Thursday, August 1, 2013

Alumium vessels-are they safe?

 ಅಲ್ಯುಮಿನಿಯಂ ಪಾತ್ರೆಗಳಬಳಕೆ
ಅನಾರೋಗ್ಯಕರವೇ?

ಭೂಮಿಯ ಮೇಲೆ ಓಡಾಡುವ ಮೋಟಾರು ವಾಹನಗಳಿಂದ ಹಿಡಿದು ಆಗಸದಲ್ಲಿ ಹಾರಾಡುವ ವಿಮಾನಗಳ ನಿರ್ಮಾಣದಲ್ಲೂ ವ್ಯಾಪಕವಾಗಿ ಬಳಸಲ್ಪಡುವ ಅಲ್ಯುಮಿನಿಯಂ ಲೋಹವು, ಬಹುತೇಕ ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿದೆ. ಏಕೆಂದರೆ ಬಡತನದ ರೇಖೆಗಿಂತ ಕೆಳಗಿರುವ ಅಧಿಕತಮ ಭಾರತೀಯರು, ದಿನನಿತ್ಯ ಬಳಸುವ ಪಾತ್ರೆಪಗಡಿಗಳಲ್ಲಿ ಅಲ್ಯುಮಿನಿಯಂ ಪಾತ್ರೆಗಳಿಗೆ ಅಗ್ರ ಸ್ಥಾನ ಸಲ್ಲುತ್ತದೆ. 

ಅತ್ಯಂತ ಹಗುರವಾದ,ನೋಡಲು ಆಕರ್ಷಕವೆನಿಸುವ ಹಾಗೂ ಇತರ ಲೋಹಗಳೊಂದಿಗೆ ಹೋಲಿಸಿದಾಗ ಸಾಕಷ್ಟು ಅಗ್ಗವೆನಿಸುವ ಮತ್ತು ಹಳೆಯದಾದರೂ ಮತ್ತೆ ಮಾರಾಟ ಮಾಡಬಹುದಾದ ಅಲ್ಯುಮಿನಿಯಂ, ಜಗತ್ತಿನಾದ್ಯಂತ ಇನ್ನಿತರ ಉದ್ದೇಶಗಳಿಗೂ ಬಳಸಲ್ಪಡುತ್ತಿದೆ. ಆದರೆ ಭಾರತದ ಬಹುತೇಕ ಬಡವರು ತಮ್ಮ ಮೂರುಹೊತ್ತಿನ ತುತ್ತನ್ನು ಬೇಯಿಸಲು ಅನಿವಾರ್ಯವಾಗಿ ಬಳಸುವ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಸಂಕ್ಷಿಪ್ತ ವಿವರಗಳು ಇಲ್ಲಿವೆ. 

ಅಲ್ಜೀಮರ್ಸ್ ಕಾಯಿಲೆಗೆ ಕಾರಣ?

ಇಂಗ್ಲೆಂಡ್ ನ ಕಾರ್ನವಾಲ್  ಪ್ರದೇಶದ ವ್ಯಾಪ್ತಿಯಲ್ಲಿರುವ ಕ್ಯಾಮಲ್ ಫೋರ್ಡ್ ಹಳ್ಳಿಯ ನಿವಾಸಿಯಾಗಿದ್ದ ಕರೋಲ್ ಕ್ರಾಸ್ ಎನ್ನುವ ಮಹಿಳೆಯು 2004 ರಲ್ಲಿ ಅಲ್ಜೀಮರ್ಸ್ ಕಾಯಿಲೆಯಿಂದ ಮೃತಪಟ್ಟಿದ್ದಳು. ಈಕೆಯ ಮರಣಕ್ಕೆ ಸುಮಾರು 16 ವರ್ಷಗಳ ಹಿಂದೆ ಸಂಭವಿಸಿದ್ದ 'ರಾಸಾಯನಿಕ ದುರಂತ" ದ ಪರಿಣಾಮವಾಗಿ, ಕುಡಿಯುವ ನೀರಿನ ಮೂಲವು ಅಲ್ಯುಮಿನಿಯಂ ನಿಂದ ಕಲುಷಿತವಾಗಿದ್ದುದೇ ಕಾರಣವೆನಿಸಿತ್ತು. ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಂತೆ ಆಕೆಯ ಮೆದುಳಿನ ಟಿಶ್ಯೂ ಗಳಲ್ಲಿ ಅತ್ಯಧಿಕ ಪ್ರಮಾಣದ ಅಲ್ಯುಮಿನಿಯಂ ನ ಅಂಶಗಳು ಪತ್ತೆಯಾಗಿದ್ದವು. ಕ್ರಿಸ್ಟೋಫಾರ್ ಎಕ್ಸ್ ಲೀ ಎನ್ನುವ ಕೆಮಿಸ್ಟ್ ಮತ್ತು ಮಾರ್ಗರೆಟ್ ಎಸಿರಿ ಎನ್ನುವ ನ್ಯೂರಾಲಜಿಸ್ಟ್ ಇವರ ತಂಡವು, ಈ ಅಂಶವನ್ನು ಪತ್ತೆಹಚ್ಚಿದ ಬಳಿಕ ಈ ಬಗ್ಗೆ ಇನ್ನಷ್ಟು ಅಧ್ಯಯನಗಳನ್ನು ನಡೆಸಿದ್ದರು. 

ಕರೋಲ್ ಕ್ರಾಸ್ ಳ ಮರಣಕ್ಕೆ ಅಪರೂಪದಲ್ಲಿ ಕಾಣಸಿಗುವ ಒಂದು ವಿಧದ ಅಲ್ಜೀಮರ್ಸ್ ಕಾಯಿಲೆಯೇ ಕಾರಣವಾಗಿತ್ತು. ಸಾಮಾನ್ಯವಾಗಿ ಅಲ್ಜೀಮರ್ಸ್ ಕಾಯಿಲೆಯು 70 ರಿಂದ 80 ವರ್ಷದ ವೃದ್ಧರನ್ನು ಪೀಡಿಸುವುದಾದರೂ, ಕ್ರಾಸ್ ಈ ವ್ಯಾಧಿಯಿಂದ ಮೃತಪಟ್ಟಾಗ ಆಕೆಯ ವಯಸ್ಸು ಕೇವಲ 58 ವರ್ಷಗಳಾಗಿತ್ತು!. ಇದಲ್ಲದೇ ಅನುವಂಶಿಕವಾಗಿ ಈ ವ್ಯಾಧಿಯು ಆಕೆಯನ್ನು ಬಾಧಿಸಿರಬಹುದೆನ್ನಲು, ಆಕೆಯ ಪೂರ್ವಜರಲ್ಲಿ ಯಾರೊಬ್ಬರಿಗೂ ಅಲ್ಜೀಮರ್ಸ್ ಕಾಯಿಲೆ ಇರಲೇ ಇಲ್ಲ. 

ಕರೋಲ್ ಕ್ರಾಸ್ ಳೊಂದಿಗೆ ಇದೇ ಹಳ್ಳಿಯ ಸುಮಾರು 20,000 ನಿವಾಸಿಗಳು, ಹಿಂದೆ ಸಂಭವಿಸಿದ್ದ ರಾಸಾಯನಿಕ ದುರಂತದ ದುಷ್ಪರಿಣಾಮಗಳಿಗೆ ಈಡಾಗಿದ್ದರು. 1988 ರಲ್ಲಿ ನಡೆದಿದ್ದ ಈ ದುರಂತದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಲು ಬಳಸುವ "ಅಲ್ಯುಮಿನಿಯಂ ಸಲ್ಫೇಟ್" ದ್ರಾವಣವನ್ನು ಸಾಗಿಸುತ್ತಿದ್ದ ಲಾರಿಯ ಚಾಲಕನು, 20 ಟನ್ ಗಳಷ್ಟು ದ್ರಾವಣವನ್ನು ಕುಡಿಯುವ ನೀರಿನ ಸಂಗ್ರಹಾಗಾರಕ್ಕೆ ಆಕಸ್ಮಿಕವಾಗಿ ಸುರಿದಿದ್ದನು. ಈ ವಿಚಾರವನ್ನು ತಿಳಿಯದ ಅಮಾಯಕ ನಿವಾಸಿಗಳು, ಹಲವಾರು ವಾರಗಳ ಕಾಲ ಇದೇ ಕಲುಷಿತ ನೀರನ್ನು ಪ್ರತಿನಿತ್ಯ ಕುಡಿದಿದ್ದರು. ತತ್ಪರಿಣಾಮವಾಗಿ ಹಲವಾರು ವರ್ಷಗಳ ಬಳಿಕ ಈ ಹಳ್ಳಿಯ ಅನೇಕ ನಿವಾಸಿಗಳಿಗೆ "ಮರೆಗುಳಿತನ"ದ ತೊಂದರೆಗಳು ಆರಂಭವಾಗಿದ್ದವು. ಈ ಮರೆಗುಳಿತನವು ಅಲ್ಜೀಮರ್ಸ್ ಕಾಯಿಲೆಯ ಪ್ರಾಥಮಿಕ ಲಕ್ಷಣವೂ ಆಗಿದೆ. 

ಈ ಘಟನೆಯ ಬಗ್ಗೆ ಸವಿಸ್ತಾರವಾದ ಅಧ್ಯಯನವನ್ನು ನಡೆಸಿದ ಬಳಿಕ ಅಲ್ಯುಮಿನಿಯಂ ನಿಂದ ಅಲ್ಜೀಮರ್ಸ್ ಕಾಯಿಲೆ ಉದ್ಭವಿಸುವ ಸಾಧ್ಯತೆಗಳಿವೆ ಎಂದು ಕ್ರಿಸ್ಟೋಫಾರ್ ಎಕ್ಸ್ ಲೀ ಮತ್ತು ಮಾರ್ಗರೆಟ್ ಎಸಿರಿ ಸಂದೇಹಿಸಿದ್ದರು. ಆದರೆ ಈ ಅಧ್ಯಯನದ ವರದಿಗಳು ಪ್ರಕಟಗೊಂಡಿದ್ದ ಜರ್ನಲ್ ಆಫ್ ನ್ಯೂರಾಲಜಿ, ನ್ಯೂರೋ ಸರ್ಜರಿ ಎಂಡ್ ಸೈಕಿಯಾಟ್ರಿ ಎನ್ನುವ ಪತ್ರಿಕೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡೇನಿಯಲ್ ಪರ್ಲ್ ಎನ್ನುವ ನ್ಯೂರಾಲಜಿಸ್ಟ್,ಇದನ್ನು ಅಲ್ಲಗಳೆದಿದ್ದರು. ಜೊತೆಗೆ ಈ ವಿಚಾರವು ವಿವಾದಾಸ್ಪದವಾಗಿರುವುದರಿಂದ,ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗದು ಎಂದಿದ್ದರು. 

ಅದೇನೇ ಇರಲಿ, ಇಂತಹ ಅಧ್ಯಯನದ ವರದಿಗಳಿಂದಾಗಿ ಜನಸಾಮಾನ್ಯರು ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಲು ಅಂಜುವ ಸಾಧ್ಯತೆಗಳಿವೆ. ಆದರೆ ತಜ್ಞರು ಹೇಳುವಂತೆ ಅಡುಗೆಗಾಗಿ ಬಳಸುವ ಅಲ್ಯುಮಿನಿಯಂ ಪಾತ್ರೆಗಳು ಕರಗುವ ಸಾಧ್ಯತೆಗಳು ಇಲ್ಲದಿರುವುದರಿಂದ ಈ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಆದರೂ ಈ ಪಾತ್ರೆಗಳಲ್ಲಿ ಆಮ್ಲೀಯ ಗುಣವುಳ್ಳ (ಟೊಮೇಟೊ,ನಿಂಬೆ,ಅಂಬಟೆ ಇತ್ಯಾದಿ) ವಸ್ತುಗಳನ್ನು ಬೇಯಿಸಿದಲ್ಲಿ, ಇವುಗಳು ಅಲ್ಯುಮಿನಿಯಂ ನೊಂದಿಗೆ ಪ್ರತಿಕ್ರಿಯಿಸುವುದರಿಂದ ಕರಗಬಲ್ಲ ಈ ಲೋಹದ ಒಂದು ಅಂಶವು ನಿಮ್ಮ ಉದರವನ್ನು ಸೇರುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಆಮ್ಲೀಯ ಗುಣವುಳ್ಳ ಆಹಾರ ಪದಾರ್ಥಗಳನ್ನು ಬೇಯಿಸಲು  ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸದೇ ಇರುವುದು ಹಿತಕರವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 


No comments:

Post a Comment