Friday, November 22, 2013

Medical problems and Divorce

           ವೈದ್ಯಕೀಯ ಸಮಸ್ಯೆಗಳು ಮತ್ತು ವಿವಾಹ ವಿಚ್ಛೇದನ 

ಅನೇಕ ವರ್ಷಗಳ ಹಿಂದೆ ಭಾರತದ ಹಿಂದೂ ಧರ್ಮೀಯರಲ್ಲಿ ಕಾರಣಾಂತರಗಳಿಂದ ಅಪರೂಪದಲ್ಲಿ ಸಂಭವಿಸುತ್ತಿದ್ದ ವಿವಾಹ ವಿಚ್ಛೇದನಗಳು ಸಂಬಂಧಿತ ಕುಟುಂಬದ ಘನತೆ,ಗೌರವ ಮತ್ತು ಪ್ರತಿಷ್ಠೆಗಳಿಗೆ ಕುತ್ತಾಗಿ ಪರಿಣಮಿಸುತ್ತಿತ್ತು. ಇದೇ ಕಾರಣದಿಂದಾಗಿ ಅನೇಕ ಕುಟುಂಬಗಳು ತಮ್ಮ ಕೌಟುಂಬಿಕ ಹಾಗೂ ದಾಂಪತ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದ ಸ್ಥಿತಿಯಲ್ಲೂ ಇತರರಿಗೆ ತಿಳಿಯದಂತೆ ಗುಟ್ಟಾಗಿರಿಸುತ್ತಿದ್ದರು. ದಾಂಪತ್ಯ ಜೀವನದಲ್ಲಿ ಎಳ್ಳು ಕಾಳಿನಷ್ಟು ಸಾಮರಸ್ಯವಿರದಿದ್ದರೂ, ಹೊರ ಜಗತ್ತಿಗೆ ಇದರ ಅರಿವಾಗದಂತೆ ವರ್ತಿಸುತ್ತಿದ್ದರು. ಇಷ್ಟು ಮಾತ್ರವಲ್ಲ, ತಾವು ಅನ್ಯೋನ್ಯವಾಗಿರುವಂತೆ ನಾಟಕವಾಡುವ ಮೂಲಕ ತಮ್ಮ ಕುಟುಂಬದ ಮರ್ಯಾದೆಯನ್ನು ಉಳಿಸಿಕೊಳ್ಳುತ್ತಿದ್ದರು!. 

ಆದರೆ ಇಂದು ಪಾಶ್ಚಾತ್ಯ ಹಾಗೂ ಆಧುನಿಕ ಜೀವನಶೈಲಿಗಳಿಗೆ ಮಾರುಹೋಗಿರುವ ಭಾರತೀಯರ ಆಚಾರ ವಿಚಾರಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯು ಅಚ್ಚಳಿಯದ ಪ್ರಭಾವನ್ನು ಬೀರಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ನಮಗಿಂದು ವಿವಾಹ ಮತ್ತು ವಿಚ್ಛೇದನಗಳು, ಜನನ ಮತ್ತು ಮರಣಗಳಷ್ಟೇ ಸ್ವಾಭಾವಿಕವಾಗಿ ತೋರುತ್ತಿದೆ. ಈ ಸಮಸ್ಯೆಯು ಭಾರತದ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎನ್ನುವುದು ಗಮನಾರ್ಹ. 

ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರ ನಡುವೆ ಉದ್ಭವಿಸುವ ಅನೇಕ ಕ್ಷುಲ್ಲಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಷ್ಟು ಸಹನೆ ನಮ್ಮಲ್ಲಿ ಇರದಿರುವುದೇ, ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಿಗೆ ಕಾರಣವೆಂದಲ್ಲಿ ತಪ್ಪೆನಿಸಲಾರದು. ಇದರೊಂದಿಗೆ ದಾಂಪತ್ಯ ಜೀವನಕ್ಕೆ ತೊಡಕಾಗಬಲ್ಲ ಶಾರೀರಿಕ-ಮಾನಸಿಕ ಸಮಸ್ಯೆಗಳಿದ್ದೂ ವಿವಾಹವಾಗುವ ಸ್ತ್ರೀ ಪುರುಷರು ವಿಚ್ಛೇದನಗಳ ಸಂಖ್ಯೆ ಇನ್ನಷ್ಟು ಹೆಚ್ಚಲು ನೇರವಾಗಿ ಕಾರಣರಾಗುತ್ತಾರೆ. ಬಹುತೇಕ ವೈವಾಹಿಕ ಸಮಸ್ಯೆ ಮತ್ತು ವಿಚ್ಛೇದನಗಳಿಗೆ ಪತಿ- ಪತ್ನಿಯರಲ್ಲಿ ಇರಬಹುದಾದ ವೈದ್ಯಕೀಯ- ಆರೋಗ್ಯದ ಸಮಸ್ಯೆಗಳೇ ಕಾರಣವೆಂದು ಅಧ್ಯಯನ- ವಿಶ್ಲೇಷಣೆಗಳಿಂದ ತಿಳಿದುಬಂದಿದೆ. ಈ ರೀತಿಯ ಸಮಸ್ಯೆಗಳಲ್ಲಿ ಕಾರಣಾಂತರಗಳಿಂದ ಬಾಧಿಸುವ ಲೈಂಗಿಕ ಸಮಸ್ಯೆಗಳು, ಕಾಮಾಸಕ್ತಿಯ ಮತ್ತು ಸ್ತ್ರೀ ಪುರುಷರ ಸಮಾಗಮದ ಬಗ್ಗೆ ಇರುವ ಅಜ್ಞಾನವೇ ಕಾರಣವಾಗಿರುತ್ತದೆ. 

