Wednesday, August 7, 2013

Saamaanya sheeta.........


                        ಸಾಮಾನ್ಯ ಶೀತ -  ತೊಂದರೆಗಳು ವಿಪರೀತ !

ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳನ್ನು ತಪ್ಪದೆ ಪೀಡಿಸುವ, ತನ್ನ ಸಾಂಕ್ರಾಮಿಕತೆಯಿಂದಾಗಿ ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಹರಡಬಲ್ಲ ಹಾಗೂ ಬಹುತೇಕ ಭಾರತೀಯರಲ್ಲಿ ಅನೇಕ ತಪ್ಪುಕಲ್ಪನೆಗಳಿಗೆ ಕಾರಣವೆನಿಸಿರುವ ಕಾಯಿಲೆಗಳಲ್ಲಿ "ಸಾಮಾನ್ಯ ಶೀತ " ಪ್ರಮುಖವಾಗಿದೆ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ. 

ಮುಂಗಾರು ಮಳೆ ಬಂದೆರಗಿದಂತೆಯೇ ಆರಂಭವಾಗುವ ಪಾಥಶಾಲೆಗಳಿಗೆ ತೆರಳುವ ತಮ್ಮ ಮಕ್ಕಳನ್ನು ತಪ್ಪದೆ ಬಾಧಿಸುವ ಶೀತ-ಜ್ವರಗಳ ಬಗ್ಗೆ ಮಾತಾಪಿತರು ಚಿಂತಿತರಾಗುವುದು ಸ್ವಾಭಾವಿಕ. ಧಾರಾಕಾರವಾಗಿ ಸುರಿಯುವ ಮಳೆಯಿಂದ ಮಕ್ಕಳನ್ನು ರಕ್ಷಿಸಲು ಕೊಡೆ, ರೈನ್ ಕೋಟ್, ಟೋಪಿ ಮತ್ತು "ಥಂಡಿ " ಯಿಂದ ಕಾಪಾಡಲು ಸ್ವೆಟರ್ ಗಳನ್ನೂ ತೊಡಿಸುವ ಮಾತಾಪಿತರು, ಇಷ್ಟೆಲ್ಲಾ ಮುಂಜಾಗರೂಕತೆ ವಹಿಸಿದರೂ ತಮ್ಮ ಮಕ್ಕಳನ್ನು ಶೀತದ ಬಾಧೆಯಿಂದ ರಕ್ಷಿಸಲು ವಿಫಲರಾಗುತ್ತಾರೆ!. ಅದರಲ್ಲೂ "ತೀರ್ಥ ಕುಡಿದರೆ ಶೀತ, ಆರತಿ ಪಡೆದರೆ ಉಷ್ಣ" ವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳಂತೂ,ಅಡಿಗಡಿಗೆ ಬಾಧಿಸುವ ನೆಗಡಿಯ ತೊಂದರೆಗಳಿಂದ ಹೈರಾಣಾಗುತ್ತಾರೆ. 

ತಪ್ಪು ಕಲ್ಪನೆಗಳು 

ವಿದ್ಯಾವಂತ- ಅವಿದ್ಯಾವಂತರೆನ್ನುವ ಭೇದವಿಲ್ಲದೇ ಅನೇಕ ಭಾರತೀಯರು ಸಾಮಾನ್ಯ ಶೀತದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಹಿಂದಿನ ತಲೆಮಾರಿನವರು ಹೇಳುತ್ತಿದ್ದಂತೆ ಥಂಡಿಯ ಬಾಧೆ, ಮಳೆಯಲ್ಲಿ ನೆನೆಯುವುದು, ಚಳಿಗಾಲದಲ್ಲಿ ಇಬ್ಬನಿ ತಲೆಗೆ ಬೀಳುವುದು,ತಣ್ಣನೆಯ ಗಾಳಿ, ಐಸ್ ಕ್ರೀಮ್ - ತಣ್ಣಗಿನ ರಸಗಳ ಸೇವನೆ ಇತ್ಯಾದಿಗಳು ಶೀತ ಬಾಧಿಸಲು ಕಾರಣವೆನಿಸುವುದಿಲ್ಲ. ಇದು ನಿಜವಾಗಿದ್ದಲ್ಲಿ ಕಡುಬೇಸಗೆಯ ದಿನಗಳಲ್ಲಿ ಯಾರಿಗೂ ಶೀತ ಬಾಧಿಸುವ ಸಾಧ್ಯತೆಗಳೇ ಇರಲಿಲ್ಲ!. 

ಏನಿದು ಸಾಮಾನ್ಯ ಶೀತ?

"ಔಷದ ಸೇವಿಸಿದರೆ ಒಂದು ವಾರದಲ್ಲಿ ಹಾಗೂ ಔಷದ ಸೇವಿಸದೇ ಇದ್ದಲ್ಲಿ ಏಳು ದಿನಗಳಲ್ಲಿ ಗುಣವಾಗುವುದು " ಎನ್ನುವ ಆಡುಮಾತಿನಿಂದ ಪ್ರಖ್ಯಾತವಾಗಿರುವ ಶೀತ ಅಥವಾ ನೆಗಡಿ ಎನ್ನುವ ವ್ಯಾಧಿಯ ಬಾಧೆಯನ್ನು ಅನುಭವಿಸದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ವೈದ್ಯಕೀಯ ಪರಿಭಾಷೆಯಲ್ಲಿ Coryza ಅಥವಾ Common cold ಎಂದು ಕರೆಯಲ್ಪಡುವ ಈ ಪೀಡೆಗೆ, ಸುಮಾರು 250 ಕ್ಕೂ ಹೆಚ್ಚು ವಿಧದ ರಿನೊ ವೈರಸ್ಗಳು ಕಾರಣವಾಗಿವೆ. 

ನಿಮ್ಮನ್ನು ಒಂದುಬಾರಿ ಬಾಧಿಸಿದ ಒಂದು ನಿರ್ದಿಷ್ಟ ರಿನೊ ವೈರಸ್ ನ ವಿರುದ್ಧ ನಿಮ್ಮ ಶರೀರವು ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಇದರಿಂದಾಗಿ ಇದೇ ವೈರಸ್ ನಿಮ್ಮನ್ನು ಮತ್ತೊಮ್ಮೆ ಬಾಧಿಸದು. ಆದರೆ 250 ಕ್ಕೂ ಹೆಚ್ಚು ವಿಧದ ಇಂತಹ ವೈರಸ್ ಗಳಿಂದಾಗಿ, ನಿಮ್ಮನ್ನು ಬಾಧಿಸಿದ ಒಂದು ವೈರಸ್ ನ ಹಾವಳಿ ಕಡಿಮೆಯಾದೊಡನೆ, ಮತ್ತೊಂದು ವಿಧದ ರಿನೊ ವೈರಸ್ ನಿಂದಾಗಿ ಮತ್ತೊಮ್ಮೆ ಶೀತ ಪ್ರತ್ಯಕ್ಷವಾಗುವುದು ಅಪರೂಪವೇನಲ್ಲ!. 

ಸಾಮಾನ್ಯವಾಗಿ ಒಂದು ವಿಧದ ರಿನೊ ವೈರಸ್ ನ ಸೋಂಕಿನಿಂದ "ವೈರಲ್ ರಿನೈಟಿಸ್ ' ಅರ್ಥಾತ್ ಶೀತ ಆರಂಭವಾಗುವುದು. ಈ ವೈರಸ್ ಗಳು ರೋಗಪೀಡಿತ ವ್ಯಕ್ತಿಗಳ ಸಂಪರ್ಕದಿಂದ,ರೋಗಪೀಡಿತರಾಗದಿದ್ದರೂ ತಮ್ಮ ಶರೀರದಲ್ಲಿ ಈ ವೈರಸ್ ಗಳನ್ನೂ ಸಲಹುವ "ವಾಹಕ " ರಿಂದ (ಉದಾ- ಆಸ್ಪತ್ರೆಯಲ್ಲಿನ ವೈದ್ಯರು ಅಥವಾ ದಾದಿಯರು ), ರೋಗಿ ಶೀನಿದಾಗ-ಕೆಮ್ಮಿದಾಗ ಹೊರಬೀಳುವ ತುಂತುರುಗಳ ಮೂಲಕ, ರೋಗಿ ಮುಟ್ಟಿರುವ -ಬಳಸಿರುವ ವಸ್ತುಗಳನ್ನು ಮತ್ತೊಬ್ಬರು ಬಳಸುವುದರಿಂದ ಸುಲಭವಾಗಿ ಹಾಗೂ ಸಾಂಕ್ರಾಮಿಕವಾಗಿ ಹರಡುತ್ತವೆ. 

ಆದರೆ ಜನಸಾಮಾನ್ಯರು ನಂಬಿರುವಂತೆ ಥಂಡಿಯ ಬಾಧೆ,ಹವಾಮಾನದ ವೈಪರೀತ್ಯ,ಶೀತಕಾರಕ ಆಹಾರ ಪದಾರ್ಥಗಳ ಸೇವನೆಗಳು "ಶೀತ " ಕ್ಕೆ ಕಾರಣವೆನಿಸುವುದಿಲ್ಲ. ಕಡುಬೇಸಗೆಯಲ್ಲಿ ಹಠಾತ್ತಾಗಿ ಸುರಿಯುವ ಅಕಾಲಿಕ ಮಳೆಯಿಂದಾಗಿ ವಾತಾವರಣದ ಉಷ್ಣತೆಯು ಕ್ಷಣಮಾತ್ರದಲ್ಲಿ ಬದಲಾಗುವಂತಹ ಸ್ಥಿತಿಯು, ಶೀತದ ವೈರಸ್ ಗಳ ಬೆಳವಣಿಗೆಗೆ ಅನುಕೂಲಕರವಾಗಿ ಪರಿಣಮಿಸಬಹುದು. ಇಂತಹ ಸಂದರ್ಭಗಳಲ್ಲಿ ಈ ವೈರಸ್ ನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಮತ್ತು ಇವುಗಳ ಹಾವಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. 

ಶೀತದ ಲಕ್ಷಣಗಳು 

ರಿನೊ ವೈರಸ್ ಗಳು ನಿಮ್ಮ ಮೂಗಿನ ಮೂಲಕ ಶರೀರದಲ್ಲಿ ಪ್ರವೇಶಿಸಿದ 24 ರಿಂದ 48 ಗಂಟೆಗಳಲ್ಲಿ ಶೀತದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಸದ್ದು ಮಾಡದೇ ಬಂದೆರಗುವ ಈ ವೈರಸ್ ಗಳಿಂದಾಗಿ ಮೂಗಿನಲ್ಲಿ ಕಚಗುಳಿಯಂತಹ ಸಂವೇದನೆಯೊಂದಿಗೆ ಶೀನು ಆರಂಭವಾಗುವುದು. ತದನಂತರ ಮೂಗಿನಿಂದ ನೀರಿಳಿಯುವುದು, ಕಣ್ಣುಗಳಲ್ಲಿ ಉರಿ, ಗಂಟಲು ಶುಷ್ಕವಾದಂತಾಗಿ ಕೆರೆತ,ಕೆಮ್ಮು, ತಲೆನೋವು-ತಲೆಭಾರ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾಲ್ಕಾರು ದಿನಗಳ ಕಾಲ ಬಾಧಿಸುವ ಶೀತದೊಂದಿಗೆ ದ್ವಿತೀಯ ಹಂತದ ಸೋಂಕು ತಲೆದೋರಿದಲ್ಲಿ, ಮೂಗಿನಿಂದ ದಪ್ಪವಾದ ಹಳದಿ ಅಥವಾ ಹಸಿರುಮಿಶ್ರಿತ ಹಳದಿ ಬಣ್ಣದ ಸಿಂಬಳ ಒಸರುವುದು ಅಪರೂಪವೇನಲ್ಲ. ಈ ಶ್ಲೇಷ್ಮದಿಂದಾಗಿ ಮೂಗಿನಿಂದ ಉಸಿರಾಡಲು ಅದಚನೆಯಾಗುವುದು. ಇದಲ್ಲದೆ ಶರೀರದ ಮಾಂಸಪೇಶಿಗಳಲ್ಲಿ ನೋವು,ಅತಿ ಆಯಾಸ ಹಾಗೂ ಅಲ್ಪ ಪ್ರಮಾಣದ ಜ್ವರವೂ ಬಾಧಿಸಬಹುದು. ಮತ್ತೆ ಕೆಲವರಲ್ಲಿ ಉಲ್ಬಣಿಸಿದ ಶೀತದಿಂದಾಗಿ ತೀವ್ರಜ್ವರ,ಮಾತನಾಡುವಾಗ ಧ್ವನಿ ಬದಲಾಗುವುದು ಅಥವಾ ಸ್ವರವೇ ಇಲ್ಲದಂತಾಗುವುದು,ತೀವ್ರ ಕೆಮ್ಮು ಮತ್ತು ವಿಪರೀತ ತಲೆನೋವಿನಂತಹ ಸಮಸ್ಯೆಗಳು ಪ್ರತ್ಯಕ್ಷವಾಗಳು ದ್ವಿತೀಯ ಹಂತದ ಬ್ಯಾಕ್ಟೀರಿಯಾಗಳ ಸೋಂಕು ಕಾರಣವೆನಿಸುತ್ತದೆ. 

