Sunday, November 3, 2013

Citizens responsibilities


                                           ನಾಗರಿಕರ ಹೊಣೆಗಾರಿಕೆಗಳು 

ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದಿದರೆ ಸಾಲದು. ತಮ್ಮ ಹೊಣೆಗಾರಿಕೆಯ ಕುರಿತೂ ಸ್ವಲ್ಪ ಜ್ಞಾನವಿರುವುದು ಅವಶ್ಯ. ಹಕ್ಕು ಮತ್ತು ಹೊಣೆಗಾರಿಕೆಗಳು ಒಂದೇ ನಾಣ್ಯದ ಎರಡು ಮುಖಗಳು. ಈ ಅರಿವು ಮೂಡಿದಾಗಲೇ ಜೀವನ ಸುಗಮವಾದೀತು. 
-------------            -------------           ------------            ---------              ----------------                       -----------              -------------

ಕೇಂದ್ರ- ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತಾಗಲು ಹಾಗೂ ಉತ್ತಮ ಗುಣಮಟ್ಟದ ಸಂವೇದನಾಶೀಲ ಆಡಳಿತ ವ್ಯವಸ್ಥೆಯನ್ನು ಜನರಿಗೆ ನೀಡುವಂತಾಗಲು, ನಾಗರಿಕ- ಬಳಕೆದಾರರ ವೇದಿಕೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಇದರೊಂದಿಗೆ ಜನಸಾಮಾನ್ಯರ ವೈಯುಕ್ತಿಕ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪರಿಹರಿಸಲು ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತವೆ. ಕಾರಣಾಂತರಗಳಿಂದ ಸಮಸ್ಯೆಗಳು  ಬಗೆಹರಿಯದೆ ಇದ್ದಲ್ಲಿ, ಶಾಂತಿಯುತ ಹೋರಾಟವನ್ನು ನಡೆಸಲು ಅವಶ್ಯಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವಲ್ಲಿ ಇಂತಹ ವೇದಿಕೆಗಳು ಪ್ರಮುಖಪಾತ್ರವಹಿಸುತ್ತವೆ. 

ಆದರೆ ಅನೇಕ ಸಂದರ್ಭಗಳಲ್ಲಿ ಪ್ರತಿಯೊಬ್ಬ ನಾಗರಿಕರಲ್ಲಿ ಇರಲೇಬೇಕಾದ ಹೊಣೆಗಾರಿಕೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಅಂತೆಯೇ ಈ ಬಗ್ಗೆ ಅರಿವು ಮೂಡಿಸಬಲ್ಲ ಲೇಖನಗಳು ಮಾಧ್ಯಮಗಳಲ್ಲಿ ಅಪರೂಪದಲ್ಲಿ ಪ್ರಕಟಗೊಂಡರೂ,ಓದುಗರು ಮಾತ್ರ ಇವನ್ನು ಓದುವ ಹವ್ಯಾಸವನ್ನೇ ರೂಢಿಸಿಕೊಂಡಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಬಹುತೇಕ ಜನರಿಗೆ ತಮ್ಮ ಹೊಣೆಗಾರಿಕೆಗಳ ಬಗ್ಗೆ ಪ್ರಾಥಮಿಕ ಮಾಹಿತಿಯೇ ಇಲ್ಲದಿರುವುದು ಅಪರೂಪವೇನಲ್ಲ!. 

ಅವಕಾಶ ವಂಚಿತ ಅನಂತ 

ಅಂತಿಮ ವರ್ಷದ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ಅನಂತನಿಗೆ ಅತೀವ ಆನಂದವಾಗಿತ್ತು. ಇದರೊಂದಿಗೆ ವಿದೇಶದಲ್ಲಿ ನೆಲೆಸಿದ್ದ ಬಂಧುವೊಬ್ಬರು ಉತ್ತಮ ಉದ್ಯೋಗವನ್ನು ಕೊಡಿಸುವ ಭರವಸೆ ನೀಡಿದಾಗ, ಅನಂತನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತ್ತು. 

ವಿದೇಶ ಪ್ರಯಾಣದ ಸಿದ್ಧತೆಯ ಪ್ರಾಥಮಿಕ ಅವಶ್ಯಕತೆಯಂತೆ, ಆ ದೇಶದ ದೂತಾವಾಸಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಆತನು ಅರ್ಜಿ ಸಲ್ಲಿಸಿದ್ದನು. ವಾರ ಕಳೆಯುವಷ್ಟರಲ್ಲಿ ದೂತಾವಾಸದಿಂದ ಬಂದಿದ್ದ ಪತ್ರದಲ್ಲಿ, ಆತನ ಜನನ ಪ್ರಮಾಣ ಪತ್ರವನ್ನು ಏಳುದಿನಗಳಲ್ಲಿ ನೀಡುವಂತೆ ತಿಳಿಸಲಾಗಿತ್ತು. ತನ್ನ ಎಸ್. ಎಸ್. ಎಲ್. ಸಿ ಅಂಕಪಟ್ಟಿಯಲ್ಲಿನ ಜನನ ದಿನಾಂಕವನ್ನೇ ಅಧಿಕೃತ "ದಾಖಲೆ" ಎಂದು ನಂಬಿದ್ದ ಅನಂತನಿಗೆ, ಇದೀಗ ಗಾಬರಿಯಾಗಿತ್ತು. ಮಗನ ಜನನ ಪ್ರಮಾಣ ಪತ್ರದ ಬಗ್ಗೆ ತಲೆಕೆದಿಸಿಕೊಂಡಿರದ ಆತನ ತಂದೆಯ ನಿರ್ಲಕ್ಷ್ಯವೇ ಇದೀಗ "ಅನಂತನ ಅವಾಂತರ"ಕ್ಕೆ ಕಾರಣವೆನಿಸಿತ್ತು. 

ಧೃತಿಗೆಡದ ಅನಂತನು ತನ್ನ ಹುಟ್ಟೂರಿಗೆ ಧಾವಿಸಿ, ಅಲ್ಲಿನ ಔರಸಭೆಯ ಅಧಿಕಾರಿಗಳಲ್ಲಿ ಅಂಗಲಾಚಿ ೨೩ ವರ್ಷಗಳ ಹಿಂದಿನ ಕಡತಗಳನ್ನು ಹುಡುಕಿಸಬೇಕಾಯಿತು. ಅಂತೂ ಜನನ ಪ್ರಮಾಣ ಪತ್ರ ಕೈಸೇರುವಾಗ ನಾಲ್ಕು ದಿನಗಳೇ ಕಳೆದಿದ್ದವು. ಬದುಕಿದೆಯಾ ಬಡ ಜೀವವೇ ಎಂದು ಭಾವಿಸಿದ ಅನಂತನು, ಅಂದೇ ರಾತ್ರಿ ಮದ್ರಾಸಿಗೆ ಪ್ರಯಾಣಿಸಿದ್ದನು. ಪ್ರಮಾಣ ಪತ್ರವನ್ನು ದೂತಾವಾಸದ ಅಧಿಕಾರಿಯಲ್ಲಿ ಹಾಜರುಪಡಿಸಿದ ಸ್ವಲ್ಪ ಹೊತ್ತಿನ ಬಳಿಕ ಆತನನ್ನು ಒಳಕ್ಕೆ ಕರೆಯಲಾಯಿತು. ಆತನು ನೀಡಿದ್ದ ಪ್ರಮಾಣ ಪತ್ರದಲ್ಲಿ ಆತನ ತಂದೆಯ ಹೆಸರು ಸುರೇಂದ್ರ ಎಂದು ಇರಬೇಕಾದಲ್ಲಿ, ಸುಂದರ ಎಂದು ನಮೂದಿಸಿದ್ದರಿಂದ ಅನಂತನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು!. 

