Thursday, September 26, 2013

Eating too much salt is dangerous


                                           ಉಪ್ಪು ತಿನ್ನುವುದರಲ್ಲಿ ತಪ್ಪೇನಿದೆ?

      ಉಪ್ಪಿಗಿಂತ ರುಚಿಯಿಲ್ಲ ......, ಊಟಕ್ಕಿಲ್ಲದ ಉಪ್ಪಿನಕಾಯಿ ......., ಇತ್ಯಾದಿ ಆಡುಮಾತುಗಳು ನಮ್ಮ ದೈನಂದಿನ ಆಹಾರದಲ್ಲಿ ನಾವೆಲ್ಲರೂ ತಪ್ಪದೇ ಬಳಸುತ್ತಿರುವ ಉಪ್ಪಿನ ಮಹತ್ವವನ್ನು ಸೂಚಿಸುತ್ತವೆ. ಆದರೆ ಉಪ್ಪಿನ ಸ್ವಾದಕ್ಕೆ ಮಾರುಹೋಗಿರುವ ಭಾರತೀಯರಿಗೆ, ಅತಿಯಾದ ಉಪ್ಪಿನ ಸೇವನೆಯಿಂದ ಮುಂದೊಂದು ದಿನ ಬಂದೆರಗಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಕಿಂಚಿತ್ ಮಾಹಿತಿ ಇಲ್ಲಿದೆ. 
-------------                  ------------------                         ----------------                       ----------------             -----------------
"ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎನ್ನುವ ಆಡುಮಾತನ್ನು ನೀವು ಕೇಳಿರಲೇಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಸೂಚಿಸುವ ಈ ಅರ್ಥಗರ್ಭಿತ ಮಾತುಗಳು, ಅತಿಯಾಗಿ ಉಪ್ಪು ತಿಂದವರು ಮುಂದೊಂದು ದಿನ ಔಷದವನ್ನು ಸೇವಿಸಲೇಬೇಕು ಎನ್ನುವ ವಿಚಾರಕ್ಕೂ ಅನ್ವರ್ಥವೆನಿಸುತ್ತದೆ!. 

ಉಮ್ಮಕ್ಕನ ಉಪ್ಪಿನಕಾಯಿ 

ಉಪ್ಪಿನಕಾಯಿ ಇಲ್ಲದಿದ್ದಲ್ಲಿ ಊಟವನ್ನೇ ಊಟವನ್ನೇ ಮಾಡದೆ ಉಪವಾಸವಿರುತ್ತಿದ್ದ ಉಮ್ಮಕ್ಕನಿಗೆ, ಇದೀಗ ಮಧ್ಯವಯಸ್ಸಿನಲ್ಲಿ ಅತಿಯಾದ ಆಯಾಸದೊಂದಿಗೆ ತಲೆಸುತ್ತಿದಂತೆ ಆಗುತ್ತಿತ್ತು. ಸಾಮಾನ್ಯವಾಗಿ ಭಾರತೀಯ ನಾರಿಯರು ನಂಬಿರುವಂತೆ, ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಕಂಡುಬರುವ ಇಂತಹ ತೊಂದರೆಗಳಿಗೆ ಪಿತ್ತಭಾದೆಯೇ ಕಾರಣವೆಂದು ಉಮ್ಮಕ್ಕನೂ ಧೃಢವಾಗಿ ನಂಬಿದ್ದಳು. 

ತನ್ನನ್ನು ಪೀಡಿಸುತ್ತಿರುವ ಪಿತ್ತಭಾದೆಯನ್ನು ಶಮನಗೊಳಿಸಲು ನೆತ್ತಿಗೆ ಲಿಂಬೆ ರಸವನ್ನು ಹಾಕುವುದರಿಂದ ಹಿಡಿದು, ದಿನದಲ್ಲಿ ನಾಲ್ಕಾರುಬಾರಿ "ಪುನಾರ್ಪುಳಿ"ಯಾ ಶರಬತ್ತು ಸೇವಿಸುವುದೇ ಮುಂತಾದ ಮನೆಮದ್ದುಗಳು ಅಪೇಕ್ಷಿತ ಪರಿಹಾರವನ್ನು ನೀಡಿರಲಿಲ್ಲ. ಪತ್ನಿಯ ಸಮಸ್ಯೆ ದಿನೇದಿನೇ ಉಲ್ಬಣಿಸುತ್ತಿರುವುದನ್ನು ಕಂಡು ಗಾಬರಿಗೊಂಡ ಸೋಮಪ್ಪನು, ಆಕೆಯನ್ನು ಸಮೀಪದ ವೈದ್ಯರಲ್ಲಿಗೆ ಕರೆದೊಯ್ದನು. 

ಉಮ್ಮಕ್ಕನ ಸಮಸ್ಯೆ, ಆಕೆಯ ದಿನಚರಿ ಹಾಗೂ ಆಹಾರ-ವಿಹಾರಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಶಾರೀರಿಕ ತಪಾಸಣೆ ನಡೆಸಿದ ವೈದ್ಯರಿಗೆ, ಆಕೆಯ ರಕ್ತದ ಒತ್ತಡವು ತೀವ್ರವಾಗಿ ಏರಿರುವುದು ಪತ್ತೆಯಾಗಿತ್ತು. ತದನಂತರ ಕೆಲವೊಂದು ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಜೀವನಪರ್ಯಂತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಉಮ್ಮಕ್ಕನಿಗೆ ಸೂಕ್ಷ್ಮವಾಗಿ ಸೂಚಿಸಿದ್ದರು. ಜೊತೆಗೆ ದೈನಂದಿನ ಆಹಾರ ಪದಾರ್ಥಗಳಲ್ಲಿ ಆಕೆ ಬಳಸುತ್ತಿರುವ ಉಪ್ಪಿನ ಪ್ರಮಾಣವನ್ನು ಕನಿಷ್ಠ ಅರ್ಧದಷ್ಟು ಕಡಿಮೆ ಮಾಡಲೇಬೇಕೆಂದು ಹೇಳಿದ್ದರು. ಅಂತೆಯೇ ಉಪ್ಪುಖಾರಗಳು ಅತಿಯಾಗಿರುವ ಮೀನು- ಮಾಂಸಗಳ ಖಾದ್ಯಗಳು ಹಾಗೂ ಕೊಬ್ಬಿನ ಅಂಶ ಅತಿಯಾಗಿರುವ ಎಣ್ಣೆ, ಬೆಣ್ಣೆ ಮತ್ತು ತುಪ್ಪಗಳ ಸೇವನೆಯನ್ನೇ ವರ್ಜಿಸುವಂತೆ ಎಚ್ಚರಿಕೆ ನೀಡಿದ್ದರು. 

ವೈದ್ಯರ ಸೂಚನೆಯನ್ನು ಚಾಚೂ ತಪ್ಪದೆ ಪರಿಪಾಲಿಸಲು ಆರಂಭಿಸಿದ್ದ ಉಮ್ಮಕ್ಕನಿಗೆ ಪಂಚಪ್ರಾಣವೆನಿಸಿದ್ದ ಉಪ್ಪಿನಕಾಯಿ ಇಲ್ಲದೆ ತುತ್ತು ಅನ್ನವೂ ಸೇರುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಆಕೆ ಸೇವಿಸುತ್ತಿದ್ದ ಅನ್ನಾಹಾರಗಳ ಪ್ರಮಾಣ ಕಡಿಮೆಯಾದಂತೆಯೇ, ಆಕೆಯ ಧಡೂತಿ ದೇಹವೂ ನಿಧಾನವಾಗಿ ಕರಗಲು ಆರಂಭಿಸಿತ್ತು. ಇದರೊಂದಿಗೆ "ಜೀವಭಯ" ದಿಂದಾಗಿ ಕ್ಲಪ್ತ ಸಮಯದಲ್ಲಿ ತಪ್ಪದೇ ಸೇವಿಸುತ್ತಿದ್ದ ಉಮ್ಮಕ್ಕನು, ವರ್ಷ ಕಳೆಯುವಷ್ಟರಲ್ಲೇ ೧೫ ಕೆ. ಜಿ ತೂಕವನ್ನೂ ಕಳೆದುಕೊಂಡಿದ್ದಳು. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಆಕೆಯ ರಕ್ತದ ಒತ್ತಡವು ಅಪೇಕ್ಷಿತ ಮಟ್ಟಕ್ಕೆ ಇಳಿಯುವುದರೊಂದಿಗೆ, ಆಕೆಯನ್ನು ಕಳೆದ ನಾಲ್ಕಾರು ವರ್ಷಗಳಿಂದ ಬಾಧಿಸುತ್ತಿದ್ದ "ಮಂಡಿ ನೋವು" ಇದೀಗ ಮಾಯವಾಗಿತ್ತು!. 

ಅಡುಗೆ ಉಪ್ಪು 

ರಸಾಯನ ಶಾಸ್ತ್ರದಲ್ಲಿ ಸೋಡಿಯಂ ಕ್ಲೋರೈಡ್ ಎಂದು ಕರೆಯಲ್ಪಡುವ ಅಡುಗೆ ಉಪ್ಪನ್ನು ಆಡುಭಾಷೆಯಲ್ಲಿ ಕಾಮನ್ ಸಾಲ್ಟ್ ಎಂದೂ ಕರೆಯುತ್ತಾರೆ. ನಾವೆಲ್ಲರೂ ಪ್ರತಿನಿತ್ಯ ತಪ್ಪದೇ ಸೇವಿಸುವ ಉಪ್ಪಿನಲ್ಲಿ ಶೇ. ೪೦ ರಷ್ಟು ಸೋಡಿಯಂ ಮತ್ತು ಶೇ. ೬೦ ರಷ್ಟು ಕ್ಲೋರೈಡ್ ನ ಅಂಶಗಳಿವೆ. ನಮ್ಮ ಶರೀರದಲ್ಲಿರುವ ದ್ರವಾಂಶಗಳನ್ನು ಮತ್ತು ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸೋಡಿಯಂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದೇ ಕಾರಣದಿಂದಾಗಿ ಕೆಲವೊಂದು ವ್ಯಾಧಿಗಳು ಬಾಧಿಸಿರುವ ಸಂದರ್ಭದಲ್ಲಿ, ರೋಗಿಯ ಶರೀರದಲ್ಲಿನ ದ್ರವಾಂಶಗಳು ಸ್ವಾಭಾವಿಕವಾಗಿ ವಿಸರ್ಜಿಸಲ್ಪಡದೆ ಶರೀರದಲ್ಲಿ ಸಂಗ್ರಹಿಸಲ್ಪಟ್ಟಿರುವ ಸ್ಥಿತಿಯಲ್ಲಿ ಹಾಗೂ ಅಧಿಕ ರಕ್ತದೊತ್ತಡವಿರುವ ರೋಗಿಗಳಿಗೆ, ಉಪ್ಪಿನ ಸೇವನೆಯನ್ನು ಕಡಿಮೆಮಾಡುವ ಅಥವಾ ವರ್ಜಿಸಬೇಕೆನ್ನುವ ಸಲಹೆಯನ್ನು ವೈದ್ಯರು ನೀಡುತ್ತಾರೆ. 

ಕೆಲವಿಧದ ಗಂಭೀರ ಕಾಯಿಲೆಗಳು ಬಾಧಿಸಿದ ಸಂದರ್ಭವನ್ನು ಹೊರತುಪಡಿಸಿ, ಆರೋಗ್ಯವಂತ ವ್ಯಕ್ತಿಗಳು ಒಂದುದಿನದಲ್ಲಿ ಸೇವಿಸಬಹುದಾದ ಉಪ್ಪಿನ ಪ್ರಮಾಣವು ೨೪೦೦ ಮಿಲಿಗ್ರಾಂ ಮೀರಬಾರದು. ಆದರೆ ತಮ್ಮ ವೈಯುಕ್ತಿಕ ಆರೋಗ್ಯಕ್ಕಿಂತ ತಮ್ಮ "ಜಿಹ್ವಾ ಚಾಪಲ್ಯ"ಕ್ಕೆ ಪ್ರಾಧಾನ್ಯ ನೀಡುವ ಅಧಿಕತಮ ಭಾರತೀಯರು, ತಾವು ಸೇವಿಸುವ ಉಪ್ಪಿನ ಪ್ರಮಾನದತ್ತ ಗಮನವನ್ನೇ ಹರಿಸುವುದಿಲ್ಲ!. 

ನಾವು ದಿನನಿತ್ಯ ಸೇವಿಸುವ ವೈವಿಧ್ಯಮಯ ಆಹಾರಪದಾರ್ಥಗಳಲ್ಲಿ ಧಾರಾಳವಾಗಿ ಉಪ್ಪನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಒಂದಿನಿತೂ ಲಾಭವಿಲ್ಲದಿದ್ದರೂ, ಹಲವಾರು ವರ್ಷಗಳ ಬಳಿಕ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ವಿಶ್ವದ ವಿವಿಧ ದೇಶಗಳ ವಿಭಿನ್ನ ಜನಾಂಗಗಳ ಆಹಾರ ಸೇವನಾ ಕ್ರಮಗಳನ್ನು ಸುದೀರ್ಘಕಾಲ ಅಧ್ಯಯನ ಮಾಡಿರುವ ವಿಜ್ಞಾನಿಗಳು, ವಿಶ್ವದ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪ್ರಜೆಗಳಲ್ಲಿ ಜಠರದ ಕ್ಯಾನ್ಸರ್ ನ ಪ್ರಮಾಣವು ಕ್ಷುಲ್ಲಕವಾಗಿರಲು ಅಲ್ಲಿನ ಜನರು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವು ಅತ್ಯಲ್ಪವಾಗಿರುವುದೇ ಕಾರಣವೆಂದು ಪತ್ತೆಹಚ್ಚಿದ್ದಾರೆ. ಅದೇ ರೀತಿಯಲ್ಲಿ ಜಠರ,ಕರುಳು ಹಾಗೂ ಗುದದ ಕ್ಯಾನ್ಸರ್ ಗಳಿಂದ ಬಳಲುತ್ತಿರುವ ಜನರು ಅತಿಯಾಗಿ ಉಪ್ಪನ್ನು ಸೇವಿಸುವುದರೊಂದಿಗೆ, ತರಕಾರಿ, ಹಣ್ಣುಹಂಪಲುಗಳು ಮತ್ತು ನಾರಿನ ಅಂಶಗಳು ಸಮೃದ್ಧವಾಗಿರುವ ಆಹಾರ ಪದಾರ್ಥಗಳು ಮತ್ತು ಕೆಲವಿಧದ ಜೀವಸತ್ವಗಳನ್ನು ಸೇವಿಸದಿರುವುದೇ ಕಾರಣವೆಂದು ಕಂಡುಹುಡುಕಿದ್ದಾರೆ. 

ಸಾಮಾನ್ಯವಾಗಿ ನಮ್ಮ ದೈನಂದಿನ ಅವಶ್ಯಕತೆಗೆ ನಿಗದಿಸಿರುವ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತದ, ಮೂಳೆಗಳ ಸವೆತ ಮತ್ತು ಕೆಲವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ ಅನೇಕರು ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಬೇಕಾಗಿಲ್ಲ ಎಂದು ವಾದಿಸಲು ಅವರ ಅಜ್ಞಾನವೇ ಕಾರಣವಾಗಿರುತ್ತದೆ. 

ಗಂಭೀರ ಸಮಸ್ಯೆಗಳು 

ಬಹುತೇಕ ಜನರಲ್ಲಿ ಅಧಿಕ ತೂಕ,ಅತಿಬೊಜ್ಜು, ದೀರ್ಘಕಾಲೀನ ಮಧುಮೇಹ,ತೀವ್ರ ಮಾನಸಿಕ ಒತ್ತಡ,ಚಿಂತೆ,ಅತಿಯಾದ ಮದ್ಯ- ಧೂಮಪಾನ ಮತ್ತು ಅನುವಂಶಿಕ ಕಾರಣಗಳಿಂದ ಅಧಿಕ ರಕ್ತದೊತ್ತಡ ಉದ್ಭವಿಸುವ ಸಾಧ್ಯತೆಗಳಿದ್ದು, ಕೇವಲ ಅತಿಯಾದ ಉಪ್ಪಿನ ಸೇವನೆಯೊಂದೇ ಇದಕ್ಕೆ ಕಾರಣವೆನಿಸದು ಎಂದು ನಂಬಲಾಗಿತ್ತು. ಆದರೆ ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿರುವಂತೆ ಶೇ. ೧೦ ರಿಂದ ೨೦ ರಷ್ಟು ಜನರಲ್ಲಿ ಅತಿಯಾದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ ಆರಂಭವಾಗಿರುವುದು ತಿಳಿದುಬಂದಿದೆ. 

ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ಅತಿಯಾದ ಉಪ್ಪಿನ ಸೇವನೆಯಿಂದ ಮಾನವನ ಶರೀರದಲ್ಲಿರುವ ರಕ್ತನಾಳಗಳು ತಮ್ಮ "ಸ್ಥಿತಿ ಸ್ಥಾಪಕತ್ವ ಗುಣ" ವನ್ನು ಕಳೆದುಕೊಂಡು ಪೆಡಸಾಗುತ್ತವೆ. "ಅಥೆರೊಸ್ಕ್ಲೆರೋಸಿಸ್" ಎನ್ನುವ ಈ ಸ್ಥಿತಿ ಉದ್ಬವಿಸಲು ಇನ್ನಿತರ ಕಾರಣಗಳೂ ಇವೆ. ನಿಧಾನಗತಿಯಲ್ಲಿ ಸಂಭವಿಸಬಲ್ಲ ಇಂತಹ ಬದಲಾವಣೆಗಳಿಂದಾಗಿ, ಹೃದಯ- ರಕ್ತನಾಳಗಳ ಕಾಯಿಲೆಗಳು, ಹೃದಯಾಘಾತ ಹಾಗೂ ಮೆದುಳಿನ ಆಘಾತಗಳಂತಹ ಗಂಭೀರ- ಮಾರಕ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ದಿನನಿತ್ಯ ನಾವು ಸೇವಿಸುವ ಉಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ನಮ್ಮ ಶರೀರದಲ್ಲಿನ ಕ್ಯಾಲ್ಸಿಯಂ ನ ಒಂದು ಅಂಶವು ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತದೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಕ್ಯಾಲ್ಸಿಯಂ ನ ಕೊರತೆಯು, ಅಂತಿಮವಾಗಿ ಮೂಲೆಗಳ ಸವೆತ ಹಾಗೂ ದೌರ್ಬಲ್ಯಗಳಲ್ಲಿ ಪರ್ಯವಸಾನಗೊಳ್ಳುವ ಸಾಧ್ಯತೆಗಳೂ ಇವೆ. ಈ ರೀತಿಯ ವೈವಿಧ್ಯಮಯ ಸಮಸ್ಯೆಗಳು ಮುಂದೆ ಎಂದಾದರೂ ನಮ್ಮನ್ನು ಬಾಧಿಸಬಹುದಾದರಿಂದ, ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವನ್ನು ಕನಿಷ್ಠ ಮತ್ತು ಆರೋಗ್ಯಕರ ಮಟ್ಟದಲ್ಲಿ ಇರಿಸಿಕೊಳ್ಳುವುದು ಹಿತಕರವೆನಿಸುವುದು. ಅಂತೆಯೇ ನಮ್ಮ ರಕ್ತದೊತ್ತದವು ಆರೋಗ್ಯಕರ ಮಟ್ಟದಲ್ಲಿ ಇರುವಾಗಲೇ ಈ ನಿಯಮವನ್ನು ಪರಿಪಾಲಿಸುವುದರಿಂದ, ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ಬಂದೆರಗಬಲ್ಲ ಅಧಿಕ ರಕ್ತದೊತ್ತಡವನ್ನು ದೂರವಿರಿಸುವುದು ಸುಲಭಸಾಧ್ಯವೂ ಹೌದು.

ನೀವೇನು ಮಾಡಬಹುದು?

ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ದೈನಂದಿನ ಉಪ್ಪಿನ ಸೇವನೆಯ ಪ್ರಮಾಣವನ್ನು ೨೪೦೦ ಮಿಲಿಗ್ರಾಂ ಗಳಿಗೆ ಮಿತಿಗೊಳಿಸಿ. ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಲ್ಲಿ, ನಿಮ್ಮ ದೈನಂದಿನ ಆಹಾರದಲ್ಲಿ ಬಳಸುತ್ತಿರುವ ಉಪ್ಪಿನ ಪ್ರಮಾಣವನ್ನು ನಿಧಾನವಾಗಿ ಕಡಿಮೆಮಾಡುತ್ತಾ  ಬನ್ನಿ. ಹಠಾತ್ತಾಗಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ನೀವು ಸೇವಿಸುವ ಆಹಾರಗಳ ಸ್ವಾದವೂ ಹಠಾತ್ತಾಗಿ ಬದಲಾಗುವುದರಿಂದ, ನೀವು ಸೇವಿಸುವ ಆಹಾರಗಳ ಪ್ರಮಾಣವೂ ಕಡಿಮೆಯಾಗುವುದರಿಂದ ಅನ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ.

ನಿಮ್ಮ ಮಕ್ಕಳು ಮೆಚ್ಚಿ ಸವಿಯುವ ಬರ್ಗರ್,ಪಿಜ್ಜಾ, ನೂಡಲ್ಸ್, ಕಬಾಬ್ ಹಾಗೂ ವಿವಿಧರೀತಿಯ ಕರಿದ ತಿನಿಸುಗಳಲ್ಲಿ, ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ಉಪ್ಪು ಬೆರೆತಿರುತ್ತದೆ. ಅದೇ ರೀತಿಯಲ್ಲಿ ಉಪ್ಪಿನಕಾಯಿ, ಟೊಮೆಟೋ ಸಾಸ್, ಸೋಯಾ ಸಾಸ್ ಇತ್ಯಾದಿಗಳಲ್ಲೂ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೂ ಮಿಗಿಲಾಗಿ ಬಹುರಾಷ್ಟ್ರೀಯ ಹಾಗೂ ಭಾರತೀಯ ಸಂಸ್ಥೆಗಳು ಧಾರಾಳವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ವೈವಿಧ್ಯಮಯ ಕರಿದ ತಿನಿಸುಗಳಲ್ಲಿ, ಅಜಿನೋಮೊಟೋ ಅರ್ಥಾತ್ ಮೊನೊ ಸೋಡಿಯಂ ಗ್ಲುಟಾಮೆಟ್ ನ್ನು ಅತಿಯಾಗಿ ಬಳಸುತ್ತಾರೆ. ಇಂತಹ ಸ್ವಾದಿಷ್ಟ ಖಾದ್ಯಗಳನ್ನು ಅತಿಯಾಗಿ ಸೇವಿಸುವುದರಿಂದ, ನಿಮ್ಮ ಉದರವನ್ನು ಸೇರುವ "ಲವಣ"ದ ಪ್ರಮಾಣವೂ ಅತಿಯಾಗುವುದು. ಇಂತಹ ಖಾದ್ಯಗಳ ಸೇವನೆಯನ್ನು ವರ್ಜಿಸುವುದು ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. 

ಸೂಪರ್ ಬಜಾರ್ ಅಥವಾ ಮಾಲ್ ಗಳಲ್ಲಿ ನೀವು ಖರೀದಿಸುವ "ಸಿದ್ಧ ಆಹಾರ"ಗಳ ಹೊರಕವಚಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಇವುಗಳ ತಯಾರಿಕೆಯಲ್ಲಿ ಬಳಸಿರುವ ಮೊನೊ ಸೋಡಿಯಂ ಗ್ಲುಟಾ ಮೆಟ್, ಸೋಡಿಯಂ ಸಿಟ್ರೆಟ್, ಸೋಡಿಯಂ ನೈಟ್ರೇಟ್, ಸೋಡಿಯಂ ಫಾಸ್ಫೇಟ್, ಹಾಗೂ ಸೋಡಿಯಂ ಸಾಕರಿನ್ ಗಳಂತಹ ರಾಸಾಯನಿಕಗಳು ಎಷ್ಟು ಪ್ರಮಾಣದಲ್ಲಿವೆ ಎನ್ನುವುದನ್ನು ಅರಿತುಕೊಳ್ಳಬಹುದು. ಇಂತಹ ಖಾದ್ಯಗಳ ಸ್ವಾದವನ್ನು ಹೆಚ್ಚಿಸಲು ಹಾಗೂ ಸಂರಕ್ಷಿಸಲು ಬಳಸಲ್ಪಡುವ "ಸೋಡಿಯಂ" ನ ವಿವಿಧ ಅವತಾರಗಳು, ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದು ನೆನಪಿರಲಿ. 

ಸಾಮಾನ್ಯವಾಗಿ ಸಂಸ್ಕರಿಸಿದ- ಶೈತ್ಯೀಕರಿಸಿದ, ಡಬ್ಬಿಗಳಲ್ಲಿ ತುಂಬಿ ಮಾರಾಟಮಾಡುವ ಮೀನು- ಮಾಂಸ ಗಳಂತಹ ಖಾದ್ಯಗಳ ದಬ್ಬಿಗಳಲ್ಲಿನ "ದ್ರವ"ವನ್ನು ಹೊರಚೆಲ್ಲಿ, ಶುದ್ಧನೀರಿನಲ್ಲಿ ಇವುಗಳನ್ನುನ್ನು ತೊಳೆಯದೇ ಬಳಸದಿರಿ. ಇದರಿಂದಾಗಿ ಇವುಗಳನ್ನು ಕೆಡದಂತೆ ಸಂರಕ್ಷಿಸಲು ಬಳಸುವ ಉಪ್ಪಿನ ಅಂಶವನ್ನು ಸುಲಭದಲ್ಲೇ ನಿವಾರಿಸಬಹುದು. 

ಕೊನೆಯದಾಗಿ "ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು" ಎನ್ನುವ ಆಡುಮಾತಿಗೆ, ನೀವು ದಿನನಿತ್ಯ ಸೇವಿಸುವ ಉಪ್ಪು ಕೂಡಾ ಅಪವಾದವೇನಲ್ಲ ಎನ್ನುವುದನ್ನು ಮಾತ್ರ ಮರೆಯದಿರಿ!. 



ನಿಮಗಿದು ತಿಳಿದಿರಲಿ 

ನಮ್ಮ ಶರೀರದಲ್ಲಿರುವ ಸೋಡಿಯಂ ನ ಪ್ರಮಾಣವು ಸಾಮಾನ್ಯವಾಗಿ ನಾವು ದಿನನಿತ್ಯ ಸೇವಿಸುವ ಮತ್ತು ವಿಸರ್ಜಿಸುವ ಸೋಡಿಯಂ ನ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಹಾಗೂ ಅನುಕೂಲಕರ ಹವಾಮಾನದಲ್ಲಿ ಶರೀರವು ಕಳೆದುಕೊಳ್ಳುವ ಸೋಡಿಯಂ ನ ಪ್ರಮಾಣವು ಕ್ಷುಲ್ಲಕವಾಗಿರುತ್ತದೆ. ಅಲ್ಪ ಪ್ರಮಾಣದ ಉಪ್ಪನ್ನು ಸೇವಿಸುವ ಆರೋಗ್ಯವಂತರ ಮೂತ್ರಪಿಂಡಗಳು ಸ್ವಸಾಮರ್ಥ್ಯದಿಂದ ಶರೀರದಲ್ಲಿನ ಸೋಡಿಯಂ ನ ಸಮತೋಲನವನ್ನು ಕಾಪಾಡಿಕೊಳ್ಳಬಲ್ಲವು. ಇದೇ ಕಾರಣದಿಂದಾಗಿ ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣದಲ್ಲಿನ ಕೊರತೆಯಿಂದಾಗಿ ಉದ್ಭವಿಸಬಲ್ಲ ಸಮಸ್ಯೆಗಳಿಗಿಂತಲೂ ಹೆಚ್ಚಾಗಿ, ಕಾರಣಾಂತರಗಳಿಂದ ನಮ್ಮ ಶರೀರವು ಅತಿಯಾದ ಪ್ರಮಾಣದಲ್ಲಿ ಸೋಡಿಯಂ ನ್ನು ಕಳೆದುಕೊಳ್ಳುವುದೇ ಗುರುತರವಾದ ತೊಂದರೆಗಳಿಗೆ ಕಾರಣವೆನಿಸುತ್ತದೆ. 

ನಮ್ಮ ಆರೋಗ್ಯದ ದೃಷ್ಟಿಯಿಂದ ನೀರು ಮತ್ತು ಉಪ್ಪಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ಶರೀರದಲ್ಲಿ ಲವಣದ ಕೊರತೆಯುಂಟಾದಾಗ, ಇದಕ್ಕೆ ಇದಕ್ಕೆ ಅನುಗುಣವಾಗಿ ಶರೀರದಲ್ಲಿನ ನೀರಿನ ಅಂಶವೂ ಕಡಿಮೆಯಾಗುವುದು. ಆದರೆ ಕೇವಲ ಶುದ್ಧ ಸೋಡಿಯಂ ನ ಕೊರತೆಯೊಂದಿಗೆ ನೀರಿನ ಕೊರತೆ ಉದ್ಭವಿಸದೇ ಇರುವ ಸ್ಥಿತಿ ಅಪರೂಪವೂ ಹೌದು. ವಿಶೇಷವೆಂದರೆ ಅತಿಯಾದ ಲವಣ ಮತ್ತು ನೀರಿನ ಕೊರತೆ ಬಾಧಿಸಿದ ಸಂದರ್ಭದಲ್ಲಿ, ಅತಿಯಾಗಿ ಲವಣಾಂಶ ರಹಿತ ನೀರನ್ನು ಕುಡಿಯುವುದು ಇಂತಹ ಸಮಸ್ಯೆಗೆ ಕಾರಣವೆನಿಸುತ್ತದೆ. ಅತ್ಯುಷ್ಣ ಪ್ರದೇಶಗಳಲ್ಲಿ ಅತಿಯಾಗಿ ಬೆವರಿದಾಗ, ಉಪ್ಪನ್ನು ಬೆರೆಸದ ನೀರನ್ನು ಧಾರಾಳವಾಗಿ ಕುಡಿಯುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. 

ಕೆಲ ಸಂದರ್ಭಗಳಲ್ಲಿ ಮೂತ್ರ- ಮಲಗಳೊಂದಿಗೆ ವಿಸರ್ಜಿಸಲ್ಪಡುವ ಸೋಡಿಯಂ ನ ಪ್ರಮಾಣ ಹೆಚ್ಚಾಗುವುದರಿಂದ  ಕೆಲ ವ್ಯಾಧಿಗಳಿಂದಾಗಿ ಮೂತ್ರಪಿಂಡಗಳು ಶರೀರದಲ್ಲಿನ ಲವಣಾಂಶವನ್ನು ಕಾಪಾಡಿಕೊಳ್ಳಲು ವಿಫಲವಾಗುವುದರಿಂದಲೂ ಸೋಡಿಯಂ ನ ತೀವ್ರ ಕೊರತೆ ಉದ್ಭವಿಸುವುದುಂಟು. ಈ ಸಂದರ್ಭದಲ್ಲಿ ನಾಲಿಗೆ ಒಣಗುವುದು, ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ ಸುಕ್ಕುಗಟ್ಟುವುದು, ರಕ್ತದೊತ್ತಡ ಕುಸಿಯುವುದು ಹಾಗೂ ನಾಡಿ ಬಡಿತ ಹೆಚ್ಚುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ ಸುಸ್ತು,ಸಂಕಟ,ನಿರಾಸಕ್ತಿ,ಅತಿಆಯಾಸ,ಮಾಂಸಪೇಶಿಗಳ ಸೆಳೆತ,ತಲೆನೋವು ಹಾಗೂ ಎದ್ದು ನಿಂತಾಗ ಕಣ್ಣು ಕತ್ತಲಾವರಿಸುವಂತಹ ತೊಂದರೆಗಳು ಬಾಧಿಸಬಹುದು. ಸೋಡಿಯಂ ನ ಕೊರತೆಯ ಪ್ರಮಾಣವು ಮಿತಿಮೀರಿದಾಗ ಶರೀರದಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗುವುದರಿಂದಾಗಿ ಉದ್ಭವಿಸುವ ಆಘಾತ (ಶಾಕ್) , ಕೈಕಾಲುಗಳು ತಣ್ಣಗಾಗುವುದು, ತೂಕಡಿಕೆ ಮತ್ತು ಆಕಸ್ಮಿಕ ಮರಣವೂ ಸಂಭವಿಸುವ ಸಾಧ್ಯತೆಗಳಿವೆ. 

ಸೋಡಿಯಂ ನ ತೀವ್ರ ಕೊರತೆಯುಂಟಾದಾಗ ಸಕ್ಕರೆ ಅಥವಾ ಗ್ಲುಕೋಸ್ ಮಿಶ್ರಿತ ನೀರನ್ನು ಅತಿಯಾಗಿ ಕುಡಿದಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸುವುದು. ಆದುದರಿಂದ ಈ ಸಂದರ್ಭದಲ್ಲಿ ಉಪ್ಪು ಮತ್ತು ಸಕ್ಕರೆಗಳನ್ನು ಬೆರೆಸಿರುವ ನೀರನ್ನು ಕುಡಿಸಿದಲ್ಲಿ, ರೋಗಿಯ ಜೀರ್ಣಾಂಗಗಳಿಂದ ಇದು ಹೀರಲ್ಪಡಲು ವಿಳಂಬವಾಗುವುದು. ಇದೆ ಕಾರಣದಿಂದಾಗಿ ರೋಗಿಯ ರಕ್ತನಾಳಗಳ ಮೂಲಕ ಅವಶ್ಯಕ ಪ್ರಮಾಣದ ಉಪ್ಪು-ಸಕ್ಕರೆಯ ಅಂಶಗಳಿರುವ ದ್ರಾವಣವನ್ನು ನೀಡುವುದು ಪ್ರಾಣರಕ್ಷಕವೆನಿಸುವುದು. 

ಅಂತೆಯೇ ತೀವ್ರ ಜ್ವರ,ವಾಂತಿ,ಭೇದಿಗಳಂತಹ ವ್ಯಾಧಿಗಳು ಬಾಧಿಸಿದಾಗ, ರೋಗಿಯ ಶರೀರದಲ್ಲಿ ನೀರು- ಲವಣಗಳ ಕೊರತೆ ಉದ್ಭವಿಸುವುದು. ವೈದ್ಯಕೀಯ ಪರಿಭಾಷೆಯಲ್ಲಿ ಡಿಹೈಡ್ರೇಶನ್ ಎನ್ನುವ ಈ ಸ್ಥಿತಿಯನ್ನು ನಿರ್ಲಕ್ಷಿಸಿದಲ್ಲಿ, ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ಕುದಿಸಿ ತಣಿಸಿದ ನೀರಿನಲ್ಲಿ ಒಂದು ಚಮಚ ಸಕ್ಕರೆ ಹಾಗೂ ಚಿಟಿಕೆ ಉಪ್ಪನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಅಲ್ಪ ಪ್ರಮಾಣದಲ್ಲಿ ಆಗಾಗ ನೀಡುವುದರಿಂದ ಈ ಸಮಸ್ಯೆ ಸುಲಭದಲ್ಲೇ ಪರಿಹಾರಗೊಳ್ಳುವುದು. 

ಆದರೆ ತೀವ್ರ ವಾಂತಿಯಿಂದ ಪೀಡಿತ ರೋಗಿಗಳಿಗೆ ಇಂತಹ ದ್ರಾವಣವನ್ನು ಕುಡಿಸುವುದು ಅಸಾಧ್ಯವಾದುದರಿಂದ, ಆಸ್ಪತ್ರೆಯಲ್ಲಿ ದಾಖಲಿಸಿ ರಕ್ತನಾಳಗಳ ಮೂಲಕ ವಿಶೇಷ ದ್ರಾವಣಗಳನ್ನು ನೀಡಬೇಕಾಗುವುದು. ಅಂತಿಮವಾಗಿ ಕ್ರೀಡಾಪಟುಗಳಲ್ಲಿ ಅತಿಯಾದ ಚಟುವಟಿಕೆಗಳಿಂದ ಉದ್ಭವಿಸುವ "ಮಾಂಸಪೇಶಿಗಳ ಸೆಳೆತ"ದ ಸಮಸ್ಯೆಯನ್ನು ಕ್ಷಿಪ್ರಗತಿಯಲ್ಲಿ ಪರಿಹರಿಸಲು,ಮೇಲೆ ಸೂಚಿಸಿದ ಪರಿಹಾರಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು 



ಉದಯವಾಣಿ ಪತ್ರಿಕೆಯ ದಿ. ೨೩-೦೩-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment