Friday, August 23, 2013

article no.50-psychiatric problems




                                  ಮದುವೆಯಾಗದೇ ಹುಚ್ಚುಬಿಡದು, ಹುಚ್ಚುಬಿಡದೇ  ........?

ಮನೋವ್ಯಾಧಿಗಳಿಗೆ ಈಡಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ,ಈ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಮಾರ್ಗೋಪಾಯಗಳು ಮತ್ತು ಇದಕ್ಕೆ ಬೇಕಾಗುವ ವ್ಯವಸ್ಥೆಗಳು ಜನಸಾಮಾನ್ಯರಿಗೆ ಸುಲಭದಲ್ಲಿ ಲಭ್ಯವಾಗುತ್ತಿಲ್ಲ.
-------------------             ----------------------                         ------------------------------------                 -----------------------------

ಅನೇಕ ಭಾರತೀಯರ ಮನದಲ್ಲಿ ತಪ್ಪುಕಲ್ಪನೆಗಳು ಮತ್ತು ಮೂಢ ನಂಬಿಕೆಗಳಿಗೆ ಕಾರಣವೆನಿಸಿರುವ ಆರೋಗ್ಯದ ಸಮಸ್ಯೆಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. ತಜ್ಞ ಮನೋವೈದ್ಯರ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಗಳಿಂದ ಗುಣವಾಗಬಲ್ಲ ವಿವಿಧ ಮನೋವ್ಯಾಧಿಗಳಿಗೆ, ಜನಸಾಮಾನ್ಯರು ಇಂದಿಗೂ ಮಂತ್ರ-ತಂತ್ರ ಮತ್ತು ಪೂಜೆ-ಪುನಸ್ಕಾರಗಳಂತಹ ಪರಿಹಾರಗಳಿಗೆ ಮೊರೆಹೊಗುತ್ತಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ!. 

ಸುಹಾಸನಿಗೆ "ಹುಚ್ಚು" ಹಿಡಿದಿಲ್ಲ 

ಶ್ರೀನಿವಾಸರಾಯರ ಏಕಮಾತ್ರ ಪುತ್ರ ಸುಹಾಸನು ಆಟಪಾಠಗಳಲ್ಲಿ ಪ್ರವೀಣನಾಗಿದ್ದು, ಕಾಲೇಜಿನಲ್ಲಿ "ಹೀರೋ" ಎನಿಸಿದ್ದನು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ತನ್ನ ಸೌಮ್ಯ ಸ್ವಭಾವ ಮತ್ತು ನಯವಿನಯಗಳಿಂದಾಗಿ, ಸಹಪಾಠಿಗಳ ಮತ್ತು ಅಧ್ಯಾಪಕರ ಮೆಚ್ಚುಗೆಗೆ ಪಾತ್ರನಾಗಿದ್ದನು. 

ಸ್ನೇಹಜೀವಿಯಾಗಿದ್ದ ಸುಹಾಸನು ಸದಾ ಸ್ನೇಹಿತರೊಂದಿಗೆ ಕಾಲಕಳೆಯುತ್ತಿದ್ದರೂ, ವಿದ್ಯಾಭ್ಯಾಸದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದನು. ಆದರೆ ಬಿ. ಕಾಂ ಅಂತಿಮ ವರ್ಷದ ಮಧ್ಯಂತರ ಪರೀಕ್ಷೆಗಳು ಆರಂಭವಾದಂತೆಯೇ, ಸುಹಾಸನ ವರ್ತನೆಗಳು ನಿಧಾನವಾಗಿ ಬದಲಾಗಲಾರಂಭಿಸಿದ್ದವು. ಇದನ್ನು ಗಮನಿಸಿದ್ದ ಆತನ ಮಿತ್ರರು, ಪ್ರಾಯಶಃ ಪರೀಕ್ಷೆಗಳ ಒತ್ತಡವೇ ಇದಕ್ಕೆ ಕಾರಣವಾಗಿರಬೇಕೆಂದು ಸಂದೇಹಿಸಿದ್ದರು. ಆದರೆ ಫಲಿತಾಂಶಗಳು ಪ್ರಕಟವಾದಾಗ ಸದಾ ಅಗ್ರಸ್ಥಾನದಲ್ಲಿ ಇರುತ್ತಿದ್ದ ಸುಹಾಸನು ಪ್ರತೀ ವಿಷಯದಲ್ಲೂ ಅನುತ್ತೀರ್ಣನಾಗಿದ್ದನು. 

ಮುಂದಿನ ಒಂದೆರಡು ತಿಂಗಳುಗಳಲ್ಲಿ ಸುಹಾಸನ ವಿಲಕ್ಷಣ ವರ್ತನೆಗಳು ಆತನ ಸ್ನೇಹಿತರಲ್ಲಿ ಆತಂಕವನ್ನು ಮೂಡಿಸಿದ್ದವು. ಆತ್ಮೀಯ ಸ್ನೇಹಿತರಿಂದಲೂ ದೂರವಾದ ಸುಹಾಸನು ತರಗತಿಗಳಿಗೂ ಹೋಗುತ್ತಿರಲಿಲ್ಲ. ಗಂಟೆಗಟ್ಟಲೆ ವಾಚನಾಲಯದಲ್ಲಿ ಅಂತರ್ಮುಖಿಯಾಗಿ ಕುಳಿತಿರುವುದು,ತನ್ನಷ್ಟಕ್ಕೆ ತಾನೇ ಮಾತನಾಡುವುದು,ಅಧ್ಯಾಪಕರು ಮತ್ತು ಮಿತ್ರರನ್ನು ಸಂದೇಹದ ದೃಷ್ಟಿಯಿಂದ ನೋಡುವುದು,ಸ್ನಾನವನ್ನೂ ಮಾಡದೆ ಬಟ್ಟೆಗಳನ್ನು ಬದಲಾಯಿಸದೆ ಇರುವುದೇ ಮುಂತಾದ ಚರ್ಯೆಗಳನ್ನು ಗಮನಿಸಿದ್ದ ಅಧ್ಯಾಪಕರು, ಕಾಲೇಜಿನ ಪ್ರಾಚಾರ್ಯರಲ್ಲಿ ಈ ವಿಚಾರವನ್ನು ತಿಳಿಸಿದ್ದರು. 

ಮರುದಿನ ಶ್ರೀನಿವಾಸರಾಯರನ್ನು ಕಾಲೇಜಿಗೆ ಕರೆಸಿದ್ದ ಪ್ರಾಚಾರ್ಯರು, ಸುಹಾಸನ ವಿಚಿತ್ರ ವರ್ತನೆಗಳನ್ನು ವಿವರಿಸಿ ಆತನನ್ನು ಮನೋವೈದ್ಯರಲ್ಲಿ ಕರೆದೊಯ್ಯಲು ಸೂಚಿಸಿದ್ದರು. ಪ್ರಾಚಾರ್ಯರ ಮಾತುಗಳನ್ನು ಕೇಳಿ ಕನಲಿ ಕೆಂಡವಾಗಿದ್ದ ರಾಯರು, ತನ್ನ ಮಗನಿಗೆ ಹುಚ್ಚು ಹಿಡಿದಿಲ್ಲವೆಂದು ಗುಡುಗಿ, ಆತನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದರು. 

ತನ್ನ ಪುತ್ರನ ಸಮಸ್ಯೆಗೆ ಮಾನಸಿಕ ವ್ಯಾಧಿ ಕಾರಣವಲ್ಲ ಎಂದು ಧೃಢವಾಗಿ ನಂಬಿದ್ದ ರಾಯರು, ತನ್ನ ಪರಿಚಿತ ಜ್ಯೋತಿಷಿಗಳ ಬಳಿ ಮಗನ ಜಾತಕವನ್ನು ತೋರಿಸಿದರು. ಸುಹಾಸನ ಜಾತಕವನ್ನು ಕೂಲಂಕುಶವಾಗಿ ಪರಿಶೀಲಿಸಿದ ಜ್ಯೋತಿಷಿಗಳ ಅಭಿಪ್ರಾಯದಂತೆ ಆತನ ಸಮಸ್ಯೆಗಳಿಗೆ "ಬ್ರಹ್ಮಚಾರಿ ದೋಷ"ವೇ ಕಾರಣವೆನಿಸಿತ್ತು. ಹಲವಾರು ವರ್ಷಗಳ ಹಿಂದೆ ಹದಿಹರೆಯದಲ್ಲೇ ತೋಟದ ಕೆರೆಗೆ ಬಿದ್ದು ಅಪಮೃತ್ಯುವಿಗೆ  ಈಡಾಗಿದ್ದ ರಾಯರ ಕಿರಿಯ ತಮ್ಮನ ಪ್ರೇತವೇ ಈ ಸಮಸ್ಯೆಗೆ ಮೂಲ ಕಾರಣವೆನಿಸಿತ್ತು. 

ಜ್ಯೋತಿಷಿಗಳು ಸೂಚಿಸಿದ ಪೂಜೆ-ಪುನಸ್ಕಾರಗಳು, ಪ್ರೇತೋದ್ಧಾರ ಇತ್ಯಾದಿ ಪರಿಹಾರಗಳಿಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿದರೂ, ಸುಹಾಸನ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು!. 

ಅಂತಿಮವಾಗಿ ಅನ್ಯಮಾರ್ಗವಿಲ್ಲದೇ ಕುಟುಂಬ ವೈದ್ಯರ ಸಲಹೆಯಂತೆ ಖ್ಯಾತ ಮನೋವೈದ್ಯರನ್ನು ಭೇಟಿಯಾಗಿ, ಅವರ ಸಲಹೆಯಂತೆ ಚಿಕಿತ್ಸೆಯನ್ನು ಆರಂಭಿಸಿದ ನಾಲ್ಕಾರು ವಾರಗಳಲ್ಲೇ ಸುಹಾಸನು ಮತ್ತೆ ಹಿಂದಿನಂತೆ ಬದಲಾಗಿದ್ದನು. ಮುಂದೆ ಎರಡು ವರ್ಷಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಿದ ಪರಿಣಾಮವಾಗಿ,ಸುಹಾಸನು ಸಂಪೂರ್ಣವಾಗಿ ಗುನಮುಖನಾಗುವುದರೊಂದಿಗೆ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಪದವಿಯನ್ನು ಗಳಿಸಿದ್ದನು. 

ಮನೋವೈದ್ಯರು ಹೇಳಿದಂತೆ ಸುಹಾಸನಿಗೆ "ಸಿಜೋಫ್ರೆನಿಯ " ಎನ್ನುವ ಮಾನಸಿಕ ವ್ಯಾಧಿ ಬಾಧಿಸಿತ್ತು. ಅನೇಕ ಕುಟುಂಬಗಳ ಹಲವಾರು ತಲೆಮಾರುಗಳಲ್ಲಿ ಕಂಡುಬರುವ ಕೆಲ ಮಾನಸಿಕ ವ್ಯಾಧಿಗಳಿಗೆ " ವಂಶವಾಹಿನಿ" ಗಳು ಕಾರಣವಾಗಿರುವ ಸಾಧ್ಯತೆಗಳು ಇರುವುದರಿಂದ,ಇವು ಅನುವಂಶಿಕವಾಗಿ ಕುಟುಂಬದ ಮುಂದಿನ ಪೀಳಿಗೆಯಲ್ಲೂ  ಕಂಡುಬರುವುದು. ಇದಲ್ಲದೇ ಕೆಲವೊಮ್ಮೆ ಮೆದುಳಿನಲ್ಲಿ ಸಂಭವಿಸುವ ನರ ರಾಸಾಯನಿಕ ವ್ಯತ್ಯಯಗಳು- ಏರುಪೇರುಗಳು, ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಚಟ, ಶಿಕ್ಷಣ ಅಥವಾ ಉದ್ಯೋಗದಲ್ಲಿ ಹಿನ್ನಡೆ ಅಥವಾ ವೈಫಲ್ಯ, ತೀವ್ರ ಮಾನಸಿಕ ಒತ್ತಡ,ಸಂಬಂಧಗಳಲ್ಲಿ ಒಡಕು ಇವೇ ಮುಂತಾದ ಹಲವಾರು ಕಾರಣಗಳು ಮಾನಸಿಕ ವ್ಯಾಧಿಗಳಿಗೆ ಕಾರಣವೆನಿಸುವ ಅಥವಾ ಪ್ರೇರೇಪಿಸುವ ಸಾಧ್ಯತೆಗಳಿವೆ. 

ಮಾನಸಿಕ ವ್ಯಾಧಿಪೀಡಿತರಿಗೆ ತಜ್ಞ ಮನೋವೈದ್ಯರ ಸಲಹೆ, ಆಪ್ತ ಸಂವಾದ ಮತ್ತು ಚಿಕಿತ್ಸೆಗಳೊಂದಿಗೆ, ಮನೆಮಂದಿಯ ಮತ್ತು ಬಂಧುಮಿತ್ರರ ಸಾಂತ್ವನ ಹಾಗೂ ಪ್ರೋತ್ಸಾಹಗಳ ಅವಶ್ಯಕತೆ ಇರುತ್ತದೆ. ಆದರೆ ತಮ್ಮ ಅಜ್ಞಾನ, ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳಿಂದಾಗಿ ಅನೇಕ ಭಾರತೀಯರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದೇ, ಅನ್ಯ ವಿಧಿವಿಧಾನಗಳ ಮೊರೆಹೋಗುವುದು ನಂಬಲಸಾಧ್ಯ ಎನಿಸುತ್ತದೆ. 

ಕೆಲವೇ ದಶಕಗಳ ಹಿಂದಿನ ತನಕ ಕ್ಷುಲ್ಲಕ ಹಾಗೂ ಗಂಭೀರ ಮಾನಸಿಕ ವ್ಯಾಧಿಗಳೆಲ್ಲವನ್ನೂ ಸಾರಾಸಗಟಾಗಿ "ಹುಚ್ಚು" ಎಂದು ಜನಸಾಮಾನ್ಯರು ಕರೆಯಲು ಅವರ ಅಜ್ಞಾನವೇ ಕಾರಣವಾಗಿತ್ತು. ಇದೇ ಕಾರಣದಿಂದ ಸಣ್ಣಪುಟ್ಟ ಮಾನಸಿಕ ತೊಂದರೆಗಳ ಪರಿಹಾರಕ್ಕಾಗಿ ಮಾನಸಿಕ ವೈದ್ಯರ ಚಿಕಿತ್ಸೆ ಪಡೆದಲ್ಲಿ "ಹುಚ್ಚ" ಎನ್ನುವ ಹಣೆಪಟ್ಟಿಯನ್ನು ಧರಿಸಬೇಕಾದೀತು ಎನ್ನುವ ಭಯದಿಂದ, ಅನೇಕ ಜನರು ತಮ್ಮ ತಮ್ಮ ಕುಟುಂಬದ ಸದಸ್ಯರಿಗೆ ಮನೋವ್ಯಾಧಿ ಬಾಧಿಸುತ್ತಿರುವುದು ಖಚಿತವಾಗಿ ತಿಳಿದಿದ್ದರೂ, ತಜ್ಞ ವೈದ್ಯರ ಸಲಹೆ-ಚಿಕಿತ್ಸೆಗಳನ್ನೇ ಕೊಡಿಸುತ್ತಿರಲಿಲ್ಲ!. ಇದಕ್ಕೂ ಮಿಗಿಲಾಗಿ "ಮದುವೆಯಾಗದೇ ಹುಚ್ಚು ಬಿಡದು, ಹುಚ್ಚು ಬಿಡದೇ ಮದುವೆಯಾಗದು" ಎನ್ನುವ ಸುಪ್ರಸಿದ್ಧ ಗಾದೆ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಇಂತಹ ವ್ಯಾಧಿಪೀಡಿತರಿಗೆ " ಸಾವಿರ ಸುಳ್ಳು ಹೇಳಿ ಮಾಡುವೆ ಮಾಡಲು" ಹಿಂಜರಿಯುತ್ತಿರಲಿಲ್ಲ!. 

ಸಾಮಾನ್ಯವಾಗಿ ಅವಿದ್ಯಾವಂತ ಹಾಗೂ ಗ್ರಾಮೀಣ ಜನರು ಇಂತಹ ಸಮಸ್ಯೆಗಳಿಗೆ ದೇವರ-ಗುರುಗಳ ಶಾಪ, ಮಾಟ - ಮಂತ್ರ, ಭೂತ -ಪ್ರೇತ,ವಶೀಕರಣ ಅಥವಾ ಜಾತಕದಲ್ಲಿನ ದೋಷಗಳೇ ಕಾರಣವೆಂದು ನಂಬುತ್ತಾರೆ. ಅಂತೆಯೇ ಇದರ ಪರಿಹಾರಕ್ಕಾಗಿ ಪೂಜೆ- ಪುನಸ್ಕಾರ, ಮಂತ್ರ- ತಂತ್ರ, ದೇವರಲ್ಲಿ ಹರಕೆ ಹೇಳಿಕೊಳ್ಳುವುದು ಅಥವಾ ದೋಷಗಳ ಪರಿಹಾರಕ್ಕಾಗಿ ವಿವಿಧ ರೀತಿಯ ಪ್ರಾಯಶ್ಚಿತಗಳನ್ನು ನಡೆಸುವುದರ ಮೂಲಕ ಇಂತಹ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಬಳಿಕ ಸುದೀರ್ಘಕಾಲ ಮನೋವೈದ್ಯರ ಚಿಕಿತ್ಸೆ ಪಡೆಯದ ಕಾರಣದಿಂದಾಗಿ ಗಂಭೀರ ಸ್ವರೂಪವನ್ನು ತಳೆಯಬಲ್ಲ ಮಾನಸಿಕ ವ್ಯಾಧಿಗಳನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟಸಾಧ್ಯ ಅಥವಾ ಅಸಾಧ್ಯವೆಂದು ಅರಿತ ಬಳಿಕ ಪರಿತಪಿಸುತ್ತಾರೆ. ಇಂತಹ ಪ್ರಮಾದಗಳಿಂದ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೇ, ಅನೇಕ ಮನೋರೋಗಿಗಳು ಆತ್ಮಹತ್ಯೆಗೆ ಶರಣಾದ ನಿದರ್ಶನಗಳೂ ಸಾಕಷ್ಟಿವೆ. ಆದರೆ ಅಲ್ಪಪ್ರಮಾಣದ ಭಾರತೀಯರಲ್ಲಿ ಇಂತಹ ಮೂಢನಂಬಿಕೆಗಳು- ತಪ್ಪುಕಲ್ಪನೆಗಳು ಇಂದಿಗೂ ಜೀವಂತವಾಗಿವೆ. 

ಜಾಗತಿಕ ಸಮಸ್ಯೆ 

ಪ್ರಪಂಚದ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ದ್ವಿತೀಯ ಸ್ಥಾನ ಸಲ್ಲುತ್ತದೆ. ಆದರೆ ಆಧುನಿಕ ಜೀವನಶೈಲಿಯನ್ನು ಗಮನಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಇದು ಅಗ್ರಸ್ಥಾನಕ್ಕೆ ಏರಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳಂತೆ ಮಾನಸಿಕ ವ್ಯಾಧಿಗಳಲ್ಲಿ ಒಂದಾಗಿರುವ "ಖಿನ್ನತೆ" ಎರಡನೇ ಸ್ಥಾನದಲ್ಲಿದೆ. ಇದಲ್ಲದೇ ಸಿಜೋಫ್ರೆನಿಯ,ಉದ್ವಿಗ್ನತೆ,ಹಿಸ್ಟೀರಿಯ,ಗೀಳುರೋಗಗಳಂತಹ ವ್ಯಾಧಿಗಳ ಬಾಧೆಯೂ ಹೆಚ್ಚುತ್ತಲೇ ಇದೆ. 

ವಿಶ್ವಾದ್ಯಂತ ಸುಮಾರು ೪೫೦ ಮಿಲಿಯನ್ ಗೂ ಅಧಿಕ ಜನರು ಮಾನಸಿಕ ರೋಗಗಳು ಅಥವಾ ವರ್ತನೆಗಳ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಜಾಗತಿಕಮಟ್ಟದಲ್ಲಿ ಇಂದು ಮನುಷ್ಯರನ್ನು ಬಾಧಿಸುತ್ತಿರುವ ವ್ಯಾಧಿಗಳಲ್ಲಿ ಶೇ. ೧೪ ರಷ್ಟು ಮಾನಸಿಕ ಕಾಯಿಲೆಗಳೇ ಆಗಿವೆ. 

ಶ್ರೀಮಂತ ರಾಷ್ಟ್ರಗಳಲ್ಲಿ ಪ್ರತಿ ೧೦,೦೦೦ ಮಾನಸಿಕ ರೋಗಿಗಳಿಗೆ ಒಬ್ಬ ಮಾನಸಿಕ ತಜ್ಞರು ಲಭ್ಯರಿದ್ದಲ್ಲಿ, ಬಹುತೇಕ ಬಡರಾಷ್ಟ್ರಗಳಲ್ಲಿ ೨೦ ಲಕ್ಷ ಮನೋರೋಗಿಗಳಿಗೆ ಒಬ್ಬ ಮನೋವೈದ್ಯರು ಲಭ್ಯರಿದ್ದಾರೆ. ಪ್ರಸ್ತುತ ನಮ್ಮ ದೇಶದಲ್ಲಿ ವೃತ್ತಿಪರ ಮಾನಸಿಕ ತಜ್ಞರ ಸಂಖ್ಯೆ ೫ ಸಾವಿರಕ್ಕೂ ಕಡಿಮೆಯಿದ್ದು, ರೋಗಿಗಳ ಸಂಖ್ಯೆ ೩ ಕೋಟಿಗೂ ಹೆಚ್ಚಿದೆ. ಇದರಲ್ಲಿ ಶೇ. ೧೫ ರಿಂದ ೨೦ ರಷ್ಟು ರೋಗಿಗಳು ಮಹಿಳೆಯರಾಗಿದ್ದು, ಪುರುಷ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. 

ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯಮಯ ಕಾರಣಗಳಿಂದಾಗಿ, ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ತೋರಲು ಬಾಲ್ಯದಿಂದಲೇ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಕಾರಣಗಳಿಂದಾಗಿ ಮನೋವ್ಯಾಧಿಗಳಿಗೆ ಈಡಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಈ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಮಾರ್ಗೋಪಾಯಗಳು ಮತ್ತು ಇದಕ್ಕೆ ಬೇಕಾದ ವ್ಯವಸ್ಥೆಗಳು ಜನಸಾಮಾನ್ಯರಿಗೆ ಸುಲಭದಲ್ಲೇ ಲಭ್ಯವಾಗುತ್ತಿಲ್ಲ. ಅದೇ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ಸಣ್ಣಪುಟ್ಟ ನಗರಗಳಲ್ಲಿ ಮಾನಸಿಕ ವ್ಯಾಧಿಗಳಿಗೆ ಚಿಕಿತ್ಸೆ ನೀಡಬಲ್ಲ ಸೈಕಿಯಾಟ್ರಿಸ್ಟ್, ಮಾನಸಿಕ ರೋಗಿಗಳ ಸಮಸ್ಯೆಯನ್ನು ವಿಶ್ಲೇಷಿಸಿ ಆಪ್ತ ಸಂವಾದದ ಮೂಲಕ ಪರಿಹರಿಸಬಲ್ಲ ಸೈಕಾಲಜಿಸ್ಟ್ ಮತ್ತು ರೋಗಿ ಹಾಗೂ ಆತನ ಮನೆಮಂದಿಗೆ ಮಾರ್ಗದರ್ಶನ ನೀಡಬಲ್ಲ ನುರಿತ ಕೌನ್ಸೆಲರ್ ಗಳು ಲಭ್ಯರಿರುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನೇಕ ಮನೋವ್ಯಾಧಿಪೀಡಿತರು, ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನೇ ಪಡೆದುಕೊಳ್ಳುವುದಿಲ್ಲ. ಪಡೆದುಕೊಂಡರೂ ಕಾರಣಾಂತರಗಳಿಂದ ಚಿಕಿತ್ಸೆಯನ್ನು ಮುಂದುವರೆಸುವುದಿಲ್ಲ. ಚಿಕಿತ್ಸೆಯನ್ನು ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾದ ವ್ಯಕ್ತಿಗಳನ್ನೂ ಸಮಾಜವು ಸಂದೇಹದ ದೃಷ್ಟಿಯಿಂದ ನೋಡುವುದನ್ನು ಇಂದಿಗೂ ನಿಲ್ಲಿಸಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಅನೇಕ ಮಾನಸಿಕ ವ್ಯಾಧಿಪೀಡಿತರ ಬದುಕು ನರಕಸದೃಶ ಎಣಿಸುತ್ತಿರುವುದು ಮಾತ್ರ ಸುಳ್ಳೇನಲ್ಲ. 

ಅದೇನೇ ಇರಲಿ,ಮಾನಸಿಕ ವ್ಯಾಧಿಯ ಲಕ್ಷಣಗಳು ಉದ್ಭವಿಸಿದೊಡನೆ, ಮಾನಸಿಕ ತಜ್ಞರ ಸಲಹೆ-ಚಿಕಿತ್ಸೆಯನ್ನು ಪ್ರಾರಂಭಿಸಿ. ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದಲ್ಲಿ ಸಮಸ್ಯೆಗಳು ಪರಿಹಾರಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಅನಾವಶ್ಯಕ ವಿಳಂಬಗಳಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದಷ್ಟು ಇವುಗಳ ಪರಿಹಾರ ಕಷ್ಟಸಾಧ್ಯ ಅಥವಾ ಅಸಾಧ್ಯವೆನಿಸುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೨೪-೦೧-೨೦೦೮ ರ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment