Wednesday, May 22, 2013


     ಮರಿಪುಡಾರಿಯೊಬ್ಬನ ಮಂಪರು ಪರೀಕ್ಷೆ!
ಭವ್ಯ  ಕರ್ನಾಟಕದ ರಾಜಕಾರಣಿಗಳಲ್ಲಿ ಇರಬಹುದಾದ ದೇಶಭಕ್ತಿ,ಸೇವಾ ಮನೋಭಾವ,ಬಡವರ ಬಗ್ಗೆ ಕಾಳಜಿ,ಹಿಂದುಳಿದ ವರ್ಗ ಹಾಗೂ ದೀನ ದಲಿತರನ್ನು ಉದ್ಧಾರಮಾಡುವ ಹಂಬಲ ಮತ್ತು ಜನಸಾಮಾನ್ಯರನ್ನು ಬಾಧಿಸುವ ಸಮಸ್ಯೆ-ಸಂಕಷ್ಟಗಳನ್ನು ಪರಿಹರಿಸುವ ಆಕಾಂಕ್ಷೆಗಳನ್ನು ಓರೆಗೆ ಹಚ್ಚಿ ನಿಖರವಾಗಿ ಪತ್ತೆಹಚ್ಚುವ ಪ್ರಯತ್ನದ ಅಂಗವಾಗಿ, ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ರಹಸ್ಯ ಕಾರ್ಯಾಚರಣೆಯನ್ನು ನಡೆಸಿದ್ದರು. ಇದರ ಅಂಗವಾಗಿ ರಾಜ್ಯದ ಮೂರು ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆದುಕೊಳ್ಳಲು ವಿಫಲನಾಗಿ,ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮರಿಪುಡಾರಿಯೊಬ್ಬನನ್ನು ಪುಸಲಾಯಿಸಿ, ರಹಸ್ಯ ಸ್ಥಳದಲ್ಲಿ ತಜ್ಞರಿಂದ "ಮಂಪರು ಪರೀಕ್ಷೆ" ಯನ್ನು ನಡೆಸಲು ಯಶಸ್ವಿಯಾಗಿದ್ದರು. ಈ ಪರೀಕ್ಷೆಯನ್ನು ನಡೆಸುವಾಗ "ನೀವು ಈ ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದಲ್ಲಿ,ನಿಮ್ಮ ಆದ್ಯತೆಗಳೇನು?,ಎನ್ನುವ ಪ್ರಶ್ನೆಗೆ ಮರಿಪುಡಾರಿ ನೀಡಿದ್ದ ಪ್ರಾಮಾಣಿಕ ಉತ್ತರಗಳ ಅನಧಿಕೃತ ಆವೃತ್ತಿಯೊಂದು ನಮಗೆ ದೊರೆತಿದೆ. ಇದರ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
ನಾನು ಗೆದ್ದು ಶಾಸಕನಾದರೆ . . . .
*ಕಳೆದಬಾರಿಯ ಚುನಾವಣೆಯ ಮಾದರಿಯಲ್ಲಿ ಈ ಬಾರಿಯೂ ಫಲಿತಾಂಶಗಳು ಬಂದಲ್ಲಿ,ಸರಕಾರ ರಚಿಸುವ ಸಾಮರ್ಥ್ಯವಿರುವ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸುವುದು. ಆದರೆ ತೆರೆಯ ಮರೆಯಲ್ಲಿ ಸಚಿವಸ್ಥಾನವನ್ನು ನೀಡಲೆಬೇಕೆನ್ನುವ ಶರತ್ತನ್ನು ವಿಧಿಸಿ  ಮಂತ್ರಿಯಾಗುವುದು ನನ್ನ ಆದ್ಯತೆಗಳಲ್ಲಿ ಪ್ರಮುಖವಾಗಿದೆ.
*ಆಡಳಿತ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರು ತುಳಿದಿದ್ದ ಹಾದಿಯನ್ನು ಅನುಸರಿಸುವ ಮೂಲಕ ಗುರುವನ್ನು ಮೀರಿಸಿದ ಶಿಷ್ಯನೆನಿಸಿಕೊಳ್ಳುವುದು.ಮಂತ್ರಿಗಿರಿ ದೊರೆಯಲು ಅಡೆತಡೆಗಳು ಉದ್ಭವಿಸಿದಲ್ಲಿ ,ಈಗಾಗಲೇ ಒಂದಕ್ಕೂ ಹೆಚ್ಚುಬಾರಿ ಮಂತ್ರಿಯಾಗಿದ್ದವರಿಗೆ ಮತ್ತೆ ಮಂತ್ರಿಗಿರಿಯನ್ನು ನೀಡದಂತೆ ಹಾಗೂ ಯುವಕರಿಗೆ ಅವಕಾಶವನ್ನು ನೀಡುವಂತೆ ವರಿಷ್ಠರ ಮೇಲೆ ಒತ್ತಡವನ್ನು ಹೇರುವ ಮೂಲಕ ಮಂತ್ರಿಮಂಡಲದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದು ದ್ವಿತೀಯ ಆದ್ಯತೆಯಾಗಿದೆ.
*ಹಿರಿಯ ಅಥವಾ ಪ್ರಭಾವಿ ಶಾಸಕರ ಕುತಂತ್ರಗಳಿಂದ ಮತ್ತು ಅನ್ಯ ಕಾರಣಗಳಿಂದ ಮಂತ್ರಿಪದವಿ ಕೈತಪ್ಪಿದಲ್ಲಿ,ಯಾವುದಾದರೂ ನಿಗಮ-ಮಂಡಳಿಯೊಂದರ ಅಧ್ಯಕ್ಷ ಪದವಿಯನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡುವುದು.
*ನನ್ನ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರೆಯುವ ಅನುದಾನಗಳನ್ನು ಮಂಜೂರುಮಾಡಿಸಿ,ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು. ಮತ್ತು ಗುತ್ತಿಗೆದಾರರಿಂದ ನನಗೆ ಸಲ್ಲಾಬೇಕಾದ ಪಾಲನ್ನು ಮುಂಗಡವಾಗಿ ಪಡೆದುಕೊಳ್ಳುವುದು. ಈ ವ್ಯವಹಾರ ಸುಸೂತ್ರವಾಗಿ ನಡೆಯಲು,ಇಂತಹ ಕಾಮಗಾರಿಗಳ ಗುತ್ತಿಗೆಯನ್ನು ಸಾಧ್ಯವಿರುವ ಮಟ್ಟಿಗೆ ನನ್ನ ಇಷ್ಟಮಿತ್ರರಿಗೆ ಕೊಡಿಸುವುದು.
*ನನ್ನ ಕ್ಷೇತ್ರದಲ್ಲಿನ ಎಲ್ಲಾ ಸರಕಾರೀ ನೌಕರರ ವಿವರಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಿಕೊಂಡು,ತಮಗೆ ಬೇಕಾದ ಆಯಕಟ್ಟಿನ ಸ್ಥಾನಗಳಿಗೆ ವರ್ಗಾವಣೆಯನ್ನು ಬಯಸುವ ನೌಕರರಿಂದ ಯಥಾನುಶಕ್ತಿ ಕಪ್ಪ ಕಾಣಿಕೆಗಳನ್ನು ಪಡೆಯುವುದು.
*ಸರಕಾರೀ ನೌಕರರಿಗೆ ಸಿಂಹಸ್ವಪ್ನ ಎನಿಸಿರುವ ಅಥವಾ ಉನ್ನತ ಅಧಿಕಾರಿಗಳ ಮನೆಗೆ ದಾಳಿಮಾಡಿ ಅವರ ಮಾನವನ್ನೇ ಹರಾಜು ಹಾಕುತ್ತಿರುವ ಲೋಕಾಯುಕ್ತ ವ್ಯವಸ್ಥೆಯನ್ನೇ ರದ್ದುಪಡಿಸಲು ಕಾರ್ಯತಂತ್ರವನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದು. ತನ್ಮೂಲಕ ಇಂತಹ ಅಧಿಕಾರಿಗಳ ಕೃಪಾಕಟಾಕ್ಷವನ್ನು ಗಳಿಸಿ,ನನ್ನ ವೈಯುಕ್ತಿಕ ಸಂಪತ್ತನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು.
*ರಾಜಕಾರಣಿಗಳು ಮತ್ತು ಸರಕಾರೀ ಅಧಿಕಾರಿ-ನೌಕರರಿಗೆ ಕಂಟಕಪ್ರಾಯವೆನಿಸಿರುವ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ನೇ ರದ್ದುಪಡಿಸುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡವನ್ನು ಹೇರುವುದು.
*ಸರಕಾರೀ ಬಸ್ಸುಗಳು ಅತ್ಯಧಿಕ ಲಾಭವನ್ನು ಗಳಿಸುತ್ತಿರುವ ಮಾರ್ಗಗಳಲ್ಲಿ ಖಾಸಗಿ ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳನ್ನು ಓಡಿಸಾಲು ಅವಕಾಶವನ್ನು ಕಲ್ಪಿಸಿ,ಸಾಧ್ಯವಿರುವಷ್ಟು ಕಪ್ಪವನ್ನು ವಸೂಲು ಮಾಡುವುದು.
*ಸ್ಥಳೀಯರ ಸಮಸ್ಯೆಗಳ ದೂರುಗಳನ್ನು ಕಿವಿಗೆ ಹಾಕಿಕೊಳ್ಳದಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ,ಪರಿಹಾರಕ್ಕಾಗಿ ನನ್ನಲ್ಲಿ ಬಂದಾಗ ಸಿಕ್ಕಿದಷ್ಟನ್ನು ಬಾಚಿಕೊಳ್ಳುವುದು.
*ಸ್ವಕ್ಷೇತ್ರದಲ್ಲಿನ ಹಲವಾರು ಬಣಗಳ ನಡುವೆ ಅನಾವಶ್ಯಕ ವಿವಾದಗಳನ್ನು ಹುಟ್ಟುಹಾಕಿ,ಇವುಗಳನ್ನು ಬಗೆಹರಿಸಲು ಇತ್ತಂಡದವರಿಂದ ಕಿಂಚಿತ್ ಕಾಣಿಕೆಯನ್ನು ಸ್ವೀಕರಿಸುವುದು.
*ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದೆರಡು ಸೈಟುಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವುದು.
*ಪಕ್ಷದ ಮಹಿಳಾ ಘಟಕದಲ್ಲಿ ಪತ್ನಿಗೆ ಸೂಕ್ತ ಸ್ಥಾನವನ್ನು ಕೊಡಿಸಿ,ಮುಂದೆ ಶಾಸಕಿಯಾಗಲು ಹಾದಿಯನ್ನು ಸುಗಮಗೊಳಿಸುವುದು.
*ಸರಕಾರೀ ಖರ್ಚಿನಲ್ಲಿ ವಿದೇಶ ಪ್ರವಾಸದ ಅವಕಾಶವನ್ನು ಗಳಿಸಿ,ಪತ್ನಿಯ ಸ್ಥಾನದಲ್ಲಿ ಮನದನ್ನೆಯನ್ನು ಕರೆದೊಯ್ಯುವುದು.
*ಪ್ರಸ್ತುತ ಚುನಾವಣೆಯ ಮುನ್ನ ನನ್ನಲ್ಲಿದ್ದ ಆಸ್ತಿಪಾಸ್ತಿಗಳನ್ನು ಕನಿಷ್ಠ ಐವತ್ತು ಪಟ್ಟು ಹೆಚ್ಚಿಸಿಕೊಳ್ಳುವುದು. ಇದಕ್ಕಾಗಿ ಸ್ವಕ್ಷೇತ್ರದಲ್ಲಿ ಬೃಹತ್ ಯೋಜನೆಯೊಂದನ್ನು ಮಂಜೂರುಗೊಳಿಸಿ,ಇದಕ್ಕೂ ಮುನ್ನ ಉದ್ದೇಶಿತ ಪ್ರದೇಶದಲ್ಲಿ ಅತ್ಯಲ್ಪ ಬೆಲೆಗೆ ಖರೀದಿಸಿದ್ದ ನೂರಾರು ಎಕರೆ ಜಮೀನನ್ನು ನೋಟಿಫಿಕೇಶನ್-ಡಿ ನೋಟಿಫಿಕೇಶನ್ ನಾಟಕವನ್ನಾಡುವ ಮೂಲಕ  ಕೋಟ್ಯಂತರ ರೂಪಾಯಿಗಳನ್ನು ಬಾಚಿಕೊಳ್ಳುವುದು.
*ವಿದ್ಯಾ ಸಂಸ್ಥೆಯೊಂದನ್ನು ಆರಂಭಿಸಿ ಇದರ ಖಾತೆಗೆ ಕೋಟ್ಯಂತರ ರೂಪಾಯಿಗಳ ದೇಣಿಗೆಯನ್ನು ಅಧಿಕೃತವಾಗಿ ಪಡೆಯುವ ಮೂಲಕ,ನಾನು ಅನಧಿಕೃತವಾಗಿ ಅಕ್ರಮಗಳನ್ನು ಎಸಗಲು ನೆರವಾಗಿದ್ದವರಿಂದ ಬರಬೇಕಾದ ಕಪ್ಪ-ಕಾಣಿಕೆಗಳನ್ನು ಪಡೆದುಕೊಳ್ಳುವುದು
 *ದುರದೃಷ್ಟವಶಾತ್ ಇಂತಹ ಹಗರಣಗಳು ಬಹಿರಂಗಗೊಂಡು ನ್ಯಾಯಾಲಯದ ಕಟಕಟೆಯನ್ನೇರಿದಲ್ಲಿ,ಇವೆಲ್ಲವೂ ನನ್ನ ಅಭಿವೃದ್ಧಿಯನ್ನು ಸಹಿಸಲು ಆಗದ ವಿರೋಧಿಗಳ ಷಡ್ಯಂತ್ರವೆಂದು
 ಹೇಳಿಕೆಯನ್ನು ನೀಡುವುದು.ಜೊತೆಗೆ ನಾನು ಕೇವಲ ಆರೋಪಿಯೇ ಹೊರತು ಅಪರಾಧಿಯಲ್ಲ,ಮುಂದಿನ 
ದಿನಗಳಲ್ಲಿ  ನ್ಯಾಯಾಲಯದಿಂದ ಆರೋಪ ಮುಕ್ತನಾಗಿ ಹೊರಬರುವುದಾಗಿ ಹೇಳಿಕೆಯನ್ನು ನೀಡುವುದು.
 *ರಾಜಕೀಯ ವೇದಿಕೆಯಲ್ಲಿ ಜಾತ್ಯಾತೀಯತೆಯ ಬಗ್ಗೆ ಭಾಷಣವನ್ನು ಬಿಗಿದರೂ,ಸುಪ್ರಸಿದ್ದ ದೇವಳಗಳಿಗೆ ಭೇಟಿನೀಡಿ ನನ್ನ ಮತ್ತು ಕುಟುಂಬದ 
ಉತ್ತರೋತ್ತರ ಅಭಿವೃದ್ಧಿಗಾಗಿ  ಹೋಮ-ಹವನಗಳನ್ನು ನಡೆಸಿ ಮಾಡಿರುವ ಪಾಪಗಳನ್ನು ಕಳೆದುಕೊಳ್ಳುವುದು.
*ಆಕಸ್ಮಿಕವಾಗಿ ನಾನು ಎಸಗಿದ್ದ ಅಕ್ರಮಗಳು,ಅವ್ಯವಹಾರಗಳು ಅಥವಾ ಇತರ ಕಾರಣಗಳಿಂದ ಜೈಲಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದಲ್ಲಿ,ತಕ್ಷಣ ತೀವ್ರ ಎದೆನೋವಿನ ನೆಪವನ್ನೊಡ್ಡಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಹವಾ ನಿಯಂತ್ರಿತ ಕೊಠಡಿಯಲ್ಲಿ "ಬಂಧಿ"ಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು.
*ಕಾರಣಾಂತರಗಳಿಂದ ಮಂತ್ರಿಪದವಿಯನ್ನು ಕಳೆದುಕೊಂಡಲ್ಲಿ ಅಥವಾ ರಾಜೀನಾಮೆಯನ್ನು ನೀಡಬೇಕಾದಲ್ಲಿ,ಸಮಾನ ಮನಸ್ಕರ ಬಣವನ್ನು ರಚಿಸಿ,ರಾಜೀನಾಮೆಯನ್ನು ನೀಡಿ ಪಕ್ಷವನ್ನು ಒಡೆಯುವುದಾಗಿ ಹೈಕಮಾಂಡ್ ನ ಮೇಲೆ ಒತ್ತಡವನ್ನು ಹೇರುವ ಮೂಲಕ ಮತ್ತೆ ಮಂತ್ರಿ ಪದವಿಯನ್ನು ಗಳಿಸುವುದು.
*ಸದನದಲ್ಲಿ ಮೊಬೈಲ್ ದೂರವಾಣಿಯಲ್ಲಿ "ನೀಲಿ ಚಿತ್ರ"ವನ್ನು ವೀಕ್ಷಿಸುವುದನ್ನು ಅಪರಾಧವಲ್ಲ ಎನ್ನುವ 
ನಿರ್ಣಯವನ್ನು  ಅಂಗೀಕರಿಸಲು ಪ್ರಯತ್ನಿಸುವುದು.
*ಆಕಸ್ಮಿಕವಾಗಿ ನನ್ನ "ರಾಸಲೀಲೆಯ " ಸಿ. ಡಿ "ಬಹಿರಂಗಗೊಂಡಲ್ಲಿ ,ಆ ಚಿತ್ರದಲ್ಲಿ ಇರುವ ಬೇರೊಬ್ಬ ವ್ಯಕ್ತಿಯ ಮುಖದ ಜಾಗದಲ್ಲಿ ನನ್ನ ಮುಖವನ್ನು ಅಳವಡಿಸಿ ತಯಾರಿಸಿದ ನಕಲಿ ಸಿ. ಡಿ  ಎಂದು ಘೋಷಿಸುವುದು.
* ಮುಂದಿನ ಚುನಾವಣೆಯಲ್ಲಿ ಮತ್ತೆ ಟಿಕೆಟ್ ದೊರೆಯುವ ಸಲುವಾಗಿ ಸಂಬಂಧಿತ ನೇತಾರರನ್ನು "ಖುಷಿ"ಯಾಗಿ ಇರಿಸುವುದು!.
ಇವೆಲ್ಲವೂ ಮರಿಪುಡಾರಿಯು ತಾನು ಈ ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕನಾದಲ್ಲಿ ಆದ್ಯತೆಯನ್ನು ನೀಡಲಿರುವ ಪ್ರಮುಖ ವಿಚಾರಗಳಾಗಿದ್ದು,ಮಂಪರು ಪರೀಕ್ಷೆಗಾಗಿ ನೀಡಿದ್ದ ಔಷದದ ಪರಿಣಾಮವಾಗಿ ಗಾಢ ನಿದ್ದೆಗೆ ಜಾರಿದ್ದರಿಂದ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಲು ಆಗಿರಲಿಲ್ಲವೆಂದು ತಜ್ಞರು ಹೇಳಿದ್ದುದಾಗಿ ಉನ್ನತ ಮೂಲಗಳು ತಿಳಿಸಿವೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment