Tuesday, August 13, 2013


                                  ಡಿಯೋ ಸ್ಪ್ರೇ - ನಿಜಕ್ಕೂ ಸುರಕ್ಷಿತವೇ ?

ದೃಶ್ಯ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಡಿಯೋ ಸ್ಪ್ರೇ ಗಳ ಆಕರ್ಷಕ ಜಾಹೀರಾತುಗಳಿಂದ ಪ್ರಭಾವಿತರಾದ ಅನೇಕ ವೀಕ್ಷಕರು, ದುಬಾರಿ ಬೆಲೆಯನ್ನು ತೆತ್ತು ಇವುಗಳನ್ನು ಖರೀದಿಸಿ ಬಳಸುತ್ತಾರೆ. ಇಂತಹ ಉತ್ಪನ್ನಗಳನ್ನು ಧಾರಾಳವಾಗಿ ಬಳಸುತ್ತಿರಲು, ನಮ್ಮ ಆರೋಗ್ಯದ ಮೇಲೆ ಇವುಗಳು ಬೀರಬಹುದಾದ ಹಾನಿಕಾರಕ ಪರಿಣಾಮಗಳ ಅರಿವಿಲ್ಲದಿರುವುದು ಪ್ರಮುಖ ಕಾರಣವೆನಿಸಿದೆ. 

ನೂರಾರು ಟೆಲಿವಿಷನ್ ಚಾನೆಲ್ ಗಳಲ್ಲಿ ದಿನನಿತ್ಯ ಪ್ರಸಾರವಾಗುವ ಡಿಯೋ ಸ್ಪ್ರೇ ಒಂದರ ಜಾಹೀರಾತನ್ನು ನೀವೂ ಕಂಡಿರಲೇ ಬೇಕು. ಈ ದುರ್ಗಂಧ ನಿವಾರಕವನ್ನು ತನ್ನ ಶರೀರದ ಮೇಲೆ ಸಿಂಪಡಿಸಿಕೊಂಡ ತರುಣನೊಬ್ಬನ ಮೇಲೆ ಹಲವಾರು ಸುಂದರಿಯರು ಮುಗಿಬೀಳುವ ಅಥವಾ ಕಿಂದರಿ ಜೋಗಿಯನ್ನು ಹಿಂಬಾಲಿಸಿದ ಇಲಿಗಳಂತೆ ಬೆನ್ನುಹತ್ತುವ ಜಾಹೀರಾತುಗಳು ನಿಶ್ಚಿತವಾಗಿಯೂ ಹದಿಹರೆಯದವರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ. ಆದರೆ ನಾವಿಂದು ಅತಿಯಾಗಿ ಬಳಸುತ್ತಿರುವ ಅನ್ಯ ಸೌಂದರ್ಯವರ್ಧಕಗಳಂತೆಯೇ,ಈ ದುರ್ಗಂಧ ನಿವಾರಕಗಳೂ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ. 

ಬೆವರು-ಶಾರೀರಿಕ ದುರ್ಗಂಧ 

ಸಾಮಾನ್ಯವಾಗಿ ವಾತಾವರಣದ ತಾಪಮಾನವು ಹೆಚ್ಚಾದಾಗ ಹೊರಾಂಗಣದಲ್ಲಿ ಕರ್ತವ್ಯ ನಿರ್ವಹಿಸುವವರು ಹಾಗೂ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡುವವರು ಧಾರಾಳವಾಗಿ ಬೆವರುತ್ತಾರೆ. ಇನ್ನುಕೆಲವರು ಸುಮ್ಮನೆ ಕುಳಿತಿದ್ದರೂ, ಅತಿಯಾಗಿ ಬೆವರುವಂತಹ ದೇಹಪ್ರಕೃತಿಯನ್ನು ಹೊಂದಿರುತ್ತಾರೆ. ಇವರಲ್ಲಿ ಸಾಕಷ್ಟು ವ್ಯಕ್ತಿಗಳ ಶರೀರವು ತೀವ್ರವಾದ ದುರ್ಗಂಧವನ್ನು ಬೀರುವುದು ಅಪರೂಪವೇನಲ್ಲ. 

ಮನುಷ್ಯನ ಶರೀರದ ವಿವಿಧ ಭಾಗಗಳಲ್ಲಿರುವ ಸ್ವೇದ ಗ್ರಂಥಿಗಳು ಹೊರಸೂಸುವ ಬೆವರು,ಶರೀರದ ಮೇಲ್ಮೈಯಲ್ಲಿ ಸ್ವಾಭಾವಿಕವಾಗಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾಗಳ ಕಾರುಬಾರಿನಿಂದಾಗಿ ಶಾರೀರಿಕ ದುರ್ಗಂಧಕ್ಕೆ ಕಾರಣವೆನಿಸುತ್ತದೆ. ಇಷ್ಟು ಮಾತ್ರವಲ್ಲ, ನಮ್ಮ ಕಂಕುಲಿನಲ್ಲಿನ ಸ್ವೇದಗ್ರಂಥಿಗಳಿಂದ ಸ್ರವಿಸಲ್ಪಡುವ ಬೆವರಿನೊಂದಿಗೆ ವಿಶಿಷ್ಟ ರಾಸಾಯನಿಕವೊಂದು ಉತ್ಪನ್ನವಾಗುತ್ತದೆ. ಹಾಲಿನಂತಹ ಈ ರಾಸಾಯನಿಕದ ಮೇಲೆ,ತೇವಭರಿತ ಹಾಗೂ ಬೆಚ್ಚಗಿನ ಜಾಗದಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾಗಳು ಕಾರ್ಯಾಚರಿಸುವುದರಿಂದ ಕಂಕುಳಿನ ಭಾಗವು ಅಸಹನೀಯ ದುರ್ಗಂಧವನ್ನು ಬೀರುತ್ತವೆ. 

ಬೇಸಗೆಯ ದಿನಗಳಲ್ಲಿ ನಮ್ಮ ಶರೀರವು ತುಸು ಅಧಿಕ ಪ್ರಮಾಣದಲ್ಲಿ ಬೆವರುತ್ತದೆ. ವಾತಾವರಣದ ತಾಪಮಾನದ ಪ್ರಮಾಣವು ಹೆಚ್ಚಿದಾಗ, ನಮ್ಮ ಶರೀರದ ಉಷ್ಣತೆಯನ್ನು ನಿಯಂತ್ರಿಸುವ ಮೂಲಕ ತಂಪಾಗಿಸುವ ಪ್ರಕ್ರಿಯೆಯೇ ಬೆವರುವಿಕೆಯಾಗಿದೆ. ಇದೇ ಕಾರಣದಿಂದಾಗಿ ವಾತಾವರಣದ ತಾಪಮಾನ ಹೆಚ್ಚಿದಾಗ, ಬೆವರುವಿಕೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಶಾರೀರಿಕ ದುರ್ಗಂಧಕ್ಕೆ ಕಾರಣವೆನಿಸಬಲ್ಲ ಈ ಸಮಸ್ಯೆಯನ್ನು ತಡೆಗಟ್ಟಲು ಬಹುತೇಕ ಜನರು ದುರ್ಗಂಧ ನಿವಾರಕ,ಬೆವರು ನಿರೋಧಕ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಆದರೆ ಕೃತಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಇಂತಹ ಉತ್ಪನ್ನಗಳ ಬಳಕೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳು ಮತ್ತು ಇವುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಯಾರೊಬ್ಬರೂ ಚಿಂತಿಸುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಇವುಗಳ ಜನಪ್ರಿಯತೆ ಮತ್ತು ಮಾರಾಟಗಳ ಭರಾಟೆ ಕಿಂಚಿತ್ ಕೂಡಾ ಕಡಿಮೆಯಾಗುತ್ತಿಲ್ಲ!. 

ದುರ್ಗಂಧ ನಿವಾರಕಗಳು 

ಸಾಮಾನ್ಯವಾಗಿ ದುರ್ಗಂಧ ನಿವಾರಕಗಳು ಕೇವಲ ಶಾರೀರಿಕ ದುರ್ಗಂಧವನ್ನು ತೊಡೆದುಹಾಕಲು ಉಪಯುಕ್ತವೆನಿಸುತ್ತವೆ. ಆದರೆ ಬೆವರು ನಿರೋಧಕಗಳು ಮಾತ್ರ ಬೆವರಿನ ಸ್ರಾವವನ್ನೇ ತದೆಗತ್ತುವುದರೊಂದಿಗೆ, ಶಾರೀರಿಕ ದುರ್ಗಂಧವನ್ನೂ ನಿವಾರಿಸುತ್ತವೆ. 

ಬೆವರು ನಿರೋಧಕಗಳು ಚರ್ಮದ ಮೇಲಿರುವ ಸೂಕ್ಷ್ಮಾತಿಸೂಕ್ಷ್ಮ ರಂಧ್ರಗಳನ್ನು ಸಂಕುಚಿತಗೊಳಿಸಿ ಮುಚ್ಚುವ ಮೂಲಕ ಬೆವರುವಿಕೆಯನ್ನು ತಡೆಗಟ್ಟುತ್ತವೆ. ಆದರೆ ದುರ್ಗಂಧ ನಿವಾರಕಗಳಲ್ಲಿರುವ ರಾಸಾಯನಿಕಗಳು ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಮೂಲಕ ದುರ್ಗಂಧವನ್ನು ತಡೆಗಟ್ಟುತ್ತವೆ. ಇವೆರಡೂ ಉತ್ಪನ್ನಗಳು ವಿಭಿನ್ನ ರೀತಿಯಲ್ಲಿ ಶಾರೀರಿಕ ದುರ್ಗಂಧವನ್ನು ತಡೆಗಟ್ಟುವ-ನಿವಾರಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಆದರೆ ಇವುಗಳನ್ನು ಬಳಸುವ ಜನರಿಗೆ, ಇವುಗಳು ಹೊರಸೂಸುವ ಮನಮೋಹಕ ಸುಗಂಧವೇ ಹಿತಕರವೆನಿಸುತ್ತದೆ!. 

ದುರ್ಗಂಧ ನಿವಾರಕ ಮತ್ತು ಬೆವರು ನಿರೋಧಕಗಳ ತಯಾರಿಕೆಯಲ್ಲಿ ಬಳಸುವ ವಿವಿಧ ರಾಸಾಯನಿಕಗಳ ಬಗ್ಗೆ, ಈಗಾಗಲೇ ಸಾಕಷ್ಟು ಅಧ್ಯಯನಗಳನ್ನು ನಡೆಸಲಾಗಿದೆ. ಇವುಗಳ ವರದಿಯಂತೆ ಬೆವರಿನ ಸ್ರಾವವನ್ನೇ ತಡೆಗಟ್ಟುವ ಬೆವರು ನಿರೋಧಕಗಳು ಗಂಭೀರವಾದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ಅಲ್ಯುಮಿನಿಯಂ ಸಂಯುಕ್ತ ವಸ್ತುಗಳು ಮತ್ತು ವಿವಿಧ ಪಾರಾಬೆನ್ ಗಳಂತಹ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ದುರ್ಗಂಧ ನಿವಾರಕಗಳೂ, ನಿಮ್ಮ ಆರೋಗ್ಯಕ್ಕೆ ನಿಶ್ಚಿತವಾಗಿಯೂ ಹಾನಿಯನ್ನು ಉಂಟುಮಾಡುತ್ತವೆ. 

ದುರ್ಗಂಧ ನಿವಾರಕ-ಬೆವರು ನಿರೋಧಕಗಳಲ್ಲಿನ ಅಪಾಯಕಾರಿ ರಾಸಾಯನಿಕಗಳು ಮತ್ತು ಅವುಗಳ ದುಷ್ಪರಿಣಾಮಗಳ ಸಂಕ್ಷಿಪ್ತ ವಿವರಗಳು ಇಂತಿವೆ. ಅಲ್ಯುಮಿನಿಯಂ ಕ್ಲೋರೋ ಹೈಡ್ರೇಟ್ ,ಅಲ್ಯುಮಿನಿಯಂ ಝಿರ್ಕೊನಿಯಮ್ ಟೆಟ್ರಾ ಕ್ಲೋರೋ ಹೈಡ್ರೇಟ್ಸ್ ಅಥವಾ ಅಲ್ಯುಮಿನಿಯಂ ನ ಯಾವುದೇ ಕಾಂಪೌಂಡ್ ಗಳು ಚರ್ಮದ ಮೂಲಕ ಹೀರಲ್ಪಟ್ಟು ಮೆದುಳು ಮತ್ತು ಶರೀರದ ಇತರ ಅಂಗಗಳಲ್ಲಿ ಸಂಗ್ರಹಿಸಲ್ಪಡುತ್ತವೆ. ಈ ದ್ರವ್ಯಗಳು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಅದೇ ರೀತಿಯಲ್ಲಿ ಮಿಥೈಲ್,ಇಥೈಲ್,ಪ್ರೋಪೈಲ್ ಹಾಗೂ ಬುಟೈಲ್ ಪಾರಾಬೆನ್ ಗಳು,ಟೊಲೀನ್ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳು, ನಮ್ಮ ಉಸಿರಿನೊಂದಿಗೆ ಶ್ವಾಸಕೋಶಗಳು ಮತ್ತು ಬಾಯಿಯ ಮೂಲಕ ಉದರವನ್ನು ಸೇರಿದಲ್ಲಿ ವಿಷಕಾರಕ ಪರಿಣಾಮವನ್ನು ಬೀರುತ್ತವೆ. ಚರ್ಮದ ಮೇಲೆ ಲೇಪಿಸಿದ ಅಥವಾ ಸಿಂಪಡಿಸಿದ ಟೊಲೀನ್ ಆರೋಗ್ಯಕ್ಕೆ ಹಾನಿಕರ ಎನಿಸುವುದರೊಂದಿಗೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಕಳೆದ ಒಂದು ದಶಕದಲ್ಲಿ ನಡೆಸಿದ್ದ 13 ಅಧ್ಯಯನಗಳ ವರದಿಗಳಂತೆ,ಪಾರಾಬೆನ್ ಗಳು ಈಸ್ಟ್ರೋಜೆನ್ ಹಾರ್ಮೋನ್ ನಂತಹ ಪರಿಣಾಮವನ್ನು ತೋರುವುದರಿಂದಾಗಿ ಕ್ಯಾನ್ಸರ್ ನ ಕಣಗಳ ಬೆಳವಣಿಗೆಯನ್ನು ವೃದ್ಧಿಸುತ್ತದೆ.   

ದುರ್ಗಂಧ ನಿವಾರಕಗಳಲ್ಲಿ ಸಾಮಾನ್ಯವಾಗಿ ಬಳಸುವ ಟೈಕ್ಲೋಸಾನ್ ಎನ್ನುವ ರಾಸಾಯನಿಕವು ಚರ್ಮದ ಉರಿಯೂತಕ್ಕೂ ಕಾರಣವೆನಿಸಬಲ್ಲದು. ಜೊತೆಗೆ ನಮ್ಮ ಚರ್ಮದ ಮೇಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳೊಂದಿಗೆ, ನಮ್ಮ ಶರೀರಕ್ಕೆ ಉಪಯುಕ್ತವೆನಿಸುವ ಅನ್ಯ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸಬಲ್ಲದು. ಅಮೆರಿಕದ ಎಫ್ ಡಿ ಎ ಸಂಸ್ಥೆಯು ಕೀಟನಾಶಕ ಎಂದು ವರ್ಗೀಕರಿಸಿರುವ ಈ ದ್ರವ್ಯವು ಕ್ಯಾನ್ಸರ್ ವ್ಯಾಧಿಗೂ ಮೂಲವೆನಿಸಬಲ್ಲದು. 

ಇದಲ್ಲದೇ ಪ್ರೋಪೈಲೀನ್ ಗ್ಲೈಕಾಲ್ ಮತ್ತು ಸಿಲಿಕಾಗಳು ಅನುಕ್ರಮವಾಗಿ ಅಲರ್ಜಿ ಪ್ರತಿಕ್ರಿಯೆಗಳಿಗೆ ಮತ್ತು ಸಿಲಿಕಾದಲ್ಲಿ ಬೆರೆತಿರಬಹುದಾದ ಕ್ರಿಸ್ಟಲೈನ್ ಕ್ವಾರ್ಟ್ಜ್ ನಿಂದಾಗಿ,ಕೆಲವೊಂದು ದುರ್ಗಂಧ ನಿವಾರಕ ಉತ್ಪನ್ನಗಳು ಕ್ಯಾನ್ಸರ್ ಕಾರಕವಾಗಿ ಪರಿಣಮಿಸುತ್ತವೆ. ಅನೇಕ ದುರ್ಗಂಧ ನಿವಾರಕ ಉತ್ಪನ್ನಗಳ ಹೊರ ಕವಚಗಳ ಮೇಲೆ" ಸಸ್ಯಗಳಿಂದ ಪಡೆದಿರುವ " ಎಂದು ನಮೂದಿಸಿರಬಹುದಾದ ದ್ರವ್ಯಗಳಲ್ಲೂ ಪಾರಾಬೆನ್ ಗಳು ಮತ್ತು ಪ್ರೋಪೈಲೀನ್ ಗ್ಲೈಕಾಲ್ ಗಳು ಸೇರಿರುತ್ತವೆ. ಈ ಉತ್ಪನ್ನಗಳ ತಯಾರಕರು ಖರೀದಿಸುವ ಕೆಲವೇ ಸಸ್ಯಗಳು ಮಾತ್ರ ಪಾರಾಬೆನ್ ರಹಿತವಾಗಿರುತ್ತವೆ. 

ಇವೆಲ್ಲಾ ಕಾರಣಗಳಿಂದಾಗಿ ದುರ್ಗಂಧ ನಿವಾರಕ ಮತ್ತು ಬೆವರು ನಿರೋಧಕಗಳನ್ನು ಖರೀದಿಸಿ ಬಳಸುವ ಮುನ್ನ,ಈ ಉತ್ಪನ್ನಗಳ ಹೊರ ಕವಚಗಳಲ್ಲಿ, ಮೇಲೆ ನಮೂದಿಸಿದ ಅಪಾಯಕಾರಿ ರಾಸಾಯನಿಕಗಳು ಇವೆಯೇ ಎಂದು ತಿಳಿದುಕೊಳ್ಳುವುದು ಅವಶ್ಯವೂ ಹೌದು. 

ಅಂತಿಮವಾಗಿ ಹೇಳುವುದಾದಲ್ಲಿ ಬೇಸಗೆಯ ದಿನಗಳಲ್ಲಿ ಶಾರೀರಿಕ ದುರ್ಗಂಧದ ಸಮಸ್ಯೆಯನ್ನು ಪರಿಹರಿಸಲು ದಿನದಲ್ಲಿ ಕನಿಷ್ಠ ಎರಡು ಬಾರಿ ಪನ್ನೀರು,ಪರಿಮಳ ಬೀರುವ ಹೂವುಗಳು ಹಾಗೂ ಪುದೀನಾ ಸೊಪ್ಪನ್ನು ಕಿವುಚಿ ಹಾಕಿದ  ನೀರಿನಿಂದ ಸ್ನಾನವನ್ನು ಮಾಡಿ ಬಟ್ಟೆಗಳನ್ನು ಬದಲಾಯಿಸುವುದು ಹಿತಕರ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಶ್ರೀಗಂಧ,ಅರಶಿನ,ಒಂದಿಷ್ಟು ಪಚ್ಚ ಕರ್ಪೂರಗಳ ಮಿಶ್ರಣವನ್ನು ಶರೀರಕ್ಕೆ ಲೇಪಿಸಿಕೊಳ್ಳಿರಿ. ತನ್ಮೂಲಕ ನೈಸರ್ಗಿಕ ವಿಧಾನದಿಂದ ಶಾರೀರಿಕ ದುರ್ಗಂಧವನ್ನು ದೂರವಿರಿಸಿ. 

ಡಾ . ಸಿ . ನಿತ್ಯಾನಂದ ಪೈ,ಪುತ್ತೂರು 

28-01-2011 ಉದಯವಾಣಿ ಪತ್ರಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ 


No comments:

Post a Comment