Tuesday, August 6, 2013

Malnutrition........



                        ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ಅನಾರೋಗ್ಯ 


ಪ್ರಪಂಚದ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಅಧಿಕತಮ ಮಕ್ಕಳನ್ನು ಬಾಧಿಸುತ್ತಿರುವ ಪೌಷ್ಠಿಕ ಅಂಶಗಳ ಕೊರತೆಯು ಅನೇಕ ವ್ಯಾಧಿಗಳಿಗೆ ಕಾರಣವೆನಿಸುವುದರೊಂದಿಗೆ,ಗಣನೀಯ ಪ್ರಮಾಣದ ಮರಣಗಳಿಗೂ ಕಾರಣವೆನಿಸುತ್ತಿದೆ. ಮೂರು ತಿಂಗಳಿನ ಹಸುಗೂಸಿನಿಂದ ಹಿಡಿದು,ಐದು ವರ್ಷದವರೆಗಿನ ಮಕ್ಕಳನ್ನು ಪೀಡಿಸುವ ಈ ಸಮಸ್ಯೆಯು ದೇಶಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿದೆ. 

ಬಿಜಾಪುರದ ಕೆಂಚವ್ವ ಪುತ್ತೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದು, ತನ್ನ ಗಂಡ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ಜೋಪಡಿಯಲ್ಲಿ ವಾಸವಾಗಿದ್ದಳು. ದಿನವಿಡೀ ದುಡಿದರೂ ಆಕೆಯ ಗಳಿಕೆಯು ನಾಲ್ಕುಮಂದಿಯ ಸಂಸಾರಕ್ಕೆ ಹೊಟ್ಟೆತುಂಬಾ ಉಣ್ಣಲೂ ಸಾಲುತ್ತಿರಲಿಲ್ಲ. ಆಕೆಯ ಗಂಡನು ಸಾಕಷ್ಟು ಸಂಪಾದಿಸುತ್ತಿದ್ದರೂ, ಅದೆಲ್ಲವೂ ಕುಡಿತಕ್ಕಾಗಿಯೇ ಖರ್ಚಾಗುತ್ತಿತ್ತು. ಇದೇ ಕಾರಣದಿಂದಾಗಿ ಕೆಂಚವ್ವ ಮತ್ತು ಆಕೆಯ ಮಕ್ಕಳು, ಎಲುಬಿನ ಹಂದರದಂತೆ ಕಾಣುತ್ತಿದ್ದರು. 

ಅದೊಂದುದಿನ ತನ್ನ ಅನಾರೋಗ್ಯಪೀಡಿತ ಕಂದನನ್ನು ವೈದ್ಯರಲ್ಲಿಗೆ ಕರೆದೊಯ್ದ ಕೆಂಚವ್ವನು, ತನ್ನ ಮಗು ದಷ್ಟಪುಷ್ಟವಾಗಿ ಬೆಳೆಯುವಂತಹ ಟಾನಿಕ್ ನೀಡುವಂತೆ ಅಂಗಲಾಚಿದ್ದಳು. ಆಕೆಯ ಮಗುವಿಗೆ ಎರಡು ವರ್ಷ ವಯಸ್ಸಾಗಿದ್ದರೂ, ವಯಸ್ಸಿಗೆ ತಕ್ಕ ಬೆಳವನಿಗೆಯಿಲ್ಲದೆ ಒಂಬತ್ತು ತಿಂಗಳ ಕೂಸಿನಂತೆ ಕಾಣುತ್ತಿತ್ತು. ಕಡ್ಡಿಯಂತಹ ಕೈಕಾಲುಗಳು,ಉಬ್ಬಿದ ಹೊಟ್ಟೆ, ನಿಸ್ತೇಜ ಕಣ್ಣುಗಳು,ಸುಕ್ಕುಗಟ್ಟಿದ ಚರ್ಮದೊಂದಿಗೆ ಕೆಂಚುಕೂದಲುಗಳನ್ನು ಕಂಡ ವೈದ್ಯರಿಗೆ, ಪೌಷ್ಟಿಕಾಂಶಗಳ ತೀವ್ರ ಕೊರತೆಯೇ ಮಗುವಿನ ಅನಾರೋಗ್ಯಕ್ಕೆ ಕಾರಣವೆಂದು ತಿಳಿಯಿತು. 

ನಾಲ್ಕಾರು ಮನೆಗಳಲ್ಲಿ ಕಸ-ಮುಸುರೆ ಕೆಲಸಮಾಡಿ ಒಂದಿಷ್ಟು ಸಂಪಾದಿಸುತ್ತಿದ್ದ ಕೆನ್ಚವ್ವನಿಗೆ,ತನ್ನ ಇಬ್ಬರು ಮಕ್ಕಳನ್ನು ಸಾಕಿಸಲಹುವುದು ಅಕ್ಷರಶಃ ಅಸಾಧ್ಯವೆನಿಸುತ್ತಿತ್ತು. ಕತ್ತಲಾಗುತ್ತಲೇ ಕಂಠಪೂರ್ತಿ ಕುಡಿದುಬರುತ್ತಿದ್ದ ಆಕೆಯ ಗಂಡನು ಮನೆಯ ಖರ್ಚಿಗೆ ಹಣವನ್ನು ನೀಡದಿದ್ದರೂ, ಹೆಂಡತಿಯನ್ನು ಹೊಡೆದು ಬಡಿದು ತನಗೆ ಊಟ ಹಾಕುವಂತೆ ಪೀಡಿಸುತ್ತಿದ್ದನು. ಇದರಿಂದಾಗಿ ಆಕೆ ದುಡಿದ ಹಣವು ಸಂಸಾರದ ಅರೆಹೊಟ್ಟೆಗೂ ಸಾಲುತ್ತಿರಲಿಲ್ಲ. 

ದಿನದಲ್ಲಿ ಎರಡುಬಾರಿ ಬೇಯಿಸುತ್ತಿದ್ದ ಗಂಜಿಯನ್ನು ಮಕ್ಕಳೊಂದಿಗೆ ಹಂಚಿಕೊಂಡು ಉಣ್ಣುತ್ತಿದ್ದರೂ, ಯಾರೊಬ್ಬರ ಹೊಟ್ಟೆಯೂ ತುಂಬುತ್ತಿರಲಿಲ್ಲ. ಅರೆಹೊಟ್ಟೆಯಲ್ಲಿ ದಿನವಿಡೀ ದುಡಿಯುತ್ತಿದ್ದ ಕೃಶಕಾಯದ  ಕೆಂಚವ್ವನ ಬತ್ತಿದ ಎದೆಯಲ್ಲಿ ಸಿಕ್ಕಿದಷ್ಟು ಹಾಲೇ, ಕಿರಿಯ ಮಗುವಿನ ಏಕಮಾತ್ರ ಆಹಾರವಾಗಿದ್ದ ದಿನಗಳೂ ಅಪರೂಪವಾಗಿರಲಿಲ್ಲ. ಹೊಟ್ಟೆ ತುಂಬುವಷ್ಟು ಆಹಾರವೇ ಇಲ್ಲದಿದ್ದ ಮೇಲೆ ಪೌಷ್ಟಿಕಾಂಶ ಭರಿತ ಹಾಲು,ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಖರೀದಿಸುವ ಸಾಧ್ಯತೆಗಳೇ ಇರಲಿಲ್ಲ. ಇವೆಲ್ಲಾ ಕಾರಣಗಳಿಂದ ಕೆಂಚವ್ವ ಮತ್ತು ಆಕೆಯ ಇಬ್ಬರು ಮಕ್ಕಳು, ಪೌಷ್ಟಿಕಾಂಶಗಳ ತೀವ್ರ ಕೊರತೆಯಿಂದಾಗಿ ಸದಾ ಅನಾರೋಗ್ಯದಿಂದ ಬಳಲುತ್ತಿದ್ದರು. 

ಕೆಂಚವ್ವನ ಸ್ಥಿತಿಗತಿಗಳನ್ನು ಅರಿತಿದ್ದ ವೈದ್ಯರು ಆಕೆಯ ಕಂದನಿಗೆ ಅವಶ್ಯಕ ಔಷದಗಳನ್ನು ಉಚಿತವಾಗಿ ನೀಡಿದ್ದರೂ, ಈ ಸಮಸ್ಯೆಯ ಪರಿಹಾರಕ್ಕೆ ನಿಶ್ಚಿತವಾಗಿಯೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಸೇವನೆ ಅನಿವಾರ್ಯವಾಗಿತ್ತು. ಇಂತಹ ಆಹಾರದ ಅಭಾವದಿಂದಾಗಿಯೇ ಆಕೆಯ ಮಗುವು ಒಂದೆರಡು ತಿಂಗಳುಗಳ ಬಳಿಕ ಮೃತಪಟ್ಟಿತ್ತು. 

ವಿಶ್ವವ್ಯಾಪಿ ಸಮಸ್ಯೆ 

ಕುಪೋಷಣೆಯೇ ಭಾರತವನ್ನು ಬಿಟ್ಟು ತೊಲಗು, ಎನ್ನುವ ಅಮೀರ್ ಖಾನ್ ನ ಜಾಹೀರಾತೊಂದನ್ನು ಟೆಲಿವಿಶನ್ ನಲ್ಲಿ ನೀವೂ ಕಂಡಿರಲೇಬೇಕು. ಜಾಹೀರಾತಿನಲ್ಲಿ ಬಳಸಿರುವ "ಕುಪೋಷಣೆ" ಯು ಅಪೌಷ್ಟಿಕತೆಯೇ ಹೊರತು ಬೇರೇನೂ ಅಲ್ಲ. ಆದರೆ ಅಮೀರ್ ಖಾನ್ ಹೇಳಿದೊಡನೆ ಈ ಸಮಸ್ಯೆಯು ಭಾರತವನ್ನು ಬಿಟ್ಟು ತೊಲಗುವ ಸಾಧ್ಯತೆಗಳೂ ಇಲ್ಲ. 

ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆಯಿಂದಾಗಿ ಉದ್ಭವಿಸುತ್ತಿರುವ ಮರಾಸ್ಮಸ್ , ಕ್ವಾಷಿಯಾರ್ಕರ್, ಮರಾಸ್ಮಿಕ್ ಕ್ವಾಷಿಯಾರ್ಕರ್, ಸ್ಕರ್ವಿ, ರಿಕೆಟ್ಸ್, ರಕ್ತಹೀನತೆ ಇತ್ಯಾದಿ ವ್ಯಾಧಿಗಳಿಗೆ, ಜಗತ್ತಿನಾದ್ಯಂತ  ವರ್ಷಂಪ್ರತಿ ಲಕ್ಷಾಂತರ ಮಕ್ಕಳು ಬಲಿಯಾಗುತ್ತಾರೆ. ಕಿತ್ತುತಿನ್ನುವ ಬಡತನ,ನಿರುದ್ಯೋಗ, ಅನಾರೋಗ್ಯ, ಅಜ್ಞಾನ, ಮೂಢನಂಬಿಕೆಗಳು ಮತ್ತು ಗೊಡ್ಡು ಸಂಪ್ರದಾಯಗಳೊಂದಿಗೆ, ಅನಿಯಂತ್ರಿತವಾಗಿ ಹೆಚ್ಚುತ್ತಲೇ ಇರುವ ಜನಸಂಖ್ಯೆಯಿಂದಾಗಿ ಸರಕಾರವು ಇದರ ಪರಿಹಾರದ ಸಲುವಾಗಿ  ಹಮ್ಮಿಕೊಳ್ಳುವ ಬಹುತೇಕ ಯೋಜನೆಗಳು ವಿಫಲಗೊಳ್ಳುತ್ತಿವೆ. 

ಅಮಾಯಕ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳನ್ನು ಕುಂಠಿತಗೊಳಿಸಬಲ್ಲ ಅತ್ಯಲ್ಪ ಹಾಗೂ ಅಲ್ಪ ಪ್ರಮಾಣದ ಅಪೌಷ್ಟಿಕತೆಯು, ಅನೇಕ ಸಂದರ್ಭಗಳಲ್ಲಿ ಅರೆವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬಂದಿಗಳಿಗೂ ಪತ್ತೆಹಚ್ಚಲು ಆಗುವುದಿಲ್ಲ. ತತ್ಪರಿಣಾಮವಾಗಿ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದ ಬಳಿಕವೇ ಪತ್ತೆಯಾಗುವುದರಿಂದ ಸೂಕ್ತ ಚಿಕಿತ್ಸೆಯನ್ನು ನೀಡುವುದು ಸುಲಭಸಾಧ್ಯವೇನಲ್ಲ. 

ಸಮಸ್ಯೆಯ ಮೂಲ 

ಸಾಮಾನ್ಯವಾಗಿ ಪುಟ್ಟ ಕಂದನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳಿಗೆ ಸ್ತನ್ಯಪಾನ ಮತ್ತು ತದನಂತರ ಪ್ರೋಟೀನ್, ಜೀವಸತ್ವಗಳು,ಖನಿಜ-ಲವಣಗಳು,ಅಯೋಡಿನ್ ಇತ್ಯಾದಿಗಳು ಅತೀ ಅವಶ್ಯಕ ಎನಿಸುತ್ತವೆ. ಮಕ್ಕಳು ಸೇವಿಸುವ ಆಹಾರದಲ್ಲಿ ಇವೆಲ್ಲವುಗಳ ಅಥವಾ ಇವುಗಳಲ್ಲಿ ಒಂದೆರಡು ಅಂಶಗಳ ಕೊರತೆಯಿಂದಾಗಿಯೂ, ಅಪೌಷ್ಟಿಕತೆ ಉದ್ಭವಿಸಬಲ್ಲದು. ಬಹುತೇಕ ಕುಟುಂಬಗಳಲ್ಲಿ ಬಡತನದಿಂದಾಗಿಯೇ ತಲೆದೋರುವ ಈ ಸಮಸ್ಯೆಯು, ಇತ್ತೀಚಿಗೆ ಶ್ರೀಮಂತರ ಕುಟುಂಬಗಳಲ್ಲಿ ಮತ್ತು ಕಾಲೇಜು ಕನ್ಯೆಯರಲ್ಲಿ ಪತ್ತೆಯಾಗುತ್ತಿದೆ. ಭಾರತೀಯರ ಆಹಾರ ಸೇವನಾ ಪದ್ದತಿಯಲ್ಲಿ ಪಾಶ್ಚಾತ್ಯರ ಪ್ರಭಾವ ಹಾಗೂ ತಮ್ಮ ಮೈಮಾಟವನ್ನು ಆಕರ್ಷಕವಾಗಿ ಇರಿಸಿಕೊಳ್ಳಲು ಯುವತಿಯರು ಅನುಸರಿಸುವ "ಡಯಟಿಂಗ್ " ಕೂಡಾ ಇದಕ್ಕೆ ಕಾರಣವಾಗಿರಬಹುದು!. 

ಹಸುಗೂಸುಗಳಿಗೆ ಕಾರಣಾಂತರಗಳಿಂದ ಅವಶ್ಯಕ ಪ್ರಮಾಣದ ತಾಯಿಯ ಮೊಲೆಹಾಲು ಅಥವಾ ಹಸುವಿನ ಹಾಲು ದೊರೆಯದೇ ಇರುವುದರಿಂದ ಮತ್ತು ಕೆಲ ಮಾತೆಯರು ತಮ್ಮ ಕಂದನಿಗೆ ಎರಡು ವರ್ಷ ತುಂಬುವ ತನಕ ಒತ್ತಾಯದಿಂದ ಎದೆಹಾಲು ಉಣಿಸುವುದರಿಂದ , ಇಂತಹ ಮಕ್ಕಳು ಇತರ ಆಹಾರಗಳನ್ನು ಸೇವಿಸಲು ನಿರಾಕರಿಸುವುದರಿಂದಲೂ ಪೋಷಕಾಂಶಗಳ ನ್ಯೂನತೆ ಬಾಧಿಸಬಲ್ಲದು. ಒಂದೆರಡು ವರ್ಷ ವಯಸ್ಸಿನ ಮಕ್ಕಳು ಅವಶ್ಯಕ ಪ್ರಮಾಣದ ಆಹಾರಪದಾರ್ಥಗಳನ್ನು ನಿರಾಕರಿಸಿ, ಕೇವಲ ಒಂದೆರಡು ಬಿಸ್ಕಿಟ್,ರಸ್ಕ್ ಅಥವಾ ಬಟರ್ ಸೇವಿಸುವುದು ಅಥವಾ ಕಾಫಿ-ಚಹಾ ಗಳಂತಹ ಪೇಯಗಳನ್ನು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದು ಮತ್ತು ಕಾಲೇಜು ಕನ್ಯೆಯರು ಬಳುಕುವ ಬಳ್ಳಿಯಂತಹ ಅಂಗಸೌಷ್ಟವವನ್ನು ಗಳಿಸಲು ಡಯಟಿಂಗ್ ಮಾಡುವುದು ಕೂಡಾ ಈ ಸಮಸ್ಯೆಯನ್ನು ಹುಟ್ಟುಹಾಕಲು ಕಾರಣವೆನಿಸುತ್ತದೆ. 

ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದ ಕಾರಣದಿಂದಾಗಿ ಹಾಗೂ ವೈಯುಕ್ತಿಕ ಸ್ವಚ್ಚತೆಯನ್ನು ಪರಿಪಾಲಿಸದೇ ಇರುವುದರಿಂದ ಉದ್ಭವಿಸಬಲ್ಲ "ಜಂತು ಹುಳ " ಗಳ ಪೀಡೆಯೂ ಪೌಷ್ಟಿಕಾಂಶಗಳ ನ್ಯೂನತೆ, ರಕ್ತಹೀನತೆ ಮುಂತಾದ ತೊಂದರೆಗಳಿಗೆ ಕಾರಣವೆನಿಸುತ್ತಿದೆ. ಪೌಷ್ಟಿಕಾಂಶ ರಹಿತ ಆಹಾರಗಳನ್ನೇ ಸೇವಿಸಿದ ಗರ್ಭಿಣಿಯರಲ್ಲಿ ಹುಟ್ಟುವ ಮಕ್ಕಳೂ ಇದೇ ಕಾರಣದಿಂದಾಗಿ ಕಡಿಮೆ ತೂಕ,ಕುಂಠಿತ ಬೆಳವಣಿಗೆ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಾರೆ. 

ಪರಿಹಾರವೇನು?

ಅದೇ ತಾನೇ ಜನಿಸಿದ ಕೂಸಿಗೆ ಮುಂದಿನ ಆರು ತಿಂಗಳುಗಳ ಕಾಲ ತಾಯಿಯ ಮೊಲೆಹಾಲೇ ಪರಿಪೂರ್ಣ ಆಹಾರವಾಗಿರುತ್ತದೆ. ಕಾರಣಾಂತರಗಳಿಂದ ತಾಯಿಯ ಎದೆಹಾಲು ದೊರೆಯದೇ ಇದ್ದಲ್ಲಿ, ಇದಕ್ಕೆ ಬದಲಾಗಿ ಹಸುವಿನ ಹಾಲನ್ನು ನೀಡಬಹುದು. ಆರು ತಿಂಗಳು ಕಳೆದ ಬಳಿಕ ಬೇಯಿಸಿದ ಅರೆಘನ ಆಹಾರ,ಆಯ್ದ ಹಣ್ಣುಗಳು-ಹಣ್ಣಿನ ರಸಗಳನ್ನು ನೀಡಲು ಆರಂಭಿಸಿದರೂ,ಇದರೊಂದಿಗೆ ತಾಯಿಯ ಎದೆಹಾಲನ್ನು ನೀಡಲೇಬೇಕು. ಕ್ರಮೇಣ ಬೇಯಿಸಿದ ತರಕಾರಿ,ಬೇಳೆಕಾಳುಗಳು, ಗೋಧಿ-ರಾಗಿಗಳಿಂದ ಮನೆಯಲ್ಲೇ ಸಿದ್ಧಪಡಿಸಿದ ಅಥವಾ ಅನಿವಾರ್ಯವೆನಿಸಿದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಶಿಶು ಆಹಾರಗಳನ್ನು ನೀಡುತ್ತ ಬಂದು, ಒಂದು ವರ್ಷ ವಯಸ್ಸಾದ ಬಳಿಕ ನಾವು ಸೇವಿಸುವ ಆದರೆ ಮಗು ಜೀರ್ಣಿಸಿಕೊಳ್ಳಬಲ್ಲ ಆಹಾರಗಳನ್ನು ನೀಡಬಹುದು. 

ನಾವು ಪ್ರತಿನಿತ್ಯ ಸೇವಿಸುವ ದವಸಧಾನ್ಯಗಳು,ಬೇಳೆಕಾಳುಗಳು,ಹಸಿರುಸೊಪ್ಪು- ತರಕಾರಿಗಳು,ಹಣ್ಣುಹಂಪಲುಗಳು, ಹಾಲು,ಮೊಸರು,ಬೆಣ್ಣೆ,ತುಪ್ಪ,ಎಣ್ಣೆ,ಮೊಟ್ಟೆ,ಮೀನು ಮತ್ತು ಮಾಂಸಗಳಲ್ಲಿ ವಿವಿಧರೀತಿಯ ಪೋಷಕಾಂಶಗಳು ಇರುತ್ತವೆ. ಇವುಗಳನ್ನು ಸೂಕ್ತ ಪ್ರಮಾಣದಲ್ಲಿ, ಹಿತವಾಗಿ-ಮಿತವಾಗಿ ಸೇವಿಸುವುದರಿಂದ ನಮ್ಮ ಶರೀರದ ಬೆಳವಣಿಗೆ,ಶರೀರಕ್ಕೆ ಬೇಕಾದ ಶಕ್ತಿಗಳೊಂದಿಗೆ,ಆರೋಗ್ಯದ ರಕ್ಷಣೆಯೂ ಸುಲಭಸಾಧ್ಯ. ಇದೇ ಕಾರಣದಿಂದಾಗಿ "ಸಮತೋಲಿತ ಆಹಾರ " ಸೇವನೆಯನ್ನು ದಿನನಿತ್ಯ ಪರಿಪಾಲಿಸಿದಲ್ಲಿ, ಪೌಷ್ಟಿಕಾಂಶಗಳ ಕೊರತೆ ಹಾಗೂ ತತ್ಪರಿಣಾಮವಾಗಿ ಉದ್ಭವಿಸಬಲ್ಲ ವ್ಯಾಧಿಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು   

No comments:

Post a Comment