Wednesday, September 18, 2013

Placebo- the wonder drug!




                                 ಔಷದವಲ್ಲದ ಅದ್ಭುತ ಔಷದ: ಪ್ಲಾಸಿಬೊ!

ಒಂದೂರಿನಲ್ಲಿ ರಾಜನೊಬ್ಬ ಗುಣವಾಗದ ಕಾಯಿಲೆಯಿಂದ ಪೀಡಿತನಾಗಿದ್ದ. ಯಾವ ವೈದ್ಯರ ಔಷದವೂ ಪರಿಣಾಮ ಬೀರದಾಗ, ತನ್ನ ಕಾಯಿಲೆಯನ್ನು ಗುಣಪಡಿಸುವ ವೈದ್ಯರಿಗೆ ಅರ್ಧ ರಾಜ್ಯವನ್ನೇ ಬಹುಮಾನವಾಗಿ ಕೊಡುವುದಾಗಿಯೂ ರಾಜ ಡಂಗುರ ಹೊಡೆಸಿದ. ಆದರೂ ಪ್ರಯೋಜನವಾಗಲಿಲ್ಲ. 

ಒಂದು ದಿನ, ಪಕ್ಕದ ಊರಿನ ಬೆಟ್ಟವೊಂದರಲ್ಲಿ ಒಬ್ಬ ವೃದ್ಧ ಪಂಡಿತನಿರುವನೆಂದೂ, ಎಂತೆಂಥ ಕಾಯಿಲೆಗಳನ್ನೂ ಗುಣಪಡಿಸುವಲ್ಲಿ ಆಟ ವಿಶೇಷ ಸಿದ್ದಿಪಡೆದಿರುವನೆಂದೂ ದೂತನೊಬ್ಬ ರಾಜನಿಗೆ ಸುದ್ದಿ ನೀಡಿದ. ಕೂಡಲೇ ರಾಜ ತನ್ನ ಮಂತ್ರಿಯೊಂದಿಗೆ ಕುದುರೆಯಲ್ಲಿ ಪಕ್ಕದೂರಿನ ಬೆಟ್ಟವನ್ನು ಏರಿ, ಪಂಡಿತನನ್ನು ಭೇಟಿಯಾದ. 

ರಾಜನನ್ನು ಪರೀಕ್ಷಿಸಿದ ಪಂಡಿತ ಭಸ್ಮವೊಂದರ ಪೊಟ್ಟಣವನ್ನು ನೀಡಿ," ರಾಜ, ಬರಿಗಾಲಲ್ಲೇ ನಡೆದು ಅರಮನೆಯನ್ನು ಸೇರಿದ ಬಳಿಕ ಈ ಭಸ್ಮವನ್ನು ಹಣೆಗೆ ಹಚ್ಚಿಕೋ" ಎಂದ. ರಾಜ ಪಂಡಿತನ ಸೂಚನೆಯನ್ನು ಅಕ್ಷರಶಃ ಪರಿಪಾಲಿಸಿ ಬೇಗನೆ ಗುಣಮುಖನಾದ!. ರಾಜನಿಗೆ ಪಂಡಿತನ ಚಿಕಿತ್ಸೆಯಿಂದ ತನ್ನ ಕಾಯಿಲೆ ಗುಣವಾಗಿದ್ದರಿಂದ ಅಮಿತಾನಂದವಾಗಿತ್ತು. ಅಂತೆಯೇ ತನ್ನ ಮಾತಿಗೆ ತಪ್ಪದೆ ಅರ್ಧ ರಾಜ್ಯವನ್ನು ಬಹುಮಾನವಾಗಿ ನೀಡುವುದಾಗಿ ತಿಳಿಸಲು ರಾಜ ಮತ್ತೊಮ್ಮೆ ಪಂಡಿತನ ಬಳಿಗೆ ಬಂದ. ರಾಜನನ್ನು ಕಂಡು ನಸುನಕ್ಕ ಪಂಡಿತನು, ರಾಜ, ನಾನು ಅಂತಹ ಮಹತ್ಕಾರ್ಯವನ್ನೇನೂ ಮಾಡಿಲ್ಲ. ನೀನು ನನ್ನ ಮೇಲಿಟ್ಟ ವಿಶ್ವಾಸವೇ ನಿನ್ನನ್ನು ಗುಣಮುಖನನ್ನಾಗಿಸಿತು. ವಾಸ್ತವವಾಗಿ ನಾನು ನಿನಗೆ ನೀಡಿದ್ದು ಭಸ್ಮವೇ ಅಲ್ಲ, ನಮ್ಮ ಅಡುಗೆಮನೆಯ ಒಲೆಯಲ್ಲಿನ ಬೂದಿ,ಎಂದನು. 

ವಿಶ್ವಾಸ ಎನ್ನುವುದು ಎಷ್ಟು ಪರಿಣಾಮಕಾರಿ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಅನೇಕ ವಿಧದ ಪರ್ಯಾಯ ಚಿಕಿತ್ಸಾ ಕ್ರಮಗಳು ರೋಗಿಯ ಮೇಲೆ ಪರಿಣಾಮ ಬೀರುವುದು ಈ ವಿಶ್ವಾಸದಿಂದಲೇ. ಆ ಕಾರಣಕ್ಕಾಗಿಯೇ ಆಧುನಿಕ ವೈದ್ಯವಿಜ್ಞಾನವೂ ತನ್ನ ಚಿಕಿತ್ಸಾ ಕ್ರಮಗಳಲ್ಲಿ "ವಿಶ್ವಾಸ"ದ ಲಾಭವನ್ನು ಪಡೆದುಕೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಸಾಮಾನ್ಯವಾಗಿ ವೈದ್ಯರು ನೀಡುವ ಮಾತ್ರೆ,ಮುಲಾಮು,ಕ್ಯಾಪ್ಸೂಲ್,ಸಿರಪ್ ಹಾಗೂ ಇಂಜೆಕ್ಷನ್ ಗಳನ್ನು ಬಣ್ಣ,ವಾಸನೆ,ರುಚಿ,ರೂಪ ಇತ್ಯಾದಿಗಳಲ್ಲಿ ಹೋಲುವ, ಆದರೆ ವಾಸ್ತವಾಗಿ ಔಷದವೇ ಅಲ್ಲದ ದಿವ್ಯೌಷದಗಳಿಗೆ ವೈದ್ಯಕೀಯ ಪರಿಭಾಷೆಯಲ್ಲಿ "ಪ್ಲಾಸಿಬೊ" ಎನ್ನುತ್ತಾರೆ. ನಿಮಗೆ ಹೊಟ್ಟೆನೋವು ಅಥವಾ ತಲೆನೋವು ಬಾಧಿಸಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. ನಿಮ್ಮ ಪರಿಚಿತ ವೈದ್ಯರು ನೀಡಿದ ಗುಳಿಗೆಯನ್ನು ನುಂಗಿ, ನೀರು ಕುಡಿದೊಡನೆ ನೋವು ಕಡಿಮೆಯಾಗುತ್ತಿರುವ "ಹಿತಾನುಭವ" ಆಗಿದ್ದುದು ನಿಜವಲ್ಲವೇ. ಇದನ್ನೇ "ಪ್ಲಾಸಿಬೋ ಎಫೆಕ್ಟ್ " ಎನ್ನುತ್ತಾರೆ. ಯಾವುದೇ ಔಷದ ಅಪೇಕ್ಷಿತ ಪರಿಣಾಮ ಬೀರಲು, ವೈದ್ಯರ ಮೇಲೆ ರೋಗಿಗಳಿಗೆ ಇರುವ ಅಪರಿಮಿತ ವಿಶ್ವಾಸವೇ ಕಾರಣವೆಂದು ಅನೇಕರಿಗೆ ತಿಳಿದಿಲ್ಲ. 

