Friday, September 6, 2013

Medical miracles



          ವೈದ್ಯಕೀಯ ಪವಾಡಗಳು ಸಂಭವಿಸುವುದು ನಿಜವೇ? 

ಪವಾಡಗಳು ಮತ್ತು ಪವಾಡಪುರುಷರ ತವರೂರು ಎನಿಸಿರುವ ಭವ್ಯ ಭಾರತದಲ್ಲಿ ದಿನನಿತ್ಯ ಅಸಂಖ್ಯ ಪವಾಡಗಳು ಸಂಭವಿಸುತ್ತವೆ. ಏಕೆಂದರೆ ಪವಾಡಗಳನ್ನು ನಂಬುವ ಮನೋಭಾವವು ಅನೇಕ ಭಾರತೀಯರಲ್ಲಿ ಜನ್ಮದತ್ತವಾಗಿಯೇ ಬಂದಿರುತ್ತದೆ. ಆದರೆ ವೈಜ್ಞಾನಿಕ ಸಾಕ್ಷ್ಯಾಧಾರಗಳೇ ಇಲ್ಲದ "ವಿಸ್ಮಯಕಾರಿ ಚಿಕಿತ್ಸೆ" ಗಳನ್ನೂ "ವೈದ್ಯಕೀಯ ಪವಾಡ" ಗಳೆಂದು ಪರಿಗಣಿಸಿ ಪ್ರಯೋಗಿಸುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ!. 

---------------            -------------------           -----------------               ------------------               ----------------                 ----------------ಈ ಲೇಖನದ ತಲೆಬರಹವನ್ನು ಕಂಡು ಕುತೂಹಲದಿಂದ ನೀವಿದನ್ನು ಓದುತ್ತಿರುವುದು ನಿಜವಾಗಿರಲೇಬೇಕು. ಅಂತೆಯೇ ಇದನ್ನು ಓದಲಾರಂಭಿಸುವ ಮುನ್ನ ವೈದ್ಯಕೀಯ ಪವಾಡಗಳು ಸಂಭವಿಸುವುದು ನಿಜವೇ?, ಎನ್ನುವ ಸಂದೇಹವೂ ನಿಮ್ಮ ಮನದಲ್ಲಿ ಮೂಡಿರಬೇಕು. 

ಪ್ರಾಮಾಣಿಕವಾಗಿ ಹೇಳಬೇಕಿದ್ದಲ್ಲಿ ವೈದ್ಯಕೀಯ ಪವಾಡಗಳು ಸಂಭವಿಸುವುದು ಶತಪ್ರತಿಶತ ಸತ್ಯ. ಆದರೆ ಈ ಪವಾಡಗಳು ನಿಶ್ಚಿತವಾಗಿಯೂ ನೀವು ಕೇಳಿರಬಹುದಾದ ಅಥವಾ ಕಲ್ಪಿಸಿರಬಹುದಾದ ಪವಾಡಗಳಲ್ಲ ಎಂದಲ್ಲಿ ನಿಮಗೂ ಆಶ್ಚರ್ಯವೆನಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಜನಸಾಮಾನ್ಯರು ನಂಬುವಂತಹ ಪವಾಡಗಳಿಗೆ ವೈದ್ಯಕೀಯ ವಿಜ್ಞಾನಿಗಳು ಅಥವಾ ಸಂಶೋಧಕರು ಕಾರಣಕರ್ತರೆನಿಸುವುದಿಲ್ಲ. ಆದರೆ ಶಾಶ್ವತ ಪರಿಹಾರವೇ ಇಲ್ಲದ ಅಥವಾ ಗಂಭೀರ- ಮಾರಕವೆನಿಸಬಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ವ್ಯಾಧಿಯೊಂದನ್ನು ಯಾವುದೇ ವೈದ್ಯಕೀಯ ಅರ್ಹತೆಗಳೇ ಇಲ್ಲದ ವ್ಯಕ್ತಿಯೊಬ್ಬನು ಗುಣಪಡಿಸಿದನೆಂದು ಹಬ್ಬಿದ "ಗಾಳಿ ಸುದ್ದಿ"ಯು, ಅನೇಕರ ಪಾಲಿಗೆ ವೈದ್ಯಕೀಯ ಪವಾಡವೆಂದೇ ತೋರುತ್ತದೆ. 

ಉದಾಹರಣೆಗೆ ಪಂಡಿತ ಭೀಮಸೇನ ಜೋಷಿಯವರು ಶಾಸ್ತ್ರೀಯ ಸಂಗೀತವನ್ನು ಅದ್ಭುತವಾಗಿ ಹಾಡುವುದು ಜನಸಾಮಾನ್ಯರ ಪಾಲಿಗೆ ಪವಾಡವೆನಿಸುವುದಿಲ್ಲ. ಆದರೆ ಬಡಪಾಯಿ ಭಿಕ್ಷುಕನೊಬ್ಬ ಅದ್ಭುತವಾಗಿ ಹಾಡುವುದು ಅನೇಕರ ಪಾಲಿಗೆ ಪವಾಡದಂತೆ ಕಾಣುವುದು ಮಾತ್ರ ಸುಳ್ಳೇನಲ್ಲ!. 

ಅದೇ ರೀತಿಯಲ್ಲಿ ನೂರಾರು ವೈದ್ಯಕೀಯ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಸಂಶೋಧಿಸಿದ, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹಾಗೂ ಮಹತ್ವಪೂರ್ಣವೆಂದು ಮನ್ನಣೆಗಳಿಸಿದ ಮತ್ತು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ "ಅದ್ಭುತ ಸಂಶೋಧನೆ" ಗಳು ನಮ್ಮ ಪಾಲಿಗೆ ವೈದ್ಯಕೀಯ ಪವಾಡಗಳೆಂದು ತೋರುವುದಿಲ್ಲ. ಆದರೆ ಮದ್ದೂರಿನ ವ್ಯಕ್ತಿಯೊಬ್ಬ ಮಧುಮೇಹವನ್ನು ಗುಣಪಡಿಸುವ, ಅನಂತಪುರದ ಹಳ್ಳಿಗನೊಬ್ಬ ಆಸ್ತಮಾ ಪರಿಹರಿಸುವ ಅಥವಾ ಕ್ಯಾಸನೂರಿನಲ್ಲಿ ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸಕನ ಬಗ್ಗೆ ಹರಡುವ ವದಂತಿಗಳು, ಅನೇಕರ ಪಾಲಿಗೆ ವೈದ್ಯಕೀಯ ಪವಾಡಗಳಂತೆ ತೋರುತ್ತವೆ!. 

ಸುಪ್ರಸಿದ್ಧ ಕನ್ನಡ ವಾರಪತ್ರಿಕೆಯೊಂದು ಹಲವಾರು ವರ್ಷಗಳ ಹಿಂದೆ ವಿಶೇಷ ಲೇಖನವೊಂದನ್ನು ಪ್ರಕಟಿಸಿತ್ತು. ಮಧುಮೇಹ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವೊಂದನ್ನು ಕಂಡುಹಿಡಿದಿದ್ದ ಸ್ವಯಂ ಘೋಷಿತ ವೈದ್ಯನೊಬ್ಬನ ಸಾಧನೆಯನ್ನು,ಇದೊಂದು ವೈದ್ಯಕೀಯ ಪವಾಡ ಎನ್ನುವ ರೀತಿಯಲ್ಲಿ ಪ್ರಕಟಿಸಿದ್ದ ಈ ಲೇಖನದಲ್ಲಿ ಸಾಕಷ್ಟು ಉತ್ಪ್ರೇಕ್ಷೆಯೂ ಇದ್ದಿತು. 

ಸ್ವತಃ ಮಧುಮೇಹದಿಂದ ಬಳಲುತ್ತಿದ್ದ ಈ ವ್ಯಕ್ತಿಯು ತನ್ನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಲ್ಲ ಔಷದವನ್ನು ಕಂಡುಹಿಡಿಯುವ ಧೃಢ ಸಂಕಲ್ಪದಿಂದ, ಅನೇಕ ಆಯುರ್ವೇದ ಗ್ರಂಥಗಳನ್ನು ಅಧ್ಯಯನ ಮಾಡಿದ್ದುದನ್ನು ಈ ಲೇಖನದಲ್ಲಿ ರಸವತ್ತಾಗಿ ವರ್ಣಿಸಲಾಗಿತ್ತು. ಜೊತೆಗೆ ವಿವಿಧ ಗಿಡಮೂಲಿಕೆಗಳಿಂದ ತಾನೇ ಸಿದ್ಧಪಡಿಸಿದ ಔಷದಗಳನ್ನು ತನ್ನ ಮೇಲೆಯೇ ಪ್ರಯೋಗಿಸಿ, ಇದರ ಪರಿಣಾಮವನ್ನು ಅಧ್ಯಯನ ಮಾಡಿ ಸಫಲವಾಗಿದ್ದ ವಿಚಾರವನ್ನು ವಿಶದವಾಗಿ ವಿವರಿಸಲಾಗಿತ್ತು. ಬಳಿಕ ತನ್ನ ಸಂಶೋಧನೆಯನ್ನು ಅನ್ಯ ಮಧುಮೇಹಿಗಳ ಮೇಲೆ ಪ್ರಯೋಗಿಸಿ ಗುಣಪಡಿಸಿದ, ಅರ್ಥಾತ್ ಶಾಶ್ವತ ಪರಿಹಾರವೇ ಇಲ್ಲದ ಮಧುಮೇಹ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸಬಲ್ಲ, ಪವಾಡ ಸದೃಶ ಪರಿಣಾಮವನ್ನು ನೀಡಬಲ್ಲ ಈತನ ಔಷದವನ್ನು ಸೇವಿಸಿದಲ್ಲಿ ನಿಶ್ಚಿತವಾಗಿಯೂ ಮಧುಮೇಹ ಗುಣವಾಗುವುದೆಂದು ಘಂಟಾಘೋಷವಾಗಿ ಸಾರಲಾಗಿತ್ತು!. 

ವಾರಪತ್ರಿಕೆಯ ಈ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆಯಾದೊಡನೆ, ರಾಜ್ಯದ ಮತ್ತು ನೆರೆಯ ರಾಜ್ಯಗಳಿಂದ ಮಧುಮೇಹ ರೋಗಿಗಳ ಮಹಾಪೂರವೇ ಈತನ ಚಿಕಿತ್ಸೆಗಾಗಿ ಹರಿದುಬಂದಿತ್ತು. ಜನಮರುಳೋ, ಜಾತ್ರೆ ಮರುಳೋ ಎನ್ನುವಂತಹ ಸನ್ನಿವೇಶ ಸೃಷ್ಟಿಸಲ್ಪಟ್ಟು ಚಿಕಿತ್ಸಕನ ಖ್ಯಾತಿ ಮುಗಿಲಿಗೆ ಏರಿತ್ತು. 

ಆದರೆ ಕೆಲವೇ ತಿಂಗಳುಗಳು ಕಳೆಯುವಷ್ಟರಲ್ಲಿ ಈ ಪವಾಡ ಸದೃಶ ಔಷದವು ಮಧುಮೇಹವನ್ನು ಶಾಶ್ವತವಾಗಿ ಪರಿಹರಿಸುವುದು ಬಿಡಿ, ಸಮರ್ಪಕವಾಗಿ ನಿಯಂತ್ರಿಸಲೂ ವಿಫಲವಾಗಿ ನೂರಾರು ರೋಗಿಗಳ ವ್ಯಾಧಿ ಉಲ್ಬಣಿಸಿದ ಪರಿಣಾಮವಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಕೆಲ ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಒಂದೆರಡು ವರ್ಷಗಳು ಕಳೆಯುವಷ್ಟರಲ್ಲಿ ತಮ್ಮ ವ್ಯಾಧಿ ಗುಣವಾಗದೆನ್ನುವ ಸತ್ಯವನ್ನು ಬಹುತೇಕ ರೋಗಿಗಳು ಅರಿತುಕೊಂಡ ಪರಿಣಾಮವಾಗಿ, ಈ ಚಿಕಿತ್ಸಕ ಹಾಗೂ ಈತನ ಔಷದಗಳು ಸಂಪೂರ್ಣವಾಗಿ ಬೇಡಿಕೆಯನ್ನು ಕಳೆದುಕೊಂಡಿದ್ದು ಮಾತ್ರ ಸತ್ಯ!. 

ಪ್ರತ್ಯಕ್ಷವಾಗಿ ಕಂಡರೂ.......... 

ಸಾಮಾನ್ಯವಾಗಿ ಮೇಲೆ ವಿವರಿಸಿದ ಘಟನೆಗಳಿಗೆ ಕಾರಣವೆನಿಸಿದ್ದ "ಸ್ವಯಂ ಘೋಷಿತ ವೈದ್ಯನೊಬ್ಬನ ಸಂಶೋಧನೆ" , ಸುದ್ದಿ ಮಾಧ್ಯಮಗಳಲ್ಲಿ ವರದಿಯಾದೊಡನೆ ಕಾಡ್ಗಿಚ್ಚಿನಂತೆ ಹರಡುತ್ತದೆ. ಇಂತಹ ಸಂದರ್ಭಗಳಲ್ಲಿ ತಾವು ಪ್ರಕಟಿಸಲಿರುವ ವೈದ್ಯಕೀಯ ವಿಸ್ಮಯ ಅಥವಾ ಪವಾಡಗಳ  ಸತ್ಯಾಸತ್ಯತೆಯನ್ನು ಪರೀಕ್ಷಿಸದೇ, ಬೆರಳೆಣಿಕೆಯಷ್ಟು ಜನರ ಅಭಿಪ್ರಾತಗಳನ್ನು ಪರಿಗಣಿಸಿದ ವರದಿಗಾರರು-ಲೇಖಕರು ತಳೆವ ನಿರ್ಧಾರಗಳು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುವ ಸಾಧ್ಯತೆಗಳಿವೆ. 

ನಿಜಹೆಳಬೇಕಿದ್ದಲ್ಲಿ ಇಂತಹ ವಿಷಯಗಳನ್ನು ಪ್ರಕಟಿಸುವ ಮುನ್ನ, ಮಾಧ್ಯಮದವರು ಈ ಬಗ್ಗೆ ಅವಶ್ಯಕ ವೈಜ್ಞಾನಿಕ ಮಾಹಿತಿಗಳನ್ನು ಪಡೆದುಕೊಂಡು, ಅನುಭವಿ ತಜ್ಞವೈದ್ಯರ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.ಜೊತೆಗೆ ಈ ಔಷದದ ಸೇವನೆಯಿಂದ ತನ್ನ ಕಾಯಿಲೆ ಸಂಪೂರ್ಣವಾಗಿ ಗುಣವಾಗಿದೆ ಎನ್ನುವ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಏಕೆಂದರೆ ಕೆಲ ಸಂದರ್ಭಗಳಲ್ಲಿ ಈ ಔಷದ ಸೇವಿಸಿದ್ದರಿಂದ ತನ್ನ ಕಾಯಿಲೆ ಗುಣವಾಯಿತು ಎನ್ನುವ  ವ್ಯಕ್ತಿಗಳಿಗೆ, ನಿಜಕ್ಕೂ ಇಂತಹ ಕಾಯಿಲೆಯೇ ಬಾಧಿಸಿರುವುದಿಲ್ಲ. ವೈಯುಕ್ತಿಕ ಲಾಭ ಅಥವಾ ಹಣದಾಸೆಗೆ ಬಲಿಯಾಗಿ ಇಂತಹ ಹೇಳಿಕೆಗಳನ್ನು ನೀಡಲು ಸಿದ್ಧರಿರುವ ಜನರನ್ನು ಬಳಸಿಕೊಳ್ಳುವ ನಕಲಿ ವೈದ್ಯರ ಸಂಖ್ಯೆಯೂ ಕಡಿಮೆಯೇನಿಲ್ಲ!.

ಈ ಸಂದರ್ಭದಲ್ಲಿ ಹುಚ್ಚುನಾಯಿ ಕಡಿತಕ್ಕೆ ಪರಿಣಾಮಕಾರಿ ಔಷದ ನೀಡುವ ವ್ಯಕ್ತಿಯೊಬ್ಬನ ಖ್ಯಾತಿ ಹರಡಲು ಕಾರಣವೆನಿಸಿದ್ದ ಘಟನೆಯೊಂದು ಇಂತಿದೆ. ಬಡ ಕುಟುಂಬದ ಶಾಲಾ ಬಾಲಕನೊಬ್ಬ ದಾರಿಯಲ್ಲಿ ಕಂಡ ನಾಯಿಗೆ ಕಲ್ಲೆಸೆದ ಕಾರಣದಿಂದ ಅದು ಆತನಿಗೆ ಕಚ್ಚಿತ್ತು. ಘಟನೆ ನಡೆದ ಸಂದರ್ಭದಲ್ಲಿ ಹುಚ್ಚುನಾಯಿಗಳ ಹಾವಳಿ ಅತಿಯಾಗಿದ್ದು, ಅನೇಕರು ಹುಚ್ಚುನಾಯಿಗಳ ಕಡಿತಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಬಾಲಕನಿಗೆ ಹುಚ್ಚುನಾಯಿ ಕಡಿದಿದೆ ಎಂದು ಸಂದೇಹಿಸಿದ ಮನೆಮಂದಿ,ಆತನನ್ನು ಸರಕಾರೀ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅವಶ್ಯಕ ಔಷದ ಲಭ್ಯವಿರಲಿಲ್ಲ. ದುಬಾರಿ ಬೆಲೆಯ ಇಂಜೆಕ್ಷನ್ ಖರೀದಿಸಲಾಗದೇ "ಹಳ್ಳಿ ಮದ್ದಿನ ಚಿಕಿತ್ಸೆ" ಗೆ ಶರಣಾಗಿದ್ದರು. ನಿಗದಿತ ಅವಧಿಗೆ ಚಿಕಿತ್ಸೆ ಪಡೆದಿದ್ದ ಬಾಲಕನು, ಪವಾಡ ಸದೃಶವಾಗಿ ಬದುಕಿ ಉಳಿದಿದ್ದನು. ಈ ಘಟನೆಗೆ ಸಿಕ್ಕ ಪ್ರಚಾರದಿಂದಾಗಿ ಹಳ್ಳಿ ಮದ್ದು ನೀಡುವ ಚಿಕಿತ್ಸಕನ ಅದೃಷ್ಟದ ಬಾಗಿಲು ತೆರೆದಿತ್ತು. 

ನಿಜ ಹೇಳಬೇಕಿದ್ದಲ್ಲಿ ಈ ಬಾಲಕನಿಗೆ ಕಚ್ಚಿದ್ದ ನಾಯಿಗೆ "ರೇಬಿಸ್ ಸೋಂಕು" ತಗಲಿರಲೇ ಇಲ್ಲ. ಬಾಲಕನ ಕಲ್ಲೇಟಿನಿಂದ ಸಿಟ್ಟಿಗೆದ್ದ ನಾಯಿ ಸ್ವಾಭಾವಿಕವಾಗಿ ಆತನನ್ನು ಕಚ್ಚಿತ್ತು. ಆದರೆ ರೇಬಿಸ್ ನ ಸೋಂಕಿಲ್ಲದ ನಾಯಿ ಕಚ್ಚಿದ್ದರಿಂದಾಗಿಯೇ ಬಾಲಕನು ಬಚಾವಾಗಿದ್ದನೇ ಹೊರತು, ಹಳ್ಳಿ ಮದ್ದಿನಿಂದಲ್ಲ ಎನ್ನುವ ಸತ್ಯ ಬಹುತೇಕ ಜನರಿಗೆ ತಿಳಿದಿರಲೇ ಇಲ್ಲ!. 

ಹುಚ್ಚುನಾಯಿ ಕಡಿತದಿಂದ ಉದ್ಭವಿಸುವ ರೇಬಿಸ್ ಕಾಯಿಲೆಯನ್ನು ನಿಶ್ಚಿತವಾಗಿ ತಡೆಗಟ್ಟಲು ಏಂಟಿ ರೇಬಿಸ್ ವೆಕ್ಸೀನ್ ಇಂಜೆಕ್ಷನ್ ಹೊರತುಪಡಿಸಿ ಅನ್ಯ ಔಷದವೇ ಇಲ್ಲ. ವಿಶೇಷವೆಂದರೆ ಹುಚ್ಚುನಾಯಿ ಕಡಿತಕ್ಕೆ ಒಳಗಾಗಿ ಹಳ್ಳಿ ಮದ್ದು ಪ್ರಯೋಗಿಸಿ, ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಲ್ಲಿ, "ಅಪಥ್ಯ" ದ ಪರಿಣಾಮದಿಂದಾಗಿ ರೋಗಿ ಸತ್ತಿರಬೇಕು ಎನ್ನುವ ಅಪವಾದವೂ ತಪ್ಪಿದ್ದಲ್ಲ!. 

ಇವೆಲ್ಲಾ ಕಾರಣಗಳಿಂದಾಗಿ ಇಂತಹ ವಿಸ್ಮಯಕಾರಿ ಚಿಕಿತ್ಸೆಗಳನ್ನು ವೈದ್ಯಕೀಯ ಪವಾಡವೆಂದು ಘೋಷಿಸುವ ಮುನ್ನ, ಘಟನೆಯ ಪೂರ್ವಾಪರಗಳನ್ನೂ ಅರಿತುಕೊಳ್ಳಲೇಬೇಕು. 

ವಿಚಿತ್ರ ಆದರೂ ಸತ್ಯ!

ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಅನಂತ- ಅನಿತಾ ದಂಪತಿಗಳಿಗೆ ವಿವಾಹವಾಗಿ ಮೂರು ವರ್ಷಗಳೇ ಕಳೆದಿದ್ದರೂ ಸಂತಾನ ಭಾಗ್ಯ ಪ್ರಾಪ್ತಿಯಾಗಿರಲಿಲ್ಲ. ಜ್ಯೋತಿಷಿಗಳ ಸಲಹೆಯಂತೆ ಜಾತಕಗಳಲ್ಲಿನ ದೋಷಗಳ ಪರಿಹಾರಕ್ಕಾಗಿ ಅನೇಕ ನಿವೃತ್ತಿಗಳನ್ನು ನಡೆಸಿದರೂ ಪ್ರಯೋಜನವಾಗದೇ, ಅಂತಿಮವಾಗಿ ತಜ್ಞ ವೈದ್ಯರಲ್ಲಿ ಸಲಹೆ ಪಡೆಯಲು ತೆರಳಿದ್ದರು. 

ದಂಪತಿಗಳನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸಿದ ವೈದ್ಯರಿಗೆ, ಸಂತಾನ ಹೀನತೆಗೆ ಕಾರಣವೆನಿಸಬಲ್ಲ ನ್ಯೂನತೆಗಳು ಇವರಿಬ್ಬರಲ್ಲೂ ಪತ್ತೆಯಾಗಿರಲಿಲ್ಲ. ಅಂತೆಯೇ ಸುರತ ಕ್ರಿಯೆಯ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ಯಾವುದೇ ರೀತಿಯ ಶಾರೀರಿಕ- ಮಾನಸಿಕ ತೊಂದರೆಗಳು ಬಾಧಿಸುತ್ತಿವೆಯೇ ಎಂದು ವೈದ್ಯರು ಕೇಳಿದಾಗ ನಕಾರಾತ್ಮಕ ಉತ್ತರ ದೊರೆತಿತ್ತು. ಇದರಿಂದಾಗಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ವಿಫಲರಾದ ವೈದ್ಯರು, ತನ್ನ ಸಂದೇಹವೊಂದನ್ನು ಪರಿಹರಿಸಲು ಅನಿತಾಳ ಶಾರೀರಿಕ ಪರೀಕ್ಷೆ ನಡೆಸಿದರು. ಪರಿಣಾಮವಾಗಿ ಆಕೆಯ "ಕನ್ಯಾಪೊರೆ" ಯಥಾ ಸ್ಥಿತಿಯಲ್ಲಿರುವುದು ತಿಳಿದುಬಂದಿತ್ತು!. 

ಅರ್ಥಾತ್ ಈ ಸ್ನಾತಕೋತ್ತರ ಪದವೀಧರ ದಂಪತಿಗಳು ಯೌವ್ವನದಲ್ಲಿ ಕೇವಲ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದ್ದರೇ ಹೊರತು,"ಕಾಮಸೂತ್ರ " ದಂತಹ ಲೈಂಗಿಕ ವಿಜ್ಞಾನದ ಪುಸ್ತಕಗಳನ್ನು ಕಣ್ಣಿನಿಂದಲೂ ಕಂಡಿರಲಿಲ್ಲ. ಇದರೊಂದಿಗೆ ವಿವಾಹವಾಗಿ ಮೂರು ವರ್ಷಗಳೇ ಕಳೆದಿದ್ದರೂ, ಇವರಿಬ್ಬರಲ್ಲೂ ನಾಚಿಕೆ- ಸಂಕೋಚಗಳು ಮಾಯವಾಗಿರಲಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ ಇವರ ನಡುವೆ ಯಶಸ್ವಿ ಹಾಗೂ ನೈಜ ಸುರತಕ್ರಿಯೆ ನಡೆದಿರಲಿಲ್ಲ. 

ಆದರೆ ವೈದ್ಯರು ಸುರತಕ್ರಿಯೆಯ ಸಂದರ್ಭದಲ್ಲಿ  ತೊಂದರೆಗಳು ಬಾಧಿಸಿವೆಯೇ ಎಂದು ಕೇಳಿದಾಗ ಇಲ್ಲವೆಂದು ಉತ್ತರಿಸಿದ್ದ ದಂಪತಿಗಳಿಗೆ,ನಿಜಕ್ಕೂ ಸುರತಕ್ರಿಯೆಯ ಬಗ್ಗೆ ಏನೇನೂ ತಿಳಿದಿರಲಿಲ್ಲ. ಇದೇ ಕಾರಣದಿಂದಾಗಿ "ತಾವು ಮಾಡುತ್ತಿರುವುದೇ ಸರಿ" ಎಂದು ಇವರಿಬ್ಬರೂ  ಧೃಢವಾಗಿ ನಂಬಿದ್ದರು!. 

ಅಂತಿಮವಾಗಿ ಇವರ ಸಂತಾನ ಹೀನತೆಗೆ ಕಾರಣವೆನಿಸಿದ್ದ "ಅಜ್ಞಾನ" ವನ್ನು ಹೋಗಲಾಡಿಸಲು ಕೆಲವೊಂದು ಕಿವಿಮಾತುಗಳನ್ನು ಹೇಳಿದ ವೈದ್ಯರು, ಲೈಂಗಿಕ ವಿಜ್ಞಾನದ ಪುಸ್ತಕವೊಂದನ್ನು ನೀಡಿದರು. ಜೊತೆಗೆ ಇವರ ಮಾನಸಿಕ ನೆಮ್ಮದಿಗಾಗಿ ಒಂದಿಷ್ಟು ವಿಟಮಿನ್ ಗುಳಿಗೆಗಳನ್ನು ನೀಡಿ, ಒಂದು ತಿಂಗಳ ಅವಧಿಗೆ ಸೇವಿಸಲು ಸೂಚಿಸಿದರು. 

ಸುಮಾರು ಒಂದು ವರ್ಷದ ಬಳಿಕ ಮತ್ತೆ ತನ್ನಲ್ಲಿಗೆ ಬಂದ ದಂಪತಿಗಳನ್ನು ಕಂಡು ವೈದ್ಯರಿಗೆ ಸಂತೋಷವಾಗಿತ್ತು. ಏಕೆಂದರೆ ಅನಿತಾಳ ಉಬ್ಬಿದ ಹೊಟ್ಟೆಯೇ ಆಕೆ ಗರ್ಭಿಣಿಎಂದು ಸಾರುತ್ತಿತ್ತು. ತನ್ನ ಸಲಹೆ- ಸೂಚನೆಗಳು ಫಲಪ್ರದವೆನಿಸಿದ ಬಗ್ಗೆ ಹೆಮ್ಮೆ ಪಟ್ಟಿದ್ದ ವೈದ್ಯರಿಗೆ, ಅನಂತನ ಮಾತುಗಳನ್ನು ಕೇಳಿದಾಗ "ಕಿವಿಗೆ ಕಾದ ಸೀಸವನ್ನು ಸುರಿದಂತಾಗಿತ್ತು". 

ಅನಂತನ ಹೇಳಿಕೆಯಂತೆ ವೈದ್ಯರು ನೀಡಿದ್ದ ಗುಳಿಗೆಗಳಿಂದ ನಿರೀಕ್ಷಿತ ಪರಿಣಾಮ ದೊರೆಯದ ಕಾರಣದಿಂದಾಗಿ, ಆರು ತಿಂಗಳು ಹಳ್ಳಿ ಮದ್ದು ಸೇವಿಸಿದ ಬಳಿಕವೇ ಅನಿತಾ ಗರ್ಭ ಧರಿಸಿದ್ದಳು!. 

ಈ ಆರೋಗ್ಯವಂತ ದಂಪತಿಗಳು ಸರಿಯಾದ ರೀತಿಯಲ್ಲಿ ಸಂಭೋಗಿಸದೇ ಉದ್ಭವಿಸಿದ್ದ ಸಂತಾನ ಹೀನತೆಯ ಸಮಸ್ಯೆಯು ವೈದ್ಯರ ಸಲಹೆ- ಸೂಚನೆಗಳಿಂದಾಗಿ ಪರಿಹಾರಗೊಂಡಿದ್ದು ಸತ್ಯ. ಅದೇ ರೀತಿಯಲ್ಲಿ ಈ ಸಲಹೆ- ಸೂಚನೆಗಳನ್ನು ದಂಪತಿಗಳು ಅಕ್ಷರಶಃ ಪರಿಪಾಲಿಸಿದ್ದರಿಂದಲೇ ಅನಿತಾ ಗರ್ಭವತಿಯಾಗಿದ್ದುದು ಕೂಡಾ ಅಷ್ಟೇ ಸತ್ಯ. ಆದರೂ ಈ ವಿದ್ಯಾವಂತ ದಂಪತಿಗಳು ಹೇಳುವಂತೆ ಹಳ್ಳಿಯ ಚಿಕಿತ್ಸಕ ನೀಡಿದ್ದ ವಿಸ್ಮಯಕಾರಿ ಚಿಕಿತ್ಸೆಯ ಪವಾಡ ಸದೃಶ ಪರಿಣಾಮವೇ ಸಂತಾನ ಪ್ರಾಪ್ತಿಗೆ ಕಾರಣ ಎನ್ನುವುದು, ವಿದ್ಯಾವಂತರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ ಎನ್ನಬೇಕಷ್ಟೇ!. 

ಪವಾಡ ಸದೃಶ ಲಸಿಕೆಗಳು 

ಈ ಲೇಖನವನ್ನು ಓದಿದ ಬಳಿಕ "ವೈದ್ಯಕೀಯ ಪವಾಡ" ಗಳು ಸಂಭವಿಸುವುದು ನಿಜವೇ ಎನ್ನುವ ಸಂದೇಹ ನಿಮ್ಮನ್ನೂ ಕಾಡುತ್ತಿರಬಹುದು. ನಿಜ ಹೇಳಬೇಕಿದ್ದಲ್ಲಿ ವೈದ್ಯಕೀಯ ಪವಾಡಗಳು ಸಹಸ್ರಾರು ವರ್ಷಗಳ ಹಿಂದೆಯೂ ಸಂಭವಿಸಿದ್ದವು. ಅದೇ ರೀತಿಯಲ್ಲಿ ಇಂದೂ ಸಂಭವಿಸುತ್ತಿವೆ ಹಾಗೂ ಮುಂದೆಯೂ ಸಂಭವಿಸಲಿವೆ. 

ಸಹಸ್ರಾರು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಗರ್ಭಿಣಿಯ ಉದರವನ್ನು ಸೀಳಿ, ಗರ್ಭಸ್ಥ ಶಿಶುವನ್ನು ಹೊರತೆಗೆದ (ಇಂದಿನ ಸಿಸೇರಿಯನ್ ಸೆಕ್ಷನ್) ಅಥವಾ ಕತ್ತರಿಸಿದ ಕಿವಿ ಅಥವಾ ಮೂಗನ್ನು, ಶರೀರದ ಇತರ ಅಂಗಾಂಗಗಳ ಚರ್ಮ ಇತ್ಯಾದಿಗಳನ್ನು ಬಳಸಿ ಪುನರ್ ನಿರ್ಮಿಸುವ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಆಚಾರ್ಯ ಸುಶ್ರುತರು ಆವಿಷ್ಕರಿಸಿದ್ದು ವೈದ್ಯಕೀಯ ಪವಾಡವೇ ಹೊರತು ಬೇರೇನೂ ಅಲ್ಲ. 

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅದ್ಭುತ ಸಂಶೋಧನೆಗಳ ಮೂಲಕ ಮನುಕುಲಕ್ಕೆ ವರದಾನವೆನಿಸುವ ಸಾಧನೆಗೈದ ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ಅಲೆಗ್ಸಾಂಡರ್ ಫ್ಲೆಮಿಂಗ್ ಮುಂತಾದ ನೂರಾರು ವಿಜ್ಞಾನಿಗಳ ಸಂಶೋಧನೆ-ಆವಿಷ್ಕಾರಗಳು ವೈದ್ಯಕೀಯ ಪವಾಡಗಳೇ ಆಗಿದ್ದರೂ, ನಮಗಿಂದು ಇವುಗಳ ಮಹತ್ವದ ಅರಿವಿಲ್ಲ. ನೂರಾರು ವರ್ಷಗಳ ಹಿಂದೆ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದ ಸಿಡುಬಿನ ಪಿಡುಗನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ "ಲಸಿಕೆ"ಯ ಸಂಶೋಧನೆಯಿಂದಾಗಿ, ಕೋಟ್ಯಂತರ ಜನರ ಪ್ರಾಣಗಳನ್ನು ಉಳಿಸುವುದರೊಂದಿಗೆ ಈ ಮಾರಿಯನ್ನೇ ಪ್ರಪಂಚದಿಂದ ಉಚ್ಚಾಟಿಸಲಾಗಿತ್ತು. ಅಂತೆಯೇ "ಇನ್ಸುಲಿನ್" ನ ಆವಿಷ್ಕಾರವು ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿತ್ತು. 

ಆದರೂ ಜನಸಾಮಾನ್ಯರ ಪಾಲಿಗೆ ಇಂತಹ ಅಸಂಖ್ಯ ಸಂಶೋಧನೆಗಳು ವೈದ್ಯಕೀಯ ಪವಾಡಗಳೆಂದು ತೋರುವುದೇ ಇಲ್ಲ. ಇದಕ್ಕೆ ಹೊರತಾಗಿ ಶಾಶ್ವತ ಪರಿಹಾರವಿಲ್ಲದ ಅಥವಾ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಗಂಭೀರ- ಮಾರಕ ಕಾಯಿಲೆಯೊಂದನ್ನು ನಿಶ್ಚಿತವಾಗಿ ಗುಣಪಡಿಸುವ "ಗಾಳಿ ಸುದ್ದಿ" ಗಳು, ಅನೇಕರಿಗೆ ವೈದ್ಯಕೀಯ ಪವಾಡದಂತೆ ಗೋಚರಿಸುವುದು ಮಾತ್ರ ವಿಷಾದನೀಯ ಎನ್ನದೆ ವಿಧಿಯಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

  
ಉದಯವಾಣಿ ಪತ್ರಿಕೆಯ ೦೬-೦೭-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment