Saturday, October 12, 2013

Mantrakke Maavinakaayi Uduruvude?




                             ಮಂತ್ರಕ್ಕೆ ಮಾವಿನಕಾಯಿ ಉದುರುವುದೇ?

ವಿವಿಧ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯದೇ, ಮಂತ್ರ-ತಂತ್ರ, ಬಲ್ಮೆ- ಜ್ಯೋತಿಷ್ಯ ಅಥವಾ ದೋಷಗಳ ಪರಿಹಾರಕ್ಕಾಗಿ ಪೂಜೆ- ಪುನಸ್ಕಾರ ಮತ್ತು ಹರಕೆ ಹೇಳಿಕೊಳ್ಳುವ ಸಂಪ್ರದಾಯವು ಭಾರತೀಯರಲ್ಲಿ ಇಂದಿಗೂ ಜೀವಂತವಾಗಿದೆ. ಅಜ್ಞಾನ, ತಪ್ಪುಕಲ್ಪನೆಗಳು ಮತ್ತು ಮೂಧನಂಬಿಕೆಗಳೇ ಇದಕ್ಕೆ ಮೂಲಕಾರಣಎನಿಸಿವೆ!. 
------------                ------------                               ------------------------------                           ------------------------      ------------

  ಕಾರಣಾಂತರಗಳಿಂದ ಉದ್ಭವಿಸಿ, ಕೆಲವೊಮ್ಮೆ ಉಲ್ಬಣಿಸಿ, ಅಪರೂಪದಲ್ಲಿ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲ ಕಾಯಿಲೆಗಳಿಗೆ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಒಳಿತು ಎಂದು ನಿಮಗೂ ತಿಳಿದಿರಬೇಕು. ಆದರೆ ಈ ವೈಜ್ಞಾನಿಕ ಯುಗದಲ್ಲೂ ಅನೇಕರು, ಅದರಲ್ಲೂ ವಿಶೇಷವಾಗಿ ಅನಕ್ಷರಸ್ತ ಗ್ರಾಮೀಣ ಜನರು ತಮ್ಮನ್ನು ಬಾಧಿಸುವ ವ್ಯಾಧಿಗಳನ್ನು ಗುಣಪಡಿಸಿಕೊಳ್ಳಲು ಅನ್ಯ ವಿಧಿ ವಿಧಾನಗಳಿಗೆ ಶರಣಾಗುತ್ತಾರೆ. ತತ್ಪರಿಣಾಮವಾಗಿ ಸಾಕಷ್ಟು ಕಷ್ಟನಷ್ಟಗಳೊಂದಿಗೆ, ಕೆಲವೊಮ್ಮ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. 

ಸೆಂಥಿಲನ ಸೆಳೆತಗಳು 

ಪುಟ್ಟ ಸೆಂಥಿಲನ ಮೊದಲ ಹುಟ್ಟುಹಬ್ಬದಂದು ರಾತ್ರಿ ಆಕಸ್ಮಿಕವಾಗಿ ಆರಂಭವಾಗಿದ್ದ ಜ್ವರವು ಕೆಲವೇ ತಾಸುಅಗಲಲ್ಲಿ ಉಲ್ಬಣಿಸಿ, ಅಪಸ್ಮಾರದಂತಹ ಸೆಳೆತಗಳು ಕಾಣಿಸಿಕೊಂಡಿದ್ದವು. ಗಾಬರಿಗೊಂಡಿದ್ದ ಆತನ ಮಾತಾಪಿತರು ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆಯನ್ನು ಕೊಡಿಸಿದ್ದರು. ಬಳಿಕ ಚೇತರಿಸಿಕೊಂಡ ಮಗುವು ನಿರಾಳವಾಗಿ ನಿದ್ರಿಸಿತ್ತು. ವೈದ್ಯರ ಅಭಿಪ್ರಾಯದಂತೆ ಗಂಟಲಿನ ಸೋಂಕಿನಿಂದ ಬಳಲುತ್ತಿದ್ದ ಸೆಂಥಿಲನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣದಿಂದಾಗಿ ಜ್ವರದ ತಾಪವು ತಲೆಗೇರಿ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾಗಿದ್ದವು. ಈ ರೀತಿಯ ಸಮಸ್ಯೆಗಳಿರುವ ಮಕ್ಕಳಿಗೆ ಜ್ವರ ಆರಂಭವಾಗುವ ಲಕ್ಷಣಗಳು ಕಾನಿಸಿದೊಡನೆ ಪಾರಾಸಿಟಮಾಲ್ ಔಷದವನ್ನು ಪ್ರತಿ ನಾಲ್ಕು ಗಂಟೆಗೆ ಒಂದುಬಾರಿಯಂತೆ ನೀಡುವುದರೊಂದಿಗೆ, ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಬೇಕಾಗುವುದು. ಜೊತೆಗೆ ಮುಂದೆ ಎಂದಾದರೂ ಜ್ವರ ಬಾಧಿಸಿದ ಸಂದರ್ಭದಲ್ಲಿ ಸೆಳೆತಗಳು ಪ್ರತ್ಯಕ್ಷವಾದಲ್ಲಿ, ಇದನ್ನು ತಡೆಗಟ್ಟಬಲ್ಲ ಔಷದಗಳನ್ನು ಮುಂಜಾಗರೂಕತಾ ಕ್ರಮವಾಗಿ ನೀಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಸೆಂಥಿಲನ ಗಂಟಲಿನ ಸೋಂಕನ್ನು ಗುಣಪಡಿಸಲು ಜೀವನಿರೋಧಕ ಔಷದ ಹಾಗೂ ಜ್ವರ ಮತ್ತು ಸೆಳೆತಗಳು ಬಾಧಿಸಿದಲ್ಲಿ ನೀಡಬೇಕಾದ ಔಷದಗಳನ್ನು ನೀಡಿದ್ದರು. 

ಮರುದಿನ ಬೆಳಿಗ್ಗೆ ಮೊಮ್ಮಗನ ಅನಾರೋಗ್ಯದ ವಿಚಾರವನ್ನು ಸೋಸೆಯಿಂದ ಅರಿತ ವೈದ್ಯನಾಥನ್, ತತ್ ಕ್ಷಣ ಮಗನ ಮನೆಗೆ ಧಾವಿಸಿದ್ದರು. ಜೊತೆಗೆ ಸೆಂಥಿಲನ ಸೆಳೆತಗಳಿಗೆ ಕಾಯಿಲೆ ಕಾರಣವಲ್ಲ ಎಂದು ತಾವಾಗಿ ನಿರ್ಧರಿಸಿದ್ದರು. ಈ ಸಮಸ್ಯೆಯ ಪರಿಹಾರಕ್ಕೆ ವೈದ್ಯರ ಚಿಕಿತ್ಸೆ ಸಲ್ಲದೆಂದು ಹೇಳಿ, ಮೊಮ್ಮಗನನ್ನು ಮಂತ್ರವಾದಿಯೊಬ್ಬನ ಬಳಿಗೆ ಕರೆದೊಯ್ದರು. 

ವೈದ್ಯನಾಥನ್ ರಿಂದ ಘಟನೆಯ ವಿವರಗಳನ್ನು ಅರಿತುಕೊಂಡ ಮಂತ್ರವಾದಿಯು ಕಣ್ಣುಮುಚ್ಚಿ ಸಾಕಷ್ಟು ಯೋಚಿಸಿದ ಬಳಿಕ, ಈ ಹಿಂದೆ ನಿಮ್ಮ ಕುಟುಂಬದಲ್ಲಿ ಅಪಮೃತ್ಯುವಿಗೆ ಈಡಾಗಿದ್ದ ಮಗುವಿನ ಪ್ರೆತಾತ್ಮದ ಪೀಡೆಯೇ ಸೆಂಥಿಲನ ಸೆಳೆತಗಳಿಗೆ ಕಾರಣವೆಂದಿದ್ದನು. ಬಳಿಕ ಸೆಂಥಿಲನ ಸೊಂಟಕ್ಕೊಂದು ತಾಯಿತ, ಕುತ್ತಿಗೆಗೆ ಮಂತ್ರಿಸಿದ ನೂಲೊಂದನ್ನು ಕಟ್ಟಿ, ಒಂದಿಷ್ಟು ಭಸ್ಮವನ್ನು ನೀಡಿ ಇದನ್ನು ಪ್ರತಿನಿತ್ಯ ಮಗುವಿನ ಹಣೆಗೆ ಹಚ್ಚಿದ ನಂತರ ಚಿಟಿಕೆಯಷ್ಟು ಭಸ್ಮವನ್ನು ಬಾಯಿಗೂ ಹಾಕುವಂತೆ ಹೇಳಿ ತನ್ನ ಶುಲ್ಕವನ್ನು ಪಡೆದುಕೊಂಡಿದ್ದನು. 

ಮಗುವಿನೊಂದಿಗೆ ಮನೆಗೆ ಮರಳಿದ ವೈದ್ಯನಾಥನ್, ಮಂತ್ರವಾದಿ ನೀಡಿದ್ದ ಭಸ್ಮವನ್ನು ತಪ್ಪದೆ ಬಳಸುವಂತೆ ಮತ್ತು ವೈದ್ಯರ ಚಿಕಿತ್ಸೆಯನ್ನು ನಿಲ್ಲಿಸುವಂತೆ ಸೊಸೆಗೆ ಆಜ್ಞಾಪಿಸಿದ್ದರು. ಆದರೆ ಅದೇ ರಾತ್ರಿ ಮತ್ತೆ ಮರುಕಳಿಸಿದ ಜ್ವರವು ಒಂದೆರಡು ತಾಸುಗಳಲ್ಲಿ ಉಳ್ಬನಿಸಿದರೂ, ವೈದ್ಯರು ನೀಡಿದ್ದ ಔಷದವನ್ನು ಕೊಡಲು ವೈದ್ಯನಾಥನ್ ಸುತರಾಂ ಒಪ್ಪಲಿಲ್ಲ. ಉಲ್ಬಣಿಸಿದ ಜ್ವರ ತಲೆಗೇರಿ ಆರಂಭವಾದ ಸೆಳೆತಗಳು ನಾಲ್ಕಾರು ನಿಮಿಷಗಳು ಕಳೆದರೂ ಕಡಿಮೆಯಾಗಲಿಲ್ಲ. ಸೆಳೆತಗಳ ಪರಿಣಾಮದಿಂದ ನಿಶ್ಚೇಷ್ಟಿತನಾಗಿದ್ದ ಕಂದನ ಸ್ಥಿತಿಯನ್ನು ಕಂಡು ಹೌಹಾರಿದ ಜಾನಕಿಯು, ಪಕ್ಕದ ಮನೆಯಲ್ಲಿನ ನಿವೃತ್ತ ನರ್ಸ್ ಶಾಂತಮ್ಮನನ್ನು ಕರೆದಿದ್ದಳು. ಮಗುವನ್ನು ಪರೀಕ್ಷಿಸಿದ ಶಾಂತಮ್ಮನು ತಕ್ಷಣ ತನ್ನ ಮನೆಯಿಂದ ಬರ್ಫದ ತುಂಡುಗಳನ್ನು ತಂದು ಮಗುವಿನ ತಲೆಯ ಮೇಲಿರಿಸಿದ ಕೆಲವೇ ಕ್ಷಣಗಳಲ್ಲಿ ಸೆಳೆತಗಳು ನಿಂತಿದ್ದವು. ಆದರೆ ವ್ಯಾಧಿಯ ತೀವ್ರತೆ ಮತ್ತು ಸೆಳೆತಗಳ ಬಾಧೆಯಿಂದಾಗಿ ಪ್ರಜ್ನಾಹೀನನಾಗಿದ್ದ ಸೆಂಥಿಲನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. 

ಮಗುವನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಿದ ಬಳಿಕ ತುಸು ಚೇತರಿಸಿಕೊಂಡರೂ, ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗಿಬಂದಿತು. ಮರುದಿನ ಜಾನಕಿಯಿಂದ ಆಕೆಯ ಮಾವನ ಕಾರುಬಾರುಗಳನ್ನು ಕೇಳಿ ಕೆರಳಿದ ವೈದ್ಯರು, ವೈದ್ಯನಾಥನ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಇನ್ನುಮುಂದೆ ಎಂದಾದರೂ ಇಂತಹ ಮಂತ್ರತಂತ್ರಗಳ ಪ್ರಯೋಗಕ್ಕೆ ಮೊರೆಹೋದಲ್ಲಿ, ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯನ್ನು ನೀಡಿದ್ದರು. 

ಮಗುವಿನೊಂದಿಗೆ ಮನೆಗೆ ಮರಳಿದ ಜಾನಕಿಯು ಮುಂದೆ ಯಾವುದೇ ಕಾರಣಕ್ಕೂ ಮಾವನ ಮಾತುಗಳಿಗೆ ಕಿವಿಗೊಡದಿರಲು ನಿರ್ಧರಿಸಿದ್ದಳು. 

ಸಾಮಾನ್ಯವಾಗಿ ಪುಟ್ಟ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇರುವುದರಿಂದ, ಆಗಾಗ ಸಣ್ಣಪುಟ್ಟ ಕಾಯಿಲೆಗಳು ಬಾಧಿಸುತ್ತಲೇ ಇರುತ್ತವೆ. ಇದರೊಂದಿಗೆ ಮಕ್ಕಳು ಬೆಚ್ಚಿಬಿದ್ದು ಅಥವಾ ರಚ್ಚೆ ಹಿಡಿದಂತೆ ಅಳುವುದು ಕೂಡಾ ಅಪರೂಪವಲ್ಲ. ಆದರೆ ಇಂತಹ ಸಮಸ್ಯೆಗಳಿಗೆ ಯಾವುದಾದರೂ ದೋಷ, ಶಾಪ, ಪ್ರೇತಾತ್ಮಗಳೇ ಕಾರಣವೆಂದು ಹೇಳುವ ಮಂತ್ರವಾದಿಗಳು ಮತ್ತು ಇವರ ಮಾತುಗಳನ್ನು ನಂಬುವ ಅಮಾಯಕರು ನಮ್ಮ ದೇಶದಲ್ಲಿ ಇಂದಿಗೂ ಇದ್ದಾರೆ!. 

ಸಾವಿತ್ರಿಯ ಸಂತಾನಹೀನತೆ 

ತನ್ನ ಏಕೈಕ ಪುತ್ರಿಗೆ ವಿವಾಹವಾಗಿ ಎರಡು ವರ್ಷಗಳು ಕಳೆದಿದ್ದರೂ ಗರ್ಭವತಿಯಾಗದಿರುವುದು ಸರಸ್ವತಿಯ ಚಿಂತೆಗೆ ಕಾರಣವೆನಿಸಿತ್ತು. ಕಂಡಕಂಡ ದೇವರುಗಳಿಗೆ ಕೈಮುಗಿದು ಹರಕೆ ಹೇಳಿಕೊಂಡರೂ, ಮಗಳಿಗೆ ಸಂತಾನ ಪ್ರಾಪ್ತಿಯಾಗದಿರಲು ಯಾವುದಾದರೂ ದೇವರ ಶಾಪ ಅಥವಾ ದೋಷಗಳೇ ಕಾರಣವೆಂದು ಆಕೆ ಧೃಢವಾಗಿ ನಂಬಿದ್ದಳು. ಕೊನೆಗೆ ಮಗಳ ಸಂತಾನಹೀನತೆಯ ಕಾರಣವನ್ನು ಪತ್ತೆಹಚ್ಚಲು ಪಕ್ಕದ ಊರಿನ ಜೋಯಿಸರ ಬಳಿಗೆ ತೆರಳಿದ್ದಳು. ಕವಡೆಗಳ ರಾಶಿಯ ಮೇಲೆ ಕೈಯಾಡಿಸುತ್ತಾ ಸರಸ್ವತಿಯ ಸಂದೇಹಗಳಿಗೆ ಸಮಾಧಾನ ಹೇಳಲಾರಂಭಿಸಿದ ಜೋಯಿಸರ ಅಭಿಪ್ರಾಯದಂತೆ, ವಿವಾಹಕ್ಕೆ ಮುನ್ನ ಮನೆಯ ಸಮೀಪದ ಕೆರೆಗೆ ಬಟ್ಟೆ ಒಗೆಯಲು ಹೋಗುತ್ತಿದ್ದ ಸಾವಿತ್ರಿಯು ನೀರಿಗಿಳಿದಿದ್ದ ಸಂದರ್ಭದಲ್ಲಿ ದುಷ್ಟಶಕ್ತಿಯೊಂದು ಆಕೆಯ ಶರೀರವನ್ನು ಪ್ರವೇಶಿಸಿತ್ತು. ಈ ದುಷ್ಟಶಕ್ತಿಯ ಪ್ರಭಾವವೇ ಸಾವಿತ್ರಿ ಗರ್ಭಧರಿಸಲು ಅಡ್ಡಿಪಡಿಸುತ್ತಿತ್ತು!. ದುಷ್ಟಶಕ್ತಿಯನ್ನು ನಿಗ್ರಹಿಸುವ ವಿಧಾನವು ಜೋಯಿಸರಿಗೆ ತಿಳಿದಿದ್ದು, ಇದಕ್ಕಾಗಿ ಸುಮಾರು ಆರೇಳು ಸಾವಿರ ರೂಪಾಯಿಗಳು ವೆಚ್ಚವಾಗಬಹುದೆಂದು ಹೇಳಿದ್ದರು. 

ಮೊಮ್ಮಗುವನ್ನು ಕಾಣಲೇಬೇಕೆನ್ನುವ ಉತ್ಕಟ ಇಚ್ಛೆಯಿಂದ ಜೋಯಿಸರು ಸೂಚಿಸಿದ ಶುಭದಿನದಂದು, ಸಾವಿತ್ರಿಯ ಶರೀರದಿಂದ ದುಷ್ಟಶಕ್ತಿಯನ್ನು ಉಚ್ಚಾಟಿಸಲು ಮಂತ್ರ, ತಂತ್ರ ಮತ್ತಿತರ ಪೂಜೆ ಪುನಸ್ಕಾರಗಳನ್ನು ಸಾಂಗವಾಗಿ ನೆರವೇರಿಸಲಾಯಿತು. ಅಂತಿಮವಾಗಿ ಸರಸ್ವತಿ, ಆಕೆಯ ಮಗಳು ಮತ್ತು ಅಳಿಯನಿಗೆ ಪ್ರಸಾದವನ್ನಿತ್ತು ಹರಸಿದ ಜೋಯಿಸರು, ಪುಟ್ಟ ಕಾಗದದ ಚೀಟಿಯಲ್ಲಿ ಪುತ್ತೂರು ಪೇಟೆಯ ಖ್ಯಾತ ವೈದ್ಯರೊಬ್ಬರ ಹೆಸರು ಮತ್ತು ವಿಳಾಸಗಳನ್ನು ಬರೆದು, ಇದೇ ವೈದ್ಯರಿಂದ ಸಾವಿತ್ರಿಗೆ ಒಂದು ವರ್ಷದ ಅವಧಿಗೆ ಚಿಕಿತ್ಸೆಯನ್ನು ಕೊಡಿಸುವಂತೆ ಆದೇಶಿಸಿದ್ದರು!. 

ಕೆಲವು ದಿನಗಳ ಬಳಿಕ ಈ ವೈದ್ಯರನ್ನು ಭೇಟಿಯಾದ ಸರಸ್ವತಿಯು, ಇವೆಲ್ಲಾ ವಿವರಗಳನ್ನು ವೈದ್ಯರಿಗೆ ತಿಳಿಸಿ ತನ್ನ ಮಗಳಿಗೆ ಚಿಕಿತ್ಸೆಯನ್ನು ನೀಡುವಂತೆ ಅಂಗಲಾಚಿದ್ದಳು. ಸರಸ್ವತಿಯ ಮಾತುಗಳನ್ನು ಆಲಿಸಿದ ವೈದ್ಯರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ ಈ ಜೋಯಿಸರ ಗುರುತು ಪರಿಚಯಗಳು ವೈದ್ಯರಿಗೂ ಇರಲಿಲ್ಲ. ಇದಕ್ಕೂ ಮಿಗಿಲಾಗಿ ಇವರು ಸಂತತಿ ತಜ್ಞರೂ ಆಗಿರಲಿಲ್ಲ. ಆದರೆ ಸರಸ್ವತಿಗೆ ತನ್ನ ಕೈಲಾದ ಸಹಾಯವನ್ನು ಮಾಡಲು ನಿರ್ಧರಿಸಿದ ವೈದ್ಯರು, ಆಕೆಯ ಮಗಳೊಂದಿಗೆ ಅಳಿಯನನ್ನೂ ತನ್ನ ಪರಿಚಯದ ಸಂತತಿ ತಜ್ಞರಲ್ಲಿಗೆ ಕರೆದೊಯ್ಯಲು ಸೂಚಿಸಿದ್ದರು. 

ಮರುದಿನ ಸಂಜೆ ಈ ವೈದ್ಯರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಸಂತತಿ ತಜ್ಞರು, ಸಾವಿತ್ರಿಯಲ್ಲಿ ಯಾವುದೇ ರೀತಿಯ ನ್ಯೂನತೆಗಳಿಲ್ಲದಿದ್ದರೂ, ಆಕೆಯ ಪತಿ ಜನ್ಮದತ್ತ ನಪುಮ್ಸಕತ್ವದಿಂದ ಬಳಳುತ್ತಿರುವುದೇ ಸಾವಿತ್ರಿ ಗರ್ಭಧರಿಸದಿರಲು ಕಾರಣವೆಂದು ತಿಳಿಸಿದ್ದರು. ಜೊತೆಗೆ ಐದನೆಯ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯಹೇಳಿದ್ದ ಸಾವಿತ್ರಿಗೆ, ಸ್ತ್ರೀಪುರುಷ ಸಮಾಗಮದ ಬಗ್ಗೆ ಏನೇನೂ ತಿಳಿದಿರಲಿಲ್ಲ. ಈ ಬಗ್ಗೆ ಆಕೆಯನ್ನು ನೇರವಾಗಿ ಪ್ರಶ್ನಿಸಿದಾಗ "ವಿವಾಹವಾದ ಬಳಿಕ ತನ್ನಿಂದ ತಾನೇ ಮಕ್ಕಳು ಹುಟ್ಟುತ್ತವೆ" ಎಂದು ಭಾವಿಸಿರುವುದಾಗಿ ಆಕೆ ಉತ್ತರಿಸಿದ್ದಳು. ಹಾಗೂ ಇದೇ ಕಾರಣದಿಂದಾಗಿ ತನ್ನ ಮಗಳು ಮತ್ತು ಅಳಿಯನ ನಡುವೆ ಶಾರೀರಿಕ ಸಂಬಂಧವೇ ಇಲ್ಲದಿರುವುದು ಸರಸ್ವತಿಗೂ ತಿಳಿದಿರಲಿಲ್ಲ. 

ತಜ್ಞ ವೈದ್ಯರ ಅಭಿಪ್ರಾಯದಂತೆ ಸಾವಿತ್ರಿಯು ಮಕ್ಕಳನ್ನು ಹದೆಯಬೇಕಿದ್ದಲ್ಲಿ ದಾನಿಗಳಿಂದ ಪಡೆದ ವೀರ್ಯವನ್ನು ಬಳಸಿ, ಕೃತಕ ಗರ್ಭಧಾರಣೆ ಮಾಡುವುದೇ ಏಕಮಾತ್ರ ಪರಿಹಾರವಾಗಿತ್ತು. ಆದರೆ ಈ ಸಲಹೆಯನ್ನು ಸರಸ್ವತಿ ತಿರಸ್ಕರಿಸಿದ್ದರಿಂದ, ಸಮೀಪದ ಸಂಬಂಧಿಗಳಿಂದ ಅಥವಾ ಅನಾಥಾಶ್ರಮದಿಂದ ಪುಟ್ಟ ಮಗುವೊಂದನ್ನು ದತ್ತು ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸಲಹೆಯನ್ನು ಮನಸಾರೆ ಒಪ್ಪಿಕೊಂಡ ಸಾವಿತ್ರಿಯು ತನ್ನ ಸಂಬಂಧಿಯೊಬ್ಬರ ಮಗುವನ್ನು ದತ್ತು ಪಡೆದುಕೊಂಡಳು. ಈ ರೀತಿಯಲ್ಲಿ ಜೋಯಿಸರ ಮಂತ್ರ ತಂತ್ರಗಳು ವಿಫಲಗೊಂಡರೂ, ನಿರ್ದಿಷ್ಟ ವೈದ್ಯರನ್ನು ಭೇಟಿಯಾಗಲು ನೀಡಿದ್ದ ಸೂಚನೆಯು ಫಲಪ್ರದವೆನಿಸಿತ್ತು . 

ಸರಸ್ವತಿಯಂತೆ ಅನೇಕ ಅವಿದ್ಯಾವಂತರು ಮತ್ತು ಅಲ್ಪಪ್ರಮಾಣದ ವಿದ್ಯಾವಂತರೂ, ತಮ್ಮನ್ನು ಬಾಧಿಸುತ್ತಿರುವ ಆರೋಗ್ಯದ ಸಮಸ್ಯೆಗಳಿಗೆ ದೋಷ- ಶಾಪಗಳೇ ಕಾರಣವೆಂದು ಭ್ರಮಿಸಿ, ಇವುಗಳ ಪರಿಹಾರಕ್ಕಾಗಿ ಸಾಕಷ್ಟು ಹಣದೊಂದಿಗೆ, ತಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಆದರೆ ಕೆಲಸಂದರ್ಭಗಳಲ್ಲಿ ಇಂತಹ ಪರಿಹಾರಗಳನ್ನು ನೆರವೇರಿಸುವವರೂ,ಸರಸ್ವತಿಯ ಜೋಯಿಸರಂತೆ ಯಾವುದಾದರೂ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಸೂಚಿಸುತ್ತಾರೆ. ಆದರೆ ಬಹುತೇಕ ಜನರು ಅನ್ಯ ವಿಧಿವಿಧಾನಗಳನ್ನು ಪ್ರಯೋಗಿಸಿದ ಬಳಿಕ ತಮ್ಮ ಸಮಸ್ಯೆ ಪರಿಹಾರಗೊಳ್ಳದ ಕಾರಣದಿಂದ, ಅಂತಿಮವಾಗಿ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದು ಗುಣಮುಖರಾಗುತ್ತಾರೆ . 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೦೨-೨೦೧೦ ರ ಅಂಕಣದಲ್ಲಿ ಪ್ರಕಟಿತ ಲೇಖನ  

No comments:

Post a Comment