Tuesday, September 3, 2013

Hypervitaminosis




    ವಿಟಮಿನ್ ಗಳ ವಿಪರೀತ ಸೇವನೆ ವಿಪತ್ಕಾರಕವೆನಿಸೀತು!

ಮನುಷ್ಯರಲ್ಲಿ ವಿವಿಧ ವಿಟಮಿನ್ ಗಳ ಕೊರತೆಯಿಂದಾಗಿ ವಿವಿಧ ವ್ಯಾಧಿಗಳು ಉದ್ಭವಿಸುವಂತೆಯೇ,ವಿಟಮಿನ್ ಗಳ ಅತಿಸೇವನೆಯೂ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಹುದೆನ್ನುವ ಸತ್ಯ ಜನಸಾಮಾನ್ಯರಿಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
----------------            ----------------------                   ----------------------                             -------------------------------           ---------
ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವ ಅನೇಕ ಜನರು, ತಮ್ಮ ಆರೋಗ್ಯದ ಮಟ್ಟವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳುವ ಸಲುವಾಗಿ ಅಥವಾ ಆಯುರಾರೋಗ್ಯಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ, ದಿನನಿತ್ಯ ವಿವಿಧರೀತಿಯ ವಿಟಮಿನ್ ಗಳನ್ನು ಸೇವಿಸುತ್ತಾರೆ. ಆದರೆ ಇಂತಹ ಉಪಕ್ರಮಗಳು ಮಿತಿಮೀರಿದಾಗ ಕೆಲವೊಂದು ಕಾಯಿಲೆಗಳಿಗೆ ಕಾರಣವೆನಿಸುತ್ತವೆ ಎನ್ನುವುದನ್ನು ಅರಿಯದೇ, ಸಮಸ್ಯೆಗಳು ತಲೆದೋರಿದ ಬಳಿಕ ಪರಿತಪಿಸುತ್ತಾರೆ. 

ಅನೇಕ ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿರುವವಿವಿಧ ವಿಟಮಿನ್ ಗಳ ದೈನಂದಿನ ಸೇವನೆಯು ನಿಶ್ಚಿತವಾಗಿಯೂ ನಿಷ್ಪ್ರಯೋಜಕವೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ನಿರ್ದಿಷ್ಟ ವಿಟಮಿನ್ ಒಂದರ ಕೊರತೆಯಿಂದ ಉದ್ಭವಿಸಿರಬಹುದಾದ ವ್ಯಾಧಿಯ ಚಿಕಿತ್ಸೆಯನ್ನು ಹೊರತುಪಡಿಸಿ, ಆರೋಗ್ಯವಂತ ವ್ಯಕ್ತಿಗಳು ಅಕಾರಣವಾಗಿ ಪ್ರತಿನಿತ್ಯ ಸೇವಿಸುವ ವಿಟಮಿನ್ ಗಳು ಯಾವುದೇ ವ್ಯಾಧಿಯನ್ನು ತಡೆಗಟ್ಟಲು ವಿಫಲವೆನಿಸುತ್ತವೆ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕೆಲವಿಧದ ಕಾಯಿಲೆಗಳನ್ನು ಹುಟ್ಟುಹಾಕುವಲ್ಲಿ ಮಾತ್ರ ನಿಸ್ಸಂದೇಹವಾಗಿಯೂ ಸಫಲವೆನಿಸುತ್ತವೆ!. 

ವಿಟಮಿನ್ ಗಳ ಸೇವನೆ ಅವಶ್ಯಕವೇ?

ಮಾನವ ಶರೀರದ ಪಾಲನೆ, ಪೋಷಣೆ ಹಾಗೂ ವಿವಿಧ ಜೈವಿಕ ಕ್ರಿಯೆಗಳಿಗೆ ಅತ್ಯವಶ್ಯಕ ಎನಿಸುವ ವಿಭಿನ್ನ ವಿಟಮಿನ್ ಗಳು- ಹಾಗೂ ಪೋಷಕಾಂಶಗಳು, ನಾವು ಪ್ರತಿನಿತ್ಯ ಸೇವಿಸುವ ವೈವಿಧ್ಯಮಯ ಆಹಾರ ಪದಾರ್ಥಗಳಲ್ಲಿ ಯಥೇಚ್ಛವಾಗಿ ಇರುತ್ತವೆ. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವೂ ಇದೆ. ಸಮೃದ್ಧ ಪೋಷಕಾಂಶಗಳಿರುವ ಆಹಾರಗಳನ್ನು ದಿನನಿತ್ಯ ಸೇವಿಸುವುದರಿಂದ, ನಮ್ಮ ಆರೋಗ್ಯದ ಮಟ್ಟವೂ ಉತ್ತಮವಾಗಿರುತ್ತದೆ. ಅಂತೆಯೇ ಪೋಷಕಾಂಶಗಳ ಕೊರತೆಯಿರುವ ಸತ್ವಹೀನ ಆಹಾರಗಳ ಸೇವನೆಯಿಂದ, ಅನೇಕ ರೀತಿಯ ಕಾಯಿಲೆಗಳು ಬಂದೆರಗುವ ಸಾಧ್ಯತೆಗಳೂ ಇವೆ. 

ನಾವು ದಿನನಿತ್ಯ ಸೇವಿಸುವ ಅಕ್ಕಿ, ರಾಗಿ, ಗೋಧಿ,ಜೋಳ,ದ್ವಿದಳ ಧಾನ್ಯಗಳು,ಗೆಡ್ಡೆ ಗೆಣಸುಗಳು,ಹಸಿರು ಸೊಪ್ಪು-ತರಕಾರಿಗಳು, ಮೀನು,ಮೊಟ್ಟೆ, ಮಾಂಸ, ಹಾಲು,ಎಣ್ಣೆ, ಬೆಣ್ಣೆ, ತುಪ್ಪ ಹಾಗೂ ಹಣ್ಣು ಹಂಪಲುಗಳಲ್ಲಿ ವಿಭಿನ್ನ ಪೋಷಕಾಂಶಗಳಿವೆ. ಇವುಗಳಲ್ಲಿ ಜೀವಸತ್ವಗಳು(ವಿಟಮಿನ್ ಗಳು), ಖನಿಜಗಳು,ಲವಣಗಳು,ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳು ಪ್ರಮುಖವಾಗಿವೆ. ಈ ಬಗ್ಗೆ ಶಾಲಾ ಪಟ್ಯಪುಸ್ತಕಗಳಲ್ಲೂ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಪರಿಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. 

ಅನುಭವಿ ವೈದ್ಯರೇ ಹೇಳುವಂತೆ ಸರಿಯಾದ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ, ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವ,ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗುವ, ದುಶ್ಚಟಗಳಿಂದ ದೂರವಿರುವ ಮತ್ತು ಮಾನಸಿಕ ನೆಮ್ಮದಿಯೊಂದಿಗೆ ಸಂತೃಪ್ತ ಜೀವೆನ ಸಾಗಿಸುವ ವ್ಯಕ್ತಿಗಳು, ಯಾವುದೇ ವಿಧದ ವಿಟಮಿನ್- ಟಾನಿಕ್ ಗಳನ್ನು ಸೇವಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. 

ಆದರೆ ನಿರ್ದಿಷ್ಟ ವಿಟಮಿನ್ ಗಳ ಕೊರತೆಯಿಂದ ಉದ್ಭವಿಸಿರುವ ವ್ಯಾಧಿಪೀಡಿತರು, ವೈದ್ಯರ ಸಲಹೆಯಂತೆ ಅವಶ್ಯಕ ವಿಟಮಿನ್ ಗಳನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ಆವಧಿಗೆ ಸೇವಿಸಲೇಬೇಕಾಗುವುದು. 

ಇವೆಲ್ಲಕ್ಕಿಂತ ಮಿಗಿಲಾಗಿ ಸತ್ವಹೀನ ಆಹಾರವನ್ನು ಸೇವಿಸುವ ಅಥವಾ ಆಹಾರವನ್ನೇ ಸೇವಿಸದ ಕಾರಣದಿಂದಾಗಿ ಉದ್ಭವಿಸುವ ದುಷ್ಪರಿಣಾಮಗಳನ್ನು, ಯಾವುದೇ ವಿಟಮಿನ್ - ಟಾನಿಕ್ ಗಳ ಸೇವನೆಯಿಂದ ತಡೆಗಟ್ಟುವುದು ಅಥವಾ ನಿವಾರಿಸುವುದು ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ನೀವು ದಿನನಿತ್ಯ ವೀಕ್ಷಿಸುವ ಜಾಹೀರಾತುಗಳಲ್ಲಿ ವರ್ಣಿಸುವಂತೆ, ನಿಮ್ಮ ಮಕ್ಕಳು ಆಹಾರವನ್ನೇ ಸೇವಿಸದಿದ್ದಲ್ಲಿ ಈ ಕೊರತೆಯನ್ನು ನೀಗಿಸಲು ನೀಡಬೇಕಾದ ದುಬಾರಿಬೆಲೆಯ "ಆರೋಗ್ಯ ಪೇಯ" ಗಳು ನಿಸ್ಸಂದೇಹವಾಗಿಯೂ ನಿಷ್ಪ್ರಯೋಜಕ ಎನಿಸುತ್ತವೆ!. 

ಅನಾರೋಗ್ಯ- ನಿಶ್ಶಕ್ತಿ 

ವರ್ಷಂಪ್ರತಿ ಋತುಗಳು ಬದಲಾಗುವಾಗ ಅಥವಾ ಇತರ ಕಾರಣಗಳಿಂದ ನಿಮ್ಮನ್ನು ಬಾಧಿಸಬಲ್ಲ ಸಣ್ಣಪುಟ್ಟ ಕಾಯಿಲೆಗಳು ಹಲವಾರು. ನಿಜ ಹೇಳಬೇಕಿದ್ದಲ್ಲಿ ಔಷದ ಸೇವನೆಯ ಅವಶ್ಯಕತೆಯೇ ಇಲ್ಲದ, ಒಂದೆರಡು ದಿನಗಳ ವಿಶ್ರಾಂತಿಯಿಂದ ತಾವಾಗಿ ಶಮನಗೊಳ್ಳುವ ಇಂತಹ ವ್ಯಾಧಿಗಳು ರೋಗಿಗಳ ಅಜಾಗರೂಕತೆಯಿಂದ ಉಲ್ಬಣಿಸುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಈ ವ್ಯಾಧಿಯ ಬಾಧೆಯನ್ನು ಪರಿಹರಿಸಲು ಔಷದಗಳ ಸೇವನೆ ಅನಿವಾರ್ಯವೆನಿಸುವುದು. ಈ ರೀತಿಯಲ್ಲಿ ನಾಲ್ಕಾರು ದಿನಗಳ ಕಾಲ ಬಾಧಿಸಿದ ವ್ಯಾಧಿಯಿಂದಾಗಿ,ನಿಮ್ಮ ಶರೀರದ ತೂಕ,ಆಕಾರಗಳೊಂದಿಗೆ ಹಸಿವೆ ಮತ್ತು ನಿದ್ರೆಗಳೂ ಕಡಿಮೆಯಾದಂತೆ ಭಾಸವಾಗುವುದು ಸ್ವಾಭಾವಿಕ. ಇವೆಲ್ಲವುಗಳನ್ನೂ ಮತ್ತೆ ಪೂರ್ವಸ್ಥಿತಿಗೆ ಸರಿಯಾಗಿ ದುರಸ್ತಿಪಡಿಸಲು, ವಿಟಮಿನ್ - ಟಾನಿಕ್ ಗಳ ಅವಶ್ಯಕತೆಯೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. 

ಸಾಮಾನ್ಯವಾಗಿ ವಿವಿಧ ಕಾಯಿಲೆಗಳಿಗೆ ಅನುಗುಣವಾಗಿ ರೋಗಿಗಳಲ್ಲಿ ಜ್ವರ,ತಲೆ-ಮೈಕೈನೋವು,ವಾಕರಿಕೆ-ವಾಂತಿ,ಭೇದಿ,ಕೆಮ್ಮು-ದಮ್ಮು,ಬಾಯಿರುಚಿ ಹಾಗೂ ಹಸಿವಿಲ್ಲದಿರುವುದು,ಮಲಬದ್ಧತೆಗಳಂತಹ ತೊಂದರೆಗಳು ಬಾಧಿಸುತ್ತವೆ. ಇವುಗಳ ಪರಿಹಾರಕ್ಕಾಗಿ ನೀವು ಸೇವಿಸುವ ಔಷದಗಳೊಂದಿಗೆ ನಿಮ್ಮ ಶರೀರದ ಸ್ವಾಭಾವಿಕ ರೋಗಪ್ರತಿರೋಧಕ ಕ್ರಿಯೆಗಳೂ ಒಂದಾಗಿ, ರೋಗಕಾರಕ ರೋಗಾಣುಗಳ ವಿರುದ್ಧ ಹೋರಾಡುತ್ತವೆ. ಜೊತೆಗೆ ಇಂತಹ ಸ್ಥಿತಿಯಲ್ಲಿ ನೀವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುವುದರಿಂದ, ನಿಮ್ಮಲ್ಲಿ ತೀವ್ರ ಆಯಾಸ,ನಿಶ್ಶಕ್ತಿ,ತಲೆತಿರುಗುವಿಕೆ, ನಿದ್ರಾಹೀನತೆಗಳಂತಹ ಅನೇಕ ತೊಂದರೆಗಳು ಕಂಡುಬರುತ್ತವೆ. ಇಂತಹ ತೊಂದರೆಗಳು- ಸಮಸ್ಯೆಗಳು ಸ್ವಯಂ ಶಮನಗೊಳ್ಳಲು ನೀವು ಪ್ರತಿನಿತ್ಯ ಸೇವಿಸುವ ಸತ್ವಭರಿತ ಆಹಾರಗಳೇ ಸಾಕಾಗುವುದು. ಈ ವಿಚಾರವನ್ನು ಅರಿತಿರದ ಜನಸಾಮಾನ್ಯರು ಇಂತಹ ಸಂದರ್ಭಗಳಲ್ಲಿ, ತಮ್ಮ ವೈದ್ಯರ ಬಳಿ ಒತ್ತಾಯಪೂರ್ವಕವಾಗಿ ವಿಟಮಿನ್ ಮಾತ್ರೆ- ಟಾನಿಕ್ ಗಳನ್ನು ಕೇಳಿ ಪಡೆದುಕೊಳ್ಳುವುದು ಅಪರೂಪವೇನಲ್ಲ!. ರೋಗಿಯೇ ಕಾರಣಕರ್ತನೆನಿಸುವ ಇಂತಹ ಅಧಿಕ ಪ್ರಸಂಗಿತನದಿಂದ ಅನಾವಶ್ಯಕವಾಗಿ ವಿಟಮಿನ್- ಟಾನಿಕ್ ಗಳನ್ನು ಸೇವಿಸುವುದರೊಂದಿಗೆ,ಸಾಕಷ್ಟು ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. 

ಹೈಪರ್ ವಿಟಾಮಿನೋಸಿಸ್ 

ಸಾಮಾನ್ಯವಾಗಿ ವೈದ್ಯರ ಸಲಹೆ ಪಡೆಯದೇ ಅಕಾರಣವಾಗಿ ಹಾಗೂ ಅನಾವಶ್ಯಕವಾಗಿ ನೀವು ಸೇವಿಸುವ ವಿಟಮಿನ್ ಗಳ ಪ್ರಮಾಣ ಮಿತಿಮೀರಿದಾಗ ಉದ್ಭವಿಸಬಹುದಾದ ಸಮಸ್ಯೆಗಳನ್ನು ಹೈಪರ್ ವಿಟಾಮಿನೋಸಿಸ್ ಎಂದು ಕರೆಯುತ್ತಾರೆ. 

ವಿಟಮಿನ್ ಗಳ ವಿಲೀನತೆಯ ಆಧಾರದಲ್ಲಿ ಇವುಗಳನ್ನು ಕೊಬ್ಬಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳು ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ನೀರಿನಲ್ಲಿ ಕರಗಬಲ್ಲ " ಎ " ಗುಂಪಿನ ಮತ್ತು " ಸಿ " ಜೀವಸತ್ವಗಳನ್ನು ತುಸು ಅಧಿಕ  ಸೇವಿಸಿದರೂ, ಇವುಗಳು ಶರೀರದಲ್ಲಿ ಸಂಗ್ರಹವಾಗದೆ ಮಲ - ಮೂತ್ರಗಳೊಂದಿಗೆ ವಿಸರ್ಜಿಸಲ್ಪಡುತ್ತವೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ ಎ, ಡಿ , ಇ , ಮತ್ತು ಕೆ" ಜೀವಸತ್ವಗಳನ್ನು ಅತಿಯಾಗಿ ಸೇವಿಸಿದಲ್ಲಿ, ಇವುಗಳು ಶರೀರದಲ್ಲಿ ಸಂಗ್ರಹವಾಗುವುದರೊಂದಿಗೆ ಅನೇಕ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ.

ಉದಾಹರಣೆಗೆ ನಾವು ಸೇವಿಸುವ ಆಹಾರದ ಮೂಲಕ ಸುಮಾರು ೫೦೦ ರಿಂದ ೫೦೦೦ ಮೈಕ್ರೋ ಗ್ರಾಮ್ ನಷ್ಟು ವಿಟಮಿನ್ ಎ ನಮ್ಮ ಶರೀರಕ್ಕೆ ದೊರೆಯುವುದು. ಮಾನವ ಶರೀರದ ದೈನಂದಿನ ಅವಶ್ಯಕತೆ ಕೇವಲ ೭೫೦ ಮೈಕ್ರೋ ಗ್ರಾಮ್ ಆಗಿದ್ದರೂ, ಕೆಲ ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ ೧೫೦೦ ರಿಂದ ೪೫೦೦ ಮೈಕ್ರೋ ಗ್ರಾಮ್ " ಎ " ಜೀವಸತ್ವವನ್ನು ತುಂಬಿರುತ್ತಾರೆ!. ಅನಾವಶ್ಯಕವಾಗಿ ಇಂತಹ ಉತ್ಪನ್ನಗಳನ್ನು ಸೇವಿಸಿದಲ್ಲಿ ಇದು ಶರೀರದಲ್ಲಿ ಸಂಗ್ರಹಿಸಲ್ಪಡುವುದು. ತತ್ಪರಿಣಾಮವಾಗಿ ಮೂಳೆಗಳ ದೌರ್ಬಲ್ಯ,ವಾಕರಿಕೆ,ತಲೆನೋವು,ಕೈಕಾಲುಗಳ ಚಲನವಲನಗಳು ಕುಂಠಿತವಾಗುವುದು, ಕೂದಲು ಉದುರುವುದು,ಚರ್ಮದ ಮೇಲ್ಪದರ ಏಳುವುದು, ದೃಷ್ಟಿಮಾಂದ್ಯ, ನೋಡುವ ವಸ್ತು - ದೃಶ್ಯಗಳು ಎರಡಾಗಿ ಕಾಣುವುದು,ನಾಸಿಕಾ ರಕ್ತಸ್ರಾವಗಳಂತಹ ತೊಂದರೆಗಳು ಉದ್ಭವಿಸುತ್ತವೆ. 

ಅದೇ ರೀತಿ ವಿಟಮಿನ್ "  ಡಿ  " ಯ ದೈನಂದಿನ ಅವಶ್ಯಕತೆಯು ೧೦೦ ಐ. ಯು ಗಳಾಗಿದ್ದು, ಇದು ಸೂರ್ಯನ ಕಿರಣಗಳಿಂದ ಸುಲಭವಾಗಿ ಲಭಿಸುತ್ತದೆ. ಈ ಜೀವಸತ್ವದ ದೀರ್ಘಕಾಲೀನ ಅತಿಸೇವನೆಯಿಂದಾಗಿ, ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಹೀರಲ್ಪಡುವ ಪ್ರಕ್ರಿಯೆಯು ಅಧಿಕವಾಗುವುದರೊಂದಿಗೆ,ಎಲುಬುಗಳಲ್ಲಿನ ಕ್ಯಾಲ್ಸಿಯಂ ರಕ್ತಕ್ಕೆ ಬಿಡುಗಡೆಯಾಗುವುದು. ಇದರಿಂದಾಗಿ "ಹೈಪರ್ ಕ್ಯಾಲ್ಸೀಮಿಯ" ಎನ್ನುವ ಸ್ಥಿತಿ ಉದ್ಭವಿಸುವುದು. ಇದರೊಂದಿಗೆ ಹೃದಯ, ಶ್ವಾಸಕೋಶ,ಮೂತ್ರಪಿಂಡಗಳು ಪೆಡಸಾಗುವುದು, ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುವುದು,ಮೂತ್ರಪಿಂಡಗಳ ವೈಫಲ್ಯ, ಎಲುಬುಗಳ ಅಸಹಜ ಬೆಳವಣಿಗೆ ಮತ್ತು ಇವುಗಳಲ್ಲಿನ ಖನಿಜಾಂಶಗಳು ನಶಿಸುವುದರಿಂದ ಮೂಳೆ ಮುರಿತದಂತಹ ಸಮಸ್ಯೆಗಳು ಬಾಧಿಸುತ್ತವೆ. 

ವಿಟಮಿನ್ " ಇ " ಇದರ ದೈನಂದಿನ ಅವಶ್ಯಕತೆಯು ಕೇವಲ ೧೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆಯಿಂದ ದೃಷ್ಟಿ ಮಸುಕಾಗುವುದು, ಕಣ್ಣು ಕತ್ತಲಾವರಿಸುವುದು,ಚರ್ಮದ ಉರಿಯೂತ,ಮೊಡವೆಗಳು ಮೂಡುವುದು,ರಕ್ತನಾಳಗಳು ವಿಕಸಿತಗೊಳ್ಳುವುದು,ಜೀರ್ಣಾಂಗಗಳ ತೊಂದರೆಗಳು,ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚುವುದರೊಂದಿಗೆ, ರಕ್ತ ಹೆಪ್ಪುಗಟ್ಟುವ  ಅವಧಿಯೂ ಹೆಚ್ಚುವುದು. 

ಇನ್ನು " ಬಿ " ಗುಂಪಿಗೆ ಸೇರಿದ ಥಯಾಮಿನ್ ನ ಅತಿಸೇವನೆಯಿಂದ ತಲೆನೋವು,ನಿದ್ರಾಹೀನತೆ,ತೀವ್ರ ಎದೆಬಡಿತ ಹಾಗೂ ಅನಾಫೈಲಾಕ್ಸಿಸ್ (ತೀವ್ರ ಸ್ವರೂಪದ ಮಾರಕವೆನಿಸಬಲ್ಲ ಅಲರ್ಜಿ) ನಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. "ನಯಾಸಿನ್"ನ ಅತಿಸೇವನೆಯಿಂದ ಸೂಕ್ಷ್ಮ ರಕ್ತನಾಳಗಳು ವಿಕಸಿತವಾಗುವುದು, ಮುಖ ಕೆಂಪಾಗುವುದು,ಜೀರ್ಣಾಂಗಗಳ ತೊಂದರೆಗಳು,ತುರಿಕೆ,ರಕ್ತದಲ್ಲಿನ ಸಕ್ಕರೆ ಮತ್ತು ಯೂರಿಕ್ ಆಸಿಡ್ ನ ಪ್ರಮಾಣಗಳು ಹೆಚ್ಚುವುದರೊಂದಿಗೆ, ಎಲ್. ಡಿ . ಎಲ್ ಮತ್ತು ಕೊಲೆಸ್ಟರಾಲ್ ಗಳ ಪ್ರಮಾಣ ಇಳಿಯುವುದು. ಇದೇ ರೀತಿ "ಪೈರಿಡಾಕ್ಸಿನ್ " ನ ದುಷ್ಪರಿಣಾಮಗಳಲ್ಲಿ, ಮೆದುಳಿನ ನ್ಯೂರಾನ್ ಗಳಿಗೆ ಹಾನಿ,ಕೈಕಾಲುಗಳಲ್ಲಿ ಸಂವೇದನೆಗಳ ಅಭಾವ,ನಡೆದಾಡಲು ಅಸಾಧ್ಯವೆನಿಸುವುದು ಮತ್ತು ಗರ್ಭಿಣಿಯರು ಇದನ್ನು ಅತಿಯಾಗಿ ಸೇವಿಸುವುದರಿಂದ ನವಜಾತ ಶಿಶುಗಳಲ್ಲಿ ಅಪಸ್ಮಾರ ಉದ್ಭವಿಸುವ ಸಾಧ್ಯತೆಗಳಿವೆ. 

ವಿಟಮಿನ್ "ಸಿ "ಯ ದೈನಂದಿನ ಅವಶ್ಯಕತೆಯು ೩೦ ರಿಂದ ೪೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆ ಹೊಟ್ಟೆಯುಬ್ಬರ, ಭೇದಿ,ಜೀರ್ಣಾಂಗಗಳ ತೊಂದರೆಗಳಿಗೆ ಕಾರಣವೆನಿಸಬಹುದು. 

ಸ್ವಾಮೀ, ಇವೆಲ್ಲವೂ ಕೇವಲ ಸ್ಯಾಂಪಲ್ ಗಳು ಮಾತ್ರ!. ಜನಸಾಮಾನ್ಯರು ಔಷದ ಅಂಗಡಿಗಳಿಂದ ಖರೀದಿಸಿ ಸೇವಿಸುವ ಬಿ ಕಾಂಪ್ಲೆಕ್ಸ್, ಪ್ರೋಟೀನ್,ಖನಿಜಗಳು,ಲವಣಗಳು,ರಕ್ತ - ಶಕ್ತಿ ವರ್ಧಕ ಟಾನಿಕ್ ಗಳ "ಕಾಕ್ ಟೈಲ್ " ಗಳನ್ನು ಅತಿಯಾಗಿ ಸೇವಿಸುವುದರಿಂದ ಉದ್ಭವಿಸಬಲ್ಲ ಆರೋಗ್ಯದ  ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗಬಹುದು. ಇವೆಲ್ಲವನ್ನೂ ವಿಶದವಾಗಿ ವಿವರಿಸಲು ಈ ಅಂಕಣದಲ್ಲಿ ಸ್ಥಳಾಭಾವವಿರುವುದರಿಂದ, ಈ ಲೇಖನವನ್ನು ಇಲ್ಲಿಗೆ ಅಂತ್ಯಗೊಳಿಸಬೇಕಾಗಿದೆ. 

ಅಂತಿಮವಾಗಿ ಒಂದೇ ಮಾತಿನಲ್ಲಿ ಹೇಳುವುದಾದಲ್ಲಿ  ನಿಮ್ಮ ಶರೀರದ ಬೇಕು - ಬೇಡಗಳ ಅರಿವಿಲ್ಲದೆ,ನಿರ್ದಿಷ್ಟ ಕಾರಣಗಳೇ ಇಲ್ಲದೆ, ಸ್ವೇಚ್ಛೆಯಿಂದ ನೀವು ಸೇವಿಸುವ ವಿಟಮಿನ್ - ಟಾನಿಕ್ ಗಳು  ಒಳಿತಿಗಿಂತಲೂ ಹೆಚ್ಚು ಕೆಡುಕನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚೆನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

ಉದಯವಾಣಿ ಪತ್ರಿಕೆಯ ೨೪-೦೩-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 



No comments:

Post a Comment