ಅನೇಕ ವಿದ್ಯಾವಂತರಲ್ಲೂ ಕಂಡುಬರುವ ಇಂತಹ ತೊಂದರೆಗಳನ್ನು ಮುಚ್ಚಿಡುವುದಕ್ಕಿಂತಲೂ, ಪತಿಪತ್ನಿಯರು ಬಿಚ್ಚುಮನಸ್ಸಿನಿಂದ ತಮ್ಮ ಸಮಸ್ಯೆಗಳನ್ನು ವಿಶ್ಲೇಷಿಸಿ ಅವಶ್ಯವೆನಿಸಿದಲ್ಲಿ ತಮ್ಮ ಕುಟುಂಬ ವೈದ್ಯರ ಅಥವಾ ತಜ್ಞವೈದ್ಯರ  ಚಿಕಿತ್ಸೆ ಹಾಗೂ ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರೊಂದಿಗೆ ಆಪ್ತ ಸಂವಾದ ನಡೆಸುವುದರ  ಮೂಲಕ ಪರಿಹರಿಸಿಕೊಳ್ಳಬಹುದು. ಆದರೆ ಇಂದು ಪುಟ್ಟ ಸಮಸ್ಯೆಯನ್ನು ಬೆಟ್ಟದಂತೆ ಬೆಳೆಸಿ, ತಮ್ಮ ಸಮಸ್ಯೆಗಳಿಗೆ ಸಂಗಾತಿಯನ್ನೇ ಹೊಣೆಗಾರರೆಂದು ದೂಷಿಸಿ, ಕ್ಷಣಮಾತ್ರದಲ್ಲಿ ವಿಚ್ಛೇದನ ಪಡೆಯುವ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ವಿಷಾದನೀಯ. 

ವೈದ್ಯಕೀಯ ಕಾರಣಗಳು 

ವೈವಾಹಿಕ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ಯೌವ್ವನದಲ್ಲಿ, ಪತಿಪತ್ನಿಯರಿಬ್ಬರೂ ಲೈಂಗಿಕ ಸುಖವನ್ನು ಬಯಸುವುದು ಸ್ವಾಭಾವಿಕ. ಆದರೆ ಕೆಲವೊಂದು ಸಂದರ್ಭಗಳಲ್ಲಿ ತನ್ನ ಲೈಂಗಿಕ ಅಜ್ಞಾನ ಹಾಗೂ ಕಾಮಾಸಕ್ತಿಯ ಕೊರತೆಯಿಂದಾಗಿ, ಸಂಗಾತಿ ಅಪೇಕ್ಷಿಸುವ ಶಾರೀರಿಕ ಸುಖವನ್ನು ನೀಡದ ಪತಿ ಅಥವಾ ಪತ್ನಿಯರು ಜಿಗುಪ್ಸೆಗೊಂಡು ಪರಸ್ಪರ ದ್ವೇಷಿಸುವುದು ಹಾಗೂ ಅಂತಿಮವಾಗಿ ವಿಚ್ಛೇದನಕ್ಕೆ ಶರಣಾಗುವುದುಂಟು. 

ಅಂತೆಯೇ ಪುರುಷರಲ್ಲಿ ಅನುವಂಶಿಕವಾಗಿ ಬಂದಿರಬಹುದಾದ ಮಧುಮೇಹ,ಅಧಿಕ ರಕ್ತದೊತ್ತಡ, ಅಪಸ್ಮಾರ ಮತ್ತು ಕೆಲವಿಧದ ಮಾನಸಿಕ ರೋಗಗಳು ಯೌವವನದಲ್ಲೇ ಉದ್ಭವಿಸಿದಲ್ಲಿ, ಇವುಗಳ ಚಿಕಿತ್ಸೆಗಾಗಿ ಬಳಸುವ ಔಷದಗಳ ದೀರ್ಘಕಾಲೀನ ಸೇವನೆ ಹಾಗೂ ಇವುಗಳ ಅಡ್ಡ ಪರಿಣಾಮಗಳು ಪುರುಷರಲ್ಲಿ ನಿಮಿರುದೌರ್ಬಲ್ಯಕ್ಕೆ ಕಾರಣವೆನಿಸುವುದುಂಟು. ಈ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದ ವ್ಯಕ್ತಿಗಳು ತಮ್ಮ ಸಮಸ್ಯೆಯನ್ನು ವೈದ್ಯರ ಬಾಲಿ ಚರ್ಚಿಸದೇ, ತಮ್ಮ ದಾಂಪತ್ಯ ಜೀವನದಲ್ಲಿ ಅನಾವಶ್ಯಕ ವಿರಸ ಹಾಗೂ ಕೆಲವೊಮ್ಮೆ ವಿಚ್ಛೇದನಗಳಿಗೂ ಕಾರಣವೆನಿಸುತ್ತಾರೆ. 

ಅಪರೂಪದಲ್ಲಿ ಕೆಲವು ಸ್ತ್ರೀ ಪುರುಷರ ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ಹಾಗೂ ಕೆಲವರಲ್ಲಿ ಜನ್ಮದತ್ತವಾಗಿ ಪ್ರಜನನಾಂಗಗಳ ವಿಕೃತಿಗಳು ಕಂಡುಬರುತ್ತವೆ. ಅದೇ ರೀತಿಯಲ್ಲಿ ಸ್ತ್ರೀಯರಲ್ಲಿ ಪುರುಷರ ಮತ್ತು ಪುರುಷರಲ್ಲಿ ಸ್ತ್ರೀಯರ ಶಾರೀರಿಕ ಗುಣಲಕ್ಷಣಗಳು ಉದ್ಭವಿಸುತ್ತವೆ. ಇನ್ನು ಕೆಲ ಪುರುಷರಲ್ಲಿ ಜನ್ಮದತ್ತ ನಪುಂಸಕತ್ವವಿದ್ದು, ಮಾತಾಪಿತರಲ್ಲಿ ಹೇಳಲಾಗದೇ ವಿವಾಹವಾಗುವುದುಂಟು. ಬಹುತೇಕ ಗಂಡಸರಲ್ಲಿ ತಮ್ಮ ಪುರುಷತ್ವದ ಬಗ್ಗೆ ಇರುವ ಅಂಧಾಭಿಮಾನವೇ ಇದಕ್ಕೆ ಕಾರಣವೆನ್ನಬಹುದು. ಆದರೆ ಇಂತಹ ಪೌರುಷಹೀನ ವ್ಯಕ್ತಿಗಳು ತಮ್ಮ ಸಾಮಾಜಿಕ ಪ್ರತಿಷ್ಠೆಯ ಸಲುವಾಗಿ ತಮ್ಮ ಸಮಸ್ಯೆಯನ್ನು ಗುಟ್ಟಾಗಿ ಇರಿಸಿದರೂ, ಅನಿವಾರ್ಯವಾಗಿ ವಿವಾಹವಾದಲ್ಲಿ ಈ ಗುಟ್ಟು ರಟ್ಟಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂತಹ ವಿವಾಹಗಳು ವಿಚ್ಛೇದನದಲ್ಲಿ ಪರ್ಯವಸಾನವಾಗಲು, ಇಂತಹವರ ಪತ್ನಿಯರು ನ್ಯಾಯಾಲಯದ ಮೊರೆಹೊಗಬೇಕಾವುದು ಹಾಗೂ ನ್ಯಾಯಾಲಯದಲ್ಲಿ ತನ್ನ ಪತಿಯ ಸಮಸ್ಯೆಯನ್ನು ಬಹಿರಂಗಗೊಳಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಹಾಗೂ ಶಾಶ್ವತ ಪರಿಹಾರವಿಲ್ಲದ ಶಾರೀರಿಕ ಸಂಸ್ಯೆಗಳಿರುವ ವ್ಯಕ್ತಿಗಳು ವಿವಾಹವಾಗದಿರುವುದೇ ಲೇಸು!. 