ವಿದ್ಯಾಭ್ಯಾಸ ಮುಗಿದಂತೆಯೇ ಕೈತುಂಬಾ ಸಂಬಳ ದೊರೆಯುವಂತಹ ಹಾಗೂ ವಿದೇಶದಲ್ಲಿ ನೆಲೆಸುವ ಸುವರ್ಣಾವಕಾಶದಿಂದ ವಂಚಿತನಾಗಲು, ೨೩ ವರ್ಷಗಳಿಂದ ತನ್ನ ಜನನ ಪ್ರಮಾಣ ಪತ್ರವನ್ನು ಪಡೆಯದ ಹಾಗೂ ಪಡೆದ ಬಳಿಕವೂ ಅದನ್ನು ಪರಿಶೀಲಿಸದ ಅನಂತನು "ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದನು! 

ಅಜಾಗರೂಕತೆಗಾಗಿ ದಂಡ ತೆತ್ತ ವೈದ್ಯರು!

ಅರೆಕ್ಷಣವೂ ಬಿಡುವಿಲ್ಲದ ಪ್ರಸಿದ್ಧ ವೈದ್ಯರೊಬ್ಬರಿಗೆ ತನ್ನ ಮಗನ ಸಿ. ಇ. ಟಿ  ಕೌನ್ಸೆಲಿಂಗ್ ಗಾಗಿ ಬೆಂಗಳೂರಿಗೆ ಹೋಗುವ ಪ್ರಸಂಗ ಬಂದಿತ್ತು. ಪೂರ್ವ ನಿರ್ಧಾರಿತ ಕಾರ್ಯಕ್ರಮದಂತೆ ಬಸ್ಸಿನಲ್ಲಿ ಹೋಗಲು ಆಗದೇ, ಸ್ವಂತ ಕಾರಿನಲ್ಲಿ ಪಯಣಿಸಬೇಕಾಯಿತು. 

ಬೆಂಗಳೂರಿಗೆ ತಲುಪುವ ಮೊದಲೇ ಈ ಮರೆಗುಳಿ ವೈದ್ಯರ ಪತ್ನಿ ಕಾರಿನಲ್ಲಿ ಹುಡುಕಾಡಿದಾಗ ವಾಹನದ ದಾಖಲೆಗಳು ಮತ್ತು ವೈದ್ಯರ ವಾಹನ ಚಾಲನಾ ಪರವಾನಿಗೆಗಳು ಸಿಕ್ಕಿರಲಿಲ್ಲ. ಆದರೆ ವಿಷಯವನ್ನರಿತ ವೈದ್ಯರು ಗಾಬರಿಗೊಳ್ಳಲಿಲ್ಲ. ತನ್ನ ಕಾರಿನ ಹಿಂದೆ- ಮುಂದೆ ರಾರಾಜಿಸುವ "ರೆಡ್ ಕ್ರಾಸ್" ಚಿಹ್ನೆಯನ್ನೇ ಆಪದ್ಬಾಂಧವ ಎಂದು ನಂಬಿದ್ದ ವೈದ್ಯರು ನಿರಾಳವಾಗಿದ್ದರು!. 

ಪರವೂರಿನ ಚಾಲಕರಿಗೆ ಚಕ್ರವ್ಯೂಹದಂತೆ ಭಾಸವಾಗುವ ಬೆಂಗಳೂರಿನ ರಸ್ತೆಗಳಲ್ಲಿ, ಸಾಕಷ್ಟು ಮುಂಜಾಗರೂಕತೆ ವಹಿಸಿದ್ದರೂ" ನೋ ಎಂಟ್ರಿ " ಯಲ್ಲಿ ವಾಹನ ಚಲಾಯಿಸಿದ ವೈದ್ಯರು, ಸಂಚಾರ ವಿಭಾಗದ ಆರಕ್ಷಕನ ಕಣ್ಣಿಗೆ ಬಿದ್ದಿದ್ದರು. ವೈದ್ಯರ ಕಾರನ್ನು ತಡೆದು ನಿಲ್ಲಿಸಿದ ಆರಕ್ಷಕನಲ್ಲಿ ಪರಿಪರಿಯಾಗಿ ಕೇಳಿಕೊಂಡರೂ ಪ್ರಯೋಜನವಾಗದೇ ಇದ್ದಾಗ, ಕೊನೆಯ ಪ್ರಯತ್ನವೆಂದು ಕಾರಿನ ಮೇಲೆ ರಾರಾಜಿಸುತ್ತಿದ್ದ "ರೆಡ್ ಕ್ರಾಸ್" ಚಿಹ್ನೆಯನ್ನು ತೋರಿಸಿ ತಾನೊಬ್ಬ ವೈದ್ಯನೆಂದು ಹೇಳಿದ್ದರು. 

ಮೀಸೆಯಡಿಯಲ್ಲೇ ನಸುನಕ್ಕ ಪೋಲೀಸನು ವಿಳಂಬಿಸದೇ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿದ ಬಗ್ಗೆ , ವಾಹನ ಚಾಲನಾ ಪರವಾನಿಗೆ ಮತ್ತು ಕಾರಿನ ನೋಂದಣಿ,ವಿಮೆ ಮತ್ತು ಸುಂಕ ಪಾವತಿಸಿದ ದಾಖಲೆಗಳನ್ನು ಹೊಂದಿರದ ಬಗ್ಗೆ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಕಾನೂನು ಬಾಹಿರವಾಗಿ ರೆಡ್ ಕ್ರಾಸ್ ಚಿಹ್ನೆಯನ್ನು ಬಳಸಿದ್ದಕ್ಕಾಗಿ ಪ್ರತ್ಯೇಕವಾಗಿ ೫೦೦ ರೂ. ದಂಡವನ್ನು ವಿಧಿಸಿದ್ದನು!. ತನ್ನ ಅಜಾಗರೂಕತೆ ಮತ್ತು ಬೇಜವಾಬ್ದಾರಿಗಳಿಂದಾಗಿ, ವೈದ್ಯರು "ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡಿದ್ದರು!

ಜವಾಬ್ದಾರಿ ನಿಮ್ಮದೇ 

ಪ್ರಾಯಶಃ ನಿಮಗೂ ಅನಂತನಿಗೆ ಆದಂತಹ ಅನುಭವ ಆಗಿರಬಹುದು. ನಿಮ್ಮ ವೈಯುಕ್ತಿಕ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ಪಡೆದುಕೊಂಡು ಅದರಲ್ಲಿನ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಬಳಿಕ ಪ್ರತಿಯೊಂದು ದಾಖಲೆಯ ಜೆರಾಕ್ಸ್ ಪ್ರತಿಗಳನ್ನು ಮಾಡಿಸಿ, ಇವುಗಳನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಿ. ಆಕಸ್ಮಿಕವಾಗಿ ಮೂಲ ದಾಖಲೆಗಳು ಕಳೆದುಹೊದಲ್ಲಿ ಅಥವಾ ನಾಶವಾದಲ್ಲಿ, ಧೃಡೀಕೃತ ನಕಲುಗಳನ್ನು ಪಡೆದುಕೊಳ್ಳಲು ಜೆರಾಕ್ಸ್ ಪ್ರತಿಗಳು ಉಪಯುಕ್ತವೆನಿಸುತ್ತವೆ. 

ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ವಿವರ, ಶಾಲಾ ವರ್ಗಾವಣೆ ಪತ್ರ, ಎಸ್. ಎಸ್. ಎಲ್. ಸಿ, ಪಿ. ಯು. ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳಲ್ಲಿ ನಿಮ್ಮ ಮತ್ತು ನಿಮ್ಮ ಹೆತ್ತವರ ಹೆಸರುಗಳು ಏಕರೀತಿಯಲ್ಲಿ ಇವೆಯೇ ಎಂದು ಪರಿಶೀಲಿಸಿ. ವಿಶೇಷವಾಗಿ ಹೆಸರುಗಳಲ್ಲಿನ ಅಕ್ಷರಗಳಲ್ಲಿ ಲೋಪದೋಷಗಳು ಇರಬಾರದ ಕಾರಣದಿಂದಾಗಿ ಇವುಗಲತ್ತ ಲಕ್ಷ್ಯವಿರಲಿ. ಅಕಸ್ಮಾತ್ ಇಂತಹ ಲೋಪದೋಷಗಳು ಇದ್ದಲ್ಲಿ, ತಕ್ಷಣ ಸಂಬಂಧಿತ ಅಧಿಕಾರಿಗನ್ನು ಸಂಪರ್ಕಿಸಿ ಇದನ್ನು ಸರಿಪಡಿಸಿಕೊಳ್ಳಿ. 

ಸಾಮಾನ್ಯವಾಗಿ ಹೆಂಗಸರು ಹೆರಿಗೆಗಾಗಿ ದಾಖಲಾದ ಆಸ್ಪತ್ರೆಗಳ ಮೂಲಕ ಜನನ ಪ್ರಮಾಣ ಪತ್ರವನ್ನು ಪಡೆಯಲು ಅವಶ್ಯಕ ವಿವರಗಳು ಸಂಬಂಧಿತ ಇಲಾಖೆಗೆ ರವಾನೆಯಾಗುವುದು. ಇದೇ ಕಾರಣದಿಂದಾಗಿ ಇದರಲ್ಲಿ ನಮೂದಿಸಲೇಬೇಕಾದ ಹೆಸರುಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ನಮೂದಿಸುವುದು ಹಿತಕರ. ಮಾತ್ರವಲ್ಲ, ಈ ಪ್ರಮಾಣ ಪತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತ್ಯೇಕವಾಗಿ ಪಡೆದುಕೊಳ್ಳುವುದು ಇನ್ನಷ್ಟು ಹಿತಕರ. ಏಕೆಂದರೆ ಹೆಸರಿನಲ್ಲಿರುವ ಅಕ್ಷರಗಳನ್ನು ತಪ್ಪಿಲ್ಲದೆ ಸ್ಪಷ್ಟವಾಗಿ ಬರೆಯದೇ ಇದ್ದಲ್ಲಿ, ಕನ್ನಡದ 'ವಿಶ್ವನಾಥ" ನು ಆಂಗ್ಲ ಭಾಷೆಯಲ್ಲಿ "ವಿಸ್ವನಾತ್ " (viswanat) ಆಗಿ ಬದಲಾಗುವ ಸಾಧ್ಯತೆಗಳಿವೆ. 

ನಿಮ್ಮ ಪಡಿತರ ಚೀಟಿ, ಮತದಾರರ ಗುರುತು ಚೀಟಿ, ಬ್ಯಾಂಕ್- ಅಂಚೆ ಕಚೇರಿಯ ಪಾಸ್ ಪುಸ್ತಕಗಳು, ಫಿಕ್ಸೆಡ್ ಡೆಪೋಸಿಟ್ ರಸೀತಿಗಳು,ಪಾಸ್ ಪೋರ್ಟ್, ಆದಾಯ ತೆರಿಗೆ ಇಲಾಖೆಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಎನ್. ಪಿ. ಆರ್ ಕಾರ್ಡ್, ಕ್ರೆಡಿಟ್- ಡೆಬಿಟ್ ಕಾರ್ಡ್, ವಿದ್ಯುತ್- ದೂರವಾಣಿ ಸಂಪರ್ಕಗಳಿಗೆ ಸಂಬಂಧಿಸಿದ ದಾಖಲೆಗಳು, ವಾಹನ ಚಾಲನಾ ಪರವಾನಿಗೆ, ವಾಹನದ ತೆರಿಗೆ,ವಿಮೆ ಹಾಗೂ ನೋಂದಣಿ ದಾಖಲೆಗಳು, ಜೀವವಿಮೆ- ಆರೋಗ್ಯ ವಿಮೆಯ ದಾಖಲೆಗಳು, ಎಲ್ಲ ಸ್ಥಿರ- ಚರ ಸೊತ್ತುಗಳ ದಾಖಲೆಗಳು ಮತ್ತು ಇನ್ನಿತರ ಅವಶ್ಯಕ ದಾಖಲೆಗಳನ್ನು ಭದ್ರವಾಗಿರಿಸಿ. ಅಂತೆಯೇ ನವೀಕರಿಸಬೇಕಾದ, ಕಾಲ ಕಾಲಕ್ಕೆ ಹಣವನ್ನು ಕಂತುಗಳ ಮೂಲಕ ಪಾವತಿಸಬೇಕಾದ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ನವೀಕರಿಸುವುದು- ಪಾವತಿಸುವ ಹೊಣೆಗಾರಿಕೆ ನಿಮ್ಮದೇ ಆಗಿದೆ. 

ದಾಖಲೆಗಳು ಕಳೆದುಹೋದಾಗ 

ನಿಮ್ಮಲ್ಲಿರುವ ಯಾವುದೇ ಮೂಲ ದಾಖಲೆಗಳು ಕಳೆದುಹೊದಲ್ಲಿ ಅಥವಾ ಕದ್ದುಹೋದಲ್ಲಿ, ಸಮೀಪದ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಿ. ಈ ದಾಖಲೆಗಳನ್ನು ಇತರರು ದುರುಪಯೋಗಪಡಿಸಿಕೊಂಡಲ್ಲಿ ಸಂಭವಿಸಬಹುದಾದ ಯಾವುದೇ ಕಷ್ಟ- ನಷ್ಟಗಳ ನಿವಾರಣೆಗೆ ಇದು ಅತ್ಯವಶ್ಯಕವೆನಿಸುವುದು. ಉದಾಹರಣೆಗೆ ನಿಮ ಪಾಸ್ ಪೋರ್ಟ್ ಕಳೆದುಹೋದ ಬಗ್ಗೆ ದೂರು ನೀಡಿದ ಬಳಿಕ, ಸಂಬಂಧಿತ ಇಲಾಖೆಯು ಕ್ಷಿಪ್ರವಾಗಿ "ಲುಕ್ ಔಟ್" ನೋಟೀಸ್ ಜಾರಿ ಮಾಡುತ್ತದೆ. ಅದೇ ರೀತಿಯಲ್ಲಿ ಶೇರು ಸರ್ಟಿಫಿಕೇಟ್ ಗಳು ಕಳೆದುಹೋದಲ್ಲಿ, ಆರಕ್ಷಕ ಠಾಣೆಗೆ ದೂರು ನೀಡಿದ ರಶೀದಿಯ ಆಧಾರದ ಮೇಲೆ ಬದಲಿ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 

ನಿಮ್ಮ ವಿಳಾಸ ಬದಲಾದಲ್ಲಿ ಇದನ್ನು ಸಂಬಂಧಿತ ಇಲಾಖೆ- ಸಂಸ್ಥೆಗಳಿಗೆ ತಿಳಿಸಿ, ಮೂಲ ದಾಖಲೆಗಳಲ್ಲಿ ಹೊಸ ವಿಳಾಸವನ್ನು ದಾಖಲಿಸುವುದು ಅತ್ಯಗತ್ಯ. ಇದರಿಂದ ಅನಗತ್ಯ ತೊಂದರೆಗಳನ್ನು ತಡೆಗಟ್ಟುವುದು ಸುಲಭ ಸಾಧ್ಯ. 

ಸರಕಾರಿ- ಖಾಸಗಿ ಸಂಸ್ಥೆ- ಇಲಾಖೆಗಳೊಂದಿಗೆ ಯಾವುದೇ ವಿಷಯದ ಬಗ್ಗೆ ನೀವು ನಡೆಸಿರುವ ಪತ್ರ ವ್ಯವಹಾರದ ನಕಲೊಂದನ್ನು ಅವಶ್ಯವಾಗಿ ತೆಗೆದಿರಿಸಿ. ಅಂತೆಯೇ ನಗದು ಪಾವತಿಸಿದ ರಶೀದಿಗಳನ್ನು ಜೋಪಾನವಾಗಿರಿಸಿ. 

ನೀವೇನು ಮಾಡಬಹುದು?

ನಿಮ್ಮ ಮಕ್ಕಳು ಹೈಸ್ಕೂಲ್ ಹಂತವನ್ನು ತಲುಪಿದ ಬಳಿಕ ಕನಿಷ್ಠ ರಜಾ ದಿನಗಳಲ್ಲಾದರೂ ಅವರನ್ನು ಬ್ಯಾಂಕ್, ಅಂಚೆ ಕಚೇರಿ, ಪುರಸಭಾ ಕಚೇರಿ, ಜೀವ ವಿಮಾ ಕಚೇರಿ, ಕಂದಾಯ,ಕೃಷಿ ಮತ್ತಿತರ ಇಲಾಖೆಗಳ ಕಛೇರಿಗಳು ಮತ್ತು ನಿಮ್ಮ ಕೆಲಸ ಕಾರ್ಯಗಳಿರುವ ಕಚೇರಿಗಳಿಗೆ ಕರೆದೊಯ್ದು, ಅಲ್ಲಿನ ಕಾರ್ಯ ವಿಧಾನವನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶವನ್ನು ಕಲ್ಪಿಸಿ. ಮಕ್ಕಳ ಮುಂದಿನ ಜೀವನದಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಎನಿಸುವುದರೊಂದಿಗೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇದು ಉಪಯುಕ್ತವೆನಿಸುವುದು. 

ನಿಮ್ಮ ದೈನಂದಿನ ಜೀವನದಲ್ಲಿ ಅನಿವಾರ್ಯವೆನಿಸುವ ವೈಯುಕ್ತಿಕ ಅಥವಾ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯವಿರುವ ವಿವಿಧ ಇಲಾಖೆಗಳೊಂದಿಗೆ ನಡೆಸಬೇಕಾದ ಪತ್ರ ವ್ಯವಹಾರದ ವಿವಿಧ ಹಂತಗಳ ಮಾಹಿತಿಯನ್ನು ಅರಿತುಕೊಳ್ಳಿ. ಅದೇ ರೀತಿಯಲ್ಲಿ ವೈಯುಕ್ತಿಕ ಸಮಸ್ಯೆಗಳ ನಿವಾರಣೆಗೆ ನಡೆಸುವ ಪ್ರಯತ್ನಗಳನ್ನು, ಅಷ್ಟೇ ಶೃದ್ಧೆಯಿಂದ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗಾಗಿ ನಡೆಸುವುದು ಸಮಾಜಕ್ಕೆ ನಿಮ್ಮ ಕಿರು ಕಾಣಿಕೆ ಎನಿಸೀತು. ನಿಮ್ಮ ಸಲಹೆ- ಸೂಚನೆಗಳನ್ನು ಸಂಬಂಧಿತ ಇಲಾಖೆಗಳಿಗೆ- ಅಧಿಕಾರಿಗಳಿಗೆ ನೀಡಿದ ಬಳಿಕವೂ ಸ್ಪಂದಿಸದಿದ್ದಲ್ಲಿ, ಪತ್ರಿಕೆಗಳಿಗೆ ಮಾಹಿತಿ ನೀಡಿ ಜನಾಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಿ. 

ಈ ರೀತಿಯಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ, ಅನಾವಶ್ಯಕ ಸಮಸ್ಯೆಗಳು- ತೊಂದರೆಗಳನ್ನು ಸುಲಭದಲ್ಲೇ ನಿವಾರಿಸಿಕೊಳ್ಳಬಹುದಾಗಿದೆ ಎನ್ನಿವುದನ್ನು ಮರೆಯದಿರಿ. 

ಲೇಖನ- ಡಾ. ಸಿ.  ನಿತ್ಯಾನಂದ ಪೈ, ಪುತ್ತೂರು 
ಮಾಹಿತಿ- ದಿನೇಶ್ . ಕೆ. ಭಟ್,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೯-೦೮- ೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment