Friday, August 30, 2013

Potato- Healthy food



                                      ಆರೋಗ್ಯದಾಯಕ ಆಲೂಗಡ್ಡೆ!

ಕಳೆದ ಒಂದೆರಡು ದಶಕಗಳಿಂದ ಅಬಾಲವೃದ್ಧರನ್ನು ಬಾಧಿಸುತ್ತಿರುವ "ಗ್ಯಾಸ್ ಟ್ರಬಲ್ " ಎನ್ನುವ ವಿಶಿಷ್ಟ ಸಮಸ್ಯೆಗೆ ಕಾರಣವೆನಿಸುವ ಆಹಾರ ಪದಾರ್ಥಗಳಲ್ಲಿ, ಬಹುತೇಕ ಜನರ ಅಭಿಪ್ರಾಯದಂತೆ ಆಲೂಗಡ್ಡೆಗೆ ಅಗ್ರಸ್ಥಾನ ಸಲ್ಲುತ್ತದೆ. ಆದರೆ ಈ ವಿಚಾರವನ್ನು ಸಮರ್ಥಿಸುವ ವಿದ್ಯಾವಂತರಿಗೂ, ಆರೋಗ್ಯದಾಯಕ ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
----------                   ------------------                                   ------------------                      -------------------              ----------------

ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ಬೆಳೆಸಿ ಬಳಸುವ ತರಕಾರಿಗಳಲ್ಲಿ ಆಲೂಗಡ್ಡೆ ಅರ್ಥಾತ್ ಬಟಾಟೆಯು ಮಹತ್ವಪೂರ್ಣ ಸ್ಥಾನವನ್ನು ಗಳಿಸಿದೆ. ವೈವಿಧ್ಯಮಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಎಲ್ಲ ಋತುಗಳಲ್ಲೂ ಸುಲಭವಾಗಿ ಲಭಿಸುವ ಮತ್ತು ಅಸಂಖ್ಯ ಸ್ವಾದಿಷ್ಟ ಖಾದ್ಯಗಳಲ್ಲಿ ಬಳಸಲ್ಪಡುವ ಬಟಾಟೆಯ ಬಗ್ಗೆ, ಭಾರತೀಯರಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಟಾಟೆಯನ್ನು ಭಕ್ಷಿಸುವುದರಿಂದ ವಾಯುಬಾಧೆ ಉರುಫ್ ಗ್ಯಾಸ್ ಟ್ರಬಲ್ ಬಾಧಿಸುವುದೆಂದು ನಂಬಿರುವುದು ಇವುಗಳಲ್ಲಿ ಪ್ರಮುಖವಾಗಿದೆ!. 

ಪಟಾಟ ಯಾನೆ ಪೊಟೆಟೊ 

ಮೂಲತಃ ಸ್ಪಾನಿಶ್ ಭಾಷೆಯಲ್ಲಿ "ಪಟಾಟ" ಎನ್ನುವ ನಾಮಧೇಯದ ಬಟಾಟೆಯು, ಆಂಗ್ಲರ ಬಾಯಲ್ಲಿ" ಪೊಟೆಟೊ " ಎನಿಸಿಕೊಂಡ ಬಳಿಕ, ಕನ್ನಡಿಗರ ನಾಡಿನಲ್ಲಿ ಬಟಾಟೆ ಎಂದು ಪರಿವರ್ತನೆಗೊಂಡಿತ್ತು. ಉತ್ತರ ಭಾರತದಲ್ಲಿ "ಆಲೂ" ಎಂದುಕರೆಯಲ್ಪಡುವ ಬಟಾಟೆಯು, ಕನ್ನಡಿಗರ ಆಡುಭಾಷೆಯಲ್ಲಿ ಆಲೂಗಡ್ಡೆ ಎಂದೂ ಕರೆಯಲ್ಪಡುತ್ತದೆ. ಸಸ್ಯಶಾಸ್ತ್ರದಲ್ಲಿ "ಸೊಲೆನಮ್ ಟ್ಯೂಬರೋಸಂ"ಎಂದು ಹೆಸರಿಸಲ್ಪಟ್ಟಿರುವ ಈ ಗಡ್ದೆಯು, ಸತ್ವಭರಿತ ಪರಿಪೂರ್ಣ ಆಹಾರವೂ ಹೌದು. ಭಾರತೀಯರ ದೈನಂದಿನ ಆಹಾರದಲ್ಲಿ ಅಕ್ಕಿ,ಗೋಧಿ,ರಾಗಿ ಹಾಗೂ ಜೋಳಗಳನ್ನು ಬಳಸುವಂತೆಯೇ, ಫ್ರಾನ್ಸ್, ಅಯರ್ಲ್ಯಾಂಡ್, ಇಂಗ್ಲಂಡ್ ಮತ್ತಿತರ ದೇಶಗಳ ಜನರು ದಿನನಿತ್ಯ ಬಟಾಟೆಯನ್ನು ಸೇವಿಸುತ್ತಾರೆ!. 

ಪೂರ್ವೇತಿಹಾಸ 

ಪೋರ್ಚುಗೀಸರೊಂದಿಗೆ ಭಾರತದ ನೆಲದಲ್ಲಿ ಕಾಲಿರಿಸಿ ಬೇರೂರಿದ ಬಟಾಟೆಯನ್ನು, ದೇಶದ ವಿವಿಧ ಪ್ರಾಂತ್ಯಗಳಿಗೆ ಪರಿಚಯಿಸಿದ ಖ್ಯಾತಿ ಈಸ್ಟ್ ಇಂಡಿಯಾ ಕಂಪೆನಿಗೆ ಸಲ್ಲುತ್ತದೆ. ಅತ್ಯಲ್ಪ ಸಮಯದಲ್ಲೇ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಬಟಾಟೆಯನ್ನು," ಉಪವಾಸ ವೃತ" ವನ್ನು ಪರಿಪಾಲಿಸುವ ದಿನಗಳಲ್ಲೂ ಸೇವಿಸಬಹುದು ಎನ್ನುವ ನಿರ್ಣಯವನ್ನು ಧಾರ್ಮಿಕ ನಾಯಕರ ಸಮ್ಮೇಳನವೊಂದರಲ್ಲಿ ಅನೇಕ ವರ್ಷಗಳ ಹಿಂದೆಯೇ ಅಂಗೀಕರಿಸಲಾಗಿತ್ತು!. 

ದಕ್ಷಿಣ ಅಮೇರಿಕ ಆಲೂಗಡ್ಡೆಯ ತವರೂರು ಎನ್ನುವ ಪ್ರತೀತಿ ಇದ್ದರೂ,ಸಸ್ಯಶಾಸ್ತ್ರ ತಜ್ಞರ ಅಭಿಪ್ರಾಯದಂತೆ ಚಿಲಿ,ಪೆರು ಮತ್ತು ಬೊಲಿವಿಯ ದೇಶಗಳಲ್ಲಿ ಬೆಳೆಯುತ್ತಿದ್ದ ಸಸ್ಯದ ತಳಿಯೊಂದು ಇದರ ಮೂಲವಾಗಿದೆ. ಸುಮಾರು ೪೦೦ ವರ್ಷಗಳ ಹಿಂದೆಯೇ ಈ ದೇಶಗಳಲ್ಲಿನ ಇಂಕಾ ಇಂಡಿಯನ್ ಜನರು ಬಟಾಟೆಯನ್ನು ಬೆಳೆಸುತ್ತಿದ್ದರು. ಸ್ಪಾನಿಶ್ ದೇಶದ ಅನ್ವೇಷಕರು ದಕ್ಷಿಣ ಅಮೇರಿಕಾದಲ್ಲಿ ಬಟಾಟೆಯನ್ನು ಸವಿದ ಮೊದಲ ಯುರೋಪಿಯನರೂ ಹೌದು. ಈ ಅನ್ವೇಷಕರಿಂದಾಗಿ ೧೫೦೦ ರ ಮಧ್ಯಭಾಗದಲ್ಲಿ ಯುರೋಪಿನಲ್ಲಿ ಬಟಾಟೆಯು ಜನಪ್ರಿಯವೆನಿಸಿತು. ಇದೇ ಸಮಯದಲ್ಲಿ ಬ್ರಿಟಿಷರು ಇಂಗ್ಲೆಂಡಿಗೆ ಕೊಂಡೊಯ್ದ "ಪೊಟೆಟೊ " , ಅಲ್ಲಿಂದ ಸ್ಕಾಟ್ಲ್ಯಾಂಡ್  ಮತ್ತು ಐರ್ಲ್ಯಾಂಡ್ ಗಳಿಗೂ ತಲುಪಿತು. ಈ ರೀತಿಯಲ್ಲಿ ದೇಶ ವಿದೇಶಗಳಿಗೆ ಪರಿಚಯಿಸಲ್ಪಟ್ಟ ಆಲೂಗಡ್ದೆಯು, ಐರ್ಲ್ಯಾಂಡ್ ನಲ್ಲಿ ಹುಲುಸಾಗಿ ಬೆಳೆಯಲಾರಂಭಿಸಿದ ಪರಿಣಾಮವಾಗಿ ಅಲ್ಲಿನ ಪ್ರಮುಖ ಬೆಳೆಯಾಗಿ ಸುಪ್ರಸಿದ್ಧವಾಯಿತು. ಜೊತೆಗೆ ಈ ದೇಶದ ಜನರ ದೈನಂದಿನ ಆಹಾರದ ಪ್ರಧಾನ ಹಾಗೂ ಅವಿಭಾಜ್ಯ ಅಂಗವೆನಿಸಿದ್ದ ಬಟಾಟೆಯು, ಇದೇ ಕಾರಣದಿಂದಾಗಿ "ಐರಿಶ್ ಪೊಟೆಟೊ" ಎಂದೇ ಕರೆಯಲ್ಪಡುತ್ತಿತ್ತು. ಇಷ್ಟು ಮಾತ್ರವಲ್ಲ, ಈ ಅದ್ಭುತ ಗಡ್ಡೆಯಲ್ಲಿ " ಕಾಮೋದ್ದೀಪಕ ಗುಣ" ಇರುವುದೆಂದು ಧೃಢವಾಗಿ ನಂಬಿದ್ದ ಅಲ್ಲಿನ ಜನತೆ, ಆಲೂಗಡ್ಡೆಯನ್ನು "ಲವ್ ಏಪ್ಪಲ್ " ಎಂದು ಕರೆಯುತ್ತಿದ್ದರು!. 

ಪ್ರಪ್ರಥಮವಾಗಿ ಯೂರೋಪಿನ ಮಾರುಕಟ್ಟೆಗಳಿಗೆ ಬಂದಿದ್ದ ಬಟಾಟೆಗಳು ತಮ್ಮ ತೂಕಕ್ಕಿಂತ ಅಧಿಕ ಪ್ರಮಾಣದ ಚಿನ್ನದಷ್ಟು ಬೆಳೆಬಾಳುತ್ತಿದ್ದವು. ಇದೇ ಕಾರಣದಿಂದಾಗಿ ಜನಸಾಮಾನ್ಯರ ಕೈಗೆಟುಕದ ಬಟಾಟೆಯು, ಇಂಗ್ಲೆಂಡ್ ನ ರಾಜಮನೆತನದ ಮತ್ತು ಗಣ್ಯವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತಿತ್ತು. ಕಾಲಕ್ರಮೇಣ ಸುಲಭಬೆಲೆಗೆ ಲಭಿಸಲಾರಂಭಿಸಿದ ಈ ಗಡ್ಡೆಗಳು, ಇಂಗ್ಲೆಂಡ್ ನ ಬೀದಿಬೀದಿಗಳಲ್ಲಿ "ಬೇಯಿಸಿದ ಬಿಸಿ ಬಟಾಟೆ " ಗಳನ್ನು ಮಾರಾಟ ಮಾಡುವಷ್ಟು ಬೇಡಿಕೆಯನ್ನು ಗಳಿಸಿದ್ದವು!. 

ಪೋಷಕಾಂಶಗಳ ಆಗರ 

ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ, ಒಂದು ಸೇಬು ಹಣ್ಣಿನಲ್ಲಿ ಇರುವಷ್ಟು ಅಥವಾ ಒಂದು ಲೋಟ ಕಿತ್ತಳೆ ಹಣ್ಣಿನ ರಸದಲ್ಲಿ ಇರುವಷ್ಟೇ ಕ್ಯಾಲರಿಗಳಿವೆ!. 

ಆಲೂಗಡ್ಡೆಯಲ್ಲಿ ಶೇ. ೮೦ ರಷ್ಟು ನೀರು ಹಾಗೂ ಶೇ. ರಷ್ಟು ಘನ ಪದಾರ್ಥಗಳಿದ್ದು, ಈ ಘನ ಪದಾರ್ಥಗಳಲ್ಲಿ ಶೇ. ೮೫ ರಷ್ಟು ಪಿಷ್ಟ ಹಾಗೂ ಶೇ. ೧೫ ರಷ್ಟು ಪ್ರೋಟೀನ್ ಗಳಿದ್ದು, ಇದರೊಂದಿಗೆ ಪ್ರಮುಖ ಜೀವಸತ್ವಗಳಾದ ನಯಾಸಿನ್,ಥಯಾಮಿನ್,ರೈಬೋಫ್ಲೇವಿನ್,ವಿಟಮಿನ್  ಸಿ ಗಳೊಂದಿಗೆ ಕಬ್ಬಿಣ,ಕ್ಯಾಲ್ಸಿಯಂ,ಮೆಗ್ನೆಸಿಯಂ, ಫಾಸ್ಫರಸ್,ಸಲ್ಫರ್,ಸೋಡಿಯಂ ಹಾಗೂ  ಪೊಟಾಸಿಯಂ ಇತ್ಯಾದಿ ಖನಿಜಗಳು ಮತ್ತು ಲವಣಗಳಿವೆ. ಸುಲಭದಲ್ಲೇ ಪಚನವಾಗುವ ಈ ಸ್ವಾದಿಷ್ಟ ತರಕಾರಿಯು, ಗ್ಯಾಸ್ ಟ್ರಬಲ್ ಗೆ ಕಾರಣವೆನಿಸುವುದಿಲ್ಲ. 

ನಮ್ಮ ಶರೀರಕ್ಕೆ ಒಂದುದಿನದಲ್ಲಿ ಬೇಕಾಗುವಷ್ಟು ವಿಟಮಿನ್ ಗಳಾದ ರೈಬೋಫ್ಲೇವಿನ್, ಮೂರರಿಂದ ನಾಲ್ಕು ಪಟ್ಟು ಥಯಾಮಿನ್, ಒಂದೂವರೆ ಪಟ್ಟು ಕಬ್ಬಿಣದ ಸತ್ವ,ಹತ್ತು ಪಟ್ಟು ವಿಟಮಿನ್ ಸಿ, ಒಂದು ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ ಅಧಿಕ ಪೊಟಾಸಿಯಂ ಇತ್ಯಾದಿಗಳಿಂದ ಸಮೃದ್ಧವಾಗಿರುವ ಬಟಾಟೆಯಲ್ಲಿ ಉಪ್ಪು ಮತ್ತು ಕೊಬ್ಬಿನ ಅಂಶಗಳೇ ಇಲ್ಲ. ಇದೇ ಕಾರಣದಿಂದಾಗಿ ಅನೇಕರು ನಂಬಿರುವಂತೆ, ನಮ್ಮ ಶರೀರದ ತೂಕ ಮತ್ತು ಗಾತ್ರಗಳನ್ನು ಹೆಚ್ಚಿಸುವಲ್ಲಿ ಈ ಗಡ್ದೆಯು ಪಾತ್ರವಹಿಸುವ ಸಾಧ್ಯತೆಗಳೇ ಇಲ್ಲ!. 

ಆದರೆ  ಅಬಾಲವೃದ್ಧರು ಮೆಚ್ಚಿ ಸವಿಯುವ ಬಟಾಟೆಯ ಚಿಪ್ಸ್- ವೇಫರ್ಸ್ ಮತ್ತು ಎಣ್ಣೆ,ಬೆಣ್ಣೆ ಅಥವಾ ತುಪ್ಪಗಳನ್ನು ಧಾರಾಳವಾಗಿ ಬಳಸಿ ತಯಾರಿಸಿದ ರುಚಿಕರ ಖಾದ್ಯಗಳನ್ನು ಅತಿಯಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ. 

ಸಸ್ಯಾಹಾರ ಮತ್ತು ಮಾಂಸಾಹಾರ ಪ್ರಿಯರು ತಯಾರಿಸುವ ನೂರಾರು ಸ್ವಾದಿಷ್ಟ ಖಾದ್ಯಗಳಲ್ಲಿ ಬಳಸಲ್ಪಡುವ,ಯಾವುದೇ ಆಹಾರ ಪದಾರ್ಥಗಳೊಡನೆ ಸುಲಭವಾಗಿ ಬೆರೆತು ಅವುಗಳ ಸ್ವಾದವನ್ನು ಇನ್ನಷ್ಟು ಹೆಚ್ಚಿಸಬಲ್ಲ ಹಾಗೂ ,ಜೀವಸತ್ವಗಳು, ಖನಿಜಗಳು,ಲವಣಗಳು ಮತ್ತು ನಾರಿನಂಶಗಳ ಆಗರ ಎನಿಸಿರುವ ಬಟಾಟೆಯ ದೈನಂದಿನ ಸೇವನೆಯು, ನಿಮ್ಮ ಆರೋಗ್ಯದ ರಕ್ಷಣೆಯಲ್ಲಿ ಅತ್ಯಂತ ಉಪಯುಕ್ತವೆನಿಸುವುದು. 

ವಾಯುಕಾರಕ ದ್ರವ್ಯ 

ಬಟಾಟೆಯಂತಹ ಗಡ್ಡೆಗಳು ಹಾಗೂ ಬೇಳೆ- ಕಾಳುಗಳಲ್ಲಿ ಕ್ಷುಲ್ಲಕ ಪ್ರಮಾಣದಲ್ಲಿ " ಆಲ್ಫಾ ಗಾಲಾಕ್ಟೋಸ್ ಡೈಜೆಸ್ಟಿಂಗ್ ರೆಸಿನೋಸ್" ಎನ್ನುವ ದ್ರವ್ಯವಿರುವುದು ಕೆಲ ವರ್ಷಗಳ ಹಿಂದೆ ಪತ್ತೆಯಾಗಿತ್ತು. "ವಾಯು" ಉತ್ಪಾದಕ ಸಾಮರ್ಥ್ಯವನ್ನು ಹೊಂದಿರುವ ಈ ದ್ರವ್ಯವು, ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಕೋಟ್ಯಂತರ ಜನರಲ್ಲಿ ಕ್ಷುಲ್ಲಕ ಪ್ರಮಾಣದ ಜನರನ್ನು ಪೀಡಿಸಬಲ್ಲದಾದರೂ, ಬಹುತೇಕ ಜನರಲ್ಲಿ ಯಾವುದೇ ತೊಂದರೆಗಳಿಗೆ ಕಾರಣವೆನಿಸುವುದಿಲ್ಲ. 

ಬಹುತೇಕ ಭಾರತೀಯರು ನಂಬಿರುವಂತೆ ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ತೀವ್ರ ಸ್ವರೂಪದ "ಗ್ಯಾಸ್ ಟ್ರಬಲ್ " ಬಾಧಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಇಂತಹ ಅಸಾಮಾನ್ಯ ತೊಂದರೆಗಳು ಬಟಾಟೆಯಂತಹ ಆಹಾರಸೇವನೆಯಿಂದ ಉದ್ಭವಿಸುವುದಾದಲ್ಲಿ,ಪ್ರಪಂಚದ ಬಹುತೇಕ ರಾಷ್ಟ್ರಗಳ ಅಧಿಕತಮ ಜನರು ಬಟಾಟೆಯನ್ನು ತಮ್ಮ ದೈನಂದಿನ ಆಹಾರವನ್ನಾಗಿ ಬಳಸುವ ಸಾಧ್ಯತೆಗಳೇ ಇರಲಿಲ್ಲ!. 

ಆದರೆ ತಥಾಕಥಿತ ಗ್ಯಾಸ್ ಟ್ರಬಲ್ ಪೀಡಿತ ವ್ಯಕ್ತಿಗಳು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಅವಶ್ಯಕ ಪ್ರಮಾಣದ ಸಮತೋಲಿತ ಆಹಾರದ ಸೇವನೆ,ಕ್ರಮಬದ್ಧ ಶಾರೀರಿಕ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಕನಿಷ್ಠ ೨-೩ ಲೀಟರ್ ನೀರನ್ನು ಕುಡಿಯುವುದು,ದುಶ್ಚಟಗಳಿಂದ ದೂರವಿರುವುದು ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳುವಂತಹ  ಉಪಕ್ರಮಗಳನ್ನು ಪರಿಪಾಲಿಸಿದಲ್ಲಿ, ಗ್ಯಾಸ್ ಟ್ರಬಲ್ ನಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಜೊತೆಗೆ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದು. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು  

ಉದಯವಾಣಿ ಪತ್ರಿಕೆಯ ೦೮-೧೨-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment