Saturday, August 17, 2013





                      ಶುಕ್ಲಗ್ರಂಥಿಯ ಹಿಗ್ಗುವಿಕೆ : ಮುಜುಗರವೇಕೆ ?

ಸರಕಾರಿ ನೌಕರಿಯಲ್ಲಿದ್ದು ಇತ್ತೀಚಿಗೆ ನಿವೃತ್ತರಾಗಿದ್ದ ರಾಮರಾಯರಿಗೆ ಇತ್ತೀಚಿನ ಕೆಲದಿನಗಳಿಂದ ಪುಟ್ಟ ಸಮಸ್ಯೆಯೊಂದು ಬಾಧಿಸಲಾರಂಭಿಸಿತ್ತು. ಒಂದೆರಡು ವರ್ಷಗಳಿಂದ ಮೂತ್ರ ವಿಸರ್ಜಿಸಲು ತುಸು ತ್ರಾಸವಾಗುತ್ತಿದ್ದುದನ್ನು ರಾಯರು ನಿರ್ಲಕ್ಷಿಸಿದ್ದರಿಂದ ಈ ಸಮಸ್ಯೆಯು ಉಲ್ಬಣಿಸಿತ್ತು. ತತ್ಪರಿಣಾಮವಾಗಿ ಮೂತ್ರ ವಿಸರ್ಜಿಸಬೇಕೆಂಬ ಸಂವೇದನೆ ಪ್ರತ್ಯಕ್ಷವಾದೊಡನೆ ಶೌಚಾಲಯಕ್ಕೆ ಧಾವಿಸಬೇಕಾಗಿದ್ದರೂ, ಮೂತ್ರ ವಿಸರ್ಜಿಸಲು ಕನಿಷ್ಠ ಹತ್ತಾರು ನಿಮಿಷ ತಗಲುತ್ತಿತ್ತು. ಜೊತೆಗೆ ಶೌಚಾಲಯದಿಂದ ಹೊರಬಂದ ಬಳಿಕವೂ ಮೂತ್ರ ತೊಟ್ಟಿಕ್ಕುತ್ತಿದ್ದುದರಿಂದ, ದಿನದಲ್ಲಿ ಹಲವಾರು ಬಾರಿ ಒಳ ಉಡುಪುಗಳನ್ನು ಬದಲಾಯಿಸಬೇಕಾಗುತ್ತಿತ್ತು. 

ಲಜ್ಜಾಸ್ಪದವೆನಿಸುವ ತಮ್ಮ ಸಮಸ್ಯೆಯಿಂದಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದ ರಾಯರು, ಸದಾ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಉದ್ಯೋಗದಲ್ಲಿದ್ದಾಗ ದಿನನಿತ್ಯ ನೂರಾರು ಜನರೊಂದಿಗೆ ಮಾತುಕತೆ ನಡೆಸುತ್ತಿದ್ದ ರಾಯರಿಗೆ, ಇದೀಗ ತಾವೇ ವಿಧಿಸಿಕೊಂಡಿದ್ದ ಗೃಹಬಂಧನವು ಅಸಹನೀಯವೆನಿಸುತ್ತಿತ್ತು. ಆದರೆ ತಮ್ಮ ಸಮಸ್ಯೆಯನ್ನು ಮನೆಮಂದಿಯ ಅಥವಾ ಕುಟುಂಬ ವೈದ್ಯರ ಬಳಿ ಹೇಳಿಕೊಳ್ಳಲು ಮುಜುಗರಪಟ್ಟು, ಮುಚ್ಚಿಟ್ಟಿದ್ದ ಕಾರಣದಿಂದಾಗಿ ಸಾಕಷ್ಟು ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ದಿನವಿಡೀ ಏಕಾಂತದಲ್ಲಿ ಕಾಲಕಳೆಯಲಾರಂಭಿಸಿದ ಪರಿಣಾಮವಾಗಿ ಅಂತರ್ಮುಖಿಯಾಗಿದ್ದ ರಾಯರು,ವಿನಾಕಾರಣ ಪತ್ನಿ,ಮಗ ಮತ್ತು ಸೊಸೆಯಂದಿರ ಮೇಲೆ ಹರಿಹಾಯಲಾರಂಭಿಸಿದ್ದರು. ಈ ವಿಚಿತ್ರ ವರ್ತನೆಗಳಿಂದ ನೊಂದಿದ್ದ ಮಗ ಮತ್ತು ಸೊಸೆ,ಇವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ಆದರೆ ಮೂರು ದಶಕ ಇವರೊಂದಿಗೆ ದಾಂಪತ್ಯ ನಡೆಸಿದ್ದ ಪುಷ್ಪಮ್ಮನಿಗೆ ಮಾತ್ರ ಪತಿಯ ವರ್ತನೆಗಳಿಗೆ ಏನಾದರೂ ಕಾರಣ ಇರಲೇಬೇಕೆಂಬ ಸಂದೇಹ ಮೂಡಿತ್ತು. ಜೊತೆಗೆ ಈ "ಚಿದಂಬರ ರಹಸ್ಯ"ವನ್ನು ಭೇದಿಸಲೇಬೇಕೆನ್ನುವ  ಛಲದಿಂದ, ಪತಿಯ ದೈನಂದಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದರು. ಕೆಲವು ದಿನಗಳ ಬಳಿಕ ರಾಯರು ದಿನದಲ್ಲಿ ಹಲವಾರುಬಾರಿ ಶೌಚಾಲಯಕ್ಕೆ ಧಾವಿಸುವ ಮತ್ತು ಹೊರಬರಲು ಹತ್ತಾರು ನಿಮಿಷ ತಗಲುವ ವಿಚಾರದೊಂದಿಗೆ, ಅನೇಕಬಾರಿ ಒಳ ಉಡುಪುಗಳನ್ನು ಬದಲಾಯಿಸುವುದು ಪತ್ತೆಯಾಗಿತ್ತು. ಅಂತಿಮವಾಗಿ ಪತಿಯ ಬಳಿ ನಿಮ್ಮನ್ನು ಬಾಧಿಸುತ್ತಿರುವ ಸಮಸ್ಯೆ ಯಾವುದು ಎಂದು ನೇರವಾಗಿ ಪ್ರಶ್ನಿಸಿದ್ದರು. ಅನಿರೀಕ್ಷಿತವಾಗಿ ಬಂದೆರಗಿದ ಪ್ರಶ್ನೆಯಿಂದ ವಿಚಲಿತರಾದ ರಾಯರು ತೆಪ್ಪಗೆ ತಮ್ಮ ಕೋಣೆಯನ್ನು ಸೇರಿ ಬಾಗಿಲನ್ನು ಮುಚ್ಚಿದ್ದರು. ಆದರೆ ಪತ್ನಿ ಕೇಳಿದ ಪ್ರಶ್ನೆಯು ಇದೀಗ ಭೂತದಂತೆ ಅವರನ್ನು ಕಾಡಲಾರಂಭಿಸಿತ್ತು. ಇದರೊಂದಿಗೆ ತನ್ನ ಗುಟ್ಟು ಮಗನಿಗೂ ತಿಳಿದಲ್ಲಿ,ಆತನನ್ನು ಎದುರಿಸುವುದು ಹೇಗೆ? ಎನ್ನುವ ಚಿಂತೆಯೂ ಆರಂಭವಾಗಿತ್ತು. 

ಪ್ರಸ್ತುತ ತನ್ನ ಸಮಸ್ಯೆಯನ್ನು ಪತ್ನಿಯ ಬಳಿ ಹೇಳದಿದ್ದಲ್ಲಿ "ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ"ದಂತೆ ಹೊರಬೀಳುವುದರಲ್ಲಿ ಸಂದೇಹವಿಲ್ಲವೆಂದು ನಿರ್ಧರಿಸಿದ ರಾಯರು, ಮಧ್ಯಾಹ್ನದ ಊಟದ ಬಳಿಕ  ತನ್ನನ್ನು ಪೀಡಿಸುತ್ತಿರುವ ತೊಂದರೆಗಳನ್ನು ಯಥಾವತ್ತಾಗಿ ಪತ್ನಿಗೆ ವಿವರಿಸಿ ನಿಟ್ಟುಸಿರು ಬಿಟ್ಟಿದ್ದರು. ಪತಿಯ ಮಾತುಗಳನ್ನು ಕೇಳಿ ಗೊಳ್ಳನೆ ನಕ್ಕ ಪುಷ್ಪಮ್ಮನಿಗೆ ಕ್ಷಣಮಾತ್ರದಲ್ಲೇ ಗಂಡನನ್ನು ಪೀಡಿಸುವ ತೊಂದರೆಗೆ ಶುಕ್ಲಗ್ರಂಥಿಯ ಹಿಗ್ಗುವಿಕೆಯೇ ಕಾರಣವೆಂದು ತಿಳಿಯಿತು. ಏಕೆಂದರೆ ಆಕೆಯ ವಯೋವೃದ್ಧ ತಂದೆಗೂ ಇದೇ ಸಮಸ್ಯೆ ಬಾಧಿಸಿದ್ದ ಹಾಗೂ ಮಂಗಳೂರಿನ ತಜ್ಞವೈದ್ಯರ ಚಿಕಿತ್ಸೆಯಿಂದ ಪರಿಹಾರಗೊಂಡಿದ್ದ ಘಟನೆ ಆಕೆಯ ನೆನಪಿನಿಂದ ಇಂದಿಗೂ ಮಾಸಿರಲಿಲ್ಲ. 

ವಾರ ಕಳೆಯುವಷ್ಟರಲ್ಲಿ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕೆಲವೇ ವಾರಗಳಲ್ಲಿ ರಾಯರ  ಕಾಣದಂತೆ ಮಾಯವಾಗಿತ್ತು!. 


ಶುಕ್ಲಗ್ರಂಥಿಯ ನಿರಪಾಯಕಾರಿ ಹಿಗ್ಗುವಿಕೆ  ಎನ್ನುವ ಈ ಸಮಸ್ಯೆಯು ಮಧ್ಯ ವಯಸ್ಸು ದಾಟಿದ ಹಾಗೂ ಇಳಿವಯಸ್ಸಿನ ಅನೇಕ ಪುರುಷರಲ್ಲಿ ಕಂಡುಬರುತ್ತದೆ. ಈ ವ್ಯಾಧಿಯ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುವುದರಿಂದ, ಬಹುತೇಕ ರೋಗಿಗಳು ತಮ್ಮ ಸಮಸ್ಯೆಗೆ ವೃದ್ಧಾಪ್ಯವೇ ಕಾರಣವೆಂದು ಭಾವಿಸುತ್ತಾರೆ. ಹಾಗೂ ಇದೇ ಕಾರಣದಿಂದಾಗಿ ಇದನ್ನು ನಿರ್ಲಕ್ಷಿಸುತ್ತಾರೆ. ಇನ್ನುಕೆಲವರು ಸಂಕೋಚ ಅಥವಾ ನಾಚಿಕೆಯಿಂದ ಇದನ್ನು ಮುಚ್ಚಿಟ್ಟರೆ, ಮತ್ತೆ ಕೆಲವರು ತಮ್ಮ ಹಿರಿಯರು ಇದೇರೀತಿಯ ತೊಂದರೆಗಳಿಂದ ಬಳಲುತ್ತಿರುವುದನ್ನು ಕಂಡಿರುವುದರಿಂದಾಗಿ, ಇದು ಸಹಜವಾಗಿ ಉದ್ಭವಿಸುವ ತೊಂದರೆಯೆಂದು ನಂಬಿ ಇದರೊಂದಿಗೆ ಹೊಂದಿಕೊಂಡು ಜೀವನ ಸಾಗಿಸುತ್ತಾರೆ. ಇವೆಲ್ಲಕ್ಕೂ ಮಿಗಿಲಾಗಿ ಈ ತೊಂದರೆಗೆ ಚಿಕಿತ್ಸೆ ಇರುವುದನ್ನು ಅರಿಯದ ಕಾರಣದಿಂದಾಗಿ ಇದನ್ನು ನಿರ್ಲಕ್ಷಿಸುತ್ತಾರೆ. 

ಶುಕ್ಲಗ್ರಂಥಿಯ ಹಿಗ್ಗುವಿಕೆ 

ಪುರುಷರ ಶರೀರದಲ್ಲಿ ಮೂತ್ರಾಶಯಕ್ಕಿಂತ ತುಸು ಕೆಳಗಿರುವ ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಶುಕ್ಲಗ್ರಂಥಿಯು ಮೂತ್ರನಾಳದ ಸುತ್ತಲೂ ಆವರಿಸಿರುತ್ತದೆ. ಗರ್ಭಧಾರಣೆಗೆ ಅತ್ಯವಶ್ಯಕವಾದ ವೀರ್ಯದ್ರವವನ್ನು ಉತ್ಪಾದಿಸುವ ಮತ್ತು ಸಂಗ್ರಹಿಸುವ ಕಾರ್ಯವನ್ನು ಇದು ನಿರ್ವಹಿಸುತ್ತದೆ. ಈ ಗ್ರಂಥಿಯು ಮೊದಲು ಹದಿಹರೆಯದಲ್ಲಿ ಹಾಗೂ ತದನಂತರ ಸುಮಾರು ೩೦ ವರ್ಷ ವಯಸ್ಸಾದ ಬಳಿಕ, ಎರಡು ಹಂತಗಳಲ್ಲಿ ಬೆಳೆಯಲಾರಂಭಿಸುವುದು. ೩೦ ವರ್ಷಗಳ ಬಳಿಕ ಆರಂಭವಾಗುವ ಶುಕ್ಲಗ್ರಂಥಿಯ ಹಿಗ್ಗುವಿಕೆಯು ಪುರುಷರ ಶರೀರದ ಸ್ವಾಭಾವಿಕ ಪ್ರಕ್ರಿಯೆಯಾಗಿರುತ್ತದೆ. ವಯಸ್ಸಾದಂತೆಯೇ ಹಿಗ್ಗುತ್ತಲೇ ಹೋಗುವ ಈ ಗ್ರಂಥಿಯು, ಮೂತ್ರನಾಳದ ಮೇಲೆ ಒತ್ತಿದಂತಾಗುವುದು. ತತ್ಪರಿಣಾಮವಾಗಿ ಮೂತ್ರವಿಸರ್ಜನೆಗೆ ಒಂದಿಷ್ಟು ಅಡಚಣೆಗಳು ಉದ್ಭವಿಸುತ್ತವೆ. ಆದರೆ ಮಧ್ಯವಯಸ್ಸು ಮೀರಿದ ಮತ್ತು ವಯೋವೃದ್ಧರೆಲ್ಲರೂ ಈ ಸಮಸ್ಯೆಯಿಂದ ಪೀಡಿತರಾಗುವ ಸಾಧ್ಯತೆಗಳಿಲ್ಲ. 

ಶುಕ್ಲಗ್ರಂಥಿಯ ಹಿಗ್ಗುವಿಕೆಗೆ ನಿರ್ದಿಷ್ಟ ಕಾರಣವೇನೆಂದು ಇಂದಿಗೂ ಖಚಿತವಾಗಿ ತಿಳಿದಿಲ್ಲ. ಆದರೆ ಅನುವಂಶೀಯತೆ,ಮೂತ್ರಾಂಗಗಳ ಸೋಂಕುಗಳು,ಅತಿಯಾದ ಕೊಬ್ಬಿನ ಅಂಶಗಳಿರುವ ಆಹಾರ ಸೇವನೆ,ಕೌಟುಂಬಿಕ ಹಿನ್ನೆಲೆ,ಕೆಲವಿಧದ ವ್ಯಾಧಿಗಳು,ಹಾರ್ಮೋನ್ ಗಳು ಮತ್ತು ವ್ಯಕ್ತಿಯ ವಯಸ್ಸುಗಳು ಈ ಸಮಸ್ಯೆ ಉದ್ಭವಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. 

ಈ ಸಮಸ್ಯೆಯಿಂದ ಪೀಡಿತರಾದ ವ್ಯಕ್ತಿಗಳಲ್ಲಿ ಮೂತ್ರ ವಿಸರ್ಜಿಸಲು ಆತುರ,ಆತಂಕ,ಕಷ್ಟ,ವಿಳಂಬ ಹಾಗೂ ಹಿಂಜರಿಕೆ,ದುರ್ಬಲ ಮೂತ್ರಧಾರೆ,ಸಂಪೂರ್ಣವಾಗಿ ಮೂತ್ರ ವಿಸರ್ಜನೆಯಾಗಿಲ್ಲ ಎನ್ನುವ ಭಾವನೆ, ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಉರಿ-ನೋವು ಹಾಗೂ  ವಿಸರ್ಜನೆಯ ಬಳಿಕವೂ ಮೂತ್ರ ತೊಟ್ಟಿಕ್ಕುತ್ತಿರುವುದು, ರಕ್ತಮಿಶ್ರಿತ ಮೂತ್ರ ವಿಸರ್ಜನೆ ಮತ್ತು ಪದೇಪದೇ ಮೂತ್ರ ವಿಸರ್ಜನೆಗಳಂತಹ ಲಕ್ಷಣಗಳು ಕಂಡುಬರುತ್ತವೆ.   

ಸಮಸ್ಯೆಗಳು 

ಶುಕ್ಲಗ್ರಂಥಿಯ ನಿರಪಾಯಕಾರಿ ಹಿಗ್ಗುವಿಕೆಯಿಂದ ಪೀಡಿತರಾದ ವ್ಯಕ್ತಿಗಳು ಪ್ರತಿರಾತ್ರಿ ಅನೇಕ ಬಾರಿ ಎದ್ದು ಮೂತ್ರವಿಸರ್ಜಿಸಬೇಕಾಗುವುದರಿಂದ ,ನೆಮ್ಮದಿಯ ಸುಖ ನಿದ್ರೆಯಿಂದ ವಂಚಿತರಾಗುತ್ತಾರೆ. ಹಾಗೂ ನಿದ್ರಾಹೀನತೆಯಿಂದ ಬಳಲಿಕೆ,ಅತಿಆಯಾಸ ಮತ್ತು ಮಾನಸಿಕ ಖಿನ್ನತೆಯಂತಹ ತೊಂದರೆಗಳು ಬಾಧಿಸುವುದರಿಂದ, ಹಗಲಿನಲ್ಲಿ ತಮ್ಮ ದೈನಂದಿನ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆಗದೇ ಮಾನಸಿಕ ಒತ್ತಡಕ್ಕೂ ಒಳಗಾಗುತ್ತಾರೆ. 

ಸಾಕಷ್ಟು ಮುಜುಗರಕ್ಕೂ ಕಾರಣವೆನಿಸಬಲ್ಲ ಇಂತಹ ತೊಂದರೆಗಳಿಂದ ಬಾಧಿತ ವ್ಯಕ್ತಿಗಳು, ದೂರಪ್ರಯಾಣ ಅಥವಾ ಸಭೆ ಸಮಾರಂಭಗಳಲ್ಲಿ ಭಾಗವಹಿಸದೇ ಒಂದೇ ಸ್ಥಳದಲ್ಲಿ ಅಥವಾ ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಬಯಸುತ್ತಾರೆ. ಇಂತಹ ವರ್ತನೆಗಳಿಂದ ಏಕಾಂಗಿಗಳಾಗುವುದರೊಂದಿಗೆ, ಬಂದುಮಿತ್ರರಿಂದ ಅನಪೇಕ್ಷಿತ ಟೀಕೆಗೂ ಗುರಿಯಾಗುತ್ತಾರೆ. 

ಶುಕ್ಲಗ್ರಂಥಿಯ ನಿರಪಾಯಕಾರಿ ಹಿಗ್ಗುವಿಕೆಯಿಂದ ಬಳಲುತ್ತಿರುವವರು ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇದ್ದಲ್ಲಿ, ಇಂತಹ ಸಾಮಾಜಿಕ ಸಮಸ್ಯೆಗಳೊಂದಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಿಗೂ ಈಡಾಗುತ್ತಾರೆ. ಜೊತೆಗೆ ತಮ್ಮ ನಿರ್ಲಕ್ಷ್ಯದಿಂದಾಗಿ ಮೂತ್ರಾಂಗಗಳ ವೈಫಲ್ಯ,ಮೂತ್ರಾವರೋಧ,ಮೂತ್ರಾಂಗಗಳಲ್ಲಿ ಕಲ್ಲುಗಳು ಉದ್ಭವಿಸುವಂತಹ ಗಂಭೀರ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ತತ್ಪರಿಣಾಮವಾಗಿ ಮೂತ್ರಪಿಂಡಗಳು ಮತ್ತು ಮೂತ್ರಾಶಯದಲ್ಲಿ ಸಂಭವಿಸಬಲ್ಲ ಕೆಲವೊಂದು ಪರಿವರ್ತನೆಗಳನ್ನು ಮತ್ತೆ ಪೂರ್ವಸ್ಥಿತಿಗೆ ಸರಿಯಾಗಿ ದುರಸ್ತಿಪಡಿಸುವುದು ತಜ್ಞ ವೈದ್ಯರಿಗೂ ಅಸಾಧ್ಯವೆನಿಸುವುದು. 

ಶುಕ್ಲಗ್ರಂಥಿಯ ಹಿಗ್ಗುವಿಕೆಯು ಹೆಚ್ಚಾಗಿ ಹಿರಿಯರನ್ನೇ ಬಾಧಿಸುವುದಾದಲ್ಲಿ,ಹದಿಹರೆಯದವರು ಮತ್ತು ತರುಣರಲ್ಲಿ ಇದರ ಸೋಂಕಿನ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ೪೦ ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳಲ್ಲಿ ಶುಕ್ಲಗ್ರಂಥಿಯ ಹಿಗ್ಗುವಿಕೆಯ ತೊಂದರೆಗಳು ಕಾಣಿಸಿಕೊಳ್ಳುವುದು ಅಪರೂಪವಾದರೂ, ೬೦ ವರ್ಷ ಮೀರಿದ ಶೇ. ೫೦ ರಷ್ಟು ಮತ್ತು ೮೦ ವರ್ಷ ಮೀರಿದ ಶೇ. ೮೦ರಷ್ಟು ಪುರುಷರಲ್ಲಿ ಇದು ಕಂಡುಬರುತ್ತದೆ. 

ಶುಕ್ಲಗ್ರಂಥಿಯ ಸೋಂಕು ಬಾಧಿಸಿದ ಸಂದರ್ಭದಲ್ಲಿ ಉರಿ ಮೂತ್ರ,ಕಿಬ್ಬೊಟ್ಟೆಯಲ್ಲಿ ನೋವು,ವೀರ್ಯ ಸ್ಖಲನದ ಬಳಿಕ ನೋವು, ಪದೇಪದೇ ಮೂತ್ರ ವಿಸರ್ಜನೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಅಪರೂಪದಲ್ಲಿ ಕೆಲವು ರೋಗಿಗಳಲ್ಲಿ ಸಂತಾನಹೀನತೆ ಮತ್ತು ನಪುಂಸಕತ್ವಗಳಂತಹ ತೊಂದರೆಗಳೂ ಉದ್ಭವಿಸುವ ಸಾಧ್ಯತೆಗಳಿವೆ. 

ಸಾಮಾನ್ಯವಾಗಿ ಈ ಲಕ್ಷಣಗಳು ಸೌಮ್ಯರೂಪದಲ್ಲಿ ಕಾಣಿಸಿಕೊಳ್ಳುವುದಾದರೂ, ಕೆಲ ಸಂದರ್ಭಗಳಲ್ಲಿ ತೀವ್ರವಾಗಿ ಉಲ್ಬಣಿಸಲು ಅಥವಾ ಸ್ವಯಂ ಶಮನಗೊಳ್ಳಲು ಹಲವಾರು ಕಾರಣಗಳೂ ಇವೆ. ಆದರೆ ಜನಸಾಮಾನ್ಯರು ಇಂತಹ ತೊಂದರೆಗಳಿಗೆ "ಉಷ್ಣ"ವೇ ಕಾರಣವಾಗಿರಬೇಕೆಂದು ನಂಬಿ,ವೈದ್ಯರ ಸಲಹೆ-ಚಿಕಿತ್ಸೆಗಳಿಗೆ ಬದಲಾಗಿ ಎಳನೀರು ಕುಡಿಯುವುದು ಅಪರೂಪವೇನಲ್ಲ!. 

ಚಿಕಿತ್ಸೆ 

ವೈದ್ಯಕೀಯ ಕ್ಷೇತ್ರದಲ್ಲಿ ನಾವಿಂದು ಸಾಧಿಸಿರುವ ಅದ್ಭುತವಾದ ಪ್ರಗತಿಯಿಂದ, ಶುಕ್ಲಗ್ರಂಥಿಯ ನಿರಪಾಯಕಾರಿ ಹಿಗ್ಗುವಿಕೆ ಮತ್ತು ಸೊಂಕುಗಳಿಗೆ ನಿರ್ದಿಷ್ಟ ಮತ್ತು ಅತ್ಯುತ್ತಮ ಚಿಕಿತ್ಸೆ ಲಭ್ಯವಿದೆ. ಕೆಲ ದಶಕಗಳ ಹಿಂದೆ ಈ ವ್ಯಾಧಿಯ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದರೂ, ಇಂದು ಇದನ್ನು ಗುಣಪಡಿಸಲು ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದುದರಿಂದ ಈ ರೀತಿಯ ಲಕ್ಷಣಗಳು ಪ್ರತ್ಯಕ್ಷವಾದೊಡನೆ ತಜ್ಞ ವೈದ್ಯರ ಸಲಹೆ-ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ, ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. 

ಅಂತಿಮವಾಗಿ ವಯೋವೃದ್ಧರಲ್ಲಿ ಶುಕ್ಲಗ್ರಂಥಿಯ ಕ್ಯಾನ್ಸರ್ ಉದ್ಭವಿಸಿದ ಸಂದರ್ಭದಲ್ಲೂ ಇಂತಹ ಲಕ್ಷಣಗಳು ಕಂಡುಬರುವುದಾದರೂ,ಪ್ರಾರಂಭಿಕ ಹಂತದಲ್ಲೇ ಇದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಿದಲ್ಲಿ, ಶಸ್ತ್ರಚಿಕಿತ್ಸೆ ಹಾಗೂ ತತ್ಸಂಬಂಧಿತ ಸಂಕೀರ್ಣ ಸಮಸ್ಯೆಗಳಿಂದ ಬಹುತೇಕ ರೋಗಿಗಳನ್ನು ಪಾರುಮಾಡಬಹುದಾಗಿದೆ. 

ಡಾ . ಸಿ . ನಿತ್ಯಾನಂದ ಪೈ,ಪುತ್ತೂರು 

ತರಂಗ ವಾರಪತ್ರಿಕೆಯ ೧೫-೦೫-೨೦೦೮ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 

No comments:

Post a Comment