Friday, September 27, 2013

Tips for travellers


                                                                 ಪ್ರವಾಸಿಗಳಿಗೆ ಕಿವಿಮಾತು 

ನಿಮ್ಮ ರಜಾದಿನಗಳನ್ನು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಯಾಗಿ ಕಳೆಯಲು ಬಯಸುತ್ತೀರಾ? ಅಥವಾ ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ಸೇವೆ ಸಲ್ಲಿಸಿ ಒಂದಿಷ್ಟು ಪುಣ್ಯಗಳಿಸಲು ಬಯಸುತ್ತೀರಾ?. ಹಾಗಿದ್ದಲ್ಲಿ ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದಲ್ಲಿ ನಿಮ್ಮ ಉದ್ದೇಶವು ಸುಸೂತ್ರವಾಗಿ ಈಡೇರುವುದರಲ್ಲಿ ಸಂದೇಹವಿಲ್ಲ. 

ಶಾಹೀನಾಳ ಶಾಪಿಂಗ್ 

ಮೈಸೂರು ಪ್ರವಾಸಕ್ಕಾಗಿ ಹೊರಟಿದ್ದ ಸುಳ್ಯದ ಕಾಲೇಜು ಕನ್ಯೆಯರು, ತಮ್ಮ ಕಾಲೇಜಿನ ಉದ್ಯೋಗಿ ಶಾಹೀನಾಳನ್ನು ಒತ್ತಾಯಪೂರ್ವಕವಾಗಿ ತಮ್ಮೊಂದಿಗೆ ಕರೆದೊಯ್ದಿದ್ದರು. ಮೈಸೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಮನಸಾರೆ ಸುತ್ತಾಡಿ ಆನಂದಿಸಿದ ಈ ಯುವತಿಯರು, ಊರಿಗೆ ಮರಳುವ ಮುನ್ನ ಶಾಪಿಂಗ್ ನಡೆಸಲು ಬಯಸಿದ್ದರು. ತಮ್ಮ ಮಾರ್ಗದರ್ಶಿ ಸೂಚಿಸಿದ್ದ ಕೆಲ ಆಯ್ದ ಅಂಗಡಿಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ತೆರಳಿದ್ದ ಗುಂಪಿನಿಂದ ಶಾಹೀನಾ ಪ್ರತ್ಯೇಕಗೊಂಡಿದ್ದಳು. 

ಚಿತ್ತಾಕರ್ಷಕ ಕಲಾಕೃತಿಗಳನ್ನು ಪ್ರದರ್ಶಿಸಿದ್ದ ಅಂಗಡಿಯೊಂದನ್ನು ಪ್ರವೇಶಿಸಿದ್ದ ಆಕೆಗೆ, ನಾಲ್ಕಾರು ಗಂಧದ ಕಲಾಕೃತಿಗಳನ್ನು ಖರೀದಿಸುವ ಬಯಕೆಯಿತ್ತು. ಅಂಗಡಿಯ ನೌಕರನು ತೋರಿಸಿದ ಅನೇಕ ಕಲಾಕೃತಿಗಳಲ್ಲಿ ತಾನು ಮೆಚ್ಚಿದ ನಾಲ್ಕು ಗಂಧದ ಪುಟ್ಟ ವಿಗ್ರಹಗಳನ್ನು ಖರೀದಿಸಿದ ಬಳಿಕ, ಸ್ನೇಹಿತೆಯರನ್ನು ಸೇರಿಕೊಂಡ ಶಾಹೀನಾ ಮರುದಿನ ಸಂಜೆ ಊರಿಗೆ ತಲುಪಿದ್ದಳು. 

ತಾನು ತಂದಿದ್ದ ಕರಕುಶಲ ವಸ್ತುಗಳನ್ನು ಮನೆಮಂದಿಗೆ ತೋರಿಸಲು ಪೆಟ್ಟಿಗೆಯನ್ನು ತೆರೆದ ಆಕೆಗೆ ಏನೋ ಸಂದೇಹ ಮೂಡಿತ್ತು. ಅಂಗಡಿಯಾತ ತನಗೆ ತೋರಿಸಿದ್ದ ವಸ್ತುಗಳು ಗಂಧದಿಂದ ತಯಾರಿಸಿದ್ದರೂ, ಆಕೆಗೆ ನೀಡಿದ್ದ ನಾಲ್ಕೂ ವಿಗ್ರಹಗಳು ಸಾಮಾನ್ಯ ಮರದಲ್ಲಿ ಕೆತ್ತಿದ್ದು ಇವುಗಳಿಗೆ ಒಂದಿಷ್ಟು ಗಂಧದ ಎಣ್ಣೆಯನ್ನು ಹಚ್ಚಲಾಗಿತ್ತು!. ಮಾಗದರ್ಶಿಯ ಮಾತಿಗೆ ಮರುಳಾದ ಶಾಹೀನಾ, ಇಂಗುತಿಂದ ಮಂಗನಂತಾಗಿದ್ದಳು. 

ಪ್ರವಾಸಿಗಳ ರಕ್ಷಣೆಗಾಗಿ ಶಾಸನ 

ದೇಶ ವಿದೇಶಗಳಿಂದ ತಮ್ಮ ರಾಜ್ಯಕ್ಕೆ ಭೇಟಿ ನೀಡುವ ಅಸಂಖ್ಯ ಪ್ರವಾಸಿಗರು- ಯಾತ್ರಿಕರನ್ನು "ಮಾರ್ಗದರ್ಶಿ" ಗಳು ಶೋಷಿಸುವುದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರಕಾರವು ಶಾಸನವೊಂದನ್ನು ರೂಪಿಸುತ್ತಿದೆ. ಸಾಮಾನ್ಯವಾಗಿ ಮಾರ್ಗದರ್ಶಿಗಳು ತಾವು ಸೂಚಿಸಿದ ಹೋಟೆಲ್ ಗಳಲ್ಲೇ ತಂಗುವಂತೆ, ತಾವು ತೋರಿಸಿದ ಅಂಗಡಿಗಳಿಂದಲೇ ಖರೀದಿಸುವಂತೆ ಪ್ರವಾಸಿಗಳ ಮೇಲೆ ಒತ್ತಡ ಹೇರುವುದರಿಂದ,ತಮ್ಮ ರಾಜ್ಯಕ್ಕೆ ಭೇಟಿನೀಡುವ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಅನೇಕ ರಾಜ್ಯಗಳ ಗಮನಕ್ಕೆ ಬಂದಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ ಮಾರಕವೆನಿಸುವ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ತೊಡಿಸುವ ಉದ್ದೇಶದಿಂದಲೇ, ಇಂತಹ ಶಾಸನ ರೂಪಿತವಾಗುತ್ತಿದೆ. 

ಅನೇಕ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗಳ ಅನುಕೂಲಕ್ಕಾಗಿ ಉಚಿತ ಮಾಹಿತಿ- ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದರೂ,ದೇಶೀ ಪ್ರವಾಸಿಗಳು ಇವುಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ. ಪ್ರಾಯಶಃ ಸರಕಾರೀ ಕಛೇರಿಗಳಲ್ಲಿ ತಮಗೆ ಲಭಿಸಿದ್ದ "ಉಪಚಾರ"ಗಳ ಅನುಭವವೂ ಇದಕ್ಕೆ ಕಾರಣವೆನಿಸಿರಬಹುದು!. ಆದರೆ ವಿದೇಶೀ ಪ್ರವಾಸಿಗಳು ಮಾಹಿತಿ ಕೇಂದ್ರಗಳ ಮಾರ್ಗದರ್ಶನದಂತೆ ಟ್ಯಾಕ್ಸಿ,ಆಟೋರಿಕ್ಷಾ  ಮತ್ತು ಸ್ಥಳೀಯ ಗೈಡ್ ಗಳಿಂದ ಆಗಬಹುದಾದ ಸುಲಿಗೆ ಮತ್ತು ಕಿರುಕುಳಗಳನ್ನು ನಿವಾರಿಸಿಕೊಳ್ಳುತ್ತಾರೆ. 

ಶಾಸನಗಳು- ನಿಯಮಗಳು ಏನೇ ಇದ್ದರೂ, ಪ್ರವಾಸಿಗಳು- ಯಾತ್ರಿಕರು ಕಿಂಚಿತ್ ಮುಂಜಾಗರೂಕತೆ ವಹಿಸಿದಲ್ಲಿ ಪ್ರಯಾಣದ ಸಂದರ್ಭದಲ್ಲಿ ಬಸ್ಸು-ರೈಲ್ವೇ ನಿಲ್ದಾಣಗಳಲ್ಲಿ ನಡೆಯುವ ಶೋಷಣೆ,ಕಿರುಕುಳ ಮತ್ತು ಮೋಸಹೋಗುವಿಕೆಯಿಂದ ಮುಕ್ತಿ ಪಡೆಯಬಹುದು. ಅಂತೆಯೇ ಪ್ರವಾಸಕ್ಕೆ ತೆರಳಿದ ಅಪರಿಚಿತ ಊರಿನಲ್ಲಿ ಊರಿನಲ್ಲಿ ವಿವಿಧ ನಿಯಮಗಳ ಪರಿಪಾಲನೆ,ನ್ಯಾಯ-ಅನ್ಯಾಯಗಳ ಕುರಿತಾದ ಪ್ರಶ್ನೆ-ಚರ್ಚೆಗಳು ವೈಯುಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಹಿತಕರವಲ್ಲ. ಜೊತೆಗೆ ಅಲ್ಲಿನ ಅಧಿಕಾರಿಗಳು ಆ ದೂರದ ಊರಿನಲ್ಲಿ ಹೂಡಬಹುದಾದ  ಮೊಕದ್ದಮೆಗಳಿಂದಾಗಿ ಪ್ರವಾಸದ ಸವಿಯೋ ಕಹಿಯೇನಿಸೀತು!. 

ಶೋಷಣೆ ಏನು-ಎಂತು?

ಅನೇಕ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳಗಳಲ್ಲಿ ಮತ್ತು ಅಸಂಖ್ಯ ಭಗವದ್ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರವಾಸಿಗರ ಮತ್ತು ಭಕ್ತಜನರ ಶೋಷಣೆ ನಡೆಯುತ್ತಿರುವುದರ ಅನುಭವ ನಿಮಗೂ ಆಗಿರಬಹುದು. ನೀವು ಖರೀದಿಸಿದ ಅವಶ್ಯಕ ವಸ್ತುಗಳು, ಸ್ಮರನಿಕೆಗಳಿಗೆ ನಿಗದಿತ ದರಕ್ಕಿಂತಲೂ ಅಧಿಕ ಹಣವನ್ನು ವಸೂಲು ಮಾಡುವುದು, ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಹೋಲುವ ನಕಲಿ ವಸ್ತುಗಳನ್ನು ಮಾರಾಟ ಮಾಡುವುದೇ ಮುಂತಾದ ಧಂಧೆಗಳು ಅವ್ಯಾಹತವಾಗಿ ನಡೆಯುತ್ತಿರಲು ನಮ್ಮನಿಮ್ಮೆಲ್ಲರ ಅಜಾಗರೂಕತೆಯೂ ಕಾರಣವೆನಿಸುತ್ತದೆ. ವಿವಿಧ ರೀತಿಯ  ಚಾಕಲೇಟ್, ಬಿಸ್ಕಿಟ್, ಶುದ್ಧೀಕರಿಸಿದ ನೀರಿನ ಬಾಟಲಿಗಳು, ಧ್ವನಿ ಸುರುಳಿಗಳು ಹಾಗೂ ಫಿಲ್ಮ್ ರೋಲ್ ಗಳು ನೀತಿಭ್ರಷ್ಟ ವ್ಯಾಪಾರಿಗಳ ಮಳಿಗೆಗಳಲ್ಲಿ ಅಸಲಿ ರೂಪದಲ್ಲಿ ದೊರೆಯುವ ಸಾಧ್ಯತೆಗಳೇ ಇಲ್ಲ.
Parle-g ಯಂತೆ ಕಾಣುವ Perle-G,Krack-jack ನ್ನು ಹೋಲುವ Klack-jack,Bisleri ಯನ್ನು ನಾಚಿಸುವ Bislieri, Vicks ನ ತದ್ರೂಪಿಯಂತಹ Kwicks, Colgate ನ ಪಡಿಯಚ್ಚಿನಂತಹ Coligate, ಇಂತಹ ಹತ್ತುಹಲವು ವಿಧದ ನಕಲಿ ಮಾಲುಗಳು ಮಾರಾಟವಾಗುತ್ತಿರುವುದು ಸಹಸ್ರಾರು ಜನರಿಂದ ತುಂಬಿ ಗಿಜಿಗುಡುತ್ತಿರುವ ಸುಪ್ರಸಿದ್ದ ತಾಣಗಳಲ್ಲಿ ಎಂದು ಅರಿತಿರಿ. ಮಾತ್ರವಲ್ಲ, ಇಂತಹ  ಬಳಕೆ ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮರೆಯದಿರಿ. 

ಸರಕಾರ ಸುಮ್ಮನಿದೆಯೇಕೆ?

ಅಮಾಯಕ ಪ್ರವಾಸಿ- ಯಾತ್ರಿಕರನ್ನು ಮರುಳುಗೊಳಿಸುವ ಇಂತಹ ತಂತ್ರಗಳ ಅರಿವು ಸರಕಾರಕ್ಕೆ ತಿಳಿದಿದ್ದರೂ,ಇಂತಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ನಿಗೂಢ ಕಾರಣಗಳಿಂದಾಗಿ ಇಂತಹ ತಾಣಗಳಲ್ಲಿ ನಿಯಮಿತವಾಗಿ ತಪಾಸಣೆ ಅಥವಾ ತನಿಖೆಯನ್ನು ನಡೆಸುವುದೇ ಇಲ್ಲ!. 

ಆದರೆ ಈ ಬಗ್ಗೆ ಖಚಿತ ಮಾಹಿತಿ ದೊರೆತಲ್ಲಿ ಖ್ಯಾತನಾಮ ಸಂಸ್ಥೆಗಳು ತಮ್ಮದೇ ಆದ ತನಿಖಾ ತಂಡವನ್ನು ರಚಿಸಿ ಅಥವಾ ನಿವೃತ್ತ ಪೋಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಹಾಗೂ ಅವಶ್ಯಕವೆನಿಸಿದಲ್ಲಿ ಸ್ಥಳೀಯ ಪೋಲೀಸ್ ಇಲಾಖೆಯ ನೆರವಿನೊಂದಿಗೆ, ತಮ್ಮ ಕಂಪೆನಿಯ ಉತ್ಪನ್ನಗಳನ್ನೇ ಹೋಲುವ ನಕಲಿ ವಸ್ತುಗಳ ನಿರ್ಮೂಲನಕ್ಕೆ ಮುಂದಾಗುತ್ತಾರೆ. 

ರಾಷ್ಟ್ರಮಟ್ಟದಲ್ಲಿ ಈ ರೀತಿಯ ನಕಲಿ ಮಾಲುಗಳ ಮಾರಾಟದಿಂದಾಗಿ ಅಸಲಿ ಉತ್ಪನ್ನಗಳ ತಯಾರಕರಿಗೆ ವಾರ್ಷಿಕ ೨೫೦೦ ಕೋಟಿ ಹಾಗೂ ಸರಕಾರಕ್ಕೆ ತೆರಿಗೆಯ ರೂಪದಲ್ಲಿ ೯೦೦ ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ ಎಂದು ಆರ್ಥಿಕ ಪತ್ರಿಕೆಗಳು ವರದಿಮಾಡಿವೆ. ಆದರೆ ಈ ಬಗ್ಗೆ ಸರಕಾರಕ್ಕೆ ಸಾಕಷ್ಟು ಮಾಹಿತಿಯಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳದಿರುವುದು ಏಕೆ?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳಿಲ್ಲ. 

ಸ್ವಸುರಕ್ಷಾ ಕ್ರಮಗಳು 

ಪ್ರವಾಸಿಗರಿಗೆ ಸುಲಭಸಾಧ್ಯವೆನಿಸುವ ಕೆಲ ಮುಂಜಾಗರೂಕತಾ ಕ್ರಮಗಳನ್ನು ಮುಂದಾಗಿ ಕೈಗೊಂಡಲ್ಲಿ, ದೂರದೂರಿನಲ್ಲಿ ವಿನಾಕಾರಣ ಶೋಷಣೆಗೆ ಒಳಗಾಗುವುದು ಮತ್ತು ಮೋಸಹೋಗುವಿಕೆಯಂತಹ ಸಮಸ್ಯೆಗಳಿಂದ ಪಾರಾಗಬಹುದು. 

ಪ್ರವಾಸಕ್ಕೆ ಹೊರಡುವ ಮುನ್ನ ಅನಧಿಕೃತ ಮಧ್ಯವರ್ತಿಗಳಿಂದ ಬಸ್ಸು,ರೈಲು ಮತ್ತು ವಿಮಾನಗಳ ಟಿಕೆಟುಗಳನ್ನು ಖರೀದಿಸುವುದು ತೊಂದರೆಗಳಿಗೆ ಆಹ್ವಾನ ನೀಡಿದಂತೆ ಎನ್ನುವುದನ್ನು ಮರೆಯದಿರಿ. ಅಧಿಕೃತ ಮೂಲಗಲಿಂದಲೇ ಖರೀದಿಸಿದರೂ ನಿಮ್ಮ ಟಿಕೆಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪ್ರಯಾಣದ ದಿನ ಮತ್ತು ಸಮಯಗಳು ಸಮಯಗಳನ್ನು ಸರಿಯಾಗಿ ನಮೂದಿಸಿರುವುದನ್ನು ಖಾತರಿಪಡಿಸಿಕೊಳ್ಳಿ. 

ಅನಿರೀಕ್ಷಿತವಾಗಿ ಸಂಭವಿಸುವ ರಸ್ತೆತಡೆ - ಬಂದ್ ಅಥವಾ ನೀವು ಪ್ರಯಾಣಿಸುತ್ತಿರುವ ವಾಹನ ಕೈಕೊಟ್ಟಲ್ಲಿ  ಪ್ರಯೋಜನಕಾರಿ ಎನಿಸಬಲ್ಲ ಕಿರುಗಾತ್ರದ ಮತ್ತು ಕಡಿಮೆತೂಕದ ಖಾದ್ಯವಸ್ತುಗಳು ನಿಮ್ಮ ಬಳಿ ಇರಲಿ. ಚಾಕಲೇಟ್, ಒಣ ಹಣ್ಣುಗಳು, ಬ್ರೆಡ್-ಜಾಮ್,  ತಾಜಾ ಹಣ್ಣುಗಳು ಹಾಗೂ ಮಕ್ಕಳೊಂದಿಗೆ ಪ್ರಯಾಣಿಸುವಾಗ ಚಪಾತಿ, ಇಡ್ಲಿ, ಪಲಾವ್ ಮತ್ತು ಮೊಸರನ್ನಗಳಂತಹ ಆಹಾರಗಳೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಕೊಂಡೊಯ್ಯಿರಿ. ಪುಟ್ಟಕಂದ ಜೋತೆಗಿದ್ದಲ್ಲಿ ಥರ್ಮಾಸ್ ಫ್ಲಾಸ್ಕ್ ನಲ್ಲಿ ಬಿಸಿಹಾಲು ಅಥವಾ ನೀರು ಮತ್ತು ಮಕ್ಕಳ ಪೌಷ್ಟಿಕ ಆಹಾರದ ಡಬ್ಬಿ ಜೊತೆಗಿರಲಿ. ಪ್ರವಾಸಕ್ಕೆ ಹೊರಡುವ ಮುನ್ನ ನಿಮ್ಮದೇ ಊರಿನ ಪರಿಚಿತ ವ್ಯಾಪಾರಿಯಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುವುದು ಹಾಗೂ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ ನಗರದ ಪ್ರತಿಷ್ಠಿತ ಮಳಿಗೆಗಳಲ್ಲಿ ಖರೀದಿಸುವುದು ಹಿತಕರ. ಇದರಿಂದಾಗಿ ಬಸ್- ರೈಲು ನಿಲ್ದಾಣಗಳಲ್ಲಿ ಗಡಿಬಿಡಿಯಿಂದ ಖರೀದಿಸುವಾಗ ಮೋಸಹೋಗುವುದನ್ನು ನಿವಾರಿಸಿಕೊಳ್ಳಬಹುದು. ಫೋಟೋಗ್ರಫಿ ಹವ್ಯಾಸಿಗಳು ತಮಗೆ ಬೇಕೆನಿಸುವಷ್ಟು ಫಿಲ್ಮ್ ರೋಲ್ ಗಳನ್ನು ಅಧಿಕೃತ ವಿತರಕರಿಂದ ಖರೀದಿಸಿ ಕೊಂಡೊಯ್ದಲ್ಲಿ, ನೀವು ಸೆರೆಹಿಡಿದ ಅವಿಸ್ಮರಣೀಯ ದೃಶ್ಯಗಳು ಉತ್ತಮ ಚಿತ್ರಗಳ ರೂಪದಲ್ಲಿ ನಿಮ್ಮದಾಗುವುದು. 

ಪ್ರೇಕ್ಷಣೀಯ ಅಥವಾ ತೀರ್ಥಕ್ಷೇತ್ರಗಳಲ್ಲಿ ಸ್ಮರಣಿಕೆ ಇತ್ಯಾದಿಗಳನ್ನು ಅಧಿಕೃತ ಸರಕಾರೀ ಮಳಿಗೆಗಳಲ್ಲಿ ಖರೀದಿಸಿದಲ್ಲಿ, ಉತ್ತಮ ಗುಣಮಟ್ಟದ ವಸ್ತುಗಳು ಯೋಗ್ಯ ಬೆಲೆಗೆ ಲಭಿಸುವುದೆಂದು ನೆನಪಿರಲಿ. 

ಪ್ರವಾಸದ ಸಂದರ್ಭದಲ್ಲಿ ಪೀಡಿಸಬಲ್ಲ  ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ, ನಿಮ್ಮ ಕುಟುಂಬ ವೈದ್ಯರ ಸಲಹೆಯಂತೆ ಕೆಲವೊಂದು ಔಷದಗಳನ್ನು ಮರೆಯದೆ ಪಡೆದುಕೊಳ್ಳಿ. ದಿನನಿತ್ಯ ಔಷದ ಸೇವನೆಯ ಅವಶ್ಯಕತೆ ಇರುವವರು, ಸಾಕಷ್ಟು ಪ್ರಮಾಣದ ಔಷದಗಳನ್ನು ಕೊಂಡೊಯ್ಯುವುದು ಕ್ಷೇಮಕರ. 

ಸ್ವಂತ ವಾಹನದಲ್ಲಿ ಪ್ರಯಾಣಿಸುವಾಗ ವಾಹನದ ಮತ್ತು ಚಾಲಕನ ದಾಖಲೆಗಳನ್ನು ಮರೆಯದಿರಿ. ಬಾಡಿಗೆಯ ವಾಹನಗಳನ್ನು ಪಡೆದುಕೊಳ್ಳುವಾಗ ಅನುಭವಿ ಚಾಲಕ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನೇ ಆಯ್ಕೆಮಾಡಿ. 

ವಿಶೇಷವಾಗಿ ವಿದೇಶ ಪ್ರವಾಸಕ್ಕೆ ಹೊರಡುವ ಮುನ್ನ, ಈಗಾಗಲೇ ಆ ದೇಶವನ್ನು ಸಂದರ್ಶಿಸಿರುವ ಬಂಧುಮಿತ್ರರ ಬಳಿ ಅಲ್ಲಿನ ವಿವಿಧ ವ್ಯವಸ್ಥೆ-ಕಾನೂನುಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಪಡೆದುಕೊಂಡಲ್ಲಿ, ಅನಾವಶ್ಯಕ ತೊಂದರೆಗಳು- ಖರ್ಚು ವೆಚ್ಚಗಳನ್ನು ನಿವಾರಿಸಿಕೊಳ್ಳುವುದು ಸುಲಭಸಾಧ್ಯವೂ ಹೌದು. 

ಅಂತಿಮವಾಗಿ ಪ್ರವಾಸಕ್ಕೆ ಹೊರಡುವ ಮೊದಲೇ ನಿಮ್ಮ ಯಾನ- ತಾಣಗಳ ಬಗ್ಗೆ ಸಾಕಷ್ಟು ಮಾಹಿತಿಗಳೊಂದಿಗೆ, ನಿಮಗೆ ಅವಶ್ಯಕವೆನಿಸುವ ವಸ್ತುಗಳನ್ನು ಸಂಗ್ರಹಿಸಿ ಅನಾವಶ್ಯಕ ತೊಂದರೆಗಳಿಂದ  ಮುಕ್ತರಾಗಿ. ತನ್ಮೂಲಕ ಪ್ರವಾಸದ ಆನಂದವನ್ನು ಮನಸಾರೆ ಸವಿಯಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 
ಮಾಹಿತಿ- ದಿನೇಶ್ ಭಟ್. ಕೆ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೧೧-೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment