Thursday, September 12, 2013

Artificial sweeteners



            ಕೃತಕ ಮಾಧುರ್ಯಕಾರಕಗಳು ಹಾನಿಕಾರಕವೇ?

ತಮ್ಮ  ಆರೋಗ್ಯದ ಸಮಸ್ಯೆಗಳಿಂದಾಗಿ ಸಕ್ಕರೆಯನ್ನು ಸೇವಿಸಲಾರದ ವ್ಯಕ್ತಿಗಳು, ಅನಿವಾರ್ಯವಾಗಿ ಬಳಸುತ್ತಿರುವ ಕೃತಕ ಮಾಧುರಕಾರಕಗಳನ್ನು ಅತ್ಯಂತ ಸುರಕ್ಷಿತವೆಂದು ನಂಬಿರಬಹುದು. ಆದರೆ ಈ ರಾಸಾಯನಿಕಗಳ ದೀರ್ಘಕಾಲೀನ ಹಾಗೂ ಅತಿಯಾದ ಸೇವನೆಯಿಂದ ಅನಾರೋಗ್ಯ ಬಾಧಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-----------           -----------------        ---------------------             -------------------------             ----------------------           -----------------

ಸಾಮಾನ್ಯವಾಗಿ ನಾವೆಲ್ಲರೂ ದಿನನಿತ್ಯ ಸೇವಿಸುವ ವೈವಿಧ್ಯಮಯ ಖಾದ್ಯಪೇಯಗಳಲ್ಲಿ ಬಳಸುವ ಸಕ್ಕರೆಯ ಸ್ವಾದವನ್ನು ಮೆಚ್ಚದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಆದರೆ ಮಧುಮೇಹ,ಅಧಿಕತೂಕ ಹಾಗೂ ಅತಿಬೊಜ್ಜಿನಿಂದ ಬಳಲುತ್ತಿರುವವರು, ತಮ್ಮ ಆರೋಗ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಕ್ಕರೆಯ ಸೇವನೆಯನ್ನೇ ವರ್ಜಿಸುವುದು ಅಪರೂಪವೇನಲ್ಲ. ಅಂತೆಯೇ ತಮ್ಮ ಶರೀರದ ತೂಕ, ಆಕಾರ ಮತ್ತು ಸೌಂದರ್ಯಗಳ ಬಗ್ಗೆ ಅತಿಯಾದ ಕಾಳಜಿಯಿರುವ ರೂಪದರ್ಶಿಯರು,ಚಿತ್ರನಟಿಯರು ಮತ್ತು ಕಾಲೇಜು ಕನ್ಯೆಯರು, ಅತಿಯಾದ ಕ್ಯಾಲರಿಗಳಿಂದ ಸಮೃದ್ಧವಾಗಿರುವ ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೂರವಿರಿಸುವುದು ಸ್ವಾಭಾವಿಕವೋ ಹೌದು. 

ಇಂತಹ ಸಮಸ್ಯೆಗಳು ಅಥವಾ ಕಾಳಜಿಯಿರುವ ವ್ಯಕ್ತಿಗಳಿಗಾಗಿಯೇ ಆವಿಷ್ಕರಿಸಲ್ಪಟ್ಟಿರುವ ವಿವಿಧರೀತಿಯ ಕೃತಕ ಮಾಧುರ್ಯಕಾರಕಗಳು( Artificial sweetners) , ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸಕ್ಕರೆಗಿಂತ ನೂರಾರುಪಟ್ಟು ಸಿಹಿಯಾಗಿರುವ,ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನೇ ಹೆಚ್ಚಿಸದ ಮತ್ತು ಸಕ್ಕರೆಯೊಂದಿಗೆ ತುಲನೆ ಮಾಡಿದಾಗ ನಿಕೃಷ್ಟ ಪ್ರಮಾಣದ ಕ್ಯಾಲರಿಗಳಿರುವ ಈ ರಾಸಾಯನಿಕಗಳು, ಇವೆಲ್ಲಾ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯವೆನಿಸಿವೆ. 

ಪಾಶ್ಚಿಮಾತ್ಯ ದೇಶಗಳಲ್ಲಿ ಸಕ್ಕರೆಯ ಬೆಲೆ ಅತಿಯಾಗಿರುವುದು ಕೂಡಾ ಕೃತಕ ಮಾಧುರ್ಯಕಾರಕಗಳನ್ನು ಅಲ್ಲಿನ ಜನರು ಅತಿಯಾಗಿ ಬಳಸಲು ಪ್ರಮುಖ ಕಾರಣವೆನಿಸಿದೆ. ಆದರೆ ಇದನ್ನು ಸೇವಿಸುತ್ತಿರುವ ಬಹುತೇಕ ಭಾರತೀಯರು ಇವುಗಳ ದೀರ್ಘಕಾಲೀನ ಹಾಗೂ ಅತಿಯಾದ ಸೇವನೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ ಇಂದಿನ ತನಕ ತಲೆಕೆಡಿಸಿಕೊಂಡಿಲ್ಲ!. 

ಪ್ರಸ್ತುತ ಲಭ್ಯವಿರುವ ಕೃತಕ ಮಾಧುರ್ಯಕಾರಕಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟಮಾಡಿ, ಕೋಟ್ಯಂತರ ರೂಪಾಯಿಗಳ ಲಾಭಗಳಿಸುತ್ತಿರುವ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟಿವೆ. ವಿಶೇಷವೆಂದರೆ ಇಂತಹ ಸಂಸ್ಥೆಗಳು ತಮ್ಮ ಉತ್ಪನ್ನಗಳ ಅತಿಯಾದ ಹಾಗೂ ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ವೈಜ್ಞಾನಿಕ- ವೈದ್ಯಕೀಯ ಅಧ್ಯಯನಗಳ ವರದಿಗಳನ್ನು ಮಾತ್ರ ಬಹಿರಂಗಪಡಿಸುವುದೇ ಇಲ್ಲ. ಮಾತ್ರವಲ್ಲ, ಇಂತಹ ನಿಖರವಾದ ಮಾಹಿತಿಗಳ ಹೊರತಾಗಿಯೂ ತಮ್ಮ ವಾಣಿಜ್ಯ ಉತ್ಪನ್ನಗಳ ಮುಕ್ತ ಮಾರಾಟಕ್ಕೆ, ವಿಶ್ವದ ಬಹುತೇಕ ರಾಷ್ಟ್ರಗಳ ಸರಕಾರಗಳಿಂದ ಅನುಮತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ನಂಬಲು ಅಸಾಧ್ಯವೆನಿಸುತ್ತದೆ!. 

ಆಕಸ್ಮಿಕ ಸಂಶೋಧನೆ 

೧೮೭೮ ರಲ್ಲಿ ಆಕಸ್ಮಿಕವಾಗಿ ಸಂಶೋಧಿಸಲ್ಪಟ್ಟಿದ್ದ "ಸಾಕರಿನ್", ಸಕ್ಕರೆಗಿಂತಲೂ ಸುಮಾರು ೨೦೦ ರಿಂದ ೭೦೦ ಪಟ್ಟು ಸಿಹಿಯಾಗಿತ್ತು. ಇದಕ್ಕೂ ಮಿಗಿಲಾಗಿ ಮಧುಮೇಹ ರೋಗಿಗಳು ತಮ್ಮ ವ್ಯಾಧಿಯನ್ನು ಉಲ್ಬಣಿಸಿಕೊಳ್ಳದೇ ಇದನ್ನು ಸೇವಿಸಬಹುದಾಗಿತ್ತು. ತತ್ಪರಿಣಾಮವಾಗಿ ಇಂತಹ ಅನಾರೋಗ್ಯಪೀಡಿತರಿಗೆ ಈ ರಾಸಾಯನಿಕವು ವರದಾನವಾಗಿ ಪರಿಣಮಿಸಿತ್ತು. 

೧೮೮೫ ರಲ್ಲಿ ಪೇಟೆಂಟ್ ಗಳಿಸಿದ್ದ ಈ ಕೃತಕ ಮಾಧುರ್ಯಕಾರಕವು "ಮೊನ್ಸಾಂಟೊ ಕೆಮಿಕಲ್ಸ್ ಕಂಪೆನಿ"ಯ ಪ್ರಪ್ರಥಮ ವಾಣಿಜ್ಯ ಉತ್ಪನ್ನವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ, ಅತ್ಯಲ್ಪ ಅವಧಿಯಲ್ಲೇ ವಿಶ್ವವಿಖ್ಯಾತವಾಯಿತು. ಭಾರತದಲ್ಲೂ ಮಾರಾಟವಾಗುತ್ತಿರುವ ಸಾಕರಿನ್, ಇಂದಿಗೂ ತನ್ನ ಜನಪ್ರಿಯತೆ ಮತ್ತು ಬೇಡಿಕೆಗಳನ್ನು ಉಳಿಸಿಕೊಂಡಿದೆ. 

ತದನಂತರ ಗತ ಶತಮಾನದಲ್ಲಿ ಸಂಶೋಧಿಸಲ್ಪಟ್ಟಿದ್ದ ಅಸ್ಪಾರ್ಟೆಮ್, ಸೋಡಿಯಂ ಸೈಕ್ಲಾಮೇಟ್, ಏಸ್ ಸಲ್ಫೆಮ್-ಕೆ, ಅಲಿಟೇಮ್, ಹಾಗೂ ಸುಕ್ರಾಲೋಸ್ ಮುಂತಾದ ಮಾಧುರ್ಯಕಾರಕಗಳು ಕಾಲಕ್ರಮೇಣ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಇವುಗಳಲ್ಲಿ ಸೋಡಿಯಂ ಸೈಕ್ಲಾಮೇಟ್ ನ ಬಳಕೆಯನ್ನು ಅಮೇರಿಕಾದಲ್ಲಿ ನಿಷೇಧಿಸಿದ್ದರೂ,ಇದನ್ನು ತಯಾರಿಸಿ ಇತರ ದೇಶಗಳಿಗೆ ರಫ್ತುಮಾಡುವ ಧಂಧೆಯು ೧೯೭೦ ರಿಂದ ಅವ್ಯಾಹತವಾಗಿ ಸಾಗುತ್ತಿದೆ!. ಕೆಲವರ್ಷಗಳ ಹಿಂದೆ ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಿದ್ದ "ನಿಯೋಟೇಮ್", ಸಕ್ಕರೆಗಿಂತ ೧೩,೦೦೦ ಪಟ್ಟು ಸಿಹಿಯಾಗಿದೆ!. ಅಸ್ಪಾರ್ಟೆಮ್ ನಿಂದಲೇ ಸಿದ್ದಪಡಿಸಿರುವ ಈ ಮಾಧುರ್ಯಕಾರಕವು ಅಮೇರಿಕಾದ ಎಫ್. ಡಿ. ಎ ನಿಂದ ಅಂಗೀಕರಿಸಲ್ಪಟ್ಟಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿರಿಸಲು ಕೇಂದ್ರ ಸರಕಾರದ ಅನುಮತಿಯನ್ನು ಕೋರಿದೆ. ಆದರೆ ಅಸ್ಪಾರ್ಟೆಮ್ ನ ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಮತ್ತು ಸಂದೇಹಗಳಿರುವುದರಿಂದಾಗಿ, ಇದರಿಂದಲೇ ತಯಾರಿಸಲ್ಪಡುವ ನಿಯೋಟೇಮ್ ನ ಸುರಕ್ಷಿತತೆಯ ಬಗ್ಗೆ ಸಂದೇಹ ಮೂಡುವುದು ಸ್ವಾಭಾವಿಕವೋ ಹೌದು. ಪ್ರಾಯಶಃ ಇದೇ ಕಾರಣದಿಂದಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ನಿಯೋಟೇಮ್, ಏಸ್ಸಲ್ಫೇನ್ -ಕೆ, ಸುಕ್ರಾಲೋಸ್ ಮತ್ತು ಸಾಕರಿನ್ ಗಳ ಸೇವನೆ ಸುರಕ್ಷಿತವೆ ಎಂದು ಅಧ್ಯಯನ ನಡೆಸಲು ಲಕ್ನೋ ದ ಇಂಡಸ್ಟ್ರಿಯಲ್ ಟಾಕ್ಸಿಕಾಲಜಿ ರಿಸರ್ಚ್ ಸೆಂಟರ್ ನ ವಿಜ್ಞಾನಿಗಳಿಗೆ ೨೦೦೪ ನೆ ಇಸವಿಯ ಅಂತ್ಯದಲ್ಲಿ ಆದೇಶಿಸಿತ್ತು. ಹಾಗೂ ಈ ಆದೇಶಕ್ಕೆ ೨೦೦೪ ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯದ ನ್ಯಾಯಾಲಯದಲ್ಲಿ, ಕೃತಕ ಮಾಧುರ್ಯಕಾರಕವೊಂದರ ವಿರುದ್ಧ ನ್ಯಾಯವಾದಿಯೊಬ್ಬರು ಹೂಡಿದ್ದ ದಾವೆಯೇ ಕಾರಣವೆನಿಸಿರುವ ಸಾಧ್ಯತೆಗಳಿವೆ. 

ಅಸ್ಪಾರ್ಟೆಮ್  ಮತ್ತು ಅನಾರೋಗ್ಯ 

೧೯೬೫ ರಲ್ಲಿ ಸಂಶೋಧಿಸಲ್ಪಟ್ಟು ಹಲವಾರು ವಾದವಿವಾದಗಳ ಹೊರತಾಗಿಯೂ ೧೯೮೧ ರಲ್ಲಿ ಅಮೇರಿಕಾದ ಎಫ್. ಡಿ. ಎ ಸಂಸ್ಥೆಯ ಅನುಮೋದನೆಯನ್ನು ಗಳಿಸಲು ಸಫಲವಾಗಿದ್ದ ಅಸ್ಪಾರ್ಟೆಮ್, ಅಲ್ಲಿ ಮಾರಾಟವಾಗುತ್ತಿರುವ ಕೃತಕ ಮಾಧುರ್ಯಕಾರಕಗಳ ಮಾರುಕಟ್ಟೆಯಲ್ಲಿ ಶೇ. ೭೦ ರಷ್ಟು ಪಾಲನ್ನು ಗಳಿಸಿದೆ. 

೨೦೦೪ ರ ಸೆಪ್ಟೆಂಬರ್ ೧೫ ರಂದು ಜೋ ಬೆಲ್ಲೋನ್ ಎಂಬ ನ್ಯಾಯವಾದಿಯು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ನ್ಯೂಟ್ರಾಸ್ವೀಟ್ಸ್, ಅಮೇರಿಕನ್ ಡಯಾಬೆಟೆಸ್ ಅಸೋಸಿಯೇಶನ್ ಮತ್ತು ಮೊನ್ಸಾಂಟೊ ಕಂಪೆನಿಗಳ ವಿರುದ್ಧ ೩೫,೦೦೦,೦೦೦ ಡಾಲರ್ ಗಳ ದಾವೆಯನ್ನು ಹೂಡಿದ್ದನು. 

ಬೆಲ್ಲೋನ್ ಹೇಳುವಂತೆ ಆಪಾದಿತರು ಉದ್ದೇಶಪೂರ್ವಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿರುವ ಹಾಗೂ ಉತ್ತೇಜನ ನೀಡುತ್ತಿರುವ "ವಿಷಕಾರಕ ಅಸ್ಪಾರ್ಟೆಮ್" ನ ಸೇವನೆಯು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಸಂಧಿವಾತ,ಆಸ್ತಮಾ,ಭೇದಿ,ಅಧಿಕ ರಕ್ತದೊತ್ತಡ,ಮೆದುಳಿನ ಕ್ಯಾನ್ಸರ್, ಸ್ಮರಣ ಶಕ್ತಿ ಹಾಗೂ ದೃಷ್ಟಿ ನಾಶದಂತಹ ಗಂಭೀರ ಸಮಸ್ಯೆಗಳೊಂದಿಗೆ,ಅಸ್ಪಾರ್ಟೆಮ್ ನ ಸೇವನೆಯು  ಮಧುಮೇಹ ವ್ಯಾಧಿಯನ್ನು ಉಲ್ಬಣಿಸುವುದೆಂದು ತಿಳಿದೂ, ಅಮೇರಿಕನ್ ಡಯಾಬೆಟೆಸ್ ಅಸೋಸಿಯೇಶನ್ ಸಂಸ್ಥೆಯು ಈ ಉತ್ಪನ್ನವನ್ನು ಅನುಮೊದಿಸುತ್ತಿರುವುದರಿಂದಾಗಿ ಇದರ ವಿರುದ್ಧ ದಾವೆಯನ್ನು ಹೂಡಲಾಗಿತ್ತು. 

೧೯೬೫ ರಲ್ಲಿ ಸಂಶೋಧಿಸಲಾಗಿದ್ದ ಅಸ್ಪಾರ್ಟೆಮ್ ರಾಸಾಯನಿಕವನ್ನು ೧೯೭೦ ರಲ್ಲಿ ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್ ನಲ್ಲಿ ಮೊದಲ ಬಾರಿಗೆ ಪ್ರಯೋಗಗಳಿಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಾಲಿನೊಂದಿಗೆ ಬೆರೆಸಿದ್ದ ಅಸ್ಪಾರ್ಟೆಮ್ ಸೇವಿಸಿದ್ದ ಏಳು ಕೋತಿಮರಿಗಳಲ್ಲಿ ಒಂದು ಮರಿ ಮೃತಪಟ್ಟಿದ್ದು,ಉಳಿದ ಐದು ಮರಿಗಳಿಗೆ ಅಪಸ್ಮಾರದಂತಹ ಸೆಳೆತಗಳು ಬಾಧಿಸಿದ್ದವು ಎಂದು ಬೆಲ್ಲೋನ್ ಅಪಾದಿಸಿದ್ದನು. ಇಂತಹ ದುಷ್ಪರಿಣಾಮಗಳ ಹೊರತಾಗಿಯೂ, ಇದರ ತಯಾರಕರು ೧೯೭೪ ರಲ್ಲಿ ತಮ್ಮ ಉತ್ಪನ್ನಕ್ಕೆ ಅಮೇರಿಕಾದ ಎಫ್. ಡಿ. ಎ ಸಂಸ್ಥೆಯ ಅನುಮೋದನೆಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು.

ಆದರೆ ಈ ಉತ್ಪನ್ನವು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ವಾಷಿಂಗ್ ಟನ್ ಯುನಿವರ್ಸಿಟಿಯ ನರ ಮಾನಸಿಕ ತಜ್ಞರಾಗಿದ್ದ ಪ್ರೊಫೆಸರ್ ಜಾನ್ ಒಲ್ನೆ ಯವರು, ಅಸ್ಪಾರ್ಟೆಮ್ ನ ಬಳಕೆಯಿಂದ ಮನುಷ್ಯನ ಮೆದುಳಿಗೆ ಹಾನಿ ಸಂಭವಿಸುವುದರಿಂದ ಇದರ ಮಾರಾಟಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ತತ್ಪರಿಣಾಮವಾಗಿ ಎಫ್. ಡಿ. ಎ ಸಂಸ್ಥೆಯು ಇದರ ತಯಾರಿಕೆಗೆ ನೀಡಿದ್ದ ಅನುಮತಿಯನ್ನು ತಡೆಹಿಡಿದು, ಸತ್ಯ ಶೋಧನೆಗಾಗಿ ಸಮಿತಿಯೊಂದನ್ನು ನೇಮಿಸಿತ್ತು. 

ಆದರೆ ಈ ಮಾಧುರ್ಯಕಾರಕದ ತಯಾರಕರು ೧೯೭೭ ರಲ್ಲಿ ಪ್ರಬಲ ರಾಜಕಾರಣಿಯೊಬ್ಬರನ್ನು ತಮ್ಮ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದ ಪರಿಣಾಮವಾಗಿ, ೧೯೮೧ ರಲ್ಲಿ ಅಸ್ಪಾರ್ಟೆಮ್ ನ ಉತ್ಪಾದನೆ, ಮಾರಾಟ ಮತ್ತು ಬಳಕೆಗಳಿಗೆ ಅನುಮತಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು. ಎರಡು ವರ್ಷಗಳ ಬಳಿಕ ಇದರ ತಯಾರಕರು ತಮ್ಮ ಉತ್ಪನ್ನವನ್ನು ಲಘು ಪಾನೀಯಗಳು ಮತ್ತು ಮಕ್ಕಳಿಗೆ ನೀಡುವ ಜೀವಸತ್ವಗಳ ತಯಾರಿಕೆಯಲ್ಲಿ ಬಳಸಲು ಎಫ್. ಡಿ. ಎ ಸಂಸ್ಥೆಯ ಅನುಮತಿಯನ್ನು ಪಡೆದುಕೊಂಡಿದ್ದರು!. 

೧೯೯೬ ರಲ್ಲಿ ಪ್ರೊಫೆಸರ್ ಒಲ್ನೆ ಪ್ರಕಟಿಸಿದ್ದ ಅಧ್ಯಯನಗಳ ವರದಿಯಂತೆ ಅಸ್ಪಾರ್ಟೆಮ್ ರಾಸಾಯನಿಕವು "ಮೆದುಳಿನ ಗಡ್ಡೆ "ಗಳಿಗೆ ಕಾರಣವೆನಿಸಬಹುದು ಎಂದು ಪ್ರಸ್ತಾಪಿಸಲಾಗಿತ್ತು. ಆದರೆ ಅದಾಗಲೇ ಈ ಕೃತಕ ಮಾಧುರ್ಯಕಾರಕವು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾರಾಟವಾಗಲು ಪ್ರಾರಂಭವಾಗಿತ್ತು. 

೧೯೯೮ ರಲ್ಲಿ ಬಾರ್ಸೆಲೋನಾ ವಿಶ್ವವಿದ್ಯಾಲಯವು ನಡೆಸಿದ್ದ ಅಧ್ಯಯನ - ಸಂಶೋಧನೆಗಳ ವರದಿಯಂತೆ, ಅಸ್ಪಾರ್ಟೆಮ್ ನ ಸೇವನೆಯಿಂದಾಗಿ ಮಾನವ ಶರೀರದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳ ಪರಿಣಾಮವಾಗಿ ವಾಂತಿ, ಭೇದಿಗಳೊಂದಿಗೆ ಮರಣವೂ ಸಂಭವಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿತ್ತು. ೨೦೦೪ ರಲ್ಲಿ ಪ್ರಕಟಗೊಂಡಿದ್ದ ಮತ್ತೊಂದು ವರದಿಯಂತೆ, ಕೃತಕ ಮಾಧುರ್ಯಕಾರಕಗಳು ಮಧುಮೇಹ ಅಥವಾ ಅತಿಬೊಜ್ಜಿನ - ಅಧಿಕ ತೂಕದ ವ್ಯಕ್ತಿಗಳಿಗೆ ಉಪಯುಕ್ತವೆನಿಸುವುದಿಲ್ಲ. ಏಕೆಂದರೆ ಇವುಗಳ ಸೇವನೆಯಿಂದ ಮಾನವನ ಆಹಾರ ಸೇವನೆಯ ಪ್ರಮಾಣ ಹಾಗೂ ಶರೀರದ ತೂಕವನ್ನು ನಿಯಂತ್ರಿಸುವ ಸ್ವಾಭಾವಿಕ ಪ್ರಕ್ರಿಯೆಯು ವ್ಯತ್ಯಯವಾಗುವುದು. ತತ್ಪರಿಣಾಮವಾಗಿ ಸಕ್ಕರೆಯ ಬದಲಾಗಿ ಕೃತಕ ಮಾಧುರ್ಯಕಾರಕಗಳನ್ನು ಸೇವಿಸಿದಾಗ, 
ನಮ್ಮ ಶರೀರವು ನಾಲಗೆಯ ರುಚಿಯ ಮೂಲಕ ತನಗೆ ಅವಶ್ಯಕವೆನಿಸುವ ಕ್ಯಾಲರಿಗಳ ಪ್ರಮಾಣವನ್ನು ನಿರ್ಧರಿಸಲು ವಿಫಲವಾಗುತ್ತದೆ. ಇದರಿಂದಾಗಿ ಸಕ್ಕರೆಯಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸುವಾಗಲೂ ಇದರಲ್ಲಿ ಕ್ಯಾಲರಿಗಳೇ ಇಲ್ಲವೆನ್ನುವ ಭ್ರಮೆ ಹುಟ್ಟಿಸಿ, ಅತಿ ಆಹಾರ ಸೇವನೆಗೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೃತಕ ಮಾಧುರ್ಯಕಾರಕಗಳ ಸೇವನೆಯಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಲವಾರು ಅಧ್ಯಯನಗಳ ವರದಿಗಳು ಪ್ರಕಟಗೊಂಡಿದ್ದರೂ,ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಇಂತಹ ಉತ್ಪನ್ನಗಳು ಇವುಗಳ ತಯಾರಕರಿಗೆ ಭಾರೀ ಲಾಭವನ್ನು ಗಳಿಸಬಲ್ಲ ಉದ್ಯಮವಾಗಿ ಬೆಳೆದಿರುವುದೇ ಪ್ರಮುಖ ಕಾರಣವೆನಿಸಿದೆ. 

ಅದೇನೇ ಇರಲಿ, ಇಂತಹ ವಾಣಿಜ್ಯ ಉತ್ಪನ್ನಗಳ ತಯಾರಕರು - ಮಾರಾಟಗಾರರ ಜಾಹೀರಾತುಗಳನ್ನು ನಂಬಿ, ಇವರ ಉತ್ಪನ್ನಗಳು ಆರೋಗ್ಯಕರ ಎಂದು ಭಾವಿಸಿ ಸೇವಿಸುವ ಭಾರತೀಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ ಇವುಗಳ ಅತಿಯಾದ - ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳನ್ನು ಅರಿತುಕೊಂಡ ಬಳಿಕವೂ, ಇದರ ಬಳಕೆಯನ್ನು ಮುಂದುವರಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ಸಾಕರಿನ್ - ಅಸ್ಪಾರ್ಟೆಮ್ ಗಳ ಬೃಹತ್ ಉದ್ಯಮ 

ವಿಶ್ವ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೃತಕ ಮಾಧುರ್ಯಕಾರಕಗಳಲ್ಲಿ ಸಾಕರಿನ್ ಗೆ ಸಿಂಹಪಾಲು ಸಲ್ಲುತ್ತದೆ. ಅರ್ಥಾತ್ ಸಾಕರಿನ್ ಗೆ ಶೇ. ೭೧ ರಷ್ಟು ಮತ್ತು ಅಸ್ಪಾರ್ಟೆಮ್ ಗೆ ಶೇ. ೨೩ ರಷ್ಟು ಬೇಡಿಕೆಯಿದೆ. ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. ೧೮೭೮ ರಲ್ಲಿ ಸಂಶೋಧಿಸಲ್ಪಟ್ಟ ಸಾಕರಿನ್, ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಸುಲಭ ಬೆಲೆಗೆ ಲಭ್ಯವಿದೆ. 

ವಿಶ್ವಾದ್ಯಂತ ಉತ್ಪಾದಿಸಲ್ಪಡುವ ಕೃತಕ ಮಾಧುರ್ಯಕಾರಕಗಳಲ್ಲಿ ಶೇ. ೩೩ ರಷ್ಟು ಅಮೇರಿಕ ದೇಶವೊಂದರಲ್ಲೇ ಮಾರಾಟವಾಗುತ್ತಿದೆ. ಆಶ್ಚರ್ಯವೆಂದರೆ ಅಲ್ಲಿ ಮಾರಾಟವಾಗುತ್ತಿರುವ ಅಸ್ಪಾರ್ಟೆಮ್ ನ ಪ್ರಮಾಣವು ಶೇ. ೭೦ ರಷ್ಟಿದ್ದು, ಸಾಕರಿನ್ ನ ಪ್ರಮಾಣವು ಶೇ. ೩೦ ರಷ್ಟಿದೆ!. 

ಪ್ರಸ್ತುತ ಇಂತಹ ವಾಣಿಜ್ಯ ಉತ್ಪನ್ನಗಳ ತಯಾರಕರು ಹಾಗೂ ವಾಣಿಜ್ಯ ಬಳಕೆದಾರರು ಪೇಟೆಂಟ್ ಇರದ ಹಳೆಯ ತಲೆಮಾರಿನ ಹಾಗೂ ಅಲ್ಪಬೆಲೆಗೆ ಲಭಿಸುವ ಮಾಧುರ್ಯಕಾರಕಗಳಿಗೆ ಬದಲಾಗಿ,ಹೊಸದಾಗಿ ಆವಿಷ್ಕರಿಸಿದ ದುಬಾರಿ ಬೆಲೆಯ ನೂತನ ಉತ್ಪನ್ನಗಳನ್ನು ಬೆಂಬಲಿಸಿ ಮಾರಾಟ ಮಾಡುತ್ತಿರುವುದು, ತಮಗೆ ದೊರೆಯುವ ಅಪಾರವಾದ ಲಾಭದ ಸಲುವಾಗಿಯೇ ಹೊರತು ಜನಸಾಮಾನ್ಯರ ಹಿತದೃಷ್ಟಿಯಿಂದಲ್ಲ. ದುಬಾರಿ ಬೆಲೆಯ ನಿಯೋಟೇಮ್ ನಿಶ್ಚಿತವಾಗಿಯೂ ಅಸ್ಪಾರ್ಟೆಮ್ ಗಿಂತ ಸುರಕ್ಷಿತವೆಂದು ಇದರ ತಯಾರಕರು ಹೇಳುವುದು ಇದನ್ನು ಸಮರ್ಥಿಸುತ್ತದೆ. 

ಅದೇ ರೀತಿಯಲ್ಲಿ ಭಾರತದಲ್ಲಿ ಹೆಸರುವಾಸಿಯಾಗಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದು ತಾನು ತಯಾರಿಸಲಿರುವ "ಕ್ರೀಡಾ ಪೇಯ"ದಲ್ಲಿ ಅಸ್ಪಾರ್ಟೆಮ್ ಬಳಸಲು ಅನುಮತಿಯನ್ನು ಕೇಳಿತ್ತು. ಆದರೆ ಭಾರತದಲ್ಲಿ ಅಲ್ಪಬೆಲೆಗೆ ಲಭಿಸುವ ಸಾಕರಿನ್ ಗೆ ಬದಲಾಗಿ ದುಬಾರಿ ಬೆಲೆಯ ಹಾಗೂ ವಿದೇಶದಿಂದ ಆಮದು ಮಾಡಬೇಕಾದ ಅಸ್ಪಾರ್ಟೆಮ್ ನ ಬಳಕೆ ಒಳಿತಲ್ಲವೆಂದು ಸಂಬಂಧಿತ ಇಲಾಖೆಯ ಅಧಿಕಾರಿಗಳು ಇದನ್ನು ವಿರೋಧಿಸಿದ್ದರು. 

ಆದರೆ ಜೂನ್ ೨೦೦೪ ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಧಿಸೂಚನೆಯಂತೆ, ಕೃತಕ ಮಾಧುರ್ಯಕಾರಕಗಳ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಿರುವುದು ನಂಬಲು ಅಸಾಧ್ಯವೆನಿಸುತ್ತದೆ. 

ಕೊನೆಯ ಮಾತು 

ಪ್ರಸ್ತುತ ನಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಕೃತಕ ಮಾಧುರ್ಯಕಾರಕಗಳ ಬಳಕೆಯೂ ದಿನೇದಿನೇ ಹೆಚ್ಚುತ್ತಿದೆ. ಅಧಿಕತಮ ಖಾದ್ಯಪೇಯಗಳಲ್ಲಿ ಇವುಗಳ ಬಳಕೆ ಅತಿಯಾಗುತ್ತಿರಲು, ಮಧುಮೇಹ ಪೀಡಿತರು ಮತ್ತು ಆಹಾರ ಸೇವನೆಯಲ್ಲಿ ಕ್ಯಾಲರಿಗಳನ್ನು ನಿಯಂತ್ರಿಸುವ ವ್ಯಕ್ತಿಗಳು ಕಾರಣವೆನಿಸಿದ್ದಾರೆ. ಈ ಕೃತಕ ಮಾಧುರ್ಯಕಾರಕಗಳು ಇದೀಗ ಹಿಂದೂ ದೇವತೆಗಳ ಪ್ರಸಾದಗಳ ತಯಾರಿಕೆಯಲ್ಲೂ ಬಳಸಲ್ಪಡುತ್ತಿರುವುದು ಇದಕ್ಕೊಂದು ಇವುಗಳ ಜನಪ್ರಿಯತೆಗೊಂದು  ಉತ್ತಮ ಉದಾಹರಣೆಯೆನಿಸುತ್ತದೆ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೧೯-೦೧-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 




No comments:

Post a Comment