ಕೆಲವೊಂದು ದಂಪತಿಗಳಲ್ಲಿ ಕಂಡುಬರುವ ವಿಶಿಷ್ಟ ರೀತಿಯ ಲೈಂಗಿಕ ಸಮಸ್ಯೆಗಳಿಗೆ ಶಾರೀರಿಕ ತೊಂದರೆಗಳಿಗಿಂತ ಮಾನಸಿಕ ಸಮಸ್ಯೆಗಳೇ ಕಾರಣವಾಗಿರುತ್ತವೆ. ಇವುಗಳಲ್ಲಿ ವಿರುದ್ಧ ಲಿಂಗಿಗಳ ಬಗ್ಗೆ ದ್ವೇಷ, ಅನಾಸಕ್ತಿ, ಪ್ರಜನನಾಂಗಗಳ ಹಾಗೂ ಸುರತ ಕ್ರಿಯೆಯ ಬಗ್ಗೆ ಅಸಹ್ಯಕರ ಭಾವನೆಗಳು,ಹದಿಹರೆಯದಲ್ಲಿ ವಿಫಲವಾದ ಪ್ರೇಮ ಪ್ರಕರಣಗಳು ಪ್ರಮುಖವಾಗಿವೆ. ಅದೇ ರೀತಿಯಲ್ಲಿ ಮಾನಸಿಕ ರೋಗಗಳಾದ ಉದ್ವೇಗ, ಖಿನ್ನತೆ, ಮಾನಸಿಕ ಒತ್ತಡ ಮತ್ತು ಸಿಜೋಫ್ರೆನಿಯಾ ಗಳಂತಹ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಕಂಡುಬರುವ ದಾಂಪತ್ಯ ಸಮಸ್ಯೆಗಳು ಶಾಶ್ವತ ಪರಿಹಾರವಿಲ್ಲದೇ ವಿಚ್ಛೇದನದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. 

ಬಹುತೇಕ ಮಾನಸಿಕ ಸಮಸ್ಯೆ ಹಾಗೂ ವ್ಯಾಧಿಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದರೂ, ರೋಗಿಗಳ ಹಾಗೂ ಕುಟುಂಬದವರ ಅಸಹಕಾರಗಳಿಂದಾಗಿ ನಿಷ್ಫಲವೆನಿಸುತ್ತವೆ. ಆದರೆ ಸಿಜೋಫ್ರೆನಿಯಾ ದಂತಹ ಗಂಭೀರ ಮಾನಸಿಕ ವ್ಯಾಧಿಗಳು ಅನುವಂಶಿಕವಾಗಿ ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ಇರುವುದರಿಂದ ಹಾಗೂ ಈ ವ್ಯಾಧಿಗೆ ಶಾಶ್ವತ ಪರಿಹಾರವಿಲ್ಲದ್ದರಿಂದ ಇಂತಹ ವ್ಯಕ್ತಿಗಳು ವಿವಾಹವಾಗಲೇಬಾರದು. ಸಣ್ಣಪುಟ್ಟ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದ್ದು, ಚಿಕಿತ್ಸೆಯಿಂದ ಗುಣಮುಖರಾದ ವ್ಯಕ್ತಿಗಳು ವಿವಾಹವಾಗಬಹುದು. ಆದರೆ ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಸಂದೇಹದ ದೃಷ್ಟಿಯಿಂದಲೇ ನೋಡುವ ಕಾರಣದಿಂದಾಗಿ, ಇವರ ವರ್ತನೆ, ನಡವಳಿಕೆಗಳಲ್ಲಿ ಕಿಂಚಿತ್ ವ್ಯತ್ಯಯವಾದರೂ ದುರಂತ ಸಂಭವಿಸಬಹುದು. ಅದರಲ್ಲೂ ಜರೆಯುವ ಸ್ವಭಾವದ ಪತಿ ಅಥವಾ ಪತ್ನಿಯರಿಂದಾಗಿ ರೋಗಿಯ ಮಾನಸಿಕ ಸ್ಥಿತಿಗತಿಗಳಲ್ಲಿ ಏರುಪೇರಾಗಿ ವ್ಯಾಧಿ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಇವೆಲ್ಲಾ ವ್ಯಾಧಿಗಳ ಚಿಕಿತ್ಸೆಯಲ್ಲಿ ಬಳಸುವ ಔಷದಗಳ ಪ್ರಭಾವದಿಂದಾಗಿ ಇವರಲ್ಲಿ ಕಾಮಾಸಕ್ತಿಯ ಕೊರತೆ, ನಿಮಿರುದೌರ್ಬಲ್ಯ ಹಾಗೂ ಅನ್ಯ ವಿಧದ ಲೈಂಗಿಕ ಸಮಸ್ಯೆಗಳು ಉದ್ಭವಿಸುವುದುಂಟು. 

ಶಾರೀರಿಕ ಕಾರಣಗಳಿಂದ ತಲೆದೋರುವ ಲೈಂಗಿಕ ಸಮಸ್ಯೆಗಳಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಅತಿಯಾದ ಕೊಲೆಸ್ಟರಾಲ್ , ಅಧಿಕತೂಕ, ಅತಿಬೊಜ್ಜು, ಅನಿಯಂತ್ರಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಬೆನ್ನುಹುರಿ ಮತ್ತು ಮರ್ಮಾಂಗಗಳಿಗೆ  ಸಂಬಂಧಿಸಿದ ಆಘಾತಗಳು, ಅತಿ ಮದ್ಯಪಾನ ಮತ್ತು ಅತಿ ಧೂಮಪಾನ ಇತ್ಯಾದಿಗಳು ಕಾರಣವಾಗಿರುತ್ತವೆ. ಇವೆಲ್ಲಾ ಸಮಸ್ಯೆಗಳನ್ನು ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಸರಿಪಡಿಸಬಹುದು. 

ಆದರೆ ಅತಿ ಹೆಚ್ಚು ಸಂಖ್ಯೆಯ ದಂಪತಿಗಳು ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸುವುದಿಲ್ಲ. ಅಂತೆಯೇ ತಮ್ಮ ನಂಬಿಗಸ್ತ ವೈದ್ಯರ ಬಳಿ ಸಮಾಲೋಚನೆಯನ್ನೂ ನಡೆಸಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ವೈಯುಕ್ತಿಕ ಹಾಗೂ ಕುಟುಂಬದ ಘನತೆ ಗೌರವಗಳು ಬೀದಿಪಾಲಾಗದಿರಲಿ ಎನ್ನುವ ಕಾರಣದಿಂದ ಮುಚ್ಚಿಟ್ಟ ಇಂತಹ ಸಮಸ್ಯೆಗಳು ಅಂತಿಮವಾಗಿ ಸೆರಗಿನಲ್ಲಿ ಕಟ್ಟಿಟ್ಟ ಕೆಂಡದಂತೆ ಹೊರಬೀಳುವುದರಲ್ಲಿ ಸಂದೇಹವಿಲ್ಲ. ಇಂತಹ ಸಮಸ್ಯೆಗಳಿಗೆ ವಿವಾಹ ವಿಚ್ಛೇದನವು ಖಚಿತವಾಗಿಯೂ ನಿರ್ದಿಷ್ಟ ಪರಿಹಾರವಲ್ಲ. ಈ ರೀತಿಯ ಕ್ಷುಲ್ಲಕ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳುವುದರಿಂದ ದಾಂಪತ್ಯ ಜೀವನವು ಸುಖಮಯವಾಗುವುದು ಸಾಧ್ಯವಿದೆ. 

ಇವೆಲ್ಲಾ ಕಾರಣಗಳಿಂದಾಗಿ ವಿವಾಹಯೋಗ್ಯ ಯುವಕ ಯುವತಿಯರು ಪರಸ್ಪರ ಭೇಟಿಯಾಗಿ, ತಮ್ಮ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಿದ ಬಳಿಕ ವಿವಾಹದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಹಿತಕರ. ಶಾಶ್ವತ ಪರಿಹಾರವಿಲ್ಲದ ಹಾಗೂ ದಾಂಪತ್ಯ ಜೀವನಕ್ಕೆ ತೊಡಕಾಗಬಲ್ಲ ಶಾರೀರಿಕ- ಮಾನಸಿಕ ಸಮಸ್ಯೆಗಳಿಂದ ಬಳಲುವವರು ವಿವಾಹವಾಗದಿರುವುದು ಇನ್ನಷ್ಟು ಹಿತಕರವೆನಿಸುವುದು. ಮಾತ್ರವಲ್ಲ, ಇಂತಹ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ವಿಚ್ಛೇದನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. 

ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತಲೂ ಉತ್ತಮ ಎನ್ನುವ ಮಾತಿನಂತೆಯೇ, ಸಮಸ್ಯೆಗಳನ್ನು ಸೃಷ್ಟಿಸದಿರುವುದು ಸಮಸ್ಯೆಗಳ ಪರಿಹಾರಕ್ಕಿಂತ ಉತ್ತಮ ಎನ್ನುವುದನ್ನು ನೀವೂ ಒಪ್ಪುವುದರಲ್ಲಿ ಸಂದೇಹವಿಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೯-೦೭-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



No comments:

Post a Comment