Tuesday, September 24, 2013

Intaha vartanegalu nimmalliveye?



                                   ನಿಮ್ಮ ನಡೆ ನುಡಿಗಳಿಗೆ ಹಿಡಿದ ಕನ್ನಡಿ ?
  ತನ್ನ ಮನೆ ಮಂದಿಯ ನಡೆನುಡಿಗಳನ್ನು ದಿನನಿತ್ಯ ಕಂಡು-ಕೇಳುವ ಪುಟ್ಟ ಕಂಡನು ಇವುಗಳನ್ನು ಅನುಕರಿಸುವುದು ಸ್ವಾಭಾವಿಕ. ಇದೇ ಕಾರಣದಿಂದಾಗಿ ನಿಮ್ಮ ಕಂದನ ಗುಣ-ಅವಗುಣಗಳಿಗೆ ನೀವು ಹೊಣೆಗಾರರೇ ಹೊರತು ಆ ಮುಗ್ಧ ಕಂದನಲ್ಲ!. ಸದ್ಗುಣ- ದುರ್ಗುಣಗಳ ನಡುವಿನ ಅಂತರವನ್ನೇ ಅರಿತಿರದ ನಿಮ್ಮ ಕಂದನ ವರ್ತನೆಗಳು, ನಿಶ್ಚಿತವಾಗಿಯೂ ನಿಮ್ಮ ನಡೆ ನುಡಿಗಳಿಗೆ ಹಿಡಿದ ಕನ್ನಡಿ ಎನ್ನುವುದನ್ನು ಮರೆಯದಿರಿ. 
----------------                     -------------                     -------------------             -------------------                 ---------------------

     ಏಳನೆಯ ತರಗತಿಯನ್ನು ತಲುಪುವಷ್ಟರಲ್ಲೇ ಐದು ಶಾಲೆಗಳಿಂದ ಉಚ್ಚಾಟಿತನಾಗಿದ್ದ ಗುರುದತ್ತನು, ರಾಜಕಾರಣಿಯೊಬ್ಬರ ಪ್ರಭಾವದಿಂದಾಗಿ ಸುತ್ತೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಸೇರ್ಪಡೆಗೊಂಡಿದ್ದನು. ನೂತನ ಶಾಲೆಯನ್ನು ಸೇರಿ ತಿಂಗಳು ಕಳೆಯುವಷ್ಟರಲ್ಲೇ ತನ್ನ "ದಾದಾಗಿರಿ" ಯಿಂದ ಕುಪ್ರಸಿದ್ದನಾಗಿದ್ದ ಈತನನ್ನು, ಶಾಲಾ ವಿದ್ಯಾರ್ಥಿಗಳೆಲ್ಲರೂ "ಗೂಂಡಾಗುರು" ಎಂದು ಕರೆಯಲು ಆರಂಭಿಸಿದ್ದರು!. 

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರೂ ನೋಡಲು ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ ಗುರುದತ್ತನು  ಇತರ ವಿದ್ಯಾರ್ಥಿಗಳೊಂದಿಗೆ ಕಾಲುಕೆರೆದು ಜಗಳವಾಡಿ, ಅವರನ್ನು ಹೊಡೆದು ಬಡಿದು ಹಿಂಸಿಸುವುದು ಪರಿಪಾಠವಾಗಿತ್ತು. ಇದರೊಂದಿಗೆ ವಿದ್ಯಾರ್ಥಿನಿಯರ ಜಡೆ ಕತ್ತರಿಸುವುದು,ಗುಂಡುಸೂಜಿಯಿಂದ ಚುಚ್ಚುವುದು,ಇತರರಲ್ಲಿರುವ ವಸ್ತುಗಳನ್ನು ಬಲಾತ್ಕಾರದಿಂದ ಕಿತ್ತುಕೊಳ್ಳುವುದು, ವಿದ್ಯಾರ್ಥಿಗಳ ಊಟದ ಡಬ್ಬಿಯನ್ನು ಲಪಟಾಯಿಸಿ ಅದರಲ್ಲಿದ್ದ ಖಾದ್ಯಗಳನ್ನು ತಿಂದ ಬಳಿಕ ಕಸವನ್ನು ತುಂಬಿಸಿ ಇಡುವುದು, ಅಧ್ಯಾಪಕರ ವಾಹನಗಳ ಚಕ್ರಗಳ ಗಾಳಿ ತೆಗೆಯುವುದೇ ಮುಂತಾದ ವಿಕೃತ ಚೇಷ್ಟೆಗಳು ಆತನ ದೈನಂದಿನ ಪ್ರವೃತ್ತಿಗಳಾಗಿದ್ದವು. ಈ ಗೂಂಡಾಗುರುವಿನ ನಿರಂಕುಶ ವರ್ತನೆಗಳಿಗೆ ಕಡಿವಾಣ ತೊಡಿಸುವುದು "ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?" ಎನ್ನುವಂತಾಗಿತ್ತು!. 

ಆದರೆ ಗುರುದತ್ತನ ಇಂತಹ ವರ್ತನೆಗಳಿಗೆ ನಿರ್ದಿಷ್ಟ ಕಾರಣಗಳೂ ಇದ್ದವು. ಈತನ ತಂದೆ ಶ್ರೀನಿವಾಸ ರಾಯರು ಶ್ರೀಮಂತ ದಂಪತಿಗಳ ಏಕಮಾತ್ರ ಪುತ್ರನಾಗಿದ್ದರು. ವಂಶೋದ್ಧಾರಕನೆಂಬ ಮಮಕಾರದಿಂದ ಅಂಕೆ-ಅಂಕುಶಗಳಿಲ್ಲದೆ ಬೆಳೆಸಿದ್ದ ಮಗನಿಗೆ, ಆತನ ತಾಯಿಯು ಕೇಳಿದ್ದೆಲ್ಲವನ್ನೂ ಕ್ಷಣಮಾತ್ರದಲ್ಲಿ ನೀಡುತ್ತಿದ್ದರು. ತಾಯಿಯ ಬಳಿ ಕಾಡಿಬೇಡಿ ಪಡೆಯುತ್ತಿದ್ದ ಹಣವನ್ನು ಸ್ನೇಹಿತರಿಗಾಗಿ ನೀರಿನಂತೆ ವ್ಯಯಿಸುತ್ತಿದ್ದ ಶ್ರೀನಿವಾಸನು, ಇದೇ ಸಾಮರ್ಥ್ಯದಿಂದಾಗಿ "ಪುಂಡರ ತಂಡ "ದ ನಾಯಕ ಎನಿಸಿದ್ದನು!. 

ಬಳಿಕ ಕಾಲೇಜಿನ ಮೆಟ್ಟಿಲೇರಿದೊಡನೆ ದುಷ್ಟರ ಸಹವಾಸದಿಂದ ಕುಡಿತ, ಜೂಜು ಹಾಗೂ ವೇಶ್ಯಾಸಂಗದಂತಹ ದುರ್ವ್ಯಸನಗಳ ದಾಸನಾಗಿದ್ದ ಮಗನನ್ನು ಸರಿದಾರಿಗೆ ತರಲು ಮಾತಾಪಿತರು ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಅಂತಿಮವಾಗಿ ಸಾಮಾನ್ಯ ಪದವಿಯನ್ನೂ ಗಳಿಸಲಾಗದ ಶ್ರೀನಿವಾಸನಿಗೆ "ಮದುವೆಯಾಗದೆ ಹುಚ್ಚು ಬಿಡದು" ಎಂದು ನಿರ್ಧರಿಸಿದ್ದ ಮಾತಾಪಿತರು, ಬಡ ಕುಟುಂಬದ ಹೆಣ್ಣಿನೊಂದಿಗೆ ವಿವಾಹವನ್ನು ನೆರವೇರಿಸಿದ್ದರು. 

ವರ್ಷ ಕಳೆಯುವಷ್ಟರಲ್ಲಿ ಗುರುದತ್ತನ ಜನನವಾದ ಬಳಿಕ ಹೆಂಡತಿಯನ್ನು ಕಂಡೊಡನೆ ಕನಲಿ ಕೆಂಡವಾಗುತ್ತಿದ್ದ ಶ್ರೀನಿವಾಸನು, ದಿನನಿತ್ಯ ಕುಡಿದು ಬಂದು ಆಕೆಯನ್ನು ಥಳಿಸುವುದು ವಾಡಿಕೆಯಾಗಿತ್ತು. ಎಳೆಯ ಕಂದ ಗುರುದತ್ತನ ಮನದಲ್ಲಿ ಅಚ್ಚಳಿಯದೆ ಉಳಿದಿದ್ದ ತಂದೆಯ ಹಿಂಸಾತ್ಮಕ ಪ್ರವೃತ್ತಿಗಳೇ, ಇದೀಗ ಈ ಬಾಲಕನು ಇತರರಿಗೆ ಹಿಂಸೆಯನ್ನು ನೀಡಲು ಪ್ರೇರಣೆಯಾಗಿತ್ತು. 

ಅನೇಕ ಮಕ್ಕಳಲ್ಲಿ ಕಾಣಸಿಗುವ ಇಂತಹ ವೈವಿಧ್ಯಮಯ  ದುರ್ವರ್ತನೆಗಳಿಗೆ, ಪ್ರಾರಂಭಿಕ ಹಂತದಲ್ಲೇ ಮಾನಸಿಕ ತಜ್ಞರ ಚಿಕಿತ್ಸೆ- ಆಪ್ತ ಸಂವಾದಗಳಿಂದ ಸೂಕ್ತ ಪರಿಹಾರ ಪಡೆದುಕೊಳ್ಳುವುದು ಸುಲಭಸಾಧ್ಯ. ಆದರೆ ಇಂತಹ ಸಮಸ್ಯೆಗಳಿಗೆ ನಿಶ್ಚಿತ ಪರಿಹಾರ ಇರುವುದರ ಅರಿವು ಬಹುತೇಕ ವಿದ್ಯಾವಂತರಿಗೂ ಇಲ್ಲದ ಕಾರಣದಿಂದಾಗಿ, ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವಲ್ಲಿ ಪ್ರಮುಖ ಕಾರಣವೆನಿಸುತ್ತದೆ. 

ಅನ್ನ ತಿನ್ನದ ಮಗು?

ಡಾಕ್ಟ್ರೆ, ನನ್ಮಗು ಹೊಟ್ಟೆಗೇನೂ ತಿನ್ನೋದೇ ಇಲ್ಲ, ಒಂದುಸಾರಿ ಚೆನ್ನಾಗಿ ಪರೀಕ್ಷೆ ಮಾಡಿ ಒಂದ್ ಟಾನಿಕ್ ಬರ್ಕೊಡಿ ಎಂದು ಅಂಗಲಾಚಿದ ಅವ್ವಮ್ಮನ ಮಾತುಗಳನ್ನು ಆಲಿಸಿದ ವೈದ್ಯರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ ಆಕೆಯ ಸೊಂಟದ ಮೇಲಿದ್ದ ಸುಮಾರು ಮೂರು ವರ್ಷದ ಪೋರನು ದಷ್ಟಪುಷ್ಟವಾಗಿದ್ದು, ಮೇಲ್ನೋಟಕ್ಕೆ ಆರೋಗ್ಯವಂತನಾಗಿ ಕಾಣುತ್ತಿದ್ದನು. 

ಆದರೂ ಅವ್ವಮ್ಮನ ಅಪೇಕ್ಷೆಯಂತೆ ಪುಟ್ಟ ಆದಮ್ ನನ್ನು ಅಮೂಲಾಗ್ರವಾಗಿ ಪರೀಕ್ಷಿಸಿದ್ದ ವೈದ್ಯರಿಗೆ ಆತನು ಆರೋಗ್ಯದಿಂದ ಇರುವುದು ಖಚಿತವಾಗಿತ್ತು. ಮಾತ್ರವಲ್ಲ, ಹೊಟ್ಟೆಗೆ ಏನನ್ನೂ ತಿನ್ನದ ಮಗು ಇಷ್ಟೊಂದು ಆರೋಗ್ಯದಿಂದ ಇರುವುದು ಅಸಾಧ್ಯವೆಂದೂ ತಿಳಿದಿತ್ತು. ಇದೇ ಕಾರಣದಿಂದಾಗಿ ಅವ್ವಮ್ಮನ ದೂರಿನ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಲು ಕುತೂಹಲ ಮೂಡಿತ್ತು. 

ಅವ್ವಮ್ಮನನ್ನು ಕುಳಿತುಕೊಳ್ಳಲು ಹೇಳಿದ ವೈದ್ಯರು ಸಾವಕಾಶವಾಗಿ ಆಕೆಯ ಮನೆಮಂದಿಯ ವಿವರಗಳನ್ನು ಕೇಳಿ ಪಡೆದುಕೊಂಡರು. ಆಕೆಯೇ ಹೇಳುವಂತೆ ಆಕೆಯ ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ಮೈದುನ, ಆತನ ಪತ್ನಿ ಹಾಗೂ ಮೂವರು ಮಕ್ಕಳಲ್ಲದೇ, ಅವ್ವಮ್ಮನ ಅತ್ತೆಮಾವಂದಿರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಹದಿಮೂರು ಸದಸ್ಯರಿರುವ ಈ ಕುಟುಂಬದಲ್ಲಿ, ಇವರೆಲ್ಲರೂ ಒಂದಾಗಿ ಕುಳಿತು ಆಹಾರ ಸೇವಿಸುವ ಸಾಧ್ಯತೆಗಳೇ ಇರಲಿಲ್ಲ. ಇದೇ ಕಾರಣದಿಂದಾಗಿ ದಿನದ ನಾಲ್ಕು ಹೊತ್ತಿನಲ್ಲೂ ಅವರವರ ಅನುಕೂಲಕ್ಕೆ ತಕ್ಕಂತೆ, ಸರದಿಯಲ್ಲಿ ಆಹಾರ ಸೇವಿಸುವುದು ವಾಡಿಕೆಯಾಗಿತ್ತು. ಇದರೊಂದಿಗೆ ಪುಟ್ಟ ಮಕ್ಕಳಿಗೆ ಮನೆಯ ಹಿರಿಯರಾಗಿದ್ದ ಬೀಪಾತುಮ್ಮನು ಕೈತುತ್ತು ನೀಡುವ ಸಂಪ್ರದಾಯವೂ ಇದ್ದಿತು. ದಿನನಿತ್ಯ ಇದೆಲ್ಲವನ್ನೂ ಗಮನಿಸುತ್ತಿದ್ದ ಹಾಗೂ ತಮ್ಮ ಬಾಲ್ಯದಲ್ಲಿ ತಮಗೂ ದೊರೆಯುತ್ತಿದ್ದ ಕೈತುತ್ತಿನ ಸವಿಯನ್ನು ಮರೆಯದ ಇತರ ಮಕ್ಕಳು, ಇದೀಗ ಪುಟ್ಟ ಆದಮ್ ನಿಗೆ ಪ್ರೀತಿಯಿಂದ ಒಂದೆರಡು ಕೈತುತ್ತು ನೀಡಲು ಮರೆಯುತ್ತಿರಲಿಲ್ಲ. ಇದು ಸಾಲದೆನ್ನುವಂತೆ ಮನೆಯ ಹಿರಿಯರು ಊಟ-ತಿಂಡಿಗಾಗಿ ಕುಳಿತೊಡನೆ ಅವರ ತೊಡೆಯೇರುತ್ತಿದ್ದ ಆದಮ್, ಒತ್ತಾಯಪೂರ್ವಕವಾಗಿ ಒಂದೆರಡು ಕೈತುತ್ತುಗಳನ್ನು ಕೇಳಿ ಪಡೆಯುತ್ತಿದ್ದನು. ಹನಿಗೂಡಿ ಹಳ್ಳ ಎನ್ನುವಂತೆ, ಹತ್ತಾರುಮಂದಿಯ ಕೈತುತ್ತಿನಿಂದ ಆದಮ್ ನ ಪುಟ್ಟ ಹೊಟ್ಟೆ ಸಲೀಸಾಗಿ ತುಂಬುತ್ತಿತ್ತು!. 

ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇದನ್ನು ಗಮನಿಸದ ಅವ್ವಮ್ಮನು ತನಗೆ ಬಿಡುವಾದೊಡನೆ ಮಗುವಿಗೆ ಉಣಬಡಿಸುತ್ತಿದ್ದಳು. ಆದರೆ ಅದಾಗಲೇ ತನ್ನ ಹೊಟ್ಟೆಯನ್ನು ತುಂಬಿಸಿಕೊಂಡಿದ್ದ ಆದಮ್, ತನ್ನ ತಾಯಿ ನೀಡುತ್ತಿದ್ದ ಕೈತುತ್ತನ್ನು ನಿರಾಕರಿಸುತ್ತಿದ್ದನು. ಹಾಗೂ ಇದೇ ಕಾರಣದಿಂದಾಗಿ ತನ್ನ ಪುಟ್ಟ ಕಂಡನು ಹೊಟ್ಟೆಗೆ ಏನನ್ನೂ ತಿನ್ನದೇ ಹಸಿವಿನಿಂದ ಬಳಲುತ್ತಿರುವನೆಂದು ನಂಬಿದ್ದ ಆಕೆಯ ತಾಯಿಕರುಳು ಮಿಡಿಯುತ್ತಿತ್ತು!. 

ಆದಮ್ ನ ಆರೋಗ್ಯದ ಮಟ್ಟ ತೃಪ್ತಿಕರವಾಗಿದೆಯೆಂದು ಭರವಸೆ ನೀಡಿದ ವೈದ್ಯರು, ಅವ್ವಮ್ಮನ ಸಂದೇಹಗಳಿಗೆ ಸೂಕ್ತ ಸಮಾಧಾನ ನೀಡಿದರು. ನಿಮ್ಮ ಮನೆಯ ಹತ್ತು ಸದಸ್ಯರು ಒಂದೊಂದು ತುತ್ತು ಅನ್ನ ನೀಡಿದರೂ, ಪುಟ್ಟ ಮಗುವಿನ ಹೊಟ್ಟೆ ತುಂಬಲು ಸಾಕಾಗುತ್ತದೆ. ಮಾತ್ರವಲ್ಲ, ನೀವು ಆತನಿಗೆ ನೀಡುವ ಅನ್ನದ ಪ್ರಮಾಣಕ್ಕಿಂತ ತುಸು ಹೆಚ್ಚೇ ಆಗುತ್ತದೆಂದು ವೈದ್ಯರು ಹೇಳಿದರು. ಜೊತೆಗೆ ಮಗುವಿನ ತೂಕ, ಎತ್ತರ ಹಾಗೂ ಚಟುವಟಿಕೆಗಳು ಉತ್ತಮವಾಗಿ ಇರುವುದರಿಂದ ಆತನಿಗೆ ಯಾವುದೇ ಟಾನಿಕ್ ನೀಡುವ ಅವಶ್ಯಕತೆಯೇ ಇಲ್ಲವೆಂದರು. ಅಂತಿಮವಾಗಿ ನಿಮ್ಮ ಮನೆಮಂದಿಯೆಲ್ಲರೂ ಆದಮ್ ನಿಗೆ ಕೈತುತ್ತು ನೀಡುವ ಕೆಟ್ಟ ಹವ್ಯಾಸವನ್ನು ನಿಲ್ಲಿಸಿ, ಆತನಿಗೆ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ನೀಡಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದರು. 

ಕಾಮಾತುರಾಣಾಮ್...... 

ಹತ್ತಾರು ಬಾಡಿಗೆ ಮನೆಗಳ ಮಾಲೀಕರಾದ ವಾಮನರಾಯರ ವಠಾರದಲ್ಲಿ ನೆಲೆಸಿದ್ದ ನಿವಾಸಿಗಳಿಗೆ, ರಾಯರ ಏಕಮಾತ್ರ ಪುತ್ರ ವಿನೋದನೆಂದರೆ ಪಂಚಪ್ರಾಣ. ದಿನವಿಡೀ ಅತ್ತಿತ್ತ ಓಡಾಡುತ್ತಾ ಮುತ್ತಿನಂತಹ ಮಾತುಗಳನ್ನು ಆಡುತ್ತಿದ್ದ ಈ ಪುಟ್ಟ ಬಾಲಕನಿಗೆ ಪ್ರತಿಯೊಂದು ಮನೆಯಲ್ಲೂ ಮುಕ್ತಪ್ರವೇಶ ಇದ್ದಿತು. ಇದೀಗ ಒಂದನೆಯ ತರಗತಿಗೆ ಸೇರಿದ್ದ ವಿನೋದನ ಬಾಲಲೀಲೆಗಳು ವಠಾರದ ನಿವಾಸಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದವು. 

ರಾಯರ ಪಕ್ಕದ ಮನೆಯಲ್ಲಿ ವಾಸ್ತವ್ಯವಿದ್ದ ಹರೀಶ್ ಭಾಯಿ ಮೂಲತಃ ಉತ್ತರ ಭಾರತದವರಾಗಿದ್ದರೂ, ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರು. ಪತ್ನಿ ಸುಮನ್ ಹಾಗೂ ಮಕ್ಕಳಾದ ಸೀತಾ ಮತ್ತು ಗೀತಾರೊಂದಿಗೆ ರಾಯರ ವಠಾರದಲ್ಲಿ ವಾಸ್ತವ್ಯ ಹೂಡಿ ಎರಡು ವರ್ಷಗಳೇ ಸಂದಿದ್ದವು. ಅತ್ಯಂತ ಸ್ನೇಹಜೀವಿ ಎನಿಸಿದ್ದ ಹರೀಶ್ ಭಾಯಿ ಯವರ ಮನೆಗೆ ವಿನೋದನು ಹತ್ತಾರುಬಾರಿ ಬಂದು ಹೋಗುವುದರೊಂದಿಗೆ, ತಿಂದು ಹೋಗುವುದೂ ವಾಡಿಕೆಯಾಗಿತ್ತು. 

ಅದೊಂದು ಸಂಜೆ ಕಾಲೇಜಿನಿಂದ ಮರಳಿದ್ದ ಸೀತಾ, ಆರಾಮ ಕುರ್ಚಿಯಲ್ಲಿ ಕುಳಿತು ಪತ್ರಿಕೆಯನ್ನು ಓದುತ್ತಿದ್ದಳು. ಓದಿನಲ್ಲಿ ತಲ್ಲೀನಳಾಗಿದ್ದ ಆಕೆಗೆ, ಕಳ್ಳ ಹೆಜ್ಜೆಯನ್ನಿಟ್ಟು ಹಿಂದಿನಿಂದ ಬಂದು ನಿಂತ ವಿನೋದನು ಕಂಡಿರಲಿಲ್ಲ. ಒಂದೆರಡು ಕ್ಷಣ ಆಕೆಯ ಹಿಂದೆ ನಿಂತು ದಿಟ್ಟಿಸುತ್ತಿದ್ದ ಪುಟ್ಟ ವಿನೋದನು, ಕ್ಷಣಮಾತ್ರದಲ್ಲಿ ಆಕೆಯನ್ನು ಆಲಂಗಿಸಿ ತನ್ನ ಎರಡೂ ಕೈಗಳಿಂದ ಆಕೆಯ ಸ್ತನಗಳನ್ನು ಅದುಮಿದ್ದನು!. 

ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯಿಂದ ದಿಗ್ಭ್ರಾಂತಳಾದ ಸೀತಾ ಜೋರಾಗಿ ಕಿರುಚಿದ್ದಳು. ಗಾಬರಿಗೊಂಡಿದ್ದ ಸೀತಾಳನ್ನು ಅಣಕಿಸಿದ ವಿನೋದನು ಕೇಕೆಹಾಕಿ ನಕ್ಕಿದ್ದನು. ಮಗಳ ಕೂಗನ್ನು ಕೇಳಿ ಆಕೆಯ ತಾಯಿ ಧಾವಿಸಿ ಬರುವಷ್ಟರಲ್ಲೇ, ವಿನೋದನು ಸ್ಥಳದಿಂದ ಪಲಾಯನ ಮಾಡಿದ್ದನು. 

ಪುಟ್ಟ ಬಾಲಕನ ಕೆಟ್ಟ ವರ್ತನೆಯಿಂದ ಸಿಟ್ಟಿಗೆದ್ದ ಸೀತಾ, ತಾಯಿಯ ಬಳಿ ನಡೆದ ಘಟನೆಯನ್ನು ಹೇಳಿದ್ದಳು. ವಿಷಯವರಿತ ಆಕೆಯ ಬಾಯಿಂದ "ಒಂದಲ್ಲ ಒಂದು ದಿನ ಇಂತಹ ಇಂತಹ ಪ್ರಸಂಗ ನಡೆಯಬಹುದೆಂದು ನಾನು ಊಹಿಸಿದ್ದು ಇಂದು ನಿಜವಾಯಿತು" ಎನ್ನುವ ಉದ್ಗಾರ ಹೊರಬಿದ್ದಿತ್ತು. ಆದರೆ ತಾಯಿಯ ಮಾತುಗಳು ಸೀತಾಳಿಗೆ ಅರ್ಥವಾಗಲೇ ಇಲ್ಲ. ಈ ಹಿಂದೆ ತಾನು ಕಣ್ಣಾರೆ ಕಂಡಿದ್ದ ಘಟನೆಯನ್ನು ಸುಮನ್ ಮರೆತಿರಲಿಲ್ಲ. 

ರಾಯರ ವಠಾರದಲ್ಲಿ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ತಮ್ಮ ಮಕ್ಕಳು ಶಾಲಾಕಾಲೇಜುಗಳಿಂದ ಹಿಂದಿರುಗುವ ತನಕ, ಇಲ್ಲಿನ ಹೆಂಗಸರು ಹರಟೆ ಹೊಡೆಯಲು ಅಕ್ಕಪಕ್ಕದ ಮನೆಗಳಿಗೆ ಹೋಗುತ್ತಿದ್ದರು. ಬಹುತೇಕ ಮನೆಗಳಲ್ಲಿ ಈ ಹೊತ್ತಿನಲ್ಲಿ ಗಂಡಸರು ಇರದ ಕಾರಣದಿಂದಾಗಿ ಇವರೆಲ್ಲರೂ ನಿರ್ಭಿಡೆಯಿಂದ ಮತ್ತೊಬ್ಬರ ಮನೆಗಳಿಗೆ ಹೋಗುವುದು ವಾಡಿಕೆಯಾಗಿತ್ತು. 

ಅದೊಂದು ದಿನ ಸುಮನ್ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ರಾಯರ ಮನೆಗೆ ಹೋದಾಗ ಮುಂದಿನ ಬಾಗಿಲು ಕೊಂಚ ತೆರೆದಿತ್ತು. ಎಂದಿನಂತೆ ಬಾಗಿಲನ್ನು ದೂಡಿ ಒಳನಡೆದ ಆಕೆಗೆ, ಬಲಬದಿಯ ಕೋಣೆಯಲ್ಲಿ ರಾಯರ ಸೋದರ ಶಂಕರ ತನ್ನ ಅತ್ತಿಗೆಯೊಂದಿಗೆ  ಇಹಲೋಕದ ಪರಿವೆಯೇ ಇಲ್ಲದಂತೆ ಕಾಮಕೇಳಿಯಲ್ಲಿ ನಿರತರಾಗಿದ್ದುದು ಕಂಡಿತ್ತು. ಕ್ಷಣಮಾತ್ರದಲ್ಲಿ ಸದ್ದುಮಾಡದೆ ಮನೆಗೆ ಮರಳಿದ್ದ ಆಕೆಯ ಮನಸ್ಸಿಗೆ  ಆಘಾತವಾಗಿತ್ತು. ರಾಯರ ಪತ್ನಿಯು ತನ್ನ ಮೈದುನನೊಂದಿಗೆ ಚಕ್ಕಂದವಾಡುವುದನ್ನು ಹಲವುಬಾರಿ ಕಂಡಿದ್ದ ಆಕೆಗೆ, ಪುಟ್ಟ ವಿನೋದನ ವಿಚಿತ್ರ ವರ್ತನೆಗಳಿಗೆ,   ತನ್ನ ತಾಯಿ ಮತ್ತು ಚಿಕ್ಕಪ್ಪನ ಸರಸಸಲ್ಲಾಪಗಳನ್ನು ಆತನು ಅನೇಕಬಾರಿ ಕಂಡಿರುವುದೇ ಕಾರಣವೆಂದು ಮನಸ್ಸಿಗೆ ಹೊಳೆದಿತ್ತು.

ನಿಜಹೇಳಬೇಕಿದ್ದಲ್ಲಿ ಸುಮನ್ ಳ ಊಹೆ ಶತಪ್ರತಿಶತ ನಿಜವಾಗಿತ್ತು. ಚಿಕ್ಕಪ್ಪನು ತನ್ನ ತಾಯಿಯೊಂದಿಗೆ ಕದ್ದುಮುಚ್ಚಿ ನಡೆಸುತ್ತಿದ್ದ ಸರಸಗಳನ್ನು ಕಣ್ಣಾರೆ ಕಂಡಿದ್ದ ವಿನೋದನಿಗೆ ಇದೇನೆಂದು ತಿಳಿಯದೇ ಇದ್ದರೂ,ಈ ಘಟನೆಗಳೇ ಇದೀಗ ಸೀತಾಳೊಂದಿಗೆ ಸರಸವಾಡಲು ಆತನನ್ನು ಪ್ರಚೋದಿಸಿದ್ದವು!. 

ಏಕಲವ್ಯನ ಕಥೆ 

ಬಾಲವಾಡಿಗೆ ಕಾಲಿಡುವಷ್ಟರಲ್ಲೇ ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾಗಿದ್ದ ಕೃಷ್ಣನಿಗೆ ನಿಜಕ್ಕೂ ಸುಳ್ಳು ಎಂದರೆ ಏನೆಂದು ತಿಳಿದಿರಲಿಲ್ಲ. ಆದರೆ ಸುಳ್ಳುಗಳ ಸರಮಾಲೆಯನ್ನು ಪೋಣಿಸುವ ಕಲೆಯನ್ನು ಈ ಪೋರನು ಏಕಲವ್ಯನೋಪಾದಿಯಲ್ಲಿ ಕಲಿತುಕೊಳ್ಳಲು, ಆತನ ತಂದೆಯೇ "ಗುರು" ಎನಿಸಿದ್ದರು!. 

ಉದ್ಯೋಗಸ್ಥ ದಂಪತಿಗಳಾದ ರಾಜೇಶ ಮತ್ತು ರಾಧಿಕಾಳ ಮುದ್ದಿನ ಮಗನಾದ ಕೃಷ್ಣನು, ಹಗಲಿರುಳು ತನ್ನ ಅಜ್ಜಿಯ ನೆರಳಿನಂತೆ ಇರುತ್ತಿದ್ದನು. ತಂದೆತಾಯಿಯ ಪ್ರೀತಿಯಿಂದ ವಂಚಿತನಾಗಿದ್ದ ಈ ಪುಟ್ಟ ಮಗುವಿಗೆ ಅಜ್ಜಿಯೇ ಪಂಚಪ್ರಾಣ ಎನಿಸಿದ್ದುದು ವಿಶೇಷವೇನಲ್ಲ. 

ಹಗಲಿಡೀ ದುಡಿದು ಮನೆಗೆ ಮರಳುವಾಗ ಬಳಲಿ ಬಸವಳಿದಿರುತ್ತಿದ್ದ ಈ ದಂಪತಿಗಳಿಗೆ ಒಂದಿಷ್ಟು ಮುಂಗೋಪವೂ ಇದ್ದಿತು. ಪ್ರತಿನಿತ್ಯ ಕತ್ತಲಾಗುವ ಹೊತ್ತಿನಲ್ಲಿ ತಂದೆ ತಾಯಿಯೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ತುಂಟನ ತಂಟೆಗಳು ಮಿತಿಮೀರಿದಾಗ, ಸಿಟ್ಟಿಗೇಳುತ್ತಿದ್ದ  ರಾಜೇಶನು ಎರಡೇಟು ಬಿಗಿಯುತ್ತಿದ್ದನು. ಆದರೆ ಏಟು ಬಿದ್ದೊಡನೆ ಅಳಲಾರಂಭಿಸುತ್ತಿದ್ದ ಮಗುವನ್ನು ಸಂತೈಸಲು ಆತನನ್ನು ಎತ್ತಿಕೊಂಡು ಮುದ್ದಾಡಿದ ಬಳಿಕ, ನಾಳೆ ಸಂಜೆ ಮನೆಗೆ ಬರುವಾಗ ನಿನಗಾಗಿ ಡೈರಿ ಮಿಲ್ಕ್ ಚಾಕಲೇಟು ತರುತ್ತೇನೆ ಎನ್ನುತ್ತಿದ್ದನು. ಇದೇ ರೀತಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕೃಷ್ಣನು ಅತ್ತೊಡನೆ ಆತನಿಗೆ ಆಟಿಕೆಗಳು,ಬಲೂನು,ಸೈಕಲ್, ಹೊಸಬಟ್ಟೆ ಇತ್ಯಾದಿಗಳನ್ನು "ನಾಳೆ ಸಂಜೆ ತಂದು ಕೊಡುತ್ತೇನೆ" ಎಂದು ಸಂತೈಸುತ್ತಿದ್ದ ರಾಜೇಶನು, ಕೊಟ್ಟ ಮಾತನ್ನು ಯಾವತ್ತೂ ಪರಿಪಾಲಿಸುತ್ತಿರಲಿಲ್ಲ!. 

ಆದರೆ ಪ್ರತಿರಾತ್ರಿ ಕೃಷ್ಣನು ಮಲಗುವ ಮುನ್ನ ಆತನ ಅಜ್ಜಿಯು ತಪ್ಪದೇ ಹೇಳಬೇಕಾಗಿದ್ದ "ಪುಣ್ಯಕೋಟಿಯ ಕಥೆ'ಯಲ್ಲಿ, ನುಡಿದಂತೆಯೇ ನಡೆಯಲೇ ಬೇಕೆನ್ನುವ ಅರ್ಥದ "ಕೊಟ್ಟ ಮಾತಿಗೆ ತಪ್ಪಲಾರೆ......"ಕೇಳಿದೊಡನೆ ಕೃಷ್ಣನು ಕಣ್ಣೀರು ಸುರಿಸುತ್ತಿದ್ದನು. ಅಜ್ಜಿ ವಿವರಿಸುತ್ತಿದ್ದ ನುಡಿಗಳಿಗೂ, ತನ್ನ ತಂದೆಯ ನಡವಳಿಕೆಗಳಿಗೂ ಇರುವ ವ್ಯತ್ಯಾಸಗಳು ಈ ಪುಟ್ಟ ಬಾಲಕನ ನಿಷ್ಕಲ್ಮಶ ಮನದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದ್ದವು. ಪ್ರಾಯಶಃ ನುಡಿಗಿಂತ ನಡೆ ಮೇಲು ಎಂದು ಭಾವಿಸಿದ ಕೃಷ್ಣನು, ತನ್ನ ತಂದೆಯ ನಡೆನುಡಿಗಳನ್ನು ಅನುಕರಿಸಲು ಆರಂಭಿಸಿದ ಪರಿಣಾಮವಾಗಿ, ಸುಳ್ಳು ಹೇಳುವ ಕಲೆಯನ್ನು ಕರತಲಾಮಲಕವಾಗಿಸಿಕೊಂಡಿದ್ದನು!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೬-೧೦-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 
                          

No comments:

Post a Comment