Thursday, August 22, 2013

Consaguineous marriages


                                   ಸೋದರ ಸಂಬಂಧಿಗಳಲ್ಲಿ ವಿವಾಹ ಸರಿಯೇ?
ಭಾರತದಲ್ಲಿ ಸೋದರ ಸಂಬಂಧಿಗಳ ನಡುವೆ ಜರಗುವ ವಿವಾಹಗಳಲ್ಲಿ ಎರಡು ವಿಧಗಳಿವೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮಂದಿರ ಗಂಡು- ಹೆಣ್ಣು ಮಕ್ಕಳ ನಡುವಿನ ವಿವಾಹವು ಮೊದಲನೆಯ ವಿಧವಾಗಿದ್ದು, ಸೋದರಮಾವನು ತನ್ನ ಅಕ್ಕನ ಹೆಣ್ಣು ಮಗಳನ್ನು ವಿವಾಹವಾಗುವುದು ಎರಡನೆಯ ವಿಧವಾಗಿದೆ. ಈ ರೀತಿಯ ವಿವಾಹಗಳಿಂದಾಗಿ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ - ಜನ್ಮದತ್ತ ಕಾಯಿಲೆಗಳ ಸಂಭಾವ್ಯತೆಯು ಎರಡನೆಯ ವಿಧದ ವಿವಾಹಗಳಲ್ಲಿ ಹೆಚ್ಚಾಗಿರುತ್ತದೆ. 
---------------------------   -------------------------------------                         -------------------------------------          ---------------------------    ಸಹಸ್ರಾರು ವರ್ಷಗಳಿಂದ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ರಕ್ತಸಂಬಂಧಿಗಳ ನಡುವೆ ವಿವಾಹವಾಗುವುದು ರೂಢಿಯಲ್ಲಿದೆ. ಇದಕ್ಕೆ ಭಾರತವೂ ಅಪವಾದವೆನಿಸಿಲ್ಲ. ಭಾರತದ ಹಿಂದೂ ಧರ್ಮೀಯರಲ್ಲಿ ಸೋದರ ಸಂಬಂಧಿಗಳಲ್ಲಿ ವಿವಾಹ ನಡೆಸುವ ಪದ್ಧತಿ ಸಹಸ್ರಾರು ವರ್ಷಗಳಿಂದ ವಾಡಿಕೆಯಲ್ಲಿದೆ. ಮೂಲತಃ ಪ್ರೀತಿ,ವಿಶ್ವಾಸ ಹಾಗೂ ಬಾಂಧವ್ಯಗಳ ದ್ಯೋತಕವೆನಿಸಿದ್ದ ಇಂತಹ ವಿವಾಹಗಳಿಗೆ, ಪರಸ್ಪರ ಜಾತಕಗಳ ಹೊಂದಾಣಿಕೆಯ ಅವಶ್ಯಕತೆಯೂ ಇರಲಿಲ್ಲ. 

ಅನೇಕ ಕುಟುಂಬಗಳಲ್ಲಿ "ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ" ಎನಿಸದಿರಲು ಹಾಗೂ ಮತ್ತೆ ಕೆಲವರಲ್ಲಿ ಪುತ್ರ ಸಂತಾನದ ಭಾಗ್ಯವಿಲ್ಲದ ಕಾರಣದಿಂದಾಗಿ, ತಾವು ಕಷ್ಟಪಟ್ಟು ಗಳಿಸಿ ಉಳಿಸಿದ್ದ ಧನಕನಕಗಳು ಅನ್ಯರ ಪಾಲಾಗದಿರಲಿ ಎನ್ನುವ ಸ್ವಾರ್ಥವೂ ಸೋದರ ಸಂಬಂಧಿಗಳಲ್ಲಿ ವಿವಾಹ ನಡೆಯಲು ಪ್ರಮುಖ ಕಾರಣವೆನಿಸಿತ್ತು. 

ತಮ್ಮ ಮಕ್ಕಳು- ಮೊಮ್ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುತ್ತಿದ್ದ ನಮ್ಮ ಪೂರ್ವಜರಿಗೆ, ಇಂತಹ ವಿವಾಹಗಳ ಪರಿಣಾಮವಾಗಿ ತಮ್ಮ ಮುಂದಿನ ಸಂತತಿಯನ್ನು ಪೀಡಿಸಬಲ್ಲ ಅನೇಕ ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳುವಳಿಕೆಯೂ ಇರಲಿಲ್ಲ. ಪ್ರಾಯಃ ಇದೇ ಕಾರಣದಿಂದಾಗಿ ರಕ್ತಸಂಬಂಧಿಗಳ ನಡುವೆ ಜರಗುತ್ತಿದ್ದ ವಿವಾಹಗಳು, ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ನಡೆಯುತ್ತಿವೆ. 

 ಭಾರತದಲ್ಲಿ ಸೋದರ ಸಂಬಂಧಿಗಳ ನಡುವೆ ನಡೆಯುವ ವಿವಾಹಗಳಲ್ಲಿ ಎರಡು ವಿಧಗಳಿವೆ. ಅಣ್ಣ-ತಂಗಿ ಅಥವಾ ಅಕ್ಕ- ತಮ್ಮಂದಿರ ಗಂಡು-ಹೆಣ್ಣು ಮಕ್ಕಳ ನಡುವಿನ ವಿವಾಹವು ಮೊದಲನೆಯದಾಗಿದ್ದು, ಸೋದರಮಾವನು ತನ್ನ ಅಕ್ಕನ ಮಗಳನ್ನು ವಿವಾಹವಾಗುವುದು ಎರಡನೆಯ ವಿಧವಾಗಿದೆ. ಈ ರೀತಿಯ ವಿವಾಹಗಳಿಂದ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ - ಜನ್ಮದತ್ತ ಕಾಯಿಲೆಗಳ ಸಂಭಾವ್ಯತೆಯು ಹೆಚ್ಚಾಗಿರುತ್ತದೆ. 

ಅನುವಂಶಿಕತೆ 

ನಮ್ಮ ಶರೀರದ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಹಾಗೂ ತಾಯಿಯಿಂದ ಪಡೆದ ೨೩ ವರ್ನತಂತುಗಳಿದ್ದು, ಇವುಗಳು ೨೩ ಜೊತೆಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೊತೆ ಲಿಂಗ ನಿರ್ಧಾರಕ (ಸೆಕ್ಸ್ ಕ್ರೋಮೊಸೋಮ್ಸ್) ವಾಗಿದ್ದು, ಇನ್ನುಳಿದ ೨೨ ಜೊತೆಗಳನ್ನು  ಅಟೊಸೊಮ್ಸ್ ಎನ್ನುವರು

ಪ್ರತಿಯೊಂದು ವರ್ಣತಂತುವಿನಲ್ಲಿ ಸಾವಿರಕ್ಕೂ ಅಧಿಕ ವಂಶವಾಹಿನಿಗಳು(ಜೀನ್ಸ್) ಇದ್ದು, ಇವುಗಳಲ್ಲಿ ವ್ಯಕ್ತಿಯ ಶಾರೀರಿಕ- ಮಾನಸಿಕ  ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತಿತರ ಅನೇಕ ಸಂಕೇತಗಳು ಅಡಕವಾಗಿರುತ್ತವೆ. ಪ್ರತಿಯೊಂದು ವರ್ಣತಂತು ಅಥವಾ ವಂಶವಾಹಿನಿಯಲ್ಲಿ ಇರಬಹುದಾದ ನ್ಯೂನ್ಯತೆ, ವೈಪರೀತ್ಯ, ವಿಕೃತಿಗಳು ಅಥವಾ ಇವುಗಳ ಪರಿವರ್ತನೆಗಳ ಪರಿಣಾಮವಾಗಿ ಕೆಲವೊಂದು ನಿರ್ದಿಷ್ಟ ಕಾಯಿಲೆಗಳು,ನ್ಯೂನ್ಯತೆಗಳು ಹಾಗೂ ವೈಕಲ್ಯಗಳು ಮುಂದಿನ ಸಂತತಿಯಲ್ಲಿ ಕಂಡುಬರುವುದುಂಟು. ಇಂತಹ ಸಮಸ್ಯೆಗಳು ಸೋದರ ಸಂಬಂಧಿಗಳಲ್ಲಿ ನಡೆಯುವ ವಿವಾಹಗಳಿಂದಾಗಿ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. 

ಕಾರಣಗಳ ವೈವಿಧ್ಯ 

ಮನುಷ್ಯನನ್ನು ಬಾಧಿಸಬಲ್ಲ ಕೆಲವೊಂದು ಕಾಯಿಲೆಗಳು ಕೇವಲ ವಂಶವಾಹಿನಿಗಳ ವೈಪರೀತ್ಯದಿಂದಾಗಿಯೇ ಉದ್ಭವಿಸುತ್ತವೆ. ಇವುಗಳಲ್ಲಿ ಪರಿಸರ ಅಥವಾ ಅನ್ಯ ಕಾರಣಗಳು ತಮ್ಮ ಪ್ರಭಾವವನ್ನು ಬೀರುವುದಿಲ್ಲ. ಇಂತಹ ಕಾಯಿಲೆಗಳಲ್ಲಿ ವರ್ನತಂತುಗಳ ಅಸಾಮಾನ್ಯತೆಯೂ ಸೇರಿದ್ದು, ಇವುಗಳನ್ನು ಏಕ ಕಾರಣದಿಂದ ಉದ್ಭವಿಸುವ ಕಾಯಿಲೆಯೆಂದು ಗುರುತಿಸಲಾಗಿದೆ. ಕೇವಲ ಒಂದು ವಂಶವಾಹಿನಿಯ ನ್ಯೂನ್ಯತೆಯಿಂದ ಅಪರೂಪದಲ್ಲಿ ಕಾಣಸಿಗುವ ಸಾವಿರಕ್ಕೂ ಹೆಚ್ಚು ವಿಧದ ಆರೋಗ್ಯದ ಸಮಸ್ಯೆಗಳಿದ್ದು, ಇವುಗಳು ಜನ್ಮದತ್ತವಾಗಿ ಅಥವಾ ಬಾಲ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇವುಗಳಿಗೆ ಅಪವಾದಗಳು ಇರುವುದು ನಿಜವಾಗಿದ್ದರೂ, ಇಂತಹ ಗಂಭೀರ ಕಾಯಿಲೆಗಳು ಮಾತಾಪಿತರಿಂದ ನೇರವಾಗಿ ಮಕ್ಕಳಿಗೆ ಬರುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಸೋದರ ಸಂಬಂಧಿ ದಂಪತಿಗಳ ಸಂತತಿಯಲ್ಲಿ ಇವುಗಳ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. 

ಇನ್ನು ಕೆಲವು ಕಾಯಿಲೆಗಳಿಗೆ ನಮ್ಮ ಪರಿಸರ ಅರ್ಥಾತ್ ಸೋಂಕು,ಆಹಾರ,ಪೋಷಕಾಂಶಗಳು ಹಾಗೂ ಪರಿಸರ ಪ್ರದೂಷಣೆಗಳು ಕಾರಣವೆನಿಸುತ್ತವೆ. ಇವುಗಳಿಗೆ ಪರಿಸರವೇ ನೇರವಾಗಿ ಕಾರಣವಾಗಿರುತ್ತದೆ. 

ಮತ್ತೆ ಕೆಲವು ಕಾಯಿಲೆಗಳಿಗೆ ಪರಿಸರ ಮತ್ತು ಅನುವಂಶಿಕತೆ ಇವೆರಡೂ ಕಾರಣವೆನಿಸುವುದುಂಟು. ಇವುಗಳಿಗೆ ಬಹುಕಾರಣಗಳಿಂದ ಬರುವ ಕಾಯಿಲೆಗಳು ಎನ್ನುತ್ತಾರೆ. ಇವುಗಳಲ್ಲಿ ಜನ್ಮದತ್ತ ವೈಕಲ್ಯಗಳು,ಮಧುಮೇಹ,ಅಧಿಕ ರಕ್ತದೊತ್ತಡ,ಜನ್ಮದತ್ತ ಹೃದ್ರೋಗಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಮತ್ತು ಸಿಜೋಫ್ರೆನಿಯಾ ದಂತಹ ವ್ಯಾಧಿಗಳು ಸೇರಿವೆ. ಇಂತಹ ಸಮಸ್ಯೆಗಳಲ್ಲಿ ಸಾಮಾನ್ಯವಾಗಿ ಒಂದಕ್ಕೂ ಹೆಚ್ಚು ವಂಶವಾಹಿನಿಗಳ ವೈಪರೀತ್ಯಗಳು ಕಾರಣವಾಗಿರುತ್ತವೆ. 

ವರ್ಣತಂತುಗಳ ಅಸಾಮಾನ್ಯತೆಗಳಿಂದಾಗಿ ಡೌನ್ಸ್ ಸಿಂಡ್ರೋಮ್,ಸೀಳು ತುಟಿ- ಒಸಡುಗಳಂತಹ ವೈಕಲ್ಯಗಳು, ಸ್ವಯಂ ಸಂಭವಿಸುವ ಗರ್ಭಪಾತ,ವ್ಯಕ್ತಿತ್ವದ ಸಮಸ್ಯೆಗಳೇ ಮುಂತಾದ ಕಾಯಿಲೆಗಳು ಬಾಧಿಸುತ್ತವೆ. 

ಅನುವಂಶಿಕ ಕಾಯಿಲೆಗಳು ಅನೇಕ ಕುಟುಂಬಗಳ ಒಂದು ತಲೆಮಾರಿನಲ್ಲಿ ಮಾಯವಾಗಿ,ಮುಂದಿನ ತಲೆಮಾರಿನ ಸಂತತಿಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾಗಬಹುದು. ಅಪರೂಪದಲ್ಲಿ ಒಂದೇ ರೀತಿಯ ನ್ಯೂನ್ಯತೆಗಳು ಇರುವ ದಂಪತಿಗಳಲ್ಲಿ ಹುಟ್ಟುವ ಎಲ್ಲಾ ಮಕ್ಕಳಲ್ಲೂ ಇದೇ ರೀತಿಯ ನ್ಯೂನ್ಯತೆಗಳು ಕಂಡುಬರುವುದು. ಇಂತಹ ಸಾಧ್ಯತೆಗಳು ರಕ್ತಸಂಬಂಧಿಗಳ ನಡುವಿನ ವಿವಾಹಗಳಿಂದಾಗಿ ಉದ್ಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಒಂದೇ ರೀತಿಯ ನ್ಯೂನ್ಯತೆಗಳು ರಕ್ತಸಂಬಂಧಿಗಳಲ್ಲದ ದಂಪತಿಗಳಲ್ಲಿ ಕಂಡುಬರುವ ಸಾಧ್ಯತೆಗಳು ತೀರಾ ವಿರಳವಾಗಿರುತ್ತವೆ. 

ದೀರ್ಘಾಯುಷ್ಯದ ಪರಂಪರೆ ಇರುವ ಕುಟುಂಬಗಳಲ್ಲಿ ಅನುವಂಶಿಕ ಕಾಯಿಲೆಗಳ ಇರುವಿಕೆಯನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭ. ಸೋದರ ಸಂಬಂಧಿಗಳ ವಿವಾಹದಿಂದಾಗಿ ಹುಟ್ಟುವ ಮಕ್ಕಳಲ್ಲಿ  ಹೆರಿಗೆಯ ಮುನ್ನ- ಹೆರಿಗೆಯ ಸಂದರ್ಭದಲ್ಲಿ  ತೊಂದರೆಗಳು ಸಂಭವಿಸುವುದು, ಅಪರೂಪದ ಜನ್ಮದತ್ತ ವೈಕಲ್ಯಗಳು ಹಾಗೂ ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದೇ ಮುಂತಾದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ಹೆಚ್ಚಿವೆ. ವಿಶೇಷವಾಗಿ ಕುಟುಂಬದ ಹಿರಿಯರಲ್ಲಿ ಇಂತಹ ಸಮಸ್ಯೆಗಲಿದ್ದಲ್ಲಿ, ಇವುಗಳು ಮುಂದಿನ ಸಂತತಿಯಲ್ಲಿ ಪುನರಾವರ್ತನೆಯಾಗುತ್ತವೆ. 

ರಕ್ತಸಂಬಂಧಿಗಳ ನಡುವೆ ನಡೆಯುವ ವಿವಾಹಗಳಲ್ಲಿ ಇಂತಹ ಆರೋಗ್ಯದ ಸಮಸ್ಯೆಗಳು ತಲೆದೋರಲು ಅನುವಂಶಿಕತೆಯೇ ಪ್ರಧಾನ ಕಾರಣವಾಗಿರುತ್ತದೆ. ಏಕೆಂದರೆ ಒಂದೇ ತಾಯಿಯ ಮಕ್ಕಳ ಜೀವಕಣಗಳಲ್ಲಿರುವ ಶೇ. ೫೦ ರಷ್ಟು ವರ್ಣತಂತುಗಳು ಮತ್ತು ಇವುಗಳಲ್ಲಿನ ವಂಶವಾಹಿನಿಗಳು ಒಂದೇ ರೀತಿಯದ್ದಾಗಿರುತ್ತವೆ. ಆದರೆ ಸೋದರಮಾವ ಹಾಗೂ ಸೋದರಸೊಸೆಯರಲ್ಲಿ ಈ ಪ್ರಮಾಣವು ಶೇ. ೨೫ ಮತ್ತು ಸೋದರಮಾವ-ಸೋದರ ಅತ್ತೆಯ ಮಕ್ಕಳಲ್ಲಿ ಶೇ. ೧೨. ೫ ಆಗಿರುತ್ತದೆ. ಈ ಮಕ್ಕಳು ಹಾಗೂ ಮೊಮ್ಮಕ್ಕಳ ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯರು ,ಈ ದಂಪತಿಗಳ ಪೂರ್ವಜರಾಗಿರುವುದೇ ಇದಕ್ಕೆ ಮೂಲಕಾರಣ ಎನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಈ ಹಿರಿಯರಲ್ಲಿ ಇದ್ದಿರಬಹುದಾದ ಅನುವಂಶಿಕ ನ್ಯೂನ್ಯತೆಗಳು- ಕಾಯಿಲೆಗಳು, ಇವರ ಮಕ್ಕಳು-ಮೊಮ್ಮಕ್ಕಳ ನಡುವಿನ ವೈವಾಹಿಕ ಸಂಬಂಧದಿಂದಾಗಿ ಹುಟ್ಟುವ ಮಕ್ಕಳನ್ನು  ಬಾಧಿಸುವ ಸಾಧ್ಯತೆಗಳು ಹೆಚ್ಚಿವೆ. 

ಆದರೆ ರಕ್ತಸಂಬಂಧಿಗಳಲ್ಲದ ದಂಪತಿಗಳಲ್ಲಿ ಏಕರೀತಿಯ ಅನುವಂಶಿಕ ನ್ಯೂನ್ಯತೆಗಳು ಇರುವ ಸಾಧ್ಯತೆಗಳು ಅತ್ಯಂತ ಅಪರೂಪವಾಗಿರುವುದರಿಂದ, ಮುಂದಿನ ಸಂತತಿಯಲ್ಲಿ ಇಂತಹ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳು ಅತ್ಯಂತ ಅಪರೂಪವಾಗಿರುತ್ತವೆ. 

ಇವೆಲ್ಲಾ ಕಾರಣಗಳಿಂದಾಗಿ ರಕ್ತಸಂಬಂಧಿಗಳ ನಡುವೆ ನಡೆಯುವ ವಿವಾಹಗಳು ನಿಶ್ಚಿತವಾಗಿಯೂ, ಮುಂದಿನ ಸಂತತಿಯ ಆರೋಗ್ಯದ ದೃಷ್ಟಿಯಿಂದ ಹಾನಿಕರ ಎನಿಸುತ್ತವೆ. 

ಡಾ. ಸಿ .ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ           

No comments:

Post a Comment