Monday, September 23, 2013

Hypothyroidism




      ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವ ಹೈಪೊಥೈರಾಯ್ಡಿಸಂ 

ಜನಸಾಮಾನ್ಯರು ತಮ್ಮನ್ನು ಬಾಧಿಸುವ ಕಾಯಿಲೆಗಳ ನೈಜ ಹೆಸರಿನ ಬದಲಾಗಿ ಬಳಸುವ ಬಿ. ಪಿ, ಶುಗರ್, ಗ್ಯಾಸ್ ಟ್ರಬಲ್  ಇತ್ಯಾದಿ ನಾಮಧೇಯಗಳ ಸಾಲಿನಲ್ಲಿ ಥೈರಾಯ್ಡ್ ಎನ್ನುವ ಹೆಸರೂ ಸೇರಿದೆ. ಆದರೆ ವಾಸ್ತವದಲ್ಲಿ ಥೈರಾಯ್ಡ್ ಎನ್ನುವುದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಒಂದು ಗ್ರಂಥಿಯ ಹೆಸರೇ ಹೊರತು ಅದೊಂದು ಕಾಯಿಲೆಯಲ್ಲ. ಆದರೆ ಈ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ಸಂಭವಿಸಬಲ್ಲ ವ್ಯತ್ಯಯಗಳು ಅಸಾಮಾನ್ಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ಹೈಪೊಥೈರಾಯ್ಡಿಸಂ ಇಂತಹ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಸಮಸ್ಯೆಯ ಮೂಲ 

ನಮ್ಮ ಶರೀರದಲ್ಲಿನ ಥೈರಾಯ್ಡ್ ಗ್ರಂಥಿಯು ಸ್ವಾಭಾವಿಕವಾಗಿ ಸ್ರವಿಸುವ ಥೈರಾಯ್ಡ್ ಹಾರ್ಮೋನ್ ನ ಪ್ರಮಾಣವು ಕಡಿಮೆಯಾದಾಗ ಹೈಪೊಥೈರಾಯ್ಡಿಸಂ ಉದ್ಭವಿಸುವುದು. ಅತ್ಯಲ್ಪ ಪ್ರಮಾಣದ ಜನರಲ್ಲಿ ಈ ಸಮಸ್ಯೆಯು ತಾತ್ಕಾಲಿಕವಾಗಿ ಬಾಧಿಸಿ ಮಾಯವಾಗಬಹುದಾದರೂ,ಅಧಿಕತಮ ಜನರಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವುದು. ಇದೇ ಕಾರಣದಿಂದಾಗಿ ಈ ವಿಶಿಷ್ಟ ಸಮಸ್ಯೆಯನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಲು, ಜೀವನಪರ್ಯಂತ ಔಷದ ಸೇವನೆ ಅನಿವಾರ್ಯವೆನಿಸುವುದು. 

ಹೈಪೊಥೈರಾಯ್ಡಿಸಂ ಸಮಸ್ಯೆಯು ಮಧ್ಯವಯಸ್ಸಿನ ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವುದಾದರೂ, ಅಪರೂಪದಲ್ಲಿ ಗಂಡಸರು ಮತ್ತು ಮಕ್ಕಳನ್ನೂ ಬಾಧಿಸಬಲ್ಲದು. ಪ್ರಾರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಸೌಮ್ಯರೂಪದಲ್ಲಿ ಪ್ರಕಟಗೊಳ್ಳುವುದರಿಂದ ಇದನ್ನು ತಕ್ಷಣ ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. ಆದರೆ ಕಾಲಕ್ರಮೇಣ ಈ  ಲಕ್ಷಣಗಳು ವೃದ್ಧಿಸಿದಂತೆಯೇ, ಸಾಮಾನ್ಯ ವೈದ್ಯರಿಗೂ ಇದನ್ನು ನಿಖರವಾಗಿ ಗುರುತಿಸುವುದು ಸುಲಭಸಾಧ್ಯ ಎನಿಸುವುದು. 

ಲಕ್ಷಣಗಳು 

ಥೈರಾಯ್ಡ್ ಗ್ರಂಥಿಯು ಸ್ರವಿಸುವ ಹಾರ್ಮೋನ್ ನ ಪ್ರಮಾಣವು ಕಡಿಮೆಯಾದಂತೆಯೇ, ಪಿಟ್ಯುಟರಿ ಗ್ರಂಥಿಗಳು ಈ ಕೊರತೆಯನ್ನು ಸರಿದೂಗಿಸಲು ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನನ್ನು (ಟಿ ಎಸ ಎಚ್) ಉತ್ಪಾದಿಸಲು ಆರಂಭಿಸುತ್ತದೆ. ತತ್ಪರಿಣಾಮವಾಗಿ ಥೈರಾಯ್ಡ್ ಗ್ರಂಥಿಯ ಗಾತ್ರವು ತುಸು ಹಿಗ್ಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ " Goitre" ಎನ್ನುತ್ತಾರೆ. ಇದರೊಂದಿಗೆ ರೋಗಿಯ ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಲಿಪಿಡ್ ಗಳ ಪ್ರಮಾಣವೂ ಹೆಚ್ಚುವುದು. 

ಥೈರಾಯ್ಡ್ ಹಾರ್ಮೋನ್ ನ ಪ್ರಮಾಣವು ಇನ್ನಷ್ಟು ಕಡಿಮೆಯಾದಂತೆಯೇ, ರೋಗಿಯ ಶಾರೀರಿಕ ಪ್ರಕ್ರಿಯೆಗಳೂ ನಿಧಾನವಾಗಿ ಕುಂಠಿತಗೊಳ್ಳುತ್ತವೆ. ಈ ಸಂದರ್ಭದಲ್ಲಿ ಅತಿಆಯಾಸ,ಸುಸ್ತು,ತೂಕಡಿಕೆ, ಜ್ಞಾಪಕಶಕ್ತಿ ಕಡಿಮೆಯಾಗುವುದು, ಕಲಿಯುವಿಕೆಯ ಸಾಮರ್ಥ್ಯ ಕಡಿಮೆಯಾಗುವುದು (ವಿಶೇಷವಾಗಿ ಮಕ್ಕಳಲ್ಲಿ ), ಕೂದಲುಗಳು ಶುಷ್ಕವಾಗುದು ಹಾಗೂ ಉದುರುವುದು, ಚರ್ಮ ಮತ್ತು ಉಗುರುಗಳು ಶುಷ್ಕವಾಗುವುದು, ಮುಖ ಹಾಗೂ ಶರೀರದ ಕೆಲ ಭಾಗಗಳು ಊದಿಕೊಳ್ಳುವುದು, ಮಾಂಸಪೇಶಿಗಳು ಮತ್ತು ಅಸ್ಥಿ ಸಂಧಿಗಳಲ್ಲಿ ನೋವು, ಶರೀರದ ತೂಕ ಹೆಚ್ಚುವುದು, ಮಾತನಾಡುವಾಗ ತೊದಲುವುದು, ಮಲಬದ್ಧತೆ, ಮಹಿಳೆಯರಲ್ಲಿ ಅತಿಯಾದ ರಜೋಸ್ರಾವ- ಗರ್ಭಪಾತ, ಮಕ್ಕಳಲ್ಲಿ ಶಾರೀರಿಕ- ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ ಮಾನಸಿಕ ಖಿನ್ನತೆ, ಗರ್ಭಧಾರಣೆ ಆಗದಿರುವುದು ಮತ್ತು ಕಾಮಾಸಕ್ತಿಯ ಕೊರತೆಗಳಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಕಾರಣಗಳೇನು?

ಹೈಪೋಥೈರಾಯ್ಡಿಸಂ ಕೆಲವರಲ್ಲಿ ಅನುವಂಶಿಕವಾಗಿ ಉದ್ಭವಿಸಿದಲ್ಲಿ, ಇನ್ನು ಕೆಲವರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯು ಥೈರಾಯ್ಡ್ ಗ್ರಂಥಿಗಳಲ್ಲಿ ಉಂಟುಮಾಡುವ "ಪ್ರತಿಕ್ರಿಯೆ" ಇದಕ್ಕೆ ಕಾರಣವೆನಿಸುವುದು. ಮತ್ತೆ ಕೆಲವರಲ್ಲಿ ಥೈರಾಯ್ಡ್ ಗ್ರಂಥಿಯ ಒಂದು ಭಾಗವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದ ನಂತರ, ಇದು ಉತ್ಪಾದಿಸುವ ಹಾರ್ಮೋನ್ ನ ಪ್ರಮಾಣವು ಕಡಿಮೆಯಾಗುವುದರಿಂದಲೂ ಉದ್ಭವಿಸಬಹುದು. 

ಅದೇರೀತಿಯಲ್ಲಿ ಥೈರಾಯ್ಡ್ ಗ್ರಂಥಿಗೆ ತಗಲಿದ ತೀವ್ರ ಸೋಂಕು ಹಾಗೂ ಕೆಲವಿಧದ ಔಷದಗಳ ಸೇವನೆಯೂ ಇದಕ್ಕೆ ಕಾರಣವೆನಿಸಬಹುದು. ಹೈಪೊಥೈರಾಯ್ದಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಪರಿಣಾಮವಾಗಿ ಮತ್ತು ಮಕ್ಕಳಲ್ಲಿ ಜನ್ಮದತ್ತವಾಗಿ ಇರಬಹುದಾದ ಥೈರಾಯ್ಡ್ ಟಿಶ್ಯೂಗಳ ಕೊರತೆ ಅಥವಾ ಎನಜೈಮ್ ಗಳ ನ್ಯೂನತೆಗಳಿಂದಾಗಿಯೂ ಹೈಪೊಥೈರಾಯ್ಡಿಸಂ ಉದ್ಭವಿಸಬಹುದು. 

ಅಲ್ಪ ಪ್ರಮಾಣದ ಹೆಂಗಸರಲ್ಲಿ ಹೆರಿಗೆಯ ಬಳಿಕ ತಲೆದೋರುವ ಈ ಸಮಸ್ಯೆಯು, ಸ್ವಲ್ಪ ಸಮಯದ ಬಳಿಕ ಸಹಜ ಸ್ಥಿತಿಗೆ ಮರಳುವುದು. ಇದಲ್ಲದೆ ಪಿಟ್ಯುಟರಿ ಗ್ರಂಥಿಗೆ ಸಂಬಂಧಿಸಿದ ವ್ಯಾಧಿಯೊಂದು ಇದಕ್ಕೆ ಕಾರಣವೆನಿಸಬಹುದಾದರೂ,ಇದು ಅತ್ಯಂತ ಅಪರೂಪವೂ ಹೌದು. 

ಪತ್ತೆಹಚ್ಚುವುದೆಂತು?

ಶಂಕಿತ ರೋಗಿಗಳಲ್ಲಿ ಕಂಡುಬರುವ ಹೈಪೊಥೈರಾಯ್ದಿಸಂ ನ ಲಕ್ಷಣಗಳೊಂದಿಗೆ ಇವರ ರಕ್ತದಲ್ಲಿನ ಟಿ ಎಸ ಎಚ್, ಟಿ ೪, ಮತ್ತು ಟಿ ೫ ಗಳ ಪ್ರಮಾಣಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ಮೂಲಕ ಹಾಗೂ ಥೈರಾಯ್ಡ್ ಎಂಟಿಬಾಡಿಗಳು ಹೆಚ್ಚಾಗಿರುವುದನ್ನು ಪತ್ತೆಹಚ್ಚುವ ಮೂಲಕ, ಹೈಪೊಥೈರಾಯ್ದಿಸಂ ಬಾಧಿಸುತ್ತಿರುವುದನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. 

ಚಿಕಿತ್ಸೆ 

ಈ ವಿಶಿಷ್ಟ ಸಮಸ್ಯೆಯನ್ನು ಪರಿಹರಿಸಲು ತಜ್ಞವೈದ್ಯರು ಸೂಚಿಸುವ ಔಷದವನ್ನು ಬರಿಹೊಟ್ಟೆಯಲ್ಲಿ ದಿನದಲ್ಲಿ ಒಂದುಬಾರಿಯಂತೆ ಜೀವನಪರ್ಯಂತ ಸೇವಿಸಬೇಕಾಗುವುದು. ಇದರೊಂದಿಗೆ ನಿಗದಿತ ಅವಧಿಯಲ್ಲಿ ರಕ್ತವನ್ನು ಪರೀಕ್ಷಿಸುವ ಮೂಲಕ, ತಾವು ಸೇವಿಸುತ್ತಿರುವ ಔಷದದ ಪ್ರಮಾಣವು ಸಮರ್ಪಕವಾಗಿದೆಯೇ ಮತ್ತು ಚಿಕಿತ್ಸೆಯು ನಿರೀಕ್ಷಿತ ಪರಿಣಾಮವನ್ನು ನೀಡುತ್ತಿರುವುದೇ ಎನ್ನುವುದನ್ನು ಸುಲಭವಾಗಿ ಅರಿತುಕೊಳ್ಳಬಹುದಾಗಿದೆ. ಏಕೆಂದರೆ ವೈದ್ಯರು ಸೂಚಿಸಿದ ಔಷದದ ಪ್ರಮಾಣವು ಅವಶ್ಯಕತೆಗಿಂತ ಕಡಿಮೆಯಾದಲ್ಲಿ, ರೋಗಿಯನ್ನು  ಸಮಸ್ಯೆಗಳು ಮತ್ತು ರೋಗಲಕ್ಷಣಗಳು ಮಾಯವಾಗುವುದಿಲ್ಲ. ಜೊತೆಗೆ ರಕ್ತದಲ್ಲಿರುವ ಕೊಲಸ್ಟರಾಲ್ ಮತ್ತು ಲಿಪಿಡ್ ಗಳ ಪ್ರಮಾಣವೂ ಕೆಳಗಿಳಿಯುವುದಿಲ್ಲ. ತತ್ಪರಿಣಾಮವಾಗಿ ರೋಗಿಯ ರಕ್ತನಾಳಗಳು ಪೆಡಸಾಗುವುದರೊಂದಿಗೆ ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು  ಹೆಚ್ಚುತ್ತವೆ. ಅದೇ ರೀತಿಯಲ್ಲಿ ಔಷದದ ಪ್ರಮಾಣವು ಅತಿಯಾದಲ್ಲಿ ರೋಗಿಯ ಹೃದಯದ ಮೇಲೆ ಬೀಳುವ ಹೊರೆ ಹೆಚ್ಚಾಗುವುದರಿಂದ, ರೋಗಿಯ ನಾಡಿ ಬಡಿತದ ಗತಿಯಲ್ಲಿ ಏರುಪೇರುಗಳು ಸಂಭವಿಸುತ್ತವೆ. ಜೊತೆಗೆ ರೋಗಿಯ ಬೆನ್ನೆಲುಬು ಮೃದುವಾಗುವ ಸಾಧ್ಯತೆಗಳಿವೆ. 

ಹೈಪೊಥೈರಾಯ್ದಿಸಂ ನಿಂದ ಬಳಲುತ್ತಿರುವವರು ಗರ್ಭವತಿಯಾದಲ್ಲಿ, ಗರ್ಭಸ್ಥ ಶಿಶುವಿನ ಬೆಳವಣಿಗೆ ಕುಂಠಿತಗೊಳ್ಳುವುದು ಹಾಗೂ ಹೆರಿಗೆಯ ಸಂದರ್ಭದಲ್ಲಿ ಅನಪೇಕ್ಷಿತ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಇಂತಹ ವ್ಯಕ್ತಿಗಳು ಗರ್ಭಧಾರಣೆಯಾದಂದಿನಿಂದ ಹೆರಿಗೆಯ ತನಕ, ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಅತ್ಯವಶ್ಯಕ ಎನಿಸುವುದು. 

ಭಾರತದಲ್ಲಿ ಶೇ. ೧೦ ರಷ್ಟು ಮಹಿಳೆಯರು ಹೈಪೊಥೈರಾಯ್ದಿಸಂ ನಿಂದ ಬಳಲುತ್ತಿದ್ದು, ವಿಶೇಷ ಖರ್ಚುವೆಚ್ಚಗಳಿಲ್ಲದ ಇದರ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಪಡೆದುಕೊಂಡಲ್ಲಿ, ಈ ಸಮಸ್ಯೆಯನ್ನು ನಿಶ್ಚಿತವಾಗಿಯೂ ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಕಲಿ ವೈದ್ಯರ ಅಥವಾ ಬಂಧುಮಿತ್ರರ "ಪುಕ್ಕಟೆ ಸಲಹೆ"ಗಳನ್ನು ನಂಬಿ, ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ಈ ಸಮಸ್ಯೆಯು ನಿಶ್ಚಿತವಾಗಿಯೂ ಮರುಕಳಿಸುತ್ತದೆ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೯-೧೦-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ 


No comments:

Post a Comment