Thursday, October 17, 2013

Article no.75- Anemia


                                  ರಕ್ತಹೀನತೆಯಿಂದ ರಕ್ಷಿಸಿಕೊಳ್ಳಿ

ಹೊಟ್ಟೆತುಂಬಾ ಉಂಡರೆ ಸಾಲದು. ನೀವು ಸೇವಿಸುವ ಆಹಾರವು ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿರಬೇಕು. ಆಗ ಮಾತ್ರ ರಕ್ತಹೀನತೆಯಿಂದ ರಕ್ಷಿಸಿಕೊಳ್ಳುವುದು ಸುಲಭ ಸಾಧ್ಯವೆನಿಸುವುದು. 
-----------                --------------              --------------------                      ---------------------                       
  ಕೇಶವ ಭಟ್ಟರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೂಸಪ್ಪನಿಗೆ ೩೦ ರ ಹರೆಯ. ದಿನದಲ್ಲಿ ಎಂಟು ಗಂಟೆಗಳ ಕಾಲ ಬಿಸಿಲು- ಮಳೆಯೆನ್ನದೇ ದುಡಿಯುತ್ತಿದ್ದ ಆತನಿಗೆ, ಅನಾರೋಗ್ಯವೆಂದರೆ ಏನೆಂದೇ ತಿಳಿದಿರಲಿಲ್ಲ. 

ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ಕಿಂಚಿತ್ ಶ್ರಮದ ಕೆಲಸ ಮಾಡಿದೊಡನೆ ಏದುಬ್ಬಸ, ಅತಿಆಯಾಸ, ಎದೆ ಢವಗುಟ್ಟುವುದು ಮತ್ತು ಬವಲಿಕೆಗಳು ಆರಂಭವಾಗಿದ್ದವು. ಇದಕ್ಕೆ ಕಾರಣವೇನೆಂದು ಆತನಿಗೆ ಅರಿತಿರಲಿಲ್ಲ. ಆದರೂ ಇದನ್ನು ಅರಿತುಕೊಳ್ಳಲು ವೈದ್ಯರ ಬಳಿಗೂ ಹೋಗಿರಲಿಲ್ಲ!. 

ಅದೊಂದು ದಿನ ಧಣಿಗಳ ಅಂಗಳದಲ್ಲಿ ಕಟ್ಟಿಗೆ ಒಡೆಯುತ್ತಿದ್ದ ಕೂಸಪ್ಪನು, ಆಕಸ್ಮಿಕವಾಗಿ ಕುಸಿದು ಬಿದ್ದು ಪ್ರಜ್ನಾಹೀನನಾಗಿದ್ದನು. ತಕ್ಷಣ ಆತನ ಮುಖಕ್ಕೆ ನೀರು ಚಿಮುಕಿಸಿ,ಪ್ರಥಮ ಚಿಕಿತ್ಸೆ ನೀಡಿದ ಕೇಶವ ಭಟ್ಟರು, ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ವೈದ್ಯರಿಗೆ, ಕೂಸಪ್ಪನ ಸಮಸ್ಯೆಗೆ ತೀವ್ರ ರಕ್ತಹೀನತೆಯೇ ಕಾರಣವೆಂದು ತಿಳಿದುಬಂದಿತ್ತು. ದಿನದಲ್ಲಿ ಮೂರು ಬಾರಿ ಅನ್ನ - ಗಂಜಿಗಳನ್ನು ಪೊಗದಸ್ತಾಗಿ ಉಂಡು ತೇಗುವ ತನಗೆ, ರಕ್ತಹೀನತೆ ಬಂದಿರುವುದಾದರೂ ಹೇಗೆಂದು ಆತನಿಗೆ ಅರ್ಥವಾಗಲೇ ಇಲ್ಲ!. 

ರಕ್ತಹೀನತೆ ಎಂದರೇನು?

ಮನುಷ್ಯನ ರಕ್ತದಲ್ಲಿರುವ ಹೆಮೊಗ್ಲೋಬಿನ್ ನ ಪ್ರಮಾಣವು ಕಾರಣಾಂತರಗಳಿಂದ ನಿಗದಿತ ಮಟ್ಟಕ್ಕಿಂತ ಕಡಿಮೆಯಾಗಿರುವ ಸ್ಥಿತಿಯನ್ನು ರಕ್ತಹೀನತೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಅನೀಮಿಯಾ ಎನ್ನುತ್ತಾರೆ. ಅನೀಮಿಯಾದಲ್ಲಿ ಹಲವು ವಿಧಗಳಿದ್ದು , ಇವುಗಳಿಗೆ ವಿಭಿನ್ನ ಕಾರಣಗಳೂ ಇವೆ. ಇವುಗಳ ವಿವರಗಳು ಇಂತಿವೆ. ೧. ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆ. ೨. ಕರುಳಿನಲ್ಲಿ ಸತ್ವ ಮತ್ತು ಪೋಷಕಾಂಶಗಳ ಹೀರುವಿಕೆಯ ತೊಂದರೆಗಳು. ೩. ಶರೀರದ ಕಬ್ಬಿಣದ ಸತ್ವಗಳ ಬೇಡಿಕೆಯ ಪ್ರಮಾಣದಲ್ಲಿ ಹೆಚ್ಚಳ. ೪. ತೀವ್ರ ಅಥವಾ ದೀರ್ಘಕಾಲೀನ ರಕ್ತಸ್ರಾವದ ಸಮಸ್ಯೆಗಳು ಮತ್ತು ಕರುಳಿನ ವ್ಯಾಧಿಗಳು. ೫. ಅಸ್ಥಿ ಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಕುಂಠಿತವಾಗುವುದು. ೬. ಕಾರಣಾಂತರಗಳಿಂದ ಕೆಂಪು ರಕ್ತಕಣಗಳು ಅತಿಯಾಗಿ ನಾಶವಾಗುವುದು. 

ಜನಸಾಮಾನ್ಯರಲ್ಲಿ ರಕ್ತಹೀನತೆ ಉದ್ಭವಿಸಲು ಈ ಮೇಲಿನ ಕಾರಣಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು- ಮೂರು ಅಥವಾ ಎಲ್ಲಾ ಅಂಶಗಳೂ ಕಾರಣವೆನಿಸಬಹುದು. 

ರಕ್ತಹೀನತೆಯಲ್ಲಿ ಹಲವಾರು ವೈವಿಧ್ಯಗಲಿದ್ದರೂ, ಇವುಗಳಲ್ಲಿ ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆ ಪ್ರಮುಖವಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ಸಮಸ್ಯೆಗೆ, ಬಡತನ ಮತ್ತು ದಾರಿದ್ರ್ಯಗಳೇ ಕಾರಣವೆನ್ನಬಹುದು. 

ರಕ್ತಹೀನತೆಯ ಲಕ್ಷಣಗಳು 

ಒಂದಿಷ್ಟು ಶ್ರಮದ ಕೆಲಸ ಮಾಡಿದೊಡನೆ ಏದುಬ್ಬಸ, ನಿಶ್ಶಕ್ತಿ, ಅತಿ ಆಯಾಸ, ತಲೆನೋವು, ನಿದ್ರಾಹೀನತೆ, ದೃಷ್ಟಿಮಾಂದ್ಯ, ವಾಕರಿಕೆ, ವಾಂತಿ, ಎದೆ ಢವಗುಟ್ಟಿದಂತೆ ಆಗುವುದು, ನಾಡಿ ಮತ್ತು ಹೃದಯ ಬಡಿತಗಳ ವೇಗ ತೀವ್ರಗೊಳ್ಳುವುದು, ಕೈ- ಕಾಲಿನ ಬೆರಳುಗಳಲ್ಲಿ ಸೂಜಿಯಿಂದ ಚುಚ್ಚಿದಂತಹ ಸಂವೇದನೆ, ಅಂಗೈ,ಅಂಗಾಲು, ಮುಖ, ತುಟಿ ಮತ್ತು ಕಣ್ಣುಗಳು ಬಿಳುಚಿಕೊಳ್ಳುವುದೇ ಮುಂತಾದ ಲಕ್ಷಣಗಳು ರಕ್ತಹೀನತೆಯಿಂದ ಬಳಲುವ ವ್ಯಕ್ತಿಗಳಲ್ಲಿ ಕಂಡುಬರುತ್ತವೆ. ತೀವ್ರ ಸ್ವರೂಪದ ರಕ್ತಹೀನತೆಯಲ್ಲಿ ನಾಲಗೆಯ ಉರಿಯೂತ, ಬಾಯಿಹುಣ್ಣುಗಳು, ಆಹಾರವನ್ನು ನುಂಗಲು ಹಾಗೂ ಮಾತನಾಡಲು ಕಷ್ಟವೆನಿಸುವುದು, ಪ್ಲೀಹ (ಸ್ಪ್ಲೀನ್) ವೃದ್ಧಿ, ಉಗುರುಗಳು ಚಮಚದ ಆಕಾರವನ್ನು ತಳೆಯುವುದು ಇತ್ಯಾದಿಗಳೊಂದಿಗೆ, ವಯೋವ್ರುದ್ಧರಲ್ಲಿ ಎದೆ ಮತ್ತು ಕಾಲಿನ ಮಾಂಸ ಪೇಶಿಗಳಲ್ಲಿ ನೋವು, ಪಾದಗಳಲ್ಲಿ ಬಾವು ಮತ್ತು ಹೃದಯ ವೈಫಲ್ಯಗಳಂತಹ ಲಕ್ಷಣಗಳು ಕಂಡುಬರುತ್ತವೆ. 

ಇಂತಹ ಸಮಸ್ಯೆಗಳಿಂದ ಬಳಲುವ ರೋಗಿಗಳ ರಕ್ತದಲ್ಲಿನ ಹೆಮೊಗ್ಲೋಬಿನ್ ನ ಪ್ರಮಾಣವು ಕಡಿಮೆಯಾಗಿರುವುದನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಸಾಮಾನ್ಯವಾಗಿ ಆರೋಗ್ಯವಂತ ಪುರುಷರಲ್ಲಿ ಹೆಮೊಗ್ಲೋಬಿನ್ ನ ಪ್ರಮಾಣವು ೧೩ ರಿಂದ ೧೮ ಗ್ರಾಂ/ ಪ್ರತಿ ೧೦೦ ಮಿ. ಲಿ , ಸ್ತ್ರೀಯರಲ್ಲಿ ೧೧ ರಿಂದ ೧೬ ಮತ್ತು ಮಕ್ಕಳಲ್ಲಿ ೧೧ ರಿಂದ ೧೬.೫ ಇರುವುದು. ಆದರೆ ತೀವ್ರ ರಕ್ತಹೀನತೆ ಇರುವವರಲ್ಲಿ ಈ ಪ್ರಮಾಣವು ೪ ರಿಂದ ೮ ಗ್ರಾಂ ಗಳಿಗೆ ಇಳಿಯುವುದು ಅಪರೂಪವೇನಲ್ಲ. 

ಪೋಷಕಾಂಶಗಳ ಕೊರತೆ 

ಮಾನವ ಶರೀರದ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರ ಮತ್ತು ನೀರು ಪ್ರಮುಖವಾಗಿವೆ. ಶರೀರದ ಪಾಲನೆ, ಪೋಷಣೆ ಹಾಗೂ ವಿವಿಧ ಜೈವಿಕ ಪ್ರಕ್ರಿಯೆಗಳಿಗೆ ಆಹಾರ ಅತ್ಯವಶ್ಯಕವೆನಿಸುವುದು. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ಉತ್ತಮ ಗುಣಮಟ್ಟದ ಸಮತೋಲಿತ ಆಹಾರವನ್ನು ಸೇವಿಸುವುದರಿಂದ, ನಮ್ಮ ಆರೋಗ್ಯದೊಂದಿಗೆ ರೋಗನಿರೋಧಕ ಶಕ್ತಿಯೂ ಹೆಚ್ಚುವುದು. ಅದೇ ರೀತಿಯಲ್ಲಿ ಇದರಲ್ಲಿ ವ್ಯತ್ಯಯವಾದಾಗ, ನಿಸ್ಸಂದೇಹವಾಗಿ ಅನಾರೋಗ್ಯ ಬಾಧಿಸುವುದು. 

ನಾವು ದಿನನಿತ್ಯ ಸೇವಿಸುವ ವೈವಿಧ್ಯಮಯ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು,ಜೀವಸತ್ವಗಳು, ಖನಿಜಗಳು, ಲವಣಗಳು, ನಾರುಪದಾರ್ಥ ಮತ್ತು ನೀರು ಎಂದು ವಿನ್ಗದಿಸಬಹುದಾದ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಯಾವುದಾದರೊಂದು ಪೋಷಕಾಂಶದ ಕೊರತೆ ಉಂಟಾದಾಗ, ಅದಕ್ಕೆ ಸಂಬಂಧಿಸಿದ ಕಾಯಿಲೆ ಪೀಡಿಸುವ ಸಾಧ್ಯತೆ ಇರುತ್ತದೆ. 

ಅವಿದ್ಯಾವಂತ ಕೂಸಪ್ಪನು ದಿನದಲ್ಲಿ ಮೂರು ಹೊತ್ತು ಅನ್ನವನ್ನೇ ಉಣ್ಣುತ್ತಿದ್ದುದರಿಂದ, ಕೇವಲ ಅಕ್ಕಿಯಲ್ಲಿರುವ ಪೋಷಕಾಂಶಗಳು ಮಾತ್ರ ಆತನ ಶರೀರಕ್ಕೆ ಲಭ್ಯವಾಗುತ್ತಿದ್ದವು. ರಕ್ತವರ್ಧಕ ಪೋಷಕಾಂಶಗಳ ಕೊರತೆಯಿಂದಾಗಿಯೇ ಆತನಿಗೆ ತೀವ್ರ ರಕ್ತಹೀನತೆ ಪ್ರಾರಂಭವಾಗಿತ್ತು. ಭಾರತದ ಬಹುತೇಕ ಜನರಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಬಹುದು. ಆದರೆ ಚಿಕಿತ್ಸೆ ಮುಗಿದ ಬಳಿಕ ಸಮತೋಲಿತ ಆಹಾರವನ್ನು ಕ್ರಮಬದ್ಧವಾಗಿ ದಿನನಿತ್ಯ ಸೇವಿಸದಿದ್ದಲ್ಲಿ "ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ" ಎನ್ನುವಂತೆ, ಸಮಸ್ಯೆ ಮತ್ತೆ ಮರುಕಳಿಸುವುದರಲ್ಲಿ ಸಂದೇಹವಿಲ್ಲ!. 

ನಿವಾರಣೆ 

ದಿನನಿತ್ಯ ಸೇವಿಸುವ ಆಹಾರದಲ್ಲಿ ವಿವಿಧ ಧವಸ- ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ, ಎಣ್ಣೆ, ಮೊಟ್ಟೆ,ಮೀನು, ಮಾಂಸ ಇತ್ಯಾದಿಗಳನ್ನು ಹಿತಮಿತವಾಗಿ ಬಳಸುವುದು ಅವಶ್ಯ. ಜೊತೆಗೆ ದಿನದಲ್ಲಿ ಕನಿಷ್ಠ ಎರಡರಿಂದ ಮೂರು ಲೀಟರ್ ಶುದ್ಧ ನೀರನ್ನು ಕುಡಿಯುವುದು ಅಷ್ಟೇ ಅವಶ್ಯ. 

ಕಬ್ಬಿಣದ ಸತ್ವ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಬಲ್ಲ ರಕ್ತಹೀನತೆಯಿಂದ ರಕ್ಷಿಸಿಕೊಳ್ಳಲು ಫೋಲಿಕ್ ಆಸಿಡ್, ಜೀವಸತ್ವ ಬಿ-೧೨ ಮತ್ತು ಕಬ್ಬಿಣದ ಸತ್ವಗಳಿರುವ ಈ ಕೆಳಗಿನ ಆಹಾರಗಳನ್ನು ಸೇವಿಸಿ. ಜೊತೆಗೆ ವರ್ಷದಲ್ಲಿ ಎರಡುಬಾರಿ ಜಂತು ಹುಳಗಳ ನಿವಾರಣೆಗಾಗಿ ತಪ್ಪದೆ ಔಷದ ಸೇವಿಸಿ. 

ಹಸಿರು ಸೊಪ್ಪು, ತರಕಾರಿಗಳು, ಮೊಳಕೆ ಬರಿಸಿದ ಧಾನ್ಯಗಳು, ಮೊಟ್ಟೆ ಮತ್ತು ಲಿವರ್ ಗಳಲ್ಲಿ (ಉದಾ- ಕುರಿಯ ಲಿವರ್) ಫೋಲಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿದೆ. ಹಾಲು ಮತ್ತು ಅದರ ಉತ್ಪನ್ನಗಳು, ಮಾಂಸ, ಜೀವಸತ್ವ ಬಿ-೧೨ ಹಾಗೂ ಸೊಪ್ಪು,ತರಕಾರಿಗಳು, ಧಾನ್ಯಗಳು, ನೆಲಗಡಲೆ, ಸಜ್ಜೆ, ರಾಗಿ ಮತ್ತು ಮೊಟ್ಟೆಗಳಲ್ಲಿ ಕಬ್ಬಿಣದ ಸತ್ವಗಳು ಯಥೇಚ್ಚವಾಗಿ ಲಭ್ಯವಿದೆ. 

ಈ ರೀತಿಯಲ್ಲಿ ಸಮೃದ್ಧ ಸಮತೋಲಿತ ಆಹಾರ ಸೇವನೆಯೊಂದಿಗೆ ನಿಗದಿತ ಸಮಯದಲ್ಲಿ ನಿಯಮಿತವಾಗಿ ನಡಿಗೆ, ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು ರಕ್ತಹೀನತೆಯನ್ನು ದೂರವಿರಿಸಲು ಉಪಯುಕ್ತವೆನಿಸುವುದು. 

ಚಿಕಿತ್ಸೆ 

ನಿರ್ದಿಷ್ಟ ಹಾಗೂ ನಿಖರವಾದ ರಕ್ತ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳ ಮೂಲಕ ವಿವಿಧ ರೀತಿಯ ರಕ್ತಹೀನತೆಗಳನ್ನು ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನಿಗದಿತ ಅವಧಿಗೆ ಪಡೆದುಕೊಳ್ಳಲೇ ಬೇಕು. ಇದರೊಂದಿಗೆ ರಕ್ತಹೀನತೆಗೆ ಕಾರಣವಾಗಿರುವ ದೋಷಪೂರಿತ ಆಹಾರ ಸೇವನಾಕ್ರಮವನ್ನು ಸರಿಪಡಿಸಬೇಕು. ರಕ್ತಸ್ರಾವಕ್ಕೆ ಕಾರಣವಾಗಿರಬಹುದಾದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು, ಮೂಲವ್ಯಾಧಿ, ಕ್ಷಯ, ಜಂತು ಹುಳಗಳ ಬಾಧೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಸಮರ್ಪಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. 

ಆದರೆ ತೀವ್ರ ರಕ್ತಸ್ರಾವದಿಂದ ಪ್ರಾಣಾಪಾಯದ  ಸ್ಥಿತಿಯಲ್ಲಿರುವ ರೋಗಿಗಳಿಗೆ, ಅವಶ್ಯಕ ಪ್ರಮಾಣದ ರಕ್ತವನ್ನೇ ತಕ್ಷಣ ನೀಡಬೇಕಾಗುವುದು. ಸೌಮ್ಯ ರೂಪದ ಸಮಸ್ಯೆಗಲಿದ್ದಲ್ಲಿ ಕಬ್ಬಿಣದ ಸತ್ವ ಮತ್ತು ಜೀವಸತ್ವಗಳ ಮಾತ್ರೆ, ಕ್ಯಾಪ್ಸೂಲ್ ಅಥವಾ ಸಿರಪ್ ಗಳನ್ನೂ ನೀಡಬಹುದು. ಅಪರೂಪದಲ್ಲಿ ಕೆಲ ರೋಗಿಗಳಿಗೆ ಇಂಜೆಕ್ಷನ್ ನೀಡಬೇಕಾಗುವುದು. 

ಒಂಜಿ ಕುಪ್ಪಿ ಟಾನಿಕ್ ಕೊರ್ಲೆ!

ಊರಿಗೆ ಹೊಸದಾಗಿ ಬಂದ ಪ್ರತಿಯೊಬ್ಬ ವೈದ್ಯರಲ್ಲಿ ಸಣಕಲು ಶರೀರದ ತನ್ನ ಮೊಮ್ಮಗನನ್ನು ಕರೆದೊಯ್ಯುವುದು ಚಿನ್ನಮ್ಮನಿಗೆ ರೂಢಿಯಾಗಿತ್ತು. ಮಗುವನ್ನು ದಷ್ಟಪುಷ್ಟವಾಗಿಸಬಲ್ಲ "ಒಂಜಿ ಕುಪ್ಪಿ ಟಾನಿಕ್ ಕೊರ್ಲೆ' ( ಒಂದು ಬಾಟಲಿ ಟಾನಿಕ್ ಕೊಡಿ) ಎಂದು ಅಂಗಲಾಚುತ್ತಿದ್ದ ಚಿನ್ನಮ್ಮ, ವೈದ್ಯರ ಬಳಿ ಆತನನ್ನು ತಪಾಸಣೆ ಮಾಡಿಸುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಹಲವಾರು ವೈದ್ಯರು ನೀಡಿದ್ದ ಹತ್ತಾರು ಟಾನಿಕ್ ಗಳು ಅಪೇಕ್ಷಿತ ಪರಿಣಾಮವನ್ನು ನೀಡಿರಲಿಲ್ಲ. 

ಆದರೆ ಈ ಬಾರಿ ಚಿನ್ನಮ್ಮ ಭೇಟಿಯಾಗಿದ್ದ ವೈದ್ಯರು ಮಾತ್ರ ತಾನು ಯಾವುದೇ ರೋಗಿಯನ್ನು ಪರೀಕ್ಷಿಸದೆ ಔಷದವನ್ನೇ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದರು. ಒತ್ತಾಯಪೂರ್ವಕವಾಗಿ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಜಂತು ಹುಳಗಳ ಬಾಧೆ ಮತ್ತು ಪೋಷಕಾಂಶಗಳ ಕೊರತೆಯೇ ಮಗುವಿನ ಕೃಶಕಾಯಕ್ಕೆ ಕಾರಣವೆಂದು ತಿಳಿಯಿತು. ಚಿಕಿತ್ಸೆಯ ಪ್ರಾರಂಭಿಕ ಹಂತದಲ್ಲಿ ಜಂತು ಹುಳಗಳ ನಿವಾರಣೆಗೆ ಔಷದ ನೀಡಲಾಯಿತು. ಮರುದಿನ ಮಲದೊಂದಿಗೆ ಹೊರಬಿದ್ದ ಜಂತು ಹುಳಗಳನ್ನು ಕಂಡು ಚಿನ್ನಮ್ಮನಿಗೆ ದಿಗಿಲಾಗಿತ್ತು. 

ದ್ವಿತೀಯ ಹಂತದಲ್ಲಿ ವೈದ್ಯರು ನೀಡಿದ್ದ ಟಾನಿಕ್ ಮತ್ತು ಅವರೇ ಸೂಚಿಸಿದ ಸತ್ವಭರಿತ ಆಹಾರಗಳನ್ನು ಮೂರು ತಿಂಗಳ ಕಾಲ ನೀಡಲಾಯಿತು. ಹೊಸ ವೈದ್ಯರ ಚಿಕಿತ್ಸೆ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಲು ಯಶಸ್ವಿಯಾಗಿತ್ತು. ಏಕೆಂದರೆ ನಾಲ್ಕು ವರ್ಷದ ಮೊಮ್ಮಗನನ್ನು ಲೀಲಾಜಾಲವಾಗಿ ಸೊಂಟದಲ್ಲಿ ಹೊತ್ತು ತಿರುಗುತ್ತಿದ್ದ ಚಿನ್ನಮ್ಮನು, ಇದೀಗ ಗುಂಡುಗುಂಡಾಗಿದ್ದ ಆತನನ್ನು ಹೊರಲಾರದೇ ನಡೆಸಿಕೊಂಡು ಹೋಗುತ್ತಿರುವುದೇ ಇದಕ್ಕೆ ಸಾಕ್ಷಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ತರಂಗ ವಾರಪತ್ರಿಕೆಯ ದಿ. ೧೨-೦೮-೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 


No comments:

Post a Comment