Wednesday, August 14, 2013

CHARMA ROGAGALIGE KARMAPHALA KARANAVALLA !



                                ಚರ್ಮರೋಗಗಳಿಗೆ ಕರ್ಮಫಲ ಕಾರಣವಲ್ಲ !

ಅನೇಕ  ವರ್ಷಗಳಿಂದ ಚರ್ಮರೋಗವೊಂದರಿಂದ ಬಳಲುತ್ತಿದ್ದ ಸೂರಪ್ಪನು ಹಲವಾರು ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಂಡಿದ್ದರೂ,ಆತನ ಕಾಯಿಲೆ ಮಾತ್ರ ಗುಣವಾಗಿರಲಿಲ್ಲ. ಇದೇ ಕಾರಣದಿಂದಾಗಿ ತನ್ನ ಅಂಗಡಿಯ ಬಳಿ ನೂತನ ಚಿಕಿತ್ಸಾಲಯವನ್ನು ಆರಂಭಿಸಿದ್ದ ಚರ್ಮರೋಗ ತಜ್ಞರನ್ನು ಭೇಟಿಯಾಗಿ,ತನ್ನ ಕಾಯಿಲೆಯನ್ನು ವಾಸಿಮಾಡುವಂತೆ ಅಂಗಲಾಚಿದ್ದನು. 
ಸೂರಪ್ಪನನ್ನು  ಬಾಧಿಸುತ್ತಿರುವ ಚರ್ಮವ್ಯಾಧಿಯು "ಸೋರಿಯಾಸಿಸ್" ಎಂದು ನಿಖರವಾಗಿ ಗುರುತಿಸಿದ್ದ ವೈದ್ಯರು, ಸುದೀರ್ಘ ಕಾಲ ಪೀಡಿಸುವ ಈ ವ್ಯಾಧಿಗೆ ಸುದೀರ್ಘ ಕಾಲ ಔಷದ ಸೇವನೆ ಅನಿವಾರ್ಯವೆಂದು ತಿಳಿಸಿ, ಸೂಕ್ತ ಔಷದಗಳನ್ನು ನೀಡಿದ್ದರು. ವೈದ್ಯರು ನೀಡಿದ ಔಷದಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸೂರಪ್ಪನು, ಆಹಾರಸೇವನೆಯಲ್ಲಿ ತಾನು ಪರಿಪಾಲಿಸಬೇಕಾದ " ಪಥ್ಯ" ಗಳೇನು ? ಎಂದು ವಿಚಾರಿಸಿದ್ದನು. ಮದ್ಯ ಹಾಗೂ ಮಾಂಸಾಹಾರಗಳನ್ನು ವರ್ಜಿಸಿ, ಎಲ್ಲ ವಿಧದ ತರಕಾರಿ,ಹಣ್ಣುಗಳು ಮತ್ತು ಮೀನುಗಳನ್ನು ಯಥೇಚ್ಛವಾಗಿ ಸೇವಿಸುವಂತೆ ವೈದ್ಯರು ಹೇಳಿದಾಗ ಸೂರಪ್ಪನಿಗೆ ಗಾಬರಿಯಾಗಿತ್ತು. ಮರುಕ್ಷಣದಲ್ಲೇ ದುರ್ದಾನ ಪಡೆದವನಂತೆ ಚಿಕಿತ್ಸಾಲಯದಿಂದ ಹೊರನಡೆದ ಸೂರಪ್ಪನು, ಮತ್ತೆ ಎಂದಿಗೂ ಅತ್ತ ತಲೆಹಾಕಿರಲಿಲ್ಲ. 
ಸೂರಪ್ಪನ ವಿಚಿತ್ರ ವರ್ತನೆಗೆ ನಿರ್ದಿಷ್ಟ ಕಾರಣವೂ ಇದ್ದಿತು. ಕಳೆದ ಮೂರು ವರ್ಷಗಳಲ್ಲಿ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವಿಭಿನ್ನ ಪದ್ದತಿಗಳ ವೈದ್ಯರು, ಆತನಿಗೆ ಹಲವಾರು ವಿಧದ ತರಕಾರಿ,ಹಣ್ಣುಗಳು ಮತ್ತು ಮೀನು-ಮಾಂಸಗಳನ್ನು ಸೇವಿಸಲೆಬಾರದೆಂದು ಎಚ್ಚರಿಕೆಯನ್ನು ನೀಡಿದ್ದರು. ಜೊತೆಗೆ ಚಿಕಿತ್ಸೆಯ ಅವಧಿಯಲ್ಲಿ "ಅಪಥ್ಯ"ಆಹಾರಗಳನ್ನು ಸೇವಿಸಿದಲ್ಲಿ ಆತನ ಚರ್ಮರೋಗ ಗುಣವಾಗದೆಂದು ಹೇಳಿದ್ದರು. ಇದೇ ಕಾರಣದಿಂದಾಗಿ ಈ ಚರ್ಮರೋಗ ತಜ್ಞರು ಸೂಚಿಸಿದ (ಅಪಥ್ಯ) ಆಹಾರಗಳನ್ನು ಸೇವಿಸಲು ಸಿದ್ಧನಿಲ್ಲದ ಸೂರಪ್ಪನು ಚಿಕಿತ್ಸಾಲಯದಿಂದ ಹೊರನಡೆದಿದ್ದನು!. ಆದರೆ ಕಟ್ಟುನಿಟ್ಟಿನ ಪಥ್ಯಗಳನ್ನು ಸೂಚಿಸಿದ್ದ ವೈದ್ಯರ ಚಿಕಿತ್ಸೆ ಫಲಪ್ರದವೆನಿಸದಿದ್ದುದು ಏಕೆಂದು ಅವಿದ್ಯಾವಂತ ಸೂರಪ್ಪನ ಮನಸ್ಸಿಗೆ ಹೊಳೆದಿರಲಿಲ್ಲ. 

ತಪ್ಪುಕಲ್ಪನೆಗಳು 
ವೈವಿಧ್ಯಮಯ ಚರ್ಮವ್ಯಾಧಿಗಳ ಬಗ್ಗೆ ಭಾರತೀಯರಲ್ಲಿ ಇರುವಷ್ಟು ತಪ್ಪುಕಲ್ಪನೆಗಳು ಹಾಗೂ ಧಾರ್ಮಿಕ ಮತ್ತು ಮೂಢನಂಬಿಕೆಗಳು, ಪ್ರಾಯಶಃ ಜಗತ್ತಿನ ಯಾವುದೇ ದೇಶಗಳ ನಿವಾಸಿಗಳಲ್ಲಿ ಇರಲಾರದು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅದೇ ರೀತಿಯಲ್ಲಿ ಚರ್ಮವ್ಯಾಧಿಗಳ ಉಗಮ,ಚಿಕಿತ್ಸೆ ಮತ್ತು ರೋಗಿಗಳು ಆಹಾರ ಸೇವನೆಯಲ್ಲಿ ಪರಿಪಾಲಿಸಬೇಕಾದ  ಪಥ್ಯಗಳ ಬಗ್ಗೆ ಗ್ರಾಮೀಣ ಮತ್ತು ಅವಿದ್ಯಾವಂತ ಜನರಲ್ಲಿ ಬೇರೂರಿರುವ ನಂಬಿಕೆಗಳು ಅನೇಕ ವಿದ್ಯಾವಂತರಲ್ಲೂ ಇರುವುದು ಸುಳ್ಳೇನಲ್ಲ. 
ಉದಾಹರಣೆಗೆ ಇಂದಿಗೂ ಕರ್ನಾಟಕದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಪುಟ್ಟ ಮಕ್ಕಳಿಗೆ "ಸೀತಾಳೆ ಸಿಡುಬು" ಅಥವಾ "ದಡಾರ " ಬಾಧಿಸಿದ ಸಂದರ್ಭದಲ್ಲಿ, ಜನರು ತಮ್ಮ ಮನೆಗೆ "ದೇವಿ" ಬಂದಿರುವಳೆಂದು ನಂಬಿ ಸಂಭ್ರಮಿಸುತ್ತಾರೆ. ಜೊತೆಗೆ ದೇವಿಗೆ ಶ್ರದ್ಧಾಭಾಕ್ತಿಪೂರ್ವಕವಾಗಿ  ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ. ಆದರೆ ವ್ಯಾಧಿಪೀದಿತ ಮಕ್ಕಳಿಗೆ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಲು ಖಡಾ ಖಂಡಿತವಾಗಿ ನಿರಾಕರಿಸುತ್ತಾರೆ!. 
ಅದೇ ರೀತಿಯಲ್ಲಿ ವೆರಿಸೆಲ್ಲಾ ವೈರಸ್ ಗಳಿಂದ ಉದ್ಭವಿಸುವ "ಸರ್ಪಸುತ್ತು" (ವೈದ್ಯಕೀಯ ಪರಿಭಾಷೆಯಲ್ಲಿ ಹರ್ಪಿಸ್ ) ಎಂದು ಜನಸಾಮಾನ್ಯರು ಹೆಸರಿಸಿರುವ ವ್ಯಾಧಿಗೆ ಸೂಕ್ತ ಚಿಕಿತ್ಸೆ ಲಭ್ಯವಿದ್ದರೂ,ಮಂತ್ರ-ತಂತ್ರ ಮತ್ತು ಗಿಡಮೂಲಿಕೆಗಳ ಔಷದಗಳನ್ನು ಪ್ರಯೋಗಿಸುತ್ತಾರೆ. ತತ್ಪರಿಣಾಮವಾಗಿ ವ್ಯಾಧಿ ಉಲ್ಬಣಿಸಿದ ಬಳಿಕ ತಜ್ಞ ವೈದ್ಯರ ಬಳಿ ಧಾವಿಸುತ್ತಾರೆ. ಇದಕ್ಕೂ ಮಿಗಿಲಾಗಿ ಸೀತಾಳೆ ಸಿಡುಬು ಹಾಗೂ ಸರ್ಪಸುತ್ತುಗಳನ್ನು ಮತ್ತು ದಡಾರವನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದೆ ಎಂದು ವೈದ್ಯರು ಹೇಳಿದರೂ, ಅನೇಕ ವಿದ್ಯಾವಂತರೂ ಇದನ್ನು ನಂಬುವುದಿಲ್ಲ. 
ತೊನ್ನು- ವಿಟಿಲಿಗೊ 
"ತೊನ್ನು" ಎಂದು ಕರೆಯಲ್ಪಡುವ ಚರ್ಮವ್ಯಾಧಿ ಪೀಡಿತರು, ತಮ್ಮ ಕಾಯಿಲೆಗೆ ಪೂರ್ವಜನ್ಮದ ಕರ್ಮಫಲ ಅಥವಾ ನಾಗದೋಷವೇ ಕಾರಣವೆಂದು ನಂಬಿ, ದೋಷ ಪರಿಹಾರಾರ್ಥ ಪೂಜೆ ಪುನಸ್ಕಾರಗಳನ್ನು ನಡೆಸುವ ಅಥವಾ ನಿರ್ದಿಷ್ಟ ದೇವತೆಗಳಿಗೆ "ಹರಕೆ" ಹೇಳಿಕೊಳ್ಳುವ ಸಂಪ್ರದಾಯವನ್ನು ಈ ವೈಜ್ಞಾನಿಕ ಯುಗದಲ್ಲೂ ಪರಿಪಾಲಿಸುತ್ತಾರೆ. ಆದರೆ ಧಾರ್ಮಿಕ-ವೈದಿಕ ಪರಿಹಾರಗಳು ಫಲಪ್ರದವೆನಿಸದೇ  ತೊನ್ನಿನ ಬಿಳಿಯ ಮಚ್ಚೆಗಳು ಶರೀರದ ಅನೇಕ ಭಾಗಗಳಲ್ಲಿ ಹರಡಿದ ಬಳಿಕ, ಚರ್ಮರೋಗ ತಜ್ಞರ ಚಿಕಿತ್ಸೆಯನ್ನು ಪ್ರಯೋಗಿಸುತ್ತಾರೆ. ಆದರೆ ತೊನ್ನು ಆರಂಭವಾಗಿ ಅದಾಗಲೇ ಒಂದೆರಡು ವರ್ಷಗಳು ಕಳೆದಿರುವುದರಿಂದ ವೈದ್ಯರ ಚಿಕಿತ್ಸೆಯು ಕ್ಷಿಪ್ರಗತಿಯಲ್ಲಿ ಪರಿಣಾಮವನ್ನು ತೋರದಿರುವುದರಿಂದ, ಈ ವ್ಯಾಧಿಗೆ ಸೂಕ್ತ ಚಿಕಿತ್ಸೆಯೇ ಇಲ್ಲವೆಂದು ಭಾವಿಸುತ್ತಾರೆ. 
ಚರ್ಮರೋಗಗಳ ಪರಿಹಾರಕ್ಕಾಗಿ ದೇವರಿಗೆ ಹರಕೆಯನ್ನು ಹೇಳಿಕೊಳ್ಳುವ ಮನೋಭಾವನೆಯು ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ. ಮನುಷ್ಯನನ್ನು ಬಾಧಿಸಬಲ್ಲ ಚರ್ಮವ್ಯಾಧಿಗಳು ಇತರ ಕಾಯಿಲೆಗಳಂತೆಯೇ ಉದ್ಭವಿಸುವ ಮತ್ತು ಇವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ವಿಚಾರವನ್ನು ಅವಿದ್ಯಾವಂತರಿಗೆ ಮನದಟ್ಟು ಮಾಡುವುದು ಸುಲಭಸಾಧ್ಯವೇನಲ್ಲ. ಉದಾಹರಣೆಗೆ ಆಧುನಿಕ ವೈದ್ಯಪದ್ದತಿಯಲ್ಲಿ "ವಾರ್ಟ್ಸ್" ಹಾಗೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೋಲಿ ಎಂದು( ತುಳುವಿನಲ್ಲಿ ಕೆಡು ) ಕರೆಯುವ ಚರ್ಮರೋಗಕ್ಕೆ ಒಂದುವಿಧದ ವೈರಸ್ ಗಳೇ ಕಾರಣವಾಗಿವೆ. ಆದರೆ ಇದನ್ನು ಅರಿಯದ ಅಥವಾ ನಂಬದ ಜನರು, ತಮ್ಮ ಶರೀರದ ಮೇಲೆ ನರೋಲಿಗಳು ಪ್ರತ್ಯಕ್ಷವಾದೊಡನೆ ನಿರ್ದಿಷ್ಟ ದೇವತೆಗಳಿಗೆ ಹರಕೆಯನ್ನು ಹೇಳಿಕೊಳ್ಳುತ್ತಾರೆ. ಆದರೆ ನಾಲ್ಕಾರು ವರ್ಷಗಳಲ್ಲಿ ಇವುಗಳ ಸಂಖ್ಯೆ ದ್ವಿಗುಣಿಸುತ್ತಾ ಹೋದಬಳಿಕ, ಚರ್ಮರೋಗ ತಜ್ಞರ ಚಿಕಿತ್ಸೆಗೆ ಶರಣಾಗುತ್ತಾರೆ. 
ಕೆಲ ವ್ಯಕ್ತಿಗಳಲ್ಲಿ ಇಂತಹ ನರೋಲಿಗಳು ಒಂದೆರಡು ವರ್ಷಗಳ ಬಳಿಕ ಸ್ವಯಂ ಶಮನಗೊಳ್ಳುತ್ತವೆ. ಇಂತಹ ವ್ಯಕ್ತಿಗಳು ದೇವರಿಗೆ ಹರಕೆಯನ್ನು ಹೊತ್ತಿದ್ದಲ್ಲಿ, ಇದರ ಶ್ರೇಯಸ್ಸು ದೇವರಿಗೆ ಸಲ್ಲುವುದರೊಂದಿಗೆ ಸಾಕಷ್ಟು ಪ್ರಚಾರಕ್ಕೂ ಕಾರಣವೆನಿಸುತ್ತದೆ!. 
ಅನುಭವೀ ಚರ್ಮರೋಗ ತಜ್ಞರು ಹೇಳುವಂತೆ ಬಹುತೇಕ ಭಾರತೀಯರು ತಮ್ಮನ್ನು ಪೀಡಿಸುವ ಚರ್ಮವ್ಯಾಧಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದರೂ,ವಾಡಿಕೆಯಲ್ಲಿರುವ ಪಥ್ಯಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆ. ನಿಜ ಹೇಳಬೇಕಿದ್ದಲ್ಲಿ ಅರ್ಟಿಕೇರಿಯ, ಸೆಬೊರಿಕ್ ಡರ್ಮಟೈಟಿಸ್, ಎಟೋಪಿಕ್ ಡರ್ಮಟೈಟಿಸ್ ಇತ್ಯಾದಿ ಚರ್ಮವ್ಯಾಧಿಗಳಲ್ಲಿ ಕೆಲವಿಧದ ಆಹಾರ ಪದಾರ್ಥಗಳನ್ನು ಸೇವಿಸದಂತೆ ವೈದ್ಯರು ಸೂಚಿಸುತ್ತಾರೆ. ಆದರೆ ಜನಸಾಮಾನ್ಯರು ಯಾವುದೇ ಚರ್ಮವ್ಯಾಧಿ ಬಾಧಿಸಿದಾಗ ಮತ್ತು ಇದು ಗುಣವಾದ ಬಳಿಕವೂ, ಸುದೀರ್ಘಕಾಲ ಕಡುಪಥ್ಯವನ್ನು ಪರಿಪಾಲಿಸುತ್ತಾರೆ. ತತ್ಪರಿಣಾಮವಾಗಿ ಇಂತಹ ವ್ಯಕ್ತಿಗಳ ಶರೀರದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವ, ಚಿಕಿತ್ಸೆಯ ಅವಧಿ ಇನ್ನಷ್ಟು ಹೆಚ್ಚುವ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಪೋಷಕಾಂಶಗಳ ಕೊರತೆಯಿಂದ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆಗಳಿವೆ. ಸುದೀರ್ಘಕಾಲ ಬಾಧಿಸುವ ಚರ್ಮವ್ಯಾಧಿಗಳಲ್ಲಿ ಇಂತಹ ಸಮಸ್ಯೆಗಳ ಸಂಭಾವ್ಯತೆ ಹೆಚ್ಚಾಗಿರುತ್ತದೆ. 
ಅನೇಕ ವರ್ಷಗಳಿಂದ ಎಗ್ಸಿಮಾ ಅಥವಾ ಸೋರಿಯಾಸಿಸ್ ಗಳಂತಹ ಚರ್ಮವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗಗಳಂತೆಯೇ, ಕೆಲವಿಧದ ಚರ್ಮರೋಗಗಳನ್ನು ನಿಯಂತ್ರಣದಲ್ಲಿ ಇರಿಸಲು ಜೀವನಪರ್ಯಂತ ಔಷದ ಸೇವನೆ ಅನಿವಾರ್ಯವೆಂದು ವೈದ್ಯರು ತಿಳಿಸಿದಾಗ ಆಶ್ಚರ್ಯವಾಗುತ್ತದೆ. ಆದರೆ ತಜ್ಞ ವೈದ್ಯರ ಅಭಿಪ್ರಾಯಕ್ಕೆ ಬೆಲೆನೀಡದ ಕೆಲರೋಗಿಗಳು, ತಮ್ಮ ಬಂಧುಮಿತ್ರರು ಸೂಚಿಸುವ ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪ್ರಯೋಗಿಸಿ, ಅಪೇಕ್ಷಿತ ಪರಿಣಾಮ ದೊರೆಯದಿದ್ದಾಗ ಹತಾಶರಾಗುತ್ತಾರೆ. ಇಷ್ಟು ಮಾತ್ರವಲ್ಲ, ಇಂತಹ ರೋಗಿಗಳು ಯಾವುದೇ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ "ನಕಲಿ ವೈದ್ಯ"ರ ಬಲೆಗೆ ಸುಲಭವಾಗಿ ಸಿಲುಕುತ್ತಾರೆ. ಯಾವುದೇ ರೀತಿಯ ವೈದ್ಯಕೀಯ ಅರ್ಹತೆಗಳೇ ಇಲ್ಲದ ನಕಲಿ ವೈದ್ಯರ ಚಿಕಿತ್ಸೆಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿದರೂ, ತಾವು ರೋಗಮುಕ್ತರಾಗದಿರಲು ತಮ್ಮ "ಗ್ರಹಚಾರ"ವೇ ಕಾರಣವೆಂದು ಪರಿತಪಿಸುತ್ತಾರೆ. 
ನಿರ್ಲಕ್ಷ್ಯ 
ಚರ್ಮರೋಗ ಪೀಡಿತರು ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿಳಂಬಿಸುತ್ತಾರೆ. ಏಕೆಂದರೆ ಇವುಗಳು ಅನ್ಯ ಕಾಯಿಲೆಗಳಷ್ಟು ಅಪಾಯಕಾರಿ ಅಲ್ಲ ಎನ್ನುವ ನಂಬಿಕೆ ಇದಕ್ಕೊಂದು ಪ್ರಮುಖ ಕಾರಣವೆನಿಸಿದೆ. ಚರ್ಮರೋಗ ಪ್ರತ್ಯಕ್ಷವಾದೊಡನೆ ಮನೆಮದ್ದು ಅಥವಾ ಹಳ್ಳಿಮದ್ದುಗಳನ್ನು ಪ್ರಯೋಗಿಸುವ ರೋಗಿಗಳು,ತಮ್ಮ ವ್ಯಾಧಿ ಸಾಕಷ್ಟು ಉಲ್ಬಣಿಸಿದ ಬಳಿಕವೇ ಚರ್ಮರೋಗ ತಜ್ಞರನ್ನು ಸಂದರ್ಶಿಸುವುದು ಅಪರೂಪವೇನಲ್ಲ. ಉದಾಹರಣೆಗೆ ಸಿಂಪಲ್ ಅಕ್ಯೂಟ್ ಎಕ್ಸಿಮಾ ವ್ಯಾಧಿಯು ಶರೀರದಾದ್ಯಂತ ಹರಡಿದ ಬಳಿಕ ಇದನ್ನು ನಿಯಂತ್ರಿಸುವುದು ಸುಲಭವೇನಲ್ಲ. ಆದರೆ ಈ ವ್ಯಾಧಿ ಆರಂಭವಾದೊಡನೆ ಚಿಕಿತ್ಸೆಯನ್ನು ಪ್ರಾರಂಭಿಸಿದಲ್ಲಿ, ಇದನ್ನು ನಿಯಂತ್ರಿಸುವುದು ಕಷ್ಟಕರವೆನಿಸುವುದಿಲ್ಲ. 
ಈ ರೀತಿಯಲ್ಲಿ ಭಾರತೀಯರ ತಪ್ಪುಕಲ್ಪನೆಗಳು,ಮೂಢನಂಬಿಕೆಗಳು ಮತ್ತು ನಿರ್ಲಕ್ಷ್ಯಗಳಿಂದಾಗಿ, ಚರ್ಮರೋಗ ಪೀಡಿತರನ್ನು ರೋಗಮುಕ್ತರನ್ನಾಗಿಸುವುದು ತಜ್ಞ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಅದೃಷ್ಟವಶಾತ್ ಇಂತಹ ವ್ಯಾಧಿಗಳ ಬಗ್ಗೆ ಜನಸಾಮಾನ್ಯರಿಗೆ ಮಾಧ್ಯಮಗಳ ಮೂಲಕ ಸಾಕಷ್ಟು ಮಾಹಿತಿ ದೊರೆಯುತ್ತಿರುವುದರಿಂದಾಗಿ, ಅನೇಕ ರೋಗಿಗಳು ಪ್ರಾರಂಭಿಕ ಹಂತದಲ್ಲೇ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯುತ್ತಿರುವುದರಿಂದ ದೀರ್ಘಕಾಲೀನ ಚರ್ಮವ್ಯಾಧಿಗಳ ಹಾವಳಿ ಸಾಕಷ್ಟು ಕಡಿಮೆಯಾಗಿದೆ!. 

ಡಾ . ಸಿ . ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ದಿ. ೧೬- ೦೭-೨೦೦೯ ರಂದು ಪ್ರಕಟವಾಗಿದ್ದ ಲೇಖನ 

ಚಿತ್ರ- ಮಂತ್ರ-ತಂತ್ರ ಮತ್ತು ಹಳ್ಳಿಮದ್ದುಗಳಿಂದ ತೀವ್ರವಾಗಿ ಉಲ್ಬಣಿಸಿರುವ ಸರ್ಪಸುತ್ತು.                                                                                                                           

No comments:

Post a Comment