ಉಪಯೋಗ 

ಅನೇಕ ವೈದ್ಯರು ಸಂದರ್ಭೋಚಿತವಾಗಿ ತಮ್ಮ ರೋಗಿಗಳನ್ನು ಬಾಧಿಸುವ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಪ್ಲಾಸಿಬೊ ಗಳನ್ನು ಬಳಸುತ್ತಾರೆ. ನೂತನವಾಗಿ ಸಂಶೋಧಿಸಿದ ಔಷದವೊಂದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಸಂದರ್ಭದಲ್ಲೂ ಪ್ಲಾಸಿಬೊಗಳ ಬಳಕೆ ಅನಿವಾರ್ಯ. ಚಿಕಿತ್ಸೆ ನಿಷ್ಪ್ರಯೋಜಕವೆನಿಸುವ ಅನೇಕ ಗಂಭೀರ, ಮಾರಕ ಕಾಯಿಲೆಗಳ ಅಂತಿಮ ಹಂತದಲ್ಲಿ(ಉದಾಹರಣೆಗೆ ತೀವ್ರವಾಗಿ ಉಲ್ಬಣಿಸಿರುವ ಕ್ಯಾನ್ಸರ್) "ರೋಗಭೀತಿ"(ಹೈಪೋಕಾಂಡ್ರಿಯಾಸಿಸ್) ಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಚಿಕಿತ್ಸೆಯ ಅವಶ್ಯಕತೆಯೇ ಇಲ್ಲದಿದ್ದರೂ, ಚಿಕಿತ್ಸೆ ಅನಿವಾರ್ಯವೆಂದು ಧೃಢವಾಗಿ ನಂಬಿರುವ ವ್ಯಕ್ತಿಗಳಿಗೆ ಪ್ಲಾಸಿಬೊಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ!. 

ಪ್ಲಾಸಿಬೊಗಳನ್ನು ಔಷದೀಯ ಗುಣವಿಲ್ಲದ ಆದರೆ ರೋಗಿಗಳಿಗೆ ಯಾವುದೇ ಸಂದರ್ಭದಲ್ಲೂ ಅಪಾಯಕಾರಿ ಎನಿಸದ ದ್ರವ್ಯಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಪರೂಪದಲ್ಲಿ ವೈದ್ಯರು ನೈಜ ಔಷದಗಳನ್ನೇ ಪ್ಲಾಸಿಬೊ ರೂಪದಲ್ಲಿ ಬಳಸುವುದುಂಟು. ಅನೇಕ ಸಂದರ್ಭಗಳಲ್ಲಿ ಯಾವುದೇ ಔಷದವು ತನ್ನ ಔಷದೀಯ ಗುಣಕ್ಕಿಂತಲೂ ಪ್ಲಾಸಿಬೊ ಪರಿಣಾಮದಿಂದಲೇ ರೋಗಿಗೆ ಉಪಶಮನವನ್ನು ನೀಡುವಲ್ಲಿ ಯಶಸ್ವಿಯಾಗುವುದು ಸುಳ್ಳೇನಲ್ಲ!. 

ವಿಶಿಷ್ಟ ವ್ಯಕ್ತಿತ್ವದ ರೋಗಿಗಳಲ್ಲಿ ಶಾರೀರಿಕ ಸಮಸ್ಯೆಗಳಿಗಿಂತ "ಮಾನಸಿಕ ಜನ್ಯ ಶಾರೀರಿಕ ಸಮಸ್ಯೆಗಳು" ಉದ್ಭವಿಸಿದಾಗ, ಪ್ಲಾಸಿಬೊಗಳು ಅತ್ಯುತ್ತಮ ಪರಿಣಾಮ ಬೀರಬಲ್ಲವು. ಮಾನಸಿಕ ಉದ್ವೇಗ,ತೀವ್ರ ಆಯಾಸ,ನಿಶ್ಶಕ್ತಿ, ತಲೆನೋವು, ನಿದ್ರಾಹೀನತೆ, ಉಸಿರು ಕಟ್ಟಿದಂತಾಗುವುದು, ಹಸಿವೆಯಿಲ್ಲದಿರುವುದು ಹಾಗೂ ಮಲಬದ್ಧತೆಗಳಂತಹ ಸಮಸ್ಯೆಗಳು ಮಾನಸಿಕಜನ್ಯವೆಂದು ಖಚಿತವಾದಾಗ, ಅನುಭವಿ ವೈದ್ಯರು ಪ್ಲಾಸಿಬೊಗಳನ್ನು ಯಶಸ್ವಿಯಾಗಿ ಬಳಸಿರುವ ಅನೇಕ ನಿದರ್ಶನಗಳಿವೆ. 

ಪ್ಲಾಸಿಬೊಗಳನ್ನು ಬಳಸುವಾಗ ಇವುಗಳು ರೋಗಿಯ ಕಾಯಿಲೆಗೆ ಸೂಕ್ತವೆನಿಸುವಂತೆ, ರೋಗಿ ಅಪೇಕ್ಷಿಸಿರುವಂತೆಯೇ ಇದ್ದು, ಯಾವುದೇ ಸಂದರ್ಭದಲ್ಲೂ ರೋಗಿಗೆ ಹಾನಿಕರವೆನಿಸಬಾರದು. ಅಂತೆಯೇ ಇವು ಅತ್ಯಂತ ಪರಿಣಾಮಕಾರಿ ಎನಿಸಲು ಇವುಗಳ ಬಣ್ಣ, ವಾಸನೆ, ಆಕಾರ ಮತ್ತು ರೂಪಗಳು ವಿಶಿಷ್ಟವಾಗಿರುವುದೂ ಅವಶ್ಯ. ಪ್ಲಾಸಿಬೊಗಳಲ್ಲಿ ಎಲ್ಲಕಿಂತ ಅದ್ಭುತ ಪರಿಣಾಮ ಬೀರುವುದರಲ್ಲಿ ಸೂಜಿಮದ್ದಿಗೆ ಅಗ್ರಸ್ಥಾನ ಸಲ್ಲುತ್ತದೆ. ಹೆಚ್ಚಿನ ರೋಗಿಗಳಿಗೆ ಹಲವಾರು ದಿನಗಳ ಮಾತ್ರೆ-ಔಷದ ಸೇವನೆಯಿಂದ ದೊರೆಯುವಷ್ಟೇ ಉಪಶಮನವು ಕೇವಲ ಒಂದು ಇಂಜೆಕ್ಷನ್ ನೀಡಬಲ್ಲದೆಂದರೆ ಇದರ ಪ್ರಭಾವ ಎಷ್ಟೆಂದು ಸುಲಭವಾಗಿ ಊಹಿಸಬಹುದು. ಶೇಕಡಾ ೮೦ ರಷ್ಟು ಪರಿಣಾಮಕಾರಿಯಾಗಿರುವ ಇಂಜೆಕ್ಷನ್ ಗಳನ್ನು ಕೆಲವೊಮ್ಮೆ ವೈದ್ಯರೇ ಒತ್ತಾಯಪೂರ್ವಕವಾಗಿ ನೀಡಲು ಅಥವಾ ರೋಗಿಗಳೇ ತಾವಾಗಿ ಕೇಳಿ ಪಡೆದುಕೊಳ್ಳಲು "ಪ್ಲಾಸಿಬೊ ಪರಿಣಾಮ" ಕಾರಣವೇ ಹೊರತು ಇಂಜೆಕ್ಷನ್ ನಲ್ಲಿರುವ ಔಷದವಲ್ಲ!. 

ನೂತನ ಔಷದವೊಂದನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ  ಮುನ್ನ ಕಡ್ಡಾಯವಾಗಿ ನಡೆಸುವ ಕೆಲವೊಂದು ಪ್ರಯೋಗ-ಪರೀಕ್ಷೆಗಳ ಸಂದರ್ಭದಲ್ಲಿ,ಈ ಔಷದಗಳನ್ನು ನೀಡುವ ವೈದ್ಯರು ಹಾಗೂ ಸೇವಿಸುವ ರೋಗಿಗಳು ಅದರ ಪರಿಣಾಮಗಳ ಬಗ್ಗೆ ತಾರತಮ್ಯ ಮಾಡದಂತೆ ಮತ್ತು ಪೂರ್ವಾಗ್ರಹ ಪೀಡಿತರಾಗಿ ನೇತ್ಯಾತ್ಮಕ ವರದಿ ನೀಡದಂತೆ, ನೈಜ ಔಷದಗಳೊಂದಿಗೆ ಪ್ಲಾಸಿಬೊಗಳನ್ನು ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ವೈದ್ಯರಿಗೆ ತಾನು ನೀಡಿದ ಹಾಗೂ ರೋಗಿಗಳಿಗೆ ತಾವು ಸೇವಿಸಿದ ಔಷದವು ನೈಜ ಅಥವಾ ಪ್ಲಾಸಿಬೊ ಎಂದು ತಿಳಿದಿರುವುದೇ ಇಲ್ಲ. ಇಂತಹ ಪ್ರಯೋಗಗಳ ಮೂಲಕ ನೂತನ ಔಷದಗಳ ಗುಣಾವಗುಣಗಳನ್ನು ನಿಖರವಾಗಿ ಅರಿತುಕೊಳ್ಳಲು ಸಾಧ್ಯವಾಗುವುದು. 

ವೈದ್ಯರು ನೀಡುವ ಭರವಸೆಗಳ ಮೂಲಕ ರೋಗಿಯ ಆತ್ಮವಿಶ್ವಾಸವನ್ನು ವೃದ್ಧಿಸುವಂತೆ ಮಾಡಿ, ಪ್ಲಾಸಿಬೊ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುವುದು ಸುಲಭಸಾಧ್ಯ. ಇದೆ ರೀತಿಯಲ್ಲಿ ರೋಗಿ ಸಾಮಾನ್ಯವಾಗಿ ಭೇಟಿಮಾಡುವ ವೈದ್ಯರಿಗಿಂತ, ಅಪರಿಚಿತರಾಗಿರುವ ಖ್ಯಾತ ತಜ್ಞರೊಬ್ಬರು ನೀಡುವ ಭರವಸೆಯು "ಸಂಜೀವಿನಿ" ಯಂತೆ ಪರಿಣಾಮಕಾರಿಯಾಗುವುದು. 

ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುವ ವಿವಿಧರೀತಿಯ ಔಷದಗಳನ್ನು ಖರೀದಿಸಿ, ಸ್ವಯಂ ಪ್ರಯೋಗಿಸುವ ಹವ್ಯಾಸವಿರುವ ವ್ಯಕ್ತಿಗಳನ್ನು ಸ್ವಯಂವೈದ್ಯರು ಎನ್ನುತ್ತಾರೆ. ಪ್ಲಾಸಿಬೊಗಳಂತೆಯೇ ಸ್ವಯಂ ಪ್ರಯೋಗಿಸಿದ ಔಷದಗಳಿಂದಲೂ ನಿರೀಕ್ಷಿತ ಉಪಶಮನ ಪಡೆಯುವುದು ಆಶ್ಚರ್ಯವೇನಲ್ಲ!. 

ಮಾನಸಿಕ ಖಿನ್ನತೆ ಹಾಗೂ ಕೆಲವಿಧದ ಮಾನಸಿಕ ರೋಗಿಗಳಲ್ಲಿ ಪ್ಲಾಸಿಬೊ ಚಿಕಿತ್ಸೆಯು ನಿಷ್ಪ್ರಯೋಜಕವೆನಿಸುವುದು. ಆದರೆ ದುರ್ಬಲ ಮನಸ್ಸಿನ ವ್ಯಕ್ತಿಗಳು ಮಾತ್ರ ಸುಲಭದಲ್ಲೇ ಪ್ಲಾಸಿಬೊ ಮೋಡಿಗೆ ಮರುಳಾಗುತ್ತಾರೆ. ಅಂತೆಯೇ ಸಂದೇಹದ ಸ್ವಭಾವದ ವ್ಯಕ್ತಿಗಳಿಗೆ ವೈದ್ಯರು ನೀಡುವ ಅತ್ಯುತ್ತಮ ಔಷದಗಳೇ ಉಪಶಮನವನ್ನು ನೀಡಲು ವಿಫಲವಾಗುವುದರಿಂದ, ಪ್ಲಾಸಿಬೊಗಳು ಸಫಲವಾಗುವ ಸಾಧ್ಯತೆಗಳೇ ಇಲ್ಲವೆನ್ನಬಹುದು. ಇಂತಹ ವಿಶಿಷ್ಟವ್ಯಕ್ತಿಗಳು ತಮ್ಮ ಮೇಲೆ ಯಾವುದೇ ಔಷದಗಳು ಪರಿಣಾಮ ಬೀರದೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಸ್ವಾಭಾವಿಕವೂ ಹೌದು. 

ದುಷ್ಪರಿಣಾಮಗಳು 

ನೈಜ ಔಷದಗಳಂತೆಯೇ ಪ್ಲಾಸಿಬೊ ಸೇವನೆಯು ಕೆಲವೊಂದು ಅಡ್ಡ ಪರಿಣಾಮಗಳನ್ನು ತೋರಬಹುದು. ಇವುಗಳಲ್ಲಿ ಅಲರ್ಜಿ,ತಲೆನೋವು,ಬಾಯಿ-ಗಂಟಲುಗಳು ಒಣಗಿದಂತೆ ಆಗುವುದು,ತೂಕಡಿಕೆ,ನಿದ್ರಾಹೀನತೆ,ಬಾಯಿಹುಣ್ಣು, ಅತಿಆಯಾಸ,ಮಲಬದ್ಧತೆ,ನಿಮಿರು ದೌರ್ಬಲ್ಯಗಳಂತಹ ಸಮಸ್ಯೆಗಳು ಪ್ರಮುಖವಾಗಿವೆ. ಆದರೆ ಇಂತಹ ಸಂದರ್ಭದಲ್ಲಿ ವೈದ್ಯರು ನೀಡುವ ಮತ್ತೊಂದು ಪ್ಲಾಸಿಬೊ ಸೇವಿಸಿದೊಡನೆ, ಈ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ಮಾಯವಾಗುತ್ತವೆ!. 

ಅಂತಿಮವಾಗಿ, ಈ ಲೇಖನವನ್ನು ಓದಿದ ಬಳಿಕ ನಿಮ್ಮ ಕುಟುಂಬ ವೈದ್ಯರು ಅಥವಾ ತಜ್ಞರು ಮುಂದೆ ಯಾವುದೇ ಸಂದರ್ಭದಲ್ಲಿ ನಿಮಗೆ ನೀಡಬಹುದಾದ ಔಷದಗಳನ್ನು ವಿನಾಕಾರಣ ಪ್ಲಾಸಿಬೊ ಎಂದು ಸಂದೇಹಿಸದಿರಿ!. 

 ಡಾ. ಸಿ. ನಿತ್ಯಾನಂದ ಪೈ,ಪುತ್ತೂರು  

ತರಂಗ ವಾರಪತ್ರಿಕೆಯ ೨೪-೦೫-೨೦೦೪ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 

 

No comments:

Post a Comment