Friday, November 15, 2013

Aushada sevane anivaaryave?


                                           ಔಷದ ಸೇವನೆ ಅನಿವಾರ್ಯವೇ?

ವ್ಯಾಧಿಯೊಂದರ ಚಿಕಿತ್ಸೆಯಲ್ಲಿ ಔಷದ ನೀಡುವ ಅನಿವಾರ್ಯತೆ ಇದ್ದಾಗ, ಇವುಗಳ ಸೇವನೆಯಿಂದ ತನ್ನ ರೋಗಿಗಳಿಗೆ ಬಾಧಕಗಳಿಗಿಂತ ಸಾಧಕಗಳೇ ಹೆಚ್ಚಿರುವುದೆಂದು ವೈದ್ಯರು ನಿರ್ಧರಿಸಬೇಕಾಗುವುದು. ಜೊತೆಗೆ ಕನಿಷ್ಠ ಬೆಲೆಯ, ಕನಿಷ್ಠ ಪ್ರಮಾಣದ ಔಷದಗಳನ್ನು ನೀಡಿ ಕನಿಷ್ಠ ಅವಧಿಯಲ್ಲಿ ಗರಿಷ್ಠ ಉಪಶಮನ ನೀಡಲು ಯತ್ನಿಸಬೇಕಾಗುವುದು ವೈದ್ಯರ ವೃತ್ತಿ ಧರ್ಮವೂ ಹೌದು. 
--------------                   -------------------                     -----------------                    ----------------               ----------------------

  ಮನುಕುಲವನ್ನು ರೋಗರುಜಿನಗಳಿಂದ ರಕ್ಷಿಸಲು ವೈದ್ಯರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ, ಔಷದ ನೀಡುವುದೂ ಒಂದಾಗಿದೆ. ಅಂತೆಯೇ ಸಹಸ್ರಾರು ಔಷದಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಅರಿತಿರಬೇಕಾಗುವುದು ವೈದ್ಯರ ಪ್ರಾಥಮಿಕ ಹೊಣೆಗಾರಿಕೆಯೂ ಹೌದು. 

ಸಾಮಾನ್ಯವಾಗಿ ವೈದ್ಯ ತನ್ನ ರೋಗಿಯನ್ನು ಬಾಧಿಸುತ್ತಿರುವ ವ್ಯಾಧಿಯನ್ನು ಅವಶ್ಯಕ ಪರೀಕ್ಷೆಗಳ ಮೂಲಕ ನಿಖರವಾಗಿ ಪತ್ತೆ ಹಚ್ಚಬೇಕಾಗುವುದು. ಬಳಿಕ ಈ ವ್ಯಾಧಿಯನ್ನು ಗುಣಪಡಿಸಲು ಔಷದ ಸಹಿತ ಅಥವಾ ಔಷದ ರಹಿತ ಚಿಕಿತ್ಸೆಗಳಲ್ಲಿ ಯಾವುದು ಹಿತಕರವೆಂದು ನಿರ್ಧರಿಸಬೇಕಾಗುವುದು. 

ಔಷದ ಸಹಿತ ಚಿಕಿತ್ಸೆಯನ್ನು ಆಯ್ದುಕೊಂಡಲ್ಲಿ, ಈ ಔಷದವನ್ನು ಆಯ್ಕೆ ಮಾಡಲು ಸಮರ್ಥನೀಯ ಕಾರಣಗಳು ಹಾಗೂ ಇವುಗಳ ಸೇವನೆಯಿಂದ ಉದ್ಭವಿಸಬಲ್ಲ ಒಳ್ಳೆಯ- ಕೆಟ್ಟ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುವರು. ಇದಲ್ಲದೇ ರೋಗಿಯು ಇತರ ಕಾಯಿಲೆಗಳಿಗಾಗಿ ಈಗಾಗಲೇ ಸೇವಿಸುತ್ತಿರುವ ಔಷದಗಳೊಂದಿಗೆ ತಾನು ಇದೀಗ ನೀಡಲಿರುವ ಔಷದಗಳ ನಡುವಿನ ಅಂತರ್ ಕ್ರಿಯೆಗಳ ಕುರಿತ ಸ್ಪಷ್ಟ ಮಾಹಿತಿಯನ್ನು ಅರಿತಿರಬೇಕಾಗುತ್ತದೆ. ಕೊನೆಯದಾಗಿ ರೋಗಿಯ ಆರ್ಥಿಕ ಸ್ಥಿತಿಗತಿಗಳನ್ನು ಅರಿತುಕೊಂಡ ಬಳಿಕವೇ ಔಷದಗಳನ್ನು ಸೂಚಿಸಬೇಕಾಗಿದೆ. 

ತನ್ನ ರೋಗಿಯ ಹಿತದೃಷ್ಟಿಯಿಂದ ಇಷ್ಟೆಲ್ಲಾ ಮಾಹಿತಿಗಳನ್ನು ಪರಾಮರ್ಶಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸುವ ಪ್ರಾಮಾಣಿಕ ವೈದ್ಯರೂ, ಕೆಲವೊಮ್ಮೆ ತಮ್ಮ ರೋಗಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ!. 

ಔಷದ ಅನಿವಾರ್ಯವೇ?

ದೈನಂದಿನ ಜೀವನದಲ್ಲಿ ನಿಮ್ಮನ್ನು ಕಾಡುವ ಅನೇಕ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಔಷದ ಸೇವಿಸಬೇಕಾಗಿಲ್ಲ. ಆದರೆ ಕ್ಷುಲ್ಲಕ ಸಮಸ್ಯೆಯೊಂದನ್ನು ಗಂಭೀರವೆಂದು ನಂಬಿದ ರೋಗಿಗಳು, ಚಿಕಿತ್ಸೆ ಬೇಡವೆನ್ನುವ ಅರ್ಥಾತ್ ಔಷದವನ್ನು ನೀಡದ ವೈದ್ಯರನ್ನು ತುಸು ತಾತ್ಸಾರದಿಂದ ಕಾಣುವುದುಂಟು. ಮತ್ತೆ ಕೆಲವರು ತಮ್ಮ ಗಂಭೀರ ಸಮಸ್ಯೆಗಳಿಗೂ ಸಣ್ಣಪುಟ್ಟ ಔಷದಗಳನ್ನು ನೀಡಲು ಕೋರುವುದು ಅಥವಾ ಚಿಕಿತ್ಸೆಯನ್ನೆ ನಿರಾಕರಿಸುವುದು ಅಪರೂಪವೇನಲ್ಲ. ಅಲ್ಪ ಪ್ರಮಾಣದ ರೋಗಿಗಳು ಚಿಕಿತ್ಸೆ ಬೇಡವೆನ್ನುವ ವೈದ್ಯರನ್ನು ಹೊಗಳುವಂತೆಯೇ, ಇಂಜೆಕ್ಷನ್ ನೀಡದ ವೈದ್ಯರನ್ನು ತೆಗಳುವವರ ಸಂಖ್ಯೆ ಕಡಿಮೆಯೇನಿಲ್ಲ!. 

ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗಗಳು ಪತ್ತೆಯಾದಾಗ ಚಿಕಿತ್ಸೆ ಅನಿವಾರ್ಯವೆಂದು ಅರಿತಿರುವ ಅನೇಕ ವಿದ್ಯಾವಂತರೂ ಔಷದ ಸೇವಿಸಲು ಸಿದ್ಧರಿರುವುದಿಲ್ಲ. ಮಾತ್ರವಲ್ಲ, ಬಂಧುಮಿತ್ರರು ಸೂಚಿಸುವ "ನಿಶ್ಚಿತವಾಗಿಯೂ ಹಾನಿಕಾರಕವಲ್ಲದ" ಕೆಲವೊಂದು ಪ್ರಯೋಗಗಗಳನ್ನು ಕೈಗೊಳ್ಳುವುದು "ವಿಚಿತ್ರವಾದರೂ ನಿಜ". ಇಂತಹ ಮನೋಭಾವನೆಗಳಿಂದಾಗಿ ಪ್ರತಿಯೊಬ್ಬ ರೋಗಿಯನ್ನು ಸಂತುಷ್ಟಿಗೊಳಿಸುವುದು ಪ್ರಖ್ಯಾತ ವೈದ್ಯರಿಗೂ ಅಸಾಧ್ಯವೆನಿಸುವುದು. 

ಔಷದಗಳ ಆಯ್ಕೆ ಎಂತು?

ಸಾಮಾನ್ಯವಾಗಿ ಆಧುನಿಕ ಸಂಶೋಧನೆಗಳ ಫಲವಾಗಿ ಮಾರುಕಟ್ಟೆಗೆ ಬಿಡುಗಡೆಯಾದ ನೂತನ ಔಷದಗಳು ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಏಕೆಂದರೆ ಇವುಗಳ ತಯಾರಕರು ತಾವು ಹೂಡಿದ ಬಂಡವಾಳದೊಂದಿಗೆ ಸಾಕಷ್ಟು ಲಾಭವನ್ನು ಅಪೇಕ್ಷಿಸುವುದು ಸ್ವಾಭಾವಿಕ. ಕಾಲಕ್ರಮೇಣ ಇದಕ್ಕಿಂತಲೂ ಉತ್ತಮ ಗುಣಮಟ್ಟದ ಮತ್ತೊಂದು ಔಷದವು ಮಾರುಕಟ್ಟೆಗೆ ಬಿದುಗಡೆಯಾದೊಡನೆ, ಹಳೆಯ ಔಷದಗಳ ಬೇಡಿಕೆಯೊಂದಿಗೆ ಅವುಗಳ ಬೆಲೆಯೂ ಕುಸಿಯುವುದು. 

ಬಹುತೇಕ ವೈದ್ಯರು ಬದರೋಗಿಗಳ ಚಿಕಿತ್ಸೆಯಲ್ಲಿ ಇಂತಹ ಕಡಿಮೆಬೆಲೆಯ ಔಷದಗಳನ್ನು ಆಯ್ಕೆ ಮಾಡುತ್ತಾರೆ. ಈ ಔಷದಗಳ ಬೆಲೆ ಕುಸಿದರೂ, ಇವುಗಳ ಗುಣಮಟ್ಟ ಮಾತ್ರ ಕುಸಿಯುವುದಿಲ್ಲ. ಇದರರ್ಥ ದುಬಾರಿ ಬೆಲೆಯ ಔಷದಗಳನ್ನು ಬಳಸಬಾರದೆಂದಲ್ಲ. ಬಡರೋಗಿಯ ಪ್ರಾಣರಕ್ಷಣೆಗೆ ಅನಿವಾರ್ಯವೆನಿಸಿದಾಗ ಅಥವಾ ಇವುಗಳನ್ನು ಕೊಳ್ಳುವ ಸಾಮರ್ಥ್ಯವಿರುವ ಶ್ರೀಮಂತ ರೋಗಿಗಳ ಚಿಕಿತ್ಸೆಯಲ್ಲಿ ದುಬಾರಿ ಉಶದಗಲ ಬಳಕೆ ನಿಶ್ಚಿತವಾಗಿಯೂ ಸಮರ್ಥನೀಯ. 

ಔಷದಗಳ ಕಾಕ್ ಟೈಲ್!

ಅನೇಕ ವೈದ್ಯಕೀಯ ಸಂಶೋಧನೆಗಳಿಂದ ತಿಳಿದುಬಂದಂತೆ ಕೆಲವೊಂದು ವ್ಯಾಧಿಗಳ ಚಿಕಿತ್ಸೆಯಲ್ಲಿ ಒಂದಕ್ಕೂ ಹೆಚ್ಚು ವಿಧದ ಔಷದಗಳ ಸಂಯುಕ್ತ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಉದಾಹರಣೆಗೆ ಅನಿಯಂತ್ರಿತ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳನ್ನು ಇಂತಹ ಚಿಕಿತ್ಸೆಯಿಂದ ಹತೋಟಿಯಲ್ಲಿರಿಸುವುದು ಸುಲಭಸಾಧ್ಯ. ಆದರೆ ಈ ಸೂತ್ರವನ್ನು ಸಾರಾಸಗಟಾಗಿ ಪ್ರತಿಯೊಂದು ಕಾಯಿಲೆಗಳ ಚಿಕಿತ್ಸೆಯಲ್ಲಿ ಅನ್ವಯಿಸುವಂತಿಲ್ಲ. 

ಕೆಲವೊಮ್ಮೆ ಔಷದ ತಯಾರಕರು ಹಳೆಯ ಔಷದವೊಂದನ್ನು ಹೊಸದೊಂದು ಔಷದದೊಂದಿಗೆ ಸೇರಿಸಿ ತಯಾರಿಸಿದ ನೂತನ ಉತ್ಪನ್ನವನ್ನು ನಿರ್ದಿಷ್ಟ ಕಾಯಿಲೆಯೊಂದಕ್ಕೆ ನಿಶ್ಚಿತವಾಗಿಯೂ ಪರಿಣಾಮಕಾರಿ ಎನ್ನುವುದುಂಟು. ನಿಜ ಹೇಳಬೇಕಿದ್ದಲ್ಲಿ ಇದೀಗ ಬೇಡಿಕೆಯನ್ನು ಕಳೆದುಕೊಂಡಿರುವ ಹಳೆಯ ಔಷದವನ್ನು ಹೊಸದೊಂದು ಔಷದದೊಂದಿಗೆ ಸೇರಿಸಿ ಮಾರಾಟಮಾಡುವುದು, ಲಾಭವನ್ನು ಗಳಿಸುವ ತಂತ್ರವೇ ಹೊರತು ಬೇರೇನೂ ಅಲ್ಲ!. 

ಔಷದಗಳ ಅಂತರ್ ಕ್ರಿಯೆ 

ರೋಗಿಯೋರ್ವನಲ್ಲಿ ಒಂದಕ್ಕೂ ಹೆಚ್ಚು ವಿಧದ ಕಾಯಿಲೆಗಳಿವೆ ಎಂದಿಟ್ಟುಕೊಳ್ಳೋಣ. ಈ ರೋಗಿಗೆ ಒಂದಕ್ಕೂ ಹೆಚ್ಚು ವಿಧದ ಔಷದ ನೀಡುವ ಅನಿವಾರ್ಯತೆ ಇರುವುದು. ಇಂತಹ ಸಂದರ್ಭದಲ್ಲಿ ವಿಭಿನ್ನ ಔಷದಗಳ ನಡುವಿನ ಅಂತರ್ ಕ್ರಿಯೆಗಳಿಂದಾಗಿ ಕೆಲವೊಂದು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಏಕಕಾಲದಲ್ಲಿ ರೋಗಿ  ಎರಡು ಔಷದಗಳಲ್ಲಿ ಒಂದರ ಪ್ರಭಾವದಿಂದ ಮತ್ತೊಂದರ ಪರಿಣಾಮ ವೃದ್ಧಿಸುವುದು ಅಥವಾ ಕುಂಠಿತಗೊಳ್ಳುವುದುಂಟು. ಇದರಿಂದಾಗಿ ಪ್ರತಿಯೊಬ್ಬ ವೈದ್ಯರಿಗೂ ತಾವು ನೀಡುವ ಔಷದಗಳ ಪರಿಪೂರ್ಣ ಮಾಹಿತಿ ತಿಳಿದಿರಲೇಬೇಕು. 

ವಿಶೇಷವಾಗಿ ವಯೋವೃದ್ಧರನ್ನು ಬಾಧಿಸುವ ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ವಿವಿಧ ಔಷದಗಳ ನಡುವಿನ ಅಂತರ್ ಕ್ರಿಯೆಗಳಿಂದಾಗಿ ಹೊಸದೊಂದು ಸಮಸ್ಯೆ ಹುಟ್ಟಿಕೊಳ್ಳಬಹುದು. ಇಂತಹ ಸಮಸ್ಯೆಗಳು ಯಾವುದಾದರೂ ಕಾಯಿಲೆಯ ಲಕ್ಷಣಗಳೇ ಅಥವಾ ಔಷದಗಳ ಅಂತರ್ ಕ್ರಿಯೆಗಳ ಪರಿಣಾಮದಿಂದ ಬಂದಿರುವುದೇ ಎಂದು ಅರಿತುಕೊಳ್ಳಲು ವೈದ್ಯರಿಗೆ ಜೀವಶಾಸ್ತ್ರದ ಬಗ್ಗೆ ಸಾಕಷ್ಟು ಪರಿಣತಿ ಇರಲೇಬೇಕು. 

ಔಷದಗಳ ಉಪಯೋಗ 

ವೈದ್ಯರು ತಮ್ಮ ರೋಗಿಗಳನ್ನು ಚಿಕಿತ್ಸಿಸುವಾಗ ಯಾವ ಔಷದಗಳನ್ನು ಬಳಸುತ್ತಿದ್ದಾರೆ ಎನ್ನುವುದಕ್ಕಿಂತ ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ ಎನ್ನುವುದು ಮಹತ್ವಪೂರ್ಣ. ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಹಾಗೂ ನಿಗದಿತ ಅವಧಿಗೆ ಸೇವಿಸುವುದು ಅತ್ಯವಶ್ಯಕ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ" ಎನ್ನುವಂತೆ ಪ್ರಬಲವಾದ ಔಷದಗಳ ಪ್ರಯೋಗವು ರೋಗಿಯ ಆರೋಗ್ಯಕ್ಕೆ ಹಾನಿಕರವೆನಿಸುವುದು. ಆದರೆ ಒಂದು ನಿಮಿಷವೂ ಬಿಡುವಿಲ್ಲ ಎನ್ನುವ ಜೀವನ ಶೈಲಿಯಿಂದಾಗಿ, ಅನೇಕ ರೋಗಿಗಳು ವೈದ್ಯರ ಮೇಲೆ ಒತ್ತಡ ಹೆರುವ ಮೂಲಕ ತಮ್ಮನ್ನು ಬಾಧಿಸುವ ಕ್ಷುಲ್ಲಕ ಕಾಯಿಲೆಗಳಿಗೂ ಪ್ರಬಲ ಔಷದಗಳನ್ನು ಪಡೆಯುವುದು ಅಪರೂಪವೇನಲ್ಲ. ಅದೇ ರೀತಿಯಲ್ಲಿ ಅಲ್ಪಾವಧಿಯಲ್ಲೇ ಖ್ಯಾತಿ ಗಳಿಸುವ ಸಲುವಾಗಿ ಬೆರಳೆಣಿಕೆಯಷ್ಟು ಸಂಖ್ಯೆಯ ವೈದ್ಯರೂ ಇಂತಹ ಮಾರ್ಗವನ್ನು ಅನುಸರಿಸುವುದು ನಂಬಲಸಾಧ್ಯವೆನಿಸುತ್ತದೆ. 

ಔಷದಗಳ ಪ್ರಮಾಣ 

ಸಾಮಾನ್ಯವಾಗಿ ರೋಗಿಯ ವಯಸ್ಸು, ಶರೀರದ  ತೂಕ, ಕಾಯಿಲೆಯ ಅವಧಿ ಹಾಗೂ ತೀವ್ರತೆ ಮತ್ತು ರೋಗಿಯಲ್ಲಿರಬಹುದಾದ ಇತರ ಕಾಯಿಲೆಗಳನ್ನು ಗಮನದಲ್ಲಿರಿಸಿ, ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ವೈದ್ಯರು ನಿರ್ಧರಿಸುವರು. ತಮ್ಮ ವೃತ್ತಿಜೀವನದ ಅನುಭವಗಳು ಹೆಚ್ಚಿದಂತೆಯೇ, ಇವುಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವರು. 

ನೂತನ ಔಷದವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಇವುಗಳ ತಯಾರಕರು ಈ ಔಷದವನ್ನು ನೀಡಬೇಕಾದ ಪ್ರಮಾಣವನ್ನು ಸೂಚಿಸುತ್ತಾರೆ. ಆದರೆ ವಿಭಿನ್ನ ರೋಗಿಗಳಲ್ಲಿ ವಿಭಿನ್ನ ಪ್ರಮಾಣಗಳಲ್ಲಿ ನೀಡಿದಾಗಲೂ ಈ ಔಷದಗಳು ಅಪೇಕ್ಷಿತ ಪರಿಣಾಮವನ್ನು ನೀಡುವುದುಂಟು. ಉದಾಹರಣೆಗೆ ಹೃದಯ ಸಂಬಂಧಿ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಲ್ಲಿ ನೀಡುವ "ಆಟೆನೊಲಾಲ್" ಔಷದವು ಮೊದಲಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾದಾಗ, ತಯಾರಕರ ಸೂಚನೆಯಂತೆ ೧೦೦ ಮಿ. ಗ್ರಾಂ ನ ಮಾತ್ರೆಯನ್ನು ದಿನದಲ್ಲಿ ಒಂದುಬಾರಿ ಸೇವಿಸಬೇಕಿತ್ತು. ಆದರೆ ಅನುಭವೀ ವೈದ್ಯರು ತಮ್ಮ ರೋಗಿಗಳ ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ಇದೇ ಔಷದವನ್ನು ೫೦ ಹಾಗೂ ೨೫ ಮಿ. ಗ್ರಾಂ ನಂತೆ ನೀಡಿದಾಗಲೂ ಅನೇಕ ರೋಗಿಗಳಿಗೆ ನಿರೀಕ್ಷಿತ ಪರಿಣಾಮ ದೊರೆತಿತ್ತು!. ಮಹತ್ವಪೂರ್ಣವಾದ ಈ ವಿಚಾರವನ್ನು ಅರಿತ ಔಷದ ತಯಾರಕರು ತದನಂತರ ಈ ಔಷದವನ್ನು ೫೦, ೨೫ ಮತ್ತು ೧೨.೫ ಮಿ. ಗ್ರಾಂ ಗಳ ಮಾತ್ರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ಕೆಲವೊಂದು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸ್ವಯಂ ವೈದ್ಯರಾಗುವ ಮೂಲಕ ಪ್ರಾನಾಪಾಯಕ್ಕೆ ಆಹ್ವಾನ ನೀಡುವುದುಂಟು. ಜೀವನಪರ್ಯಂತ ಔಷದ ಸೇವನೆ ಹಾನಿಕರವೆಂದು ಧೃಢವಾಗಿ ನಂಬುವ ಇಂತಹ ರೋಗಿಗಳು, ವೈದ್ಯರು ಸೂಚಿಸಿದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಥವಾ ಪ್ರತಿನಿತ್ಯ ಸೇವಿಸುವಲ್ಲಿ ಎರಡು ದಿನಗಳಿಗೊಮ್ಮೆ ಔಷದವನ್ನು ಸೇವಿಸಿ ತಮ್ಮ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. 

ಪ್ರತಿಕೂಲ ಪರಿಣಾಮಗಳು 

ಔಷದಗಳ ಸೇವನೆಯಿಂದ ಶರೀರದ ಯಾವುದೇ ಭಾಗದಲ್ಲಿ ತುರಿಕೆಯಿಂದ ಆರಂಭಿಸಿ, ಕ್ಷಣಮಾತ್ರದಲ್ಲಿ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲ ಪ್ರತಿಕೂಲ ಪರಿಣಾಮಗಳು ಅಪರೂಪದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿರೀಕ್ಷಿತ, ಅನಿರೀಕ್ಷಿತ, ವಿಷಕಾರಕ ಮತ್ತು ಅಡ್ಡ ಪರಿಣಾಮಗಳಲ್ಲದೇ, ಒಗ್ಗದಿರುವಿಕೆ ಹಾಗೂ ತಾಳದಿರುವಿಕೆಗಳು ಸೇರಿವೆ. ಇದಲ್ಲದೆ ಔಷದ ಸೇವನೆಯ ಪರಿಣಾಮದಿಂದ ಉದ್ಭವಿಸಬಲ್ಲ ಕ್ಯಾನ್ಸರ್, ಗರ್ಭಪಾತ, ವಂಶವಾಹಿನಿಗಳ ತೊಂದರೆಗಳು ಕೂಡಾ ಅಲ್ಪ ಪ್ರಮಾಣದ ರೋಗಿಗಳಲ್ಲಿ ಕಂಡುಬರಬಹುದು. ಆದರೆ ಅದೃಷ್ಟವಶಾತ್ ಇಂತಹ ಸಮಸ್ಯೆಗಳನ್ನು ಸೃಷ್ಟಿಸಬಲ್ಲ ಔಷದಗಳ ಸಂಖ್ಯೆ ಅತ್ಯಲ್ಪವಾದುದರಿಂದ, ಇಂತಹ ಸಮಸ್ಯೆಗಳ ಸಂಭಾವ್ಯತೆಗಳೂ ತೀರಾ ಕಡಿಮೆ. 

ಕೆಲವೊಂದು ರೋಗಿಗಳಲ್ಲಿ ವೈದ್ಯರು ನೀಡಿದ ಔಷದವು ಶಾರೀರಿಕ- ಮಾನಸಿಕ ಅವಲಂಬನೆಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಸಂಧಿವಾತ ಅಥವಾ ನಿದ್ರಾಹೀನತೆಗಾಗಿ ರೋಗಿ ಸೇವಿಸುವ ಔಷದಗಳ ಸೇವನೆಯನ್ನು ನಿಲ್ಲಿಸಿದೊಡನೆ ಮಂಡಿನೋವು ಹಾಗೂ ನಿದ್ರಾಹೀನತೆ ಮತ್ತೆ ಮರುಕಳಿಸುವುದು. ಆದುದರಿಂದ ಇಂತಹ ಔಷದಗಳನ್ನು ನೀಡಿದಲ್ಲಿ, ಇವುಗಳ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದ ಬಳಿಕವೇ ನಿಲ್ಲಿಸಲು ಸೂಚಿಸುವರು. 

ರೋಗಿಗಳಲ್ಲಿ ಆಕಸ್ಮಿಕವಾಗಿ ಉದ್ಭವಿಸಬಲ್ಲ ಹಾಗೂ ಪ್ರಾಣಾಪಾಯಕ್ಕೆ ಕಾರನವೆನಿಸಬಲ್ಲ ಪ್ರತಿಕೂಲ ಪರಿಣಾಮಗಳನ್ನು ಕ್ಷಿಪ್ರಗತಿಯಲ್ಲಿ ಚಿಕಿತ್ಸಿಸಲು ವೈದ್ಯರು ಸದಾ ಸನ್ನದ್ಧರಾಗಿರಬೇಕಾಗುವುದು. 

ಅವಶ್ಯಕ ಔಷದಗಳು 

ದೇಶದ ಬಹುತೇಕ ಜನತೆಗೆ ಅನಿವಾರ್ಯವೆನಿಸುವ ಔಷದಗಳನ್ನು "ಅವಶ್ಯಕ ಔಷದ" ಗಳು ಎನ್ನುತ್ತಾರೆ. ಇವು ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸುರಕ್ಷಿತವೆನಿಸುವ, ಖಚಿತ ಪರಿಣಾಮ ನೀಡಬಲ್ಲ ಹಾಗೂ ದುಬಾರಿಯಲ್ಲದ ಔಷದಗಳು ಈ ಪಟ್ಟಿಯಲ್ಲಿ ಸೇರಿರುತ್ತವೆ. ಆದರೆ ಈ ಪಟ್ಟಿಯು ಕಾಲಕ್ರಮೇಣ ಬದಲಾಗುತ್ತಲೇ ಇರುತ್ತದೆ. ಆದರೆ ಇದರಲ್ಲಿ ಸ್ಥಾನವನ್ನು ಗಳಿಸದ ಔಷದಗಳನ್ನು ಅನಾವಶ್ಯಕ ಔಷದಗಳೆನ್ನಲಾಗದು. ಏಕೆಂದರೆ ಕೆಲವೊಂದು ವಿಶಿಷ್ಟ ಕಾಯಿಲೆಗಳಲ್ಲಿ ಅಥವಾ ವಿಶಿಷ್ಟ ಸನ್ನಿವೇಶಗಳಲ್ಲಿ ಇಂತಹ ಔಷದಗಳ ಬಳಕೆ ಅನಿವಾರ್ಯವೆನಿಸುವುದು. 

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಅವಶ್ಯಕ ಔಷದಗಳ ಪಟ್ಟಿಯಲ್ಲಿ ಇರುವ ಔಷದಗಳ ಸಂಖ್ಯೆಯ ಹಲವಾರು ಪಟ್ಟು ಅಧಿಕ ಔಷದಗಳು ಭಾರತದಲ್ಲಿ ಮಾರಾಟವಾಗುತ್ತಿರಲು, ಕೆಲವೊಮ್ಮೆ ವೈದ್ಯರೂ ಕಾರಣಕರ್ತರೆನಿಸುತ್ತಾರೆ. ಇವೆಲ್ಲಕ್ಕಿಂತ ಮಿಗಿಲಾಗಿ ತಾವು ಕಂಡ ಜಾಹೀರಾತುಗಳಿಂದ ಪ್ರಭಾವಿತರಾದ ಜನಸಾಮಾನ್ಯರು, ಇಂತಹ ಔಷದಗಳ ಒಳಿತು- ಕೆಡುಕುಗಳ ಬಗ್ಗೆ ಯೋಚಿಸದೇ ಖರೀದಿಸಿ ಬಳಸುವ ಮೂಲಕ ಅಯಾಚಿತ ಸಮಸ್ಯೆಗಳಿಗೆ ಈಡಾಗುತ್ತಾರೆ!. 

ರೋಗಿಗಳ ಹೊಣೆಗಾರಿಕೆ 

ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಹಾಗೂ ನಿಗದಿತ ಅವಧಿಗೆ ಸೇವಿಸಬೇಕಾದ ಹೊಣೆಗಾರಿಕೆ ರೋಗಿಗಳ ಮೇಲಿದೆ. ಕಾರಣಾಂತರಗಳಿಂದ ಇದನ್ನು ಪರಿಪಾಲಿಸದ ರೋಗಿಗಳು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಇದಲ್ಲದೇ ಆರ್ಥಿಕ ಸಮಸ್ಯೆಗಳು, ಔಷದಗಳ ಬಗ್ಗೆ ಅಸಹ್ಯ, ಇಂಜೆಕ್ಷನ್ ಗಳ ಭಯ, ಪ್ರತಿಕೂಲ ಪರಿಣಾಮಗಳ ಬಗ್ಗೆ ಹೆದರಿಕೆಗಳೂ ಔಷದ ಸೇವನಾ ಕ್ರಮದಲ್ಲಿ ವ್ಯತ್ಯಯವಾಗಲು ಕಾರಣವೆನಿಸಬಹುದು. 

ಇಂತಹ ಸಮಸ್ಯೆಗಳ ನಿವಾರಣೆಗಾಗಿ ವೈದ್ಯರು ಅತ್ಯಂತ ಸರಳ ಹಾಗೂ ಪರಿಣಾಮಕಾರೀ ಚಿಕಿತ್ಸಾ ವಿಧಾನಗಳನ್ನು ಆಯ್ದುಕೊಳ್ಳಬೇಕಿದೆ. ದಿನದಲ್ಲಿ ಒಂದು ಅಥವಾ ಎರಡುಬಾರಿ ಮಾತ್ರ ಸೇವಿಸಬೇಕಾದ, ಕನಿಷ್ಠ ಸಂಖ್ಯೆಯ ಹಾಗೂ ದುಬಾರಿಯಲ್ಲದ ಔಷದಗಳನ್ನು ಸೂಚಿಸಿದಲ್ಲಿ ರೋಗಿಗಳು ಇವುಗಳನ್ನು ಕ್ರಮಬದ್ಧವಾಗಿ ಸೇವಿಸುವುದರಲ್ಲಿ ಸಂದೇಹವಿಲ್ಲ. ಜೀವನಪರ್ಯಂತ ಅಥವಾ ದೀರ್ಘಾವಧಿ ಚಿಕಿತ್ಸೆಯಲ್ಲೂ ಮೇಲಿನ ಸೂತ್ರದೊಂದಿಗೆ, ಪ್ರತಿ ತಿಂಗಳು ಅಥವಾ ನಿಗದಿತ ಅವಧಿಯ ಬಳಿಕ ತನ್ನಲ್ಲಿ ಬಂದು ಪರೀಕ್ಷಿಸಿಕೊಳ್ಳಲೇ ಬೇಕೆಂಬ ಷರತ್ತು ವಿಧಿಸುವ ವೈದ್ಯರ ಚಿಕಿತ್ಸೆ ಅಪೇಕ್ಷಿತ ಪರಿಣಾಮವನ್ನು ನೀಡುವುದು. ವಿಶಿಷ್ಟ ಸಂದರ್ಭಗಳಲ್ಲಿ ವಯೋವೃದ್ಧರು, ಮರೆಗುಳಿ ಸ್ವಭಾವದವರು ಹಾಗೂ ಮಾನಸಿಕ ರೋಗಿಗಳು ಕ್ರಮಬದ್ಧವಾಗಿ ಔಷದ ಸೇವಿಸಲು ಮನೆಮಂದಿಯ ಸಹಕಾರ ಅವಶ್ಯವೆನಿಸುವುದು. ಅಂತಿಮವಾಗಿ ಚಿಕಿತ್ಸೆ ಅನಿವಾರ್ಯವೆನಿಸಿದಾಗ ನಿಮ್ಮ ವೈದ್ಯರು ಸೂಚಿಸಿದ ಔಷದಗಳನ್ನು ಸೇವಿಸಲೆಬೇಕಾಗುವುವಂತೆಯೇ, ವಿನಾಕಾರಣ ಹಾಗೂ ಅನಾವಶ್ಯಕವಾಗಿ ಔಷದಗಳನ್ನು ಸೇವಿಸಲೇಬಾರದು ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೦೭-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 

 

No comments:

Post a Comment