Saturday, August 31, 2013

Cystitis-UTI


  ಮೂತ್ರಾಶಯದ ಉರಿಯೂತ: ಬಾಧಿಸುವುದು ಉರಿಮೂತ್ರ!

ಬಹುತೇಕ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ, ವಿಶೇಷವಾಗಿ ಮಹಿಳೆಯರನ್ನು ಪದೇಪದೇ ಪೀಡಿಸುವ ಆರೋಗ್ಯದ ಸಮಸ್ಯೆಗಳಲ್ಲಿ "ಉರಿಮೂತ್ರ"ವೂ ಒಂದಾಗಿದೆ. ದಕ್ಷಿಣ ಕನ್ನಡದ ಜನರು ಉರಿಶೀತ ಎಂದು ಹೆಸರಿಸಿರುವ ಈ ವ್ಯಾಧಿಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 

ಮಧುಚಂದ್ರದಲ್ಲಿ ಮನಸ್ತಾಪ 

ಮಧುಸೂಧನ- ಮಾಧವಿ ದಂಪತಿಗಳು ತಮ್ಮ ವಿವಾಹ ನೆರವೇರಿದ ಮರುದಿನ ಮಧುಚಂದ್ರಕ್ಕಾಗಿ ಮೈಸೂರಿಗೆ ತೆರಳಿದ್ದರು. ಹದಿನೈದು ದಿನಗಳ ಕಾಲ ಸ್ವೇಚ್ಚೆಯಿಂದ ವಿಹರಿಸುವ ಬಯಕೆಯಿಂದ ಹೊರಟಿದ್ದ ದಂಪತಿಗಳು, "ಸ್ವರ್ಗಕ್ಕೆ ಕಿಚ್ಚು ಹಚ್ಚಲು" ಸನ್ನದ್ಧರಾಗಿದ್ದರು!. 
ಅನೇಕ ನವವಿವಾಹಿತರಂತೆ ಪ್ರಥಮ ರಾತ್ರಿಯಂದು ಕಾಣಿಸಿದ್ದ ಅಲ್ಪ ಸ್ವಲ್ಪ ಲಜ್ಜೆ ಸಂಕೋಚಗಳು ಒಂದೆರಡು ದಿನಗಳಲ್ಲಿ ಮಾಯವಾದಂತೆಯೇ, ನವ ದಂಪತಿಗಳು ದಿನದಲ್ಲಿ ಎರಡು ಮೂರು ಬಾರಿಯಾದರೂ ಅಂಗಸಂಗದ ಸುಖವನ್ನು ಸವಿಯಲಾರಂಭಿಸಿದ್ದರು. ಆದರೆ ವಾರ ಕಳೆಯುವಷ್ಟರಲ್ಲಿ ಮಾಧವಿಯನ್ನು ಕಾಡಲಾರಂಭಿಸಿದ ಪುಟ್ಟ ಸಮಸ್ಯೆಯೊಂದು ಬೆಟ್ಟದೋಪಾದಿಯಲ್ಲಿ ಬೆಳೆದು,ಇವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವೆನಿಸಿತ್ತು. 

ಪ್ರಾರಂಭಿಕ ಹಂತದಲ್ಲಿ ಸಂಭೋಗ ನಡೆಸಿದ ಬಳಿಕ ಮಾಧವಿಯ ಯೋನಿಯಲ್ಲಿ ಒಂದಿಷ್ಟು ನೋವು ಮತ್ತು ಉರಿಯೊಂದಿಗೆ ಉರಿಮೂತ್ರವೂ ಪ್ರಾರಂಭವಾಗಿತ್ತು. ಮುಂದಿನ ನಾಲ್ಕಾರು ದಿನಗಳಲ್ಲಿ ವಿಪರೀತವೆನಿಸಿದ ಈ ಸಮಸ್ಯೆಯಿಂದಾಗಿ, ಸಂಭೋಗಿಸಲು ಭಯಪಡುತ್ತಿದ್ದ ಪತ್ನಿಯ ವರ್ತನೆಗಳಿಂದ, ಮಧುಸೂಧನನಿಗೆ ಅಚ್ಚರಿಯಾಗಿತ್ತು. ಅಂತಿಮವಾಗಿ ಪತ್ನಿಯಿಂದ ವಿಷಯವೇನೆಂದು ಕೇಳಿ ತಿಳಿದುಕೊಂಡ ಆತನಿಗೆ, ಪತ್ನಿಯ ಶೀಲದ ಬಗ್ಗೆ ಸಂದೇಹ ಮೂಡಿದ್ದರಿಂದ ಆತನ ತಲೆಯು ಜೇನುಗೂಡಿನಂತಾಗಿತ್ತು. 

ಪರಊರಿನಲ್ಲಿ ಅನಿರೀಕ್ಷಿತವಾಗಿ ಉದ್ಭವಿಸಿದ ಸಮಸ್ಯೆಗೆ, ಪರಿಚಯವಿಲ್ಲದ ವೈದ್ಯರಿಂದ ಚಿಕಿತ್ಸೆ ಪಡೆಯಲು ಇಚ್ಚಿಸದ ದಂಪತಿಗಳು ತಮ್ಮ ಊರಿಗೆ ಮರಳಿದ್ದರು. ಬಳಿಕ ಕುಟುಂಬ ವೈದ್ಯರ ಸಲಹೆಯಂತೆ ಸ್ತ್ರೀರೋಗ ತಜ್ಞರನ್ನು ಭೇಟಿಯಾದರು. ದಂಪತಿಗಳ ಸಮಸ್ಯೆಯನ್ನು ಆಲಿಸಿದ ಕುಶಾಗ್ರಮತಿ ವೈದ್ಯರಿಗೆ, ಇವರಿಬ್ಬರೂ ಒಬ್ಬರನ್ನೊಬ್ಬರು ಸಂದೇಹಿಸುತ್ತಿರುವುದು ತಿಳಿಯಿತು. 

ಮಾಧವಿಯನ್ನು ಕೂಲಂಕುಶವಾಗಿ ಪರೀಕ್ಷಿಸಿದ ಬಳಿಕ ಪ್ರಯೋಗಾಲಯದಲ್ಲಿ ಕೆಲ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿದ್ದ ವೈದ್ಯರಿಗೆ, ಸಮಸ್ಯೆಯ ಮೂಲವೆನೆಂದು ಪತ್ತೆಯಾಗಿತ್ತು. ತದನಂತರ ದಂಪತಿಗಳನ್ನು ಸಲಹಾ ಕೊಠಡಿಯಲ್ಲಿ ಕುಳ್ಳಿರಿಸಿದ ವೈದ್ಯರು ಮಾಧವಿಯ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಅನೇಕ ಸ್ತ್ರೀಯರಲ್ಲಿ ಅಲ್ಪಾವಧಿಯಲ್ಲಿ ಅತಿಯಾದ ಸಂಭೋಗ ನಡೆಸುವುದರಿಂದ ಉದ್ಭವಿಸಬಲ್ಲ ಈ ಸಮಸ್ಯೆಯು " ಹನಿಮೂನ್ ಸಿಸ್ಟೈಟಿಸ್" ಎಂದು ಕರೆಯಲಾಗುತ್ತಿದ್ದು, ಇದು ಗುಹ್ಯರೋಗವಲ್ಲ ಎಂದಿದ್ದರು. ಜೊತೆಗೆ ದಂಪತಿಗಳು ನಿಗದಿತ ಅವಧಿಗೆ ಸೇವಿಸಬೇಕಾದ ಔಷದಗಳನ್ನು ನೀಡಿ, ಎರಡು ವಾರಗಳ ಕಾಲ "ಹಾಸಿಗೆ ಪಥ್ಯ" ವನ್ನು ಪರಿಪಾಲಿಸಲು ಆದೇಶಿಸಿದ್ದರು. 

ಅನಾವಶ್ಯಕವಾಗಿ ಪರಸ್ಪರರನ್ನು ಸಂದೆಹಿಸಿದ್ದ ದಂಪತಿಗಳು ವೈದ್ಯರ ಸಲಹೆ ಸೂಚನೆಗಳನ್ನು ಅಕ್ಷರಶಃ ಪಾಲಿಸಿದ ಪರಿಣಾಮವಾಗಿ ಸಮಸ್ಯೆಯೂ ಪರಿಹಾರಗೊಂಡಿತು. ಇದರೊಂದಿಗೆ ಇವರಿಬ್ಬರ ಮನಗಳಲ್ಲಿ ಮೂಡಿದ್ದ ಸಂದೇಹ- ಮನಸ್ತಾಪಗಳು ತಾವಾಗಿ ಮಾಯವಾಗಿದ್ದವು. 

ವಿಶೇಷವೆಂದರೆ ಇಂತಹ ಸಮಸ್ಯೆ ಬಾಧಿಸಿದ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯಲು ಹಿಂಜರಿವ ದಂಪತಿಗಳು,ತಮ್ಮ ಸಂಗಾತಿಯಲ್ಲಿದ್ದ ಗುಪ್ತರೋಗವೊಂದು ಇದೀಗ ತಮಗೂ ಹರಡಿದೆಯೆಂದು ಸಂದೇಹಿಸುವುದುಂಟು. ತತ್ಪರಿಣಾಮವಾಗಿ ಇವರಿಬ್ಬರ ನಡುವೆ ತಲೆದೋರುವ ಸಂದೇಹ- ವಿರಸಗಳು ಮಿತಿಮೀರಿದಲ್ಲಿ, ವಿವಾಹ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುವುದು ಅಪರೂಪವೇನಲ್ಲ. 

ಏನಿದು ಸಿಸ್ಟೈಟಿಸ್ ?

ಹಲವಾರು ಕಾರಣಗಳಿಂದ ಉದ್ಬವಿಸಬಲ್ಲ" ಮೂತ್ರಾಶಯದ ಉರಿಯೂತ" ವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸಿಸ್ಟೈಟಿಸ್ ಎಂದು ಕರೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದಕ್ಕೆ ರೋಗಕಾರಕ ಸೂಕ್ಷ್ಮಾಣು ಜೀವಿಗಳ "ಸೋಂಕು" ಕಾರಣವಾಗಿರುತ್ತದೆ. ಇದಲ್ಲದೆ ವಿವಿಧ ವಸ್ತುಗಳ ಹಾಗೂ ರಾಸಾಯನಿಕ ದ್ರವ್ಯಗಳ ಅಲರ್ಜಿ, ಪ್ರತಿರೋಧಕ ಪ್ರತಿಕ್ರಿಯೆ ಮತ್ತು ಶಾರೀರಿಕ ತೊಂದರೆಗಳೂ ಕಾರಣವೆನಿಸುವ ಸಾಧ್ಯತೆಗಳಿವೆ. ಇದಲ್ಲದೆ ಅನೇಕರಲ್ಲಿ ಮೂತ್ರಾಶಯದ ಉರಿಯೂತದೊಂದಿಗೆ ಮೂತ್ರ ವಿಸರ್ಜನಾ ನಾಳದ ಉರಿಯೂತವೂ ಉದ್ಭವಿಸಬಲ್ಲದು. 

ಈ ಸಮಸ್ಯೆಗೆ ಕಾರಣವೆನಿಸುವ ಸೊಂಕುಗಳಲ್ಲಿ ಗೊನೋರಿಯ,ಹಲವಾರು ವಿಧದ ಬ್ಯಾಕ್ಟೀರಿಯ ಮತ್ತು ವೈರಸ್ ಗಳು,ಮೂತ್ರಪಿಂಡ ಹಾಗೂ ಮೂತ್ರನಾಳಗಳಲ್ಲಿ ಇದ್ದಂತಹ ಸೋಂಕುಗಳು,ಮೂತ್ರಾಂಗಗಳಲ್ಲಿ ಉದ್ಭವಿಸಬಲ್ಲ ಕಲ್ಲುಗಳಿಂದ ಉಂಟಾಗಬಲ್ಲ ಅಡೆತಡೆಗಳು, ಟ್ರೈಕೊಮೊನಾಸ್ ವಜೈನಾಲಿಸ್ ಎನ್ನುವ ಪಾರಸೈಟ್, ಕ್ಯಾಂಡಿಡಾ ಅಲ್ಬಿಕಾನ್ಸ್ ಎನ್ನುವ ಫಂಗಸ್ ಮತ್ತು ಆಘಾತಗಳು ಪ್ರಮುಖವಾಗಿವೆ. 

ಪುರುಷರು ಹಾಗೂ ಮಹಿಳೆಯರನ್ನು ಪೀಡಿಸಬಲ್ಲ ಮೂತ್ರಾಶಯದ ಉರಿಯೂತವು ವಿಶೇಷವಾಗಿ ಮಹಿಳೆಯರನ್ನು ಪದೇಪದೇ ಕಾಡುತ್ತದೆ. ಬಹುತೇಕ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿಕನಿಷ್ಠ  ಒಂದುಬಾರಿಯಾದರೂ ಅನುಭವಿಸುವ ಈ ಸಮಸ್ಯೆಗೆ ನಿರ್ದಿಷ್ಟ ಕಾರಣಗಳೂ ಇವೆ. ಮಹಿಳೆಯರಲ್ಲಿ ಮೂತ್ರ ವಿಸರ್ಜನಾಂಗ ಹಾಗೂ ಪ್ರಜನನಾಂಗಗಳ ರಚನೆಯಲ್ಲಿನ ವೈಶಿಷ್ಟ್ಯದಿಂದಾಗಿ, ಇವರಲ್ಲಿ ಬಾಹ್ಯ ಸೋಂಕುಗಳು ಸುಲಭದಲ್ಲೇ ಒಳಗೆ ಪ್ರವೇಶಗಳಿಸಲು ಅವಕಾಶ ನೀಡುತ್ತದೆ. ಜೊತೆಗೆ ಮಹಿಳೆಯರ ಮೂತ್ರ ವಿಸರ್ಜನಾ ನಾಳವು ಕೇವಲ ನಾಲ್ಕು ಸೆಂಟಿಮೀಟರ್ ಉದ್ದವಿರುವುದರಿಂದ, ರೋಗಾಣುಗಳು ಮೂತ್ರಾಶಯವನ್ನು ಪ್ರವೇಶಿಸಲು ಸಾಕಷ್ಟು ದೂರ ಚಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದೇ ರೀತಿಯಲ್ಲಿ ಮೂತ್ರ ವಿಸರ್ಜನಾ ನಾಲವು ಚರ್ಮಕ್ಕೆ ಹೊಂದಿಕೊಂಡಿದ್ದು, ಈ ಭಾಗವು ರೋಗಾಣುಗಳ ತಾಣವಾಗಿರುತ್ತದೆ. ಇದು ಸಾಲದೆನ್ನುವಂತೆ ಸ್ತ್ರೀಯರ ಶರೀರದಲ್ಲಿ ಯೋನಿ ಹಾಗೂ ಗುದದ್ವಾರಗಳು ಅತ್ಯಂತ ಸಮೇಪವಿರುವುದರಿಂದಾಗಿ, ಇವೆರಡೂ ದ್ವಾರಗಳಲ್ಲಿ ಇರಬಹುದಾದ ರೋಗಾಣುಗಳು ಸುಲಭವಾಗಿ ಶರೀರದ ಒಳಭಾಗವನ್ನು ಪ್ರವೇಶಿಸಿ ಕಾಯಿಲೆಗಳಿಗೆ ಕಾರಣವೆನಿಸುತ್ತವೆ. ವಿಶೇಷವೆಂದರೆ ಚರ್ಮದ ಹೊರಮೈಯಲ್ಲಿರುವ ರೋಗಾಣುಗಳು ಸಾಮಾನ್ಯವಾಗಿ ಯಾವುದೇ ತೊಂದರೆಗಳಿಗೆ ಕಾರಣವೆನಿಸದಿದ್ದರೂ, ಮೂತ್ರ ವಿಸರ್ಜನಾ ನಾಳ ಅಥವಾ ಮೂತ್ರಾಶಯದಲ್ಲಿ ಪ್ರವೇಶಗಳಿಸಿದ ಬಳಿಕ ರೋಗಕಾರಕಗಳಾಗಿ ಪರಿಣಮಿಸುವ ಸಾಧ್ಯತೆಗಳಿವೆ. 

ಆದರೆ ಪುರುಷರ ಮೂತ್ರ ವಿಸರ್ಜನಾ ನಾಳವು ಸುಮಾರು ೨೦ ಸೆಂಟಿಮೀಟರ್ ಉದ್ದವಿದ್ದು, ಶಿಶ್ನದ ಮುಂದೊಗಲು ಮಹಿಳೆಯರ ಯೋನಿದ್ವಾರದಲ್ಲಿರುವಷ್ಟು ರೋಗಾಣುಗಳಿಗೆ ಆಶ್ರಯ ನೀಡುವುದಿಲ್ಲ. ಪುರುಷರಲ್ಲಿ ಮೂತ್ರಕೋಶದ ಹಾಗೂ ಮೂತ್ರ ವಿಸರ್ಜನಾ ನಾಳದ ಉರಿಯೂತಗಳು ಅಪರೂಪವೆನಿಸಲು ಇದೊಂದು ಪ್ರಮುಖ ಕಾರಣವೂ ಹೌದು. 

ವಿಶೇಷವಾಗಿ ವಿವಾಹಿತ ಮಹಿಳೆಯರಲ್ಲಿ ಹಾಗೂ ಅವಿವಾಹಿತರಾಗಿದ್ದೂ ಪರಪುರುಷರೊಂದಿಗೆ ದೈಹಿಕ ಸಂಬಂಧ ಹೊಂದಿರುವ ಮಹಿಳೆಯರಲ್ಲಿ ಈ ಸಮಸ್ಯೆ ತುಸು ಅಧಿಕವೆನಿಸಲು, ಇಂತಹ ಶಾರೀರಿಕ ಸಂಬಂಧಗಳೇ ಕಾರಣವೆನಿಸುತ್ತದೆ. ಏಕೆಂದರೆ ಸ್ತ್ರೀಯರ ಶರೀರದಲ್ಲಿ ಮೂತ್ರ ವಿಸರ್ಜನಾ ನಾಳ ಹಾಗೂ ಮೂತ್ರಾಶಯದ ತಳಭಾಗಗಳು ಯೋನಿಯ ಮುಂಭಾಗದ ಗೋಡೆಗೆ ಅತಿ ಸನಿಹದಲ್ಲಿದ್ದು,ಸಂಭೋಗದ ಸಂದರ್ಭದಲ್ಲಿ ಘರ್ಷಣೆಯಿಂದಾಗಿ ಆಘಾತಗೊಳ್ಳುವ ಸಾಧ್ಯತೆಗಳಿವೆ. ತಜ್ಞವೈದ್ಯರ ಅಭಿಪ್ರಾಯದಂತೆ ಮೂತ್ರ ವಿಸರ್ಜನಾ ನಾಳದ ಉರಿಯೂತವನ್ನು ಹುಟ್ಟುಹಾಕಲು, ಘರ್ಷಣೆಯಿಂದ ಉಂಟಾಗುವ ಆಘಾತವೇ ಸಾಕಾಗುವುದು. ಅಂತೆಯೇ ಸಂಭೋಗದ ಸಮಯದಲ್ಲಿ ಕೆಲ ರೋಗಾಣುಗಳು ಮೂತ್ರ ವಿಸರ್ಜನಾ ನಾಳ ಮತ್ತು ಮೂತ್ರಕೋಶವನ್ನು ಪ್ರವೇಶಿಸಬಹುದಾದರೂ, ನಮ್ಮ ದೇಹದ ಸ್ವಾಭಾವಿಕ ರೋಗಪ್ರತಿರೋಧಕ ಶಕ್ತಿಯು ಇವುಗಳಿಂದ ಉದ್ಭವಿಸಬಲ್ಲ ಸೋಂಕನ್ನು ತಡೆಗಟ್ಟಲು ಯಶಸ್ವಿಯಾಗುವುದು. ಆದರೆ ಆಘಾತದ ತೀವ್ರತೆಯಿಂದಾಗಿ ಸ್ತ್ರೀಯರ ಯೋನಿಯಲ್ಲಿನ ಟಿಶ್ಯೂಗಳಿಗೆ ಹಾನಿಯಾದಲ್ಲಿ,ಸೋಂಕು ಉದ್ಭವಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇದೇ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ಅತಿಯಾಗಿ ಸಂಭೋಗ ಸುಖವನ್ನು ಸವಿದಿದ್ದ ಮಾಧವಿಗೆ, ಸುಲಭದಲ್ಲೇ ಸೋಂಕು ಉದ್ಭವಿಸಿ ಕ್ಷಿಪ್ರಗತಿಯಲ್ಲಿ ಉಲ್ಬಣಿಸಿತ್ತು!. 

ಕೆಲ ಸ್ತ್ರೀಯರಲ್ಲಿ ಅಪರೂಪದಲ್ಲೊಮ್ಮೆ ಸಂಭೋಗ ನಡೆಸಿದರೂ, ಪ್ರತಿಬಾರಿ ಉದ್ಭವಿಸುವ ಈ ಸಮಸ್ಯೆಯಿಂದಾಗಿ ಇಂತಹ ಮಹಿಳೆಯರಿಗೆ ಸಂಭೋಗದ ಬಗ್ಗೆ ಅತೀವ ಹೆದರಿಕೆಗೆ ಕಾರಣವೆನಿಸುತ್ತದೆ. ತತ್ಪರಿಣಾಮವಾಗಿ ಸಾಕಷ್ಟು ಉದ್ರೇಕಿತರಾಗದ ಸ್ತ್ರೀಯರ ಯೋನಿಯಲ್ಲಿ ಸ್ವಾಭಾವಿಕ ಸ್ರಾವಗಳ ಕೊರತೆಯಿಂದಾಗಿ, ಸಂಭೋಗದ ಸಂದರ್ಭದಲ್ಲಿ ವಿಪರೀತ ನೋವು ಮತ್ತು ಆಘಾತಗಳಿಗೆ ಕಾರಣವೆನಿಸುತ್ತದೆ. ಮಾತ್ರವಲ್ಲ, ಇದೇ ಕಾರಣದಿಂದಾಗಿ ಉದ್ಭವಿಸುವ ಸಮಸ್ಯೆಗಳಿಂದಾಗಿ ದಂಪತಿಗಳ ನಡುವೆ ಅನಾವಶ್ಯಕ ವಿರಸಕ್ಕೆ ಮೂಲವೆನಿಸುತ್ತದೆ!. 

ರೋಗ ಲಕ್ಷಣಗಳು 

ಮೂತ್ರ ವಿಸರ್ಜಿಸುವಾಗ ಹಾಗೂ ತದನಂತರ ಅತಿಯಾದ ಉರಿ, ಮೂತ್ರ ವಿಸರ್ಜಿಸಿದ ಕೊಂಚ ಹೊತ್ತಿನಲ್ಲೇ ಮತ್ತೆ ಮೂತ್ರ ವಿಸರ್ಜಿಸಬೇಕೆನ್ನುವ ಸಂವೇದನೆ ಮತ್ತು  ಅಲ್ಪ ಪ್ರಮಾಣದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಈ ವ್ಯಾಧಿಯ ಪ್ರಮುಖ ಲಕ್ಷಣಗಳಾಗಿವೆ. ವ್ಯಾಧಿಯ ಬಾಧೆ ಅತಿಯಾದ ಸಂದರ್ಭದಲ್ಲಿ ಕಿಬ್ಬೊಟ್ಟೆಯಲ್ಲಿ ಮೂತ್ರ ವಿಸರ್ಜನೆಗೆ ಮುನ್ನ, ವಿಸರ್ಜಿಸುವಾಗ ಮತ್ತು ವಿಸರ್ಜಿಸಿದ ಬಳಿಕ ವಿಪರೀತ ನೋವು ಹಾಗೂ ಕೆಲವರಲ್ಲಿ ಅತಿಮೂತ್ರ ಅಥವಾ ಅತ್ಯಲ್ಪ ಮೂತ್ರ ವಿಸರ್ಜನೆ,ಚಳಿಜ್ವರ,ದುರ್ವಾಸನಾಯುಕ್ತ  ಅಥವಾ ಕಲ್ಮಶಯುಕ್ತ ನೀರಿನಂತಹ ಅಥವಾ ರಕ್ತಮಿಶ್ರಿತ ಮೂತ್ರ ವಿಸರ್ಜನೆ ಕಂಡುಬರುತ್ತದೆ. ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂತ್ರ ವಿಸರ್ಜನೆಯ ಸಂವೇದನೆ ಪ್ರತ್ಯಕ್ಷವಾದೊಡನೆ ಇದನ್ನು ನಿಯಂತ್ರಿಸಲು ಅಸಾಧ್ಯವೆನಿಸುವುದರಿಂದ ಅನಿಯಂತ್ರಿತವಾಗಿ ಮೂತ್ರ ವಿಸರ್ಜಿಸಲ್ಪಡುತ್ತದೆ. 

ಚಿಕಿತ್ಸೆ 

ಅವಶ್ಯಕ  ಪರೀಕ್ಷೆಗಳ ಮೂಲಕ ಮೂತ್ರಾಶಯದ ಉರಿಯೂತದ ಸಮಸ್ಯೆಗೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚಿದ ಬಳಿಕ ವೈದ್ಯರು ಇದಕ್ಕೆ ಅನುಗುಣವಾಗಿ ಸೂಚಿಸುವ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಪಡೆದುಕೊಳ್ಳುವ ಮೂಲಕ, ಈ ಸಮಸ್ಯೆಯನ್ನು ಪರಿಹರಿಸುವುದು ಸುಲಭಸಾಧ್ಯವೂ ಹೌದು. 

ಔಷದ ಸೇವನೆಯೊಂದಿಗೆ ದಿನನಿತ್ಯ ಕನಿಷ್ಠ ಮೂರು- ನಾಲ್ಕು ಲೀಟರ್ ನೀರನ್ನು ಕುಡಿಯುವುದರಿಂದ, ಈ ಸಮಸ್ಯೆಯು ಕ್ಷಿಪ್ರಗತಿಯಲ್ಲಿ ಬಗೆಹರಿಯುವುದು. ಕೆಲ ವಿಧದ ಸೋಪುಗಳು,ಟಾಲ್ಕಂ ಪೌಡರ್,ಸುವಾಸನಾ ದ್ರವ್ಯಗಳು, ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್- ಟ್ಯಾಮ್ಪನ್ ಗಳು ಈ ಸಮಸ್ಯೆಗೆ ಕಾರಣವೆನಿಸುವುದರಿಂದ, ಇವುಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು. 

ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುತ್ತಿರುವವರು "ಯುರಾಲಜಿಸ್ಟ್" ರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಬಾಧಿಸುವ ಯಾವುದೇ ಆರೋಗ್ಯದ ಸಮಸ್ಯೆಗಳ ಬಗ್ಗೆ ಅಯಾಚಿತ- ಉಚಿತ ಸಲಹೆಗಳನ್ನು ನೀಡುವ ಬಂಧುಮಿತ್ರರ ಬಳಿ ಚರ್ಚಿಸದಿರಿ. ಉರಿಮೂತ್ರ ಬಾಧಿಸಿದೊಡನೆ "ಉಷ್ಣ" ವಾಗಿದೆಯೆಂದು ನೀವಾಗಿ ನಿರ್ಧರಿಸಿ, ನಾಲ್ಕಾರು ಎಳನೀರುಗಳನ್ನು ಕುಡಿಯುವುದರಿಂದ ಈ ಪೀಡೆ ಪರಿಹಾರವಾಗದು. ಈ ಸ್ವಯಂ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆ ಕೊಂಚಮಟ್ಟಿಗೆ ಶಮನಗೊಂಡರೂ, ಸೋಂಕಿನಿಂದ ಉದ್ಭವಿಸಿರುವುದಾದಲ್ಲಿ ಇದು ವ್ಯರ್ಥವೆನಿಸುವುದು. ನಾಲ್ಕಾರು ದಿನಗಳ ಕಾಲ ದಿನದಲ್ಲಿ ಹಲವಾರು ಎಳನೀರುಗಳಿಗಾಗಿ ನೀವು ವ್ಯಯಿಸುವ ಹಣಕ್ಕಿಂತ, ಇದೇ ಅವಧಿಯಲ್ಲಿ ವೈದ್ಯರು ನೀಡುವ ಚಿಕಿತ್ಸೆಯ ವೆಚ್ಚ ನಿಶ್ಚಿತವಾಗಿ ಕಡಿಮೆಯೆನಿಸುವುದು. ಇದೇ ಕಾರಣದಿಂದಾಗಿ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಅಥವಾ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಸೂಕ್ತ ಸಮಯದಲ್ಲಿ ಪಡೆದುಕೊಂಡಲ್ಲಿ, ನಿಮ್ಮ ಸಮಸ್ಯೆ ಉಲ್ಬಣಿಸುವುದನ್ನು ತಡೆಗಟ್ಟುವುದರೊಂದಿಗೆ ಕ್ಷಿಪ್ರ ಪರಿಹಾರವೂ ಲಭಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ವ್ಯಾಧಿ ಬಾಧಿಸಿರುವ ಅವಧಿ ಮತ್ತು ಇದರ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆಯ ಅವಧಿ ಹೆಚ್ಚುವುದರಿಂದ, ಅನಾವಶ್ಯಕ ವಿಳಂಬದಿಂದಾಗಿ ಸುದೀರ್ಘಕಾಲ ಔಷದ ಸೇವನೆ ಅನಿವಾರ್ಯವೆನಿಸೀತು. 

ವಿವಾಹಿತರಲ್ಲಿ ಅದರಲ್ಲೂ ವಿಶೇಷವಾಗಿ ನವವಿವಾಹಿತರಲ್ಲಿ ಇಂತಹ ಸಮಸ್ಯೆಗಳು ತಲೆದೋರಿದಾಗ, ಅಕಾರಣವಾಗಿ ಸಂಗಾತಿಯನ್ನು ಸಂದೆಹಿಸಿ ಸಂಸಾರದಲ್ಲಿ ವಿರಸಕ್ಕೆ ಅವಕಾಶವನ್ನು ಕಲ್ಪಿಸದಿರಿ. ಜೊತೆಗೆ ಈ ಬಗ್ಗೆ ನಿಮ್ಮ ಪರಮಾಪ್ತ ಮಿತ್ರರ ಬಳಿ ಚರ್ಚಿಸಿ,ಅಯಾಚಿತ ಸಲಹೆಯನ್ನು ಪಡೆದು ಕೊರಗದಿರಿ. ಇದಕ್ಕೆ ಬದಲಾಗಿ ನಿಮ್ಮ ಪರಿಚಿತ ವೈದ್ಯರ ಬಳಿ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮ  ಬಂಧುಮಿತ್ರರು ಇದೇ ರೀತಿಯ ಸಮಸ್ಯೆಗಳ ಬಗ್ಗೆ ನಿಮ್ಮಲ್ಲಿ ಸಲಹೆಯನ್ನು ಅಪೇಕ್ಷಿಸಿದಲ್ಲಿ, ಅವರ ಕುಟುಂಬ ವೈದ್ಯರ ಸಲಹೆ ಪಡೆಯುವಂತೆ ಸೂಚಿಸಲು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೭-೧೦-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment