Wednesday, August 28, 2013

Is your child a poor eater?


                        ಪುಟ್ಟ ಕಂದನ ಹೊಟ್ಟೆ ಹಸಿವು ಎಂತಿದೆ?

ಪುಟ್ಟ ಮಕ್ಕಳ ಹೊಟ್ಟೆ ಹಸಿವು ಹಾಗೂ ದೈನಂದಿನ ಆಹಾರದ ಪ್ರಮಾಣಗಳನ್ನು ನಿಖರವಾಗಿ ಅರಿತುಕೊಳ್ಳುವುದು ಸುಲಭಸಾಧ್ಯವಲ್ಲ. ಅದರಲ್ಲೂ ಮಾತು ಬಾರದ ಹಸುಗೂಸಿನ ವಿಚಾರದಲ್ಲಂತೂ ಸಂಪೂರ್ಣವಾಗಿ ಮಾತಾಪಿತರ ಊಹೆಯೇ ಮಗುವಿನ ಲಾಲನೆ-ಪಾಲನೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ತಾಯಿಗೆ ಚಳಿಯಾದಾಗ ಮಗುವಿಗೆ "ಸ್ವೆಟರ್" ತೊಡಿಸುವುದು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು!. 
------------------                     ----------------------                           -----------------------                                -----------------------------

ಪ್ರತಿನಿತ್ಯ ಬೆಳಿಗ್ಗೆ ಎಂಟು ಗಂಟೆಯಾಗುತ್ತಲೇ ಮಾಧವ ಮಾಸ್ತರರು ತಾರಕ ಸ್ವರದಲ್ಲಿ ನಾಯಿ,ಬೆಕ್ಕು,ಕಾಗೆ ಮತ್ತು ಗುಬ್ಬಚ್ಚಿಗಳನ್ನು ಕರೆಯುವ ಸದ್ದನ್ನು ಕೇಳಿದೊಡನೆ,ಅವರ ವಠಾರದ ನಿವಾಸಿಗಳಿಗೆ ಮಾಸ್ತರರು ತಮ್ಮ ಮುದ್ದಿನ ಮಗಳಿಗೆ ಕೈತುತ್ತು ನೀಡುತ್ತಿದ್ದಾರೆ ಎಂದು ತಿಳಿಯುತ್ತಿತ್ತು. ಅನ್ನಾಹಾರಗಳನ್ನು ತಿನ್ನಲು ಒಲ್ಲೆನೆಂದು ರಂಪಾಟ ಮಾಡುತ್ತಿದ್ದ ಮಗಳ ಹೊಟ್ಟೆಗೆ ಒಂದಿಷ್ಟು ಅನ್ನವನ್ನು ಹಾಕಲು ಮಾಸ್ತರರು ತಾನು ಕಲಿತಿದ್ದ ವಿದ್ಯೆಗಳನ್ನೆಲ್ಲಾ ಬಳಸಬೇಕಾಗುತ್ತಿತ್ತು!. 

ಉದ್ಯೋಗಸ್ತ ದಂಪತಿಗಳ ಏಕಮಾತ್ರ ಪುತ್ರಿಯಾದ ವಾಣಿಯನ್ನು ಹಗಲಿಡೀ ನೋಡಿಕೊಳ್ಳಲು ಆಕೆಯ ಅಜ್ಜನು ಪ್ರತಿದಿನ ಬೆಳಗ್ಗೆ ಬಂದು, ಸಂಜೆಯ ವೇಳೆಗೆ ತನ್ನ ಮನೆಗೆ ಮರಳುತ್ತಿದ್ದರು. ಇಳಿವಯಸ್ಸಿನ ಅಜ್ಜನನ್ನು ದಿನವಿಡೀ ಗೊಳುಹೊಯ್ಯುತ್ತಿದ್ದ ವಾಣಿಯು,ಅಜ್ಜನ ಕೈಯ್ಯಿಂದ ಒಂದುತುತ್ತು ಅನ್ನವನ್ನೂ ತಿನ್ನುತ್ತಿರಲಿಲ್ಲ. ಆದರೆ ಮೊಮ್ಮಗಳು ಉಪವಾಸವಿರುವುದನ್ನು ಸಹಿಸಲಾರದ ಅಜ್ಜನು ಅನಿವಾರ್ಯವಾಗಿ ನೀಡುತ್ತಿದ್ದ ಚಾಕಲೇಟು-ಬಿಸ್ಕತ್ತುಗಳನ್ನು ಮಾತ್ರ ಆಕೆ ನಿರಾಕರಿಸುತ್ತಿರಲಿಲ್ಲ!. ಈ ವಿಚಾರವನ್ನು ಅರಿಯದ ಮಾಸ್ತರರು ಸಂಜೆ ಶಾಲೆ ಬಿಟ್ಟೊಡನೆ ಮನೆಗೆ ಧಾವಿಸಿ, ತನ್ನ ಮುದ್ದಿನ ಮಗಳಿಗೆ ಒತ್ತಾಯದಿಂದ ಕೈತುತ್ತು ಹಾಕುತ್ತಿದ್ದರು. 

ಇದೇ ರೀತಿಯ ಹಲವಾರು ಘಟನೆಗಳನ್ನು ನೀವೂ ಕಂಡಿರಬಹುದು. ಇದಕ್ಕೆ ತದ್ವಿರುದ್ಧವಾಗಿ ಯಾರು ಏನನ್ನೇ ನೀಡಿದರೂ, ಕ್ಷಣಾರ್ಧದಲ್ಲಿ ಕಬಳಿಸಿ ಮತ್ತಷ್ಟು ಬೇಕೆಂದು ಹಠಮಾಡುವ ಮಕ್ಕಳನ್ನೂ ಕಂಡಿರಲೇಬೇಕು. ಚಿಕ್ಕ ಮಕ್ಕಳಲ್ಲಿ ಕಂಡುಬರುವ ಇಂತಹ ಪ್ರವೃತ್ತಿಗಳಿಗೆ ವಿಭಿನ್ನ ಕಾರಣಗಳೂ ಇರುತ್ತವೆ. 

ತಮ್ಮ ಮಗು ಸಾಕಷ್ಟು (ಅರ್ಥಾತ್ ತಾವು ಅಪೇಕ್ಷಿಸಿದಷ್ಟು) ಅನ್ನಾಹಾರಗಳನ್ನು ತಿನ್ನುವುದೇ ಇಲ್ಲವೆಂದು ದೂರುವ ಅನೇಕ ದಂಪತಿಗಳಿಗೆ, ನಿಜಕ್ಕೂ ಮಕ್ಕಳ ಆಹಾರ ಸೇವನಾ ಶೈಲಿಯ ಬಗ್ಗೆ ಸಮರ್ಪಕ ಹಾಗೂ ಪ್ರಾಥಮಿಕ ಮಾಹಿತಿಗಳೇ ತಿಳಿದಿರುವುದಿಲ್ಲ. ಇದೇ ಕಾರಣದಿಂದಾಗಿ ತಮ್ಮ ಮಗುವಿಗ ಚೆನ್ನಾಗಿ ಹಸಿವಾಗುವಂತಹ ಟಾನಿಕ್ ಬರೆದುಕೊಡಿ ಎಂದು ವೈದ್ಯರನ್ನು ಒತ್ತಾಯಿಸುವ ದಂಪತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ!. 

ಇನ್ನುಕೆಲವರಂತೂ ಅಲ್ಪಾಹಾರ ಸೇವನೆಯಿಂದ ತಮ್ಮ ಮಗುವಿನಲ್ಲಿ ಉದ್ಭವಿಸಬಹುದಾದ ಪೋಷಕಾಂಶಗಳ ಕೊರತೆಯನ್ನು ನೀಗಿಸಲು, ನಿರ್ದಿಷ್ಟ ಪರಿಹಾರವನ್ನು ತಾವೇ ನಿರ್ಧರಿಸುತ್ತಾರೆ. ಇದಕ್ಕಾಗಿ ಟಿ.ವಿ ಜಾಹೀರಾತುಗಳಲ್ಲಿ ತಾವು ಕಂಡಿರುವ "ಪರಿಪೂರ್ಣ ಪೋಷಕಾಂಶಗಳಿಂದ ಸಮೃದ್ಧವಾಗಿದೆ" ಎಂದು ಇವುಗಳ ತಯಾರಕರು ಘೋಷಿಸುವ ವಾಣಿಜ್ಯ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ, ತಮ್ಮ ಕಂದನಿಗೆ ಒತ್ತಾಯಪೂರ್ವಕವಾಗಿ ನೀಡಿ ಸಂತೃಪ್ತರಾಗುತ್ತಾರೆ!. 

ಸಮಸ್ಯೆಯ ಮೂಲ 

ತಮ್ಮ ಮಕ್ಕಳ ಹಸಿವು ಮತ್ತು ಆಹಾರಸೇವನೆಗಳ ಬಗ್ಗೆ ಬಹುತೇಕ ಮಾತಾಪಿತರು ಚಿಂತಿತರಾಗಲು, ಇಂತಹ ಮಕ್ಕಳ ಆರೋಗ್ಯದ ಮಟ್ಟ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ಕಂಡುಬರುವ ವ್ಯತ್ಯಯಗಳೇ ಕಾರಣವೆಂದಲ್ಲಿ ತಪ್ಪೆನಿಸಲಾರದು. ದಷ್ಟಪುಷ್ಟವಾಗಿ ಬೆಳೆದಿರುವ ತಮ್ಮ ಬಂಧುಮಿತ್ರರ ಮಕ್ಕಳೊಂದಿಗೆ ಹೋಲಿಸಿದಾಗ, ತಮ್ಮ ಮಗು "ನರಪೇತಲ ನಾರಾಯಣ" ನಂತೆ ಕಾಣುವುದನ್ನು ಸಹಿಸದ ಮಾತೆಯರು, ತಮ್ಮ ಕಂದನಿಗೆ ತಾವು ನಿರ್ಧರಿಸಿದಷ್ಟು ಪ್ರಮಾಣದ ಆಹಾರವನ್ನು ತಿನ್ನಿಸಲು ಶತಪ್ರಯತ್ನಗಳನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಲಲ್ಲೆಗರೆಯುವುದು,ಲಂಚದ ಆಮಿಷ ಒಡ್ಡುವುದು, ಒತ್ತಾಯ ಮತ್ತಿತರ ಉಪಾಯಗಳು ಫಲಿಸದಿದ್ದಲ್ಲಿ, ಕೆಲ ದಂಪತಿಗಳು ಬೆದರಿಕೆ ಹಾಕುವುದು ಮತ್ತು ಪೆಟ್ಟು ನೀಡುವ ಮಟ್ಟಕ್ಕೂ ಹೋಗುವುದು ಅಪರೂಪವೇನಲ್ಲ!. ಇಂತಹ ಪ್ರಯತ್ನಗಳು ನಿರೀಕ್ಷಿತ ಪರಿಣಾಮಗಳನ್ನು ನೀಡುವಲ್ಲಿ ನಿಷ್ಫಲವೆನಿಸುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಮಕ್ಕಳಲ್ಲಿ ಹಠಮಾರಿತನ ಹಾಗೂ ಸೇಡಿನ ಮನೋಭಾವನೆಗಳಿಗೆ ಸೋಪಾನವೆನಿಸೀತು. ಇದೇ ಕಾರಣದಿಂದಾಗಿ ಈ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಅರಿತುಕೊಳ್ಳುವುದು ಮಗುವಿನ ಆರೋಗ್ಯ ಮತ್ತು ಮಾತಾಪಿತರ ಮಾನಸಿಕ ನೆಮ್ಮದಿಯ ಹಿತದೃಷ್ಟಿಯಿಂದ ಉಪಯುಕ್ತವೆನಿಸುವುದು. 

ಸಾಮಾನ್ಯವಾಗಿ ಎಲ್ಲ ಮಕ್ಕಳಲ್ಲೂ ಹಸಿವು,ಆಹಾರಸೇವನೆಯ ಪ್ರಮಾಣ, ಆರೋಗ್ಯದ ಮಟ್ಟ ಮತ್ತು ಶಾರೀರಿಕ ಬೆಳವಣಿಗೆಗಳು ಏಕರೀತಿಯಲ್ಲಿರುವುದು ಅಸಾಧ್ಯವೋ ಹೌದು. ಅದೇ ರೀತಿಯಲ್ಲಿ ಮಕ್ಕಳ ಸಾಮಾನ್ಯ ಆರೋಗ್ಯ,ಶರೀರದ ತೂಕ ಮತ್ತು ಗಾತ್ರಗಳಲ್ಲಿ ಮಾತಾಪಿತರ ವಂಶವಾಹಿನಿ- ವರ್ಣತಂತುಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇದೇ ಕಾರಣದಿಂದಾಗಿ ಧಡೂತಿ ದೇಹವನ್ನು ಹೊಂದಿರುವ ದಂಪತಿಗಳ ಮಕ್ಕಳು "ಮಹಾಕಾಯ" ಹೊಂದಿರುವುದು ಹಾಗೂ ಸಣಕಲು ಶರೀರದ ಮಾತಾಪಿತರ ಮಕ್ಕಳು "ಕೃಶಕಾಯ" ರಾಗಿರುವುದು ಸ್ವಾಭಾವಿಕವೂ ಹೌದು. 

ಗರ್ಭಿಣಿಯರು ಬಡತನ ಅಥವಾ ಇನ್ನಿತರ ಕಾರಣಗಳಿಂದ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸದೇ ಇದ್ದಲ್ಲಿ ಮತ್ತು  ಆಗಾಗ ಕಾಯಿಲೆ-ಕಸಾಲೆಗಳಿಂದ ಬಳಳುತ್ತಿದ್ದಲ್ಲಿ ಕೂಡಾ ಹುಟ್ಟಿದ ಮಗುವಿನ ಆರೋಗ್ಯ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ನಿರ್ದಿಷ್ಟ ನ್ಯೂನ್ಯತೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ವೈಜ್ಞಾನಿಕ ಸತ್ಯವನ್ನು ಅರಿತುಕೊಂಡ ಮಾತಾಪಿತರು ಸಣಕಲು ಶರೀರದ, ಸದಾ ಚಟುವಟಿಕೆಯಿಂದ ಇರುವ ಆರೋಗ್ಯವಂತ ಮಗುವು, ದಷ್ಟಪುಷ್ಟವಾಗಿದ್ದರೂ ಜಡಭರತನಂತಿದ್ದು ಆಗಾಗ ಅನಾರೋಗ್ಯದಿಂದ ಬಳಲುವ ಮಗುವಿಗಿಂತ ಲೇಸೆಂದು ಒಪ್ಪಿಕೊಳ್ಳುತ್ತಾರೆ. 

ಹಸಿವು-ಆಹಾರ 

ಪುಟ್ಟ ಕಂದನು ಹುಟ್ಟಿದ ಒಂದುವರ್ಷದಲ್ಲೇ ತನ್ನ ತೂಕವನ್ನು ನಾಲ್ಕರಿಂದ ಆರುಪಟ್ಟು  ಹೆಚ್ಚಿಸಿಕೊಳ್ಳುವುದು ಸ್ವಾಭಾವಿಕ. ಈ ಅವಧಿಯಲ್ಲಿ ಮಗುವಿನ ಹಸಿವಿನ ಪ್ರಮಾಣವೂ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ತುಸು ಹೆಚ್ಚಾಗುವುದು. ಆದರೆ ಎರಡನೆಯ ವರ್ಷದಿಂದ ಶಾರೀರಿಕ ಬೆಳವಣಿಗೆಯ ವೇಗವು ಒಂದಿಷ್ಟು ಕಡಿಮೆಯಾಗುವುದರಿಂದ,ಮಕ್ಕಳು ಸೇವಿಸುವ ಆಹಾರದ ಪ್ರಮಾಣವೂ ಒಂದಿಷ್ಟು ಕಡಿಮೆಯಾಗುವುದು. ಜೊತೆಗೆ ಈ ವಯಸ್ಸಿನಲ್ಲಿ ತನ್ನ ಬೇಕು-ಬೇಡಗಳನ್ನು ತನ್ನದೇ ಆದ ರೀತಿಯಲ್ಲಿ ತಾಯಿಗೆ ತಿಳಿಸುವ ಕಲೆಯನ್ನು ಪುಟ್ಟ ಕಂದನು ಕರಗತಮಾಡಿಕೊಂಡಿರುತ್ತಾನೆ. ತನಗೆ ಬೇಡವೆನಿಸಿದ ಆಹಾರ ನೀಡಿದಾಗ ಬಾಯಿ ಮುಚ್ಚುವುದು,ಮುಖವನ್ನು ತಿರುಗಿಸುವುದು,ಅಮ್ಮನ ಕೈಯ್ಯನ್ನು ದೂಡುವುದು ಹಾಗೂ ಒತ್ತಾಯದಲ್ಲಿ ಬಾಯಿಗೆ ಹಾಕಿದ ಆಹಾರವನ್ನು "ಪುರ್' ಎಂದು ಸದ್ದುಮಾಡುತ್ತಾ ಉಗಿಯುವುದು ಇಂತಹ ಕಲೆಗಳಲ್ಲಿ ಒಂದಾಗಿದೆ!. 

ಹಸಿವು ಕಂದನ ಸ್ವಾಭಾವಿಕ ಶಾರೀರಿಕ  ಪ್ರಕ್ರಿಯೆಗಳಲ್ಲಿ  ಒಂದಾಗಿದ್ದು, ಕೇವಲ ಅಲ್ಪ ಪ್ರಮಾಣದ ಆಹಾರವನ್ನು ಸೇವಿಸುವುದರಿಂದ ಜೀವಸತ್ವಗಳು ಮತ್ತು ಪೋಷಕಾಂಶಗಳ ಕೊರತೆ ಉದ್ಭವಿಸುವುದಿಲ್ಲ. ಪುಟ್ಟ ಮಕ್ಕಳ "ಜಠರ" ದ ಗಾತ್ರವೂ ಚಿಕ್ಕದಾಗಿ ಇರುವುದರಿಂದ , ವಯಸ್ಕರಂತೆ ದಿನದಲ್ಲಿ ಮೂರು- ನಾಲ್ಕು ಬಾರಿ ಪಟ್ಟಾಗಿ ಹೊಟ್ಟೆ ಬಿರಿಯುವಂತೆ ತಿನ್ನುವುದು ಅಸಾಧ್ಯವೆಂದು ತಿಳಿದಿರಿ. ಇದೇ ಕಾರಣದಿಂದಾಗಿ ಚಿಕ್ಕಮಕ್ಕಳು ಒಂದೆರಡು ಘಂಟೆಗೊಮ್ಮೆ ಅಲ್ಪಪ್ರಮಾಣದ ಆಹಾರವನ್ನು ಸೇವಿಸಲು ಬಯಸಿದಲ್ಲಿ ಸಹಕರಿಸಿ. 

ಆಹಾರಸೇವನೆಯ ಸಂದರ್ಭದಲ್ಲಿ ನಿಮ್ಮ ಕಂದನ ಬೇಕು-ಬೇಡಗಳನ್ನು ಸೂಕ್ಷ್ಮವಾಗಿ ಗಮನಿಸಿ. ಬಹುತೇಕ ಮಕ್ಕಳು ಪ್ರತಿದಿನ ಒಂದೇ ವಿಧದ ಆಹಾರವನ್ನು ಸೇವಿಸಲು ನಿರಾಕರಿಸುವುದುಂಟು. ಮಾತ್ರವಲ್ಲ, ಕೆಲದಿನಗಳ ಕಾಲ ತಾನು ಮೆಚ್ಚಿ ತಿನ್ನುತ್ತಿದ್ದ ಆಹಾರವೊಂದನ್ನು, ಕೆಲವೇ ದಿನಗಳ ಬಳಿಕ ನಿರಾಕರಿಸುವುದೂ ಉಂಟು. ಇಂತಹ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ  ಮಗು ಬೇಡವೆಂದ ಆಹಾರವನ್ನು ತಿನ್ನಿಸುವ ಬದಲಾಗಿ ಬೇರೊಂದು ಆಹಾರವನ್ನು ನೀಡಲು ಆರಂಭಿಸಿದಲ್ಲಿ, ಮುಂದೆ ಕೆಲದಿನಗಳ ಬಳಿಕ ಹಿಂದೆ ನೀಡುತ್ತಿದ್ದ ಆಹಾರವನ್ನೇ ಮತೊಮ್ಮೆ ನೀಡಿದಲ್ಲಿ ನಿರಾಕರಿಸುವುದಿಲ್ಲ. 

ಮಕ್ಕಳ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿರುವ "ಹಾಲು", ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಚಿಕ್ಕಮಕ್ಕಳಿಗೆ ಮಕ್ಕಳಿಗೆ ಒಂದುದಿನದಲ್ಲಿ ಸುಮಾರು ೨೦೦ ಮಿಲಿ ಲೀಟರ್ ಹಾಲು ಸಾಕಾಗುತ್ತದೆ. ಆದರೆ ತಮ್ಮ ಮಗುವಿನ ಆರೋಗ್ಯರಕ್ಷಣೆ ಹಾಗೂ ಶಾರೀರಿಕ ಬೆಳವಣಿಗೆಗಾಗಿ ಸಾಕಷ್ಟು ಹಾಲನ್ನು ನೀಡುವುದು ಅವಶ್ಯಕವೆಂದು ನಂಬುವ ಮಾತಾಪಿತರು, ದಿನನಿತ್ಯ ನಾಲ್ಕಾರು ಬಾರಿ ಹಾಲನ್ನು ಕುಡಿಸುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ!. ತತ್ಪರಿಣಾಮವಾಗಿ ಮಕ್ಕಳು ಸೇವಿಸುವ ಅನ್ಯ ಆಹಾರಗಳ ಪ್ರಮಾಣವೂ ಕಡಿಮೆಯಾಗುತ್ತದೆ. 

ದನದ (ಹಸುವಿನ ) ಹಾಲನ್ನು ಕುಡಿಸುವುದರಿಂದ ಮಕ್ಕಳಲ್ಲಿ "ಕಫ" ತುಂಬುತ್ತದೆ ಎಂದು ಧೃಢವಾಗಿ ನಂಬಿರುವ ಅನೇಕ ವಿದ್ಯಾವಂತರೂ, ಈ ಸಮಸ್ಯೆಯನ್ನು ಪರಿಹರಿಸಲು ಹಾಲಿಗೆ ನೀರು ಬೆರೆಸಿ ನೀಡುತ್ತಾರೆ. ಇದೊಂದು ತಪ್ಪುಕಲ್ಪನೆಯೇ ಹೊರತು ವೈಜ್ಞಾನಿಕ ಸತ್ಯವಲ್ಲ. 

ಪ್ರತಿನಿತ್ಯ ಟಿ. ವಿ. ಚಾನೆಲ್ ಗಳಲ್ಲಿ ತಪ್ಪದೆ ಪ್ರಸಾರವಾಗುವ, ಮಕ್ಕಳ ಶಾರೀರಿಕ ಬೆಳವಣಿಗೆ,ಆರೋಗ್ಯ ಮತ್ತು ಶಕ್ತಿಗಳನ್ನು ಹೆಚ್ಚಿಸಬಲ್ಲದು ಎನ್ನುವ "ಕೊಕ್ಕೋ"ಮಿಶ್ರಿತ  ಪೇಯಗಳ  ಜಾಹೀರಾತುಗಳನ್ನು ಕಂಡು ಪ್ರಭಾವಿತರಾಗದವರೇ ಇಲ್ಲವೆನ್ನಬಹುದು. ಹಾಲಿನಲ್ಲಿ ಬೆರೆಸಿ ನೀಡಬೇಕಾದ ಇಂತಹ ಪೇಯಗಳು ಸ್ವಾದಿಷ್ಟವೆನಿಸಿದರೂ, ಇವುಗಳ ಸೇವನೆಯಿಂದ ನಿಶ್ಚಿತವಾಗಿಯೂ ಮಕ್ಕಳ ಹಸಿವು ಕಡಿಮೆಯಾಗುವುದು!. 

ನಿಮಗಿದು ತಿಳಿದಿರಲಿ 

ನವಜಾತ ಶಿಶುವಿಗೆ ಮೊದಲ ಆರು ತಿಂಗಳಿನಿಂದ ಒಂದು ವರ್ಷದ ಅವಧಿಗೆ "ಸ್ತನ್ಯಪಾನ" ಅತ್ಯವಶ್ಯಕ ಎನಿಸುತ್ತದೆ. ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ, ಆರೋಗ್ಯ  ರಕ್ಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ತಾಯಿಯ ಹಾಲು ಅತ್ಯಂತ ಮಹತ್ವಪೂರ್ಣವೆನಿಸುತ್ತದೆ. 

ಮಗುವಿಗೆ ಕನಿಷ್ಠ ನಾಲ್ಕರಿಂದ ಆರು ತಿಂಗಳುಗಳು ಕಳೆದ ಬಳಿಕವೇ ಘನ ಆಹಾರವನ್ನು ನೀಡಲು ಆರಂಭಿಸಿ. ಅದರಲ್ಲೂ ಮನೆಯಲ್ಲೇ ಸಿದ್ಧಪಡಿಸುವ ಗೋಧಿ-ರಾಗಿಗಳ ಮಿಶ್ರಣದಿಂದ ತಯಾರಿಸುವ "ಮಣ್ಣಿ " ಗೆ ಆದ್ಯತೆಯಿರಲಿ. ಇದರೊಂದಿಗೆ ಒಂದಿಷ್ಟು ಬೇಯಿಸಿದ ತರಕಾರಿ ಹಾಗೂ ಹಣ್ಣುಹಂಪಲುಗಳು, ಬೇಯಿಸಿದ ಮೊಟ್ಟೆ ಇತ್ಯಾದಿಗಳನ್ನು ಕ್ರಮೇಣ ನೀಡಲಾರಂಭಿಸಿ. 

ನಿಮ್ಮ ಕಂದನಿಗೆ ಎರಡುವರ್ಷ ವಯಸ್ಸಾದಂತೆಯೇ, ತಾನಾಗಿ ಆಹಾರ ಸೇವಿಸಲು ಅವಕಾಶ ಮತ್ತು ಉತ್ತೇಜನ ನೀಡಿ. ಅನೇಕ ಮಾತೆಯರು ಇಂದಿಗೂ ನಂಬಿರುವಂತೆ , ಮಕ್ಕಳಿಗೆ ಕೈತುತ್ತು ನೀಡಿದಲ್ಲಿ ಹೆಚ್ಚು ಆಹಾರ ಸೇವಿಸುತ್ತಾರೆ ಎನ್ನುವುದು ಅಪ್ಪಟ ಸುಳ್ಳು!. ಜೊತೆಗೆ ಕೈತುತ್ತನ್ನು ತಿನ್ನುವ ಮಕ್ಕಳು ಕ್ರಮೇಣ ತಾವಾಗಿಯೇ ಆಹಾರವನ್ನು ಸೇವಿಸಬೇಕು ಎನ್ನುವುದನ್ನೇ ಮರೆತುಬಿಡುತ್ತಾರೆ. ಇಂತಹ ಸಮಸ್ಯೆಗಳಿಗೆ ಆಸ್ಪದವನ್ನು ನೀಡದಂತೆ ನಿಮ್ಮ ಕಂಡನು ಮೆಚ್ಚುವ ಆಹಾರವನ್ನು ಒಂದು ಬಟ್ಟಲಿನಲ್ಲಿ ಇರಿಸಿ, ಚೊಕ್ಕಟವಾಗಿರುವ ಜಾಗದಲ್ಲಿ ಮಗುವನ್ನು ಕುಳ್ಳಿರಿಸಿ ತಿನ್ನಲು ಬಿಡಿ. ತಾಯಿ ಕೈತುತ್ತು ನೀಡುವುದಿಲ್ಲ ಎನ್ನುವುದನ್ನು ಅರಿತ ಮಗುವು, ಕಾಲಕ್ರಮೇಣ ತಾನಾಗಿ ಆಹಾರವನ್ನು ಸೇವಿಸಲಾರಂಭಿಸುತ್ತದೆ. 

ಆಹಾರ ಸೇವನೆಯ ಸಂದರ್ಭದಲ್ಲಿ ಕೊಂಚ ಹಠಮಾಡುವ ಮಕ್ಕಳ ತಂದೆತಾಯಂದಿರೂ ಹಠಮಾರಿತನವನ್ನು ತೋರಿದಲ್ಲಿ,ಊಟದ ಕೋಣೆಯು ರಣರಂಗವಾಗಿ ಪರಿಣಮಿಸಬಹುದು. ಇಂತಹ ಸನ್ನಿವೇಶಗಳ ಪುನರಾವರ್ತನೆಯಿಂದ ಮಕ್ಕಳು ಆಹಾರ ಸೇವನೆಯನ್ನೇ ದ್ವೇಷಿಸುವಂತಾಗುವುದು. ಇಂತಹ ಸ್ವಭಾವದ ಮಕ್ಕಳು ಮೆಚ್ಚದಿರುವ ಆಹಾರವನ್ನು ಕೆಲಕಾಲ ನೀಡದೇ, ಇವರು ಮೆಚ್ಚುವಂತಹ ಆಹಾರವನ್ನೇ ನೀಡಿದಲ್ಲಿ,ಸಂತೋಷದಿಂದ ಸವಿಯುವ ಮಕ್ಕಳು ಕ್ರಮೇಣ ತಾವು ಈ ಮೊದಲು ನಿರಾಕರಿಸುತ್ತಿದ್ದ ಆಹಾರವನ್ನು ಕೇಳಿ ತಿನ್ನುವಷ್ಟು ಬದಲಾಗುತ್ತಾರೆ. 

ಆಹಾರ ಸೇವನೆಯ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸ,ವರ್ತನೆಗಳು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸದಿದ್ದಲ್ಲಿ, ನಿಶ್ಚಿತವಾಗಿಯೂ ಮಕ್ಕಳು ನಿರಾತಂಕವಾಗಿ ಆಹಾರವನ್ನು ಆಸ್ವಾದಿಸುವುದರಲ್ಲಿ ಸಂದೇಹವಿಲ್ಲ. 

ಅನೇಕ ಮಕ್ಕಳು ಜನ್ಮತಃ ಅಲ್ಪಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದರೂ, ಇವರ ಶಾರೀರಿಕ ಬೆಳವಣಿಗೆ ಮತ್ತು ಆರೋಗ್ಯದ ಮಟ್ಟ ಉತ್ತಮವಾಗಿದ್ದು ಸದಾ ಚಟುವಟಿಕೆಯಿಂದ ಇರುತ್ತಾರೆ. ಇಂತಹ ಮಕ್ಕಳಿಗೆ ಅಧಿಕ ಪ್ರಮಾಣದ ಆಹಾರವನ್ನು ನೀಡಿ ತಿನ್ನಲು ಒತ್ತಾಯಿಸದಿರಿ. ಇದಕ್ಕೆ ಬದಲಾಗಿ ಅಲ್ಪಪ್ರಮಾಣದ ಆಹಾರವನ್ನು ನೀಡಿ, ಮಗು ತಾನಾಗಿ ಮತ್ತೊಮ್ಮೆ ಬೇಕೆಂದು ಕೇಳುವಂತೆ ಮಾಡಿರಿ. 

ಅನೇಕ ವಿದ್ಯಾವಂತರೂ ನಂಬಿರುವಂತೆ ವಿವಿಧ ರೀತಿಯ ಜೀವಸತ್ವಗಳು ಮತ್ತು ಟಾನಿಕ್ ಗಳನ್ನು ನೀಡುವುದರಿಂದ ಅಲ್ಪಾಹಾರ ಸೇವಿಸುವ ಮಕ್ಕಳ ಹಸಿವನ್ನು ಹೆಚ್ಚಿಸುವುದು ಅಸಾಧ್ಯ. ಜೊತೆಗೆ ಪೋಷಕಾಂಶಗಳ ಕೊರತೆ ಇಲ್ಲದಿರುವಾಗ ನೀಡುವ ಇಂತಹ ಔಷದಗಳು, ಬೇರೊಂದು ಸಮಸ್ಯೆಗೆ ಕಾರಣವೆನಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ದಿನನಿತ್ಯ ಎರಡು ಹೊತ್ತಿನ ಊಟಗಳ ನಡುವೆ ಮಕ್ಕಳು ತಿನ್ನುವ ತಿಂಡಿಗಳೂ ಆರೋಗ್ಯರಕ್ಷಣೆ ಹಾಗೂ ಶಾರೀರಿಕ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಈ ಉಪಾಹಾರಗಳಲ್ಲಿ "ನಿಷ್ಪ್ರಯೋಜಕ ಆಹಾರ" (ಜಂಕ್ ಫುಡ್) ಗಳ ಸೇವನೆಯು ಶಾರೀರಿಕ ಬೆಳವಣಿಗೆಯನ್ನೇ ಕುಂಠಿತಗೊಳಿಸುವುದರೊಂದಿಗೆ, ಅನಾರೋಗ್ಯಗಳಿಗೂ  ಕಾರಣವೆನಿಸಬಹುದು. 

ಅತಿಯಾದ ಪ್ರೀತಿ, ವಿಪರೀತ ಶಿಸ್ತು ಮತ್ತು ಮಿತಿಮೀರಿದ ಶಿಕ್ಷೆಗಳು ನಿಸ್ಸಂದೇಹವಾಗಿಯೂ ಮಕ್ಕಳಲ್ಲಿ ಹಠಮಾರಿತನ ಬೆಳೆಯಲು ಮೂಲ ಕಾರಣವೆನಿಸುತ್ತವೆ. ತಮ್ಮ "ಆಜ್ಞೆ" ಯನ್ನು ಶಿರಸಾ ವಹಿಸಿ ಪರಿಪಾಲಿಸಬೇಕೆಂದು ಬಯಸುವ ಅನೇಕ ಮಾತಾಪಿತರು, ತಮ್ಮ ಮಕ್ಕಳ ಮಾತು- ಭಾವನೆಗಳಿಗೆ ಕಿಲುಬುಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಇದು ನಿಜಕ್ಕೂ ಸರಿಯಲ್ಲ. ಮಕ್ಕಳ ಬೇಕು-ಬೇಡಗಳನ್ನು ಅರಿತುಕೊಂಡು,ಅವರ ಮನೋಭಾವನೆಗಳನ್ನು ಅರ್ಥೈಸಿಕೊಂಡು ವರ್ತಿಸುವುದು, ಮಕ್ಕಳ ನಡವಳಿಕೆಗಳ ಹಿತದೃಷ್ಟಿಯಿಂದ ಒಳಿತೆನಿಸುವುದು. 

ಪ್ರತಿಯೊಂದು "ಕ್ರಿಯೆ"ಗೂ ಅದಕ್ಕೆ ಅನುಗುಣವಾದ "ಪ್ರತಿಕ್ರಿಯೆ" ಇರುವುದು ಸತ್ಯ. ಅದೇ ರೀತಿಯಲ್ಲಿ ಮಕ್ಕಳೊಂದಿಗೆ ನೀವು ತೋರುವ ವರ್ತನೆಗಳಿಗೆ ಅನುಗುಣವಾಗಿ ಮಗು ಪ್ರತಿಕ್ರಿಯಿಸುವುದು ಸ್ವಾಭಾವಿಕ. ಇದೇ ಕಾರಣದಿಂದಾಗಿ "ಜಾಣಮರಿ,ಇದೆಲ್ಲವನ್ನೂ ತಿಂದರೆ ನೀನು ಗುಡ್ ಬಾಯ್" ಎಂದಾಗ ಮರುಮಾತಿಲ್ಲದೆ ಊಟಮಾಡುವ ಮಗು, ಲೋ ಬಟ್ಟಲಲ್ಲಿ ಇಕ್ಕಿರುವುದನ್ನು ತಿನ್ನದೇ ಹೋದಲ್ಲಿ ನಿನ್ನ ಬೆನ್ನಿನ ಚರ್ಮ ಸುಲಿಯುತ್ತೇನೆ, ಎಂದಾಗ ಏನನ್ನೂ ತಿನ್ನದೇ ಇರುವುದು ಕೂಡಾ ಅಷ್ಟೇ ಸ್ವಾಭಾವಿಕ!. 

ಇವೆಲ್ಲಕ್ಕೂ ಮಿಗಿಲಾಗಿ ಹೆತ್ತವರು ತಮ್ಮ ಬಾಲ್ಯದಲ್ಲಿ ತಮ್ಮ ಮಾತಾಪಿತರಿಂದ ತಾವೇನು ಅಪೇಕ್ಷಿಸಿದ್ದೆವು ಹಾಗೂ  ತಮಗೆ ಕಂಡುಬಂದಿದ್ದ ನ್ಯೂನ್ಯತೆಗಳೇನು ಎಂದು ನೆನಪಿಸಿಕೊಂಡಲ್ಲಿ, ತಮ್ಮ ಮಕ್ಕಳ ಲಾಲನೆ ಪೋಷನೆಗಳು ಸುಲಭವೆನಿಸೀತು. 

ಅಂತಿಮವಾಗಿ ನಿಮ್ಮ ಮಕ್ಕಳ ಬೇಕು-ಬೇಡಗಳನ್ನು ಅರಿತುಕೊಂಡು, ಅವರ ದೈನಂದಿನ ಚಟುವಟಿಕೆ ಇತ್ಯಾದಿಗಳನ್ನು ಪರಿಗಣಿಸಿ,ವಿವಿಧ ಪೋಷಕಾಂಶಗಳಿಂದ ಸಮೃದ್ಧವಾದ ವೈವಿಧ್ಯಮಯ ಆಹಾರಗಳನ್ನು ನೀಡಿರಿ. ಅವಶ್ಯಕತೆಯಿದ್ದಲ್ಲಿ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರು ಅಥವಾ ಶಿಶುತಜ್ಞರ ಸಲಹೆಯನ್ನು ಪಡೆಯಿರಿ. 

ಡಾ.ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೯-೧೨-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment