Thursday, August 29, 2013

Fever



                                  ಜ್ವರ : ನೂರು ನೂರು ತರಹ !
ಸಾಮಾನ್ಯ ಶೀತದಿಂದ ಆರಂಭಿಸಿ, ಮಲೇರಿಯ, ಡೆಂಗೆ, ಟಿ. ಬಿ, ಏಡ್ಸ್ ಮತ್ತು ಕೆಲವಿಧದ ಕ್ಯಾನ್ಸರ್ ಗಳಲ್ಲೂ ಪ್ರಕಟವಾಗುವ ಜ್ವರ ಒಂದು ಲಕ್ಷಣವೇ ಹೊರತು ವ್ಯಾಧಿಯಲ್ಲ. ನೂರಾರು ವ್ಯಾಧಿಗಳು ಬಾಧಿಸಿದಾಗ ಪ್ರತ್ಯಕ್ಷವಾಗುವ ಜ್ವರದ ಬಗ್ಗೆ ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿಗಳೇ ತಿಳಿದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನೇಕ ರೋಗಿಗಳು ತಮ್ಮನ್ನು ಬಾಧಿಸುತ್ತಿರುವ ಜ್ವರವನ್ನು ತ್ವರಿತಗತಿಯಲ್ಲಿ ಗುಣಪಡಿಸಲು ವಿಫಲರಾದ ವೈದ್ಯರನ್ನು ಬದಲಾಯಿಸಲು ಹಿಂಜರಿಯುವುದಿಲ್ಲ!. 
----------------           --------------------                  --------------------------
ಅನುಭವೀ ವೈದ್ಯರ ಮನದಲ್ಲೂ ಸಂದೇಹ ಮೂಡಿಸಬಲ್ಲ ರೋಗಲಕ್ಷಣಗಳಲ್ಲಿ ಜ್ವರ ಪ್ರಮುಖವಾಗಿದೆ. ಹಲವಾರು ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ತಲೆದೋರುವ ಜ್ವರಕ್ಕೆ, ಮೂಲಕಾರಣ ಎನಿಸಿರುವ ವ್ಯಾಧಿಯನ್ನು ಬಹುತೇಕ ಸಂದರ್ಭಗಳಲ್ಲಿ ವೈದ್ಯರು ಸುಲಭವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಬಲ್ಲರು. ಆದರೆ ಅಲ್ಪಪ್ರಮಾಣದ ರೋಗಿಗಳಲ್ಲಿ ಜ್ವರದ ಮೂಲವನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. ಇಂತಹ ಪ್ರಕರಣಗಳಲ್ಲಿ ಅವಶ್ಯಕ ಪರೀಕ್ಷೆಗಳನ್ನು ನಡೆಸಿ,ಇದಕ್ಕೆ ಕಾರಣವೆನಿಸಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಿದ ಬಳಿಕ ನೀಡುವ ಚಿಕಿತ್ಸೆಯು ಫಲಪ್ರದ ಎನಿಸುವುದು.

ನರಹರಿಯ ಜ್ವರ 

ಭಾನುವಾರ ಸಂಜೆಯತನಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ನರಹರಿಗೆ, ನಡುರಾತ್ರಿಯಲ್ಲಿ ಕೆಂಡಾಮಂಡಲ ಜ್ವರ ಕಾಯಲಾರಂಭಿಸಿತ್ತು. ಮಗನ ನರಳುವಿಕೆಯ ಸದ್ದಿಗೆ ಎಚ್ಚೆತ್ತ ವೈದೇಹಿಯು, ತಕ್ಷಣ ಆತನ ಹಣೆಗೆ ತಣ್ಣೀರಿನ ಪಟ್ಟಿಹಾಕಿ ಜ್ವರದ ಮಾತ್ರೆಯೊಂದನ್ನು ನೀಡಿದ್ದಳು. ಮಗನ ಜ್ವರಕ್ಕೆ ಪುತ್ತೂರು ಜಾತ್ರೆಯಲ್ಲಿ ತಿಂದಿದ್ದ ಹಲವಾರು ಐಸ್ ಕ್ರೀಮ್ ಗಳೇ ಕಾರಣವೆಂದು ಆಕೆ ಭಾವಿಸಿದ್ದಳು. 

ಮರುದಿನ ಬೆಳಗ್ಗೆ ಸಮೀಪದ ವೈದ್ಯರಿಂದ ಮೂರು ಹೊತ್ತಿನ ಔಷದವನ್ನು ತಂದು ನೀಡಿದ ಬಳಿಕವೂ ಮಗನ ಜ್ವರ ಕಡಿಮೆಯಾಗದ ಕಾರಣದಿಂದಾಗಿ, ಮತ್ತೊಬ್ಬ ವೈದ್ಯರ ಔಷದವನ್ನು ತಂದಿದ್ದಳು. ಈ ವೈದ್ಯರ ಚಿಕಿತ್ಸೆಯೂ ಅಪೇಕ್ಷಿತ ಪರಿಣಾಮವನ್ನು ನೀಡದಿದ್ದಾಗ, ಇನ್ನೊಬ್ಬ ವೈದ್ಯರಲ್ಲಿಗೆ ಮಗನನ್ನು ಕರೆದೊಯ್ದಿದ್ದಳು. ಜೊತೆಗೆ ಮಗನ ಜ್ವರವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣಪಡಿಸಬಲ್ಲ ಇಂಜೆಕ್ಷನ್ ನೀಡುವಂತೆ ಒತ್ತಾಯಿಸಿದ್ದಳು!. 

ನರಹರಿಯನ್ನು ಸಾವಕಾಶವಾಗಿ ಪರೀಕ್ಷಿಸಿದ ವೈದ್ಯರಿಗೆ ಯಾವುದೇ ವ್ಯಾಧಿಯನ್ನು ಪತ್ತೆಹಚ್ಚಲು ಆಗಿರಲಿಲ್ಲ. ಆದರೆ ಮೂರು ದಿನಗಳಿಂದ ಬಾಧಿಸುತ್ತಿರುವ ಜ್ವರದ ತೀವ್ರತೆಯನ್ನು ಕಂಡು "ವೈರಸ್" ನ ಸೋಂಕನ್ನು ಸಂದೇಹಿಸಿದ್ದ ವೈದ್ಯರು, ಮುಂದಿನ ಎರಡು ದಿನಗಳ ಕಾಲ ಆರು ಘಂಟೆಗೊಂದಾವರ್ತಿ ಪಾರಾಸಿಟಮಾಲ್ ಮಾತ್ರೆಯನ್ನು ನೀಡಲು ಸೂಚಿಸಿದರು. ಜೊತೆಗೆ ಕುಡಿಯಲು ಸಾಕಷ್ಟು ನೀರು,ನಿಂಬೆ ಶರಬತ್ತು, ಹಣ್ಣಿನ ರಸಗಳೊಂದಿಗೆ ಪೋಷಕಾಂಶಗಳಿಂದ ಸಮೃದ್ಧ ಆಹಾರಗಳನ್ನು ನೀಡಿ ಸಂಪೂರ್ಣ ವಿಶ್ರಾಂತಿ ಪಡೆಯಲು ಹೇಳಿದರು. ಜ್ವರ ಆರಂಭವಾಗಿ ಈಗಾಗಲೇ ಮೂರು ದಿನಗಳು ಕಳೆದಿರುವುದರಿಂದ, ಮುಂದಿನ ಒಂದೆರಡು ದಿನಗಳಲ್ಲಿ ವಾಸಿಯಾಗುವ ಅಥವಾ ಯಾವುದಾದರೂ ವ್ಯಾಧಿಯ ಲಕ್ಷಣಗಳನ್ನು ತೋರುವ ಸಾಧ್ಯತೆಗಳಿವೆ ಎಂದು ವೈದೇಹಿಗೆ ತಿಳಿಸಿದರು. 

ಎರಡು ದಿನಗಳ ಬಳಿಕ ನರಹರಿಯ ಹಣೆ,ಗಲ್ಲ, ಕುತ್ತಿಗೆಯ ಭಾಗಗಳಲ್ಲಿ ಹಲವಾರು ನೀರು ತುಂಬಿದ ಚಿಕ್ಕ ಗುಳ್ಳೆಗಳು ಮೂಡಿದ್ದವು. ಇದನ್ನು ಗಮನಿಸಿದ ವೈದೇಹಿಯು ತಕ್ಷಣ ಮಗನನ್ನು ವೈದ್ಯರಲ್ಲಿ ಕರೆದೊಯ್ದಳು. ನರಹರಿಯನ್ನು ಕಂಡೊಡನೆ ಆತನನ್ನು ಪೀಡಿಸುತ್ತಿದ್ದ ಜ್ವರಕ್ಕೆ "ಸೀತಾಳೆ ಸಿಡುಬು" ಕಾರಣವೆನಿಸಿತ್ತೆಂದು ಹೇಳಿದ ವೈದ್ಯರು, ಅವಶ್ಯಕ ಔಷದಗಳನ್ನು ನೀಡಿದ್ದರು. ಸುಮಾರು ಎರಡು ವಾರಗಳಲ್ಲಿ ನರಹರಿಯು ಸಂಪೂರ್ಣವಾಗಿ ಗುಣಮುಖನಾಗಿದ್ದನು. 

ಜ್ವರ ಎಂದರೇನು?

ಮನುಷ್ಯನ ಶರೀರದ ಉಷ್ಣತೆಯು ಕಾರಣಾಂತರಗಳಿಂದ ಹೆಚ್ಚಾಗಿರುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಪೈರೆಕ್ಸಿಯಾ" ಅರ್ಥಾತ್ ಜ್ವರ ಎನ್ನುವರು. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರ ಶರೀರದ ತಾಪಮಾನವು ೯೮. ೬ ಡಿಗ್ರಿ ಫ್ಯಾರನ್ ಹೀಟ್ ಇರುವುದು. ಆದರೆ ಹವಾಮಾನದ ವೈಪರೀತ್ಯಗಳು ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಇದರ ಮಟ್ಟದಲ್ಲಿ ವ್ಯತ್ಯಯವಾಗುವುದು. 

ನಮ್ಮ ಶರೀರದ ಉಷ್ಣತೆಯನ್ನು ಅಳೆಯಲು ಬಳಸುವ ಥರ್ಮೊಮೀಟರ್ ನ್ನು ಆರೋಗ್ಯವಂತರ ನಾಲಗೆಯ ಕೆಳಗೆ ಒಂದೆರಡು ನಿಮಿಷ ಇರಿಸಿದಾಗ ೯೮.೬ ಡಿಗ್ರಿ ಎಫ್. ಹಾಗೂ ಕಂಕುಳಲ್ಲಿ ಇರಿಸಿದಲ್ಲಿ ೯೭.೬ ಮತ್ತು ಗುದದ್ವಾರದಲ್ಲಿ ಇರಿಸಿ ಪರೀಕ್ಷಿಸಿದಾಗ ೯೯. ೬ ಡಿಗ್ರಿ ತೋರಿಸುವುದು.

ಮಾನವನ ಶರೀರದ ಉಷ್ಣತೆಯ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ವ್ಯವಸ್ಥೆಯೊಂದಿದ್ದು, ಇದರಲ್ಲಿ ಮೆದುಳಿನ ಹೈಪೊಥಲಮಸ್, ಚರ್ಮ ಹಾಗೂ ಸ್ವೇದಗ್ರಂಥಿಗಳು, ಶ್ವಾಸಕೋಶಗಳು ಮತ್ತು ಮಾಂಸಪೇಶಿಗಳು ಒಳಗೊಂಡಿರುತ್ತವೆ. ಅತಿಯಾದ ಶಾರೀರಿಕ ಚಟುವಟಿಕೆಗಳ ಪರಿಣಾಮವಾಗಿ ಶರೀರದ ತಾಪಮಾನವು ಹೆಚ್ಚಾದಾಗ, ಈ ವ್ಯವಸ್ಥೆಯಿಂದಾಗಿ ಶರೀರವು ಬೆವರುವುದರ ಮೂಲಕ ಏರಿದ ತಾಪಮಾನವು ಕಡಿಮೆಯಾಗುವುದು. 

ಬಹುತೇಕ ಸಂದರ್ಭಗಳಲ್ಲಿ ಮನುಷ್ಯನಿಗೆ ಜ್ವರ ಬಾಧಿಸಲು ಬ್ಯಾಕ್ಟೀರಿಯ, ವೈರಸ್, ಫಂಗಸ್ ಇತ್ಯಾದಿ ರೋಗಾಣುಗಳು ಕಾರಣವಾಗಿರುತ್ತವೆ. ಈ ರೋಗಾಣುಗಳು ನಮ್ಮ ಶರೀರದಲ್ಲಿ ಪ್ರವೇಶಗಳಿಸಿದಾಗ, ನಮ್ಮ ಶರೀರದಲ್ಲಿರುವ ಬಿಳಿ ರಕ್ತಕಣಗಳು ಇವುಗಳ ವಿರುದ್ಧ ಹೋರಾಡುವಾಗ "ಜ್ವರ" ಪ್ರಕಟಗೊಳ್ಳುವುದು. 

ಇದಲ್ಲದೆ ರಕ್ತ ಸಂಚಲನೆಯಲ್ಲಿ ಸಂಭವಿಸಬಲ್ಲ ತೊಂದರೆಗಳು, ಔಷದ ಅಥವಾ ಇತರ ವಸ್ತುಗಳಿಗೆ ಶರೀರ ತೋರುವ ತೀವ್ರ "ಅಲರ್ಜಿ" ಪ್ರತಿಕ್ರಿಯೆಗಳು, ಕೊಲಾಜೆನ್ ಕಾಯಿಲೆಗಳು ಮತ್ತು ಕೆಲವಿಧದ ಗಂಭೀರ-ಮಾರಕ ಕ್ಯಾನ್ಸರ್ ಗಳಲ್ಲೂ ಜ್ವರ ಒಂದು ಪ್ರಮುಖ ಲಕ್ಷಣವಾಗಿರುತ್ತದೆ. ಶರೀರದ ತಾಪಮಾನವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಬಾಧಿಸಬಲ್ಲ ಕೆಲ ವ್ಯಾಧಿಗಳೊಂದಿಗೆ, ಅಪರೂಪದಲ್ಲಿ ಕೆಲವ್ಯಕ್ತಿಗಳಲ್ಲಿ ಮಾನಸಿಕ ಕಾರಣಗಳಿಂದಲೂ ಜ್ವರ ಉದ್ಭವಿಸುವ ಸಾಧ್ಯತೆಗಳಿವೆ. 

ಲಕ್ಷಣಗಳು 

ಕ್ಷುಲ್ಲಕ ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ಸೌಮ್ಯ ರೂಪದ ತಲೆ- ಮೈಕೈನೋವುಗಳೊಂದಿಗೆ ತಲೆದೋರುವ ಜ್ವರವು,ಮಲೇರಿಯ ಹಾಗೂ ಇತರ ಕೆಲ ವ್ಯಾಧಿಗಳು ಉಲ್ಬಣಿಸಿದಾಗ ತೀವ್ರ ತಲೆನೋವು, ವಿಪರೀತ ಚಳಿ- ನಡುಕಗಳೊಂದಿಗೆ ಆಯಾ ವ್ಯಾಧಿಗಳಿಗೆ ಅನುಗುಣವಾಗಿ ಇತರ ಲಕ್ಷಣಗಳನ್ನು ತೋರುವುದು. 

ಸಾಮಾನ್ಯವಾಗಿ ಜ್ವರ ಬಾಧಿಸಿದ ಸಂದರ್ಭದಲ್ಲಿ ತಲೆಸಿಡಿತ,ಮೈಕೈನೋವು,ಹಸಿವಿಲ್ಲದಿರುವುದು,ವಾಕರಿಕೆ ಅಥವಾ ವಾಂತಿ,ಅತಿ ಆಯಾಸ,ಬಾಯಾರಿಕೆ,ಬಳಲಿಕೆ,ನಿರಾಸಕ್ತಿಗಳಂತಹ ಲಕ್ಷಣಗಳು ಕಂಡುಬರುತ್ತವೆ. ತೀವ್ರಜ್ವರ ಬಾಧಿಸಿದ ಸಂದರ್ಭದಲ್ಲಿ ಜ್ವರಕ್ಕೆ ಕಾರನವೆನಿಸಿದ ಕಾಯಿಲೆ ಹಾಗೂ ರೋಗಿಯ ವಯಸ್ಸುಗಳಿಗೆ ಅನುಗುಣವಾಗಿ ಚಳಿ,ನಡುಕ,ಅರೆಪ್ರಜ್ನಾವಸ್ಥೆ,ಬಡಬಡಿಸುವುದು, ಕನವರಿಕೆ, ಅಪಸ್ಮಾರದಂತಹ ಸೆಳೆತಗಳು ಮತ್ತು ಮೂರ್ಛೆ ತಪ್ಪುವುದೇ ಮುಂತಾದ ಲಕ್ಷಣಗಳು  ಕಂಡುಬರುತ್ತವೆ. ಅಂತೆಯೇ ಸೂಕ್ತ ಚಿಕಿತ್ಸೆಯೇ ಇಲ್ಲದ ವ್ಯಾಧಿಗಳು ಬಾಧಿಸಿದಾಗ ಹಾಗೂ ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆಯದೇ ಉಲ್ಬಣಿಸಿದಾಗ ಮತ್ತು ಅನಿರೀಕ್ಷಿತ ಸಮಸ್ಯೆಗಳಿಂದ ಜ್ವರಪೀಡಿತ ರೋಗಿಗಳು ಮೃತಪಡುವುದು ಅಪರೂಪವೇನಲ್ಲ. 

ಇವೆಲ್ಲಾ ಕಾರಣಗಳಿಂದಾಗಿ ನಿಮ್ಮನ್ನು ಬಾಧಿಸುತ್ತಿರುವ ಜ್ವರಕ್ಕೆ ಕಾರಣ ಏನೆಂದು ಅರಿಯದೇ ಸ್ವಯಂ ಚಿಕಿತ್ಸೆ ಪಡೆದುಕೊಂಡಲ್ಲಿ, ಸಂಕೀರ್ಣ ಸಮಸ್ಯೆಗಳೊಂದಿಗೆ ಪ್ರಾಣಾಪಾಯಕ್ಕೂ ಕಾರಣವೆನಿಸಬಹುದು ಎನ್ನುವುದನ್ನು ಮರೆಯದಿರಿ. 

ಚಿಕಿತ್ಸೆ 

ಜ್ವರದೊಂದಿಗೆ ಪ್ರತ್ಯಕ್ಷವಾಗುವ ಇತರ ಲಕ್ಷಣಗಳು,ರೋಗಿಯ ಶಾರೀರಿಕ ಪರೀಕ್ಷೆ ಹಾಗೂ ಆತನು ನೀಡುವ ಮೌಖಿಕ ಮಾಹಿತಿಗಳ ಆಧಾರದ ಮೇಲೆ, ಇದಕ್ಕೆ ಕಾರಣವಾಗಿರುವ ವ್ಯಾಧಿಯನ್ನು ಗುರುತಿಸಿ ವೈದ್ಯರು ನೀಡುವ ಚಿಕಿತ್ಸೆಯು ಬಹುತೇಕ ಸಂದರ್ಭಗಳಲ್ಲಿ ಯಶಸ್ವಿಯಾಗುವುದು. ಆದರೆ ಒಂದೆರಡು ದಿನಗಳ ಚಿಕಿತ್ಸೆಯ ಬಳಿಕವೂ ಉಲ್ಬಣಿಸುವ,ವಾರ ಕಳೆದರೂ ವಾಸಿಯಾಗದ ಹಾಗೂ ರೋಗಿಗೆ ಪ್ರಾಣಾಪಾಯದಂತಹ ಸಮಸ್ಯೆಗಳು ಬಾಧಿಸಿದಲ್ಲಿ ರೋಗಿಯ ರಕ್ತ,ಮಲ,ಮೂತ್ರ,ಕಫಗಳ ಪರೀಕ್ಷೆ,ಕ್ಷ- ಕಿರಣ,ಅಲ್ಟ್ರಾ ಸೌಂಡ್ ಸೋನೋಗ್ರಾಂ ಇತ್ಯಾದಿ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅಂತೆಯೇ ಇಂತಹ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಜ್ವರಕ್ಕೆ ಕಾರಣವೆನಿಸಿದ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚದೆ ನೀಡುವ ಚಿಕಿತ್ಸೆಯು ನಿಷ್ಪ್ರಯೋಜಕ ಎನಿಸಬಹುದು. ಇದೇ ಕಾರಣದಿಂದಾಗಿ ಜ್ವರ ಬಾಧಿಸಿದ ಸಂದರ್ಭದಲ್ಲಿ ನಿಮ್ಮ ನಂಬಿಗಸ್ತ ವೈದ್ಯರ ಸಲಹೆ-ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ಸಂಭಾವ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. 

ಆದರೆ ಆಕಸ್ಮಿಕವಾಗಿ ಅಪರಾತ್ರಿಯಲ್ಲಿ , ಸಮೀಪದಲ್ಲಿ ವೈದ್ಯರು ಲಭ್ಯರಿಲ್ಲದ ಹಳ್ಳಿಗಳಲ್ಲಿ ಅಥವಾ ಸೌಮ್ಯರೂಪದ ಜ್ವರ ತಲೆದೋರಿದಾಗ ಇದನ್ನು ಶಮನಗೊಳಿಸಲು ಹಾಗೂ ಉಲ್ಬಣಿಸದಂತೆ ನಿಯಂತ್ರಿಸಲು, ಪಾರಾಸಿಟಮಾಲ್ ನಂತಹ ಮಾತ್ರೆ-ಸಿರಪ್ ಗಳನ್ನು, ಜ್ವರದ ತೀವ್ರತೆಗೆ ಅನುಗುಣವಾಗಿ ೪ ರಿಂದ ೬ ಗಂಟೆಗೆ ಒಂದುಬಾರಿ ಸೇವಿಸಬಹುದು. ಆದರೆ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹಾಗೂ ಅತಿ ಆಮ್ಲದ(ಹೈಪರ್ ಅಸಿಡಿಟಿ) ಬಾಧೆ ಅಥವಾ ಜಠರದ ಹುಣ್ಣುಗಳಿರುವ ವ್ಯಕ್ತಿಗಳಿಗೆ ಆಸ್ಪಿರಿನ್ -ಐಬುಪ್ರೊಫೇನ್ ನಂತಹ ಔಷದಗಳನ್ನು ನೀಡಬಾರದು.ಇದಲ್ಲದೆ ಜ್ವರಪೀಡಿತರಿಗೆ ಚಳಿ ಮತ್ತು ನಡುಕಗಳು ಇಲ್ಲದಿದ್ದಲ್ಲಿ (ವಿಶೇಷವಾಗಿ ಪುಟ್ಟ ಮಕ್ಕಳಿಗೆ) ಉಣ್ಣೆಯ ಸ್ವೆಟರ್,ಟೋಪಿ ಅಥವಾ ಬೆಚ್ಚನೆಯ ಕಂಬಳಿ-ಬ್ಲಾಂಕೆಟ್ ಗಳನ್ನು ಹೊದಿಸದಿರಿ. ಏಕೆಂದರೆ ಇದರಿಂದಾಗಿ ಶರೀರದ ತಾಪಮಾನವು ಇನ್ನಷ್ಟು ಹೆಚ್ಚಾಗುವುದರಿಂದ, ಅಪಸ್ಮಾರದಂತಹ ಸೆಳೆತಗಳು ಹಾಗೂ ಅನ್ಯ ತೊಂದರೆಗಳಿಗೆ ಕಾರಣವೆನಿಸುವುದು. 

ಜ್ವರಪೀಡಿತರಿಗೆ ತೆಳ್ಳಗಿನ ಹತ್ತಿಯ ಬಟ್ಟೆಗಳನ್ನು ತೊಡಿಸಿ, ಹಣೆಗೆ ತಣ್ಣೀರಿನ ಪಟ್ಟಿಯನ್ನು ಹಾಕುವುದರೊಂದಿಗೆ ರೋಗಿಯ ಶರೀರವನ್ನು ಒದ್ದೆ ಬಟ್ಟೆಯಿಂದ ಆಗಾಗ ಒರೆಸುವುದರಿಂದ ಶರೀರದ ತಾಪಮಾನ ಕಡಿಮೆಯಾಗುವುದು. ಜ್ವರ ತುಸು ಹೆಚ್ಚಿದ್ದಲ್ಲಿ ತಂಪಾದ ಹವಾನಿಯಂತ್ರಿತ ಕೊಠಡಿಯಲ್ಲಿ ಅಥವಾ ವಿದ್ಯುತ್ ಪಂಖದ ಗಾಳಿಗೆ ಮಲಗಿಸಿದಲ್ಲಿ, ಜ್ವರದ ತೀವ್ರತೆಯನ್ನು ನಿಯಂತ್ರಿಸುವುದು ಸುಲಭವೆನಿಸುವುದು. 

ಪುಟ್ಟ ಮಕ್ಕಳಿಗೆ ತೀವ್ರ ಜ್ವರ ಬಾಧಿಸಿದಾಗ ಅಪಸ್ಮಾರದಂತಹ ಸೆಳೆತಗಳು ಕಂಡುಬರಬಹುದು. ಇಂತಹ ಸಂದರ್ಭದಲ್ಲಿ ಮೇಲೆ ಸೂಚಿಸಿದ ಉಪಕ್ರಮಗಳೊಂದಿಗೆ, ಮಗುವಿನ ಹಣೆ-ತಲೆಯ ಭಾಗದಲ್ಲಿ ಐಸ್ ಬ್ಯಾಗ್ ಇರಿಸಿದಲ್ಲಿ ತಕ್ಷಣಗಳು ಶಮನಗೊಳ್ಳುತ್ತವೆ. ಆದರೆ ಇದರಿಂದ ಸೆಳೆತಗಳು ನಿಲ್ಲದೆ ಇದ್ದಲ್ಲಿ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡುವುದು ಅನಿವಾರ್ಯವೂ ಹೌದು. 

ಜ್ವರಪೀಡಿತರ ಶರೀರದ ಉಷ್ಣತೆ ಹೆಚ್ಚುವುದರಿಂದಾಗಿ ಇವರ ಶರೀರದಲ್ಲಿ ದ್ರವಾಂಶಗಳ ಕೊರತೆಯಿಂದ  ನಿರ್ಜಲೀಕೃತ ಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಸಮರ್ಪಕವಾಗಿ ಆಹಾರವನ್ನು ಸೇವಿಸದಿರುವುದರಿಂದಾಗಿ ಅತಿ ಆಯಾಸ,ಸುಸ್ತು ಸಂಕಟಗಳು ಬಾಧಿಸಬಹುದು. ಇದನ್ನು ತಡೆಗಟ್ಟಲು ಶುದ್ಧವಾದ ನೀರು,ಹಣ್ಣಿನ ರಸಗಳು ಹಾಗೂ ಸಕ್ಕರೆ ಮತ್ತು ಕೊಂಚ ಉಪ್ಪನ್ನು ಬೆರೆಸಿ ತಯಾರಿಸಿದ ಶರಬತ್ ಗಳನ್ನು  ನೀಡುತ್ತಿರಬೇಕು. 

ಯಾವುದೇ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಸಮೃದ್ಧ ಪೋಷಕಾಂಶಗಳಿರುವ ಆಹಾರದ ಅವಶ್ಯಕತೆಯಿರುತ್ತದೆ. ಇದರೊಂದಿಗೆ ವ್ಯಾಧಿ ಪೀಡಿತ ಶರೀರಕ್ಕೆ ಸಾಕಷ್ಟು ವಿಶ್ರಾಂತಿಯೂ ಬೇಕಾಗುತ್ತದೆ. ಸೂಕ್ತ ಚಿಕಿತ್ಸೆಯೊಂದಿಗೆ ಇದನ್ನು ಪರಿಪಾಲಿಸಿದಲ್ಲಿ, ನಿಮ್ಮನ್ನು ಕಾಡುವ ಜ್ವರ ಮತ್ತು ಇದಕ್ಕೆ ಕಾರಣವೆನಿಸಿರುವ ವ್ಯಾಧಿಯೂ, ನಿಗದಿತ ಅವಧಿಯಲ್ಲಿ ವಾಸಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೩೧-೦೫-೨೦೦೭  ಅಂಕಣದಲ್ಲಿ ಪ್ರಕಟಿತ ಲೇಖನ   


No comments:

Post a Comment