ಆದರೆ ಪದೇಪದೇ ಬಾಧಿಸುವ, ಕ್ಷಣಮಾತ್ರದಲ್ಲಿ ಆರಂಭವಾಗಿ ಕೇವಲ ಶೀನು ಮತ್ತು ಮೂಗಿನಿಂದ ನೀರಿಳಿಯುವುದಕ್ಕೆ ಸೀಮಿತವಾಗಿರುವ ಹಾಗೂ ಮೇಲೆ ವಿವರಿಸಿದ ಶೀತದ ಅನ್ಯ ಲಕ್ಷಣಗಳನ್ನೇ ತೋರದ, ಸೂಕ್ತ ಔಷದವನ್ನು ಸೇವಿಸಿದೊಡನೆ ಮಾಯವಾಗುವ ಶೀತವು "ಅಲರ್ಜಿ ' ಯಿಂದ ಉದ್ಭವಿಸುವುದು. ಅಲರ್ಜಿಕ್ ರಿನೈಟಿಸ್ ಎಂದು ಕರೆಯಲ್ಪಡುವ ಈ ಸಮಸ್ಯೆಗೆ ಶೀತಕ್ಕೆ ಕಾರಣವೆನಿಸಬಲ್ಲ ರಿನೊ ವೈರಸ್ ಗಳು ಕಾರಣವಲ್ಲ. 

ಅಸಾಮಾನ್ಯ ತೊಂದರೆಗಳು 

ಶೀತ ಪೀಡಿತ ವ್ಯಕ್ತಿಗಳಿಗೆ "ಸೈನಸೈಟಿಸ್ " ಆರಂಭವಾದಲ್ಲಿ ಇನ್ನಷ್ಟು ತೊಂದರೆಗಳು ತಲೆದೋರುತ್ತವೆ. ಇದರಿಂದಾಗಿ ವಿಪರೀತ ಹಾಗೂ ಸಹಿಸಲಾಗದ ತಲೆನೋವು ಪೀಡಿಸುತ್ತದೆ. ಇದಲ್ಲದೇ ಮುಖದ ಭಾಗದಲ್ಲಿ ಕಣ್ಣಿನ ಹುಬ್ಬುಗಳು ಮತ್ತು ಮೂಗಿನ ಹೊಳ್ಳೆಗಳ ಇಕ್ಕೆಲಗಳಲ್ಲಿನ ಸೈನಸ್  ಗಳಿಗೆ ಸೋಂಕು ತಗಲಿದ ಪರಿಣಾಮವಾಗಿ ಇಲ್ಲಿ ಒತ್ತಿದಾಗ ಅಥವಾ ತಲೆಯನ್ನು ಬಗ್ಗಿಸಿ ಕೆಲಸ ಮಾಡುವಾಗ ತಲೆನೋವು ಅಸಹನೀಯವೆನಿಸುತ್ತದೆ. ರೋಗಿಗಳ ನಿರ್ಲಕ್ಷ್ಯದಿಂದಾಗಿ ಅಥವಾ ಇತರ ಕಾರಣಗಳಿಂದಾಗಿ ಈ ಸಮಸ್ಯೆ ಸುದೀರ್ಘಕಾಲ ಉಳಿದುಕೊಂಡಲ್ಲಿ , ಮೂಗಿನಿಂದ ನಿರಂತರವಾಗಿ ನೀರಿಳಿಯುವುದು , ಶ್ವಾಸೋಚ್ವಾಸದ ಅಡಚಣೆ ಮತ್ತು ತೀವ್ರ ತಲೆನೋವಿನಂತಹ ಸಮಸ್ಯೆಗಳು ಸತತವಾಗಿ ಬಾಧಿಸುವುದು ಅಪರೂಪವೇನಲ್ಲ. 

ಇದಲ್ಲದೆ ಶ್ರವಣ ಇಂದ್ರಿಯದ ನರಗಳ ಉರಿಯೂತದಿಂದ ಕಿವುಡುತನ,ನಡುಕಿವಿಯ ಸೋಂಕು,ಕಿವಿ ಸೋರುವುದು,ಕಿವಿನೋವು ಮತ್ತು ಜ್ವರಗಳು ಸಾಮಾನ್ಯವಾಗಿ ಶೀತಪೀಡಿತ ಮಕ್ಕಳಲ್ಲಿ ಕಂದುಬರುವುದುಂಟು. ದ್ವಿತೀಯ ಹಂತದ ಸೋಂಕಿನಿಂದ ಸಂಭವಿಸಬಲ್ಲ ಇಂತಹ ತೊಂದರೆಗಳೊಂದಿಗೆ ಗಂಟಲು,ಧ್ವನಿಪೆಟ್ಟಿಗೆ,ಶ್ವಾಸನಾಳಗಳು ಮತ್ತು ಶ್ವಾಸಕೋಶಗಳ ಸೋಂಕು- ಉರಿಯೂತಗಳೂ ಅನೇಕರನ್ನು ಕಾಡುತ್ತವೆ. ದೀರ್ಘಕಾಲೀನ ಶ್ವಾಸಕೋಶಗಳ ಅದಚನೆಯಂತಹ ವ್ಯಾಧಿ ಪೀಡಿತರು,ಆಸ್ತಮಾ ರೋಗಿಗಳು ಮತ್ತು ಶ್ವಾಸಕೋಶ ಸಂಬಂಧಿತ ಅನ್ಯ ಕಾಯಿಲೆಗಳು ಇರುವ ರೋಗಿಗಳಿಗೆ ಸಾಮಾನ್ಯ ಶೀತ ಬಾಧಿಸಿದಲ್ಲಿ, ಇವರ ಆರೋಗ್ಯದ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವ ಸಾಧ್ಯತೆಗಳಿವೆ. 

ಚಿಕಿತ್ಸೆ 

ಸಾಮಾನ್ಯ ಶೀತವನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಪತ್ತೆಹಚ್ಚಿಲ್ಲ. ಇದೇ ಕಾರಣದಿಂದಾಗಿ ರೋಗಿಗಳಲ್ಲಿ ಕಂಡುಬರುವ ಲಕ್ಷಣಗಳಿಗೆ ಹಾಗೂ ಇದರೊಂದಿಗೆ ಉದ್ಭವಿಸಿದ ಇತರ ಸಮಸ್ಯೆಗಳಿಗೆ ಅನುಗುಣವಾಗಿ, ಅವಶ್ಯಕ ಔಷದಗಳನ್ನು ವೈದ್ಯರು ನೀಡಬೇಕಾಗುತ್ತದೆ. 
ಶೀತ ಆರಂಭವಾದ ಮೊದಲ ಎರಡು -ನಾಲ್ಕು ದಿನಗಳ ಕಾಲ ಇದು ತೀವ್ರವಾಗಿ ಹರಡುವುದರಿಂದ ,ಈ ಅವಧಿಯಲ್ಲಿ ಶೀತ ಪೀಡಿತರು ಏಕಾಂತವಾಸ ಮಾಡಿದಲ್ಲಿ ಇದರ ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. 

ನಿಮಗಿದು ತಿಳಿದಿರಲಿ 

ವಿಶ್ವಾದ್ಯಂತ ವ್ಯಾಪಕವಾಗಿ ಹರಡಬಲ್ಲ ಕಾಯಿಲೆಗಳಲ್ಲಿ ಸಾಮಾನ್ಯ ಶೀತಕ್ಕೆ ಅಗ್ರ ಸ್ಥಾನ ಸಲ್ಲುತ್ತದೆ. ಜೊತೆಗೆ 250 ಕ್ಕೂ ಹೆಚ್ಚು ವಿಧದ ವೈರಸ್ ಗಳು ಇದಕ್ಕೆ ಕಾರಣವೆನಿಸಿರುವುದರಿಂದ , ನಮ್ಮೆಲ್ಲರಿಗೂ ವರ್ಷದಲ್ಲಿ ಕನಿಷ್ಠ ಒಂದರಿಂದ ಆರು ಬಾರಿ ಶೀತ ಬಾಧಿಸುವ ಸಾಧ್ಯತೆಗಳಿವೆ. ನಿಮ್ಮನ್ನು ಒಮ್ಮೆ ಬಾಧಿಸಿದ ರಿನೊ ವೈರಸ್ ನ ವಿರುದ್ಧ ನಿಮ್ಮ ಶರೀರವು ಪ್ರತಿರೋಧಕ ಶಕ್ತಿಯನ್ನು ಗಳಿಸುವುದರಿಂದ,ಅದೇ ವೈರಸ್ ಮತ್ತೊಮ್ಮೆ ನಿಮ್ಮನ್ನು ಬಾಧಿಸದು. ಆದರೆ ಮನುಷ್ಯನ ಜೀವಿತಾವಧಿಯಲ್ಲಿ 250 ಕ್ಕೂ ಅಧಿಕ ವಿಧದ ರಿನೊ ವೈರಸ್ ಸೋಂಕುಗಳು ಒಬ್ಬ ವ್ಯಕ್ತಿಗೆ ತಗಲುವ ಹಾಗೂ ಇವುಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ.  

ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಗೆ ಹೋಗದಿರಲು ಕಾರಣವೆನಿಸುವ ಕಾಯಿಲೆಗಳಲ್ಲಿ, ಶೀತಕ್ಕೆ ಆಗ್ರ ಸ್ಥಾನ ಸಲ್ಲುತ್ತದೆ. 

ನಿಮ್ಮ ಪುಟ್ಟ ಕಂದನಿಗೆ ಶೀತ ಬಾಧಿಸಿದಾಗ ಸ್ನಾನವನ್ನು ಮಾಡಿಸಿದಲ್ಲಿ  ಥಂಡಿಯ ಬಾಧೆಯಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸುವುದೆಂದು ನಂಬಿ, ಟಾಲ್ಕಂ ಪೌಡರ್ ನ ಸ್ನಾನ ಮಾಡಿಸದಿರಿ. ಟಾಲ್ಕಂ ಎನ್ನುವ ಕಲ್ಲಿನ ನುಣುಪಾದ ಹುಡಿಯಿಂದ ತಯಾರಾದ ಪೌಡರ್ ಎನ್ನುವ "ಧೂಳು " , ನಿಮ್ಮ ಕಂದನ ಮೂಗು ಕಟ್ಟುವಿಕೆ,ಶೀನು ಹಾಗೂ ಕೆಮ್ಮಿನ ಬಾಧೆ ಇನ್ನಷ್ಟು ಹೆಚ್ಚಲು ಕಾರಣವೆನಿಸುವುದು. ಅದೇ ರೀತಿಯಲ್ಲಿ ಮಗುವನ್ನು ಥಂಡಿಯ ಬಾಧೆಯಿಂದ ರಕ್ಷಿಸಲು ಮತ್ತು ಬೆಚ್ಚಗೆ ಇರಿಸಲು ನೀವು ತೊಡಿಸುವ ಉಣ್ಣೆಯ ಟೋಪಿ ಮತ್ತು ಸ್ವೆಟರ್ ಗಳಲ್ಲಿ ಇರಬಹುದಾದ ಸೂಕ್ಷ್ಮಾಣು ಜೀವಿಗಳು, ಶೀತದ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇತ್ತೀಚಿಗೆ ನಡೆಸಿದ್ದ ವೈದ್ಯಕೀಯ ಅಧ್ಯಯನದ ವರದಿಯಂತೆ ಮನೆಯಲ್ಲೇ ಇರುವ ಮಕ್ಕಳಿಗಿಂತಲೂ ಬಾಲವಾಡಿಗೆ ಹೋಗುವ ಮಕ್ಕಳಲ್ಲಿ ಶೀತದ ಬಾಧೆಯು ಎರಡರಿಂದ ಮೂರು ಪಟ್ಟು ಹೆಚ್ಚಿದೆ. ಆದರೆ ಬಾಲವಾಡಿಗೆ ಹೋಗುವ ಮಕ್ಕಳು ಇದರಿಂದಾಗಿ ಗಳಿಸಿಕೊಳ್ಳುವ ಪ್ರತಿರೋಧಕ ಶಕ್ತಿಯು, ಮುಂದೆ ಈ ಮಕ್ಕಳಿಗೆ ಸಾಕಷ್ಟು ರಕ್ಷಣೆಯನ್ನು ನೀಡುತ್ತದೆ. 

ನೀವು ದಿನನಿತ್ಯ ನೋಡುವ ಟಿ. ವಿ . ಜಾಹೀರಾತುಗಳಲ್ಲಿ ತೋರಿಸುವಂತೆ ಹಣೆ,ಮೂಗು ಮತ್ತು ಎದೆಗೆ ಹಚ್ಚುವ ಔಷದಗಳಿಂದ ಅಥವಾ ಪ್ರಬಲವಾದ ಒಂದು ಮಾತ್ರೆಯ ಸೇವನೆಯಿಂದ, ಇರುಳು ಕಳೆದು ಬೆಳಗಾಗುವಷ್ಟರಲ್ಲಿ ಶೀತ ಗುಣವಾಗುವುದೆಂದು ಇವುಗಳ ತಯಾರಕರು ಘೋಷಿಸುವುದು ಅಪ್ಪಟ ಸುಳ್ಳು. ಏಕೆಂದರೆ ಈ ರೀತಿಯಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲೇ ಶೀತವನ್ನು ಗುಣಪಡಿಸಬಲ್ಲ ಔಷದವನ್ನು ಸಂಶೋಧಿಸಿದ ವ್ಯಕ್ತಿಗೆ "ನೊಬೆಲ್  ಪ್ರಶಸ್ತಿ " ಕಟ್ಟಿಟ್ಟ ಬುತ್ತಿ !. ಆದರೂ ಇಂತಹ ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನಂಬಿ, ಔಷದ ಅಂಗಡಿಗಳಿಂದ ದುಬಾರಿ ಬೆಲೆಯನ್ನು ತೆತ್ತು ಖರೀದಿಸುವ ಅಮಾಯಕರಿಂದಾಗಿ ಇವುಗಳ ತಯಾರಕರಿಗೆ ಕೋಟ್ಯಂತರ ರೂಪಾಯಿಗಳ ಲಾಭವಾಗುತ್ತಿರುವುದು ಮಾತ್ರ ಸತ್ಯ !. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು  

No comments:

Post a Comment