Thursday, August 15, 2013

HUNASE MARA MUPPAGADIDDAROO, HULI MUPPAAGUVUDE ?


..



   ಹುಣಸೇಮರ ಮುಪ್ಪಾಗದಿದ್ದರೂ,ಹುಳಿ ಮುಪ್ಪಾಗುವುದೇ?

ಹುಣಸೇಮರ ಮುಪ್ಪಾದರೂ, ಹುಳಿ ಮುಪ್ಪಾಗದು ಎನ್ನುವ ಗಾದೆಮಾತು, ಸ್ತ್ರೀ-ಪುರುಷರಲ್ಲಿ ಇಳಿ ವಯಸ್ಸಿನಲ್ಲೂ ಕ್ಷಯಿಸದಿರುವ ಕಾಮಾಸಕ್ತಿಯನ್ನು ಪರೋಕ್ಷವಾಗಿ ಸೂಚಿಸುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಅಸಂಖ್ಯ ಯುವ ದಂಪತಿಗಳ ಪಾಲಿಗೆ, ಮರ ಮುಪ್ಪಾಗದೇ ಹುಳಿ ಮುಪ್ಪಾಗುತ್ತಿರುವುದರ ಅನುಭವವಾಗುತ್ತಿದೆ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 

ಶೀತಲ ಸಮರ 
ವಿವಾಹವಾಗಿ ಕೇವಲ ಆರುವರ್ಷಗಳಲ್ಲೇ ಸದಾಶಿವನು ತನ್ನ ಪತ್ನಿ ಶಿವಾನಿಯಿಂದ ನಿಧಾನವಾಗಿ ದೂರಸರಿಯುತ್ತಿರಲು, ಇವರಿಬ್ಬರ ನಡುವಿನ ತಪ್ಪುಕಲ್ಪನೆಗಳಿಂದ ಉದ್ಭವಿಸಿದ್ದ ಮನಸ್ತಾಪವೇ ಕಾರಣವೆನಿಸಿತ್ತು. ಈ "ಶೀತಲ ಸಮರ" ದಿಂದಾಗಿ ಪರಸ್ಪರ ಲೈಂಗಿಕ ಆಕರ್ಷಣೆಯೂ ಕಡಿಮೆ ಆಗಿದ್ದುದರಿಂದ, ಸಮಸ್ಯೆ ಇನ್ನಷ್ಟು ಜಟಿಲಗೊಂಡಿತ್ತು. 
ಪರಸ್ಪರ ಪ್ರೀತಿಸಿ, ಹೆತ್ತವರ ಮನವೊಲಿಸಿ ಮದುವೆಯಾಗಿದ್ದ ಈ ದಂಪತಿಗಳು ಮೊದಲ ಎರಡು ವರ್ಷ ಜೋಡಿಹಕ್ಕಿಗಳಂತೆ ಅನ್ಯೋನ್ಯವಾಗಿದ್ದರು. ಪ್ರತ್ಯೇಕವಾದ ಮನೆಯಲ್ಲಿ ವಾಸ್ತವ್ಯವಿದ್ದುದರಿಂದ, ತಮಗೆ ಬೇಕೆನಿಸಿದಾಗ ದಾಂಪತ್ಯ ಸುಖವನ್ನು ಮನಸಾರೆ ಅನುಭವಿಸುತ್ತಿದ್ದರು. 
ಆದರೆ ಒಂದರ ಬೆನ್ನಿಗೆ ಮತ್ತೊಂದರಂತೆ ಇಬ್ಬರು ಗಂಡುಮಕ್ಕಳು ಹುಟ್ಟಿದ ಬಳಿಕ, ಶಿವಾನಿಯು ತನ್ನ ಪುಟ್ಟಮಕ್ಕಳ ಆರೈಕೆಯಲ್ಲಿ ಸದಾ ಮಗ್ನಳಾಗಿದ್ದು ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂದು ಭಾವಿಸಿದ್ದ ಸದಾಶಿವನು, ಪತ್ನಿಯ ಮೇಲೆ ಮುನಿದಿದ್ದನು. 
ಅನೇಕಬಾರಿ ರಾತ್ರಿಯೂಟದ ಬಳಿಕ ಮಕ್ಕಳನ್ನು ಮಲಗಿಸಿ, ಅಡುಗೆಮನೆಯ ಕೆಲಸಗಳನ್ನು ಮುಗಿಸಿದ ಶಿವಾನಿಯು ಶಯ್ಯಾಗೃಹವನ್ನು ಪ್ರವೇಶಿಸುವಾಗ, ಆಕೆಗಾಗಿ ಕಾಡು ಬೇಸತ್ತ ಸದಾಶಿವನು, ಸಿಟ್ಟಿನಿಂದ ಮುಸುಕುಹಾಕಿ ಗಾಢನಿದ್ದೆಯಲ್ಲಿರುವಂತೆ ನಟಿಸುತ್ತಿದ್ದನು. ಕೆಲವರ್ಷಗಳ ಹಿಂದೆ ಇಂತಹ ಸಂದರ್ಭಗಳಲ್ಲಿ ಕೀಟಲೆ ಮಾಡಿ ಗಂಡನನ್ನು ಎಬ್ಬಿಸುತ್ತಿದ್ದ ಶಿವಾನಿ, ಇತ್ತೀಚಿಗೆ ದಿನವಿಡೀ ದುಡಿದು ದಣಿದ ಪರಿಣಾಮವಾಗಿ ತಾನೂ ನಿದ್ದೆಗೆ ಶರನಾಗುತ್ತಿದ್ದಳು. 
ತಾನು ಬಯಸಿದಾಗ ದಾಂಪತ್ಯಸುಖ ದೊರೆಯದ ಕಾರಣದಿಂದಾಗಿ ಇಲ್ಲಸಲ್ಲದ ನೆಪವೊಡ್ಡಿ, ಪತ್ನಿಯೊಂದಿಗೆ ಜಗಳವಾಡಲು ಆರಂಭಿಸಿದ್ದ ಸದಾಶಿವನ ವಿಚಿತ್ರ ವರ್ತನೆಗಳಿಗೆ ಕಾರನವೇನೆಂದು ಮುಗ್ಧೆ ಶಿವಾನಿಯ ಮನಸ್ಸಿಗೂ ಹೊಳೆದಿರಲಿಲ್ಲ. ತನ್ಮಧ್ಯೆ ಆಕೆಯು ತಾನಾಗಿ ಪತಿಯ ಸಂಗವನ್ನು ಬಯಸಿದಾಗ ಕ್ಷುಲ್ಲಕ ನೆಪಗಳನ್ನು ಮುಂದೊಡ್ಡಿ ದೂರವಿರುತ್ತಿದ್ದ ಸದಾಶಿವನಿಗೆ, ಆತನ ಪತ್ನಿಯಿಂದಲೂ ಇದೇ ರೀತಿಯ ಪ್ರತಿಕ್ರಿಯೆಗಳು ದೊರೆಯಲು ಆರಂಭವಾಗಿದ್ದವು. ಏಕೆಂದರೆ ಕಳೆದ ಒಂದೆರಡು ತಿಂಗಳುಗಳಿಂದ ತನ್ನೊಂದಿಗೆ ಸೇರದ ಗಂಡನ ವಿಲಕ್ಷಣ ವರ್ತನೆಗಳಿಂದ ನೊಂದಿದ್ದ ಶಿವಾನಿಯು, ಪತಿಯು ತನ್ನನ್ನು ಹಿಂದಿನಂತೆಯೇ ಪ್ರೀತಿಸುತ್ತಿಲ್ಲವೆಂದು ಧೃಢವಾಗಿ ನಂಬಿದ್ದಳು. ಜೊತೆಗೆ ಆತನು ಬೇರೊಂದು ಹೆಣ್ಣಿನಲ್ಲಿ ಅನುರಕ್ತನಾಗಿರಬಹುದೆಂದು ಸಂದೇಹಿಸಿದ್ದಳು. ಅತ್ತ ಸದಾಶಿವನೂ ತನ್ನ ಪತ್ನಿಯು ತನ್ನನ್ನು ದೂರವಿರಿಸಲು ಕಾರಣವೇನೆಂದು ಅರಿಯದೇ ಚಿಂತಾಕ್ರಾಂತನಾಗಿದ್ದನು. ಆತನ ಮನದಲ್ಲಿ ತನ್ನ ಪತ್ನಿಗೆ ಪ್ರಿಯಕರನೊಬ್ಬ ಇರಬಹುದೆನ್ನುವ ಸಂದೇಹ ಮೂಡಲಾರಂಭಿಸಿತ್ತು. ಪರಸ್ಪರ ಒಬ್ಬರನ್ನೊಬ್ಬರು ಸಂದೇಹಿಸಲಾರಂಭಿಸಿದಂತೆಯೇ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. 
ಅಪರೂಪದಲ್ಲೊಮ್ಮೆ  ಬಯಕೆಗಳನ್ನು ನಿಯಂತ್ರಿಸಲಾರದೇ ಒತ್ತಾಯಪೂರ್ವಕವಾಗಿ ದೈಹಿಕಸುಖವನ್ನು ಅನುಭವಿಸುತ್ತಿದ್ದ ಸದಾಶಿವನಿಗೆ,ಪತ್ನಿಯ ಮನಸ್ಪೂರ್ವಕ ಸಹಕಾರವಿಲ್ಲದೇ ಯಾಂತ್ರಿಕವಾಗಿ ನಡೆಯುತ್ತಿದ್ದ ಮಿಲನವು ಅಸಹನೀಯವೆನಿಸುತ್ತಿತ್ತು. ಏಕೆಂದರೆ ಈ ಸಮಾಗಮದಲ್ಲಿ ಕೇವಲ ಕಾಮವಿತ್ತೇ ಹೊರತು,ಪ್ರೇಮ ಮಾತ್ರ ಇರಲೇ ಇಲ್ಲ. 
ದಾಂಪತ್ಯಸುಖದಿಂದ ವಂಚಿತನಾಗಿದ್ದ ಸದಾಶಿವನು, ದಿನಗಳು ಉರುಳಿದಂತೆಯೇ ತನ್ನ ಪತ್ನಿಯನ್ನು ದ್ವೇಷಿಸುವುದರೊಂದಿಗೆ ಅಂತರ್ಮುಖಿಯಾಗಲಾರಂಭಿಸಿದ್ದನು. ಇದಕ್ಕೆ ಪ್ರತಿಯಾಗಿ ಪತಿಯ ವರ್ತನೆಗಳಿಂದ ನೊಂದಿದ್ದ ಶಿವಾನಿಯೂ ಇದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಳು. ಈ ರೀತಿಯಲ್ಲಿ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದ ದಂಪತಿಗಳು ಅಪರಿಚಿತರಂತೆ ವರ್ತಿಸಲಾರಂಭಿಸಿದ್ದರು. 
ವಿವಾಹಕ್ಕೆ ಮುನ್ನ ಅವಕಾಶ ದೊರೆತಾಗಲೆಲ್ಲ ತಾವಿಬ್ಬರೂ ಪಾರ್ಕ್,ಚಿತ್ರಮಂದಿರಗಳು ಮತ್ತು ಕಾರಿನಲ್ಲಿ ಕದ್ದುಮುಚ್ಚಿ ನಡೆಸುತ್ತಿದ್ದ ಪ್ರಣಯ ಚೇಷ್ಟೆಗಳು ಹಾಗೂ ವಿವಾಹದ ನಂತರ ಸುಖಿಸಿದ್ದ ದಿನಗಳನ್ನು ನೆನಪಿಸಿಕೊಂಡು ದುಖಿಸುತ್ತಿದ್ದ ಶಿವಾನಿಯು,ಕ್ರಮೇಣ ತನ್ನ ಶಾರೀರಿಕ ಸೌಂದರ್ಯ ಹಾಗೂ ವೇಷಭೂಷಣಗಳನ್ನು ನಿರ್ಲಕ್ಷಿಸಿ ಸನ್ಯಾಸಿನಿಯಂತೆ ಕಾಣಿಸುತ್ತಿದ್ದಳು. ಅಕಾರಣವಾಗಿ ತನ್ನನ್ನು ನೋಯಿಸುತ್ತಿದ್ದ ಸದಾಶಿವನನ್ನು  ಶಿಕ್ಷಿಸಬೇಕೆಂಬ ಬಯಕೆಯೇ,ಆಕೆಯ ವರ್ತನೆಗಳಿಗೆ ಕಾರಣವೆನಿಸಿತ್ತು. ಇವೆಲ್ಲವುಗಳ ಪರಿಣಾಮದಿಂದಾಗಿ ಕೆಲವೇ ವರ್ಷಗಳ ಹಿಂದೆ ಸುಮಧುರವಾಗಿದ್ದ ಇವರ ದಾಂಪತ್ಯ ಜೀವನವು ಹಳಸಲಾರಂಭಿಸಿತ್ತು. 
ಈ ಸಂದರ್ಭದಲ್ಲಿ ಸದಾಶಿವನ ಮನೆಗೆ ಆಕಸ್ಮಿಕವಾಗಿ ಭೇಟಿನೀಡಿದ್ದ ಬಾಲ್ಯ ಸ್ನೇಹಿತ ಸುರೇಶನಿಗೆ, ತನ್ನ ಮಿತ್ರನು ಪತ್ನಿಯೊಂದಿಗೆ ವರ್ತಿಸುವ ಪರಿಯನ್ನು ಕಂಡು ಆಶ್ಚರ್ಯವಾಗಿತ್ತು. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಸುರೇಶನಿಗೆ, ಸ್ನೇಹಿತನ ದಾಂಪತ್ಯ ಜೀವನದಲ್ಲಿ ಸಾಮರಸ್ಯವಿಲ್ಲವೆಂದು ತಿಳಿಯಿತು. 
ಅದೇ ಸಂಜೆ ಸದಾಶಿವನನ್ನು ಒತ್ತಾಯಪೂರ್ವಕವಾಗಿ ಸಮೀಪದ ಪಾರ್ಕಿಗೆ ಕರೆದೊಯ್ದ ಸುರೇಶನು,ಆತನ ಕೌಟುಂಬಿಕ ವಿರಸಕ್ಕೆ ಕಾರಣವೇನೆಂದು ನೇರವಾಗಿ ಪ್ರಶ್ನಿಸಿದ್ದನು. ಅನಿರೀಕ್ಷಿತ ಪ್ರಶ್ನೆಯಿಂದ ವಿಚಲಿತನಾದ ಸದಾಶಿವನು,ಸ್ನೇಹಿತನ ಬಳಿ ನಡೆದ ಘಟನೆಗಳೆಲ್ಲವನ್ನೂ ಮುಚ್ಚಿಡದೆ ಹೇಳಿ ಕಣ್ಣೀರು ಹಾಕಿದ್ದನು. ಕ್ಷುಲ್ಲಕ ಕಾರಣಗಳಿಂದ ಮೂಡಿದ್ದ ಈ ದಂಪತಿಗಳ ವಿರಸಕ್ಕೆ ತಪ್ಪುಕಲ್ಪನೆಗಳೇ ಕಾರಣವೆಂದು ನಿರ್ಧರಿಸಿದ ಸುರೇಶನು,ಒಂದು ವಾರ ಮಿತ್ರನ ಮನೆಯಲ್ಲೇ ಉಳಿದುಕೊಂಡು ಸದಾಶಿವ ಮತ್ತು ಶಿವಾನಿಯರೊಂದಿಗೆ ಪ್ರತ್ಯೇಕವಾಗಿ ಆಪ್ತಸಂವಾದವನ್ನು ನಡೆಸಿದನು. ತನ್ಮೂಲಕ ಲಭಿಸಿದ ಮಾಹಿತಿಯನ್ನು ಕೂಲಂಕುಶವಾಗಿ ವಿಶ್ಲೇಷಿಸಿದ ಮನೋವಿಜ್ಞಾನಿಗೆ, ಈ ಸಮಸ್ಯೆಯನ್ನು ಬಗೆಹರಿಸುವ ಆತ್ಮವಿಶ್ವಾಸ ಮೂಡಿತ್ತು. 
ಅಂತಿಮವಾಗಿ ದಂಪತಿಗಳನ್ನು ಜೊತೆಯಾಗಿ ಕುಳ್ಳಿರಿಸಿ,ಅವರಿಂದ ಸಂಭವಿಸಿದ್ದ ತಪ್ಪುಗಳು ಮತ್ತು ಇದರ ಫಲವಾಗಿ ಉದ್ಭವಿಸಿದ್ದ ಸಂದೇಹಗಳೇ ಇವರಿಬ್ಬರ ನಡುವಿನ ಸಮಸ್ಯೆಗೆ ಕಾರಣವೆಂದು ವಿವರಿಸಿದಾಗ, ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದ ದಂಪತಿಗಳ ಕಣ್ಣಂಚಿನಲ್ಲಿ ಕಂಬನಿಗಳು ಮೂಡಿದ್ದವು. ತದನಂತರ ಈ ಸಮಸ್ಯೆಯ ಪರಿಹಾರಕ್ಕಾಗಿ ಇವರಿಬ್ಬರೂ ಅನುಸರಿಸಲೇ ಬೇಕಾದ ಸರಳ ಉಪಾಯಗಳನ್ನು ವಿಶದವಾಗಿ ವಿವರಿಸಿ,ಇವೆಲ್ಲವನ್ನೂ ಪರಿಪಾಲಿಸುವ ಆಶ್ವಾಸನೆಯನ್ನು ಪಡೆದುಕೊಂಡ ಸುರೇಶನು ತನ್ನ ಊರಿಗೆ ಮರಳಿದ್ದನು. ಆಗ ದಂಪತಿಗಳು ಜೊತೆಯಾಗಿ ನಿಂತು ಆತನನ್ನು ಬೀಳ್ಕೊಟ್ಟದ್ದೇ ,ಇವರ ನಡುವಿನ ಶೀತಲ ಸಮರ ಅಂತ್ಯಗೊಂಡಿರುವುದನ್ನು ಸೂಚಿಸುತ್ತಿತ್ತು!. 
ಸಮಸ್ಯೆ-ಪರಿಹಾರ 
ಗಂಡ ಹೆಂಡಿರ ಜಗಳ,ಉಂಡು ಮಲಗುವ ತನಕ ಎನ್ನುವ ನಮ್ಮ ಪೂರ್ವಜರ ಮಾತುಗಳು ನಿಸ್ಸಂದೇಹವಾಗಿಯೂ, ಗಂಡ ಹೆಂಡಿರುಗಳು ಜಗಳವಾಡುವುದನ್ನು ಮತ್ತು ರಾತ್ರಿ ಇದನ್ನು ಮರೆತು ಅಥವಾ ಪರಿಹರಿಸಿಕೊಂಡು ಒಂದಾಗುವುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ಗಾದೆಮಾತು ಅನೇಕ ಯುವ ದಂಪತಿಗಳ ಪಾಲಿಗೆ ಸುಳ್ಳೆನಿಸುತ್ತಿದೆ. ಏಕೆಂದರೆ ಅನೇಕ ದಂಪತಿಗಳಿಗೆ ಶಾರೀರಿಕ ಸಮಾಗಮದ ಸಂದರ್ಭದಲ್ಲಿ ಕಾರಣಾಂತರಗಳಿಂದ ಉದ್ಭವಿಸಬಲ್ಲ ಅಡ್ಡಿ ಆತಂಕಗಳೇ "ಜಗಳ"ಕ್ಕೆ ಕಾರಣವೆನಿಸುತ್ತಿದೆ. 
ಸಾಮಾನ್ಯವಾಗಿ ಪರಸ್ಪರ ಪ್ರೀತಿವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಸಂಸಾರ ನಡೆಸುವ ಆರೋಗ್ಯವಂತ ದಂಪತಿಗಳ "ದಾಂಪತ್ಯ ಜೀವನ"ವು ಸದಾ ಹಸಿರಾಗಿರುತ್ತದೆ. ಇಂತಹ ದಂಪತಿಗಳ ನಡುವಿನ ಲೈಂಗಿಕ ಆಕರ್ಷಣೆಯು ವಿವಾಹವಾಗಿ ದಶಕಗಳೇ ಸಂದರೂ ಕ್ಷಯಿಸುವುದೇ ಇಲ್ಲ. ಈ ರೀತಿಯ ಸಂತೃಪ್ತ ಜೀವನ ಶೈಲಿಯಿಂದಾಗಿ, ಇಂತಹವರ ಸಂಸಾರದಲ್ಲಿ ಯಾವುದೇ ರೀತಿಯ ವಿರಸ- ಮನಸ್ತಾಪಗಳೇ ಉದ್ಭವಿಸುವುದಿಲ್ಲ. 
ಆದರೆ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ "ಪುಟ್ಟ ಕುಟುಂಬ" ಗಳಲ್ಲಿ, ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ದಂಪತಿಗಳಲ್ಲಿ ಮತ್ತು ಅಪರೂಪದಲ್ಲಿ ಕಾಣಸಿಗುವ ಅವಿಭಕ್ತ ಕುಟುಂಬಗಳಲ್ಲೂ ಕಾರಣಾಂತರಗಳಿಂದ ಉದ್ಭವಿಸಿ,ಉಲ್ಬಣಿಸುವ ಸಮಸ್ಯೆಗಳಿಂದಾಗಿ ಅಸಂಖ್ಯ ದಮ್ಪತಿಗಳು ದಾಂಪತ್ಯ ಸುಖದಿಂದ ವಂಚಿತರಾಗುತ್ತಿರುವುದು ಸುಳ್ಳೇನಲ್ಲ. ತಾವಾಗಿ ಸೃಷ್ಟಿಸಿಕೊಂಡ ಕ್ಷುಲ್ಲಕ ಸಮಸ್ಯೆಗಳಿಂದಾಗಿ, ಪರಸ್ಪರ ಲೈಂಗಿಕ ಆಕರ್ಷಣೆಯನ್ನೇ ಕಳೆದುಕೊಂಡಿರುವ ಭಾರತೀಯ ದಂಪತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಮನೋವಿಜ್ಞಾನ ಮತ್ತು ಮಾನಸಿಕರೋಗ ತಜ್ಞರ ಅಭಿಪ್ರಾಯದಂತೆ ಇದು "ಸ್ವಯಂಕೃತ ಅಪರಾಧ"ವಲ್ಲದೆ ಬೇರೇನೂ ಅಲ್ಲ. 
ದಾಂಪತ್ಯ ಜೀವನದಲ್ಲಿ ವೈವಿಧ್ಯಮಯ ಕಾರಣಗಳಿಂದಾಗಿ ವಿರಸ ಮೂಡದ ದಂಪತಿಗಳು ಈ ಜಗತ್ತಿನಲ್ಲೇ ಇಲ್ಲ. ಪರಸ್ಪರ ಪರಿಚಯವಿಲ್ಲದ, ವಿಭಿನ್ನ ಪರಿಸರ-ಸಂಸ್ಕೃತಿಗಳ ನಡುವೆ ಬೆಳೆದ ಗಂಡು-ಹೆಣ್ಣುಗಳು ವಿವಾಹದ ಬಳಿಕ ಒಂದೇ ಸೂರಿನಡಿಯಲ್ಲಿ ಜೀವನ ಸಾಗಿಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಮೂಡುವುದು ಅಪರೂಪವೇನಲ್ಲ. ಈ ಸಂದರ್ಭದಲ್ಲಿ ಸಹನೆಯನ್ನು ಕಳೆದುಕೊಳ್ಳದೇ, ಸಮಸ್ಯೆಗೆ ಕಾರಣವೆನಿಸಿದ ಘಟನೆಗಳನ್ನು ದಂಪತಿಗಳು ಒಂದಾಗಿ ಕುಳಿತು ವಿಶ್ಲೇಷಿಸಿದಲ್ಲಿ, ಇದನ್ನು ಬಗೆಹರಿಸುವುದು ಸುಲಭಸಾಧ್ಯ. ಆದರೆ ಪರಸ್ಪರ ವಿಶ್ವಾಸ- ಹೊಂದಾಣಿಕೆಗಳೇ ಇಲ್ಲದ ದಂಪತಿಗಳು, ಪುಟ್ಟ ಸಮಸ್ಯೆಯೊಂದನ್ನು ಬೆಟ್ಟದಂತೆ ಬೆಳೆಸಿ ತಮ್ಮ ಸಂಸಾರದಲ್ಲಿ ಕೈಯ್ಯಾರೆ ಹುಳಿ ಹಿಂಡಿಕೊಳ್ಳುತ್ತಾರೆ. ಅಂತಿಮವಾಗಿ ಪರಿಸ್ಥಿತಿ ಕೈಮೀರಿದ ಬಳಿಕ ಪರಿತಪಿಸುತ್ತಾರೆ. 
ಅನೇಕ ದಂಪತಿಗಳು ಅತ್ಯಂತ ಸಂಕೀರ್ಣ ಹಾಗೂ ಗಂಭೀರವೆಂದು ಪರಿಗಣಿಸಿರುವ ಈ ವಿಶಿಷ್ಟ ಸಮಸ್ಯೆಗೆ ನಿರ್ದಿಷ್ಟ ಮತ್ತು ನಿಶ್ಚಿತ ಪರಿಹಾರವು ಅವರ ಕೈಯ್ಯಲ್ಲೇ ಇರುತ್ತದೆ ಇರುತ್ತದೆ. ಅನಿವಾರ್ಯವೆನಿಸಿದಲ್ಲಿ ನುರಿತ ಮನಶಾಸ್ತ್ರಜ್ಞರೊಂದಿಗೆ ಆಪ್ತ ಸಂವಾದ ನಡೆಸುವುದು ,ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ಅತ್ಯಂತ ಉಪಯುಕ್ತವೆನಿಸುತ್ತದೆ. 

ಡಾ . ಸಿ . ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ೨೧-೦೨-೨೦೦೮ ರಲ್ಲಿ ಪ್ರಕಟಿತ ಲೇಖನ 



No comments:

Post a Comment