್ ಮತ್ತು ನ್ಯೂರಾಮೈನೈಡೇಸ್ ಗಳ ಆಧಾರದ ಮೇಲೆ ಇವುಗಳನ್ನು ಎಚ್ ಮತ್ತು ಏನ್ ಎಂದು ವಿಂಗಡಿಸಲಾಗಿದೆ. ಅಂತೆಯೇ ಎಚ್ ಗುಂಪಿನಲ್ಲಿ ೧೫ ಮತ್ತು ಏನ್ ಗುಂಪಿನಲ್ಲಿ ೯ ವಿಧಗಳಿದ್ದು, ಇವೆಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಇವೆರಡೂ ಗುಂಪುಗಳ ಸಮ್ಮಿಶ್ರಣದ ಉಪಭೇದಗಳು ಪಕ್ಷಿಗಳಲ್ಲಿ ಪತ್ತೆಯಾಗಿದ್ದರೂ, ಇವುಗಳು ಸಾಮಾನ್ಯವಾಗಿ ಮನುಷ್ಯರನ್ನು ಬಾಧಿಸುವುದಿಲ್ಲ. 

ಈ ವೈರಸ್ ಗಳ ಉಪಭೇದಗಳಾದ ಎಚ್ ೧ ಎನ್  ೧, ಎಚ್ ೧ ಎನ್  ೨, ಎಚ್ ೩ ಎನ್ ೩ ಎನ್ನುವ ಮೂರು ತಳಿಗಳು ಮನುಷ್ಯರಲ್ಲಿ ಕಂಡುಬರುತ್ತವೆ. ಅಂತೆಯೇ ಈ ತಳಿಗಳಲ್ಲಿನ ವಂಶವಾಹಿನಿಗಳ ಕೆಲ ಅಂಶಗಳು ಮೂಲತಃ ಪಕ್ಷಿಗಳಲ್ಲಿ ಕಾಣಸಿಗುವ ತಳಿಗಳಿಂದ ಬಂದಿರುವ ಸಾಧ್ಯತೆಗಳೂ ಇವೆ. ಏಕೆಂದರೆ ಇನ್ ಫ್ಲುಯೆಂಜಾ ವೈರಸ್ ಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಲೇ ಇರುತ್ತವೆ. ಇದೇ ಕಾರಣದಿಂದಾಗಿ ಮನುಷ್ಯರನ್ನು ಬಾಧಿಸದ ಈ ವೈರಸ್ ನ ತಳಿಯೊಂದು ಪರಿವರ್ತನೆಗೊಂಡು ತಳೆದ ನೂತನ ಅವತಾರದ ಪರಿಣಾಮವಾಗಿ ಎಚ್ ೫ ಎನ್ ೧ ಎನ್ನುವ, ಪಕ್ಷಿಜ್ವರಕ್ಕೆ ಕಾರಣವಾಗಿರುವ ವೈರಸ್ ಮನುಷ್ಯರ ಶರೀರದಲ್ಲಿ ಪ್ರವೇಶಗಳಿಸಲು ಸಫಲವಾಗಿತ್ತು. 

ಇದಕ್ಕೂ ಮಿಗಿಲಾಗಿ ಕೇವಲ ಪಕ್ಷಿಗಳಿಂದ ಅಥವಾ ಸಾಕುಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ್ದ ಎಚ್ ೫ ಎನ್ ೧ ತಳಿಗಳು ಮತ್ತಷ್ಟು ಪರಿವರ್ತನೆಗೊಂಡು, ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುವ ಸಾಮರ್ಥ್ಯ ಗಳಿಸಿಕೊಂಡಲ್ಲಿ ಜಾಗತಿಕ ಸಾಂಕ್ರಾಮಿಕತೆಯ  ಅಪಾಯ ತಪ್ಪಿದ್ದಲ್ಲ. ಜತೆಗೆ ಇದರ ಘೋರ ಪರಿಣಾಮಗಳು ಮತ್ತು ಇದರಿಂದಾಗಿ ಸಂಭವಿಸಬಲ್ಲ ಸಾವುನೋವು ಮತ್ತು ಕಷ್ಟನಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ. 

ಆದರೆ ಇಂತಹ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಹಲವಾರು ರಾಷ್ಟ್ರಗಳ ವೈದ್ಯಕೀಯ ವಿಜ್ಞಾನಿಗಳು, ಇವುಗಳ ಹಾವಳಿಯನ್ನು ತಡೆಗಟ್ಟಬಲ್ಲ ವಿಧಾನ, ಔಷದ ಮತ್ತು ಲಸಿಕೆಗಳನ್ನು ಕಂಡುಹಿಡಿಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಫ್ಲೂ ಹರಡುವುದೆಂತು?

ಇನ್ ಫ್ಲುಯೆಂಜಾ ವೈರಸ್ ಗಳು ಈ ರೋಗಪೀಡಿತರ - ರೋಗಿಗಳ ಆರೈಕೆ ಮಾಡುತ್ತಿರುವವರ ನೇರ ಸಂಪರ್ಕದಿಂದ, ರೋಗಪೀಡಿತರಾಗದಿದ್ದರೂ ತಮ್ಮ ಶರೀರದಲ್ಲಿ ಈ ವೈರಸ್ ಗಳನ್ನು ಸಲಹುವ ವಾಹಕರಿಂದ, ರೋಗಿ ಕೆಮ್ಮಿದಾಗ ಹೊರಬೀಳುವ ಜೊಲ್ಲಿನ ತುಂತುರುಗಳಿಂದ, ರೋಗಿ ಬಳಸಿದ- ಮುಟ್ಟಿದ ವಸ್ತುಗಳನ್ನು ಇತರರು ಬಳಸುವುದರಿಂದ ಸುಲಭ ಹಾಗೂ ಸಾಂಕ್ರಾಮಿಕವಾಗಿ ಹರಡುತ್ತದೆ. ಇದೇ ಕಾರಣದಿಂದಾಗಿ ಹಲವಾರು ಸದಸ್ಯರಿರುವ ಒಂದು ಕುಟುಂಬದ ಒಬ್ಬರಿಗೆ ಫ್ಲೂ ಆರಂಭವಾದಲ್ಲಿ, ಇದು ಮನೆಮಂದಿಗೆಲ್ಲ ಹರಡುತ್ತದೆ. ಅಂತೆಯೇ ನೂರಾರು- ಸಹಸ್ರಾರು ಜನರು ಸೇರುವ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಕಾರ್ಖಾನೆ- ಉದ್ಯೋಗ ಕೇಂದ್ರಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿರುವ ರೋಗಿಗಳು ತಮ್ಮ ವ್ಯಾಧಿಯನ್ನು ಅನಾಯಾಸವಾಗಿ ಇತರರಿಗೆ ಹರಡುತ್ತಾರೆ. 

ರೋಗಲಕ್ಷಣಗಳು 

ಇನ್ ಫ್ಲುಯೆಂಜಾ ವೈರಸ್ ಗಳು ನಿಮ್ಮ ಶರೀರದಲ್ಲಿ ಪ್ರವೆಶಗಳಿಸಿದ ೨೪ ರಿಂದ ೪೮ ಗಂಟೆಗಳಲ್ಲಿ ತಮ್ಮ ಇರುವಿಕೆಯನ್ನು ತೋರುತ್ತವೆ. ಆಕಸ್ಮಿಕವಾಗಿ ಆರಂಭವಾಗುವ ತಲೆಸಿಡಿತ- ನೋವು, ಬೆನ್ನು ಮತ್ತು ಕೈಕಾಲುಗಳಲ್ಲಿ ನೋವು, ಸುಮಾರು ೧೦೦-೧೦೨ ಡಿಗ್ರಿ ಜ್ವರದೊಂದಿಗೆ ಚಳಿ ಮತ್ತು ಕೆಲ ರೋಗಿಗಳಲ್ಲಿ ಒಂದಿಷ್ಟು ನಡುಕ, ಹಸಿವಿಲ್ಲದಿರುವುದು, ವಾಕರಿಕೆ ಅಥವಾ ವಾಂತಿಗಳಂತಹ ಲಕ್ಷಣಗಳು ಮುಂದಿನ ೩ ರಿಂದ ೭ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತವೆ. ಇದಲ್ಲದೇ ರೋಗಿಯ ಮುಖವು ಕೆಂಪಾಗಿ, ಕಣ್ಣುಗಳು ಕಿರಿದಾಗಿ ಉರಿದಂತೆ ಭಾಸವಾಗುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಜ್ವರ ಪೀಡಿತ ರೋಗಿಯನ್ನು ಹಿಂಡಿ ಹಿಪ್ಪೆಮಾಡುವಂತಹ ತೀವ್ರವಾದ ಒಣಕೆಮ್ಮು ತಪ್ಪದೆ ಕಾಡುತ್ತದೆ. ಈ ಸಂದರ್ಭದಲ್ಲಿ ವ್ಯಾಧಿಯ ಲಕ್ಷಣಗಳು ಶ್ವಾಸಾಂಗಗಳ ಸೋಂಕಿಗೆ ಕಾರಣವೆನಿಸಬಲ್ಲ ಇತರ ವೈರಸ್ ಗಳಿಂದ ಉದ್ಭವಿಸುವ ಕಾಯಿಲೆಗಳಂತೆ ಭಾಸವಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ರೋಗಿಯನ್ನು ಪೀಡಿಸುತ್ತಿರುವ ಕಾಯಿಲೆಯು "ಫ್ಲೂ" ಎಂದು ನಿಖರವಾಗಿ ನಿರ್ಧರಿಸುವುದು ಕಷ್ಟಸಾಧ್ಯವೂ ಹೌದು. 



ಆದರೆ ಫ್ಲೂ ಜ್ವರದ ಬಾಧೆ ೩ ರಿಂದ ೭ ದಿನಗಳಲ್ಲಿ ಪರಿಹಾರಗೊಂಡರೂ, ರೋಗಿಯನ್ನು ಬಾಧಿಸುವ ಅತಿ ಆಯಾಸ ಹಾಗೂ ನಿಶ್ಶಕ್ತಿಗಳು ಮುಂದಿನ ಹಲವಾರು ದಿನಗಳ ಕಾಲ ಇರುತ್ತವೆ. ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ತುಸು ಅಧಿಕವೆನಿಸಬಲ್ಲ ಈ ಸಮಸ್ಯೆಗೆ, ವೈದ್ಯರು ನೀಡಿದ್ದ "ಶಕ್ತಿಯುತ ಅಥವಾ ಪ್ರಬಲ ಔಷದ"ಗಳ ದುಷ್ಪರಿಣಾಮವೇ ಕಾರಣವೆಂದು ಅನೇಕರು ದೂರುವುದು ಅಪರೂಪವೇನಲ್ಲ!. 

ಫ್ಲೂ ಪೀಡಿತ ರೋಗಿಗಳನ್ನು ಬಾಧಿಸಬಲ್ಲ ದ್ವಿತೀಯ ಹಂತದ ಸೋಂಕು ಮತ್ತು ಇತರ ಕಾರಣಗಳಿಂದ, ಶ್ವಾಸಾಂಗಗಳ ಉರಿಯೂತದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವುದುಂಟು. ಅಪರೂಪದಲ್ಲಿ ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು "ಕಾರ್ಡಿಯೋ ಮಯೋಪತಿ" ಎನ್ನುವ ತೊಂದರೆಯಿಂದ ಆಕಸ್ಮಿಕವಾಗಿ ಮೃತಪಡುವ ಸಾಧ್ಯತೆಗಳೂ ಇವೆ. ಇದಲ್ಲದೆ ಮೆದುಳಿನ ಉರಿಯೂತದಂತಹ ಗಂಭೀರ- ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಹತ್ತು ಹಲವು ಸಮಸ್ಯೆಗಳು ಫ್ಲೂ ರೋಗಿಗಳನ್ನು ಶಾಪದಂತೆ ಕಾಡುವುದು ನಿಜ. 

ಚಿಕಿತ್ಸೆ 

ಫ್ಲೂ ಜ್ವರ ಪೀಡಿತರು ಈ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತರಾಗುವ ತನಕ ಸಂಪೂರ್ಣ ವಿಶ್ರಾಂತಿ ಪಡೆಯಲೇಬೇಕು. ಜತೆಗೆ ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷದಗಳನ್ನು  ಸೇವಿಸುವುದರೊಂದಿಗೆ, ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಮತ್ತು ಸಾಕಷ್ಟು ದ್ರವಾಹಾರಗಳನ್ನು ಸೇವಿಸುವುದು ಹಿತಕರವೆನಿಸುವುದು. ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಕಂಡುಹಿಡಿದಿಲ್ಲ.ಆದರೆ ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಬೇಕಾಗುತ್ತದೆ. ಜತೆಗೆ ಇದು ಸಾಂಕ್ರಾಮಿಕವಾಗಿ ಹರಡುವುದರಿಂದ, ರೋಗಪೀಡಿತರು ಏಕಾಂತವಾಸಕ್ಕೆ ಶರಣಾದಲ್ಲಿ ಇತರರಿಗೆ ಹರಡುವುದನ್ನು ತಡೆಗಟ್ಟಬಹುದು. 

ವೈರಸ್ ಗಳು ಬ್ಯಾಕ್ಟೀರಿಯಾಗಳಂತೆ ಸ್ವತಂತ್ರವಾಗಿ ಜೀವಿಸಲಾರವು. ಸಾಮಾನ್ಯವಾಗಿ ತಾವು ಪ್ರವೇಶಗಳಿಸಿದ್ದ ಜೀವಿಯ ಜೈವಿಕ- ರಾಸಾಯನಿಕ ವ್ಯವಸ್ಥೆಯನ್ನು ಬಳಸಿ ವೈರಸ್ ಗಳು ಬೆಳೆಯುತ್ತವೆ. ಇದೇ ಕಾರಣದಿಂದಾಗಿ ಸಾಧಾರಣ "ಜೀವನಿರೋಧಕ"ಗಳು ವೈರಸ್ ಗಳ ವಿರುದ್ಧ ಕಾರ್ಯಾಚರಿಸಲು ವಿಫಲವಾಗುತ್ತವೆ. ಹಾಗೂ ಇದಕ್ಕಾಗಿ ವಿಶೇಷ ರೀತಿಯ ವೈರಸ್ ವಿರೋಧಿ ಔಷದಗಳನ್ನು ಸಂಶೋಧಿಸಿ ಸಿದ್ಧಪಡಿಸಬೇಕಾಗುತ್ತದೆ. ಆದರೆ ಅದೃಷ್ಟವಶಾತ್ ವೈರಸ್ ಗಳ ಹಾವಳಿಯನ್ನು ತಡೆಗಟ್ಟಬಲ್ಲ ಲಸಿಕೆಗಳು ಇಂತಹ ಸನ್ನಿವೇಶಗಳಲ್ಲಿ ಉಪಯುಕ್ತವೆನಿಸುತ್ತವೆ. (ಉದಾ- ಪೋಲಿಯೋ, ಸಿಡುಬು ಇತ್ಯಾದಿ) 

ಇನ್ ಫ್ಲುಯೆಂಜಾ ವ್ಯಾಧಿಗೆ ಕಾರಣವೆನಿಸಿರುವ ವೈರಸ್ ಗಳು ನಿರಂತರವಾಗಿ ತಮ್ಮ ವಂಶವಾಹಿನಿಗಳನ್ನು ಪರಿವರ್ತಿಸಿಕೊಳ್ಳುತ್ತಲೇ ಇರುವುದರಿಂದ ಹಾಗೂ ಇವುಗಳ ಪ್ರಭೇದ- ಉಪಭೇದಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ, ಇವುಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಸಿದ್ಧಪಡಿಸುವುದು ಅಸಾಧ್ಯವೆನಿಸಿದೆ. ಆದುದರಿಂದ ಮಾರುಕಟ್ಟೆಯಲ್ಲಿ ದೊರೆಯುವ ಫ್ಲೂ ಲಸಿಕೆಗಳು ವರ್ಷಂಪ್ರತಿ ಬದಲಾಗುತ್ತಲೇ ಇರುತ್ತವೆ. ಪ್ರಸ್ತುತ ಜೀವನ ಪರ್ಯಂತ ಫ್ಲೂ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಪತ್ತೆಹಚ್ಚುವ ಪ್ರಯತ್ನಗಳು ಸಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಯಶಸ್ವಿಯಾದಲ್ಲಿ, ಫ್ಲೂ ಜ್ವರದ ಹಾವಳಿಯೊಂದಿಗೆ ಇದರ ಮಾರಕತೆಯೂ ದೂರವಾಗಲಿದೆ. 

ಕೊನೆಯ ಮಾತು- ಇದೀಗ ಭಾರತಕ್ಕೆ ಮರಳುತ್ತಿರುವ ಹಜ್ ಯಾತ್ರಿಗಳಲ್ಲಿ ಪತ್ತೆಯಾಗುತ್ತಿರುವ" ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್" (ಎಂ ಇ ಆರ್ ಎಸ್ -ಸಿ ಓ ವಿ) , ಫ್ಲೂ ವೈರಸ್ ನ ಅತ್ಯಾಧುನಿಕ ಅವತಾರವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಪತ್ತೆಯಾಗಿದ್ದ ಈ ನೂತನ ವೈರಸ್, ಈಗಾಗಲೇ ಅನೇಕ ರೋಗಿಗಳನ್ನು ಬಲಿಪಡೆದಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೦೬- ೨೦೦೬ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment