Tuesday, August 27, 2013

Civic sense - responsibility





                           ನಾಗರಿಕ ಪ್ರಜ್ಞೆಯ ಕೊರತೆ: ಪರಿಹಾರವಾಗದು ಸಮಸ್ಯೆ 
ಘಟನೆ-೧
ರಾತ್ರಿ  ಹತ್ತು ಗಂಟೆಯ ಹೊತ್ತಿಗೆ ತರಾತುರಿಯಿಂದ ಮನೆಗೆ ಮರಳುತ್ತಿದ್ದ ಸುರೇಶನು, ತನ್ನ ಮನೆಯ ಸಮೀಪದ ರಸ್ತೆಯ ಹೊಂಡದಲ್ಲಿ ತುಂಬಿಸಿದ್ದ ಕಲ್ಲೊಂದನ್ನು ಎಡವಿ ಬಿದ್ದ ರಭಸಕ್ಕೆ ಆತನ ಮುಂಗೈ ಮೂಳೆ ಮುರಿದಿತ್ತು. ತಕ್ಷಣ ಸಮೀಪದ ಆಸ್ಪತ್ರೆಗೆ ಧಾವಿಸಿ,ತಜ್ಞವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದು ಹೊರಬೀಳುವಾಗ,ಆತನ ಕಿಸೆಯಿಂದ ಒಂದು ಸಾವಿರ ರೂಪಾಯಿಗಳು ಖರ್ಚಾಗಿದ್ದವು!. 

ಕಳೆದ ಒಂದು ತಿಂಗಳಿನಿಂದ ಸುರೇಶನ ಮನೆಯ ಸಮೀಪದಲ್ಲಿನ ದಾರಿದೀಪ ಕೆಟ್ಟಿದ್ದು, ಈ ವಿಚಾರವನ್ನು ಆತನು ನಿರ್ಲಕ್ಷಿಸಿದ್ದುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವೆನಿಸಿತ್ತು. 

ಮರುದಿನ ಪುರಸಭೆಯ ಕಚೇರಿಗೆ ತೆರಳಿದ್ದ ಸುರೇಶನು ತನ್ನ ಮನೆಯ ಸಮೀಪದ ದಾರಿದೀಪ ಕೆಟ್ಟು ಹೋಗಿ ತಿಂಗಳು ಕಳೆದರೂ ದುರಸ್ತಿ ಪಡಿಸದ ಪುರಸಭಾ ನೌಕರರ ವಿರುದ್ಧ ಕೆಂಡಕಾರಿದ್ದನು. ತುಸು ಉದ್ವಿಗ್ನನಂತೆ ಕಾಣುತ್ತಿದ್ದ ಆತನನ್ನು, ಮುಖ್ಯಾಧಿಕಾರಿಗಳು ಕುಳಿತುಕೊಳ್ಳಲು ಹೇಳಿದ್ದರು. ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿಸುತ್ತಿರುವ ಜವಾಬ್ದಾರಿಯುತ ನಾಗರಿಕನಾಗಿರುವ ತನಗೆ, ನಗರದ ನಿವಾಸಿಗಳ ಸಮಸ್ಯೆಗಳನ್ನು ಹಾಗೂ ಕುಂದುಕೊರತೆಗಳನ್ನು ಪರಿಹರಿಸದ ಪುರಸಭೆಯ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕಂಡೊಡನೆ ಕೆಂಡಾಮಂಡಲ ಸಿಟ್ಟುಬರುತ್ತದೆ ಎಂದು ದೂರಿದ್ದನು. ಜೊತೆಗೆ ನಗರದ ರಸ್ತೆಗಳ ದುಸ್ಥಿತಿ,ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ,ತುಂಬಿತುಳುಕುವ ಕಸದ ತೊಟ್ಟಿಗಳು ಇತ್ಯಾದಿಗಳಿಂದ ಜನಸಾಮಾನ್ಯರಿಗೆ ಸಂಭವಿಸುತ್ತಿರುವ ತೊಂದರೆಗಳ ಬಗ್ಗೆ ದೂರುಗಳ ಸರಮಾಲೆಯನ್ನೆ ಬಿಚ್ಚಿಟ್ಟನು. 

ಸುರೇಶನ ಟೀಕಾ ಪ್ರಹಾರ ಮುಗಿಯುವ ತನಕ ಸುಮ್ಮನಿದ್ದ ಮುಖ್ಯಾಧಿಕಾರಿ, ದಾರಿದೀಪ ಕೆಟ್ಟಿರುವ ಬಗ್ಗೆ ಮತ್ತು ಇದೀಗ ತಾವು ವಿವರಿಸಿದ ಇತರ ಸಮಸ್ಯೆಗಳ ಬಗ್ಗೆ ಪುರಸಭಾ ಕಚೇರಿಯಲ್ಲಿ ದೂರನ್ನು ದಾಖಲಿಸಿ ಎಷ್ಟು ದಿನಗಳು ಕಳೆದಿವೆ ಎಂದು ಕೇಳಿದಾಗ, ಸುರೇಶನ ಮುಖ ನಿಸ್ತೇಜವಾಗಿತ್ತು. ಏಕೆಂದರೆ ಸುರೇಶನು ಮನೆಯ ಸಮೀಪದ ದಾರಿದೀಪ ಕೆಟ್ಟಿರುವ ಹಾಗೂ ಅನ್ಯ ಸಮಸ್ಯೆಗಳ ಬಗ್ಗೆ ಒಂದೇ ಒಂದು ಬಾರಿಯಾದರೂ ದೂರನ್ನೇ ದಾಖಲಿಸಿರಲಿಲ್ಲ!.  

ಘಟನೆ-೨

ತನ್ನ ಮನೆಗೆ ನಾಲ್ಕಾರು ದಿನಗಳಿಂದ ನಲ್ಲಿನೀರು ಬಾರದ ಕಾರಣದಿಂದಾಗಿ ಪಕ್ಕದ ಮನೆಯ ಬಾವಿಯಿಂದ ನೀರೆಳೆದು ಹೊತ್ತು ಸುಸ್ತಾದ  ಶಾಮಣ್ಣನವರು, ನೀರನ್ನು ಬಿಡುವ ಪುರಸಭೆಯ ಸಿಬಂದಿಯನ್ನು ಮನಸಾರೆ ಶಪಿಸುತ್ತಿದ್ದರು. ಜೊತೆಗೆ ಈ ಸಮಸ್ಯೆಗೆ ಕರ್ತವ್ಯದ ಮೇಲಿದ್ದ ಸಿಬಂದಿ ರಜೆಯ ಹಾಕಿರುವುದೇ ಕಾರಣವೆಂದು ನಂಬಿದ್ದರು. ಆದರೆ ಮುಂದಿನ ಮೂರುದಿನಗಳ ಬಳಿಕವೂ ನಲ್ಲಿನೀರು ಬರದಿದ್ದಾಗ, ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ ಶಾಮಣ್ಣನವರಿಗೆ ತಮ್ಮ ಹಿಂದಿನ ರಸ್ತೆಯಲ್ಲಿರುವ ಮನೆಗಳಿಗೆ ನೀರು ಬರುತ್ತಿರುವುದು ತಿಳಿದುಬಂದಿತ್ತು. 

ಪುರಸಭೆಯ ಕಚೇರಿಯಲ್ಲಿ ಈ ಬಗ್ಗೆ ದೂರನ್ನು ನೀಡುವಂತೆ ನೆರೆಕರೆಯವರು ಸೂಚಿಸಿದರೂ,ಶಾಮಣ್ಣನವರು ಮಾತ್ರ ಇದಕ್ಕೆ ಸಿದ್ಧರಿರಲಿಲ್ಲ. ಏಕೆಂದರೆ ಹಿಂದೊಮ್ಮೆ ಇಂತಹ ದೂರೊಂದನ್ನು ನೀಡಲು ಹೋಗಿದ್ದ ಸಂದರ್ಭದಲ್ಲಿ, ಸಂಬಂಧಿತ ಇಲಾಖೆಯ ಅಧಿಕಾರಿಯೊಬ್ಬರು ಉದ್ಧಟತನದಿಂದ ವರ್ತಿಸಿ ತನ್ನನ್ನು ಅವಮಾನಿಸಿದ್ದ ಘಟನೆಯನ್ನು ಶಾಮಣ್ಣ ಮರೆತಿರಲಿಲ್ಲ. ಇದೇ ಕಾರಣದಿಂದಾಗಿ ಪುರಸಭೆಗೆ ದೂರುಸಲ್ಲಿಸದಿದ್ದ ಶಾಮಣ್ಣನವರ ಮನೆಗೆ, ಮುಂದಿನ ಮೂರು ವಾರಗಳ ಕಾಲ ನಲ್ಲಿನೀರು ಬರಲೇ ಇಲ್ಲ!. 

ಘಟನೆ-೩

ನಗರದ ಹೊರವಲಯದ ಬಡಾವಣೆಯ ರಸ್ತೆಯೊಂದರ ಚರಂಡಿಯಲ್ಲಿ ಬೀದಿನಾಯಿಯೊಂದು ಸತ್ತುಬಿದ್ದಿತ್ತು. ಯಾವುದೋ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಈ ನಾಯಿಯು, ಒಂದೆರಡು ದಿನಗಳ ಕಾಲ ಅರೆಜೀವವಾಗಿ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದು ಅಂತಿಮವಾಗಿ ಚರಂಡಿಯಲ್ಲಿ ಬಿದ್ದು ಸತ್ತಿತ್ತು. 

ಸುಮಾರು ಮೂರು ದಿನಗಳ ಬಳಿಕ ಸತ್ತ ನಾಯಿಯ ಶವವು ಕೊಳೆಯಲಾರಂಭಿಸಿ  ಸುತ್ತಮುತ್ತಲ ಪರಿಸರದಲ್ಲಿ ದುರ್ವಾಸನೆ ಹಬ್ಬಿತ್ತು. ಕರವಸ್ತ್ರದಿಂದ ಮೂಗನ್ನು  ಮುಚ್ಚಿಕೊಂಡು ಓಡಾಡುತ್ತಿದ್ದ ಸ್ಥಳೀಯರು,ತಮ್ಮ ವಾರ್ಡಿನ ಜನಪ್ರತಿನಿಧಿ ಮತ್ತು ಪೌರಕಾರ್ಮಿಕರನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರೂ ಪುರಸಭೆಗೆ ದೂರನ್ನು ನೀಡುವ ಗೋಜಿಗೆ ಹೋಗಿರಲಿಲ್ಲ. ಏಕೆಂದರೆ ಈ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿರುವುದರಿಂದ, ಯಾರಾದರೂ ದೂರು ನೀಡಲಿ ಎನ್ನುವ ಮನೋಭಾವ ಇವರೆಲ್ಲರಲ್ಲೂ ಇದ್ದಿತು. ಅಂತೆಯೇ ಈ ದುರ್ಗಂಧವನ್ನು ಸಹಿಸಿಕೊಳ್ಳುವಷ್ಟು ಸಹನೆಯೂ ಇತ್ತು!. 

ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆ 

ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ ಪ್ರತಿಯೊಂದು ಊರುಗಳಲ್ಲೂ ಉದ್ಭವಿಸುವ ವೈವಿಧ್ಯಮಯ ಸಾರ್ವಜನಿಕ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಮತ್ತು ಇವುಗಳನ್ನು ತ್ವರಿತಗತಿಯಲ್ಲಿ ಪರಿಹರಿಸದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು-ನೌಕರರ ನಿರ್ಲಕ್ಷ್ಯಗಳ ಬಗ್ಗೆ ಜನಸಾಮಾನ್ಯರು ಕಿಡಿಕಾರುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ತಮ್ಮ ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆಗಳನ್ನು ಮಾತ್ರ ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ನಿಜ ಹೇಳಬೇಕಿದ್ದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆಗಳು  ನಿಶ್ಚಿತವಾಗಿಯೂ ಇರಲೇಬೇಕು. ಇವುಗಳನ್ನು ಸಂದರ್ಭೋಚಿತವಾಗಿ ಹಾಗೂ ಸಮರ್ಪಕವಾಗಿ, ,ಬಹುತೇಕ ಸಾರ್ವಜನಿಕ ಸಮಸ್ಯೆಗಳು ಮತ್ತು ಕುಂದುಕೊರತೆಗಳು ಸುಲಭದಲ್ಲೇ ಪರಿಹಾರಗೊಳ್ಳುತ್ತವೆ. ಆದರೆ ಅಧಿಕತಮ ಜನರು ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸದೇ, ತಮ್ಮ ಊರಿನ ಜನರು ನಿಷ್ಪ್ರಯೋಜಕರು ಎಂದು ದೂರುತ್ತಾರೆ. ಈ ಸಂದರ್ಭದಲ್ಲಿ ತಾವು ಕೂಡಾ ಈ ಊರಿನ ಜನರಲ್ಲಿ ಒಬ್ಬರು ಎನ್ನುವುದನ್ನು ಮಾತ್ರ ಮರೆತುಬಿಡುತ್ತಾರೆ. 

ಸಾಮಾನ್ಯವಾಗಿ ಪುರಜನರನ್ನು ಪೀಡಿಸುವ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಂಸ್ಥೆಗೆ ದೂರನ್ನೇ ನೀಡದಿದ್ದಲ್ಲಿ, ಇವುಗಳು ಪರಿಹಾರಗೊಳ್ಳುವ ಸಾಧ್ಯತೆಗಳೇ ಇರುವುದಿಲ್ಲ. ಜೊತೆಗೆ ದೂರು ನೀಡಿದ ಬಳಿಕವೂ ಸಮಸ್ಯೆ ಪರಿಹಾರಗೊಳ್ಳದೇ ಇದ್ದಲ್ಲಿ  ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಿ, ತಾವು ನೀಡಿದ್ದ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳುವಷ್ಟು ವ್ಯವಧಾನವೂ ನಾಗರಿಕರಲ್ಲಿ ಇರಲೇಬೇಕು. 

ಉದಾಹರಣೆಗೆ ಸುರೇಶನ ಮನೆಯ ಸಮೀಪದ ದಾರಿದೀಪ ಕೆಟ್ಟಿರುವ ವಿಚಾರ ಪುರಸಭೆಯ ನೌಕರರಿಗೆ ತಿಳಿಯುವುದಾದರೂ ಹೇಗೆ?. ಪುರಸಭಾ ವ್ಯಾಪ್ತಿಯಲ್ಲಿ ಬೆಳಗುವ ಸಹಸ್ರಾರು ದಾರಿದೀಪಗಳನ್ನು ಪುರಸಭೆಯ ನೌಕರರು, ಪ್ರತಿದಿನ ಕತ್ತಲಾದ ಬಳಿಕ ಪರಿಶೀಲಿಸುವುದು ಅಸಾಧ್ಯ ಎನ್ನುವುದು ಸುರೇಶನಿಗೆ ಅರಿಯದ ವಿಚಾರವೇನಲ್ಲ.ನಿಜಸ್ಥಿತಿ ಹೀಗಿರುವಾಗ ಯಾರಾದರೂ ಈ ಬಗ್ಗೆ ದೂರು ನೀಡದೆ ಇದ್ದಲ್ಲಿ, ಇಲ್ಲಿನ ದಾರಿದೀಪ ದುರಸ್ಥಿಯಾಗುವ ಸಾಧ್ಯತೆಗಳೇ ಇಲ್ಲ. 

ಅದೇ ರೀತಿಯಲ್ಲಿ ಶಾಮಣ್ಣನವರ ಮನೆಯಿರುವ ಬೀದಿಯಲ್ಲಿ ನಲ್ಲಿನೀರು ಬರಿತ್ತಿಲ್ಲವೆಂದು ನೀರು ಬಿಡುವ ಸಿಬಂದಿಗೆ ಗೊತ್ತಾಗುವುದೆಂತು?. ನಗರದ ಹೊರವಲಯದಲ್ಲಿರುವ ಚರಂಡಿಯೊಂದರಲ್ಲಿ ನಾಯಿ ಸತ್ತುಬಿದ್ದಿರುವುದು ಪೌರಕಾರ್ಮಿಕರಿಗೆ ತಿಳಿಯುವುದು ಹೇಗೆ?.ಈ ರೀತಿಯ ಸಮಸ್ಯೆಗಳು ಕ್ಷಿಪ್ರಗತಿಯಲ್ಲಿ  ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ರತಿಯೊಬ್ಬ ನಾಗರಿಕರು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಸ್ಥಳೀಯ ಸಂಸ್ಥ್ಹೆಯೊಂದಿಗೆ ಸಹಕರಿಸಬೇಕು. 

ದೂರು- ಪರಿಹಾರ 

ಜನಸಾಮಾನ್ಯರು ತಮ್ಮನ್ನು ಬಾಧಿಸುತ್ತಿರುವ ಪೌರ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ದೂರು ನೀಡಲೇಬೇಕು. ಜೊತೆಗೆ ಈ ದೂರಿನಲ್ಲಿ ನಿರ್ದಿಷ್ಟ ಸಮಸ್ಯೆಯ ಎಲ್ಲ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ "ಸಾರ್ವಜನಿಕ ಕುಂದುಕೊರತೆ ಮತ್ತು ಪರಿಹಾರ" ವಿಭಾಗವಿದ್ದು, ಇಲ್ಲಿ ದೂರನ್ನು ದಾಖಲಿಸಲು ಮುದ್ರಿತ ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಅರ್ಜಿಗಳಲ್ಲಿ ಆರೋಗ್ಯ,ಶಿಕ್ಷಣ,ಸಾಮಾನ್ಯ ಆಡಳಿತ,ನಗರ ಯೋಜನೆ,ಕಂದಾಯ,ಪಶು ಸಂಗೋಪನೆ,ತೋಟಗಾರಿಕೆ,ಮಾಹಿತಿ ತಂತ್ರಜ್ಞಾನ,ಸಮುದಾಯ ಅಭಿವೃದ್ಧಿ ಮತ್ತು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ೧೨೮ ಸಮಸ್ಯೆಗಳನ್ನು ನಮೂದಿಸಿರುತ್ತಾರೆ. ಇವುಗಳಲ್ಲಿ ತಮಗೆ ಸಂಬಂಧಿಸಿದ ಸಮಸ್ಯೆಯ ಕ್ರಮಸಂಖ್ಯೆಯ ಸುತ್ತಲೂ ವೃತ್ತವೊಂದನ್ನು ಗುರುತಿಸಿ,ತಮ್ಮ ಹೆಸರು,ವಿಳಾಸಗಳನ್ನು ನಮೂದಿಸಿ ದೂರನ್ನು ದಾಖಲಿಸಬೇಕು. ಈ ಅರ್ಜಿಯಲ್ಲಿ ಮುದ್ರಿತವಾಗಿರದ ಸಮಸ್ಯೆಯನ್ನು ನಮೂದಿಸಲೂ ಪ್ರತ್ಯೇಕ ಸ್ಥಳಾವಕಾಶವಿದೆ. ದೂರು ದಾಖಲಿಸಿದ ಬಳಿಕ ಇದರ ಸ್ವೀಕೃತಿಯನ್ನು ತಪ್ಪದೆ ಪಡೆದುಕೊಂಡಲ್ಲಿ, ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಸ್ವೀಕೃತಿಯ ಆಧಾರದದಲ್ಲಿ ಮೇಲಧಿಕಾರಿಗಳೊಂದಿಗೆ ವ್ಯವಹರಿಸಬಹುದು. 

ಶ್ಯಾಮಣ್ಣನವರಂತೆ ಪುರಸಭಾ ಕಚೇರಿಗೆ ಭೇಟಿ ನೀಡಲು ಹಿಂಜರಿವ ಅಥವಾ ಕಾರಣಾಂತರಗಳಿಂದ ಭೇಟಿನೀಡಲಾಗದ ನಾಗರಿಕರಿಗಾಗಿ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ದಿನದ ೨೪ ತಾಸುಗಳೂ ದೂರವಾಣಿ ಅಥವಾ ಅಂತರ್ಜಾಲದ(ಇಂಟರ್ ನೆಟ್) ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಈ ವಿಧಾನದಲ್ಲಿ ದೂರು  ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿ, ಮುಂದೆ ದೂರವಾಣಿ- ಅಂತರ್ಜಾಲದ ಮೂಲಕ ಅವಶ್ಯಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಸಾರ್ವಜನಿಕ ಸಮಸ್ಯೆಗಳು ಮತ್ತು ಪುರಸಭೆ ನೀಡುವ ಸೇವಾ ಸೌಲಭ್ಯಗಳಲ್ಲಿ ಉದ್ಭವಿಸಬಹುದಾದ ಕುಂದುಕೊರತೆಗಳ ಪರಿಹಾರಕ್ಕಾಗಿ ಇಷ್ಟೆಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದರೂ, ಅಧಿಕತಮ ಜನರಿಗೆ ಈ ವಿಚಾರ ತಿಳಿದಿಲ್ಲ. ಇದನ್ನು ತಿಳಿದಿರುವ ಅನೇಕ ನಾಗರಿಕರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಸಮಸ್ಯೆಗಳು ಪರಿಹಾರವಾಗದಿರಲು ಸ್ಥಳೀಯ ಸಂಸ್ಥೆಗಳ ಸಿಬಂದಿಗಳೇ ಕಾರಣವೆಂದು ದೂರುವ ಹವ್ಯಾಸವನ್ನು ಮಾತ್ರ ನಿಲ್ಲಿಸುವುದೇ ಇಲ್ಲ!. 

ಡಾ.ಸಿ . ನಿತ್ಯಾನಂದ ಪೈ,ಪುತ್ತೂರು                                                              

ಉದಯವಾಣಿ ಪತ್ರಿಕೆಯ ೨೯-೧೧-೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment