Monday, August 12, 2013

Non stick utensils-Are they safe?

02-03-2012 ಉದಯವಾಣಿ ಪತ್ರಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ 
 ಅಂಟು ನಿರೋಧಕ ಪಾತ್ರೆಗಳನಂಟು ಹಿತಕರವಲ್ಲ!

ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯುಳ್ಳ ಜನರು, ತಾವು ದಿನನಿತ್ಯ ಸೇವಿಸುವ ಆಹಾರಪದಾರ್ಥಗಳಲ್ಲಿ ಎಣ್ಣೆ, ಬೆಣ್ಣೆ,ವನಸ್ಪತಿ ಮತ್ತು ತುಪ್ಪಗಳ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ಅಂಟು ನಿರೋಧಕ ಪಾತ್ರೆಗಳನ್ನು (ನಾನ್ ಸ್ಟಿಕ್ ಕುಕ್ ವೇರ್) ಬಳಸುತ್ತಾರೆ. ಆದರೆ ಇತ್ತೀಚಿಗೆ ನಡೆಸಿದ್ದ ಅಧ್ಯಯನ ಹಾಗೂ ಸಂಶೋಧನೆಗಳಿಂದ ತಿಳಿದುಬಂದಂತೆ, ಇಂತಹ ಪಾತ್ರೆಗಳನ್ನು ಅಡುಗೆಗಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ ಎನ್ನುವ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಲೇ ಇವೆ. ಜಗತ್ತಿನ ಅನೇಕ ರಾಷ್ಟ್ರಗಳ ಜನರು ತಾವು ಬಳಸುತ್ತಿದ್ದ ಅಂಟು ನಿರೋಧಕ ಪಾತ್ರೆಗಳ ನಂಟನ್ನು ತ್ಯಜಿಸಿದ್ದು, ಹಿಂದೆ ತಾವು ಬಳಸುತ್ತಿದ್ದ ಸಾಂಪ್ರದಾಯಿಕ ಪಾತ್ರೆಗಳನ್ನೇ ಮತ್ತೆ ಬಳಸಲು ಆರಂಭಿಸಿದ್ದಾರೆ. 

ಭಾರತೀಯ ಶೈಲಿಯ ಸಾಂಪ್ರದಾಯಿಕ ಖಾದ್ಯಗಳ ತಯಾರಿಕೆಯಲ್ಲಿ ಎಣ್ಣೆ,ಬೆಣ್ಣೆ,ವನಸ್ಪತಿ ಮತ್ತು ತುಪ್ಪಗಳನ್ನು ಧಾರಾಳವಾಗಿ ಬಳಸುತ್ತಾರೆ. ಇಂತಹ ಆಹಾರಗಳ ಅತಿಯಾದ ಸೇವನೆ,ಆಧುನಿಕ ಜೀವನಶೈಲಿ,ನಿಷ್ಕ್ರಿಯತೆ ಮತ್ತು ಅನುವಂಶಿಕತೆಗಳಿಂದಾಗಿ, ನಮ್ಮಲ್ಲಿ ಅಧಿಕ ರಕ್ತದೊತ್ತಡ,ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಮತ್ತು ಮಧುಮೇಹ ಇತ್ಯಾದಿ ವ್ಯಾಧಿಗಳ ಬಾಧೆ ಹೆಚ್ಚುತ್ತಿದೆ. ಈ ಅಪಾಯಕಾರಿ ಕಾಯಿಲೆಗಳ ಸಂಭಾವ್ಯತೆಯನ್ನು ಕಡಿಮೆಮಾಡಲು ಅಥವಾ ಉದ್ಭವಿಸಿದ ಬಳಿಕ ನಿಯಂತ್ರಿಸಲು ಅಥವಾ ನಿವಾರಿಸಲು,ಔಷದಗಳ ಸೇವನೆ,ದೈನಂದಿನ ವ್ಯಾಯಾಮಗಳೊಂದಿಗೆ ಅಹಾರಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ಪರಿಪಾಲಿಸುವುದು ಅತ್ಯವಷ್ಯಕವೂ ಹೌದು. ಅನೇಕ ವಿದ್ಯಾವಂತರು ಇಂತಹ ಸನ್ನಿವೇಶದಲ್ಲಿ ಕೊಬ್ಬಿನ ಅಂಶಗಳಿಂದ ಸಮೃದ್ಧವಾಗಿರುವ ಜಿಡ್ಡಿನ ಪದಾರ್ಥಗಳ ಸೇವನೆಯನ್ನು ನಿಯಂತ್ರಿಸಲು ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಈ ಪಾತ್ರೆಗಳ ಬಳಕೆಯು ನಮ್ಮ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎನ್ನುವ ವಿಚಾರಕ್ಕೆ ಸಾಕಷ್ಟು ಪ್ರಚಾರ ದೊರೆಯದ ಕಾರಣದಿಂದಾಗಿ,ಇವುಗಳ ಮಾರಾಟ ಮತ್ತು ಬಳಕೆಗಳು ಅನಿರ್ಭಂದಿತವಾಗಿ ಸಾಗುತ್ತಿದೆ. 

ವಿಶ್ವವಿಖ್ಯಾತ ಅಂಟು ನಿರೋಧಕ "ಟೆಫ್ಲಾನ್ "ನ ತಯಾರಕರಾದ "ಡು ಪಾಂಟ್ " ಸಂಸ್ಥೆಯ ಉತ್ಪನ್ನಗಳ ಪುಸ್ತಿಕೆಯಲ್ಲಿ, ಈ ಪಾತ್ರೆಗಳನ್ನು ಪಕ್ಷಿಗಳ ಪಂಜರವನ್ನು ಇರಿಸಿದಲ್ಲಿ ಬಳಸದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಏಕೆಂದರೆ ಇದು ಪಕ್ಷಿಗಳಿಗೆ ಮಾರಕವೆನಿಸುವ ಸಾಧ್ಯತೆಗಳಿವೆ. ಆದರೆ ಇದು ಮನುಷ್ಯರಿಗೆ ಮಾರಕವಲ್ಲ ಎಂದು ಸಂಸ್ಥೆ ಘೋಷಿಸಿದ್ದರೂ, ಅಂಟು ನಿರೋಧಕ ಪಾತ್ರೆಗಳನ್ನು ಬಿಸಿಮಾಡಿದಾಗ ಉತ್ಪನ್ನವಾಗುವ ವಿಷಕಾರಕ ಪರ್ ಫ್ಲುರೋ ಒಕ್ಟನೋಯ್ಕ್ ಎಸಿಡ್ (PFOA) ನ ಧೂಮವು ಕೆಲವೇ ನಿಮಿಷಗಳಲ್ಲಿ ಪಕ್ಷಿಗಳ ಮರಣಕ್ಕೆ ಕಾರಣವೆನಿಸಬಹುದಾದಲ್ಲಿ, ಸುದೀರ್ಘಕಾಲ ಈ ಧೂಮವನ್ನು ಸೇವಿಸುವ ಮನುಷ್ಯರಿಗೂ ಹಾನಿಕಾರಕವಾಗಿ ಪರಿಣಮಿಸಬಹುದು. 

ಪಿ ಎಫ್ ಓ ಎ ಎನ್ನುವ ಕೃತಕ ರಾಸಾಯನಿಕವನ್ನು ಅಡುಗೆಗಾಗಿ ಬಳಸುವ ಪಾತ್ರೆಗಳಿಗೆ ಅಂಟು ನಿರೋಧಕತೆಯನ್ನು ನೀಡುವ ಸಲುವಾಗಿ ಲೇಪಿಸಲಾಗುತ್ತದೆ. ಈ ಪದರವನ್ನು ಪೊಲಿಟೆಟ್ರಾಫ್ಳುರೋ ಇಥೈಲೀನ್ (PTFE) ಎಂದು ಹೆಸರಿಸಿದ್ದರೂ,ಇದು ಟೆಫ್ಲಾನ್  ಎನ್ನುವ ವಾಣಿಜ್ಯ ನಾಮಧೇಯದಿಂದ ಪ್ರಖ್ಯಾತವಾಗಿದೆ. ನಾನ್ ಸ್ಟಿಕ್ ಪಾತ್ರೆಗಳ ಪದರದಲ್ಲಿ ಪಿ ಎಫ್ ಓ ಎ ಇರದಿದ್ದರೂ,ಇವುಗಳನ್ನು ತುಸು ಅಧಿಕ ಉಷ್ಣತೆಗೆ ಗುರಿಪಡಿಸಿದಾಗ ಇದು ಅನಿಲರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ (EPA) ವೈಜ್ಞಾನಿಕ ಮಂಡಳಿಯು ಪಿ ಎಫ್ ಓ ಎ ಯನ್ನು ಮನುಷ್ಯರಲ್ಲಿ ಕ್ಯಾನ್ಸರ್ ವ್ಯಾಧಿಗೆ ಕಾರಣವೆನಿಸಬಲ್ಲ ದ್ರವ್ಯಗಳ ಗುಂಪಿನಲ್ಲಿ ಸೇರಿಸಿದೆ. 

ಅಮೆರಿಕದ ಇ ಪಿ ಎ ಸಂಸ್ಥೆಯು ಪಿ ಎಫ್ ಓ ಎ ರಾಸಾಯನಿಕವು ಪ್ರಾಣಿಗಳಿಗೂ ಕ್ಯಾನ್ಸರ್ ಕಾರಕವೆನಿಸುವುವುದೆಂದು ವರ್ಗೀಕರಿಸಿದ್ದು, ಈ ರಾಸಾಯನಿಕವು ಇಲಿಗಳಲ್ಲಿ ಯಕೃತ್,ಪ್ಲೀಹ, ಸ್ತನ ಮತ್ತು ವೃಷಣಗಳ ಕ್ಯಾನ್ಸರ್ ಗಡ್ದೆಗಳಿಗೆ ಕಾರಣವೆನಿಸಬಲ್ಲದೆಂದು ತಿಳಿದುಬಂದಿದೆ. ಅನ್ಯ ಅಧ್ಯಯನಗಳಿಂದ ತಿಳಿದುಬಂದಂತೆ ಪಿ ಎಫ್ ಓ ಎ ರಾಸಾಯನಿಕವು ಪುರುಷರಲ್ಲಿ ಸಂತಾನೋತ್ಪತ್ತಿಗೆ ಅವಶ್ಯವೆನಿಸುವ ಹಾರ್ಮೋನ್ ಗಳ ವ್ಯತ್ಯಯ ಮತ್ತು ಈಸ್ಟ್ರೋಜೆನ್ ಹಾರ್ಮೋನ್ ನ ಪ್ರಮಾಣ ಹೆಚ್ಚುವ ಹಾಗೂ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಅಸಾಮಾನ್ಯ ನಿಯಂತ್ರಣ ಮತ್ತು ಥೈರಾಯ್ಡ್ ಗ್ರಂಥಿಗಳಿಗೆ ಹಾನಿ ಸಂಭವಿಸಲು ಕಾರಣವೆನಿಸಬಲ್ಲದು. 

ಡು ಪಾಂಟ್ ಸಂಸ್ಥೆಯು ತನ್ನ ಉತ್ಪನ್ನದ ದುಷ್ಪರಿಣಾಮಗಳನ್ನು ಅಲ್ಲಗಳೆದಿದ್ದರೂ,ಟೆಫ್ಲಾನ್ ಲೇಪಿತ ಪಾತ್ರೆಗಳನ್ನು 660 ಡಿಗ್ರಿ ಫ್ಯಾರನ್ ಹೀಟ್ ನಷ್ಟು ಉಷ್ಣತೆಗೆ ಬಿಸಿಮಾಡಿದಲ್ಲಿ ಮಾತ್ರ ಇಂತಹ ಸಮಸ್ಯೆ ಉದ್ಭವಿಸಬಹುದು ಎಂದಿತ್ತು. ಇಷ್ಟೊಂದು ಉಷ್ಣತೆಗೆ ಪಾತ್ರೆಗಳು ಬಿಸಿಯಾಗಬೇಕಿದ್ದಲ್ಲಿ, ಪಾತ್ರೆಗಳಲ್ಲಿ ಯಾವುದೇ ಪದಾರ್ಥವನ್ನು ಹಾಕದೆ ಬೆಂಕಿಯ ಮೇಲಿರಿಸಿ ಮರೆತುಬಿಡುವುದೇ ಏಕಮಾತ್ರ ಕಾರಣವೆಂದು ಹೇಳಿತ್ತು. ಇದಲ್ಲದೆ ತನ್ನ ಉತ್ಪನ್ನಗಳು ಶಿಶುಗಳು,ಮಕ್ಕಳು,ಮಹಿಳೆಯರು,ವಯಸ್ಕರು ಮತ್ತು ವಯೋವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದು ಎಂದು ಘೋಷಿಸಿತ್ತು. ಆದರೆ ಡಿಸೆಂಬರ್ 2005 ರಲ್ಲಿ ಇದೇ ಸಂಸ್ಥೆಯು ಪಿ ಎಫ್ ಓ ಎ ರಾಸಾಯನಿಕದ ದುಷ್ಪರಿಣಾಮಗಳನ್ನು ಮುಚ್ಚಿಟ್ಟಿದಕ್ಕಾಗಿ 10.25 ಮಿಲಿಯನ್ ಡಾಲರ್ ದಂಡ ಮತ್ತು ಈ ಪಿ ಎಫ್ ಓ ಎ ರಾಸಾಯನಿಕದ  ಬಗ್ಗೆ ಸಂಶೋಧನೆ ಹಾಗೂ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮದ ಸಲುವಾಗಿ 6.25 ಮಿಲಿಯನ್ ಡಾಲರ್ ಗಳನ್ನು ಪಾವತಿಸಿತ್ತು. 

ಪಿ ಎಫ್ ಓ ಎ ರಾಸಾಯನಿಕದಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಗಮನಿಸಿದ ಡು ಪಾಂಟ್ ಸಂಸ್ಥೆಯು, 2015 ಕ್ಕೆ ಮುನ್ನ ಇದನ್ನು ತಮ್ಮ ಉತ್ಪನ್ನಗಳಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ.

ಅಂಟು ನಿರೋಧಕ ಪಾತ್ರೆಗಳ ಬಳಕೆಯಿಂದ ಉದ್ಭವಿಸಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಸಾಕಷ್ಟು ವಾದವಿವಾದಗಳು ಇದ್ದರೂ, ನಮ್ಮ ಆರೋಗ್ಯದ ರಕ್ಷಣೆಯ ದೃಷ್ಟಿಯಿಂದ ಇವುಗಳ ಬಳಕೆಯನ್ನು ನಿಲ್ಲಿಸುವುದು ಹಿತಕರ ಎನ್ನುವುದರಲ್ಲಿ ಎರಡುಮಾತಿಲ್ಲ. ಇದರೊಂದಿಗೆ ನಮ್ಮ ಪೂರ್ವಜರು ಬಳಸುತ್ತಿದ್ದ ಸಾಂಪ್ರದಾಯಿಕ ಪಾತ್ರೆ ಪಗಡಿಗಳನ್ನು ಬಳಸುವುದು ಆರೋಗ್ಯಕರವೂ ಹೌದು.  

ನಿಮಗಿದು ತಿಳಿದಿರಲಿ 

ಅಂಟು ನಿರೋಧಕ ಪಾತ್ರೆಗಳು, ಜಲ ನಿರೋಧಕ ವಸ್ತ್ರಗಳು ಮತ್ತು ಫಾಸ್ಟ್ ಫುಡ್ ಗಳ ಪ್ಯಾಕ್ ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ದ್ರವ್ಯವು, ಪುಟ್ಟ ಮಕ್ಕಳಿಗೆ ನೀಡುವ ಲಸಿಕೆಗಳಿಂದ ಲಭಿಸಬೇಕಾದ ರೋಗನಿರೋಧಕ ಶಕ್ತಿಯನ್ನು ಕಡಿಮೆಮಾಡುತ್ತವೆ ಎಂದು ತಿಳಿದುಬಂದಿದೆ. ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನ ಸಂಚಿಕೆಯೊಂದರಲ್ಲಿ ಪ್ರಕಟವಾಗಿದ್ದ ಅಧ್ಯಯನದ ವರದಿಯಂತೆ, ಈ ರಾಸಾಯನಿಕವು ಟೆಟನಸ್ ಮತ್ತು ಡಿಪ್ತೀರಿಯಾ ವ್ಯಾಧಿಗಳನ್ನು ತಡೆಗಟ್ಟಬಲ್ಲ ಲಸಿಕೆಗಳ ಪರಿಣಾಮಗಳನ್ನು ಕುಂಠಿತಗೊಳಿಸುತ್ತದೆ. ಪರ್ ಫ್ಲೂರಿನೆಟೆದ್ ಕಂಪೌಂಡ್ ಗಳೇ ಈ ಸಮಸ್ಯೆಗೆ ಕಾರಣವೆನಿಸಿವೆ. ಈ ಪಿ ಎಫ್ ಸಿ ಕಾಂಪೌಂಡ್ ಗಳು ತಾಯಿಯ ಶರೀರದಿಂದ ಗರ್ಭಸ್ಥ ಶಿಶುವಿನ ಶರೀರಕ್ಕೆ ಹಾಗೂ ಮಗು ಜನಿಸಿದ ಬಳಿಕ ಸುತ್ತಮುತ್ತಲಿನ ಪರಿಸರದಿಂದಾಗಿಯೂ ಶಿಶುವಿನ ಶರೀರವನ್ನು ಸೇರುವ ಸಾಧ್ಯತೆಗಳಿವೆ.

ಡಾ . ಸಿ . ನಿತ್ಯಾನಂದ ಪೈ,ಪುತ್ತೂರು  


No comments:

Post a Comment