Friday, August 2, 2013

Muttu mundooduva matregalu!


                                   ಮುಟ್ಟು ಮುಂದೂಡುವ ಮಾತ್ರೆಗಳು!

ಅವಿಭಕ್ತ ಹಿಂದೂ ಕುಟುಂಬವೊಂದರ ಸೊಸೆಯಾಗಿರುವ ಸುಮತಿಗೆ, ಇತ್ತೀಚಿನ ಕೆಲದಿನಗಳಿಂದ ಅತಿಆಯಾಸ,ತಲೆತಿರುಗುವಿಕೆ,ತಲೆನೋವುಗಳೊಂದಿಗೆ ಅನಿಯಮಿತ  ರಜೋಸ್ರಾವದ ತೊಂದರೆಗಳು ಬಾಧಿಸಲು ಆರಂಭಿಸಿದ್ದವು. ಇದರೊಂದಿಗೆ ಆಕೆಯ ಶರೀರದ ಗಾತ್ರವೂ ಸಾಕಷ್ಟು ಹೆಚ್ಚಿದ್ದರಿಂದ, ತನ್ನ ಧಡೂತಿ ದೇಹವೇ ಈ ಸಮಸ್ಯೆಗಳಿಗೆ ಕಾರಣವೆಂದು ಭಾವಿಸಿದ್ದಳು. 

ಒಂದಿಷ್ಟು ಪಥ್ಯ ಹಾಗೂ ದೈನಂದಿನ ವ್ಯಾಯಾಮ- ನಡಿಗೆಗಳಿಂದ ಸಮಸ್ಯೆ ಪರಿಹಾರಗೊಳ್ಳದ ಕಾರಣದಿಂದಾಗಿ, ಅನ್ಯಮಾರ್ಗವಿಲ್ಲದೆ ಸುಮತಿಯು ಪರಿಚಿತ ವೈದ್ಯರಲ್ಲಿ ತೆರಳಿದ್ದಳು. ಆಕೆಯ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡ ವೈದ್ಯರು, ಶಾರೀರಿಕ ತಪಾಸಣೆಯನ್ನು ಮಾಡಿದಾಗ ಆಕೆಯ ರಕ್ತದೊತ್ತಡವು ಹೆಚ್ಚಿರುವುದು ಪತ್ತೆಯಾಗಿತ್ತು. ಆಕೆಯ ತೊಂದರೆಗಳಿಗೆ ಮೂಲಕಾರಣ ಎನಿಸಿದ್ದ ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯಗಳು ಅನುವಂಶಿಕವಾಗಿ ಬಂದಿಲ್ಲವೆನ್ನುವುದನ್ನು ಖಾತರಿ ಪಡಿಸಿಕೊಂಡ ವೈದ್ಯರು, ಈ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇದರಿಂದಾಗಿ ಸುಮತಿಯು ಕಳೆದ 20 ವರ್ಷಗಳಿಂದ ತನಗೆ ಬೇಕೆನಿಸಿದಾಗಲೆಲ್ಲ, "ಮುಟ್ಟು ಮುಂದೂಡುವ ಮಾತ್ರೆ" ಗಳನ್ನು ಸೇವಿಸುತ್ತಿದ್ದುದು ತಿಳಿದುಬಂದಿತ್ತು. ವೈದ್ಯರ ಅಭಿಪ್ರಾಯದಂತೆ ಅನಿಯಮಿತವಾಗಿ ಹಾಗೂ ಅತಿಯಾಗಿ ಆಕೆಯು ಸೇವಿಸುತ್ತಿದ್ದ ಈ ಮಾತ್ರೆಗಳೇ ಆಕೆಯ ಸಮಸ್ಯೆಗಳಿಗೆ ಕಾರಣವೆನಿಸಿದ್ದವು. ವಿಶೇಷವೆಂದರೆ ಸುಮತಿಗೆ ಇಂತಹ ಮಾತ್ರೆಗಳನ್ನು ಗರ್ಭಧಾರಣೆಯನ್ನು ತಡೆಯಲು ಬಳಸುವ ಬಗ್ಗೆ ಹಾಗೂ ಈ ಹಾರ್ಮೋನ್ ಮಾತ್ರೆಗಳ ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಏನೇನೂ ತಿಳಿದಿರಲಿಲ್ಲ. ಸುಮಾರು 20 ವರ್ಷಗಳ ಹಿಂದೆ ಆಕೆಯ ವಿವಾಹದ ಸಂದರ್ಭದಲ್ಲಿ ,ಮುಟ್ಟು ಮುಂದೂಡುವ ಸಲುವಾಗಿ ಪರಿಚಿತ ವೈದ್ಯರು ಸೂಚಿಸಿದ್ದ ಮಾತ್ರೆಗಳನ್ನು, ಆಕೆಯು ಹಲವಾರು ವರ್ಷಗಳಿಂದ ಔಷದ ಅಂಗಡಿಗಳಿಂದ ಖರೀದಿಸಿ, ತನಗೆ ಬೇಕೆನಿಸಿದಾಗ ಬಳಸುತ್ತಿದ್ದಳು!. 

ಸುಮತಿಯು ಈ ಮಾತ್ರೆಗಳನ್ನು ಪದೇಪದೇ ಬಳಸುತ್ತಿರಲು ನಿರ್ದಿಷ್ಟ ಕಾರಣಗಳೂ ಇದ್ದವು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಹಿರಿಯ ಸೋಸೆಯಾಗಿದ್ದ ಆಕೆಯು, ಮನೆಯ ಯಜಮಾನಿಯ ಕರ್ತವ್ಯವನ್ನೂ ನಿಭಾಯಿಸಬೇಕಾಗಿತ್ತು. ಪ್ರತಿನಿತ್ಯ ದೇವರ ಪೂಜೆ ನಡೆಯುವ ಈ ಮನೆಯಲ್ಲಿ, ಮುಟ್ಟಾದ ಹೆಂಗಸರು ಕಡ್ಡಾಯವಾಗಿ ಹೊರಗೆ ಕೂರಬೇಕಿತ್ತು. ಜೊತೆಗೆ ಇಲ್ಲಿ ನಡೆಯುತ್ತಿದ್ದ ಶುಭ- ದೇವತಾ ಕಾರ್ಯಗಳು ಮತ್ತು ಇತರ ಧಾರ್ಮಿಕ ಆಚರಣೆಗಳಿಗೆ ಇತಿಮಿತಿಗಳೇ ಇರಲಿಲ್ಲ. ಇವೆಲ್ಲ ಕಾರಣಗಳಿಂದಾಗಿ ಇಂತಹ ಸಂದರ್ಭಗಳಲ್ಲಿ ಹೊರಗೆ ಕೂರಲು ಬಯಸದ ಸುಮತಿಯು,ಮುಟ್ಟು ಮುಂದೂಡುವ ಮಾತ್ರೆಗಳ ಮೊರೆಹೊಗುತ್ತಿದ್ದಳು. ಈ ರೀತಿಯಲ್ಲಿ ಸುದೀರ್ಘಕಾಲ ಆಕೆ ಸೇವಿಸಿದ್ದ ಹಾರ್ಮೋನ್ ಮಾತ್ರೆಗಳು, ಅಂತಿಮವಾಗಿ ಆಕೆಯ ಆರೋಗ್ಯವನ್ನು ಹದಗೆಡಿಸಲು ಯಶಸ್ವಿಯಾಗಿದ್ದವು. 

ಅಜ್ಞಾನದಿಂದ ಅನಾರೋಗ್ಯ 

ಬಹುತೇಕ ಭಾರತೀಯ ನಾರಿಯರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ " ಮುಟ್ಟು ಮುಂದೂಡುವ ಮಾತ್ರೆ"ಗಳನ್ನು ಸೇವಿಸುತ್ತಾರೆ. ನಮ್ಮ ಪೂರ್ವಜರು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದ ಅನೇಕ ಮೂಢನಂಬಿಕೆಗಳನ್ನು, ಈ ವೈಜ್ಞಾನಿಕ ಯುಗದಲ್ಲೂ  ಮುಂದುವರೆಸಿರುವುದು ಇದಕ್ಕೊಂದು ಪ್ರಮುಖ ಕಾರಣ ಎಂದಲ್ಲಿ ತಪ್ಪೆನಿಸಲಾರದು. 

ಹಿಂದಿನ ಕಾಲದಲ್ಲಿ ಅನೇಕ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮೈನೆರೆದ ಬಾಲಕಿಯರಿಂದ ಆರಂಭಿಸಿ, ಮಹಿಳೆಯರಲ್ಲಿ ಋತುಬಂಧವಾಗುವ ತನಕ ರಜೋಸ್ರಾವದ ದಿನಗಳಲ್ಲಿ ತಮ್ಮ ವಾಸ್ತವ್ಯದ ಮನೆಯನ್ನೇ ಪ್ರವೇಶಿಸುವಂತಿರಲಿಲ್ಲ. ಮುಟ್ಟಾದ ದಿನಗಳಲ್ಲಿ ಹೆಣ್ಣು "ಅಪವಿತ್ರಳು" ಎನ್ನುವ ಮೂಢನಂಬಿಕೆಯೇ ಇಂತಹ ಆಚಾರ-ವಿಚಾರಗಳಿಗೆ ಮೂಲ ಕಾರಣವೆನಿಸಿತ್ತು. ಇದೇ ಕಾರಣದಿಂದಾಗಿ ಹಬ್ಬಹರಿದಿನಗಳು ಮತ್ತು ಶುಭಕಾರ್ಯಗಳಲ್ಲಿ ರಜಸ್ವಲೆಯಾದವರು ಭಾಗವಹಿಸುವಂತಿರಲಿಲ್ಲ. ತತ್ಪರಿಣಾಮವಾಗಿ ಇಂತಹ ಸಂದರ್ಭಗಲ್ಲಿ ಹೊರಗೆ ಉಳಿಯಲು ಬಯಸದ ಮಹಿಳೆಯರು,ಗುಟ್ಟಿನಲ್ಲಿ ಮುಟ್ಟು ಮುಂದೂಡುವ ಮಾತ್ರೆಗಳನ್ನು ಸೇವಿಸುವ ಮೂಲಕ ತಮ್ಮ "ಪಾವಿತ್ರ್ಯ"ವನ್ನು ಕಾಪಾಡಿಕೊಳ್ಳುತ್ತಿದ್ದರು!. 

ಸಾಮಾನ್ಯವಾಗಿ ಅನೇಕ ವಿದ್ಯಾವಂತ ಮಹಿಳೆಯರಿಗೂ ಇಂತಹ ಮಾತ್ರೆಗಳಲ್ಲಿ ಇರುವ ಔಷದ, ಸೇವನಾ ಕ್ರಮ, ಸೇವನೆಯ ಉದ್ದೇಶ, ಇವುಗಳ ಸೇವನೆಯಿಂದ ಉದ್ಭವಿಸಬಲ್ಲ ಅಡ್ಡ-ದುಷ್ಪರಿಣಾಮಗಳ ಬಗ್ಗೆ ಅವಶ್ಯಕ ಮಾಹಿತಿ ತಿಳಿದಿರುವುದಿಲ್ಲ. ಈ ಮಾತ್ರೆಗಳನ್ನು ಸಾಮಾನ್ಯವಾಗಿ ಗರ್ಭಧಾರಣೆಯನ್ನು ತಡೆಯಲು ಬಳಸುತ್ತಾರೆನ್ನುವ ಅರಿವೂ ಇಲ್ಲ. ಇಂತಹ ಅಜ್ಞಾನದಿಂದಾಗಿ ಅನೇಕ ಮಹಿಳೆಯರು ಹಬ್ಬಹರಿದಿನಗಳು ಮತ್ತು  ಪೂಜೆ ಪುನಸ್ಕಾರಗಳ ಸರಮಾಲೆ ಅಂತ್ಯಗೊಳ್ಳುವ ತನಕ ಸೇವಿಸುತ್ತಾರೆ. ಈ ರೀತಿಯಲ್ಲಿ ತಮಗೆ ಬೇಕೆನಿಸಿದಾಗ ಮಾತ್ರೆಗಳನ್ನು ಸೇವಿಸುವ ಮೂಲಕ, ತಮ್ಮ ರಜೋಸ್ರಾವದ ಸ್ವಾಭಾವಿಕ ವೃತ್ತವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಾರೆ!. ಈ ಪ್ರವೃತ್ತಿಯನ್ನು ಹಲವಾರು ವರ್ಷಗಳ ಕಾಲ ಪರಿಪಾಲಿಸಿದಲ್ಲಿ, ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಈಡಾಗುತ್ತಾರೆ. 

ಅನುಭವೀ ವೈದ್ಯರ ಅಭಿಪ್ರಾಯದಂತೆ ಅತ್ಯಲ್ಪ ಪ್ರಮಾಣದ ಮಹಿಳೆಯರು ಇಂತಹ ಔಷದಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುತ್ತಾರೆ. ಆದರೆ ಒಂದು ಬಾರಿ ವೈದ್ಯರು ಇದನ್ನು ಸೂಚಿಸಿದ ಬಳಿಕ, ಹಲವಾರು ವರ್ಷಗಳ ಕಾಲ ಇವುಗಳನ್ನು ಬಳಸುತ್ತಲೇ ಇರುತ್ತಾರೆ. 

ಮಾತ್ರೆಗಳಲ್ಲಿ ಏನಿದೆ?

ಸಾಮಾನ್ಯವಾಗಿ ಮುಟ್ಟನ್ನು ಮುಂದೂಡಲು ಬಳಸುವ ಮಾತ್ರೆಗಳಲ್ಲಿ ಪ್ರೊಜೆಸ್ಟೆರಾನ್  ಅಥವಾ ಈಸ್ಟ್ರೋಜೆನ್  ಮತ್ತು ಪ್ರೊಜೆಸ್ಟೆರಾನ್ ಎನ್ನುವ ಹಾರ್ಮೋನ್ ಗಳ ಸಮ್ಮಿಶ್ರಣವಿದ್ದು, ಇವುಗಳನ್ನು ಗರ್ಭನಿರೋಧಕ ಮತ್ತು ಇತರ ಕೆಲವು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಮಾತ್ರೆಗಳನ್ನು ರಜೋಸ್ರಾವದ ಐದನೆಯ ದಿನದಿಂದ ಆರಂಭಿಸಿ, 25 ದಿನಗಳ ಕಾಲ ಪ್ರತಿನಿತ್ಯ ತಪ್ಪದೆ ಸೇವಿಸಿದಲ್ಲಿ, ಸ್ತ್ರೀಯರ ಅಂಡಾಶಯಗಳಿಂದ ಅಂಡಾಣುವಿನ  ಬಿಡುಗಡೆಯನ್ನು ತಡೆಗಟ್ಟುತ್ತದೆ. ಈ ಮಾತ್ರೆಗಳ ಕ್ರಮಬದ್ಧ ಸೇವನೆಯಿಂದ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ. 25 ದಿನಗಳ ಬಳಿಕ ಮಾತ್ರೆಯ ಸೇವನೆಯನ್ನು ನಿಲ್ಲಿಸಿದ ಕೆಲದಿನಗಳಲ್ಲಿ ರಜೋಸ್ರಾವವಾಗುತ್ತದೆ. 

ಸ್ತ್ರೀಯರ ಶರೀರದಲ್ಲಿ ಸ್ವಾಭಾವಿಕವಾಗಿ ಉತ್ಪನ್ನವಾಗುವ ಹಾರ್ಮೋನ್ ಗಳ ಪ್ರಮಾಣ,ಇವರ ವಯಸ್ಸು, ಶಾರೀರಿಕ ಮತ್ತು ಮಾನಸಿಕ ಆರೋಗ್ಯಗಳ ಸ್ಥಿತಿಗತಿಗಳಿಗೆ ಅನುಗುಣವಾಗಿ, ಋತುಚಕ್ರದಲ್ಲಿ ತುಸು ವ್ಯತ್ಯಯವಾಗಬಹುದು. ಸಾಮಾನ್ಯವಾಗಿ ಋತುಚಕ್ರದ ಅಂತ್ಯದಲ್ಲಿ ಈ ಹಾರ್ಮೋನ್ ಗಳ ಪ್ರಮಾಣವು ಕಡಿಮೆಯಾದಾಗ ರಜೋಸ್ರಾವ ಸಂಭವಿಸುತ್ತದೆ. ಆದರೆ ಮುಟ್ಟನ್ನು ಮುಂದೂಡಲು ಋತುಚಕ್ರದ ಮಧ್ಯೆ ಅಥವಾ ಅಂತ್ಯದಲ್ಲಿ ಈ ಮಾತ್ರೆಗಳನ್ನು ಸೇವಿಸುವುದರಿಂದ, ಶರೀರದಲ್ಲಿ ಹಾರ್ಮೋನ್ ಗಳ ಪ್ರಮಾಣವು ಕೃತಕ ರೀತಿಯಲ್ಲಿ ಹೆಚ್ಚಾಗುವುದರಿಂದ ರಜೋಸ್ರಾವ ಮುಂದೂಡಲ್ಪಡುತ್ತದೆ. 

ಆದರೆ ತಮ್ಮ ನಿರೀಕ್ಷಿತ ರಜೋಸ್ರಾವದ ದಿನಗಳಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವ ಮಹಿಳೆಯರು  ಕೆಲವಾರು ದಿನಗಳ ಕಾಲ ಈ ಮಾತ್ರೆಗಳನ್ನು ಸೇವಿಸಿ, ನಿಗದಿತ ಕಾರ್ಯಕ್ರಮ ಮುಗಿದೊಡನೆ ಇವುಗಳ ಸೇವನೆಯನ್ನು ನಿಲ್ಲಿಸಿಬಿಡುತ್ತಾರೆ. ಇನ್ನು ಕೆಲವರಂತೂ ಹಬ್ಬಹರಿದಿನಗಳ ಸಲುವಾಗಿ ಒಂದೆರಡು ತಿಂಗಳುಗಳ ಕಾಲ ನಿರಂತರವಾಗಿ ಈ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಈ ರೀತಿಯಲ್ಲಿ ಸೇವಿಸುತ್ತಿದ್ದ ಮಾತ್ರೆಗಳನ್ನು ನಿಲ್ಲಿಸಿದೊಡನೆ ಕೆಲವರಲ್ಲಿ ಅತಿಯಾದ ರಜೋಸ್ರಾವ ಮತ್ತಿತರ ಸಮಸ್ಯೆಗಳು ಕಂಡುಬರುತ್ತವೆ. 

ಮುಂಜಾಗರೂಕತೆ 

ಗರ್ಭಧಾರಣೆಯನ್ನು ತಡೆಯುವ ಸಲುವಾಗಿ ಅಥವಾ ಮುಟ್ಟನ್ನು ಮುಂದೂಡುವ ಸಲುವಾಗಿ ಮಾತ್ರೆಗಳನ್ನು ಸೂಚಿಸುವ ಮುನ್ನ, ವೈದ್ಯರು ಸ್ತ್ರೀಯರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ಗಮನಿಸಿ ಅವಶ್ಯಕತೆ ಇದ್ದಲ್ಲಿ ಶಾರೀರಿಕ ಮತ್ತು ಇತರ ಕೆಲಪರೀಕ್ಷೆಗಳನ್ನು ನಡೆಸುತ್ತಾರೆ. ಏಕೆಂದರೆ ಇಂತಹ ಔಷದಗಳನ್ನು ಯಕೃತ್,ಹೃದಯ-ರಕ್ತನಾಳಗಳ,ಮೂತ್ರಪಿಂಡ ಸಂಬಂಧಿತ ವ್ಯಾಧಿಪೀಡಿತರು, ಅಧಿಕ ರಕ್ತದೊತ್ತಡ, ಮಧುಮೇಹ,ಅಪಸ್ಮಾರ, ಆಸ್ತಮ, ಖಿನ್ನತೆ,ಮೈಗ್ರೇನ್ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೀಡುವಂತಿಲ್ಲ. ಇದಲ್ಲದೆ ಗರ್ಭಿಣಿಯರು,ಮಗುವಿಗೆ ಮೊಲೆಯೂಡಿಸುವ ಮಾತೆಯರು,ಕೆಲವಿಧದ ಸ್ತನ ಕ್ಯಾನ್ಸರ್ ಪೀಡಿತರು,ಕಾರಣವರಿಯದ ಯೋನಿಜನ್ಯ ರಕ್ತಸ್ರಾವ, ಥ್ರಾಂಬೊ ಫ್ಲೆಬೈಟಿಸ್ , ಥ್ರಾಂಬೊ ಎಂಬೋಲಿಕ್ ಸಮಸ್ಯಾ ಪೀಡಿತರು ಮತ್ತು ಕೆಲವೊಂದು ನಿರ್ದಿಷ್ಟ ತೊಂದರೆಗಳಿಂದ ಬಳಲುತ್ತಿರುವವರು ಇಂತಹ ಮಾತ್ರೆಗಳನ್ನು ಸೇವಿಸಬಾರದು. ಆದುದರಿಂದ ಇಂತಹ ಸಮಸ್ಯಾ ಪೀಡಿತರಿಗೆ ವೈದ್ಯರು ಈ ಮಾತ್ರೆಗಳನ್ನು ಸೂಚಿಸುವುದಿಲ್ಲ. ಆದರೆ ಈ ಪ್ರಮುಖ ಮಾಹಿತಿಯನ್ನು ಅರಿತಿರದ ಮಹಿಳೆಯರು,ಔಷದ ಅಂಗಡಿಗಳಿಂದ ಇವುಗಳನ್ನು  ಖರೀದಿಸಿ ಸೇವಿಸುವ ಹವ್ಯಾಸವು  ಇಂದಿಗೂ ನಿಂತಿಲ್ಲ!. 

ಈ ಔಷದವನ್ನು ಸೇವಿಸುವ ಸ್ತ್ರೀಯರಲ್ಲಿ ಸಾಮಾನ್ಯವಾಗಿ ಹಸಿವಿಲ್ಲದಿರುವುದು,ವಾಕರಿಕೆ-ವಾಂತಿ, ಸುಸ್ತು ಮತ್ತು ಸಂಕಟಗಳಂತಹ ಸೌಮ್ಯ ರೂಪದ ತೊಂದರೆಗಳು ಬಾಧಿಸುವ ಸಾಧ್ಯತೆಗಳು ಇರುವುದರಿಂದ, ರಾತ್ರಿ ಊಟದ ಬಳಿಕ ಸೇವಿಸುವಂತೆ ವೈದ್ಯರು ಹೇಳುತ್ತಾರೆ. 

ಗಂಭೀರ ಸಮಸ್ಯೆಗಳು 

ಈ ಮಾತ್ರೆಗಳನ್ನು ಸುದೀರ್ಘಕಾಲ ಸೇವಿಸುವುದರಿಂದ ಕೆಲವೊಂದು ಗಂಭೀರ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. ಇವುಗಳಲ್ಲಿ ಸ್ತನಗಳು ತುಂಬಿ ಬಿಗಿದಂತಹ ಸಂವೇದನೆ ಅಥವಾ ನೋವು, ಚರ್ಮದ ಮೇಲೆ ದಡಿಕೆಗಳು ಮೂಡಿ ತುರಿಸುವುದು, ಯೋನಿಸ್ರಾವದಲ್ಲಿ ಹೆಚ್ಚಳ,ಮೊಲೆಹಾಲು ಕಡಿಮೆಯಾಗುವುದು,ಸ್ತನಗಳಲ್ಲಿ ಗಂಟುಗಳು ಉದ್ಭವಿಸುವುದು, ಕಣ್ಣು ಕತ್ತಲಾವರಿಸಿದಂತೆ- ಪ್ರಜ್ಞೆ ತಪ್ಪಿದಂತೆ ಆಗುವುದು,ಎದುಬ್ಬಸ, ಅತಿ ಆಯಾಸ,ಉಸಿರಾಡಲು- ಮಾತನಾಡಲು ಹಾಗೂ ನುಂಗಲು ಕಷ್ಟವೆನಿಸುವುದು,ಕೈಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಂತಾಗುವುದು, ಹೃದಯ ಬಡಿತ ಹೆಚ್ಚಾಗುವುದು, ಎದೆನೋವು, ದೃಷ್ಟಿ ಮಸುಕಾಗುವುದು,ಅಪಸ್ಮಾರದಂತಹ ಸೆಳೆತಗಳು ಬಾಧಿಸುವುದು, ಕಾಲುಗಳಲ್ಲಿ ಬಾವು ಹಾಗೂ ನೋವು, ಕೈ,ಕಾಲು,ಮುಖ,ಕಣ್ಣು ಮತ್ತು ನಾಲಿಗೆಗಳು ಊದಿಕೊಳ್ಳುವುದು, ಅನಿರೀಕ್ಷಿತವಾಗಿ ಯೋನಿಯಿಂದ ರಕ್ತಸ್ರಾವ, ಶರೀರದಲ್ಲಿ ನೀರಿನಂಶ ಸಂಗ್ರಹಗೊಂಡು ತೂಕ ಮತ್ತು ರಕ್ತದೊತ್ತಡ ಹೆಚ್ಚುವುದು, ಯಕೃತ್ತಿನ ತೊಂದರೆಗಳು ಮತ್ತು ಮಾನಸಿಕ ಖಿನ್ನತೆಗಳಂತಹ ಅನೇಕ ಆರೋಗ್ಯದ ಸಮಸ್ಯೆಗಳು ಪ್ರಮುಖವಾಗಿವೆ. 

ಇವೆಲ್ಲಕ್ಕೂ ಮಿಗಿಲಾಗಿ ಈ ಮಾತ್ರೆಗಳ ಅಡ್ಡ ಪರಿಣಾಮದಿಂದಾಗಿ ಉದ್ಭವಿಸಬಲ್ಲ, ಹೆಪ್ಪುಗಟ್ಟಿದ ರಕ್ತದ ತುಣುಕುಗಳಿಂದಾಗಿ ಹೃದಯ- ರಕ್ತನಾಳಗಳು,ಮೆದುಳು ಹಾಗೂ  ಶ್ವಾಸಕೋಶಗಳಿಗೆ ಸಂಬಂಧಿಸಿದ (ಥ್ರಾಂಬೋಸಿಸ್ ಮತ್ತು ಎಂಬೊಲಿಸಂ) ಗಂಭೀರ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಥ್ರಾಂಬೊ ಫ್ಲೆಬೈಟಿಸ್, ಡೀಪ್ ವೇಯ್ನ್ ಥ್ರಾಂಬೋಸಿಸ್ ಹಾಗೂ ಎಂಬೋಲಿಕ್ ತೊಂದರೆಗಳಿಂದ ಪೀಡಿತರಿಗೆ ಈ ಔಷದವನ್ನು ವೈದ್ಯರು ನೀಡುವುದಿಲ್ಲ. 

ಗರ್ಭಧಾರಣೆಯನ್ನು ತಡೆಗಟ್ಟುವ ಸಲುವಾಗಿ ಸುದೀರ್ಘಕಾಲ ಈ ಮಾತ್ರೆಗಳನ್ನು ಸೇವಿಸಲು ಸೂಚಿಸುವ ಮುನ್ನ ಮೇಲೆ ವಿವರಿಸಿದ ಕಾಯಿಲೆಗಳನ್ನು ಗಮನದಲ್ಲಿರಿಸಿ, ಸ್ತ್ರೀಯರನ್ನು ಪರೀಕ್ಷಿಸಿದ ಬಳಿಕವೇ ವೈದ್ಯರು ಹಸಿರು ನಿಶಾನೆಯನ್ನು ತೋರಿಸುತ್ತಾರೆ. ಈ ಸಂದರ್ಭದಲ್ಲಿ ಸ್ತ್ರೀಯರ ಹಿಂದಿನ ವೈದ್ಯಕೀಯ ವಿವರಗಳು ಹಾಗೂ ಈ ಔಷದವನ್ನು ಸೇವಿಸಬಾರದಂತಹ ಆರೋಗ್ಯದ ಸಮಸ್ಯೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಜೊತೆಗೆ ಈ ಮಾತ್ರೆಗಳನ್ನು ಸೇವಿಸುತ್ತಿರುವಷ್ಟು ಸಮಯ, ನಿಯಮಿತವಾಗಿ ಆರೋಗ್ಯದ ತಪಾಸಣೆಯನ್ನು ಮಾಡಿಸಿಕೊಳ್ಳಲು ಸಲಹೆಯನ್ನು ನೀಡುತ್ತಾರೆ. 

ಪ್ರಸ್ತುತ ಇವೆಲ್ಲಾ ಮಾಹಿತಿಗಳನ್ನು ಅರಿತುಕೊಂಡ ಬಳಿಕವೂ, ಇಂತಹ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ಹಾರ್ಮೋನ್ ಮಾತ್ರೆಗಳನ್ನು ನಿಮಗೆ ಬೇಕೆನಿಸಿದಾಗ ಸೇವಿಸುವುದು, ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  


No comments:

Post a Comment